Tuesday, 2 January 2018

ರಸಗೊಬ್ಬರ ಮಾರಾಟಕ್ಕೆ ಕಡ್ಡಾಯವಾಗಿ ಪಾಯಿಂಟ್ ಆಫ್ ಸೇಲ್ ಯಂತ್ರದ ಬಳಸಿ: ಯೋಗೇಶ್ಅಂ,ತರ್ಜಲದ ಕುರಿತು ಪ್ರತಿಯೊಬ್ಬರಲ್ಲೂ ಅರಿವು ಮೂಡಿಸಲು ಎಂ. ರಾಮಚಂದ್ರ ಸಲಹೆ,(03-01-2018)

ಅಂತರ್ಜಲದ ಕುರಿತು ಪ್ರತಿಯೊಬ್ಬರಲ್ಲೂ ಅರಿವು ಮೂಡಿಸಲು ಎಂ. ರಾಮಚಂದ್ರ ಸಲಹೆ

ಚಾಮರಾಜನಗರ, ಜ. 02 - ದಿನದಿಂದ ದಿನಕ್ಕೆ ಮಳೆ ಕ್ಷೀಣಿಸುತ್ತಿರುವುದರಿಂದ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಅಂತರ್ಜಲವನ್ನು  ಉಳಿಸಲು ಪ್ರತಿಯೊಬ್ಬರಲ್ಲೂ ಅರಿವು ಮೂಡಿಸಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಅವರು ತಿಳಿಸಿದರು.

ಚಾಮರಾಜನಗರ ತಾಲ್ಲೂಕಿನ ಹರದನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಇತ್ತೀಚೆಗೆ ನಡೆದ ಅಂತರ್ಜಲ ಸದ್ಬಳಕೆ, ಸಂರಕ್ಷಣೆ, ಗುಣಮಟ್ಟ, ಮಳೆ ನೀರಿನ ಸಂಗ್ರಹಣೆ ಹಾಗೂ ಮರುಬಳಕೆ ಮತ್ತು ವಿಫಲ ಕೊಳವೆ ಬಾವಿಗಳಲ್ಲಿ ಚಿಕ್ಕ ಮಕ್ಕಳು ಬಿದ್ದು ಸಂಭವಿಸುವ ಅವಘಡಗಳನ್ನು ನಿಯಂತ್ರಿಸುವ ಕುರಿತು ಜನಜಾಗೃತಿ ಶಿಬಿರವನ್ನು ಉದ್ಘಾಟಿಸಿ ಅವರು  ಮಾತನಾಡಿದರು.
ಮಳೆಯು ಸಕಾಲಕ್ಕೆ ಸರಿಯಾಗಿ ಆಗದೆ ಅಂತರ್ಜಲದ ಮಟ್ಟ ದಿನದಿಂದ ದಿನಕ್ಕೆ ನಿರಂತರವಾಗಿ ಕ್ಷೀಣಿಸಿ ಕೆರೆಕಟ್ಟೆಗಳು ಬತ್ತಿ ಹೋಗುತ್ತಿವೆ. ಇದರಿಂದ ಕೊಳವೆ ಬಾವಿಗಳಲ್ಲಿ ಅಂತರ್ಜಲದ ಮಟ್ಟ ಕುಸಿದು ಕುಡಿಯುವ ನೀರಿನ ಅಲಭ್ಯತೆ ಉಂಟಾಗುತ್ತಿದೆ. ಅಂತರ್ಜಲ ಅಭಿವೃದ್ಧಿ ಕುರಿತು ಪ್ರತಿಯೊಬ್ಬರಲ್ಲೂ ಅರಿವು ಮೂಡಿಸುವ ಹೊಣೆ ನಮ್ಮದಾಗಬೇಕು ಎಂದರು.
ಹರದನಹಳ್ಳಿ ಮತ್ತು ಬಂಡಿಗೆರೆ ಗ್ರಾಮಕ್ಕೆ ಚಿಕ್ಕಹೊಳೆ ಜಲಾಶಯದಿಂದ ಪೈಪ್‍ಲೈನ್ ಮೂಲಕ  ಕೆರೆಗಳಿಗೆ ನೀರನ್ನು ಹಾಯಿಸಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಬೇಕು. ಅಂತರ್ಜಲ ಮರುಪೂರೈಕೆಯಿಂದ ಅಂತರ್ಜಲ ಮಟ್ಟ ಹಾಗೂ ಅದರ ಗುಣಮಟ್ಟವನ್ನು ಕಾಪಾಡಿಕೊಳ್ಳಬಹುದಾಗಿದೆ ಎಂದು ರಾಮಚಂದ್ರ ಅವರು ತಿಳಿಸಿದರು.
ಮೈಸೂರಿನ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗದ ಭೂವಿಜ್ಞಾನಿ ಪ್ರಾಣೇಶ್‍ರಾವ್ ಅವರು ಅಂತರ್ಜಲ ಮಹತ್ವದ ಬಗ್ಗೆ ವಿವರಿಸಿ ಅಂತರ್ಜಲ ಸಂಗ್ರಹಣೆ ಮತ್ತು ಲಭ್ಯತೆ ಪ್ರಮಾಣ ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನವಾಗಿರುತ್ತದೆ ಎಂದರು. 
ಮಳೆ ನೀರಿನ ಸಂಗ್ರಹಣೆ, ಬಳಕೆ ಮತ್ತು ಅಂತರ್ಜಲ ಮರುಪೂರೈಕೆ, ಇದರಿಂದ ಅಂತರ್ಜಲ ಪೂರೈಕೆಗಿಂತ ಬಳಕೆ ಹೆಚ್ಚಾಗಿ ಅಸಮತೋಲನ ಸ್ಥಿತಿ ಉಂಟಾಗಿದೆ. ಇದನ್ನು ಸರಿಪಡಿಸಬೇಕಾದರೆ ಅಂತರ್ಜಲ ಕೃತಕ ಮರುಪೂರೈಕೆ ರಚನೆಗಳನ್ನು ನಿರ್ಮಿಸುವುದು ಅವಶ್ಯಕ ಎಂದು ಪ್ರಾಣೇಶ್‍ರಾವ್ ಅವರು ತಿಳಿಸಿದರು.
ಹಿರಿಯ ಭೂ ವಿಜ್ಞಾನಿ ಹೆಚ್. ರಮೇಶ್ ಅವರು ಮಾತನಾಡಿ ಭೂಮಿಯ ಮೇಲ್ಮೈ ಲಕ್ಷಣಗಳಿಗನುಗುಣವಾಗಿ ಅಂತರ್ಜಲ ಮರುಪೂರೈಕೆ ರಚನೆಗಳನ್ನು ನಿರ್ಮಿಸಬೇಕು. ಮನೆಗಳಲ್ಲಿ ಮಳೆ ನೀರು ಕೊಯ್ಲು ಪದ್ದತಿಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂದರು.
ಭೂವಿಜ್ಞಾನಿ ಪಿ.ಎಸ್. ಶೋಭಾರಾಣಿ ಅವರು ಮಾತನಾಡಿ ನೀರಿಗಾಗಿ ಅಧಿಕ ಕೊಳವೆ ಬಾವಿಗಳನ್ನು ಕೊರೆದಿರುವ ಕಾರಣ ಮುಚ್ಚದೆ ಅದನ್ನು ಹಾಗೆ ಬಿಟ್ಟಿರುವುದರಿಂದ ಚಿಕ್ಕಮಕ್ಕಳು ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಸರ್ಕಾರವು ಇಂತಹ ಘಟನೆಗಳು ಸಂಭವಿಸದಂತೆ ಇಲಾಖೆಗಳಿಂದ ಕಾರ್ಯಕ್ರಮಗಳನ್ನು ರೂಪಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದು ಅಗತ್ಯವೆಂದು ತಿಳಿಸಿದರು.
ಹರದನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಬ್ಬಶೆಟ್ಟಿ ಅವರು ಅಂತರ್ಜಲ ಕುರಿತ ಕೈಪಿಡಿಯನ್ನು ಬಿಡುಗಡೆ ಮಾಡಿದರು.
ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಅಂತರ್ಜಲ ಸದ್ಬಳಕೆ, ಸಂರಕ್ಷಣೆ, ಗುಣಮಟ್ಟ, ಮಳೆ ನೀರಿನ ಸಂಗ್ರಹಣೆ ಹಾಗೂ ಮರುಬಳಕೆ ಮತ್ತು ವಿಫಲ ಕೊಳವೆ ಬಾವಿಗಳಲ್ಲಿ ಚಿಕ್ಕ ಮಕ್ಕಳು ಬಿದ್ದು ಸಂಭವಿಸುವ ಅವಘಡಗಳನ್ನು ನಿಯಂತ್ರಿಸುವ ಕ್ರಮಗಳು, ಇವುಗಳಿಗೆ ಸಂಬಂಧಿಸಿದಂತೆ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ತಾ. ಪಂ. ಸದಸ್ಯರಾದ ಮಹದೇವಶೆಟ್ಟಿ, ಗ್ರಾ. ಪಂ. ಉಪಾಧ್ಯಕ್ಷರಾದ ಚಿಕ್ಕಮಣಿ ಹಾಗೂ ಶಾಲಾ ಅಭಿವೃದ್ಧಿ ಮತ್ತು ಮೇಲು ಉಸ್ತುವಾರಿ ಸಮಿತಿ ಅಧ್ಯಕ್ಷರಾದ ಜಯಸ್ವಾಮಿ ಅವರು ವಿಜೇತರಾದ ಮಕ್ಕಳಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ವಿತರಣೆ ಮಾಡಿದರು.
          ಅಂತರ್ಜಲ ನಿರ್ದೇಶನಾಲಯ ಹೆಚ್ಚುವರಿ ನಿರ್ದೇಶಕರಾದ ಸಣ್ಣಬೋರಮ್ಮ ಸುಬ್ರಮಣಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕರಾದ ಕುಲಕರ್ಣಿ, ಅಂತರ್ಜಲ ನಿರ್ದೇಶನಾಲಯದ ಹಿರಿಯ ಭೂಭೌತ ವಿಜ್ಞಾನಿ ಜಯಣ್ಣ, ಮೈಸೂರು ಅಂತರ್ಜಲ ಕಚೇರಿಯ ಹಿರಿಯ ಭೂ ವಿಜ್ಞಾನಿ ಕೆ.ವಿ.ಆರ್. ಚೌದರಿ, ಕ್ಷೇತ್ರ ಶಿಕ್ಷಣಾಧಿಕಾರಿ ಲಕ್ಷೀಪತಿ, ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಜಯಸ್ವಾಮಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಿ.ವೈ. ಸೀಮಾ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ರಸಗೊಬ್ಬರ ಮಾರಾಟಕ್ಕೆ ಕಡ್ಡಾಯವಾಗಿ ಪಾಯಿಂಟ್ ಆಫ್ ಸೇಲ್ ಯಂತ್ರದ ಬಳಸಿ: ಯೋಗೇಶ್   

      ಚಾಮರಾಜನಗರ, ಜ. 02 - ರಸಗೊಬ್ಬರ ಮಾರಾಟಗಾರರು ಕಡ್ಡಾಯವಾಗಿ ಪಾಯಿಂಟ್ ಆಫ್ ಸೇಲ್ ಯಂತ್ರದ ಬಳಸಿ ಮಾರಾಟ ಮಾಡಿ ಆನ್‍ಲೈನ್ ಬಿಲ್ ತಯಾರಿಸಲು ಕ್ರಮವಹಿಸುವಂತೆ ಉಪ ಕೃಷಿ ನಿರ್ದೇಶಕರಾದ ಜಿ. ಹೆಚ್. ಯೋಗೇಶ್ ತಿಳಿಸಿದರು.
     ಜಿಲ್ಲಾಡಳಿತ ಭವನದ ಕೆ.ಡಿ.ಪಿ ಸಭಾಂಗಣದಲ್ಲಿ ಕೃಷಿ ಇಲಾಖೆ ಹಾಗೂ ಸ್ಪಿಕ್ ಕಂಪನಿ ವತಿಯಿಂದ ಜಿಲ್ಲಾ ರಸಗೊಬ್ಬರ ಮಾರಾಟಗಾರರಿಗೆ ಇತ್ತೀಚೆಗೆ ಆಯೋಜಿಸಿದ್ದ ಪಾಯಿಂಟ್ ಆಫ್ ಸೇಲ್ ಯಂತ್ರದ ಬಳಕೆ ಕುರಿತಂತೆ ಪ್ರಾಯೋಗಿಕ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
     ಜಿಲ್ಲೆಯಲ್ಲಿ 104 ಜನ ರಸಗೊಬ್ಬರ ಮಾರಾಟಗಾರರಿಗೆ ಪಾಯಿಂಟ್ ಆಫ್ ಸೇಲ್ ಯಂತ್ರ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಅಂಗಡಿಗೆ ಬರುವ ರೈತರಿಂದ ಆಧಾರ್ ಸಂಖ್ಯೆ ಹಾಗೂ ಬೆರಳಚ್ಚು ಪಡೆದು ರಸಗೊಬ್ಬರ ಮರಾಟ ಮಾಡಲಾಗುವುದು. ಎಲ್ಲಾ ರೈತರಿಗೆ ಆಧಾರ್ ಸಂಖ್ಯೆ ತರಲು ಮನವರಿಕೆ ಮಾಡಿಕೊಡುವುದು ಎಂದರು.
     ರಸಗೊಬ್ಬರ ಖರೀದಿ ಮಾಡುವಾಗ ರೈತರು, ರೈತರ ಬದಲಿಗೆ ಜಮೀನಿನಲ್ಲಿ ಕೆಲಸ ಮಾಡುವ ಕೂಲಿಕಾರರು, ವಯಸ್ಕ ಮಕ್ಕಳು ಹಾಗೂ ತಮ್ಮ ಹೆಸರಿಗೆ ಜಮೀನಿನ ಖಾತೆಗಳು ವರ್ಗಾವಣೆಯಾಗಿರದ ವ್ಯಕ್ತಿಗಳಿಂದಲೂ ಸಹ ಆಧಾರ್ ಸಂಖ್ಯೆ ಮತ್ತು ಬೆರಳಚ್ಚು ಪಡೆದು ರಸಗೊಬ್ಬರ ವಿತರಿಸಬೇಕು. ಇದರಿಂದ ಡೀಲರ್‍ಗಳು ಹೆಚ್ಚಿನ ದರ ಪಡೆಯಲು ಸಾಧ್ಯವಿಲ್ಲ. ಅಲ್ಲದೆ ಪರವಾನಗಿ ಹೊಂದಿಲ್ಲದ ವ್ಯಕ್ತಿಗಳು ರಸಗೊಬ್ಬರ ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು.
     ಪಾಯಿಂಟ್ ಆಫ್ ಸ್ಕೇಲ್ ಯಂತ್ರದ ಮೂಲಕ ಮಾರಾಟ ಮಾಡುವ ರಸಗೊಬ್ಬರದ ಪ್ರಮಾಣಕ್ಕೆ ಮಾತ್ರ ರಸಗೊಬ್ಬರಗಳ ಮೇಲಿನ ಕೇಂದ್ರಸರ್ಕಾರದ ಸಹಾಯಧನ ರಸಗೊಬ್ಬರ ಉತ್ಪಾದಕರಿಗೆ ವರ್ಗಾವಣೆಯಾಗುವ ಹಿನ್ನಲೆಯಲ್ಲಿ ರಸಗೊಬ್ಬರ ಅಂಗಡಿಗೆ ಬರುವ ರೈತರು ತಮ್ಮ ಆಧಾರ್ ಸಂಖ್ಯೆ ತಂದು ಬೆರಳಚ್ಚು ನೀಡಿ ರಸಗೊಬ್ಬರ ಖರೀದಿ ಮಾಡಬೇಕು. ಇದರಿಂದ ಅಕ್ರಮ ರಸಗೊಬ್ಬರ ಮಾರಾಟ ತಪ್ಪಿದಂತಾಗುತ್ತದೆ ಎಂದು ಯೋಗೇಶ್ ತಿಳಿಸಿದರು.
     ಇದೇ ಸಂದರ್ಭದಲ್ಲಿ ಪಾಯಿಂಟ್ ಆಫ್ ಸೇಲ್ ಯಂತ್ರದ ಬಳಕೆ ಕುರಿತು ರಸಗೊಬ್ಬರ ಮಾರಾಟಗಾರರಿಗೆ ಪ್ರಾಯೋಗಿಕ ತರಬೇತಿ ನೀಡಲಾಯಿತು.
     ಸ್ಪಿಕ್ ಕಂಪನಿಯ ಪ್ರತಿನಿಧಿಗಳಾದ ಸುನೀಲ್, ಶರಣಗೌಡ, ಹಿರೇಮಠ, ಅನಲಾಜಿಕ್ಸ್ ಕಂಪನಿಯ ನವೀನ್, ವಿಷನ್ ಟೆಕ್ ಕಂಪನಿಯ ಸಂಜಿತ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸ್ವಚ್ಚ್ ಸರ್ವೇಕ್ಷಣ್ -2018ಕ್ಕೆ ಸಿದ್ದತೆ

       ಚಾಮರಾಜನಗರ, ಜ. 02:- ನಗರದಲ್ಲಿ ಸ್ವಚ್ಚ್ ಸರ್ವೇಕ್ಷಣ್ -2018ರ ಸಿದ್ದತೆಗಾಗಿ ಹಾಗೂ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ನಗರದ ಸ್ವಚ್ಚತೆ ಕಾಪಾಡಲು ವಾರ್ಡ್‍ವಾರು ಗ್ಯಾಂಗ್‍ವರ್ಕ್ ಮೂಲಕ ಕಾರ್ಮಿಕರನ್ನು ನಿಯೋಜಿಸಿ ಸ್ವಚ್ಚತಾ ಕಾರ್ಯ ಕೈಗೊಳ್ಳಲು  ಕ್ರಿಯಾ ಯೋಜನೆ ತಯಾರಿಸಲಾಗಿದೆ.
      ನಗರ ಸಭೆಯ 31 ವಾರ್ಡ್‍ಗಳಲ್ಲಿ ಪ್ರತಿ ಸೋಮವಾರ, ಗುರುವಾರ ಹಾಗೂ ಶನಿವಾರ ಮಧ್ಯಾಹ್ನ 1.30 ಗಂಟೆಯಿಂದ 5 ಗಂಟೆಯವರೆಗೆ ಗ್ಯಾಂಗ್ ವರ್ಕ್ ಕಾರ್ಮಿಕರ ಮೂಲಕ ರಸ್ತೆ ಸ್ವಚ್ಚತೆ, ಚರಂಡಿ ಸಿಲ್ಟ್ ತೆಗೆಯುವುದು, ಗಿಡಗಂಟೆಗಳನ್ನು ತೆರವುಗೊಳಿಸಿ ನೆಲ ಭರ್ತಿ ಜಾಗ ವಿಲೇವಾರಿ ಮಾಡುವುದು ಕ್ರಿಯಾಯೋಜನೆಯಲ್ಲಿ ಸೇರಿವೆ.
     ನಗರ ಸಭೆಯ 1ರಿಂದ 15ವರೆಗಿನ ವಾರ್ಡ್‍ಗಳಲ್ಲಿ ಜನವರಿ 1,4,6,8,11,13,15,18,20 ರಂದು ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕರಾದ ಎಸ್. ಶರವಣ್ ಮೊ: 9738991200, ದಫೇದಾರರಾದ ಅಸ್ಲಂ ಮೊ: 9620714425 ಮತ್ತು ಸಿ.ಪಿ. ಮಾದ ಮೊ: 8792201487 ಈ ಕಾರ್ಯಕ್ಕೆ ಮೇಲುಸ್ತುವಾರಿ ಮಾಡಲಿದ್ದಾರೆ. ಅಲ್ಲದೆ, 50 ಮಂದಿ ಕಾರ್ಮಿಕರು, 6 ಆಟೋ ಟಿಪ್ಪರ್, 1 ಟ್ರ್ಯಾಕ್ಟರ್ ನಿಯೋಜಿಸಲಾಗಿದೆ. 
     ಹಾಗೆಯೇ 16 ರಿಂದ 31 ವರೆಗಿನ ವಾರ್ಡ್‍ಗಳಲ್ಲಿ ಜನವರಿ 1,6,8,11,13,18,20,22,25,27 ಹಾಗೂ ಫೆಬ್ರವರಿ 3 ಮತ್ತು 1 ರಂದು ನಗರಸಭೆಯ ಕಿರಿಯ ಆರೋಗ್ಯ ನಿರೀಕ್ಷಕರಾದ ಕೆ.ಎಂ. ಮಹದೇವಸ್ವಾಮಿ ಮೊ: 8884574829, ದಫೇದಾರ್‍ರಾದ ನಾಗ ಮೊ: 8095349553 ಮತ್ತು ರಾಜೇಂದ್ರ ಮೊ: 7975441455 ಈ ಕಾರ್ಯಕ್ಕೆ ಮೇಲುಸ್ತುವಾರಿ ಮಾಡಲಿದ್ದಾರೆ. ಅಲ್ಲದೆ, 50 ಜನ ಕಾರ್ಮಿಕರು, 6 ಆಟೋ ಟಿಪ್ಪರ್ ಮತ್ತು 1ಟ್ರ್ಯಾಕ್ಟರ್ ನಿಯೋಜಿಸಲಾಗಿದೆ.

ಜಾನುವಾರುಗಳ ಗೊಬ್ಬರ: ಬಹಿರಂಗ ಹರಾಜು 

       ಚಾಮರಾಜನಗರ, ಜ. 02 - ಚಾಮರಾಜನಗರ ತಾಲೂಕಿನ ಮಂಗಲ ಗ್ರಾಮಗಲ್ಲಿ ತೆರೆಯಲಾಗಿರುವ ಗೋಶಾಲೆಯಲ್ಲಿ ಸಂಗ್ರಹವಾಗಿರುವ ಜಾನುವಾರುಗಳ ಗೊಬ್ಬರವನ್ನು ಹೇಗಿದೆಯೋ ಹಾಗೆಯೇ ಜನವರಿ 8ರಂದು ಬೆಳಿಗ್ಗೆ 10.30 ರಿಂದ 1.30ಗಂಟೆಯವರೆಗೆ ಬಹಿರಂಗ ಹರಾಜು ನಡೆಸಲಾಗುವುದು.   
     ಭಾಗವಹಿಸಲು ಇಚ್ಚಿಸುವರು ಷರತ್ತಿನೊಂದಿಗೆ ಜನವರಿ 8ರಂದು ಬೆಳಿಗ್ಗೆ 8ಗಂಟೆಗೆ ನಿಗಧಿಪಡಿಸಿದ ಸ್ಥಳದಲ್ಲಿ ಹಾಜರಿರಬೇಕು. ಹೆಚ್ಚಿನ ಮಾಹಿತಿಗಾಗಿ ಚಾಮರಾಜನಗರದ ತಾಲೂಕು (ದೂ. 08226-222046) ಕಚೇರಿಯಲ್ಲಿ ಕಚೇರಿ ವೇಳೆಯಲ್ಲಿ ಪಡೆಯಬಹುದಾಗಿದೆ ಎಂದು ತಹಶೀಲ್ದಾರ್ ಅವರು ಪ್ರಕಟಣೆÉಯಲ್ಲಿ ತಿಳಿಸಿದ್ದಾರೆ.

ಚಿಕ್ಕಲ್ಲೂರು ಜಾತ್ರೆ : ಪ್ರಾಣಿಬಲಿ ನಿಷೇಧ – ಉಸ್ತುವಾರಿಗೆ ಹೆಚ್ಚುವರಿ ಸೆಕ್ಟರ್ ಆಫೀಸರ್‍ಗಳ ನಿಯೋಜನೆ

ಚಾಮರಾಜನಗರ, ಜ. 02 - ಕೊಳ್ಳೇಗಾಲ ತಾಲೂಕಿನ ಶ್ರೀಕ್ಷೇತ್ರ ಚಿಕ್ಕಲ್ಲೂರು ಹೊಸಮಠದ ದೇವಸ್ಥಾನದ ಪರಿಧಿ/ಜಾತ್ರಾ ಪ್ರದೇಶದಲ್ಲಿ ಜನವರಿ 2 ರಿಂದ 7ರ ಮಧ್ಯರಾತ್ರಿಯವರೆಗೆ ದೇವರ ಹೆಸರಿನಲ್ಲಿ ಯಾವುದೇ ರೀತಿಯ ಪ್ರಾಣಿಬಲಿ ನೀಡುವುದು ಹಾಗೂ ಮಾರಕಾಸ್ತ್ರಗಳನ್ನು ತರುವುದನ್ನು ತಡೆಗಟ್ಟಲು ಹಾಗೂ ಹೈಕೋರ್ಟ್ ನಿರ್ದೇಶನದಂತೆ ಪ್ರಾಣಿ ಬಲಿಯನ್ನು ತಡೆಗಟ್ಟಿ, ಪ್ರಾಣಿ ಬಲಿ ನಿಷೇಧದ ಬಗ್ಗೆ ತಿಳಿವಳಿಕೆ ಸಂಬಂಧ ನಿರ್ವವಣೆಗೆ ಸೆಕ್ಟರ್ ಅಧಿಕಾರಿಗಳನ್ನು ನಿಯೋಜಿಸಿ ಹೆಚ್ಚವರಿ ಜಿಲ್ಲಾಧಿಕಾರಿ ಕೆ.ಎಂ. ಗ್ರಾಯಿತ್ರಿ ಅವರು ಆದೇಶ ಹೊರಡಿಸಿದ್ದಾರೆ.
ಪ್ರಾಣಿಬಲಿ ಸಂಪೂರ್ಣವಾಗಿ ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು, ಪ್ರಾಣಿಬಲಿ ನಿಷೇಧ ಕುರಿತು ನಾಗರಿಕರಿಗೆ ತಿಳಿವಳಿಕೆ ನೀಡುವ ಸಮಯದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಘಟನೆಗಳು ಸಂಭವಿಸಿದರೆ ತಕ್ಷಣ ಆದೇಶ ಮಾಡುವ ಸಲುವಾಗಿ ಸೆಕ್ಟರ್ ಆಫೀಸರ್‍ಗಳನ್ನು ನಿಯೋಜಿಸಲಾಗಿದೆ.
ಉಪವಿಭಾಗಾಧಿಕಾರಿ ಕೊಳ್ಳೇಗಾಲ ತಹಸೀಲ್ದಾರ್ ಅವರೊಂದಿಗೆ ಹೆಚ್ಚುವರಿಯಾಗಿ ಸೆಕ್ಟರ್ ಆಫೀಸರ್‍ಗಳನ್ನಾಗಿ ವಿವಿಧ ಇಲಾಖೆಯ ಅಧಿಕಾರಿಗಳನ್ನು ಕರ್ತವ್ಯ ನಿರ್ವಹಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಜನವರಿ 2 ರಿಂದ 7ರ ವರೆಗೆ ಶ್ರೀ ಕ್ಷೇತ್ರ ಚಿಕ್ಕಲೂರು ಹೊಸ ಮಠದಲ್ಲಿನ ಜಾತ್ರ ಮಹೋತ್ಸವದ ಸಂಪೂರ್ಣ ಮೇಲು ಉಸ್ತವಾರಿಯನ್ನು ಕೊಳ್ಳೇಗಾಲದ ಉಪವಿಭಾಗಾಧಿಕಾರಿಗಳು ಹಾಗೂ ಉಪವಿಭಾಗೀಯ ದಂಡಾಧಿಕಾರಿಗಳು ಫೌಜಿಯಾ ತರನಮ್ (ಮೊ. 9739148248)ಅವರನ್ನು ನೇಮಿಸಲಾಗಿದೆ.
ಕೊಳ್ಳೇಗಾಲದ ತಾಲೂಕು ಪಂಚಾಯತ್‍ನ ಕಾರ್ಯನಿರ್ವಾಹಕಾಧಿಕಾರಿಗಳಾದ ಡಾ. ಪ್ರಕಾಶ್ (ಮೊ. 94808058110/9448962456) ಅವರು ಕೊಳ್ಳೇಗಾಲದ ಉಪವಿಭಾಗಾಧಿಕಾರಿಗಳು ಹಾಗೂ ಉಪವಿಭಾಗೀಯ ದಂಡಾಧಿಕಾರಿಗಳು ಆದೇಶಿಸಿದ ಕರ್ತವ್ಯ ನಿರ್ವಹಿಸಲು ಹಾಗೂ ನಿಯೋಜಿಸಲಾಗಿದೆ.
     ಶ್ರೀ ಕ್ಷೇತ್ರ ಚಿಕ್ಕಲೂರು ಹೊಸ ಮಠದಲ್ಲಿನ ಜಾತ್ರ ಮಹೋತ್ಸವ ನಡೆಯುವ ಎಲ್ಲಾ ಸೆಕ್ಟರ್‍ಗಳ ಪ್ರಾಣಿ ಬಲಿ ನಿಷೇಧ ಸಂಬಂಧದ ಸಂಪೂರ್ಣ ಮೇಲುಸ್ತುವಾರಿ ನಿರ್ವಹಿಸಿ ವರದಿ ಸಲ್ಲಿಸುವುದು ಹಾಗೂ ಕೊಳ್ಳೇಗಾಲದ ಉಪವಿಭಾಗಾಧಿಕಾರಿಗಳೊಂದಿಗೆ ಸಮನ್ಮಯ ಸಾಧಿಸಲು ಜಂಟಿ ಕೃಷಿ ನಿರ್ದೇಶಕರಾದ ತಿರುಮಲ್ಲೇಶ್ ಮೊ: 8277930760 ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ರವಿಕುಮಾರ್ ಮೊ: 948030480 ಅವರಿಗೆ ತಿಳಿಸಲಾಗಿದೆ.
ಮೊದಲನೇ ಪಾಳಿಯಲ್ಲಿ (ಬೆಳಿಗ್ಗೆ 8ರಿಂದ ಮಧ್ಯಾಹ್ನ 2ಗಂಟೆಯವರೆಗೆ) ಕೊತ್ತನೂರು, ಬಾಣೂರು, ಸುಂಡಳ್ಳಿ ಗ್ರಾಮಗಳ ಸುತ್ತಮುತ್ತಲ ಪ್ರದೇಶ ವ್ಯಾಪ್ತಿಗೆ ಯಳಂದೂರಿನ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ರವಿಕುಮಾರ್ (ಮೊ. 9632422362) ರನ್ನು ನೇಮಿಸಲಾಗಿದೆ.
ಎರಡನೇ ಪಾಳಿಯಲ್ಲಿ (ಮಧ್ಯಾಹ್ನ 2ರಿಂದ ರಾತ್ರಿ 10ಗಂಟೆಯವರೆಗೆ) ಕೊತ್ತನೂರು ಬಾಣೂರು, ಸುಂಡಳ್ಳಿ ಗ್ರಾಮಗಳ ಸುತ್ತ ಮುತ್ತಲ ಪ್ರದೇಶಕ್ಕೆ ಜಿಲ್ಲಾ ಪಂಚಾಯತ್ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಉದಯ್‍ಕುಮಾರ್ (ಮೊ. 9480835582) ಮತ್ತು ರಾಚಪ್ಪಾಜಿ ನಗರದ ಸುತ್ತಮುತ್ತಲ ಪ್ರದೇಶಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕರಾದ ಕೆ.ಆರ್. ಕುಲಕರ್ಣಿ ಮೊ: 8762376353 ಇವರನ್ನು ನಿಯೋಜಿಸಿದೆ.
ಜನವರಿ 4 ರಿಂದ 5ರ ವರೆಗೆ ಚಾಮರಾಜನಗರ, ಯಳಂದೂರು, ಗುಂಡ್ಲುಪೇಟೆ ಹಾಗೂ ಹನೂರು ತಾಲ್ಲೂಕುಗಳ ತಹಶೀಲ್ದಾರ್ ಹೆಚ್ಚುವರಿ ಸೆಕ್ಟರ್ ಆಫೀಸರ್‍ಗಳನ್ನಾಗಿ ಕರ್ತವ್ಯಕ್ಕೆ  ನಿಯೋಜಿಸಲಾಗಿದೆ ಸದರಿ ದಿನಗಳಂದು ಖುದ್ದು ಹಾಜರಿದ್ದು ಯಾವುದೇ ಅಹಿರಕರ ಘಟಣೆಗಳು ಹಾಗೂ ಕಾನೂನು ಉಲ್ಲಂಘನೆಯಾಗದಂತೆ ಜಾಗ್ರತೆ ವಹಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿಯವರು ಆದೇಶದಲ್ಲಿ ತಿಳಿಸಿದೆ.

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು