Wednesday, 11 April 2018

ವಿಧಾನಸಭಾ ಚುನಾವಣೆ – 2018 ವಿಧಾನಸಭಾ ಚುನಾವಣೆ : ನಾಮಪತ್ರ ಸ್ವೀಕರಿಸುವ ಸ್ಥಳಗಳ ವಿವರ (11-04-2018)

ವಿಧಾನಸಭಾ ಚುನಾವಣೆ – 2018

ವಿಧಾನಸಭಾ ಚುನಾವಣೆ : ನಾಮಪತ್ರ ಸ್ವೀಕರಿಸುವ ಸ್ಥಳಗಳ ವಿವರ

ಚಾಮರಾಜನಗರ, ಏ. 11 -  ವಿಧಾನ ಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಜಿಲ್ಲಾ ವ್ಯಾಪ್ತಿಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಏಪ್ರಿಲ್ 17 ರಿಂದ 24ರವರೆಗೆ ನಾಮಪತ್ರಗಳನ್ನು ಸ್ವೀಕರಿಸಲಾಗುವುದು.
ಸರ್ಕಾರಿ ರಜಾದಿನಗಳನ್ನು ಹೊರತುಪಡಿಸಿ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯೊಳಗೆ ನಾಮಪತ್ರ ಸಲ್ಲಿಸಬಹುದು.
ಹನೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ನಾಮಪತ್ರಗಳನ್ನು ಕೊಳ್ಳೇಗಾಲ ತಾಲೂಕು ಪಂಚಾಯಿತಿ ಕಚೇರಿಯ ನೆಲಮಹಡಿಯಲ್ಲಿರುವ ಸಭಾಂಗಣದಲ್ಲಿ ಸಲ್ಲಿಸುವುದು.
ಕೊಳ್ಳೇಗಾಲ (ಎಸ್ ಸಿ) ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಾಮಪತ್ರಗಳನ್ನು ಕೊಳ್ಳೇಗಾಲ ಉಪವಿಭಾಗಾಧಿಕಾರಿಗಳ ಕಚೇರಿಯ 1ನೇ ಮಹಡಿಯಲ್ಲಿರುವ ನ್ಯಾಯಾಲಯ ಸಭಾಂಗಣದಲ್ಲಿ ಸಲ್ಲಿಸಬೇಕು.
ಚಾಮರಾಜನಗರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಾಮಪತ್ರಗಳನ್ನು ನಗರದ ಮಿನಿ ವಿಧಾನಸೌಧದ ತಾಲೂಕು ಕಚೇರಿಯ ನೆಲ ಮಹಡಿಯಲ್ಲಿರುವ ಸಭಾಂಗಣದ ಕೊಠಡಿ ಸಂಖ್ಯೆ 1ರಲ್ಲಿ ಸಲ್ಲಿಸಬೇಕು.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಾಮಪತ್ರಗಳನ್ನು ಗುಂಡ್ಲುಪೇಟೆ ತಾಲೂಕು ಕಚೇರಿಯ ನೆಲಮಹಡಿಯಲ್ಲಿರುವ ಮಿನಿ ವಿಧಾನಸೌಧದ ಸಭಾಭವನದಲ್ಲಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ  ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ. ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರÉ.

ವಿಧಾನಸಭಾ ಚುನಾವಣೆ – 2018
ಏಪ್ರಿಲ್ 12ರಿಂದ ಚಾ-ನಗರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಮತಯಂತ್ರ ವಿವಿ ಪ್ಯಾಟ್ ಪ್ರಾತ್ಯಕ್ಷಿಕೆ 

ಚಾಮರಾಜನಗರ, ಏ. 11 - ವಿಧಾನ ಸಭಾ ಚುನಾವಣೆ ಹಿನ್ನಲೆಯಲ್ಲಿ ತಾಲ್ಲೂಕು ಸ್ವೀಪ್ ಸಮಿತಿಯ ವತಿಯಿಂದ ಚಾಮರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 26 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಮೇ 12ರಿಂದ 24ರವರೆಗೆ ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿ ಪ್ಯಾಟ್ (ಮತದಾನ ಖಾತರಿ ಯಂತ್ರ) ಕುರಿತು ಅರಿವು ಮೂಡಿಸುವ ಸಲುವಾಗಿ ಪ್ರಾತ್ಯಕ್ಷಿಕೆ ಏರ್ಪಾಡು ಮಾಡಲಾಗಿದೆ.
ಏಪ್ರಿಲ್ 12ರಂದು ದೊಡ್ಡಮೋಳೆ, ಹರದನಹಳ್ಳಿ, ಅಮಚವಾಡಿ 13ರಂದು ಯರಗನಹಳ್ಳಿ, ಅರಕಲವಾಡಿ, 14ರಂದು ವೆಂಕಟಯ್ಯನಛತ್ರ, ಬಿಸಲವಾಡಿ, ಹೊನ್ನಹಳ್ಳಿ, 16ರಂದು ಶಿವಪುರ, ಉಡಿಗಾಲ, ಕೊತ್ತಲವಾಡಿ, 17ರಂದು ನಂಜದೇವನಪುರ, ಹೆಗ್ಗೋಠಾರ, ಬದನಗುಪ್ಪೆ, 19ರಂದು ಕೂಡ್ಲೂರು, ಆಲೂರು, ಕಾಗಲವಾಡಿ, 20ರಂದು ಚಂದಕವಾಡಿ, ನಾಗವಳ್ಳಿ, ಜ್ಯೋತಿಗೌಡನಪುರ, ಹೆಬ್ಬಸೂರು, 21ರಂದು ಮಾದಾಪುರ, ಮಂಗಲ, ಭೋಗಾಪುರ, 23ರಂದು ಪುಣಜನೂರು, ಅಟ್ಟುಗೂಳಿಪುರ, 24ರಂದು ಚಾಮರಾಜನಗರ ಪಟ್ಟಣದಲ್ಲಿ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಲಿದೆ ಎಂದು ತಾಲ್ಲೂಕು ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
   

  ಭದ್ರತಾ ಕಾಯ್ಕೆಯಡಿ 42 ಪ್ರಕರಣಗಳು ದಾಖಲು: 4 ಅಬಕಾರಿ ಪ್ರಕರಣ ದಾಖಲು

ಚಾಮರಾಜನಗರ, ಏ. 11 -  ವಿಧಾನ ಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಪೊಲೀಸ್ ಇಲಾಖೆಯು  ಮುಂಜಾಗ್ರತ ಕ್ರಮ ಜರುಗಿಸಿದ್ದು, ಭದ್ರತಾ ಕಾಯ್ದೆಯಡಿ 42 ಪ್ರಕರಣಗಳನ್ನು ದಾಖಲಿಸಿಕೊಂಡಿದೆ.
ಅಬಕಾರಿ ಕಾಯ್ದೆಯಡಿ ಒಟ್ಟು 4 ಪ್ರಕರಣಗಳು ದಾಖಲಾಗಿವೆ.  ಕೊಳ್ಳೇಗಾಲ ಗ್ರಾಮಾಂತರ ಠಾಣೆ, ಗುಂಡ್ಲುಪೇಟೆ ಠಾಣೆ,  ಚಾಮರಾಜನಗರ ಪೂರ್ವ ಠಾಣೆ ಹಾಗೂ ತೆರಕಣಾಂಬಿ ಠಾಣೆಯಲ್ಲಿ ತಲಾ 1 ಪ್ರಕರಣ ದಾಖಲಾಗಿವೆ.  ಒಟ್ಟು 4501 ರೂ. ಮೌಲ್ಯದ 13.5 ಲೀ. ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.  ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಒಟ್ಟು 81 ಜಾಮೀನು ರಹಿತ ವಾರೆಂಟ್ ಕಾರ್ಯಗತಗೊಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.

ಸಿಇಟಿ ಪರೀಕ್ಷೆ: ಅಗತ್ಯ ಸಿದ್ಧತಾ ಪ್ರಕ್ರಿಯೆಗೆ ಸೂಚನೆ 

ಚಾಮರಾಜನಗರ, ಏ. 11- ಜಿಲ್ಲೆಯಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆಯು (ಸಿಇಟಿ) ಇದೇ ಏಪ್ರಿಲ್ 18 ಹಾಗೂ 19ರಂದು ನಡೆಯಲಿರುವ ಹಿನ್ನಲೆಯಲ್ಲಿ ಯಾವುದೇ ಲೋಪಕ್ಕೆ ಅವಕಾಶವಾಗದಂತೆ ಅಗತ್ಯ ಸಿದ್ದತೆ ಕೈಗೊಳ್ಳಬೇಕೆಂದು ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯತ್ರಿ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಸಿಇಟಿ ಪರೀಕ್ಷಾ ಸಂಬಂಧ ನಡೆದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾಮಾನ್ಯ ಪ್ರವೇಶ ಪರೀಕ್ಷೆಯು (ಸಿಇಟಿ) ಚಾಮರಾಜನಗರ ಪಟ್ಟಣ ಹಾಗೂ ಕೊಳ್ಳೇಗಾಲ ಪಟ್ಟಣದ ತಲಾ ಎರಡು ಕೇಂದ್ರಗಳಲ್ಲಿ ನಡೆಯಲಿದೆ.  ಪರೀಕ್ಷಾ ಕೆಲಸಕ್ಕೆ ಅಧಿಕಾರಿಗಳನ್ನು ಒಳಗೊಂಡ ತ್ರಿಸದಸ್ಯರ ತಂಡ ರಚಿಸಿ ಆದೇಶಿಸಲಾಗಿದೆ.  ನಿಯೋಜಿತವಾಗಿರುವ ಅಧಿಕಾರಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮಾರ್ಗಸೂಚಿ ಹಾಗೂ ನಿರ್ದೇಶನ ಅನ್ವಯ ಕಾರ್ಯನಿರ್ವಹಿಸಬೇಕು ಎಂದರು.
ಪರೀಕ್ಷೆ ಪ್ರಶ್ನೆ ಪತ್ರಿಕೆ, ಉತ್ತರ ಪತ್ರಿಕೆಗಳನ್ನು ಜವಾಬ್ದಾರಿಯಿಂದ ಭದ್ರತಾ ಕೊಠಡಿಗೆ ತಲುಪಿಸುವ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸಬೇಕು.  ಸಕಾಲಕ್ಕೆ ಪರೀಕ್ಷಾ ಕೇಂದ್ರ ತಲುಪಬೇಕು.  ಈ ನಿಟ್ಟಿನಲ್ಲಿ ಕೈಗೊಳ್ಳಬೇಕಿರುವ ಎಲ್ಲಾ ಪ್ರಕ್ರಿಯೆ ಬಗ್ಗೆ ತಿಳಿವಳಿಕೆ ಹೊಂದಬೇಕು.  ಪರೀಕ್ಷಾ ಪ್ರಾಧಿಕಾರದ ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ತಿಳಿದುಕೊಂಡು ಕರ್ತವ್ಯಕ್ಕೆ ಮುಂದಾಗಬೇಕೆಂದು ಹೆಚ್ಚುವರಿ ಜಿಲ್ಲಾಧಿಕಾರಿ ತಿಳಿಸಿದರು.
ಪರೀಕ್ಷೆಗೆ ಹಾಜರಾಗಲಿರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ರಾಧಿಕಾರ ಸೂಚಿಸಿರುವ ಮಾರ್ಗಸೂಚಿಗಳ ಬಗ್ಗೆ ಮನನ ಮಾಡಿಕೊಡಬೇಕು.  ಯಾವ ಸಾಮಗ್ರಿಗಳನ್ನು ಪರೀಕ್ಷಾ ಕೊಠಡಿಗೆ ತೆಗೆದುಕೊಂಡು ಹೋಗಲು ಅನುಮತಿಸಲಾಗಿದೆ ಎಂಬ ಬಗ್ಗೆ ಸಾಕಷ್ಟು ಮೊದಲೆ ತಿಳಿವಳಿಕೆ ನೀಡಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗಾಯತ್ರಿ ತಿಳಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಶಾಮಲ ಮಾತನಾಡಿ ಈ ಬಾರಿ ಪರೀಕ್ಷಾ ಕೊಠಡಿಗೆ ಕಡ್ಡಾಯವಾಗಿ ಗಡಿಯಾರ ಅಳವಡಿಸುವಂತೆ ಸೂಚಿಸಲಾಗಿದೆ.  ಪರೀಕ್ಷಾ ಕೊಠಡಿ ಮೇಲ್ವಿಚಾರಕರಾಗಿ ವಿಜ್ಞಾನ ವಿಷಯ ಹೊರತು ಪಡಿಸಿದ ಉಪನ್ಯಾಸಕರು ಇರಬೇಕಿದೆ. ಪರೀಕ್ಷೆ ಕಾರ್ಯಕ್ಕೆ ನೇಮಕವಾಗಿರುವವರು ಯಾವುದೇ ಗೊಂದಲಕ್ಕೆ ಅವಕಾಶವಾಗದಂತೆ ಕಾರ್ಯ ನಿರ್ವಹಿಸಬೇಕು ಎಂದರು.
ಸಭೆಯಲ್ಲಿ ಪರೀಕ್ಷಾ ಕೆಲಸ ಪ್ರಕ್ರಿಯೆಗೆ ಸಂಬಂಧಿಸಿದ ಅಧಿಕಾರಿಗಳು ಹಾಜರಿದ್ದರು. 






ಸಿಇಟಿ ಪರೀಕ್ಷೆ : ಕೇಂದ್ರಗಳ ಸುತ್ತ ನಿಷೇದಾಜ್ಞೆ

ಚಾಮರಾಜನಗರ, ಏ. 11 - ಜಿಲ್ಲೆಯ ಚಾಮರಾಜನಗರ ಹಾಗೂ ಕೊಳ್ಳೇಗಾಲದಲ್ಲಿ ಏಪ್ರಿಲ್ 18 ಹಾಗೂ 19ರಂದು ನಡೆಯಲಿರುವ ಸಾಮಾನ್ಯ ಪ್ರವೇಶ  ಪರೀಕ್ಷೆಯ (ಸಿಇಟಿ)  ಪರೀಕ್ಷಾ ಕೇಂದ್ರಗಳ ಸುತ್ತ ನಿಷೇದಾಜ್ಞೆ ವಿಧಿಸಿ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಆದೇಶ ಹೊರಡಿಸಿದ್ದಾರೆ.
ಚಾಮರಾಜನಗರದ ಜೆಎಸ್‍ಎಸ್ ಮಹಿಳಾ ಪಿಯು ಕಾಲೇಜು, ಸರ್ಕಾರಿ ಪದವಿಪೂರ್ವ ಬಾಲಕಿಯರ ಕಾಲೇಜು ಹಾಗೂ ಕೊಳ್ಳೇಗಾಲದ ನಿಸರ್ಗ ಸ್ವತಂತ್ರ ಪದವಿಪೂರ್ವ ಕಾಲೇಜು, ಸರ್ಕಾರಿ ಎಸ್‍ವಿಕೆ ಪದವಿಪೂರ್ವ ಬಾಲಕಿಯರ ಕಾಲೇಜು ಪರೀಕ್ಷಾ ಕೇಂದ್ರಗಳಾಗಿವೆ.
ಪರೀಕ್ಷಾ ಸಂದರ್ಭದಲ್ಲಿ ಯಾವುದೇ ಅಕ್ರಮಗಳಿಗೆ ಅವಕಾಶವಾಗದಂತೆ ಹಾಗೂ ನ್ಯಾಯೋಚಿತವಾಗಿ ಪರೀಕ್ಷೆ ನಡೆಯಲು ಅನುವಾಗುವಂತೆ ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರದ ಸುತ್ತಲ 200 ಮೀಟರ್ ವ್ಯಾಪ್ತಿಯಲ್ಲಿ ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. ಅಲ್ಲದೆ ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ಬರುವ ಜೆರಾಕ್ಸ್ ಅಂಗಡಿಗಳನ್ನು ಬೆಳಿಗ್ಗೆ 8 ರಿಂದ ಸಂಜೆ 4.30ರವರೆಗೆ ಮುಚ್ಚಲೂ ಸಹ ಆದೇಶಿಸಿದ್ದಾರೆ.
ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಹಾಗೂ ಪರೀಕ್ಷಾ ಕೆಲಸಕ್ಕೆ ನಿಯೋಜಿತರಾದ ಸಿಬ್ಬಂದಿ ವರ್ಗದವರಿಗೆ ನಿಷೇಧ ಆದೇಶ ಅನ್ವಯವಾಗುವುದಿಲ್ಲವೆಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿಯವರು ತಿಳಿಸಿದ್ದಾರೆ.

ಏ. 16ರಿಂದ ಬೇಸಿಗೆ ತರಬೇತಿ ಶಿಬಿರ

ಚಾಮರಾಜನಗರ, ಏ. 11:- ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಜಿಲ್ಲೆಯ ಚಾಮರಾಜನಗರ, ಕೊಳ್ಳೇಗಾಲ, ಯಳಂದೂರು ಹಾಗೂ ಗುಂಡ್ಲುಪೇಟೆ ತಾಲೂಕುಗಳಲ್ಲಿ ಏಪ್ರಿಲ್ 16 ರಿಂದ ಮೇ 30ರವರೆಗೆ ಸಂಜೆ 5 ಗಂಟೆಯಿಂದ ಬೇಸಿಗೆ ಶಿಬಿರ ನಡೆಸಲಾಗುವುದು.
ವಿವಿಧ ಕ್ರೀಡೆಗಳಲ್ಲಿ ತರಬೇತಿ ನೀಡಲಿದ್ದು ತರಬೇತುದಾರರನ್ನು ನಿಯೋಜಿಸಲಾಗಿದ್ದು ವಿವರ ಇಂತಿದೆ.
ಕೊಳ್ಳೇಗಾಲದ ಎಂಜೆಎಸ್‍ವಿ ಕಾಲೇಜು ಮೈದಾನದಲ್ಲಿ ವಾಲಿಬಾಲ್ ಕ್ರೀಡೆಗೆ ತರಬೇತನ್ನು ಜಯರಾಜು (ಮೊ. 9739826369) ಹಾಗೂ ರವಿಕುಮಾರ್ (ಮೊ. 9844600492) ನೀಡಲಿದ್ದಾರೆ.
ಯಳಂದೂರಿನ ಅಗರ ಗ್ರಾಮದ ಟಿ.ಎಸ್. ಸುಬ್ಬಣ್ಣ ಸಾರ್ವಜನಿಕ ಪ್ರೌಢಶಾಲೆಯಲ್ಲಿ ಕುಮಾರ್ (ಮೊ. 9886526252) ಅವರು ವಾಲಿಬಾಲ್ ಕ್ರೀಡೆಗೆ ತರಬೇತಿ ನೀಡುವರು.
ಚಾಮರಾಜನಗರದ ಡಾ. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಬಾಲಿಬಾಲ್ ಮತ್ತು ಫುಟ್‍ಬಾಲ್ ಕ್ರೀಡೆಗೆ ಪಿ. ಮಹದೇವಯ್ಯ (ಮೊ. 7060841489) ತರಬೇತುದಾರರಾಗಿದ್ದಾರೆ.
ಗುಂಡ್ಲುಪೇಟೆಯ ಡಿ. ದೇವರಾಜ ಅರಸು ತಾಲೂಕು ಕ್ರೀಡಾಂಗಣದಲ್ಲಿ ಬಿ.ಕೆ. ಗೋಪಾಲ್ (ಮೊ. 994561695) ಹಾಗೂ ಸ್ವಾಮಿ (ಮೊ. 9841821583) ಅವರುಗಳು ಫುಟ್‍ಬಾಲ್ ಕ್ರೀಡೆಗೆ ತರಬೇತಿ ನೀಡುವರು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಎಂ. ಚಲುವಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಏ. 14ರಂದು ಜಿಲ್ಲಾಡಳಿತದ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಜನ್ಮ ದಿನಾಚರಣೆ

ಚಾಮರಾಜನಗರ, ಏ. 11 - ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಭಾರತರತ್ನ, ಸಂವಿಧಾನ ಶಿಲ್ಪಿ ಹಾಗೂ ರಾಷ್ಟ್ರ ನಾಯಕ ಬಾಬÁ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ 127ನೇ ಜನ್ಮ ದಿನಾಚರಣೆ ಸಮಾರಂಭವನ್ನು ಏಪ್ರಿಲ್ 14ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಕಾರ್ಯಕ್ರಮ ನಡೆಯಲಿದೆ.
ಬೆಳಿಗ್ಗೆ 10.30 ಗಂಟೆಗೆ ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಸಮಾರಂಭ ಏರ್ಪಡಿಸಲಾಗಿದೆ.
ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಸಮಾರಂಭ ಉದ್ಘಾಟಿಸುವರು.  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್  ಅಧ್ಯಕ್ಷತೆ ವಹಿಸುವರು.  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ  ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು.  ಮೈಸೂರು ಮಹಾರಾಜ ಕಾಲೇಜು ಅರ್ಥಶಾಸ್ತ್ರ ಮತ್ತು ಸಹಕಾರ ವಿಭಾಗದ ಸಹಪ್ರಾಧ್ಯಾಪಕರಾದ ಡಾ. ವಿ. ಷಣ್ಮುಗಂ ಅವರು ಮುಖ್ಯ ಭಾಷಣ ಮಾಡುವರು ಎಂದು ಪ್ರಕಟಣೆ ತಿಳಿಸಿದೆ.

ನವೋದಯ ವಿದ್ಯಾಲಯ : ಪ್ರವೇಶ ಪತ್ರ ಪಡೆಯಲು ಸೂಚನೆ

ಚಾಮರಾಜನಗರ, ಏ. 11 - ಜವಹರ್ ನವೋದಯ ವಿದ್ಯಾಲಯದ ಪ್ರಸಕ್ತ ಸಾಲಿನ 6ನೇ ತರಗತಿ ದಾಖಲಾತಿ ಪ್ರವೇಶ ಪರೀಕ್ಷೆಗೆ ಪ್ರವೇಶ ಪತ್ರಗಳನ್ನು ಪಡೆಯುವಂತೆ ಸೂಚಿಸಲಾಗಿದೆ.
ಪರೀಕ್ಷೆಯು ಏಪ್ರಿಲ್ 21ರಂದು ನಡೆಯಲಿದ್ದು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಯಾವುದೇ ಸಾಮಾನ್ಯ ಸೇವಾ ಕೇಂದ್ರದಲ್ಲಿ ಪ್ರವೇಶ ಪತ್ರಗಳನ್ನು ಡೌನ್‍ಲೋಡ್ ಮಾಡಿಕೊಳ್ಳಬಹುದು.
ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಶಾಲಾ ಮುಖ್ಯೋಪಾಧ್ಯಾಯರಿಂದ ಪಡೆದುಕೊಳ್ಳುವುದು.
ಪ್ರವೇಶ ಪತ್ರ ಪಡೆಯುವ ಸಂಬಂಧ ಮಾಹಿತಿಗೆ ಜವಹರ್ ನವೋದಯ ವಿದ್ಯಾಲಯದ ಪ್ರಾಂಶುಪಾಲರು ಅಥವಾ  ಬಿ.ಎಚ್. ಸುರೇಶ್ ಇವರನ್ನು ಮೊಬೈಲ್ 9742476738 ಮೂಲಕ ಸಂಪರ್ಕಿಸುವುದು.
ಸಹಾಯವಾಣಿ ಸಂಖ್ಯೆ 9448552763 ಹಾಗೂ 9442527823 ಸಂಪರ್ಕಿಸಬಹುದು.
ಪ್ರವೇಶ ಪತ್ರ ಕುರಿತು ಮಾಹಿತಿ ಹಾಗೂ ಇತರೆ ಮಾಹಿತಿಗಳನ್ನು ನೀಡಲು ತಾಲೂಕುವಾರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ  ಜವಹರ್ ನವೋದಯ ವಿದ್ಯಾಲಯದ ಪ್ರತಿನಿಧಿಗಳು ಕಾರ್ಯ ನಿರ್ವಹಿಸುವರು. ಅವರನ್ನು ಏಪ್ರಿಲ್ 13 ಹಾಗೂ 16ರಂದು ಬೆಳಿಗ್ಗೆ 10.30 ಗಂಟೆಗೆ ಸಂಪರ್ಕಿಸುವಂತೆ ತಿಳಿಸಿದೆ.
ಚಾಮರಾಜನಗರಕ್ಕೆ ಸಂಬಂಧಿಸಿದಂತೆ ಮೊಬೈಲ್ 9449626243, ಗುಂಡ್ಲುಪೇಟೆಗೆ ಮೊಬೈಲ್ 7737756247, ಕೊಳ್ಳೇಗಾಲಕ್ಕೆ ಮೊಬೈಲ್ 9901009567, ಹನೂರಿಗೆ ಸಂಬಂಧಿಸಿದಂತೆ ಮೊಬೈಲ್ 9480769675 ಹಾಗೂ ಯಳಂದೂರಿನವರು ಮೊಬೈಲ್ 9480299565 ಸಂಪರ್ಕಿಸುವಂತೆ ಪ್ರಾಚಾರ್ಯರಾದ ಆರ್.ಡಿ.ಆರ್. ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







   
             










No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು