Tuesday, 9 January 2018

166 ಗ್ರಾಮಗಳ 232 ಜನವಸತಿ ಪ್ರದೇಶಗಳಿಗೆ ಕುಡಿವ ನೀರು ಇಲಾಖೆಗೆ ಸವಾಲಾಗಿದ್ದ ಯೋಜನೆ ಕಾರ್ಯಗತ, ಇಂದು ಸಿಎಂ ಸಿದ್ದರಾಮಯ್ಯರಿಂದ ಲೋಕಾರ್ಪಣೆ (09-01-2018)

166 ಗ್ರಾಮಗಳ 232 ಜನವಸತಿ ಪ್ರದೇಶಗಳಿಗೆ ಕುಡಿವ ನೀರು ಇಲಾಖೆಗೆ ಸವಾಲಾಗಿದ್ದ ಯೋಜನೆ ಕಾರ್ಯಗತ, ಇಂದು ಸಿಎಂ ಸಿದ್ದರಾಮಯ್ಯರಿಂದ ಲೋಕಾರ್ಪಣೆ

ಚಾಮರಾಜನಗರ: ಜಿಲ್ಲೆಯ 166 ಗ್ರಾಮಗಳ ಸುಮಾರು 3 ಲಕ್ಷಕ್ಕೂ ಅಧಿಕ ಮಂದಿಗೆ ಕುಡಿಯುವ ನೀರು ಒದಗಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಚಾಲನೆ ನೀಡಲಿದ್ದಾರೆ.
ಚಾಮರಾಜನಗರ ತಾಲ್ಲೂಕಿನ 232 ಜನವಸತಿ ಪ್ರದೇಶಗಳ ದಾಹ ಇಂಗಿಸುವ ಈ ಮಹತ್ವ ಪೂರ್ಣ ಯೋಜನೆಯನ್ನು ರಾಜ್ಯ ಸರ್ಕಾರದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಜಾರಿಗೊಳಿಸಿದ್ದು, ಈ ಯೋಜನೆಯನ್ನು ಮೆಘಾ ಇಂಜಿನಿಯರಿಂಗ್ ಅಂಡ್ ಇನ್‍ಫ್ರಾಸ್ಟ್ರಕ್ಚರ್ ಲಿ., ಸಂಸ್ಥೆ ಕಾರ್ಯರೂಪಕ್ಕೆ ತಂದಿದೆ.
ಕಬಿನಿ ನದಿ ನೀರನ್ನು ಬೆಟ್ಟ ಪ್ರದೇಶವನ್ನು ದಾಟಿಸಿ ನಂತರ ಜನವಸತಿ ಪ್ರದೇಶಗಳಿಗೆ ಹರಿಸುವುದು ಸರ್ಕಾರ ಮತ್ತು ಇಲಾಖೆಗೆ ಸವಾಲಿನ ಕೆಲಸವೇ ಆಗಿತ್ತು. ಇಂತಹ ಸಂದರ್ಭದಲ್ಲಿ ಯೋಜನೆ ಸಿದ್ದಗೊಳಿಸುವಿಕೆ, ನಿರ್ಮಾಣ ಮತ್ತು ಮುನ್ನಡೆಸುವ ಮಾದರಿಯಲ್ಲಿ ಕಾಮಗಾರಿಗೆ ಮುಂದಾಯಿತು. ಈ ಸಂದರ್ಭದಲ್ಲಿ ಇಂತಹ ಯೋಜನೆ ಯಶಸ್ವಿ ಜಾರಿ ಪ್ರಶ್ನಾರ್ಥಕವಾಗಿಯೇ ಉಳಿದಿತ್ತು. ಗ್ರಾಮೀಣ ಜನತೆಗೆ ಕುಡಿವ ನೀರು ಕೊಡಬೇಕೆಂಬ ಸಂಕಲ್ಪದೊಂದಿಗೆ ಮುಂದಡಿ ಇರಿಸಿದ ಸರ್ಕಾರಕ್ಕೆ ಇದೀಗ ಯಶಸ್ಸು ದೊರೆತಿದೆ.
ಈ ಯೋಜನೆಯಡಿ ಸುಮಾರು 520 ಕಿ.ಮೀ.ಗಳಷ್ಟು ಎಂ.ಎಸ್.ಪೈಪ್, ಡಿಐ ಪೈಪ್ಸ್, ಹೆಚ್‍ಡಿಪಿಇ ಪೈಪ್ಸ್ ಸೇರಿದಂತೆ ವಿವಿಧ ಮಾದರಿಯ ಅತ್ಯಾಧುನಿಕ ಪೈಪ್‍ಗಳನ್ನು ಅಳವಡಿಸಲಾಗಿದೆ. ಈ ಪೈಪ್‍ಗಳು ದೀರ್ಘಕಾಲಿಕ ಬಾಳಿಕೆ ಪೈಪ್‍ಗಳಾಗಿದ್ದು, ಕುಡಿವ ನೀರು ಸರಬರಾಜಿನಲ್ಲಿ ತೊಡಕಾಗದಂತೆ ಎಚ್ಚರವಹಿಸಲಾಗಿದೆ.
ಯೋಜನೆ ಏನು?: ಚಾಮರಾಜನಗರ ತಾಲ್ಲೂಕಿನ ತಾಯೂರು ಬಳಿಯ ಕಬಿನಿ ನದಿಯ ನೀರನ್ನು 17 ಕಿಮೀ ದೂರದ ಉಮ್ಮತ್ತೂರಿಗೆ ಹರಿಸಿ, ಅಲ್ಲಿ ನೀರನ್ನು ಶುದ್ಧಿಕರಿಸಲಾಗುವುದು. ಶುದ್ಧಿಕರಿಸಿದ ನೀರನ್ನು  ಪಂಪಿಂಗ್ ಮೂಲಕ  ಉಮ್ಮತೂರು ಬೆಟ್ಟಕ್ಕೆ ಕೊಂಡೊಯ್ಯಲಾಗುವುದು.
ಬೆಟ್ಟದ ಮೇಲೆ 49 ಲಕ್ಷ ಲೀಟರ್ ಮತ್ತು 38 ಲಕ್ಷ ಲೀಟರ್‍ಗಳ ಸಾಮಥ್ರ್ಯದ ಎರಡು ಬೃಹತ್ ಟ್ಯಾಂಕ್‍ಗಳನ್ನು ತುಂಬಿಸಿ, ಅಲ್ಲಿಂದ ಶುದ್ಧ ಕುಡಿವ ನೀರನ್ನು ಪೈಪ್‍ಗಳ ಮೂಲಕ ಗುರುತ್ವಾಕರ್ಷಣೆ ಮತ್ತು ಸಣ್ಣ ಸಣ್ಣ ಪಂಪಿಂಗ್ ಕೇಂದ್ರಗಳ ಸಹಾಯದಿಂದ 166 ಗ್ರಾಮಗಳ 232 ಜನವಸತಿ ಪ್ರದೇಶಗಳಿಗೆ ಹರಿಸಲಾಗುವುದು.
ಯೋಜನೆಯ ವ್ಯಾಪ್ತಿಯ ಜನಸಂಖ್ಯೆ ಆಧಾರದ ಮೇಲೆ ಯೋಜನೆ ರೂಪಿಸಲಾಗಿದ್ದು, ಯೋಜನಾ ವ್ಯಾಪ್ತಿಯ ಪ್ರದೇಶದ ಪ್ರತಿ ವ್ಯಕ್ತಿಗೆ ಪ್ರತಿ ದಿನಕ್ಕೆ 55 ಲೀಟರ್ ಶುದ್ಧ ನೀರು ದೊರಕುವಂತೆ ಮಾಡಲಾಗಿದೆ.
ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆ: ಯೋಜನಾ ಪ್ರದೇಶದ ಕಟ್ಟಕಡೆಯ ಪ್ರದೇಶ ಅಥವಾ ಕಟ್ಟ ಕಡೆಯ ವ್ಯಕ್ತಿಗೂ ನಿರ್ಧಾರಿತ ಕುಡಿವ ನೀರು ದೊರಕಬೇಕೆಂಬ ಉದ್ದೇಶವನ್ನು ಈ ಯೋಜನೆಯಲ್ಲಿ ಬಳಕೆ ಮಾಡಿರುವ ಅತ್ಯಾಧುನಿಕ ತಂತ್ರಜ್ಞಾನ ಸಾಧ್ಯಗೊಳಿಸುತ್ತಿದೆ.
ಈ ಯೋಜನೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಂದರೆ ಅಂತರ್ಜಾಲವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ‘ಸ್ಕೆಡಾ’ ಎಂದು ಹೇಳಲಾಗುವ ಅಂತರ್ಜಾಲ ತಂತ್ರಜ್ಞಾನದ ಮೂಲಕ ಕಂಟ್ರೋಲ್ ರೂಂನಲ್ಲಿ ಕುಳಿತಿರುವ ವ್ಯಕ್ತಿ ಯೋಜನಾ ವ್ಯಾಪ್ತಿಯ ನೀರು ನಿಯಂತ್ರಣ ಉಪಕರಣ (ವ್ಯಾಲ್ವ್)ಗಳನ್ನು ಸೂಕ್ತ ರೀತಿಯಲ್ಲಿ ನಿಯಂತ್ರಿಸಬಹುದಾಗಿದೆ. ಪ್ರತಿ ಜನವಸತಿ ಪ್ರದೇಶದಲ್ಲಿ ನಿಯಂತ್ರಣ ಮತ್ತು ಮಾಪಕಗಳನ್ನು ಅಳವಡಿಸಲಾಗಿದೆ. ಇದರಿಂದ ಪ್ರತಿ ವ್ಯಕ್ತಿಯ ಲೆಕ್ಕದಲ್ಲಿ ನೀರು ಸರಬರಾಜಾಗುತ್ತಿರುವುದು ಮತ್ತು ಕಟ್ಟ ಕಡೆಯ ಪ್ರದೇಶ ಅಥವಾ ವ್ಯಕ್ತಿಗೆ ನೀರು ಲಭ್ಯವಾಗುತ್ತಿರುವುದನ್ನು ಖಾತ್ರಿಪಡಿಸಿಕೊಳ್ಳಬಹುದಾಗಿದೆ.
ಹೆಚ್ಚುವರಿ ಪಂಪ್: ತ್ವರಿತ ಮತ್ತು ಅಡಚಣೆ ರಹಿತ ನೀರಿನ ಸರಬರಾಜಿಗೆ ಅನುವಾಗುವಂತೆ ಯೋಜನೆಯಡಿ ನಿರ್ಮಾಣವಾಗಿರುವ ಪಂಪ್‍ಹೌಸ್‍ಗಳಲ್ಲಿ ಹೆಚ್ಚುವರಿ ಮೋಟಾರ್‍ಗಳನ್ನು ಅಳವಡಿಸಲಾಗಿದೆ. ಅತ್ಯಾಧುನಿಕ ಮತ್ತು ಉತ್ತಮ ಕಾರ್ಯತತ್ಪರತೆ ಹೊಂದಿರುವ ಮೋಟಾರ್‍ಗಳನ್ನು ಇಲ್ಲಿ ಬಳಕೆ ಮಾಡಿರುವುದು ವಿಶೇಷ.
ಕಳೆದ ಎರಡು ತಿಂಗಳಿನಿಂದ ಪರೀಕ್ಷಾರ್ಥವಾಗಿ ನೀರನ್ನು ಸರಬರಾಜು ಮಾಡಲಾಗುತ್ತಿದ್ದು, ಈ ಪ್ರದೇಶದ ಜನತೆಗೆ ಹರ್ಷ ತಂದಿದೆ.
ಮೇಘಾ ಸಾಧನೆ: ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿದ್ದ ಈ ಬೃಹತ್ ಯೋಜನೆಯನ್ನು ಮೆಘಾ ಇಂಜಿನಿಯರಿಂಗ್ ಅಂಡ್ ಇನ್‍ಫ್ರಾಸ್ಟ್ರಕ್ಚರ್ ಲಿ., ಸಂಸ್ಥೆ ಕಾರ್ಯಗತಗೊಳಿಸಿದೆ. ಇಂತಹ ಸವಾಲಿನ ಇಂಜಿನಿಯರಿಂಗ್ ಕಾಮಗಾರಿಗಳನ್ನು ನಿರ್ವಹಿಸುವಲ್ಲಿ ಯಶಸ್ಸು ಕಂಡಿರುವ ಈ ಸಂಸ್ಥೆ ತನ್ನ ಉತ್ತಮ ಸಾಧನೆಗಾಗಿ ಲಿಮ್ಕಾ ಬುಕ್ ಆಫ್ ರೆಕಾಡ್ರ್ಸ್‍ನಲ್ಲಿ ಸ್ಥಾನ ಪಡೆದುಕೊಂಡಿದೆ. ಈ ಯೋಜನೆ ಇಲಾಖೆಯ ಅತಿ ದೊಡ್ಡ ರೂಪುಗೊಳಿಸುವ, ಕಾರ್ಯಗತಗೊಳಿಸುವ ಮತ್ತು ಮುನ್ನಡೆಸುವ ಮಾದರಿಯ ಯೋಜನೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರದಂದು ಈ ಯೋಜನೆಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ.

ಜ.10, 11 ರಂದು ಜಿಲ್ಲೆಯಲ್ಲಿ ಮುಖ್ಯಮಂತ್ರಿಗಳ ಪ್ರವಾಸ

ಚಾಮರಾಜನಗರ, ಜ. 09 - ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಜನವರಿ 10 ಹಾಗೂ 11ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ.
ಜನವರಿ 10ರಂದು ಬೆಳಿಗ್ಗೆ 11 ಗಂಟೆಗೆ ಹೆಲಿಕಾಪ್ಟರ್ ಮೂಲಕ ಚಾಮರಾಜನಗರ ತಾಲೂಕು ನಾಗವಳ್ಳಿ ಗ್ರಾಮಕ್ಕೆ ಆಗಮಿಸಿ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸುವರು.
ಮಧ್ಯಾಹ್ನ 12.30 ಗಂಟೆಗೆ ನಾಗವಳ್ಳಿ ಗ್ರಾಮದಿಂದ ಹೊರಟು 12.55 ಗಂಟೆಗೆ ಕೊಳ್ಳೇಗಾಲಕ್ಕೆ ಆಗಮಿಸಿ ಅಲ್ಲಿನ   ಎಂ.ಜಿ.ಎಸ್.ವಿ. ಶಾಲಾ ಮೈದಾನದಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸುವರು.
ಮಧ್ಯಾಹ್ನ 3.55ಕ್ಕೆ ಹನೂರಿಗೆ ಆಗಮಿಸಿ ಹನೂರು ಕ್ರೀಡಾಂಗಣದಲ್ಲಿ ಹನೂರು ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸುವರು. ಬಳಿಕ ಮಲೈ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿ ವಾಸ್ತವ್ಯ ಹೂಡುವರು.
ಜನವರಿ 11ರಂದು ಬೆಳಿಗ್ಗೆ 10 ಗಂಟೆಗೆ ಮಲೆಮಹದೇಶ್ವರಬೆಟ್ಟದಲ್ಲಿ ಶ್ರೀ ಮಲೈ ಮಹದೇಶ್ವರ ಸ್ವಾಮಿ ದೇವಾಲಯ ಟ್ರಸ್ಟ್, ಚಾಮರಾಜಪೇಟೆ, ಬೆಂಗಳೂರು ಇವರ ವತಿಯಿಂದ ಆಯೋಜಿಸಿರುವ ನೂತನವಾಗಿ ನಿರ್ಮಿಸಿರುವ ಕನಕ ಸಮುದಾಯ ಭವನದ ಉದ್ಘಾಟನೆ ನೆರವೇರಿಸುವರು. ಬೆಳಿಗ್ಗೆ 10.30 ಗಂಟೆಗೆ ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆಗೆ ತೆರಳುವರು ಎಂದು ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ

ಚಾಮರಾಜನಗರ, ಜ. 09 - ಸಣ್ಣ ಕೈಗಾರಿಕೆ ಮತ್ತು ಸಕ್ಕರೆ ಖಾತೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಸಿ. ಮೋಹನಕುಮಾರಿ ಉರುಫ್ ಗೀತಾ ಮಹದೇವಪ್ರಸಾದ್ ಅವರು ಜನವರಿ 10ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ.
ಜನವರಿ 10ರಂದು ಚಾಮರಾಜನಗರಕ್ಕೆ ಆಗಮಿಸಿ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.
ಮಧ್ಯಾಹ್ನ 1 ಗಂಟೆಗೆ ಕೊಳ್ಳೇಗಾಲದಲ್ಲಿ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.
ಸಂಜೆ 4 ಗಂಟೆ ಹನೂರಿನಲ್ಲಿ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಬಳಿಕ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿ ವಾಸ್ತವ್ಯ ಹೂಡುವರು.
ಜನವರಿ 11ರಂದು ಬೆಳಿಗ್ಗೆ ಮೈಸೂರಿಗೆ ತೆರಳುವರು ಎಂದು ಸಚಿವರ ಆಪ್ತ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು