Saturday, 5 August 2017

ಮಾನಭಂಗ ಮಾಡಲೆತ್ನಿಸಿದ ವ್ಯಕ್ತಿಗೆ ಸಜೆ ( 05-08-2017)

  ಮಾನಭಂಗ ಮಾಡಲೆತ್ನಿಸಿದ ವ್ಯಕ್ತಿಗೆ ಸಜೆ


ಚಾಮರಾಜನಗರ, ಆ. 05 - ಬಾಲಕಿಯೊಬ್ಬಳ ಮಾನಭಂಗ ಮಾಡಲು ಯತ್ನಿಸಿದ ವ್ಯಕ್ತಿಗೆ ನಗರದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 2 ವರ್ಷ ಸಜೆ ಹಾಗೂ 500 ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಗುಂಡ್ಲುಪೇಟೆ ತಾಲೂಕು ತೆರಕಣಾಂಬಿ ಗ್ರಾಮದಲ್ಲಿ ಬಾಲಕಿಯು ಒಬ್ಬಳೇ ಇದ್ದಾಗ ತೆರಕಣಾಂಬಿ ಗ್ರಾಮದ ಅಬ್ದುಲ್ ರೆಹಮಾನ್ ಅಲಿಯಾಸ್ ಅಜ್ಮಲ್ ಅಲಿಯಾಸ್ ಅಜ್ಜು ನಿಮ್ಮ ಅಪ್ಪ ನಿಮ್ಮನ್ನು ತೋಟಕ್ಕೆ ಕರೆದುಕೊಂಡು ಬರಲು ಹೇಳಿದ್ದಾನೆ ಎಂದು ಸುಳ್ಳು ಹೇಳಿ ಸುಬ್ಬಪ್ಪ ಎಂಬುವರ ಜಮೀನಿನ ಬಳಿ ಮಾನಭಂಗ ಮಾಡಲು ಯತ್ನಿಸಿದ್ದ ಎಂದು ಪ್ರಕರಣ ದಾಖಲಾಗಿತ್ತು. ಈ ಸಂಬಂಧ ವಿಚಾರಣೆ ನಡೆದು ಅಬ್ದುಲ್ ರೆಹಮಾನ್‍ಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಲಕ್ಷ್ಮಣ್ ಎಫ್ ಮಳವಳ್ಳಿ ಅವರು 2 ವರ್ಷ ಸಜೆ ಹಾಗೂ 500 ರೂ. ದಂಡ ವಿಧಿಸಿ ಆಗಸ್ಟ್ 3ರಂದು ತೀರ್ಪು ನೀಡಿದ್ದಾರೆ.

ಆ.10ರಂದು ಜಿಲ್ಲೆಯಲ್ಲಿ ಮುಖ್ಯಮಂತ್ರಿಯವರ ಪ್ರವಾಸ

ಚಾಮರಾಜನಗರ, ಆ. 05:- ಮುಖ್ಯಮಂತ್ರಿಯವರಾದ ಸಿದ್ಧರಾಮಯ್ಯ ಅವರು ಆಗಸ್ಟ್ 10ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಅಂದು ಬೆಳಿಗ್ಗೆ 10.30 ಗಂಟೆಗೆ ಹೆಲಿಕ್ಯಾಪ್ಟರ್ ಮೂಲಕ ನಗರದ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದ ಹೆಲಿಪ್ಯಾಡ್‍ಗೆ ಆಗಮಿಸುವರು. 10.40 ಗಂಟೆಗೆ ಚಾಮರಾಜನಗರ ತಾಲೂಕಿನ ಆಲೂರಿಗೆ ತೆರಳುವರು. 11 ಗಂಟೆಗೆ ಆಲೂರಿನಲ್ಲಿ ಮಾಜಿ ರಾಜ್ಯಪಾಲರಾದ ದಿವಂಗತ ಬಿ. ರಾಚಯ್ಯನವರ 95ನೇ ಜನ್ಮ ವರ್ಷಾಚರಣೆ ಸ್ಮರಣಾರ್ಥ ಸ್ವಾರಕ ನಿರ್ಮಾಣಕ್ಕೆ ನಡೆಯುವ ಭೂಮಿಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 12 ಗಂಟೆಗೆ ನಗರಕ್ಕೆ ಆಗಮಿಸಿ ಪಚ್ಚಪ್ಪ ವೃತ್ತದಿಂದ ರಾಮಸಮುದ್ರವರೆಗಿನ ಬಿ.ರಾಚಯ್ಯ ಕಾಂಕ್ರೀಟ್ ಜೋಡಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸುವರು ಮತ್ತು ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 2.30 ಗಂಟೆಗೆ ಮೈಸೂರಿಗೆ ತೆರಳುವರೆಂದು ಪ್ರಕಟಣೆ ತಿಳಿಸಿದೆ.

ಫ್ಲೆಕ್ಸ್, ಬ್ಯಾನರ್ ಅಳವಡಿಕೆಗೆ ಅನುಮತಿ ಕಡ್ಡಾಯ

ಚಾಮರಾಜನಗರ, ಆ. 05 : ಚಾಮರಾಜನಗರ ನಗರಸಭಾ ವ್ಯಾಪ್ತಿಯಲ್ಲಿ ಫ್ಲೆಕ್ಸ್ ಬ್ಯಾನರ್‍ಗಳನ್ನು ಅಳವಡಿಸಲು ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಇಲ್ಲವಾದಲ್ಲಿ ನಗರಸಭೆ ವತಿಯಿಂದ ತೆರವುಗೊಳಿಸಿ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.
ನಗರಸಭೆ ವ್ಯಾಪ್ತಿಯಲ್ಲಿ ರಾಜಕೀಯ ಕಾರ್ಯಕ್ರಮ, ಹಬ್ಬ, ಜಾತ್ರೆ, ಸಮಾರಂಭ, ಸಂಘಸಂಸ್ಥೆ ಕಾರ್ಯಕ್ರಮಗಳು, ಪ್ರಮುಖರ ಆಗಮನ, ಹುಟ್ಟುಹಬ್ಬದ ಶುಭಕೋರುವ ಸಲುವಾಗಿ ಅನಧಿಕೃತವಾಗಿ ಫ್ಲೆಕ್ಸ್ ಬ್ಯಾನರ್‍ಗಳನ್ನು ಅಳವಡಿಸಲಾಗುತ್ತಿದೆ. ಇದರಿಂದ ಸಾರ್ವಜನಿಕರು ತೊಂದರೆಗೆ ಒಳಗಾಗಿದ್ದು ಕಳೆದ 2015ರ ಮೇ 7ರಂದು ಮತ್ತು 2017ರ ಜುಲೈ 10ರಂದು ನಗರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಪಟ್ಟಣ ವ್ಯಾಪ್ತಿಯ ಪ್ರಮುಖ ಸ್ಥಳಗಳಲ್ಲಿ ಹಾಗೂ ಸರ್ಕಾರಿ ಸ್ಥಳಗಳಲ್ಲಿ ಫ್ಲೆಕ್ಸ್ ಮತ್ತು ಬ್ಯಾನರ್‍ಗಳನ್ನು ಅಳವಡಿಸಬಾರದೆಂದು ಕಟ್ಟುನಿಟ್ಟಾಗಿ ಆದೇಶಿಸಿದೆ. ಅವಶ್ಯಕವಾಗಿ ಅಳವಡಿಸಲೇಬೇಕಿದ್ದಲ್ಲಿ ಖಾಸಗಿ ಕಟ್ಟಡ ಮಾಲೀಕರಿಂದ ಅನುಮತಿ ಪಡೆದು ಪೊಲೀಸ್ ಇಲಾಖೆಯಿಂದ ನಿರಾಪೇಕ್ಷಣಾ ಪತ್ರ ಪಡೆದು ನಗರಸಭೆಗೆ ಸಲ್ಲಿಸಿದ ನಂತರ ನಿಯಮಾನುಸಾರ ಅನುಮತಿ ನೀಡಲು ಕ್ರಮ ವಹಿಸಲಾಗುವುದು. ಅನುಮತಿ ಪಡೆಯದೇ ಅನಧಿಕೃತವಾಗಿ ಫ್ಲೆಕ್ಸ್ ಬ್ಯಾನರ್ ಅಳವಡಿಸುವುದು ಕಂಡುಬಂದರೆ ತೆರವುಗೊಳಿಸಿ ಕಾನೂನು ಕ್ರಮ ಜರುಗಿಸಿ ದಂಡ ವಿಧಿಸಲಾಗುತ್ತದೆ ಎಂದು ನಗರಸಭೆ ಪೌರಾಯುಕ್ತರಾದ ರಾಜಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆ. 8ರಂದು ಉದ್ಯೋಗ ಯೋಜನೆಯಡಿ ಸಾಲಸೌಲಭ್ಯಕ್ಕೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಸಂದರ್ಶನ

ಚಾಮರಾಜನಗರ, ಆ. 05 - ಮುಖ್ಯಮಂತ್ರಿಗಳ ಉದ್ಯೋಗ ಯೋಜನೆಯಡಿ 2017-18ನೇ ಸಾಲಿಗೆ ಸಾಲಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಆಗಸ್ಟ್ 8ರಂದು ಬೆಳಿಗ್ಗೆ 10.30 ಗಂಟೆಗೆ ಚಾಮರಾಜನಗರ ತಾಲೂಕಿನ ಮರಿಯಾಲದ ರುಡ್ ಸೆಟ್ ಸಂಸ್ಥೆಯಲ್ಲಿ ಸಂದರ್ಶನ ಏರ್ಪಡಿಸಲಾಗಿದೆ.
ಅಭ್ಯರ್ಥಿಗಳಿಗೆ ಈಗಾಗಲೇ ಸಂದರ್ಶನ ಕರಪತ್ರಗಳನ್ನು ಅಂಚೆ ಮೂಲಕ ರವಾನಿಸಲಾಗಿದೆ. ತಲುಪದೇ ಇದ್ದವರು ಸಂದರ್ಶನಕ್ಕೆ ಹಾಜರಾಗಬೇಕು. ಸಂದರ್ಶನ ಸಮಯದಲ್ಲಿ ಆನ್ ಲೈನ್‍ನಲ್ಲಿ ಸಲ್ಲಿಸಿದ ಅರ್ಜಿಯೊಂದಿಗಿನ ಭಾವಚಿತ್ರ, ವಿದ್ಯಾರ್ಹತೆ, ಜನ್ಮ ದಿನಾಂಕ, ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಅಂಗವಿಕಲರಾಗಿದ್ದಲ್ಲಿ ವೈದ್ಯಕೀಯ ದೃಢೀಕರಣ ಪತ್ರ, ಘಟಕ ಪ್ರಾರಂಭಿಸಲು ಉದ್ದೇಶಿಸಿರುವ ಅಭ್ಯರ್ಥಿಗಳು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಲೆಕ್ಕಾಧಿಕಾರಿಯಿಂದ ಪಡೆದ ಜನಸಂಖ್ಯೆ ದೃಢೀಕರಣ ಪತ್ರ, ಯೋಜನಾ ವರದಿ, ಅನುಭವವಿದ್ದÀಲ್ಲಿ ಅದರ ಪತ್ರ, ಸಾಧ್ಯವಾದರೆ ಬ್ಯಾಂಕ್ ಅಧಿಕಾರಿಗಳನ್ನು ಭೇಟಿ ಮಾಡಿ ಸಾಲ ನೀಡುವ ಬಗ್ಗೆ ಒಪ್ಪಿಗೆ ಪತ್ರ, ಇನ್ನಿತರ ಸಂಬಂಧಪಟ್ಟ ದಾಖಲೆಗಳನ್ನು ದ್ವಿಪ್ರತಿಯಲ್ಲಿ ಹಾಜರುಪಡಿಸಬೇಕು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆ. 6ರಿಂದ ಪಿಯು ವಿದ್ಯಾರ್ಥಿಗಳಿಗೆ ಆಂಗ್ಲ ಭಾಷೆ ವ್ಯಾಕರಣ, ಸ್ಪೋಕನ್ ವಿಶೇಷ ತರಬೇತಿ

ಚಾಮರಾಜನಗರ, ಆ. 05 :- ಪದವಿಪೂರ್ವ ಶಿಕ್ಷಣ ಇಲಾಖೆಯು ಜಿಲ್ಲೆಯ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಭಾನುವಾರದ ರಜಾದಿನಗಳಂದು ಆಂಗ್ಲಭಾಷೆ ವಿಷಯದ ವ್ಯಾಕರಣ ಹಾಗೂ ಮಾತನಾಡುವ ಕೌಶಲ ಉತ್ತಮಗೊಳಿಸುವ ವಿಶೇಷ ತರಗತಿಯನ್ನು ಆಗಸ್ಟ್ 6ರಿಂದ ಪ್ರಾರಂಭಿಸುತ್ತಿದೆ.
ಚಾಮರಾಜನಗರ, ಗುಂಡ್ಲುಪೇಟೆಯ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು, ಯಳಂದೂರಿನ ಸರ್ಕಾರಿ ಪದವಿಪೂರ್ವ ಕಾಲೇಜು, ಕೊಳ್ಳೇಗಾಲದ ಎಸ್‍ವಿಕೆ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ತರಬೇತಿ ನಡೆಯಲಿದೆ. ಪ್ರತಿ ಕೇಂದ್ರಕ್ಕೆ ಮೂವರು ಆಂಗ್ಲ ಉಪನ್ಯಾಸಕರನ್ನು ಸಂಯೋಜಕರನ್ನಾಗಿ ನೇಮಕ ಮಾಡಲಾಗಿದೆ. ಕುದೇರು ಹಾಗೂ ಸಂತೆಮರಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಯಳಂದೂರಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಯುವ ವಿಶೇಷ ತರಗತಿಗೆ ಹಾಜರಾಗಬೇಕಿದೆ. ವಿದ್ಯಾರ್ಥಿಗಳು ವಿಶೇಷ ತರಗತಿಯ ಪ್ರಯೋಜನ ಪಡೆಯುವಂತೆ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ರೆಜಿನಾ ಮೆಲಾಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು