Wednesday, 31 January 2018

ಪತ್ನಿ ಕೊಲೆ : ಪತಿಗೆ ಜೀವಾವಧಿ ಶಿಕ್ಷೆ (31-01-2018)

   

  ಪತ್ನಿ ಕೊಲೆ : ಪತಿಗೆ ಜೀವಾವಧಿ ಶಿಕ್ಷೆ

ಚಾಮರಾಜನಗರ, ಜ. 31 - ಪತ್ನಿಗೆ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ಕೊಟ್ಟು ಆಕೆಯ ಸಾವಿಗೆ ಕಾರಣನಾದ ಪತಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದ ಲೇಟ್ ನಂಜಪ್ಪನಗರ ಮಗ ಮಲ್ಲಪ್ಪ ಎಂಬಾತನೇ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಮಲ್ಲಪ್ಪ 20 ವರ್ಷಗಳ ಹಿಂದೆ ಕೊತ್ತಲವಾಡಿ ಗ್ರಾಮದವರೇ ಆದ ರಾಜಮ್ಮ ಎಂಬಾಕೆಯನ್ನು ವಿವಾಹವಾಗಿ ಒಂದು ಗಂಡು ಹಾಗೂ ಒಂದು ಹೆಣ್ಣು ಮಗಳು ಹೊಂದಿದ್ದರು.
ಮಲ್ಲಪ್ಪನು ರಾಜಮ್ಮನಿಗೆ ಮದುವೆಯಾದ ಕಾಲದಿಂದಲೂ ಕುಡಿದುಕೊಂಡು ಬಂದು ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಿಂಸೆ ಕಿರುಕುಳ ನೀಡುತ್ತಿದ್ದನು. ಇವರ ಮಗಳಿಗೆ ಮದುವೆ ನಿಶ್ಚಯವಾಗಿ 2012ರ ನವೆಂಬರ್ ಮಾಹೆಯಲ್ಲಿ ಮದುವೆ ನಿಶ್ಚಯವಾಗಿತ್ತು. ಆರೋಪಿಯು ದಿನಾ ಕುಡಿದು ಬಂದು ಹಣ ನೀಡುವಂತೆ ಗಲಾಟೆ ಮಾಡುತ್ತಿದ್ದುದರಿಂದ ರಾಜಮ್ಮಳು ಮಗಳ ಮದುವೆ ಇದ್ದು ಅಕ್ಕಪಕ್ಕದ ಜನರು ನೋಡಿ ಆಡಿಕೊಳ್ಳುತ್ತಿದ್ದಾರೆ ಎಂದು ಕೇಳಿದ್ದು ಇದು ನನ್ನ ಇಷ್ಟ, ನೀನ್ಯಾರು ಕೇಳುವುದಕ್ಕೆ ಎಂದು ಉತ್ತರಿಸಿರುತ್ತಾನೆ. ರಾಜಮ್ಮ ಇದರಿಂದ ಮನನೊಂದು ಈ ರೀತಿ ಕುಡಿದುಬಂದರೆ ನಾನು ಸತ್ತೇ ಹೋಗುತ್ತೇನೆ ಎಂದಾಗ ನೀನು ಸತ್ತೇ ಹೋಗು ಎಂಬ ಉತ್ತರದಿಂದ ರಾಜಮ್ಮಳು ಸೀಮೆಎಣ್ಣೆ ಕ್ಯಾನನ್ನು ಎತ್ತಿಕೊಂಡಿದ್ದು, ಅವಳ ಕೈಯಿಂದ ಕ್ಯಾನನ್ನು ಮಲ್ಲಪ್ಪ ಕಿತ್ತುಕೊಂಡು ಕೊಲೆ ಮಾಡುವ ಉದ್ದೇಶದಿಂದ ರಾಜಮ್ಮಳ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿಹಡ್ಡಿ ಹೊತ್ತಿಸಿ ಮನೆಯಿಂದ ಓಡಿ ಹೋಗಿದ್ದನು.
ಮೈ ಕೈಗೆ ಸುಟ್ಟ ಗಾಯಗಳಾಗಿ ಒದ್ದಾಡುತ್ತಿದ್ದ ರಾಜಮ್ಮಳನ್ನು ಅಕ್ಕಪಕ್ಕದ ಜನರು ಆಂಬುಲೆನ್ಸ್‍ನಲ್ಲಿ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು ನಂತರ ಮೈಸೂರು ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡುತ್ತಿದ್ದಾಗ ಚಿಕಿತ್ಸೆ ಫಲಕಾರಿಯಾಗದೇ 2012ರ ಜುಲೈ 9ರಂದು ಮೃತಪಟ್ಟಿದ್ದಳು.
ಮಲ್ಲಪ್ಪನು ರಾಜಮ್ಮಳಿಗೆ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ಕಿರುಕುಳ ಕೊಟ್ಟು ಕೊಲೆ ಮಾಡುವ ಉದ್ದೇಶದಿಂದ ಆಕೆಯ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿಹಚ್ಚಿ ಕೊಲೆ ಮಾಡಿರುವುದು ರುಜುವಾತಾಗಿದೆ ಎಂದು ತೀರ್ಮಾನಿಸಿ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಡಿ. ವಿನಯ್ ಅವರು ಆರೋಪಿ ಮಲ್ಲಪ್ಪನಿಗೆ ಐಪಿಸಿ ಕಲಂ 302ರಡಿ ಜೀವಾವಧಿ ಶಿಕ್ಷೆ ವಿಧಿಸಿದ್ದು 3000 ರೂ. ದಂಡ ಹಾಗೂ ಐಪಿಸಿ ಕಲಂ 498(ಎ) ಅಡಿಯಲ್ಲಿನ ಅಪರಾಧಕ್ಕೆ ಒಂದು ವರ್ಷ ಸಾದಾ ಸಜೆ ಹಾಗೂ 1000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಎಂ.ಎಸ್. ಉಷಾ ಅವರು ವಾದ ಮಂಡಿಸಿದ್ದರು.

ಫೆ. 3ರಂದು ಸಂತೆಮರಹಳ್ಳಿಯಲ್ಲಿ ತಾಯಿ ಮಕ್ಕಳ ಆಸ್ಪತ್ರೆ ಉದ್ಘಾಟನೆ

ಚಾಮರಾಜನಗರ, ಜ. 31- ಜಿಲ್ಲಾಡಳಿತ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ತಾಲೂಕಿನ ಸಂತೆಮರಹಳ್ಳಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಫೆಬ್ರವರಿ 3ರಂದು ಬೆಳಿಗ್ಗೆ 11 ಗಂಟೆಗೆ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿ ನಿರ್ಮಾಣ ಮಾಡಲಾಗಿರುವ 60 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡದ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಕೆ.ಆರ್. ರಮೇಶ್ ಕುಮಾರ್ ಸಮಾರಂಭ ಉದ್ಘಾಟಿಸುವರು. ಸಣ್ಣ ಕೈಗಾರಿಕೆ ಮತ್ತು ಸಕ್ಕರೆ ಖಾತೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಸಿ. ಮೋಹನಕುಮಾರಿ ಉರುಫ್ ಗೀತಾ ಮಹದೇವಪ್ರಸಾದ್ ಅವರು ಕಟ್ಟಡದ ಉದ್ಘಾಟನೆ ನೆರವೇರಿಸುವರು. ಶಾಸಕರಾದ ಎಸ್. ಜಯಣ್ಣ ಅಧ್ಯಕ್ಷತೆ ವಹಿಸುವರು. ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಜ್ಯೋತಿ ಬೆಳಗಿಸುವರು.
ವಿಧಾನ ಪರಿಷತ್ ಉಪಸಭಾಪತಿಯವರಾದ ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಆರ್. ನರೇಂದ್ರ, ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ಕರ್ನಾಟಕ ರಾಜ್ಯ ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಆರ್. ಉಮೇಶ್, ಕಾಡಾ ಅಧ್ಯಕ್ಷರಾದ ಎಚ್.ಎಸ್. ನಂಜಪ್ಪ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಜೆ. ಯೋಗೇಶ್, ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ. ಸದಾಶಿವಮೂರ್ತಿ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ, ಸಂತೆಮರಹಳ್ಳಿ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯರಾದ ಶೀಲಾ ಮಲ್ಲೇಶ್, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಟಿ.ಎಸ್. ಕುಮಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.


ಕುಷ್ಠ ರೋಗದ ಬಗ್ಗೆ ಮುನ್ನೆಚ್ಚರಿಕೆ ಅಗತ್ಯ: ಡಾ.ಪ್ರಸಾದ್

        ಚಾಮರಾಜನಗರ, ಜ. 31 - ಕುಷ್ಠ ರೋಗ ಕಾಯಿಲೆ ಸೊಂಕಿನ ಆರಂಭದಲ್ಲೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಚ್ ಪ್ರಸಾದ್ ಸಲಹೆ ಮಾಡಿದರು.
       ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಭಾಂಗಣದಲ್ಲಿ ಇಂದು ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿ  ಜನವರಿ 31 ರಿಂದ  ಫೆಬ್ರವರಿ 13 ರವರೆಗೆ ಹಮ್ಮಿಕೊಂಡಿರುವ ಸ್ಪರ್ಶ ಕುಷ್ಠ ಅರಿವು ಅಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
      ರೋಗಿಯು ಕೆಮ್ಮಿದಾಗ ಹಾಗೂ ಸೀನಿದಾಗ ಗಾಳಿಯ ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದಲ್ಲದೆ ಈ ರೋಗದ ಲಕ್ಷಣಗಳು ಕಾಣಿಸಿಕೊಳ್ಳಲು ಸುಮಾರು 2ರಿಂದ 5ವರ್ಷಗಳು ಬೇಕಾಗಬಹದು. ವ್ಯಕಿಯ ದೇಹದ ಯಾವುದೇ ಭಾಗದಲ್ಲಾದರು ತಿಳಿಬಿಳಿ, ತಾಮ್ರ ಬಣ್ಣದ ಕೆಂಪು ಮಿಶ್ರಿತ ಮಚ್ಚೆಗಳು ಕಾಣಿಸಿಕೊಳ್ಳುತ್ತದೆ. ಈ ಮಚ್ಚೆ ಇದ್ದು ಯಾವುದೇ ರೀತಿಯ ಸ್ಪರ್ಶಜ್ಞಾನ, ನೋವು ನವೆ ಇಲ್ಲದಿರುವುದು ಅರಿವಿಗೆ ಬಂದರೆ ತಕ್ಷಣ ವೈದ್ಯರ ಸಲಹೆ ಪಡೆದು ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು.
       ವ್ಯಕ್ತಿಯ ದೇಹದಲ್ಲಿ 1 ರಿಂದ 5ಮಚ್ಚೆಗಳು ಇದ್ದರೆ 6ತಿಂಗಳ ಚಿಕಿತ್ಸೆ ಹಾಗೂ 5ಕ್ಕಿಂತ ಹೆಚ್ಚು ಮಚ್ಚೆ ಇದ್ದಲ್ಲಿ ಒಂದು ವರ್ಷದ ಅವಧಿಗೆ ಬಹು ಔಷಧ ಚಿಕಿತ್ಸೆ ಪಡೆದು (ಎಂಡಿಟಿ) ರೋಗವನ್ನು ಗುಣಪಡಿಸಿಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದರು.
        ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ರಾಜು ಅವರು ಮಾತನಾಡುತ್ತ  ವಿಶ್ವದಾದ್ಯಂತ ಪ್ರತಿವರ್ಷವು ಸುಮಾರು 2.60 ಲಕ್ಷ ಪ್ರಕರಣಗಳು ದಾಖಲಾಗುತ್ತಿದ್ದು,  1.20 ಲಕ್ಷ ಪ್ರಖರಣಗಳು ನಮ್ಮ ದೇಶದಲ್ಲೆ ಕಂಡು ಬರುತ್ತಿದೆ ಎಂದರು.
       ರಾಜ್ಯದಲ್ಲಿ ಬಳ್ಳಾರಿ, ರಾಯಚೂರು, ಧಾರವಾಡ, ಬೆಂಗಳೂರು ಜಿಲ್ಲೆಗಳು ಮೊದಲ ನಾಲ್ಕು ಸ್ಥಾನದಲ್ಲಿದ್ದು ಚಾಮರಾಜನಗರ ಜಿಲ್ಲೆಯು ಐದನೇ ಸ್ಥಾನದಲ್ಲಿದ್ದು ವರ್ಷಕ್ಕೆ 63 ಹೊಸ ಪ್ರಕರಣಗಳು ಕಂಡು ಬಂದಿವೆ. ವಿವಿಧ ಹಂತದಲ್ಲಿ ರೋಗಿಗಳು ಚಿಕಿತ್ಸೆ ಪಡೆಯುವ ಸಲುವಾಗಿ ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಉಪಕೇಂದ್ರ ಹಾಗೂ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸೂಕ್ತ ತಪಾಸಣೆ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಾ. ರಾಜು ತಿಳಿಸಿದರು.
       ಸ್ಪರ್ಶ ಕುಷ್ಠರೋಗ ಅರಿವು ಅಂದೋಲನ ಕಾರ್ಯಕ್ರಮಕ್ಕೆ ಜಿಲ್ಲೆಯ ವಿವಿದ ಶಾಲೆಯ ಪ್ರೌಢ ಶಾಲಾ ಶಿಕ್ಷಕರು ಹಾಗೂ ಆಶಾ ಕಾರ್ಯಕರ್ತೆಯರನ್ನು ಆಹ್ವಾನಿಸಿ ರೋಗದ ಬಗ್ಗೆ ಅರಿವು ಮೂಡಿಸಲಾಯಿತು. ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ವಿಶ್ವೇಶ್ವರಯ್ಯ, ಸರ್ವೆಲೆನ್ಸ ಅಧಿಕಾರಿ ಡಾ.ನಾಗರಾಜು, ಜಿಲ್ಲಾ ಮಲೇರಿಯಾ ನಿರ್ಮೂಲನಾಧಿಕಾರಿ ಡಾ.ಅನಿಲ್ ಕುಮಾರ್, ಚಾಮರಾಜನಗರ ತಾಲೂಕು ಆರೋಗ್ಯಾಧಿಕಾರಿ ಶ್ರೀನಿವಾಸ್, ಯಳಂದೂರ ತಾಲೂಕು ಆರೋಗ್ಯಾಧಿಕಾರಿ ಡಾ. ಮಂಜುನಾಥ್ ಹಾಗೂ ಪ್ರಭಾರ ಜಿಲ್ಲಾ ಆರೋಗ್ಯ ಶಿಕ್ಷಕರಾದ ನಾರಾಯಣಸ್ವಾಮಿ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಹಿದ್ದರು.



ಫೆ. 2ರಂದು ನಗರದಲ್ಲಿ ಜಿಲ್ಲಾಮಟ್ಟದ ರಾಜ್ಯ ಸರ್ಕಾರಿ ನೌಕರರ ಸಾಂಸ್ಕøತಿಕ ಸ್ಪರ್ಧೆ, ಕ್ರೀಡಾಕೂಟ ಉದ್ಘಾಟನೆ

ಚಾಮರಾಜನಗರ, ಜ. 31  - ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಚಾಮರಾಜನಗರ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಸಾಂಸ್ಕøತಿಕ ಸ್ಪರ್ಧೆ ಮತ್ತು ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮವನ್ನು ಫೆಬ್ರವರಿ 2ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಣ್ಣ ಕೈಗಾರಿಕೆ ಮತ್ತು ಸಕ್ಕರೆ ಖಾತೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಸಿ. ಮೋಹನಕುಮಾರಿ ಉರುಫ್ ಗೀತಾ ಮಹದೇವಪ್ರಸಾದ್ ಅವರು ಕ್ರೀಡಾಕೂಟ ಉದ್ಘಾಟಿಸುವರು. ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು. ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಕ್ರೀಡಾಜ್ಯೋತಿ ಬೆಳಗಿಸುವರು.
ವಿಧಾನ ಪರಿಷತ್ ಉಪಸಭಾಪತಿಯವರಾದ ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಶಾಸಕರಾದ ಎಸ್. ಜಯಣ್ಣ, ಆರ್. ನರೇಂದ್ರ, ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ಕರ್ನಾಟಕ ರಾಜ್ಯ ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಆರ್. ಉಮೇಶ್, ಕಾಡಾ ಅಧ್ಯಕ್ಷರಾದ ಎಚ್.ಎಸ್. ನಂಜಪ್ಪ, ನಗರಸಭೆ ಅಧÀ್ಯಕ್ಷರಾದ ಶೋಭ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಜೆ. ಯೋಗೇಶ್, ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ. ಸದಾಶಿವಮೂರ್ತಿ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ನಗರಸಭೆ ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪ, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ, ನಗರಸಭೆ ಸದಸ್ಯರಾದ ಎಂ. ರಾಜಶೇಖರಮೂರ್ತಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ವಿಶೇಷ ಆಹ್ವಾನಿತರಾಗಿ ಜಿಲ್ಲಾಧಿಕಾರಿ ಬಿ. ರಾಮು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಹರೀಶ್ ಕುಮಾರ್ ಹಾಗೂ ಜಿಲ್ಲೆಯ ಎಲ್ಲ ಚುನಾಯಿತ ಪ್ರತಿನಿಧಿಗಳು ಭಾಗವಹಿಸುವರು.
ಫೆಬ್ರವರಿ 3ರಂದು ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಎನ್. ಮುನಿರಾಜಪ್ಪ ಬಹುಮಾನ ವಿತರಿಸುವರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಆರ್. ರಾಚಪ್ಪ ಹಾಗೂ ಕೃಷಿ ಇಲಾಖೆ ಜಂಟಿನಿರ್ದೇಶಕರಾದ ಎಂ. ತಿರುಮಲ್ಲೇಶ್ ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.

ಕಾಣೆಯಾದವರ ಪತ್ತೆಗೆ ಮನವಿ

ಚಾಮರಾಜನಗರ, ಜ. 31- ತಾಲೂಕಿನ ಹೆಬ್ಬಸೂರು ಗ್ರಾಮದ ಆರ್. ಉಮೇಶ್ ಎಂಬುವವರು ಜನವರಿ 22ರಿಂದ ಅವರ ಪತ್ನಿ ಶೃತಿ ಹಾಗೂ ಮಗಳು ಕೀರ್ತನ ಕಾಣೆಯಾಗಿದ್ದಾರೆಂದು ನಗರದ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಶೃತಿ 28 ವರ್ಷ ವಯಸ್ಸಿನವರಾಗಿದ್ದು ಸಾದಾರಣ ಮೈಕಟ್ಟು, ಕೋಲು ಮುಖ, ಕೆಂಪು ಬಣ್ಣ ಹೊಂದಿದ್ದು ಕ್ರೀಂ ವಿತ್ ಬ್ಲಾಕ್ ಚೂಡಿದಾರ್, ಪಿಂಕ್ ಕಲರ್ ಪ್ಯಾಂಟ್ ಧರಿಸಿದ್ದಾರೆ. ಕನ್ನಡ ಮಾತನಾಡುತ್ತಾರೆ.
ಕೀರ್ತನ 8 ವರ್ಷದವಳಾಗಿದ್ದು ತೆಳ್ಳನೆಯ ಶರೀರ, ಕೋಲು ಮುಖ, ಕೆಂಪು ಬಣ್ಣ ಹೊಂದಿದ್ದು ಹಳದಿ ಟಾಪ್, ಬಿಳಿ ಪ್ಯಾಂಟ್ ಧರಿಸಿದ್ದಾಳೆ. ಕನ್ನಡ ಮಾತನಾಡುತ್ತಾಳೆ.
ಇವರಿಬ್ಬರ ಸುಳಿವು ಸಿಕ್ಕಿದಲ್ಲಿ ಚಾಮರಾಜನಗರದ ಪೂರ್ವ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಆರಕ್ಷಕ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರÉ.

ಫೆ. 4ರಂದು ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳÀ ಸುತ್ತ ನಿಷೇದಾಜ್ಞೆ

ಚಾಮರಾಜನಗರ, ಜ. 31- ಚಾಮರಾಜನಗರದ 17 ಕೇಂದ್ರಗಳಲ್ಲಿ ಲೋಕಸೇವಾ ಆಯೋಗದಿಂದ ಪ್ರಥಮದರ್ಜೆ ಸಹಾಯಕರ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯು ಫೆಬ್ರವರಿ 4ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತಲೂ ನಿಷೇದಾಜ್ಞೆ ವಿಧಿಸಿ ಸಾರ್ವಜನಿಕ ನಿಷೇಧಿತ ಸ್ಥಳ ಎಂದು ಜಿಲ್ಲಾಧಿಕಾರಿ ಬಿ. ರಾಮು ಅವರು ಆದೇಶ ಹೊರಡಿಸಿದ್ದಾರೆ.
ನಗರದ ಕೇಂದ್ರಗಳಲ್ಲಿ ಪರೀಕ್ಷಾ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಹಾಗೂ ಶಾಂತಿ ಸುವ್ಯವಸ್ಥೆಯಿಂದ ಪರೀಕ್ಷೆ ನಡೆಯಲು ಅನುವಾಗುವಂತೆ ಪರೀಕ್ಷಾ ದಿನದಂದು ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ವಿಧಿಸಲಾಗಿದೆ. ಅಲ್ಲದೆ 200 ಮೀ. ವ್ಯಾಪ್ತಿಯಲ್ಲಿ ಬರುವ ಜೆರಾಕ್ಸ್ ಅಂಗಡಿಗಳನ್ನು ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಮುಚ್ಚಲು ಆದೇಶಿಸಿದ್ದಾರೆ.
ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಹಾಗೂ ಪರೀಕ್ಷಾ ಕೆಲಸಕ್ಕೆ ನಿಯೋಜಿತರಾದ ಸಿಬ್ಬಂದಿ ವರ್ಗದವರಿಗೆ ನಿಷೇಧ ಆದೇಶ ಅನ್ವಯವಾಗುವುದಿಲ್ಲವೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು