Saturday, 20 January 2018

ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯ ಹೊಣೆಗಾರಿಕೆಯಿಂದ ನಿರ್ವಹಿಸಿ : ಡಾ. ಪಿ.ಸಿ. ಜಾಫರ್ (20-01-2018)

   

ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯ ಹೊಣೆಗಾರಿಕೆಯಿಂದ ನಿರ್ವಹಿಸಿ : ಡಾ. ಪಿ.ಸಿ. ಜಾಫರ್  

ಚಾಮರಾಜನಗರ, ಜ. 20- ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಅತ್ಯಂತ ಹೊಣೆಗಾರಿಕೆಯಿಂದ ಯಾವುದೇ ಲೋಪವಿಲ್ಲದೆ ನಿರ್ವಹಿಸುವಂತೆ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ವೀಕ್ಷಕರಾಗಿ ನೇಮಕಗೊಂಡಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಾದ ಡಾ. ಪಿ.ಸಿ. ಜಾಫರ್ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೆಡಿಪಿ ಸಭಾಂಗಣದಲ್ಲಿ ಇಂದು ಜಿಲ್ಲೆಯ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಕುರಿತ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿದ್ದು ಪಟ್ಟಿಗೆ ಹೆಸರು ಸೇರ್ಪಡೆ, ಕೈಬಿಡುವುದು, ನೋಂದಣಿ, ಹೊಸ ಮತದಾರರ ಸೇರ್ಪಡೆ, ಇತರೆ ಕೆಲಸಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಯಾವುದೇ ಭಾಗದಲ್ಲಿ ಗೊಂದಲಕ್ಕೆ ಅವಕಾಶವಾಗದಂತೆ ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು ಎಂದರು.
ಮತದಾರರ ಪಟ್ಟಿ ಹೆಸರು ಸೇರ್ಪಡೆ, ಕೈಬಿಡುವುದು, ನೋಂದಣಿ ಸಂಬಂಧ ಅರ್ಜಿ ನಮೂನೆಗಳನ್ನು ಸರಿಯಾಗಿ ಸ್ವೀಕರಿಸಬೇಕು. ಅರ್ಜಿಯಲ್ಲಿನ ಮಾಹಿತಿಗಳನ್ನು ಕೂಲಂಕಶವಾಗಿ ಪರಿಶೀಲಿಸಬೇಕು. ಮಾಹಿತಿಯನ್ನು ಖಾತರಿಪಡಿಸಿಕೊಂಡ ಬಳಿಕ ಅದನ್ನು ನಮೂದು ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಜಾಫರ್ ಅವರು ತಿಳಿಸಿದರು.
ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ನಿಗದಿತ ಅವಧಿಯೊಳಗೆ ಮುಗಿಯಬೇಕಿದೆ. ಹೀಗಾಗಿ ಹೆಚ್ಚುವರಿ ಸಿಬ್ಬಂದಿ ಅಗತ್ಯವಿದ್ದಲ್ಲಿ ಇತರ ಇಲಾಖೆಗಳಿಂದಲೂ ನಿಯೋಜಿಸಿಕೊಳ್ಳಬೇಕು. ಚುನಾವಣಾ ಸಂಬಂಧಿ ಕೆಲಸವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಹೆಚ್ಚುವರಿ ಸಮಯದಲ್ಲೂ ಕರ್ತವ್ಯ ನಿರ್ವಹಿಸಿ ಕೆಲಸವನ್ನು ಪೂರ್ಣಗೊಳಿಸಲೇಬೇಕು ಎಂದು ಜಾಫರ್ ಅವರು ನಿರ್ದೇಶನ ನೀಡಿದರು.
ಜಿಲ್ಲೆಯ ಹಾಡಿ, ಅರಣ್ಯ ಅಂಚಿನ ಪ್ರದೇಶಗಳೂ ಸೇರಿದಂತೆ ಎಲ್ಲೆಡೆ ವ್ಯಾಪಕ ಭೇಟಿ ನೀಡಿ ಮತದಾರರ ನೋಂದಣಿ, ಇನ್ನಿತರ ಪ್ರಕ್ರಿಯೆ ಸರಿಯಾಗಿ ನಡೆದಿದೆಯೇ ಎಂದು ಪರಿಶೀಲಿಸಬೇಕು. ಎಲ್ಲಿಯೂ ಸಹ ಮತದಾರರ ಪಟ್ಟಿಯಲ್ಲಿ ಹೆಸರು ಕೈಬಿಟ್ಟುಹೋಗದಂತೆ ನಿಗಾ ವಹಿಸಬೇಕು ಎಂದು ವೀಕ್ಷಕರಾದ ಡಾ. ಪಿ.ಸಿ. ಜಾಫರ್ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಬಿ. ರಾಮು ಅವರು ಮಾತನಾಡಿ ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆಮನೆಗೆ ತೆರಳಿ ಮತದಾರರ ಹೆಸರು, ಸೇರ್ಪಡೆ, ನೋಂದಣಿ, ಕೈಬಿಡುವ ಅಂಶಗಳ ಬಗ್ಗೆ ಮನವರಿಕೆ ಮಾಡಿಕೊಳ್ಳಬೇಕು. ಜನರಿಗೆ ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ತಿಳಿವಳಿಕೆ ನೀಡಿ ನಮೂನೆಗಳ ವಿತರಣೆ, ಸ್ವೀಕೃತಿ ಬಗ್ಗೆ ಖಾತರಿಪಡಿಸಿಕೊಳ್ಳಬೇಕು. ಗ್ರಾಮಲೆಕ್ಕಿಗರು ಸಹ ಜತೆಗೂಡಿ ಜನಗಣತಿ ಮಾದರಿಯಲ್ಲಿ ಪ್ರತೀ ಮನೆಗೂ ಭೇಟಿ ನೀಡಿ ಪರಿಶೀಲಿಸಬೇಕು ಎಂದರು.
ಜಿಲ್ಲೆಯಲ್ಲಿ ಶೇ. 100ರಷ್ಟು ದೋಷರಹಿತ ಮತದಾರರ ಪಟ್ಟಿ ಸಿದ್ಧಪಡಿಸಲು ಉಳಿದಿರುವ ಕೆಲವೇ ದಿನಗಳಲ್ಲಿ ಅಧಿಕಾರಿ, ಸಿಬ್ಬಂದಿ ಹಗಲಿರುಳೂ ಶ್ರಮಿಸಬೇಕು. ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಆದ್ಯತೆ ಮೇರೆಗೆ ನಿರ್ವಹಿಸಬೇಕು. ನಿರ್ಲಕ್ಷ್ಯ ವಹಿಸಿದಲ್ಲಿ ಶಿಸ್ತು ಕ್ರಮಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಬಿ. ರಾಮು ಅವರು ಎಚ್ಚರಿಕೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಹರೀಶ್ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಉಪವಿಭಾಗಾಧಿಕಾರಿ ಫೌಜಿಯಾ ತರನ್ನುಂ, ಇನ್ನಿತರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಬಳಿಕ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಜಕೀಯ ಪಕ್ಷಗಳ ಮುಖಂಡರ ಸಭೆ ನಡೆಸಿದ ಪಿ.ಸಿ. ಜಾಫರ್ ಅವರು ಜಿಲ್ಲೆಯಲ್ಲಿ ಕೈಗೊಂಡಿರುವ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಗೆ ಸಹಕಾರ ನೀಡಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. ತದನಂತರ ನಗರದ ತಾಲೂಕು ಕಚೇರಿಯ ಚುನಾವಣಾ ಶಾಖೆಗೆ ತೆರಳಿ ಅಲ್ಲಿ ಮತದಾರರ ಪರಿಷ್ಕರಣೆ ಕೆಲಸಗಳನ್ನು ಪರಿಶೀಲಿಸಿದರು. ನಗರದ ಬಡಾವಣೆಯ ಕೆಲ ಮನೆಗಳಿಗೆ ಭೇಟಿ ಕೊಟ್ಟು ಮತದಾರರ ಪಟ್ಟಿ ಸಂಬಂಧ ನಡೆದಿರುವ ಕಾರ್ಯಗಳನ್ನು ಪರಿಶೀಲಿಸಿದರು.

ಜ. 24ರಂದು ಗುಂಡ್ಲುಪೇಟೆ ತಾಲೂಕು ಮಟ್ಟದ ಯುವಜನ ಮೇಳ

ಚಾಮರಾಜನಗರ, ಜ. 20- ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಜಿಲ್ಲೆಯ ಗುಂಡ್ಲುಪೇಟೆ ತಾಲೂಕು ಕೇಂದ್ರದಲ್ಲಿ ತಾಲೂಕುಮಟ್ಟದ ಯುವಜನ ಮೇಳವನ್ನು ಆಯೋಜಿಸಿದೆ.
ಜನವರಿ 24ರಂದು ಗುಂಡ್ಲುಪೇಟೆ ಪಟ್ಟಣದ ಸುಲ್ತಾನ್ ಬತ್ತೇರಿ ರಸ್ತೆಯಲ್ಲಿರುವ ನಿರ್ಮಲ ಸೇವಾ ಕೇಂದ್ರದಲ್ಲಿ ಯುವಜನ ಮೇಳವು ಬೆಳಿಗ್ಗೆ 9.30 ಗಂಟೆಗೆ ಆರಂಭವಾಗಲಿದೆ.
ವೈಯಕ್ತಿಕ ವಿಭಾಗದಲ್ಲಿ ಭಾವಗೀತೆ, ಲಾವಣಿ, ಏಕ ಪಾತ್ರಾಭಿನಯ, ರಂಗಗೀತೆ ಮತ್ತು ಗುಂಪು ವಿಭಾಗದಲ್ಲಿ ಗೀಗೀ ಪದ, ಕೋಲಾಟ, ಜಾನಪದ ನೃತ್ಯ, ಸೋಬಾನೆ ಪದ, ಭಜನೆ, ಜಾನಪದ ಗೀತೆ, ಚರ್ಮವಾದ್ಯ ಮೇಳ ಸ್ಪರ್ಧೆಗಳಿವೆ.
ಆಸಕ್ತರು ಕಾರ್ಯಕ್ರಮ ನಡೆಯುವ ದಿನದಂದು ಬೆಳಿಗ್ಗೆ 9 ಗಂಟೆಗೆ ವ್ಯವಸ್ಥಾಪಕರಲ್ಲಿ ಹೆಸರು ನೊಂದಾಯಿಸಿ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ವಿವರಗಳಿಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಅಥವಾ ದೂ.ಸಂಖ್ಯೆ 08226-224932, ಮೊಬೈಲ್ 9482718278 ಅಥವಾ 9880211027 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಫೆ. 2, 3ರಂದು ಜಿಲ್ಲಾಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ, ಸಾಂಸ್ಕøತಿಕ ಸ್ಪರ್ಧೆ

ಚಾಮರಾಜನಗರ, ಜ. 20 - ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಚಾಮರಾಜನಗರ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಸ್ಪರ್ಧೆಯನ್ನು ಫೆಬ್ರವರಿ 2 ಹಾಗೂ 3ರಂದು ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಸಲಿದೆ.
ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್, ವಾಲಿಬಾಲ್, ಕಬಡ್ಡಿ, ಫುಟ್ ಬಾಲ್, ಕ್ರಿಕೆಟ್, ಕೇರಂ, ಚೆಸ್, ಬ್ಯಾಡ್ಮಿಂಟನ್, ಟೆನಿಕಾಯಿಟ್ ರಿಂಗ್, ಟೆನ್ನಿಸ್, ಟೇಬಲ್ ಟೆನ್ನಿಸ್ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳಾದ ಹಿಂದೂಸ್ಥಾನಿ ಸಂಗೀತ ಶಾಸ್ತ್ರೀಯ ಹಾಗೂ ಲಘು ಶಾಸ್ತ್ರೀಯ ಸಂಗೀತ, ಕರ್ನಾಟಕ ಲಘು ಶಾಸ್ತ್ರೀಯ ಸಂಗೀತ, ಜಾನಪದ ತಂಡನೃತ್ಯ (ಕಥಕ್, ಮಣಿಪುರಿ, ಕೂಚುಪುಡಿ, ಒಡಿಸ್ಸಿ, ಕಥಕಳಿ, ಭರತನಾಟ್ಯ) ಜಾನಪದ ನೃತ್ಯ, ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಹಾಗೂ ಲಘು ಶಾಸ್ತ್ರೀಯ ಸಂಗೀತ, ಕರಕುಶಲ ವಸ್ತುಗಳ ಪ್ರದರ್ಶನ, ಕಿರುನಾಟಕ ಸ್ಪರ್ಧೆಗಳನ್ನು ನಡೆಸಲಾಗುವುದು.
ದೈಹಿಕ ಶಿಕ್ಷಣ ಶಿಕ್ಷಕ ಅಧ್ಯಾಪಕರು, ತರಬೇತುದಾರರು, ಪೊಲೀಸ್, ವೃತ್ತಿಪರ ಸಂಗೀತಗಾರರು, ದಿನಗೂಲಿ ನೌಕರರು, ಅರೆಕಾಲಿಕ ನೌಕರರು ಹಾಗೂ ಸಂಚಿತ ವೇತನ ನೌಕರರು ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ.
ಭಾಗವಹಿಸುವ ಸರ್ಕಾರಿ ನೌಕರರು ತಮ್ಮ ಇಲಾಖೆಯ ಮುಖ್ಯಸ್ಥರಿಂದ ಅನುಮತಿ ಪತ್ರ ಪಡೆದು ಫೆಬ್ರವರಿ 2ರಂದು ಬೆಳಿಗ್ಗೆ 9.30 ಗಂಟೆ ಒಳಗಾಗಿ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ವರದಿ ಮಾಡಿಕೊಳ್ಳಬೇಕು. ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲ ಸರ್ಕಾರಿ ನೌಕರರಿಗೆ ಓಓಡಿ ಸೌಲಭ್ಯ ನೀಡಲಾಗುತ್ತದೆ ಎಂದು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಎಂ. ಚಲುವಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರÉ.

ಜನವರಿ 22 ಮತ್ತು 23ರಂದು ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ

ಚಾಮರಾಜನಗರ, ಜ. 21:- ಸಕ್ಕರೆ ಮತ್ತು ಸಣ್ಣ ಕೈಗಾರಿಕೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಸಿ. ಮೋಹನಕುಮಾರಿ (ಗೀತಾ ಮಹದೇವಪ್ರಸಾದ್) ಅವರು ಜನವರಿ 22 ಮತ್ತು 23ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಜ. 22ರಂದು ಬೆಳಿಗ್ಗೆ 11 ಗಂಟೆಗೆ ಗುಂಡ್ಲುಪೇಟೆ ತಾಲೂಕಿನ ಮದ್ದೂರು ಕಾಲೋನಿಯ ಆಶ್ರಮ ಶಾಲೆಯಲ್ಲಿ ಡಾರ್ಮೆಂಟರಿ, ಗ್ರಂಥಾಲಯ ಕಟ್ಟ್ಟಡ ಮತ್ತು ಕಂಪ್ಯೂಟರ್ ಕಟ್ಟಡ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸುವರು. ಸಂಜೆ 4.30 ಗಂಟೆಗೆ ಗುಂಡ್ಲುಪೇಟೆ ಪುರಸಭೆ ವತಿಯಿಂದ ಆಯೋಜಿಸಲಾಗಿರುವ ಸವಲತ್ತು ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. 5.30 ಗಂಟೆಗೆ ಹೈಮಾಸ್ಟ್ ದೀಪಗಳ ಉದ್ಘಾಟನೆ ಮಾಡುವರು.
ಜ. 23ರಂದು ಬೆಳಿಗ್ಗೆ 10 ಗಂಟೆಗೆ ಗುಂಡ್ಲುಪೇಟೆಯಲ್ಲಿ ಏರ್ಪಡಿಸಿರುವ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 2 ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವರು. ಸಂಜೆ 4 ಗಂಟೆಗೆ ಮೈಸೂರಿಗೆ ತೆರಳುವರೆಂದು ಸಚಿವರ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.


ಪರಿಶಿಷ್ಟ ವರ್ಗ, ಪಂಗಡದ ರೈತರಿಗೆ ಹನಿ ನೀರಾವರಿಗೆ ಸಹಾಯಧನ

ಚಾಮರಾಜನಗರ, ಜ. 20:- ತೋಟಗಾರಿಕೆ ಇಲಾಖೆಯು 2017-18ನೇ ಸಾಲಿನ ಹನಿ ನೀರಾವರಿ, ಡ್ರಿಪ್ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದು ಯೋಜನೆಯಡಿ ಪರಿಶಿಷ್ಟ ವರ್ಗ, ಪಂಗಡದ ರೈತಬಾಂಧವರಿಗೆ ಸಹಾಯಧನ ಮೊತ್ತವನ್ನು ಜನವರಿ 17ರಿಂದ ಪರಿಷ್ಕರಿಸಿದೆ.
ತೋಟಗಾರಿಕೆ ಬೆಳೆಯನ್ನು ಮುಖ್ಯವಾಗಿ ಕಡಿಮೆ ಅಂತರದಲ್ಲಿ (1-0.60ಮೀ) ನಾಟಿ ಮಾಡುವ ತರಕಾರಿ ಬೆಳೆಗೆ (ಟೊಮೆಟೋ, ಆಲೂಗಡ್ಡೆ, ಮೆಣಸಿನಕಾಯಿ, ಮೂಲಂಗಿ, ಕ್ಯಾರೇಟ್, ಸೊಪ್ಪು ತರಕಾರಿಗಳು, ಹೂಕೋಸು, ಬೀಟ್ ರೂಟ್, ಬೆಂಡೇಕಾಯಿ, ಬೀನ್ಸ್ ಇತ್ಯಾದಿ) ಸರ್ಕಾರದ ವತಿಯಿಂದ ನೀಡುವ ಶೇ.90ರ ಸಹಾಯಧನದ ಮೊತ್ತವನ್ನು ಪರಿಷ್ಕರಿಸಿದ್ದು ಹೆಚ್ಚಿನ ಸಹಾಯಧನ ಪಡೆಯಲು ಅವಕಾಶ ಕಲ್ಪಿಸಿದೆ.
ಈ ಅವಕಾಶವನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕು. ಪ್ರಸಕ್ತ ಆರ್ಥಿಕ ವರ್ಷ ಅಂತ್ಯಕ್ಕೆ ಬಂದಿರುವುದರಿಂದ ಕೂಡಲೇ ಅವಶ್ಯಕ ದಾಖಲಾತಿಗಳನ್ನು ಕಚೇರಿಗೆ ಸಲ್ಲಿಸಿ ಹೆಸರು ನೊಂದಾಯಿಸಿ ಕಾರ್ಯಾದೇಶ ಪಡೆದುಕೊಳ್ಳಬೇಕು.
ಹೆಚ್ಚಿನ ಮಾಹಿತಿಗೆ ಆಯಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಸಂಪರ್ಕಿಸುವಂತೆ ಜಿಲ್ಲಾ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ವಾಣಿಜ್ಯ ಪರೀಕ್ಷೆ ಕೇಂದ್ರದ ಸುತ್ತ ನಿಷೇದಾಜ್ಞೆ  

ಚಾಮರಾಜನಗರ, ಜ. 20:- ಚಾಮರಾಜನಗರದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್)ಯಲ್ಲಿ ಜನವರಿ 22 ರಿಂದ 30ರವರೆಗೆ ನಡೆಯಲಿರುವ ದ್ವಿತೀಯ ವಾಣಿಜ್ಯ ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರಗಳ ಸುತ್ತಲೂ ನಿಷೇದಾಜ್ಞೆ ವಿಧಿಸಿ ಜಿಲ್ಲಾಧಿಕಾರಿ ಬಿ. ರಾಮು ಆದೇಶ ಹೊರಡಿಸಿದ್ದಾರೆ.
ಪರೀಕ್ಷಾ ಸಂದರ್ಭದಲ್ಲಿ ಯಾವುದೇ ಅಕ್ರಮಗಳಿಗೆ ಅವಕಾಶವಾಗದಂತೆ ಹಾಗೂ ಶಾಂತಿ ಸುವ್ಯವಸ್ಥೆಯಿಂದ ಪರೀಕ್ಷೆ ನಡೆಯಲು ಅನುವಾಗುವಂತೆ ಪರೀಕ್ಷಾ ದಿನಗಳಂದು ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ವಿಧಿಸಲಾಗಿದೆ. ಅಲ್ಲದೆ ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ಬರುವ ಜೆರಾಕ್ಸ್ ಅಂಗಡಿಗಳನ್ನು ಬೆಳಿಗ್ಗೆ 9 ರಿಂದ ಸಂಜೆ 5.30ರವರೆಗೆ ಮುಚ್ಚಲೂ ಸಹ ಆದೇಶಿಸಿದ್ದಾರೆ.
ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಹಾಗೂ ಪರೀಕ್ಷಾ ಕೆಲಸಕ್ಕೆ ನಿಯೋಜಿತರಾದ ಸಿಬ್ಬಂದಿ ವರ್ಗದವರಿಗೆ ನಿಷೇಧ ಆದೇಶ ಅನ್ವಯವಾಗುವುದಿಲ್ಲವೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಜ. 27ರಂದು ನೇರ ಫೋನ್ ಇನ್ ಕಾರ್ಯಕ್ರಮ
ಚಾಮರಾಜನಗರ, ಜ. 20 :- ಜಿಲ್ಲೆಯ ನಾಗರಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ಜಿಲ್ಲಾಡಳಿತದ ವತಿಯಿಂದ ಜನವರಿ 27ರಂದು ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನೇರ ಫೋನ್ ಇನ್ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ. ನಾಗರಿಕರು ಕುಂದುಕೊರತೆಗಳಿದ್ದಲ್ಲಿ ದೂರವಾಣಿ ಸಂಖ್ಯೆ 08226-224888ಗೆ ಕರೆ ಮಾಡಿ ಪರಿಹರಿಸಿಕೊಳ್ಳುವಂತೆ ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ


ಕೆ ಎಸ್ ಆರ್ ಟಿ ಸಿ: ಪ್ರಯಾಣಿಕರಿಂದ 38647 ರೂ. ದಂಡ ವಸೂಲಿ

ಚಾಮರಾಜನಗರ, ಜ. 20 - ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಾಮರಾಜನಗರ ವಿಭಾಗವು ಕಳೆದ ಡಿಸೆಂಬರ್‍ನಲ್ಲಿ ಟಿಕೇಟು ಪಡೆಯದೆ ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸುತ್ತಿದ್ದ 301 ಪ್ರಯಾಣಿಕರಿಂದ 38647 ರೂ. ದಂಡ ವಸೂಲಿ ಮಾಡಿದೆ.
ಕಳೆದ ತಿಂಗಳಿನಲ್ಲಿ 2026 ಬಸ್ಸುಗಳನ್ನು ಮಾರ್ಗ ತನಿಖೆಗೆ ಒಳಪಡಿಸಲಾಗಿತ್ತು. ಈ ವೇಳೆ 212 ಪ್ರಕರಣಗಳನ್ನು ಪತ್ತೆ ಹಚ್ಚಲಾಯಿತೆಂದು ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಆರ್. ಅಶೋಕ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜ. 21ರಂದು ಚಾಮರಾಜನಗರ ಪಟ್ಟಣ ಸೇರಿದಂತೆ ವಿವಿಧೆಡೆ ವಿದ್ಯುತ್ ವ್ಯತ್ಯಯ 

ಚಾಮರಾಜನಗರ, ಜ. 21 - ಚಾಮರಾಜನಗರ ಪಟ್ಟಣ, ರಾಮಸಮುದ್ರ, ಹರದನಹಳ್ಳಿ ಹಾಗೂ ಟಿ.ಕೆ.ಮೋಳೆ ಫೀಡರ್ ವ್ಯಾಪ್ತಿಯಲ್ಲಿ ರಸ್ತೆ ಅಗಲಿಕರಣ ಹಿನ್ನೆಲೆಯಲ್ಲಿ ವಿದ್ಯುತ್ ಮಾರ್ಗಗಳನ್ನು ಸ್ಥಳಾಂತರಿಸುವ ಕಾಮಗಾರಿಯನ್ನು ಜನವರಿ 21ರಂದು ಸೆಸ್ಕ್ ಕೈಗೊಳ್ಳಲಿದೆ.
ಈ ಹಿನ್ನೆಲೆಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಚಾಮರಾಜನಗರ ಪಟ್ಟಣದ ಹೌಸಿಂಗ್‍ಬೋರ್ಡ್, ಕೋರ್ಟ್ ರಸ್ತೆ, ಕರಿನಂಜನಪುರ, ಟಿ.ಕೆ ಮೋಳೆ, ಬಿ. ರಾಚಯ್ಯ ಜೋಡಿ ರಸ್ತೆ, ಚಂದುಕಟ್ಟೆ ಮೋಳೆ, ಬ್ಯಾಡಮೂಡ್ಲು, ದೊಡ್ಡಮೋಳೆ, ದೊಡ್ಡ ಅಂಗಡಿ ಬೀದಿ ಹಾಗೂ ಭ್ರಮರಾಂಬ ಬಡಾವಣೆಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಸಾರ್ವಜನಿಕರು ನಿಗಮದೊಂದಿಗೆ ಸಹಕರಿಸುವಂತೆ ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು