ವಿಧಾನಸಭಾ ಸಾರ್ವತ್ರಿಕ ಚುನಾವಣೆ-2018, ಐದು ನಾಮಪತ್ರ ಸಲ್ಲಿಕೆ
ಚಾಮರಾಜನಗರ, ಏ. 21 :- ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಾಲ್ಕನೇ ದಿನವಾದ ಇಂದು ಜಿಲ್ಲೆಯಲ್ಲಿ ಐದು ನಾಮಪತ್ರ ಸಲ್ಲಿಕೆಯಾಗಿದೆ.
ಹನೂರು ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಗಳಾಗಿ ಜಾನ್ ಡಾನ್ ಬೋಸ್ಕೋ ಕೆ., ಬಿ.ಭಾನುಪ್ರಕಾಶ್ ಎಂಬುವರು ತಲಾ ಒಂದು ನಾಮಪತ್ರ ಸಲ್ಲಿಸಿದ್ದಾರೆ.ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಎ.ಆರ್. ಕೃಷ್ಣಮೂರ್ತಿ ಅವರು ಎರಡು ನಾಮಪತ್ರ ಸಲ್ಲಿಸಿದ್ದಾರೆ.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಮಹೇಶ್.ಜಿ ಎಂಬುವರು ಒಂದು ನಾಮಪತ್ರ ಸಲ್ಲಿಸಿದ್ದಾರೆ.
ಚಾಮರಾಜನಗರ ವಿಧಾನಸಭಾ ಕ್ಷೇತ್ರಕ್ಕೆ ಇಂದು ಯಾವುದೇ ನಾಮಪತ್ರ ಸಲ್ಲಿಕೆಯಾಗಿರುವುದಿಲ್ಲ. ಒಟ್ಟಾರೆ ಇಂದು ನಾಲ್ವರು ಅಭ್ಯರ್ಥಿಗಳಿಂದ ಒಟ್ಟು ಐದು ನಾಮಪತ್ರ ಸಲ್ಲಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ. ಕಾವೇರಿ ಅವರು ತಿಳಿಸಿದ್ದಾರೆ.
ಮಾನವ ಸರಪಳಿ ಮೂಲಕ ಮತದಾನದ ಮಹತ್ವ ಸಾರಿದ ಮಹಿಳಾ ಸಂಘದ ಸದಸ್ಯರು
ಚಾಮರಾಜನಗರ ಏ. 21- ಮತದಾನದ ಪ್ರಾಮುಖ್ಯತೆ ಸಂದೇಶ ಸಾರುವ ಮಹತ್ತರ ಉದ್ದೇಶದಿಂದ ಮಹಿಳಾ ಸ್ತ್ರೀ ಶಕ್ತಿ ಹಾಗೂ ವಿವಿಧ ಮಹಿಳಾ ಸಂಘಟನೆಗಳ ಸದಸ್ಯರು ಬಲೂನು ಹಿಡಿದು ಮಾನವ ಸರಪಳಿ ರಚಿಸುವ ಮೂಲಕ ಇಂದು ನಗರದಲ್ಲಿ ಗಮನ ಸೆಳೆದರು.ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಮತದಾನ ಜಾಗ್ರತಿ ಮೂಡಿಸುವ ಬಲೂನುಗಳೊಂದಿಗೆ ಮಹಿಳೆಯರು ಬೃಹತ್ ಮಾನವ ಸರಪಳಿ ರಚಿಸಿದರು. ಪ್ರತಿಯೊಬ್ಬರು ಮತ ಚಲಾವಣೆಯಲ್ಲಿ ಪಾಲ್ಗೊಳ್ಳಬೇಕೆಂಬ ಸಂದೇಶಗಳು ಪ್ರತಿದ್ವನಿಸಿದವು. ಸ್ವೀಪ್ ಸಮಿತಿ ಅಧ್ಯಕ್ಷರಾದ ಡಾ. ಹರೀಶ್‍ಕುಮಾರ್ ಅವರು ಮತದಾನದ ಪ್ರತಿಜ್ಞಾವಿದಿ ಬೋಧಿಸಿದರು.
ಬಳಿಕ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಿಂದ ಮಹಿಳಾ ಸದಸ್ಯರು ಪ್ರಮುಖ ಬೀದಿಗಳಲ್ಲಿ ಮತದಾನ ಅರಿವು ಜಾಥಾ ನಡೆಸಿ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಸಮಾವೇಶಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಡಾ.ಕೆ. ಹರೀಶ್‍ಕುಮಾರ್ ಅವರು ಪ್ರಜಾಪ್ರಭುತ್ವ ಬಲವರ್ಧನೆಗಾಗಿ ಪ್ರತಿಯೊಬ್ಬರೂ ಸಕ್ರಿಯವಾಗಿ ತೊಡಗಿಕೊಳ್ಳಬೇಕು. ಮತ ಚಲಾವಣೆ ಸಂವಿಧಾನಬದ್ಧ ಹಕ್ಕು. 18 ವರ್ಷ ತುಂಬಿದ ಪ್ರತಿಯೊಬ್ಬರು ತಪ್ಪದೆ ಮತದಾನ ಮಾಡಬೇಕು. ಯಾವುದೇ ಹಣ, ಅಮಿಷಗಳಿಗೆ ಒಳಗಾಗದೆ ಸ್ವಯಂ ಪ್ರೇರಣೆಯಿಂದ ಮೇ. 12ರಂದು ನಡೆಯುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನ ಮಾಡಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಕೈಜೋಡಿಸಬೇಕು ಎಂದರು.
ಮಹಿಳೆಯರು ಕೌಟುಂಬಿಕ ಜವಾಬ್ದಾರಿ ಜತೆಗೆ ಸಾಮಾಜಿಕ, ಅರ್ಥಿಕ ಹಾಗೂ ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಮುಂದಿದ್ದಾರೆ. ರಾಜಕೀಯದೆಡೆಗೆ ಅಸಕ್ತಿ ಹೊಂದಿ ಹೆಚ್ಚಿನ ತಿಳಿವಳಿಕೆ ಪಡೆಯುತ್ತಿದ್ದಾರೆ. ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ ನೀಡಲಾಗಿದೆ. ಇದರ ಸದುಪಯೋಗವಾಗಬೇಕು ಎಂದರು.
ಮತದಾನದಿಂದ ಯಾರೂ ಸಹ ವಂಚಿತರಾಗದೆ ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಚುನಾವಣೆಯಲ್ಲಿ ಮತದಾನದ ಪಾಮುಖ್ಯತೆಯನ್ನು ಅರಿಯಬೇಕು. ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡುವಲ್ಲಿ ಮಹಿಳೆಯರು ಪ್ರಬುದ್ಧತೆ ತೋರಬೇಕು. ಮತ ಚಲಾಯಿಸುವಲ್ಲಿ ಯಾವುದೇ ಗೊಂದಲಗಳಿರಬಾರದು. ವಿಕಲಚೇತನರು, ಅಲ್ಪಸಂಖ್ಯಾತ ಮಹಿಳೆಯರಿಗೂ ಸಹ ಮತದಾನ ಪ್ರಕ್ರಿಯೆಯಲ್ಲಿ ಸಮಾನ ಅವಕಾಶ ಕಲ್ಪಿಸಲಾಗಿದೆ ಎಂದು ಹರೀಶ್ ಕುಮಾರ್ ಅವರು ತಿಳಿಸಿದರು.
ಇದೇ ವೇಳೆ ಮತದಾನದಲ್ಲಿ ಬಳಸಲಾಗುವ ವಿದ್ಯುನ್ಮಾನ ಮತಯಂತ್ರ ಹಾಗೂ ಮತ ಖಾತರಿ ಪಡಿಸುವ ವಿ.ವಿ ಪ್ಯಾಟ್ ಕುರಿತು ಪ್ರಾತ್ಯಕ್ಷಿಕೆ ಸಹ ನಡೆಯಿತು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷರಾದ ರಮೇಶ್, ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಚಲುವಯ್ಯ, ನಗರಸಭೆಯ ಆರೋಗ್ಯ ನಿರೀಕ್ಷಕರಾದ ಶರವಣ, ಮಹದೇವಯ್ಯ ಹಾಗೂ ಇತರರು ಇದೇ ಸಂದರ್ಭದಲ್ಲಿ ಹಾಜರಿದ್ದರು.
ಏಪ್ರಿಲ್ 22ರಂದು ನಗರದಲ್ಲಿ ಭಗೀರಥ ಜಯಂತಿ ಆಚರಣೆ
ಚಾಮರಾಜನಗರ, ಏ. 21 - ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಶ್ರಯದಲ್ಲಿ ಭಗೀರಥ ಜಯಂತಿಯನ್ನು ಏಪ್ರಿಲ್ 22ರಂದು ಬೆಳಗ್ಗೆ 11ಗಂಟೆಗೆ ನಗರದ ಜಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಭಗೀರಥರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ಹರೀಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಅವರು ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.
No comments:
Post a Comment