ಬಸವಣ್ಣ ಅವರಿಂದ ಪರಿಪೂರ್ಣ ಸಮಾನತೆಯ ಸಮಾಜ ತತ್ವ ಪ್ರತಿಪಾದನೆ : ಜಿಲ್ಲಾಧಿಕಾರಿ ಕಾವೇರಿ
ಬಸವಣ್ಣ ಅವರಿಂದ ಪರಿಪೂರ್ಣ ಸಮಾನತೆಯ ಸಮಾಜ ತತ್ವ ಪ್ರತಿಪಾದನೆ : ಜಿಲ್ಲಾಧಿಕಾರಿ ಕಾವೇರಿ
ಚಾಮರಾಜನಗರ ಏ. 18 - ಭಾರತೀಯ ಇತಿಹಾಸದಲ್ಲಿ ಪರಿಪೂರ್ಣ ಸಮಾನತೆಯ ಸಮಾಜ ತತ್ವವನ್ನು ಪ್ರತಿಪಾದಿಸಿದ ಕೀರ್ತಿ ಬಸವಣ್ಣ ಅವರದ್ದು ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಅಭಿಪ್ರಾಯ ಪಟ್ಟರು.
ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಮಹಾನ್ ಮಾನವತಾವಾದಿ, ಜಗಜ್ಯೋತಿ ಬಸವೇಶ್ವರರ ಅವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
12ನೇ ಶತಮಾನದ ಅಂದಿನ ಸಮಾಜ ತಾರತಮ್ಯದಿಂದ ಕೂಡಿತ್ತು. ಶೋಷಿತರು, ದೀನದಲಿತರು ಹಾಗೂ ಮಹಿಳೆಯರು ಅಭಿವ್ಯಕ್ತಿ ಸ್ವಾತಂತ್ರ್ಯವಿಲ್ಲದೆ ತಮ್ಮ ದನಿಯನ್ನೆ ಕಳೆದುಕೊಂಡಿದ್ದರು. ಅಂತಹ ಸಂದರ್ಭದಲ್ಲಿ ಬಸವಣ್ಣನವರು ಅನುಭವ ಮಂಟಪದ ಮೂಲಕ ಸಮಾಜದ ಕಟ್ಟಕಡೆಯವರನ್ನು ಒಂದೆಡೆ ಕಲೆಹಾಕಿ ತಮ್ಮ ಸರಳ ವಚನ ಸಾಹಿತ್ಯದ ಮೂಲಕ ಎಲ್ಲರನ್ನು ಜಾಗೃತಗೊಳಿಸಿದರು. ಅ ಮೂಲಕ ಸಮಾನತೆಯ ತತ್ವ ವಿಚಾರಗಳಿಗೆ ಮುನ್ನುಡಿ ಬರೆದ ಬಸವಣ್ಣ ಅವರು ಶ್ರೇಷ್ಠ ಸಮಾಜ ಸುಧಾರಕರಾದರು ಎಂದರು.
ಕಾಯಕವೇ ಕೈಲಾಸ ತತ್ವದಡಿ ಎಲ್ಲರೂ ಸಮಾನರು. ಯಾವುದೇ ಕೆಲಸದಲ್ಲಿ ಮೇಲು-ಕೀಳಿಲ್ಲ ಎಂದು ಸಾರಿದ ಬಸವಣ್ಣ ಅವರು ಸಾಮಾಜಿಕ ಕ್ರಾಂತಿಯ ಹರಿಕಾರರು ಹೌದು. ದೇಶದಲ್ಲಿ ಅನುಭವ ಮಂಟಪದ ಮೂಲಕ ಸಾಮೂಹಿಕ ಶಿಕ್ಷಣಕ್ಕೆ ಚಾಲನೆ ನೀಡಿದವರಲ್ಲಿ ಬಸವಣ್ಣ ಮೊದಲಿಗರು. ವಿದ್ಯೆಯಿಂದ ವಂಚಿರಾದವರಿಗೆ, ಮಹಿಳೆಯರಿಗೆ ಅಲ್ಲಿ ಶಿಕ್ಷಣ ಹಾಗೂ ಅಭಿಪ್ರಾಯ ವ್ಯಕ್ತಪಡಿಸಲು ಮುಕ್ತ ಅವಕಾಶ ಮಾಡಿಕೊಟ್ಟು ಸಾಮಾಜಿಕ ಬದಲಾವಣೆಗೆ ಕಾರಣರಾದರು ಎಂದು ಜಿಲ್ಲಾಧಿಕಾರಿ ಕಾವೇರಿ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್‍ಕುಮಾರ್ ಅವರು ಮಾತನಾಡಿ ಬಸವಣ್ಣನವರು ತಮ್ಮ ಶ್ರೇಷ್ಠ ಚಿಂತನೆಗಳ ಮೂಲಕ ಶೋಷಿತರು, ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಲು ಕಾರಣರಾದರು. ಅವರು ಅಂದು ಸ್ಥಾಪಿಸಿದ ಅನುಭವ ಮಂಟಪದ ಮಾದರಿಯೇ ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆ. ಅವರ ತತ್ವ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು.
ಕೊಳ್ಳೇಗಾಲ ಎಂ.ಜಿ.ಎಸ್.ವಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಎಲ್.ದೊರೆಸ್ವಾಮಿ ಅವರು ಉಪನ್ಯಾಸ ನೀಡಿ ಬಸವಣ್ಣನವರ ಬಾಲ್ಯ ಜೀವನ ಹಾಗೂ ಸಮಾಜ ಸುಧಾರಣೆಯಲ್ಲಿ ಬಸವಣ್ಣನವರ ಪಾತ್ರ ಕುರಿತು ಸುದೀರ್ಘವಾಗಿ ವಿವರಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಮಹದೇವಯ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಗುಂಡ್ಲುಪೇಟೆಯ ಸಿದ್ದನಗೌಡ ಮತ್ತು ತಂಡದವರಿಂದ ವಚನಗಾಯನ ಏರ್ಪಡಿಸಲಾಗಿತ್ತು.
No comments:
Post a Comment