ಮತದಾರರ ಜಾಗೃತಿಗೆ ಉತ್ತೇಜಿಸಿ: ಜಿ.ಪಂ ಸಿ.ಇ.ಓ ಡಾ.ಕೆ. ಹರೀಶ್ ಕುಮಾರ್ ಕರೆ
ಚಾಮರಾಜನಗರ, ಏ. 04 - ಪ್ರಜಾಪ್ರಭುತ್ವದ ಯಶಸ್ವಿಗೆ ಪ್ರತಿಯೊಬ್ಬರೂ ಸಹ ಸಕ್ರಿಯವಾಗಿ ಉತ್ಸಾಹದಿಂದ ಪಾಲ್ಗೊಳ್ಳಬೇÀಕಿರುವುದರಿಂದ ಮತಗಟ್ಟೆ ಮಟ್ಟದ ಜಾಗೃತಿ ಗುಂಪುಗಳು (ಬಿ.ಎ.ಜಿ) ಪ್ರತಿಯೊಬ್ಬರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಉತ್ತೇಜಿಸುವ ಚಟುವಟಿಕೆಗಳನ್ನು ವ್ಯಾಪಕವಾಗಿ ಹಮ್ಮಿಕೊಳ್ಳಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್ ಜಿಲ್ಲಾ ಮುಖ್ಯಸ್ಥರೂ ಆದ ಡಾ. ಕೆ.ಹರೀಶ್ ಕುಮಾರ್ ಅವರು ತಿಳಿಸಿದರು.
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಇಂದು ನಡೆದ ಚಾಮರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆ ಮಟ್ಟದ ಜಾಗೃತಿ ಗುಂಪುಗಳ ಸದಸ್ಯರ ಬೃಹತ್ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಜನತಂತ್ರ ವ್ಯವಸ್ಥೆಯಲ್ಲಿ ಎಲ್ಲರೂ ಭಾಗವಹಿಸುವಂತಾಗಬೇಕು. ಮತದಾರರು ಮೊದಲಿಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಳ್ಳಬೇಕು. ಅರ್ಹರೆಲ್ಲರೂ ಮತದಾರರ ಪಟ್ಟಿಗೆ ಸೇರ್ಪಡೆಯಾಗಬೇಕು. ಯಾರೂ ಸಹ ಮತದಾನದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಇದಕ್ಕಾಗಿಯೇ ಮತಗಟ್ಟೆ ಮಟ್ಟದ ಜಾಗೃತಿ ಗುಂಪುಗಳು ಮತದಾರರ ಪಟ್ಟಿಯಲ್ಲಿ ಯಾರ ಹೆಸರಾದರೂ ಕೈಬಿಟ್ಟು ಹೋಗಿದ್ದಲ್ಲಿ ಜಾಗೃತಿ ಮೂಡಿಸಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಕೊಳ್ಳಲು ತಿಳಿವಳಿಕೆ ನೀಡಬೇಕು ಎಂದು ಹರೀಶ್ ಕುಮಾರ್ ತಿಳಿಸಿದರು.
ಮತಗಟ್ಟೆ ಮಟ್ಟದ ಜಾಗೃತಿ ಗುಂಪುಗಳು ಚುನಾವಣೆ ಹಿನ್ನಲೆಯಲ್ಲಿ ಮತದಾನಕ್ಕೆ ಪೂರಕವಾಗಿರುವ ಉತ್ತಮ ವ್ಯವಸ್ಥೆಗಳನ್ನು ಕಲ್ಪಿಸುವ ಬಗ್ಗೆಯೂ ತಿಳಿಸಬೇಕಿದೆ. ಈ ಬಾರಿ ಮತಗಟ್ಟೆಯಲ್ಲಿ ಕನಿಷ್ಠ ಮೂಲ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ, ರ್ಯಾಂಪ್, ನೆರಳಿನ ವ್ಯವಸ್ಥೆಯನ್ನು ಖಾತರಿ ಪಡಿಸಲಾಗುತ್ತದೆ. ಜನರಿಗೆ ಮಾಹಿತಿ ನೀಡುವ ಹಲವಾರು ಆಪ್‍ಗಳು ಸಹ ಇವೆ. ಈ ಎಲ್ಲ ವಿಷಯಗಳನ್ನೂ ಮತಗಟ್ಟೆ ಮಟ್ಟದಲ್ಲಿ ಮತದಾರರಿಗೆ ಅರಿವು ಮೂಡಿಸುವ ಜವಾಬ್ದಾರಿ ಮತಗಟ್ಟೆ ಮಟ್ಟದ ಜಾಗೃತಿ ಗುಂಪಿನ ಸದಸ್ಯರಿಗೆ ಇದೆ ಎಂದರು.
ವಿಶೇಷ ಚೇತನರು ಮತದಾನದಿಂದ ದೂರ ಉಳಿಯದಂತೆ ಮಾಡುವ ಉದ್ದೇಶದಿಂದ ಮತಗಟ್ಟೆಗೆ ಸುಲಭವಾಗಿ ಪ್ರವೇಶಿಸಲು ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಈಗಾಗಲೇ ಜಿಲ್ಲೆಯಲ್ಲಿರುವ ವಿಶೇಷ ಚೇತನರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಲಿಂಗತ್ವ ಅಲ್ಪ ಸಂಖ್ಯಾತರು ಇನ್ನಿತರ ಎಲ್ಲಾ ವರ್ಗದವರು ಮುಕ್ತವಾಗಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅಗತ್ಯ ತಿಳಿವಳಿಕೆ ನೀಡುವ ಕೆಲಸವನ್ನು ಸಹ ಮತಗಟ್ಟೆ ಜಾಗೃತಿ ಗುಂಪುಗಳು ನಿರ್ವಹಿಸಬೇಕೆಂದು ಹರೀಶ್ ಕುಮಾರ್ ತಿಳಿಸಿದರು.ಮತಗಟ್ಟೆ ಮಟ್ಟದ ಜಾಗೃತಿ ಗುಂಪುಗಳಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸ್ಥಳೀಯ ಸಂಸ್ಥೆಗಳ ನೌಕರರು ಇರುತ್ತಾರೆ. ಆಯಾ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಜಾಗೃತಿ ಗುಂಪಿನ ಮೇಲ್ವಿಚಾರಣೆ ಮಾಡಲಿದ್ದಾರೆ. ಗ್ರಾಮಗಳಲ್ಲಿ ಚುನಾವಣೆಗೆ ಬಳಸುವ ವಿದ್ಯುನ್ಮಾನ ಮತಯಂತ್ರ ಹಾಗೂ ಮತ ಖಾತರಿ ಪಡಿಸುವ ವಿ.ವಿ.ಪ್ಯಾಟ್ ಬಳಕೆ ಬಗ್ಗೆಯೂ ಪ್ರಾತ್ಯಕ್ಷಿಕೆ ಮೂಲಕ ಸ್ವೀಪ್ ಸಮಿತಿಯಿಂದ ಅರಿವು ಮೂಡಿಸಲಾಗುತ್ತದೆ. ಈ ಚಟುವಟಿಕೆಗಳಿಗೆ ಸಹ ಬೆಂಬಲವಾಗಿ ನಿಲ್ಲಬೇಕು ಎಂದು ಹರೀಶ್ ಕುಮಾರ್ ತಿಳಿಸಿದರು.
ಇದೇ ವೇಳೆ ಮಾಸ್ಟರ್ ಟ್ರೈನರ್ ಶ್ರೀನಿವಾಸ್ ಅವರು ವಿದ್ಯುನ್ಮಾನ ಮತಯಂತ್ರ ಹಾಗೂ ವಿ.ವಿ.ಪ್ಯಾಟ್ ಬಳಕೆ ಹಾಗೂ ಕಾರ್ಯವಿಧಾನಗಳ ಕುರಿತು ಪ್ರಾತ್ಯಕ್ಷಿಕೆ ಮೂಲಕ ತಿಳಿವಳಿಕೆ ಮೂಡಿಸಿದರು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮುನಿರಾಜಪ್ಪ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್, ತರಬೇತಿ ನೋಡಲ್ ಅಧಿಕಾರಿ ಯೋಗೇಶ್ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಏ. 5ರಂದು ನಗರದಲ್ಲಿ ಡಾ. ಬಾಬು ಜಗಜೀವನರಾಮ್ ಜನ್ಮದಿನಾಚರಣೆ: ಮೆರವಣಿಗೆ ಹಾಗೂ ಸಮಾರಂಭ ಆಯೋಜನೆ
ಚಾಮರಾಜನಗರ, ಏ. 04 - ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಹಸಿರು ಕ್ರಾಂತಿಯ ಹರಿಕಾರ, ರಾಷ್ಟ್ರ ನಾಯಕ ಹಾಗೂ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನರಾಮ್ ಅವರ 111ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಏಪ್ರಿಲ್ 5ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ.ಬೆಳಿಗ್ಗೆ 9.30 ಗಂಟೆಗೆ ನಗರದ ಪ್ರವಾಸಿ ಮಂದಿರದಿಂದ ಡಾ. ಬಾಬು ಜಗಜೀವನ್‍ರಾಮ್ ರವರ ಭಾವಚಿತ್ರ ಮೆರವಣಿಗೆ ಹೊರಡಲಿದೆ. ಬಳಿಕ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಜೆ.ಎಚ್. ಪಟೇಲ್ ಸಭಾಂಗಣಕ್ಕೆ ಮೆರವಣಿಗೆ ತಲುಪಲಿದೆ. ಬಳಿಕ 10 ಗಂಟೆಗೆ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಜಿಲ್ಲಾಧಿಕಾರಿ
ಬಿ.ಬಿ. ಕಾವೇರಿ ಅವರು ಜನ್ಮ ದಿನಾಚರಣೆಯ ಸಮಾರಂಭ ಉದ್ಘಾಟಿಸುವರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಮುಖ್ಯ ಅತಿಥಿಗಳಾಗಿ ಸಮಾರಂಭದಲ್ಲಿ ಪಾಲ್ಗೊಳ್ಳುವರು.
ನಗರದ ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಎಂ. ತಿರುಮಲೇಶ ಮುಖ್ಯ ಭಾಷಣ ಮಾಡುವರು ಎಂದು ಪ್ರಕಟಣೆ ತಿಳಿಸಿದೆ.
ಉಚಿತ ಕಂಪ್ಯೂಟರ್ ತರಬೇತಿ
ಚಾಮರಾಜನಗರ, ಏ. 04 ಕೈಗಾರಿಕೆ ಮತ್ತು ತರಬೇತಿ ಮತ್ತು ಉದ್ಯೋಗ ಇಲಾಖೆಯಿಂದ ಏಪ್ರಿಲ್ 9 ರಿಂದ ಮೇ 9ರವರೆಗೆ ಉಚಿತ ಕಂಪ್ಯೂಟರ್ ತರಬೇತಿಯನ್ನು ನಗರದ ಜಿಲ್ಲಾಡಳಿತ ಭವನದ 2ನೇ ಮಹಡಿಯಲ್ಲಿರುವ ಕೈಗಾರಿಕೆ ತರಬೇತಿ ಮತ್ತು ಉದ್ಯೊಗ ಇಲಾಖೆ ಕಚೇರಿ (ಕೊಠಡಿ ಸಂಖ್ಯೆ 212) ಯಲ್ಲಿ ಆಯೋಜಿಸಲಾಗಿದೆ.ಅಭ್ಯರ್ಥಿಗಳು ಸ್ವ ವಿವರಗಳೊಂದಿಗೆ ತಮ್ಮ ಹೆಸರು ನೊಂದಾಯಿಸಿಕೊಂಡು ಸದುಪಯೋಗ ಪಡೆದುಕೊಳ್ಳಲು ತಿಳಿಸಿದೆ.
ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗಾಧಿಕಾರಿಗಳ ಕಚೇರಿ ದೂರವಾಣಿ ಸಂಖ್ಯೆ 08226-224430 ಹಾಗೂ ವೆಂಕಟೇಶ್ (ಮೊ. 8971856973) ಇವರನ್ನು ಸಂಪರ್ಕಿಸುವಂತೆ ಜಿಲ್ಲಾ ಕೈಗಾರಿಕೆ ಮತ್ತು ತರಬೇತಿ ಮತ್ತು ಉದ್ಯೋಗ ಇಲಾಖೆ ಅಧಿಕಾರಿ ಸಿ.ಎಂ. ಉಮಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಏ. 13ರಂದು ಜಿ.ಪಂ. ಅಧ್ಯಕ್ಷರ ಚುನಾವಣೆ
ಚಾಮರಾಜನಗರ, ಏ. 04 - ಚಾಮರಾಜನಗರ ಜಿಲ್ಲಾ ಪಂಚಾಯಿತಿಯ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆಯನ್ನು ನಡೆಸಲು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಏಪ್ರಿಲ್ 13ರಂದು ಮಧ್ಯಾಹ್ನ 12 ಗಂಟೆಗೆ ಚಾಮರಾಜನಗರದ ಜಿಲ್ಲಾ ಪಂಚಾಯತ್ ಕಚೇರಿಯ ಸಭಾಂಗಣದಲ್ಲಿ ಚುನಾವಣೆ ಸಭೆ ಕರೆಯಲಾಗಿದೆ ಎಂದು ಮೈಸೂರು ವಿಭಾಗದ ಪ್ರಾದೇಶಿಕ ಹೆಚ್ಚುವರಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದೆ.ಚಾ.ನಗರ : ಉದ್ದಿಮೆ ಪರವಾನಗಿ ಪಡೆಯಲು ಸೂಚನೆ
ಚಾಮರಾಜನಗರ, ಏ. 04:- ಪಟ್ಟಣ ವ್ಯಾಪ್ತಿಯಲ್ಲಿ ಉದ್ದಿಮೆ ನಡೆಸುತ್ತಿರುವ ಎಲ್ಲ ಉದ್ದಿಮೆದಾರರುಗಳಿಗೆ ನಗರ ಸ್ಥಳೀಯ ಸಂಸ್ಥೆಗಳಿಂದ ಸರಳವಾಗಿ ಉದ್ದಿಮೆ ಪರವಾನಗಿ ದೊರಕಿಸಿಕೊಡುವ ದೃಷ್ಠಿಯಿಂದ ಪೌರಸುಧಾರಣಾ ಕೋಶದಿಂದ ವ್ಯಾಪಾರ (ಉದ್ದಿಮೆ ಪರವಾನಗಿ) ಆನ್ ಲೈನ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ.ಎಲ್ಲ ಉದ್ದಿಮೆದಾರರು ಕಡ್ಡಾಯವಾಗಿ 2018-19ನೇ ಸಾಲಿಗೆ ಕಟ್ಟಡದ ಕಂದಾಯವನ್ನು ಪಾವತಿಸಿ ವ್ಯಾಪಾರ್ ಆನ್ ಲೈನ್ ತಂತ್ರಾಂಶದ ಮೂಲಕವೇ ಉದ್ದಿಮೆ ಪರವಾನಗಿಯನ್ನು ಪಡೆಯಬೇಕು ಮತ್ತು ನವೀಕರಿಸಿಕೊಳ್ಳಬೇಕು.
ಕರ್ನಾಟಕ ಪುರಸಭೆಗಳ ಅಧಿನಿಯಮ 1964 ಮತ್ತು ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ 1978ರ ಪ್ರಕಾರ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಎಲ್ಲ ಉದ್ದಿಮೆದಾರರು ಪರವಾನಗಿ ಪಡೆಯಬೇಕು. ಪರವಾನಗಿ ಪಡೆಯದಿರುವವರ ಹಾಗೂ ನವೀಕರಿಸದಿರುವ ಉದ್ದಿಮೆದಾರರ ಉದ್ದಿಮೆಗಳನ್ನು ಮುಚ್ಚಿಸಿ, ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
No comments:
Post a Comment