Monday, 31 July 2017

ಪ್ರಕೃತಿ ವಿಕೋಪ ನಿರ್ವಹಣೆಗೆ ಸಮರ್ಪಕ ಸಿದ್ಧತೆ ಅಗತ್ಯ : ಡಾ. ಕೆ. ಹರೀಶ್ ಕುಮಾರ್ ( 31-07-2017)

ಪ್ರಕೃತಿ ವಿಕೋಪ ನಿರ್ವಹಣೆಗೆ ಸಮರ್ಪಕ ಸಿದ್ಧತೆ ಅಗತ್ಯ : ಡಾ. ಕೆ. ಹರೀಶ್ ಕುಮಾರ್                            .............................    VSS

ಚಾಮರಾಜನಗರ, ಜು. 31 :- ಪ್ರಕೃತಿ ವಿಕೋಪವನ್ನು ಸಮರ್ಥವಾಗಿ ಎದುರಿಸಲು ಅಗತ್ಯವಿರುವ ಸಿದ್ಧತೆ ಮಾಡಿಕೊಂಡು ಸನ್ನದ್ಧರಾಗಿರಬೇಕಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ. ಹರೀಶ್ ಕುಮಾರ್ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಕೃತಿ ವಿಕೋಪ ಅಥವ ಮಾನವ ನಿರ್ಮಿತ ವಿಕೋಪವಿರಲಿ ಮುನ್ನೆಚ್ಚರಿಕೆ ಕ್ರಮಗಳು ಅತಿ ಅಗತ್ಯ. ಇದಕ್ಕಾಗಿಯೇ ಜಿಲ್ಲಾಡಳಿತದ ವತಿಯಿಂದ ಪ್ರಕೃತಿ ವಿಕೋಪ ಟಾಸ್ಕ್ ಫೋರ್ಸ್ ಸಮಿತಿ ಸಭೆಯನ್ನು ಕಾಲಕಾಲಕ್ಕೆ ನಡೆಸಿ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಲಾಗುತ್ತಿದೆ. ವಿಪತ್ತು ನಿರ್ವಹಣಾ ಕೇಂದ್ರಕ್ಕೆ 24*7 ಮಾದರಿಯಲ್ಲಿ ಸಿಬ್ಬಂದಿ ನಿಯೋಜಿಸಿ ಸಮರ್ಪಕವಾಗಿ ಮಾಹಿತಿ ಒದಗಿಸುವಂತೆ ಸೂಚನೆ ನೀಡಲಾಗಿದೆ ಎಂದರು.
ಅತಿವೃಷ್ಟಿ ಇಲ್ಲವೆ ಅನಾವೃಷ್ಟಿ ಸಂದರ್ಭದಲ್ಲಿ ಹಾನಿ ಸಂಭವಿಸಿದ ಕುರಿತು ವರದಿಗಳು ತ್ವರಿತವಾಗಿ ಬರಬೇಕಿದೆ. ಇದರಿಂದ ಶೀಘ್ರವಾಗಿ ಸಂತ್ರಸ್ಥರಿಗೆ ಪರಿಹಾರ ಒದಗಿಸಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಅತ್ಯಂತ ಚುರುಕಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಸಂದರ್ಭಕ್ಕೆ ಅನುಸಾರವಾಗಿ ಸ್ಪಂದಿಸಬೇಕಿದೆ ಎಂದು ಹರೀಶ್ ಕುಮಾರ್ ತಿಳಿಸಿದರು.
ಪ್ರಕೃತಿ ವಿಕೋಪದಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅರಣ್ಯ, ಹೆದ್ದಾರಿ, ವಿದ್ಯುತ್ ಸಂಪರ್ಕ ಸೇರಿದಂತೆ ಇನ್ನಿತರ ಹಲವು ಕ್ಷೇತ್ರಗಳಲ್ಲಿ ತೊಂದರೆಗಳು ಉಂಟಾಗಬಹುದು. ಹೀಗಾಗಿ ನಿರ್ಧಿಷ್ಟ ಇಲಾಖೆಗೆ ಮಾತ್ರ ಪ್ರಕೃತಿ ವಿಕೋಪ ನಿರ್ವಹಣೆ ಸಾಧ್ಯವಾಗುವುದಿಲ್ಲ. ಎಲ್ಲ ಇಲಾಖೆಗಳೂ ಒಂದಿಲ್ಲೊಂದು ಕಾರಣದಿಂದ ಒಟ್ಟಾಗಿ ಪ್ರಕೃತಿ ವಿಕೋಪದಿಂದ ಉಂಟಾಗುವ ಅನಾಹುತಗಳನ್ನು ತಪ್ಪಿಸಲು ಅಗತ್ಯ ವ್ಯವಸ್ಥೆಗೆ ಸಿದ್ಧsÀರಾಗಲೇಬೇಕಿದೆ ಎಂದರು.
 ಪ್ರಸ್ತುತ ಇರುವ ತುರ್ತು ನಿರ್ವಹಣಾ ಕೇಂದ್ರವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಅಗತ್ಯ ಸಲಕರಣೆಗಳು ಬೇಕಿದ್ದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚಿಸಬೇಕು. ಪೂರ್ಣ ಪ್ರಮಾಣದ ಸಲಕರಣೆ ಪಟ್ಟಿಯನ್ನು ಅಂತಿಮಗೊಳಿಸಿ ಸಲ್ಲಿಸಿದರೆ ಎಲ್ಲ ಅಂಶಗಳನ್ನು ಒಳಗೊಂಡ ಪ್ರಸ್ತಾವನೆವೊಂದನ್ನು ಸಲ್ಲಿಸಬಹುದು. ಇದಕ್ಕಾಗಿ ಅಧಿಕಾರಿಗಳು ಕೂಡಲೇ ಪ್ರತ್ಯೇಕ ಸಭೆ ನಡೆಸಿ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
 ವಿಪತ್ತು ಸಂಭವಿಸಿದ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಪಾತ್ರವೂ ಸಹ ಪ್ರಮುಖವಾಗಲಿದೆ. ಸಂತ್ರಸ್ಥ ಪ್ರದೇಶಗಳಲ್ಲಿ ನೀರು, ಆಹಾರ ಪೂರೈಸುವ ಪರಿಸ್ಥಿತಿಯೂ ಸಹ ಕೆಲವೊಮ್ಮೆ ಅನಿವಾರ್ಯವಾಗಬಹುದು. ಈ ಎಲ್ಲಾ ಹಿನ್ನೆಲೆಯಲ್ಲಿ ಮತ್ತಷ್ಟು ಇಲಾಖೆಗಳನ್ನು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ನೇಮಕ ಮಾಡಿಕೊಳ್ಳಬೇಕಾಗುತ್ತದೆ. ಮುಂದಿನ ಸಭೆಯ ವೇಳೆಗೆ ವಿಪತ್ತು ನಿರ್ವಹಣೆಯಲ್ಲಿ ಸಹಕಾರಿಯಾಗಲಿರುವ ಇಲಾಖೆಗಳ ಅಧಿಕಾರಿಗಳನ್ನು ಆಹ್ವಾನಿಸುವಂತೆ ಜಿಲ್ಲಾಧಿಕಾರಿ  ಹರೀಶ್ ಕುಮಾರ್ ನಿರ್ದೇಶನ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಮಾತನಾಡಿ ಪ್ರಕೃತಿ ವಿಕೋಪ ನಿರ್ವಹಣೆಗೆ ಅಗ್ನಿಶಾಮಕ, ಗೃಹರಕ್ಷಕ ದಳ ಇಲಾಖೆಗಳ ಪಾತ್ರವೂ ಸಹ ಅತ್ಯಂತ ಅವಶ್ಯಕವಾಗಿದೆ. ಆರೋಗ್ಯ ಪೂರಕ ಕಾರ್ಯಾಗಾರವನ್ನು ನಡೆಸಿ ಸಿಬ್ಬಂದಿಗೆ ಮಾರ್ಗದರ್ಶನ ಮಾಡಬೇಕಾಗುತ್ತದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಚ್. ಪ್ರಸಾದ್, ಜಂಟಿ ಕೃಷಿ ನಿರ್ದೇಶಕರಾದ ತಿರುಮಲೇಶ್, ಅಗ್ನಿಶಾಮಕ ಅಧಿಕಾರಿ ನವೀನ್, ಗೃಹರಕ್ಷಕ ದಳದ ಜಿಲ್ಲಾ ಸಮಾಧೇಷ್ಠರಾದ ಬಸವರಾಜು, ಇತರೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಮಹದೇಶ್ವರಬೆಟ್ಟ ಹುಂಡಿ ಪರ್ಕಾವಣೆ:1,05,65,762/- ಚಿನ್ನದ  ಪದಾರ್ಥಗಳು 0. 041 ( ನಲವತ್ತೊಂದು ಗ್ರಾಂ) ಮತ್ತು ಬೆಳ್ಳಿ  ಪದಾರ್ಥಗಳು 1.005(ಒಂದು ಕೆ.ಜಿ. ಐದು ಗ್ರಾಂ)                                                ..............    VSS


ಚಾಮರಾಜನಗರ ಜಿಲ್ಲೆ, ಕೊಳ್ಳೇಗಾಲ ತಾಲ್ಲೂಕು, ಮಹದೇಶ್ವರಬೆಟ್ಟ:- ದಿನಾಂಕ:31-07-2017ರಂದು ಬೆಳಿಗ್ಗೆ  7.00 ಗಂಟೆಗೆ ಶ್ರೀ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳು ಹಾಗೂ ಚಾಮರಾಜನಗರ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾದ ಶ್ರೀಮತಿ ಕೆ.ಎಂ.ಗಾಯತ್ರಿ, ಕೆ.ಎ.ಎಸ್.(ಹಿರಿಯ ಶ್ರೇಣಿ) ರವರ ಅಧ್ಯಕ್ಷತೆಯಲ್ಲಿ ಹಾಗೂ ಶ್ರೀ ಸಾಲೂರು ಬೃಹನ್ಮಠದ ಶ್ರೀ ಶ್ರೀ ಪಟ್ಟದ ಗುರುಸ್ವಾಮಿಗಳವರ ಉಪಸ್ಥಿತಿಯಲ್ಲಿ ಹುಂಡಿಗಳನ್ನು ತೆರೆಯಲಾಗಿದ್ದು, ಸದರಿ ಹುಂಡಿಗಳ  ಪರ್ಕಾವಣೆಯಲ್ಲಿ ಶ್ರೀ ಮ.ಮ. ಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ  ಪ್ರಭಾರ  ಉಪ ಕಾರ್ಯದರ್ಶಿಗಳಾದ ಶ್ರೀ ಎಂ.ಬಸವರಾಜು  ರವರು, ಸಹಾಯಕ ಅಭಿಯಂತರರಾದ ಶ್ರೀ ಆರ್.ಎಸ್.ಮನುವಾಚಾರ್ಯ, ಲೆಕ್ಕಾಧೀಕ್ಷಕರಾದ ಮಹದೇವಸ್ವಾಮಿ,  ಕಛೇರಿಯ ಅಧೀಕ್ಷಕರಾದ  ಶ್ರೀ ಬಿ.ಮಾದರಾಜು, ಆರೋಗ್ಯ ನಿರೀಕ್ಷಕರಾದ ಶ್ರೀಕಾಂತ್ ವಿಭೂತಿ ಹಾಗೂ ದೇವಸ್ಥಾನದ ಎಲ್ಲಾ ನೌಕರರುಗಳು, ಚಾಮರಾಜನಗರ ಜಿಲ್ಲಾಧಿಕಾರಿಯವರ ಕಛೇರಿಯ  ಪ್ರಥಮ ದರ್ಜೆ ಸಹಾಯಕರಾದ ಶ್ರೀ ಮೋಹನ್ ಕುಮಾರ್ ಮತ್ತು ಶ್ರೀ ಷಣ್ಮುಗ ವರ್ಮ, ಆರಕ್ಷಕ ನಿರೀಕ್ಷಕರು, ಮಹದೇಶ್ವರಬೆಟ್ಟ ಹಾಗೂ ಆರಕ್ಷಕ  ಸಿಬ್ಬಂದಿ ವರ್ಗ, ಎಸ್.ಬಿ.ಎಂ. ವ್ಯವಸ್ಥಾಪಕರಾದ ಸೆಂದಿಲ್ ನಾಥನ್  & ಸಿಬ್ಬಂದಿ ವರ್ಗದವರು ಹಾಜರಿದ್ದರು. ಇವರೆಲ್ಲರ ಸಹಕಾರದಿಂದ ಹುಂಡಿ ಪರ್ಕಾವಣೆ ಮತ್ತು ಎಣಿಕೆಯ ಕಾರ್ಯ ಸುಗಮವಾಗಿ ಜರುಗಿತು ಸದರಿ ದಿವಸದಂದು ಹುಂಡಿ ಪರ್ಕಾವಣೆಯಿಂದ ಒಟ್ಟು ರೂ.  1,05,65,762/- (  ಒಂದು ಕೋಟಿ ಐದು ಲಕ್ಷದ ಅರವತ್ತೈದು ಸಾವಿರದ ಏಳುನೂರ  ಅರವತ್ತೇರಡು ಮಾತ್ರ) ಬಂದಿರುತ್ತದೆ. ಇದಲ್ಲದೇ ಚಿನ್ನದ  ಪದಾರ್ಥಗಳು 0. 041 ( ನಲವತ್ತೊಂದು ಗ್ರಾಂ) ಮತ್ತು ಬೆಳ್ಳಿ  ಪದಾರ್ಥಗಳು 1.005(ಒಂದು ಕೆ.ಜಿ. ಐದು ಗ್ರಾಂ) ದೊರೆತಿರುತ್ತದೆ.


ಗೌರಿ ಗಣೇಶ ಪ್ರತಿಷ್ಠಾಪನೆ : ಅನುಮತಿ ಕಡ್ಡಾಯ            ..............    VSS

ಚಾಮರಾಜನಗರ, ಜು. 31 :– ಜಿಲ್ಲೆಯಲ್ಲಿ ಗೌರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವ ಸಂಘಸಂಸ್ಥೆಗಳು ನಿಗದಿಮಾಡಿರುವ ಮುಂಜಾಗರೂಕತಾ ಕ್ರಮಗಳನ್ನು ಅನುಸರಿಸುವುದರ ಜತೆಗೆ ಕಡ್ಡಾಯವಾಗಿ ಅನುಮತಿ ಪಡೆದು ಆಗಸ್ಟ್ 15ರೊಳಗೆ ಸಂಬಂಧಪಟ್ಟ ಪೊಲೀಸ್ ಠಾಣೆ ಅಧಿಕಾರಿಗಳಿಗೆ ಲಿಖಿತವಾಗಿ ಸಲ್ಲಿಸುವಂತೆ ಪೊಲೀಸ್ ಇಲಾಖೆ ತಿಳಿಸಿದೆ.
ಗೌರಿ ಗಣೇಶ ಪ್ರತಿಷ್ಠಾಪನೆ ಮಾಡುವ ಸಂಘಗಳ ಉಸ್ತುವಾರಿ ಮುಖ್ಯಸ್ಥರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಹಾಗೂ ಕಾರ್ಯಕ್ರಮದ ಆಯೋಜನೆಗೆ ಸಂಬಂಧಿಸಿದಂತೆ ಎಲ್ಲ ಆಗುಹೋಗುಗಳಿಗೆ ಜವಾಬ್ದಾರರೆಂಬ ಬಗ್ಗೆ, ಕಾನೂನು ಸುವ್ಯವಸ್ಥೆಯ ಹಿತದೃಷ್ಠಿಯಿಂದ ಸ್ಥಳೀಯ ನ್ಯಾಯಾಲಯ, ಜಿಲ್ಲಾಡಳಿತ, ಪೊಲೀಸ್ ಇಲಾಖೆ ನೀಡುವ ಎಲ್ಲಾ ಸೂಚನೆಗಳನ್ನು ಪಾಲಿಸುವ ಬಗ್ಗೆ ಅನ್ಯಧರ್ಮ, ಮತ, ಸಂಘಟನೆ, ಜನಾಂಗ, ಸಾರ್ವಜನಿಕ ವ್ಯಕ್ತಿಗಳಿಗೆ ನೋವಾಗದಂತೆ ನಡೆದುಕೊಳ್ಳುವ ಬಗ್ಗೆ ಮುಚ್ಚಳಿಕೆ ಪತ್ರವನ್ನು ಸಲ್ಲಿಸಬೇಕು.
ಪ್ರತಿಷ್ಠಾಪನೆ ದಿನ ವಿಶೇಷ ಕಾರ್ಯಕ್ರಮಗಳ ಆಯೋಜನೆ, ಭಾಗವಹಿಸಲಿರುವ ವಿಶೇಷ ಅತಿಥಿಗಳ ವಿವರ, ಸಾಂಸ್ಕøತಿಕ ಕಾರ್ಯಕ್ರಮಗಳು, ಮೆರವಣಿಗೆ, ವಿಸರ್ಜನಾ ದಿನ, ಮೆರವಣಿಗೆಯ ಮಾರ್ಗ ವಿವರಗಳನ್ನು ಸಲ್ಲಿಸಬೇಕು. (ಠಾಣಾಧಿಕಾರಿಗಳೊಂದಿಗೆ ಖುದ್ದು ಚರ್ಚಿಸಿ ಕಡ್ಡಾಯವಾಗಿ ಅನುಮೋದನೆ ಪಡೆಯಬೇಕು)
ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವ ಸ್ಥಳ, ವಿಳಾಸ ಹಾಗೂ ಸ್ಥಳದ ಮಾಲೀಕರಿಂದ ಪಡೆದ ಅನುಮತಿ ಪತ್ರ (ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ನಗರಸಭೆ, ಖಾಸಗಿ ವ್ಯಕ್ತಿಗಳು), ಸ್ಥಳೀಯ ವಿದ್ಯುತ್ ಪ್ರಾಧಿಕಾರದಿಂದ ಪಡೆದ ನಿರಾಪೇಕ್ಷಣ ಪತ್ರ, ಅಗ್ನಿಶಾಮಕ ದಳದವರಿಂದ ಪಡೆದ ನಿರಾಪೇಕ್ಷಣ ಪತ್ರ ಸಲ್ಲಿಸಬೇಕು. ಸ್ಥಳೀಯ ಠಾಣೆಯಿಂದ ಧ್ವನಿವರ್ಧಕ ಬಳಕೆಗೆ ಪಡೆದ ಅನುಮತಿ ಪತ್ರವನ್ನು ನೀಡಬೇಕು.
ಕಾರ್ಯಕ್ರಮ ಸಂಬಂಧ ಹಾಕಲಾಗುವ ಎಲ್ಲಾ ಫ್ಲೆಕ್ಸ್, ಪೋಸ್ಟರ್, ಫೋಟೋ ಇನ್ನಿತರ ಸಾಮಗ್ರಿಗಳಿಗೆ ಸ್ಥಳೀಯ ಆಡಳಿತದಿಂದ ಕಡ್ಡಾಯವಾಗಿ ಅನುಮತಿ ಪಡೆದಿರಬೇಕು. ಅನ್ಯಧರ್ಮ, ಮತ, ಸಂಘಟನೆ, ಜನಾಂಗ, ಸಾರ್ವಜನಿಕ ವ್ಯಕ್ತಿಗಳಿಗೆ ನೋವುಂಟು ಮಾಡದಂತಿರಬೇಕು. ವಿಸರ್ಜನಾ ಸ್ಥಳದಲ್ಲಿ ಕೈಗೊಂಡಿರುವ ಮುಂಜಾಗ್ರತಾ ಕ್ರಮ, ಜೀವರಕ್ಷಕ ಸಾಧನಗಳ ವಿವರ ಒದಗಿಸಬೇಕು.
ಪ್ರತಿಷ್ಠಾಪಿತ ಮೂರ್ತಿಯ ರಕ್ಷಣೆಗೆ ಸ್ವಯಂಸೇವಕರನ್ನು ನಿಯೋಜಿಸಿಕೊಳ್ಳಬೇಕು. ನಿಯೋಜಿತರಾದವರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆವುಳ್ಳ ಭಾವಚಿತ್ರ ಹೊಂದಿದ ಐಡಿ ಕಾರ್ಡ್, ಹಗಲುರಾತ್ರಿ ನಿಯೋಜಿಸಿರುವ ವೇಳಾಪಟ್ಟಿ ನೀಡಬೇಕು. ಪ್ರತಿಷ್ಠಾಪಿತ ಸ್ಥಳದಲ್ಲಿ ಒಂದು ರಿಜಿಸ್ಟರ್ ಇಟ್ಟು ಕಾವಲು ವಿವರವನ್ನು ನಮೂದಿಸಬೇಕು.
ಸಾರ್ವಜನಿಕರಿಂದ ಗಣಪತಿ ಪ್ರತಿಷ್ಠಾಪನೆಗೆ ಬಲವಂತವಾಗಿ ಚಂದಾ ವಸೂಲಿ ಮಾಡುವುದು ಕಾನೂನುಬಾಹಿರವಾಗಿದೆ. ಲಾಟರಿ ಇನ್ನಿತರ ಯೋಜನೆಗಳ ಮುಖಾಂತರವೂ ಹಣ ಸಂಗ್ರಹಣೆ ಮಾಡುವಂತಿಲ್ಲ. ಇಂತಹ ಪ್ರಕ್ರಿಯೆ ಕಂಡು ಬಂದರೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿರುವಂತೆ ಮಣ್ಣಿನಿಂದ ಮಾಡಿದ ಬಣ್ಣರಹಿತ ಪರಿಸರಸ್ನೇಹಿ ಮೂರ್ತಿಗಳನ್ನು ಮಾತ್ರ ಪ್ರತಿಷ್ಠಾಪಿಸಬೇಕು. ಅಲಂಕಾರಕ್ಕೆ ನೈಸರ್ಗಿಕ ಸಾಮಗ್ರಿಗಳನ್ನು ಬಳಸಬೇಕು. ಸಾಧ್ಯವಾದಷ್ಟು ಮನೆಯಲ್ಲಿ ಬಕೆಟ್‍ಗಳಲ್ಲಿ ನೀರು ತುಂಬಿಸಿ ಮೂರ್ತಿಯನ್ನು ವಿಸರ್ಜಿಸಬೇಕು. ಇಲ್ಲವೇ ಲಭ್ಯವಿರುವ ಕೆರೆಗಳಲ್ಲಿ ನಿಗದಿಪಡಿಸಿದ ಸ್ಥಳದಲ್ಲಿ ಮಾತ್ರ ಸಂಚಾರಿ ವಿಸರ್ಜನಾ ವಾಹನ ಬಳಸಿ ವಿಸರ್ಜನೆ ಮಾಡಬೇಕು. ವಿಸರ್ಜನೆಗೆ ಮುನ್ನ ಅಲಂಕಾರಿಕ ವಸ್ತುಗಳನ್ನು ತೆಗೆಯಬೇಕು. ವಿಸರ್ಜನಾ ಮೆರವಣಿಗೆಯಲ್ಲಿ ಸಾರ್ವಜನಿಕರಿಗೆ ವಾಹನಗಳ ಸಂಚಾರಕ್ಕೆ ಯಾವುದೇ ರೀತಿಯ ಅಡಚಣೆಯಾಗದಂತೆ ನೋಡಿಕೊಳ್ಳಬೇಕು.
ಗಣಪತಿ ಮೂರ್ತಿ ಷ್ರತಿಷ್ಠಾಪನೆ ಸಂಬಂಧ ನೀಡಲಾಗಿರುವ ಎಲ್ಲಾ ಕ್ರಮಗಳನ್ನು ಪಾಲನೆ ಮಾಡಬೇಕು. ನಿಬಂಧನೆಗಳನ್ನು ಉಲ್ಲಂಘಿಸುವುದು, ಶಾಂತಿಭಂಗ ಉಂಟುಮಾಡುವುದು ಕಂಡುಬಂದಲ್ಲಿ ಪೊಲೀಸ್ ಅಧೀಕ್ಷಕರು, ದೂರವಾಣಿ ಸಂಖ್ಯೆ 08226-222243, ಮೊಬೈಲ್ 9480804601, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ದೂರವಾಣಿ ಸಂಖ್ಯೆ 08226-225979, ಮೊಬೈಲ್ 9480804602, ಡಿಎಸ್‍ಪಿ, ಚಾಮರಾಜನಗರ ದೂರವಾಣಿ ಸಂಖ್ಯೆ 08226-222090, ಮೊಬೈಲ್ 9480804620, ಡಿಎಸ್‍ಪಿ ಕೊಳ್ಳೇಗಾಲ, ದೂರವಾಣಿ ಸಂಖ್ಯೆ 08224-252840, ಮೊಬೈಲ್ 9480804621, ಜಿಲ್ಲಾ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ 08226-222383, ಮೊಬೈಲ್ 9480804600ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಆ. 18 ರಂದು ಜಿಲ್ಲಾ ಅಭಿವ್ಥದ್ಧಿ ಸಮನ್ವಯ, ಉಸ್ತುವಾರಿ ಸಮಿತಿ ಸಭೆ 

ಚಾಮರಾಜನಗರ, ಜು. 31 - ಜಿಲ್ಲಾ ಮಟ್ಟದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಪರಿಶೀಲನಾ ಸಭೆಯು ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರ ಅಧ್ಯಕ್ಷತೆಯಲ್ಲಿ ಆಗಸ್ಟ್ 18ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯ ಪ್ರಶಸ್ತಿಗೆ ವ್ಯಕ್ತಿ, ಸಂಸ್ಥೆಗಳಿಂದ ಅರ್ಜಿ ಆಹ್ವಾನ

ಚಾಮರಾಜನಗರ, ಜು. 31:- ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಉತ್ತಮ ಕಾರ್ಯ ನಿರ್ವಹಿಸಿರುವ ವೈಯಕ್ತಿಕ ಹಾಗೂ ಸಂಸ್ಥೆಗಳಿಗೆ ಪ್ರಶಸ್ತಿ ನೀಡುವ ಸಲುವಾಗಿ ಅರ್ಜಿ ಆಹ್ವಾನಿಸಿದೆ.
ಕನಿಷ್ಟ 5 ವರ್ಷಗಳ ಕಾಲ ಅತ್ಯುತ್ತಮ ಸೇವೆ ಸಲ್ಲಿಸಿರುವ ವ್ಯಕ್ತಿಗಳಿಗೆ 25 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ಸಂಸ್ಥೆಗೆ ಒಂದು ಲಕ್ಷ ರೂ. ನಗದು ಹಾಗೂ ಪ್ರಶಸ್ತಿ ಪತ್ರ ನೀಡಿ ಮಕ್ಕಳ ದಿನಾಚರಣೆಯಂದು ಗೌರವಿಸಲಾಗುವುದು.
ಅರ್ಜಿಯನ್ನು ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಯಿಂದ ಪಡೆದು ಭರ್ತಿ ಮಾಡಿ ಆಗಸ್ಟ್ 31ರೊಳಗೆ ಸಲ್ಲಿಸಬೇಕು ಎಂದು ಕಚೇರಿ ಪ್ರಕಟಣೆ ತಿಳಿಸಿದೆ.



No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು