Thursday, 25 January 2018

ನಗರದಲ್ಲಿ ಅರ್ಥಪೂರ್ಣವಾಗಿ ನಡೆದ ಶ್ರೀ ಮಹಾಯೋಗಿ ವೇಮನ ಜಯಂತಿ ಆಚರಣೆ (25-01-2018)

   

ನಗರದಲ್ಲಿ ಅರ್ಥಪೂರ್ಣವಾಗಿ ನಡೆದ ಶ್ರೀ ಮಹಾಯೋಗಿ ವೇಮನ ಜಯಂತಿ ಆಚರಣೆ 

ಚಾಮರಾಜನಗರ, ಜ. 24 :- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಶ್ರೀ ಮಹಾಯೋಗಿ ವೇಮನ ಜಯಂತಿಯನ್ನು ನಗರದಲ್ಲಿ ಇಂದು ಅರ್ಥಪೂರ್ಣವಾಗಿ ಆಚರಿಸಲಾಯಿತು.
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಅವರು ಮಹಾಯೋಗಿ ವೇಮನ ಅವರು ತಮ್ಮ ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಸಮಾಜ ಸುಧಾರಣೆಗೆ ಮುಂದಾದರು ಎಂದರು.
ಎಲ್ಲಾ ಮಹಾಪುರುಷರು, ದಾರ್ಶನಿಕರು ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದ್ದಾರೆ. ಜಾತಿ, ಧರ್ಮ ಮೀರಿ ಎಲ್ಲರೂ ಒಂದೇ ಎಂದು ಸಾರಿದ್ದಾರೆ. ಅವರ ತತ್ವ ಆದರ್ಶಗಳು ಅನುಕರಣೀಯವಾಗಿದೆ ಎಂದು ರಾಮಚಂದ್ರ ಅವರು ಅಭಿಪ್ರಾಯಪಟ್ಟರು.
ಉದಾತ್ತ ಧ್ಯೇಯ ವಿಚಾರಧಾರೆಗಳು ಪ್ರತಿಯೊಬ್ಬರನ್ನು ತಲುಪಲಿ ಎಂಬ ಆಶಯದಿಂದ ಎಲ್ಲಾ ದಾರ್ಶನಿಕರ ಮಹಾನ್ ವ್ಯಕ್ತಿಗಳ ಜಯಂತಿ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ. ಈ ಮೂಲಕ ಉನ್ನತ ವಿಚಾರಗಳು ಮನಮುಟ್ಟಬೇಕು. ಅರ್ಥಪೂರ್ಣ ಕಾರ್ಯಕ್ರಮ ಆಯೋಜನೆಗೆ ಎಲ್ಲರ ಸಹಕಾರ ಇರಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಜೆ. ಯೋಗೇಶ್ ಅವರು ಮಹಾಯೋಗಿ ವೇಮನ ಅವರು ತಮ್ಮ ಪದ್ಯಗಳ ಮೂಲಕ ಸಮಾಜದ ಚಿತ್ರಣವನ್ನು ಮುಂದಿಟ್ಟು ಕಣ್ಣು ತೆರೆಸುವ ಕೆಲಸ ಮಾಡಿದ್ದಾರೆ. ಭೇಧಭಾವ ತೊರೆದು ಎಲ್ಲರೂ ಸಾಮರಸ್ಯದಿಂದ ಇರಬೇಕೆಂಬ ಆಶಯ ವ್ಯಕ್ತಪಡಿಸಿದ್ದಾರೆ ಎಂದರು.
ಸಮಾಜದಲ್ಲಿ ಇರುವ ಮೂಡನಂಬಿಕೆಗಳು ದೂರವಾಗಬೇಕಿದೆ. ಗ್ರಾಮೀಣ ಭಾಗಗಳಲ್ಲಿ ಇರುವ ಕಂದಾಚಾರ, ಆಚರಣೆಗಳು ಬದಲಾಗಲು ಶಿಕ್ಷಣ ಪ್ರಮುಖವಾಗಿ ಪಡೆಯಬೇಕಿದೆ ಎಂದು ಯೋಗೇಶ್ ಅವರು ಅಭಿಮತ ವ್ಯಕ್ತಪಡಿಸಿದರು.
ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು ಅವರು ಮಾತನಾಡಿ ಸಮಾಜದ ಒಳಿತು ಹಾಗೂ ಸುಧಾರಣೆಗಾಗಿ ವೇಮನ ಅವರು ತಮ್ಮ ಜೀವನವನ್ನೇ ಮುಡುಪಾಗಿಟ್ಟರು. ಅವರ ಅರ್ಥಪೂರ್ಣ ಕವನಗಳ ಸಾರ ಜನಸಾಮಾನ್ಯರಿಗೂ ತಿಳಿಸುವ ಕೆಲಸ ಆಗಬೇಕು ಎಂದರು.
ವಿಶೇಷ ಉಪನ್ಯಾಸ ನೀಡಿದ ನಾಗಮಂಗಲದ ಸರ್ಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲರಾದ ಗಂಗಾರಾಮ್ ಚಂಡಾಳ ಅವರು ಮಹಾಯೋಗಿ ವೇಮನ ಅವರು ಆಂಧ್ರದಲ್ಲಿ ಜನಿಸಿದ್ದು ಅವರ 1163 ಪದ್ಯಗಳು ಇದುವರೆಗೆ ಲಭಿಸಿದೆ. ಕರುಣೆ, ಪ್ರೀತಿ, ಕಾರುಣ್ಯ, ದಯೆ, ಸಹನೆ ಪ್ರತಿಯೊಬ್ಬರಲ್ಲೂ ಇರಬೇಕೆಂಬುದು ಅವರ ಪದ್ಯಗಳಲ್ಲಿ ಪ್ರತಿಪಾದಿತವಾಗಿವÉ. ಆಡು ಭಾಷೆಯಲ್ಲಿಯೇ ವೇಮನ ಅವರು ಪದ್ಯಗಳನ್ನು ರಚಿಸಿದ್ದಾರೆ ಎಂದರು.
ಪ್ರಕೃತಿಯನ್ನು ಗೌರವಿಸಿ ಎಂದಿರುವ ವೇಮನ ಅವರು ಪ್ರಾಣಿ, ಪಕ್ಷಿ, ಗಿಡಮರಗಳನ್ನು ಪ್ರೀತಿಸಬೇಕು. ಈ ದೇಹವೇ ದೇವರು. ದೇಹದಲ್ಲಿರುವ ಶಕ್ತಿಯೇ ದೇವರ ಪ್ರತಿರೂಪ. ಈ ಮುಖಾಂತರ ಪ್ರೀತಿ ಪ್ರೇಮ ಶಾಂತಿ ನೆಲೆಸಬೇಕು ಎಂದು ಹೇಳಿದ್ದಾರೆ. ವಿಶ್ವಮಾನವ ಸಂದೇಶಗಳನ್ನು ಅಂದೇ ವೇಮನ ಅವರು ನೀಡಿದ್ದಾರೆ ಎಂದು ಗಂಗಾರಾಮ್ ಅವರು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಎನ್. ಮುನಿರಾಜಪ್ಪ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಮಹದೇವಯ್ಯ, ಪ್ರೊಬೆಷನರಿ ಉಪವಿಭಾಗಾಧಿಕಾರಿಗಳಾದ ಗೀತಾ, ರಾಯಪ್ಪ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ  ಮೊದಲು ಗುಂಡ್ಲುಪೇಟೆ ತಾಲೂಕು ಅಗತಗೌಡನಹಳ್ಳಿಯ ಬಿ. ರಾಜೇಂದ್ರ ಮತ್ತು ಸಂಗಡಿಗರು ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಆರೋಗ್ಯ ತಪಾಸಣಾ ಶಿಬಿರ ಮುಂದೂಡಿಕÉ

ಚಾಮರಾಜನಗರ, ಜ. 24 - ಚಾಮರಾಜನಗರ ಜಿಲ್ಲಾ ಆಸ್ಪತ್ರೆ ಹಾಗೂ ನಾರಾಯಣ ಹೃದಯಾಲಯ ಆಸ್ಪತ್ರೆ ವತಿಯಿಂದ ಜನವರಿ 25ರಂದು ಜಿಲ್ಲಾ ಆಸ್ಪತ್ರೆಯಲ್ಲಿ ನಿಗದಿಯಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ. ತಪಾಸಣಾ ಶಿಬಿರ ಆಯೋಜನೆಯ ಮುಂದಿನ ದಿನಾಂಕವನ್ನು ತಿಳಿಸಲಾಗುವುದೆಂದು ಜಿಲ್ಲಾ ಸರ್ಜನ್ ಡಾ. ರಘುರಾಂ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜ. 25ರಂದು ರಾಷ್ಟ್ರೀಯ ಮತದಾರರ ದಿನ ಆಚರಣೆ

ಚಾಮರಾಜನಗರ, ಜ. 24 - ಚುನಾವಣಾ ಆಯೋಗ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ರಾಷ್ಟ್ರೀಯ ಮತದಾರರ ದಿನ ಆಚರಣೆಯನ್ನು ಜನವರಿ 25ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಎಚ್.ಜೆ. ನಾಗರತ್ನ ಅವರು ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾಧಿಕಾರಿ ಬಿ. ರಾಮು ಅಧ್ಯಕ್ಷತೆ ವಹಿಸುವರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಇಂದುಶೇಖರ್ ಉಮ್ಮತ್ತೂರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಸಿ. ಬಸವರಾಜು ಮುಖ್ಯ ಭಾಷಣ ಮಾಡುವರು ಎಂದು ಪ್ರಕಟಣೆ ತಿಳಿಸಿದೆ.

   

ಜನವರಿ 25, 26 ರಂದು ನಗರಕ್ಕೆ ಕುಡಿಯುವ ನೀರು ಸರಬರಾಜು ವ್ಯತ್ಯಯ 

ಚಾಮರಾಜನಗರ, ಜ. 24 - ಚಾಮರಾಜನಗರ ಪಟ್ಟಣಕ್ಕೆ ನೀರು ಸರಬರಾಜಾಗುವ ಟಿ.ನರಸೀಪುರದ ಪಂಪ್ ಹೌಸ್‍ನಲ್ಲಿ ಸ್ಟಾರ್ಟರ್ ಪ್ಯಾನಲ್ ಬೋರ್ಡ್ ದುರಸ್ಥಿ ಕಾರ್ಯ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಚಾಮರಾಜನಗರ ಪಟ್ಟಣಕ್ಕೆ ಜನವರಿ 25 ಹಾಗೂ 26 ರಂದು ಕಾವೇರಿ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಪೌರಾಯುಕ್ತರಾದ ಬಿ.ಫೌಜಿಯಾ ತರನ್ನುಂ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು