Saturday, 6 January 2018

ಜ. 8 ರಿಂದ ನಗರದಲ್ಲಿ ಆಧಾರ್ ಅದಾಲತ್ ಕಾರ್ಯಕ್ರಮ (06-01-2018)



ಜ. 8ರಿಂದ ನಗರದಲ್ಲಿ ಆಧಾರ್ ಅದಾಲತ್ ಕಾರ್ಯಕ್ರಮ 

ಚಾಮರಾಜನಗರ, ಜ. 05 - ಜಿಲ್ಲಾಡಳಿತ ಹಾಗೂ ಬೆಂಗಳೂರಿನ ಇ-ಆಡಳಿತ ಕೇಂದ್ರದ (ಸಿಇಜಿ) ಸಹಯೋಗದೊಂದಿಗೆ ಜನವರಿ 8 ರಿಂದ 12ರವರೆಗೆ ನಗರದ ಸತ್ತಿ ರಸ್ತೆಯಲ್ಲಿರುವ ಡಿ. ದೇವರಾಜ ಅರಸು ಭವನದಲ್ಲಿ ಆಧಾರ್ ಅದಾಲತ್ ಕಾರ್ಯಕ್ರಮವನ್ನು ಆಯೋಜಿಸಿದೆ.
ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಆಧಾರ್ ಸಂಖ್ಯೆ ಅತ್ಯಂತ ಪ್ರಯೋಜನಕಾರಿಯಾಗಿರುವ ಹಿನ್ನೆಲೆಯಲ್ಲಿ ಆಧಾರ್ ನೋಂದಣಿ ಮಹತ್ವ ಪಡೆದಿದೆ. ಜಿಲ್ಲೆಯ ನಾಗರಿಕರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಆಧಾರ್ ತಿದ್ದುಪಡಿ, ಅಪ್‍ಡೇಷನ್, ಹೊಸ ನೋಂದಣಿ ಹಾಗೂ ಆಧಾರ್‍ಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಸಾರ್ವಜನಿಕರು ಪಡಿತರ ಚೀಟಿ, ಬ್ಯಾಂಕ್ ಪಾಸ್ ಪುಸ್ತಕ, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ, ಚಾಲನಾ ಪರವಾನಗಿ ಪ್ರತಿ ಅಥವಾ ಇನ್ನಿತರೆ ವಿಳಾಸ ದಾಖಲಾತಿಗಳೊಂದಿಗೆ ಅದಾಲತ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಗುಂಡ್ಲುಪೇಟೆ ತಾಲೂಕು : ಪ.ಜಾ., ಪ.ವರ್ಗಗಳ ಹಿತರಕ್ಷಣಾ ಸಮಿತಿ ಸಭೆ ಮುಂದೂಡಿಕೆ

ಚಾಮರಾಜನಗರ, ಜ. 05 - ಗುಂಡ್ಲುಪೇಟೆ ತಾಲೂಕು ಮಟ್ಟದ ಪರಿಶಿಷ್ಠ ಜಾತಿ, ಪರಿಶಿಷ್ಠ ವರ್ಗಗಳ ಹಿತರಕ್ಷಣಾ ಸಮಿತಿ ಸಭೆಯನ್ನು ಜನವರಿ 20ಕ್ಕೆ ಮುಂದೂಡಲಾಗಿದೆ.
ಗುಂಡ್ಲುಪೇಟೆ ತಹಸೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ಜನವರಿ 12ರಂದು ಬೆಳಿಗ್ಗೆ 10 ಗಂಟೆಗೆ ತಾಲೂಕು ಕಚೇರಿಯ ಸಭಾ ಭವನದಲ್ಲಿ ನಿಗದಿಯಾಗಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಹಿತರಕ್ಷಣಾ ಸಮಿತಿ ಸಭೆಯನ್ನು ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿರುವ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂಡಲಾಗಿದೆ ಎಂದು ಗುಂಡ್ಲುಪೇಟೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಣೆಯಾದ ಹೆಂಗಸಿನ ಪತ್ತೆಗೆ ಮನವಿ  

ಚಾಮರಾಜನಗರ, ಜ. 05 - ಚಾಮರಾಜನಗರ ತಾಲೂಕಿನ ನೆಲ್ಲೂರು ಗ್ರಾಮದ ರಾಧ ಎಂಬುವರು ಮಗುವಿನೊಂದಿಗೆ ಜನವರಿ 1ರಂದು ಚಾಮರಾಜನಗರ ಪಟ್ಟಣಕ್ಕೆ ಬಟ್ಟೆ ಖರೀದಿಸುವ ಸಲುವಾಗಿ ಬಂದಿದ್ದು, ನಂತರ ರಾಮಸಮುದ್ರದಲ್ಲಿರುವ ಅವರ ತಂಗಿ ಮನೆಗೆ ಹೋಗಿ ನಂತರ ಕಾಣೆಯಾಗಿದ್ದಾರೆ ಎಂಬುದಾಗಿ ರಾಧ ಅವರ ಪತಿ ಎಂ. ಮಂಜುನಾಥ ಅವರು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸುಮಾರು 22 ವರ್ಷ ವಯಸ್ಸಿನ ರಾಧ ಪರಿಶಿಷ್ಟ ಜನಾಂಗಕ್ಕೆ ಸೇರಿದ್ದು ಕೋಲು ಮುಖ, ಎಣ್ಣೆಗೆಂಪು ಮೈಬಣ್ಣ, ಹೊಂದಿದ್ದು 160 ಸೆಂ.ಮೀ. ಎತ್ತರ ಇದ್ದು, ಕನ್ನಡ ಮತ್ತು ತಮಿಳು ಮಾತನಾಡುವ ಇವರು ಕಪ್ಪು ಬಣ್ಣದ ಸೀರೆಯನ್ನು ಧರಿಸಿದ್ದಾರೆ.
ಇವರ ಕುರಿತು ಮಾಹಿತಿ ದೊರೆತಲ್ಲಿ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಗೆ ತಿಳಿಸುವಂತೆ ಠಾಣೆ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರÉ.

ಜ. 8ರಂದು ತೆರಕಣಾಂಬಿಯಲ್ಲಿ ಉದ್ಯೋಗ ತರಬೇತಿಗಾಗಿ ಪೂರ್ವಭಾವಿ ಸಭೆ 

ಚಾಮರಾಜನಗರ, ಜ. 05 -  ಚಾಮರಾಜನಗರ ಜಿಲ್ಲಾ ಪೊಲೀಸ್ ಇಲಾಖೆಯು ‘ದಿ ನಡ್ಜ್’ ಎಂಬ ಸ್ವಯಂ ಸೇವಾಸಂಸ್ಥೆಯ ಸಹಯೋಗದೊಡನೆ ಕಾಡಂಚಿನ ಗ್ರಾಮಗಳ ನಿರುದ್ಯೋಗಿ ಯುವಕ ಯುವತಿಯರು ಸ್ವಾವಲಂಬನೆಯಿಂದ ಬದುಕುವ ಸಲುವಾಗಿ ಸದ್ಧರ್ಮ–ಕಾಯಕ ಎಂಬ ಶೀರ್ಷಿಕೆಯಡಿಯಲ್ಲಿ ಸ್ವಯಂ ಸೇವಾ ಸಂಸ್ಥೆಯ ತರಬೇತಿ ಘಟಕವಾದ ಗುರುಕುಲದಲ್ಲಿ ತರಬೇತಿ ನೀಡುವ ಸಂಬಂಧ ಉದ್ಯೋಗ ಮೇಳವನ್ನು ಆಯೋಜಿಸಲಾಗಿರುತ್ತದೆ.
ಸಂಸ್ಥೆಯು 8ನೇ ತರಗತಿ ಉತ್ತೀರ್ಣರಾದವರಿಗೆ ಎಲೆಕ್ಟ್ರೀಷಿಯನ್, ಪ್ಲಂಬಿಂಗ್, ಪಿ.ಯು.ಸಿ ಉತ್ತೀರ್ಣತೆ ಹೊಂದಿದವರಿಗೆ ಡೊಮೆಸ್ಟಿಕ್ ಬಿ.ಪಿ.ಒ ಹಾಗೂ ಬ್ಯೂಟಿಷಿಯನ್ (ಯಾವುದೇ ವಿದ್ಯಾರ್ಹತೆಯ ಅವಶ್ಯಕತೆ ಇಲ್ಲ) ಕೆಲಸಗಳಿಗಾಗಿ 90 ದಿನಗಳ ಉಚಿತ ಊಟ, ವಸತಿಯೊಡನೆ ಬೆಂಗಳೂರಿನ ವೈಟ್‍ಫೀಲ್ಡ್‍ನ ಕಾಡುಗೋಡಿಯಲ್ಲಿ ತರಬೇತಿ ನೀಡಿ, ನಂತರ ಇದೇ ಸಂಸ್ಥೆಯು ಉದ್ಯೋಗವನ್ನು ಸಹ ಕೊಡಿಸುವ ಭರವಸೆ ನೀಡಿರುತ್ತದೆ.
ತರಬೇತಿ ಪಡೆಯಲು ಇಚ್ಛೆಯುಳ್ಳ ಕಾಡಂಚಿನ ಗ್ರಾಮಗಳ ನಿರುದ್ಯೋಗಿಗಳು ಹಾಗೂ ಜಿಲ್ಲೆಯ ನಿರುದ್ಯೋಗಿಗಳು (ವಿದ್ಯಾಭ್ಯಾಸ ಮೊಟಕುಗೊಳಿಸಿದವರು ಮಾತ್ರ) ಕೂಡ ತಮ್ಮ ವಿದ್ಯಾಭ್ಯಾಸದ ವಿವರ, ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ, ಆಧಾರ್ ಅಥವಾ ವಾಸಸ್ಥಳ ದೃಢೀಕರಣದೊಂದಿಗೆ ಜನವರಿ 8ರಂದು ಬೆಳಿಗ್ಗೆ 11 ಗಂಟೆಗೆ ಗುಂಡ್ಲುಪೇಟೆ ತಾಲ್ಲೂಕು ತೆರಕಣಾಂಬಿಯ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ಪೂರ್ವಭಾವಿ ಸಭೆಗೆ ಆಗಮಿಸಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-39515195, ಮೊಬೈಲ್ 8147137378, 9900864488ಗೆ ಮಿಸ್‍ಕಾಲ್  ಮಾಡುವಂತೆ ಜಿಲ್ಲಾ ಪೊಲೀಸ್ ಕಚೇರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಥಳೀಯ ಉದ್ದಿಮೆದಾರರಿಂದ ಮಿನಿ ಮಣ್ಣು ಪರೀಕ್ಷಾ ಘಟಕ ಸ್ಥಾಪನೆಗೆ ಅರ್ಜಿ ಆಹ್ವಾನ

ಚಾಮರಾಜನಗರ, ಜ. 05- ಕೃಷಿ ಇಲಾಖೆ ವತಿಯಿಂದ 2017-18ನೇ ಸಾಲಿನ ಮಣ್ಣು ಆರೋಗ್ಯ ನಿರ್ವಹಣೆ ಕಾರ್ಯಕ್ರಮದಡಿ ಸ್ಥಳೀಯ ಉದ್ದಿಮೆದಾರರಿಂದ ಗ್ರಾಮಮಟ್ಟದಲ್ಲಿ ಮಿನಿ ಮಣ್ಣು ಪರೀಕ್ಷಾ ಘಟಕಗಳ ಸ್ಥಾಪನೆಗೆ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಗ್ರಾಮೀಣ ಯುವಜನರಿಗೆ ಉದ್ಯೋಗ ಅವಕಾಶ ಸೃಷ್ಠಿಸುವುದು, ರೈತರಿಗೆ ಅವರ ಸಮೀಪದಲ್ಲಿಯೇ ಮಣ್ಣು ಮಾದರಿ ವಿಶ್ಲೇಷಿಸಿ ಫಲಿತಾಂಶ ನೀಡುವುದು ಮತ್ತು ತ್ವರಿತವಾಗಿ ಮಣ್ಣು ಮಾದರಿ ವಿಶ್ಲೇಷಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
ಗ್ರಾಮಮಟ್ಟದಲ್ಲಿ ಮಣ್ಣು ಪರೀಕ್ಷಾ ಘಟಕಗಳನ್ನು ತೆರೆದು ಸಂಸದರ ಆದರ್ಶ ಗ್ರಾಮಗಳಲ್ಲಿ ಪ್ರಥಮ ಆದ್ಯತೆ ಮೇರೆಗೆ ಮತ್ತು ಪ್ರತಿ ರೈತಸಂಪರ್ಕ ಕೇಂದ್ರಗಳ ವ್ಯಾಪ್ತಿಯಲ್ಲಿ ಒಂದರಂತೆ ಮಿನಿ ಮಣ್ಣು ಪರೀಕ್ಷಾ ಕೇಂದ್ರ ತೆರೆಯಲಾಗುವುದು.
18 ರಿಂದ 45ರ ವಯೋಮಾನದವರು ಅರ್ಹರು. ಪಿಯುಸಿಯಲ್ಲಿ ವಿಜ್ಞಾನ ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಅರ್ಜಿಯೊಂದಿಗೆ ವಿದ್ಯಾರ್ಹತೆ ಪ್ರಮಾಣ ಪತ್ರ, ಪಾನ್ ಕಾರ್ಡ್, ಆಧಾರ್ ಕಾರ್ಡ್ ಪ್ರತಿಯನ್ನು ನೀಡಬೇಕು. ಸ್ವಂತ ಅಥವಾ ಬಾಡಿಗೆ ಕಟ್ಟಡ ಹೊಂದಿರಬೇಕು. ಬಾಡಿಗೆ ಕರಾರು ಕನಿಷ್ಟ 4 ವರ್ಷ ಇರಬೇಕು. ಕನಿಷ್ಠ 4 ವರ್ಷ ಕೆಲಸ ನಿರ್ವಹೊಸಲು ಬಾಂಡ್ ಇರಬೇಕು. ಯೋಜನಾ ವೆಚ್ಚ 5 ಲಕ್ಷ ರೂ.ಗಳಾಗಿದ್ದು ಶೇ. 75ರಷ್ಟು ಸಹಾಯಧನ ಲಭಿಸಲಿದೆ.
ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಜನವರಿ 16ರೊಳಗೆ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಕ್ಕೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಹೋಬಳಿಯ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಂಪರ್ಕಿಸುವಂತೆ ಕೃಷಿ ಇಲಾಖೆ ಜಂಟಿನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜ. 7 ಮತ್ತು 8ರಂದು ಉಸ್ತುವಾರಿ ಕಾರ್ಯದರ್ಶಿಗಳ ಜಿಲ್ಲಾ  ಪ್ರವಾಸ

      ಚಾಮರಾಜನಗರ, ಜ. 05 - ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಟಾರಿಯಾ ಅವರು ಜನವರಿ 7 ಮತ್ತು 8 ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
     ಜನವರಿ 7 ರ ಸಂಜೆ 5ಕ್ಕೆ ಕೊಳ್ಳೇಗಾಲಕ್ಕೆ ಭೇಟಿ ನೀಡಿ ತಾಲೂಕು ಅಧಿಕಾರಿಗಳೊಂದಿಗೆ ಚರ್ಚೆ ಮತ್ತು ಆಯ್ದ ಕ್ಷೇತ್ರಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುವರು. ಜ. 8ರಂದು ನಗರದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸುವರು. ಎಂದು ಕಟಾರಿಯಾ ಅವರ ಆಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
   

ಜನವರಿ 6. 7 ಮತ್ತು 8ರಂದು ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ

ಚಾಮರಾಜನಗರ, ಅ. 13:- ಸಕ್ಕರೆ ಮತ್ತು ಸಣ್ಣ ಕೈಗಾರಿಕೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಸಿ. ಮೋಹನಕುಮಾರಿ (ಗೀತಾ ಮಹದೇವಪ್ರಸಾದ್) ಅವರು ಜನವರಿ 6, 7 ಮತ್ತು 8ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಜ. 6ರಂದು ಬೆಳಿಗ್ಗೆ 10 ಗಂಟೆಗೆ ನಗರದಲ್ಲಿ ಜಿಲ್ಲಾ ಆಶಾ ಕಾರ್ಯಕರ್ತೆಯರ ಸಮಾವೇಶದಲ್ಲಿ ಭಾಗವಹಿಸುವರು. 12 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾನ್ಯ ಮುಖ್ಯಮಂತ್ರಿಯವರು ಜಿಲ್ಲೆಗೆ ಆಗಮಿಸುವ ಕುರಿತು ನಡೆಯುವ ಸಭೆಯಲ್ಲಿ ಪಾಲ್ಗೊಳ್ಳುವ ಸಚಿವರು ಮಧ್ಯಾಹ್ನ 1 ಗಂಟೆಗೆ ನಗರದಲ್ಲಿ ಜಿಲ್ಲಾ ರಸ್ತೆಗಳ ಪರಿಶೀಲನೆ ಮಾಡುವರು.
ನಂತರ 3 ಗಂಟೆÉಗೆ ಮುಖ್ಯಮಂತ್ರಿಯವರ ಆಗಮನದ ಸಂಬಂಧ ಚಾಮರಾಜನಗರ ತಾಲೂಕಿನ ನಾಗವಳ್ಳಿಯಲ್ಲಿ ಸ್ಥಳ ಪರಿಶೀಲನೆ ನಡೆಸುವರು. 4 ಗಂಟೆಗೆ ಕೊಳ್ಳೇಗಾಲದಲ್ಲಿ ಮುಖ್ಯಮಂತ್ರಿಯವರ ಆಗಮನದ ಸಂಬಂಧ ಸ್ಥಳ ಪರಿಶೀಲನೆ ಮಾಡುವರು. ಸಂಜೆ 5 ಗಂಟೆಗೆ ಹನೂರಿನಲ್ಲಿ ಮುಖ್ಯಮಂತ್ರಿಯವರ ಆಗಮನದ ಸಂಬಂಧ ಸ್ಥಳ ಪರಿಶೀಲನೆ ನಡೆಸುವರು.
ಜ. 7ರಂದು ಬೆಳಿಗ್ಗೆ 11 ಗಂಟೆಗೆ ಚಾಮರಾಜನಗರ ಜಿಲ್ಲೆಯ ವಿವಿಧ ಕೆರೆಗಳ ವೀಕ್ಷಣೆ ಮಾಡಿ ನಂತರ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಜ. 8ರಂದು ಬೆಳಿಗ್ಗೆ 11 ಗಂಟೆಗೆ ಗುಂಡ್ಲುಪೇಟೆಗೆ ಆಗಮಿಸಿ ಸ್ಥಳೀಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 2.30 ಗಂಟೆಗೆ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸುವರು. ಸಂಜೆ 5 ಗಂಟೆಗೆ ಮೈಸೂರಿಗೆ ತೆರಳುವರೆಂದು ಸಚಿವರ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.








No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು