Thursday, 19 April 2018

ವಿಧಾನಸಭಾ ಸಾರ್ವತ್ರಿಕ ಚುನಾವಣೆ-2018 ನಾಲ್ಕು ನಾಮಪತ್ರ ಸಲ್ಲಿಕೆ,ವಿಧಾನಸಭಾ ಸಾರ್ವತ್ರಿಕ ಚುನಾವಣೆ-2018 ಮತದಾನ ಅವಧಿ ವಿಸ್ತರಣೆ (19-04-2018)

ವಿಧಾನಸಭಾ ಸಾರ್ವತ್ರಿಕ ಚುನಾವಣೆ-2018 ನಾಲ್ಕು ನಾಮಪತ್ರ ಸಲ್ಲಿಕೆ 

ಚಾಮರಾಜನಗರ, ಏ. 19 - ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ನಾಮಪತ್ರ ಸಲ್ಲಿಸಲು ಎರಡನೇ ದಿನವಾದ ಇಂದು ಜಿಲ್ಲೆಯಲ್ಲಿ ನಾಲ್ಕು ನಾಮಪತ್ರ ಸಲ್ಲಿಕೆಯಾಗಿದೆ.  
ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ ಕನ್ನಡ ಚಳವಳಿ ವಾಟಾಳ್ ಪಕ್ಷದಿಂದ ವಾಟಾಳ್ ನಾಗರಾಜ್ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ರಂಗಸ್ವಾಮಿ ಎಂಬುವವರು ನಾಮಪತ್ರ ಸಲ್ಲಿಸಿದ್ದಾರೆ.
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಾರ್ಟಿಯಿಂದ ಜಿ.ಎನ್. ನಂಜುಂಡಸ್ವಾಮಿ ಅವರು ಎರಡು ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಹನೂರು ಮತ್ತು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಇಂದು ಯಾವುದೇ ನಾಮಪತ್ರ ಸಲ್ಲಿಕೆಯಾಗಿರುವುದಿಲ್ಲ. ಒಟ್ಟಾರೆ ನಾಲ್ಕು ನಾಮಪತ್ರ ಸಲ್ಲಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ. ಕಾವೇರಿ ಅವರು  ತಿಳಿಸಿದ್ದಾರೆ.

ವಿಧಾನಸಭಾ ಸಾರ್ವತ್ರಿಕ ಚುನಾವಣೆ-2018
ಮತದಾನ ಅವಧಿ ವಿಸ್ತರಣೆ

ಚಾಮರಾಜನಗರ, ಏ. 19 :- ಚುನಾವಣಾ ಆಯೋಗವು ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಮತದಾನ ಅವಧಿಯನ್ನು ಬೆಳಗ್ಗೆ 7ರಿಂದ ಸಂಜೆ 6ಗಂಟೆಯವರೆಗೆ ನಿಗದಿ ಮಾಡಿದೆ.
ಭಾರತೀಯ ಚುನಾವಣಾ ಆಯೋಗವು ಪ್ರಜಾಪ್ರತಿನಿಧಿ 1951ರ ಸೆಕ್ಷನ್ 56ರ ಅಡಿಯಲ್ಲಿ ವಿಧಾನಸಭಾ ಕ್ಷೇತ್ರ ಚುನಾವಣೆಗೆ ಮತದಾನ ಅವಧಿಯನ್ನು ಬೆಳಗ್ಗೆ 7ರಿಂದ ಸಂಜೆ 5ರವರೆಗೆ ನಿಗದಿ ಮಾಡಿತ್ತು.  ಆದರೆ ಕರ್ನಾಟಕ ರಾಜ್ಯದಲ್ಲಿ ಪ್ರಸ್ತುತ ಸಮಯದಲ್ಲಿ ತೀವ್ರವಾದ ಬಿಸಿಲಿನ ತಾಪಮಾನ ಇರುವುದರಿಂದ ಹಾಗೂ ವಿವಿ ಪ್ಯಾಟ್ ಬಳಕೆ ಮಾಡುತ್ತಿರುವುದನ್ನು ಗಮನಕ್ಕೆ ತೆಗೆದುಕೊಂಡು ಎಲ್ಲಾ ಮತದಾರರೂ ತಮ್ಮ ಮತವನ್ನು ಚಲಾಯಿಸಲು ಅನುವಾಗುವಂತೆ ಮತದಾನದ ಅವಧಿ ವಿಸ್ತರಿಸಲು ಪರಿಗಣಿಸಿದೆ.  ಹೀಗಾಗಿ ಚುನಾವಣಾ ಆಯೋಗವು ಅಧಿಸೂಚನೆಗೆ ತಿದ್ದುಪಡಿ ಮಾಡಿ ಮತದಾನದ ಅವಧಿಯನ್ನು ಬೆಳಗ್ಗೆ 7ರಿಂದ ಸಂಜೆ 6ಗಂಟೆಯವರೆಗೆ ನಿಗದಿ ಪಡಿಸಿದೆ. ಈ ಕುರಿತು ಅಧಿಸೂಚನೆ ಪ್ರಕಟಗೊಂಡಿದೆ.


.

ವಿಧಾನಸಭಾ ಸಾರ್ವತ್ರಿಕ ಚುನಾವಣೆ-2018
ಹೆಚ್ಚುವರಿ ಸ್ಟಾಟಿಕ್ ಸರ್ವೈಲೈನ್ಸ್ ತಂಡ ರಚನೆ

ಚಾಮರಾಜನಗರ, ಏ. 19 - ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಕಟ್ಟುನಿಟ್ಟಾಗಿ ಮಾದರಿ ನೀತಿ ಸಂಹಿತೆ ಅನುಷ್ಠಾನಗೊಳಿಸುವ ಉದ್ದೇಶದಿಂದ ಚಾಮರಾಜನಗರ ಮತ್ತು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳಿಗೆ ಹೆಚ್ಚುವರಿಯಾಗಿ ಸ್ಟಾಟಿಕ್ ಸರ್ವೈಲೈನ್ಸ್ ಅಧಿಕಾರಿಗಳ ತಂಡ ರಚಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ. ಕಾವೇರಿ ಅವರು ಆದೇಶ ಹೊರಡಿಸಿದ್ದಾರೆ.  

 ಚಾಮರಾಜನಗರ ವಿಧಾನಸಭಾ ಕ್ಷೇತ್ರ: ಮೊದಲನೇ ಪಾಳಿಯಲ್ಲಿ ರಾಚಯ್ಯ, ಉಪ ಪ್ರಾಂಶುಪಾಲರು ಸರ್ಕಾರಿ ಪದವಿ   ಪೂರ್ವ ಬಾಲಕರ ಕಾಲೇಜು (ಮೊ:9739645237) ಎರಡನೇ ಪಾಳಿಯಲ್ಲಿ ಶಿವಕುಮಾರಸ್ವಾಮಿ, ಮುಖ್ಯೋಪಾಧ್ಯಾಯರು, ಸರ್ಕಾರಿ ಪ್ರೌಢ ಶಾಲೆ, ಮಂಗಲ(ಮೊ:9480166536) ಮೂರನೇ ಪಾಳಿಯಲ್ಲಿ ಡಾ. ಬಸವರಾಜು, ಮುಖ್ಯೋಪಾಧ್ಯಾಯರು ಸರ್ಕಾರಿ ಪ್ರೌಢ ಶಾಲೆ, ಜ್ಯೋತಿಗೌಡನ ಪುರ (ಮೊ:9916858506) ಇವರು ತಂಡದ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದು,  ಇವರೊಂದಿಗೆ ಸಿ.ಆರ್.ಪಿ.ಎಫ್ ತಂಡ ಸಹ ಇರಲಿದೆ.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ: ಮೊದಲನೇ ಪಾಳಿಯಲ್ಲಿ ಮರಿಸ್ವಾಮಿ, ಸಹಾಯಕ ಪ್ರಾಧ್ಯಾಪಕರು, ಜೆ.ಎಸ್.ಎಸ್ ಕಲಾ ಮತ್ತು ವಾಣಿಜ್ಯ ಕಾಲೇಜು, ಗುಂಡ್ಲುಪೇಟೆ (ಮೊ:9448750567) ಎರಡನೇ ಪಾಳಿಯಲ್ಲಿ ಮರಿಸ್ವಾಮಪ್ಪ, ಸಹಾಯಕ ಪ್ರಾಧ್ಯಾಪಕರು, ಜೆ.ಎಸ್.ಎಸ್ ಕಲಾ ಮತ್ತು ವಾಣಿಜ್ಯ ಕಾಲೇಜು, ಗುಂಡ್ಲುಪೇಟೆ (ಮೊ:8632277129) ಮೂರನೇ ಪಾಳಿಯಲ್ಲಿ ಉಮೇಶ್, ಸಹಾಯಕ ಪ್ರಾಧ್ಯಾಪಕರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗುಂಡ್ಲುಪೇಟೆ (ಮೊ:9008804008) ಇವರು ತಂಡದ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದು, ಇವರೊಂದಿಗೆ ಎಸ್.ಎಸ್.ಬಿ ತಂಡ ಸಹ ಇರಲಿದೆ.
ಮೊದಲನೇ ಪಾಳಿಯ ಅವಧಿ ಬೆಳಗ್ಗೆ 6ರಿಂದ ಮಧ್ಯಾಹ್ನ 2, ಎರಡನೇ ಪಾಳಿಯ ಅವಧಿ ಮಧ್ಯಾಹ್ನ 2ರಿಂದ ರಾತ್ರಿ 10, ಹಾಗೂ ಮೂರನೇ ಪಾಳಿಯ ಅವಧಿ ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಇರುತ್ತದೆ. 


ಜಿಲ್ಲಾ ವೆಚ್ಚ ಮೇಲ್ವಿಚಾರಣಾ ಸಮಿತಿ ರಚನೆ 

ಚಾಮರಾಜನಗರ, ಏ. 19 :- ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿÀ ಜಿಲ್ಲಾ ವೆಚ್ಚ ಮೇಲ್ವಿಚಾರಣಾ ಸಮಿತಿಯನ್ನು ರಚಿಸಲಾಗಿದೆ.
ಹನೂರು ಹಾಗೂ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ವೆಚ್ಚ ವೀಕ್ಷಕರಾದ ಎಂ. ರಾಮಮೋಹನ್ ರಾವ್, ಚಾಮರಾಜನಗರ ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ವೆಚ್ಚ ವೀಕ್ಷಕರಾದ ಸುಧಾನ್ಶು ಶೇಖರ್, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಬಿ.ಬಿ. ಕಾವೇರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಹಾಗೂ ಚುನಾವಣಾ ವೆಚ್ಚ ಮೇಲ್ವಿಚಾರಣಾ ಜಿಲ್ಲಾ ನೋಡಲ್ ಅಧಿಕಾರಿ ಸಿ. ಬಸವರಾಜು ಸಮಿತಿಯಲ್ಲಿ ಇರುತ್ತಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ. ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರÉ.

ಪ್ರತಿಷ್ಠಿತ ಶಾಲೆಗಳ 6, 8ನೇ ತರಗತಿಗೆ ಪ.ವರ್ಗಗಳ ಪ್ರತಿಭಾವಂತ ವಿದ್ಯಾರ್ಥಿಗಳ ಸೇರ್ಪಡೆಗೆ ಅರ್ಜಿ ಆಹ್ವಾನ

ಚಾಮರಾಜನಗರ, ಏ. 19 :- 2018-19ನೇ ಸಾಲಿಗೆ ಪರಿಶಿಷ್ಟ ವರ್ಗಗಳ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಜಿಲ್ಲೆಯ ಪ್ರತಿಷ್ಠಿತ ಶಾಲೆಗಳ 6 ಮತ್ತು 8ನೇ ತರಗತಿಗೆ ಸೇರ್ಪಡೆ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಪ್ರವೇಶ ಪರೀಕ್ಷೆ ಮೂಲಕ ಆಯ್ಕೆ ಮಾಡಿ ದಾಖಲು ಮಾಡಲಾಗುತ್ತದೆ.
ವಿದ್ಯಾರ್ಥಿಯು ಪ್ರತಿಭಾವಂತನಾಗಿದ್ದು 5 ಮತ್ತು 7ನೇ ತರಗತಿಯಲ್ಲಿ ಶೇ.60ರಷ್ಟು ಅಂಕ ಪಡೆದಿರಬೇಕು. ಪೋಷಕರ ವಾರ್ಷಿಕ ವರಮಾನ 2 ಲಕ್ಷಗಳ ಮಿತಿಯೊಳಗಿರಬೇಕು.
ಆಸಕ್ತ ವಿದ್ಯಾರ್ಥಿಗಳು ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಚೇರಿ, ಕೊಠಡಿ ಸಂಖ್ಯೆ 214 ಇಲ್ಲಿಗೆ ಅಗತ್ಯ ದಾಖಲಾತಿಗಳೊಂದಿಗೆ ಮೇ 5ರೊಳಗೆ ಅರ್ಜಿ ಸಲ್ಲಿಸಬೇಕು. ತಡವಾಗಿ ಬಂದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಆಯ್ಕೆಗೆ ಪರಿಗಣಿಸುವುದಿಲ್ಲ.
ಹೆಚ್ಚಿನ ಮಾಹಿತಿಗೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಚೇರಿ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಜವಹರ್ ನವೋದಯ ವಿದ್ಯಾಲಯ : ಪ್ರವೇಶ ಪರೀಕ್ಷೆಗೆ ಪ್ರವೇಶ ಪತ್ರ ಪಡೆಯಲು ಸೂಚನೆ

ಚಾಮರಾಜನಗರ, ಏ. 19 :- ಜವಹರ್ ನವೋದಯ ವಿದ್ಯಾಲಯದ ಪ್ರಸಕ್ತ ಸಾಲಿನ 6ನೇ ತರಗತಿ ಪ್ರವೇಶಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ಸಾಮಾನ್ಯ ಸೇವಾ ಕೇಂದ್ರದಲ್ಲಿ ಮಾತ್ರ ಪ್ರವೇಶ ಪತ್ರಗಳನ್ನು ಡೌನ್‍ಲೋಡ್ ಮಾಡಿಕೊಳ್ಳಬಹುದು.
ನೋಂದಣಿ ಸಂಖ್ಯೆಯೊಂದಿಗೆ ಹತ್ತಿರದ ಸಾಮಾನ್ಯ ಸೇವಾ ಕೇಂದÀ್ರ ಸಂಪರ್ಕಿಸುವಂತೆ ಜವಹರ್ ನವೋದಯ ವಿದ್ಯಾಲಯದ ಪ್ರಾಚಾರ್ಯರಾದ ಆರ್.ಡಿ.ಆರ್. ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


.







No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು