Thursday, 5 April 2018

ಉತ್ತಮ ಜ್ಞಾನ, ಚಿಂತನೆ ಗುಣಗಳಲ್ಲಿ ಬಾಬು ಜಗಜೀವನರಾಮ್ ಪ್ರಮುಖರು : ಜಿ.ಪಂ. ಸಿಇಓ ಡಾ. ಕೆ. ಹರೀಶ್ ಕುಮಾರ್ (05-04-2018 )

ಉತ್ತಮ ಜ್ಞಾನ, ಚಿಂತನೆ ಗುಣಗಳಲ್ಲಿ ಬಾಬು ಜಗಜೀವನರಾಮ್ ಪ್ರಮುಖರು : ಜಿ.ಪಂ. ಸಿಇಓ ಡಾ. ಕೆ. ಹರೀಶ್ ಕುಮಾರ್  

ಚಾಮರಾಜನಗರ, ಏ. 05 - ಹುಟ್ಟಿನಿಂದ ಶ್ರೇಷ್ಠತೆ ಬರುವುದಿಲ್ಲ. ಗಳಿಸಿಕೊಂಡ ಜ್ಞಾನ ಉತ್ತಮ ಚಿಂತನೆಗಳಿಂದ ಶ್ರೇಷ್ಠತೆ ಪ್ರಾಪ್ತವಾಗುತ್ತದೆ. ಇಂತಹ ಗುಣಗಳನ್ನು ಹೊಂದಿರುವವರ ಪೈಕಿ ಡಾ. ಬಾಬು ಜಗಜೀವನರಾಂ ಅವರು ಪ್ರಮುಖರು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಅಭಿಪ್ರಾಯಪಟ್ಟರು.

ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ  ಹಸಿರು ಕ್ರಾಂತಿಯ ಹರಿಕಾರ, ರಾಷ್ಟ್ರ ನಾಯಕ ಹಾಗೂ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನರಾಮ್ ಅವರ 111ನೇ ಜನ್ಮದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಡಾ. ಬಾಬು ಜಗಜೀವನ್‍ರಾಮ್ ಅವರು ಬಾಲ್ಯದಿಂದಲೇ ಉತ್ತಮ ಅಧ್ಯಯನ ಮಾಡಿದರು. ಹಲವಾರು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ಮಹಾಮೇಧಾವಿ ಎನಿಸಿಕೊಂಡರು. ಹಲವು ನ್ಯೂನತೆ ಹಾಗೂ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಎಲ್ಲವನ್ನು ಮೆಟ್ಟಿ ನಿಂತು ಅಗಾಧ ಸಾಧನೆ ಮಾಡಿದರು ಎಂದರು.
ಅಂದಿನ ಕಾಲಘಟ್ಟದಲ್ಲಿ ಡಾ. ಬಿ.ಆರ್. ಅಂಬೇಡ್ಕರ್, ಮಹಾತ್ಮಗಾಂಧಿ, ಬಾಬು ಜಗಜೀವನರಾಮ್ ಅವರಂಥಹ ಮಹಾನ್ ವ್ಯಕ್ತಿಗಳು ಮಾನವೀಯ ಮೌಲ್ಯಗಳ ದಿಸೆಯಲ್ಲಿ ಚಿಂತನೆ ಮಾಡಿದರು. ಈ ಕಾರಣದಿಂದಲೇ ಎಲ್ಲರಿಗಿಂತ ವಿಭಿನ್ನವಾಗಿ ಗಮನ ಸೆಳೆಯುತ್ತಾರೆ. ಎಲ್ಲ ಕಷ್ಟವನ್ನು ಸಹಿಸಿಕೊಂಡು ಯಶಸ್ವಿಯಾಗಿದ್ದಾರೆ. ಇಂತಹ ಮಹನೀಯರು ನಮ್ಮೆಲ್ಲರಿಗೂ ಆದರ್ಶವಾಗಿದ್ದಾರೆ ಎಂದು ಹರೀಶ್ ಕುಮಾರ್ ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಅವರು ಬಾಬು ಜಗಜೀವನರಾಮ್ ಅವರು ಒಳ್ಳೆಯ ಶಿಕ್ಷಣ ಪಡೆದು ಸ್ವಾತಂತ್ರ್ಯ ಹೋರಾಟದಲ್ಲೂ ಭಾಗವಹಿಸಿದ್ದರು. ಸಾಮಾಜಿಕ ವ್ಯವಸ್ಥೆಯನ್ನು ತಿದ್ದುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು ಎಂದರು.
ಸಮಾನತೆ ಬಗ್ಗೆ ಸಾರಿದ ಬಾಬು ಜಗಜೀವನರಾಮ್ ಅವರು ಅನೇಕ ಉತ್ತಮ ಕೆಲಸಗಳನ್ನು ನಿರ್ವಹಿಸುವ ಮೂಲಕ ತಮ್ಮದೇ ಆದ ವಿಶಿಷ್ಠ ಛಾಪು ಮೂಡಿಸಿದ್ದಾರೆ. ಇವರ ವಿಚಾರಧಾರೆ ಹಾಗೂ ಉನ್ನತ ಧ್ಯೇಯಗಳ ಬಗ್ಗೆ ವಿದ್ಯಾರ್ಥಿಗಳು ಹೆಚ್ಚು ತಿಳಿದುಕೊಳ್ಳುವ ಅಗತ್ಯವಿದೆ. ಈ ದಿಸೆಯಲ್ಲಿ ಯುವ ಪೀಳಿಗೆ ಮುಂದಾಗಬೇಕೆಂದು ಗಾಯತ್ರಿ ಅವರು ಸಲಹೆ ಮಾಡಿದರು.
ಮುಖ್ಯ ಉಪನ್ಯಾಸ ನೀಡಿದ ಕೃಷಿ ಜಂಟಿ ನಿರ್ದೇಶಕರಾದ ಎಂ. ತಿರುಮಲೇಶ ಅವರು ಶೋಷಿತ ಸಮುದಾಯದಲ್ಲಿ ಕಷ್ಟ ವೈಫಲ್ಯಗಳ ಪರಿಸ್ಥಿತಿ ನಡುವೆಯೂ ಯಾವುದನ್ನೂ ಲೆಕ್ಕಿಸದೆ ಅಧ್ಯಯನ ಮಾಡಿ ಉನ್ನತ ಸ್ಥಾನಕ್ಕೆ ಏರಿದ ಮಹಾನ್ ನಾಯಕರಾದ ಡಾ. ಬಾಬು ಜಗಜೀವನರಾಮ್, ಅಂಬೇಡ್ಕರ್ ಸೇರಿದಂತೆ ಎಲ್ಲರ ಬಗ್ಗೆಯೂ ಇಂದಿನ ಯುವ ಸಮೂಹ ಅರಿಯಬೇಕಿದೆ. ಸ್ವಾಭಿಮಾನ, ಗುರಿ, ಸಂವಹನ ಕಲೆ, ನಾಯಕತ್ವ ಗುಣಗಳನ್ನು ಅಳವಡಿಸಿಕೊಂಡು ಮೇರು ವ್ಯಕ್ತಿತ್ವದ ಪ್ರಭಾವವನ್ನು ಮನಸ್ಸುಗಳಿಗೆ ಹರಿಯಬಿಡಬೇಕಿದೆ ಎಂದರು.
ಆರ್ಥಿಕ, ರಾಜಕೀಯ, ಸಾಮಾಜಿಕವಾಗಿ ಅನುಕೂಲವಲ್ಲದ ಸ್ಥಿತಿಯಲ್ಲಿಯೂ ಹಲವಾರು ನಾಯಕರು ಪರಿಶ್ರಮದಿಂದ ಹೇಗೆ ಮುಂಚೂಣಿಗೆ ಬಂದರು ಎಂಬ ಬಗ್ಗೆ ಗಂಭೀರ ಚಿಂತನೆ ಮಾಡಬೇಕಿದೆ. ಸೂಕ್ಷ್ಮ ಪರಿಸ್ಥಿತಿಯಲ್ಲಿಯೂ ಶಿಕ್ಷಣದಂತಹ ಪ್ರಮುಖ ವಿಷಯಗಳಿಗೆ ಒಲವು ತೋರಬೇಕಿದೆ. ಸ್ಪರ್ಧಾತ್ಮಕ ಜಗತ್ತಿಗೆ ಅನುಗುಣವಾಗಿ ಸಿದ್ಧರಾಗಬೇಕಿದೆ. ಕೀಳರಿಮೆ ತೊರೆದು ಉನ್ನತ ಅಧ್ಯಯನ ಸ್ಥಾನಮಾನಗಳನ್ನು ಪಡೆಯಲು ದಿಟ್ಟ ನಿಲುವು ತಳೆಯಬೇಕು ಎಂದು ತಿರುಮಲೇಶ್ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮುನಿರಾಜಪ್ಪ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಕೆ.ಎಚ್. ಸತೀಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ನಗರದ ಪ್ರವಾಸಿ ಮಂದಿರದಿಂದ ಡಾ. ಬಾಬು ಜಗಜೀವನರಾಮ್ ಅವರ ಭಾವಚಿತ್ರ ಮೆರವಣಿಗೆಯು ಹೊರಟು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಸಮಾವೇಶಗೊಂಡಿತು. 
ಏ. 15ರಂದು ವಸತಿಶಾಲೆಗಳ ಪ್ರವೇಶಕ್ಕೆ ಪರೀಕ್ಷೆ
ಚಾಮರಾಜನಗರ, ಏ. 05 - ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲೆಯ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ, ಏಕಲವ್ಯ, ಡಾ. ಬಿ.ಆರ್. ಅಂಬೇಡ್ಕರ್, ಇಂದಿರಾಗಾಂಧಿ ವಸತಿ ಶಾಲೆಗಳಲ್ಲಿ 2018-19ನೇ ಸಾಲಿನಲ್ಲಿ 6ನೇ ತರಗತಿ ಪ್ರವೇಶಕ್ಕೆ ಏಪ್ರಿಲ್ 15ರಂದು ಪ್ರವೇಶ ಪರೀಕ್ಷೆ ನಿಗದಿಯಾಗಿದೆ.
ಈ ಹಿಂದೆ ನಿಗದಿಯಾಗಿದ್ದ ಪ್ರವೇಶ ಪರೀಕ್ಷೆಗೆ ಉಚ್ಚ ನ್ಯಾಯಾಲಯವು ತಡೆಯಾಜ್ಞೆ ನೀಡಿದ್ದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಮುಂದೂಡಲಾಗಿತ್ತು. ತದನಂತರ ತಡೆಯಾಜ್ಞೆ ತೆರವುಗೊಳಿಸಿರುವುದರಿಂದ ಪ್ರವೇಶ ಪರೀಕ್ಷೆಯು ಏಪ್ರಿಲ್ 15ರಂದು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಧಾನಸಭಾ ಚುನಾವಣೆ – 2018:
ಅಬಕಾರಿ ಅಕ್ರಮಗಳ ಕುರಿತು ದೂರು, ಮಾಹಿತಿ ನೀಡಿ

ಚಾಮರಾಜನಗರ, ಏ. 05 :- ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಬಕಾರಿ ಇಲಾಖೆಗೆ ಸಂಬಂಧಿಸಿದ ಅಕ್ರಮಗಳ ಬಗ್ಗೆ ದೂರು ಅಥವಾ ಯಾವುದೇ ಮಾಹಿತಿಗಳನ್ನು ಇಲಾಖೆಯ ಶುಲ್ಕ ರಹಿತ (ಟೋಲ್‍ಫ್ರೀ) ದೂರವಾಣಿ ಸಂಖ್ಯೆ 18004252550 ಗೆ ಕರೆ ಮಾಡಿ ತಿಳಿಸುವಂತೆ ಅಬಕಾರಿ ಇಲಾಖೆ ಉಪ ಆಯುಕ್ತರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಏ. 6, 7ರಂದು ನಗರದಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ಜಾಥಾ

ಚಾಮರಾಜನಗರ, ಏ. 05 - ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಸ್ವೀಪ್ ಸಮಿತಿ ವತಿಯಿಂದ ಏಪ್ರಿಲ್ 6 ಹಾಗೂ 7ರಂದು ನಗರದಲ್ಲಿ ವಿವಿಧ ಕಾಲೇಜು ವಿದ್ಯಾರ್ಥಿಗಳಿಂದ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಏಪ್ರಿಲ್ 6ರಂದು ಬೆಳಿಗ್ಗೆ 10 ಗಂಟೆಗೆ ಚಾಮರಾಜೇಶ್ವರ ದೇವಸ್ಥಾನದ ಬಳಿ ಹಾಗೂ 7ರಂದು ಬೆಳಿಗ್ಗೆ 10 ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಆವರಣದ ಬಳಿ ಜಾಥಾ ಹೊರಡಲಿದೆ.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸ್ವೀಪ್ ಸಮಿತಿಯ ಜಿಲ್ಲಾ ಅಧ್ಯಕ್ಷರೂ ಆದ ಡಾ. ಕೆ. ಹರೀಶ್ ಕುಮಾರ್ ಅವರು ಜಾಥಾಗೆ ಚಾಲನೆ ನೀಡಲಿದ್ದಾರೆ.
ತಾಲೂಕು ಪಂಚಾಯಿತಿ ವ್ಯಾಪ್ತಿಯ ಎಲ್ಲ ಇಲಾಖಾ ಅಧಿಕಾರಿಗಳು, ಸಿಬ್ಬಂದಿ ಸಹ ಹಾಜರಾಗುವಂತೆ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ

ಚಾಮರಾಜನಗರ, ಏ. 05 -  ತೋಟಗಾರಿಕೆ ಇಲಾಖೆಯು ತೋಟಗಾರಿಕೆ ತರಬೇತಿ ಕೇಂದ್ರ, ಸೋಮನಹಳ್ಳಿ ಕಾವಲ್, ಹಾಸನ ಜಿಲ್ಲೆ ಮತ್ತು ತೋಟಗಾರಿಕೆ ಕೇಂದ್ರ, ರಂಗಸಮುದ್ರ, ಟಿ, ನರಸೀಪುರ ತಾಲೂಕು, ಮೈಸೂರು ಜಿಲ್ಲೆ ಇಲ್ಲಿ ರೈತ ಮಕ್ಕಳಿಗೆ ಮೇ 5 ರಿಂದ 2019ರ ಫೆಬ್ರವರಿ 28ರವರೆಗೆ 10 ತಿಂಗಳ ಅವಧಿಯ ತೋಟಗಾರಿಕೆ ತರಬೇತಿಯನ್ನು ನೀಡಲಿದೆ.
ಇಚ್ಚೆಯುಳ್ಳ ಅಭ್ಯರ್ಥಿಗಳು ನಗರದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ (ರಾಜ್ಯ ವಲಯ) ಯಿಂದ ಅರ್ಜಿ ಪಡೆದು ಭರ್ತಿ ಮಾಡಿ ಏಪ್ರಿಲ್ 24ರ ಒಳಗೆ ಸಲ್ಲಿಸಬೇಕು.
ಹೆಚ್ಚಿನ ವಿವರಗಳಿಗೆ ನಗರದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾವ) ಅಥವಾ ತೋಟಗಾರಿಕೆ ಉಪನಿರ್ದೇಶಕರು (ಜಿಪಂ) ಇವರನ್ನು ಸಂಪರ್ಕಿಸುವಂತೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಏ. 11ರ ಸಾಹಸ ಚಾರಣ ಕ್ರೀಡೆ ಮುಂದೂಡಿಕೆ

ಚಾಮರಾಜನಗರ, ಏ. 05 - ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಏಪ್ರಿಲ್ 11 ರಿಂದ 13ರವರೆಗೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕುಂತಿಬೆಟ್ಟದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಸಾಹಸ ಚಾರಣ ಕ್ರೀಡೆಯನ್ನು ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ತಿಳಿಸಲಾಗುವುದು.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 08226-224932 ಹಾಗೂ ಮೊಬೈಲ್ 9482718278 ಅನ್ನು ಸಂಪರ್ಕಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಎಂ. ಚಲುವಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಏ. 9, 10ರಂದು ಸಮುದಾಯದತ್ತ ಶಾಲಾ ಕಾರ್ಯಕ್ರಮ

ಚಾಮರಾಜನಗರ, ಏ. 05 - ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಸಮುದಾಯದತ್ತ ಶಾಲಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಏಪ್ರಿಲ್ 9ರಂದು ಪ್ರಾಥಮಿಕ ಶಾಲೆಯಲ್ಲಿ ಹಾಗೂ ಏಪ್ರಿಲ್ 10ರಂದು ಪ್ರೌಢಶಾಲೆಗಳಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮ ನಡೆಯಲಿದೆ. ಅಂದು ಶಾಲೆ ಮುಖ್ಯ ಶಿಕ್ಷಕರು ಪೋಷಕರನ್ನು ಆಹ್ವಾನಿಸಿ ವಿದ್ಯಾರ್ಥಿಗಳ ಕಲಿಕೆಯ ಪ್ರಗತಿ ನೋಟ, ಕುಂದುಕೊರತೆ ಇನ್ನಿತರ ವಿಷಯಗಳನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕಿದೆ.
ಬ್ಲಾಕ್ ಹಾಗೂ ಜಿಲ್ಲಾ ಹಂತದಲ್ಲಿ ನೇಮಕಗೊಂಡಿರುವ ನೋಡಲ್ ಅಧಿಕಾರಿಗಳು, ಮಾರ್ಗದರ್ಶಕರು ಶಾಲಾ ಶೈಕ್ಷಣಿಕ ಅಭಿವೃದ್ಧಿಯ ಕುರಿತು ಎಸ್‍ಡಿಎಂಸಿ ಸದಸ್ಯರೊಂದಿಗೆ ನಡೆಸಬೇಕು. ಅಗತ್ಯ ನಿರ್ಣಯ ಕೈಗೊಂಡು ಅದರ ವರದಿಯನ್ನು ಕಳುಹಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಮಾರ್ಗಸೂಚಿ ಅಂಶಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು