ವಿಧಾನ ಸಭಾ ಚುನಾವಣೆ ಹಿನ್ನಲೆಯಲ್ಲಿ ಕೂಂಬಿಂಗ್ ಕಾರ್ಯಾಚರಣೆ: ಧರ್ಮೇಂದರ್ ಕುಮಾರ್ ಮೀನಾ
ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ.: ಮುಂಬರುವ ವಿಧಾನ ಸಭಾ ಚುನಾವಣೆ ಹಿನ್ನಲೆಯಲ್ಲಿ 29-01-2018, 30-01-2018 ಮತ್ತು 31-01-2018 ರಂದು ಚಾಮರಾಜನಗರ ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಎ.ಎನ್.ಎಫ್ (ನಕ್ಸಲ್ ನಿಗ್ರಹ ದಳ) ಹಾಗೂ ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಎರಡು ಸಶಸ್ತ್ರ ತಂಡಗಳಾಗಿ ಕರ್ನಾಟಕ-ಕೇರಳ-ತಮಿಳುನಾಡು ಟ್ರೈ ಜಂಕ್ಷನ್ ಪ್ರದೇಶದಲ್ಲಿ ಪ್ರತ್ಯೇಕವಾಗಿ, ಮೊದಲ ದಿನ ಸುಮಾರು 11 ಮತ್ತು 14 ಕಿ.ಮೀ, ಎರಡನೇ ದಿನ 13 ಮತ್ತು 12 ಕಿ.ಮೀ ಮತ್ತು ಮೂರನೇ ದಿನ 14 ಮತ್ತು 12 ಕಿ.ಮೀಗಳಷ್ಠು ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದಾರೆ.ಸಮಾಜಘಾತುಕ ಶಕ್ತಿಗಳ ಪರಿಶೀಲನೆ ನಡೆಸಿದ್ದಲ್ಲದೆ, ಸದರಿ ಪ್ರದೇಶಗಳಲ್ಲಿ ಕಾಡಂಚಿನ ಗ್ರಾಮಗಳ ಸಾರ್ವಜನಿಕರನ್ನು ಸಂಪರ್ಕಿಸಿ ಅವುರುಗಳಿಗೆ ಧೈರ್ಯ ತುಂಬಿರುವ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಾದ ಶ್ರೀ ಧರ್ಮೇಂದರ್ ಕುಮಾರ್ ಮೀನಾ, ಪೊಲೀಸ್ ಅಧೀಕ್ಷಕರು, ಶ್ರೀಮತಿ ಗೀತಾ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶ್ರೀ ಜಯ್‍ಕುಮಾರ್ ಅವರು ಕೂಂಬಿಂಗ್ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದಾರೆ.
ಮೊದಲ ತಂಡದ ಶ್ರೀ ಪ್ರಸನ್ನ, ಡಿ.ಎಸ್.ಪಿ ಮತ್ತು ಸಿಬ್ಬಂದಿ ಮತ್ತು ಎರಡನೇ ತಂಡದ ಶ್ರೀ ರವಿಕುಮಾರ್ ಮತ್ತು ಸಿಬ್ಬಂದಿ, ಅರಣ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಚಾಮರಾಜನಗರ ಜಿಲ್ಲಾ ಪೊಲೀಸ್ ವತಿಯಿಂದ ಭಾಗವಹಿಸಿದ್ದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯತತ್ಪರತೆಯನ್ನು ಪ್ರಶಂಸಿಸಿದ್ದಾರೆ
ಫೆ. 10ರಂದು ರಾಷ್ಟ್ರೀಯ ಲೋಕ್ ಅದಾಲತ್ : ರಾಜೀ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಕ್ಕೆ ಅವಕಾಶ – ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್.ಪಿ. ನಂದೀಶ್
ಚಾಮರಾಜನಗರ, ಫೆ. 01 - ನ್ಯಾಯಾಲಯಗಳಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಶೀಘ್ರವಾಗಿ ಒಮ್ಮತದಿಂದ ಇತ್ಯರ್ಥಗೊಳಿಸುವ ಉದ್ದೇಶದಿಂದ ರಾಷ್ಟ್ರೀಯ ಲೋಕ್ ಅದಾಲತ್ ಅನ್ನು ಈ ವರ್ಷದಲ್ಲಿ ಪ್ರತೀ 2 ತಿಂಗಳಿಗೊಮ್ಮೆ ಒಂದು ದಿನ ಆಯೋಜಿಸಲಾಗುತ್ತಿದ್ದು ಫೆಬ್ರವರಿ 10ರಂದು ಮೊದಲ ರಾಷ್ಟ್ರೀಯ ಲೋಕ್ ಅದಾಲತ್ ನಡೆಯಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರಾದ ಆರ್.ಪಿ. ನಂದೀಶ್ ಅವರು ತಿಳಿಸಿದರು.ನಗರದ ಜಿಲ್ಲಾ ನ್ಯಾಯಾಲಯ ಆವರಣದ ವ್ಯಾಜ್ಯಗಳ ಪರ್ಯಾಯ ಪರಿಹಾರ ಕೇಂದ್ರದಲ್ಲಿ ಇಂದು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಫೆಬ್ರವರಿ 10ರಂದು ಮೊದಲ ರಾಷ್ಟ್ರೀಯ ಲೋಕ್ ಅದಾಲತ್ ನಡೆಸಲಾಗುತ್ತದೆ. ಬಳಿಕ ಏಪ್ರಿಲ್ 14, ಜುಲೈ 14, ಸೆಪ್ಟೆಂಬರ್ 8 ಹಾಗೂ ಡಿಸೆಂಬರ್ 8ರಂದು ಲೋಕ್ ಅದಾಲತ್ ನಿಗದಿಯಾಗಿದೆ. ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ ಕಕ್ಷಿದಾರರು ಪ್ರತಿವಾದಿಗಳು ನೇರವಾಗಿ ಅಥವಾ ವಕೀಲರ ಮೂಲಕ ಭಾಗವಹಿಸಬಹುದಾಗಿದೆ ಎಂದರು.
ಲೋಕ್ ಅದಾಲತ್‍ನಲ್ಲಿ ರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುತ್ತದೆ. ಉಭಯ ಪಕ್ಷಕಾರರು ರಾಜೀ ಮಾಡಿಕೊಳ್ಳಲು ಮಾರ್ಗದರ್ಶನ ಮಾಡಲಾಗುತ್ತದೆ. ಇಬ್ಬರಿಗೂ ಒಪ್ಪಿಗೆಯಾಗುವಂತೆ ಪ್ರಕರಣ ತೀರ್ಮಾನವಾಗುವುದರಿಂದ ಬಾಂಧವ್ಯವೂ ಸಹ ಉಳಿಯುತ್ತದೆ ಎಂದು ನಂದೀಶ್ ಅವರು ತಿಳಿಸಿದರು.
ರಾಜೀ ಸಂಧಾನದ ಮೂಲಕ ಪ್ರಕರಣ ಇತ್ಯರ್ಥ ಪಡಿಸಿಕೊಂಡಲ್ಲಿ ನ್ಯಾಯಾಲಯಕ್ಕೆ ಪಾವತಿಸಲಾದ ಶುಲ್ಕವನ್ನು ಪೂರ್ಣವಾಗಿ ಮರು ಪಾವತಿಸಲಾಗುತ್ತದೆ. ಕಡಿಮೆ ಖರ್ಚಿನಲ್ಲಿ ಶೀಘ್ರ ಪ್ರಕರಣ ತೀರ್ಮಾನವಾಗುವುದು ಲೋಕ್ ಅದಾಲತ್‍ನ ವಿಶೇಷವಾಗಿದೆ. ಲೋಕ್ ಅದಾಲತ್‍ನಲ್ಲಿ ವ್ಯಾಜ್ಯಗಳನ್ನು ಇತ್ಯರ್ಥಪಡಿಸಿಕೊಳ್ಳುವುದರಿಂದ ನ್ಯಾಯಾಲಯದಲ್ಲಿ ಬಾಕಿ ಇರುವ ಇತರೆ ಗಂಭೀರ ಪ್ರಕರಣಗಳ ಇತ್ಯರ್ಥಕ್ಕೂ ಆದ್ಯ ಗಮನ ಹರಿಸಲು ಸಾಧ್ಯವಾಗಲಿದೆ ಎಂದರು.
ನ್ಯಾಯಾಲಯದಲ್ಲಿ ದಾಖಲಾಗದೆ ಇರುವ ಪ್ರಕರಣಗಳನ್ನು (ವ್ಯಾಜ್ಯಪೂರ್ವ) ಸಹ ರಾಜೀ ಸಂಧಾನದ ಮೂಲಕ ಲೋಕ್ ಅದಾಲತ್‍ನಲ್ಲಿ ಬಗÉಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ವ್ಯಾಜ್ಯಪೂರ್ವ ಪ್ರಕರಣಗಳಲ್ಲಿ ನ್ಯಾಯಾಲಯ ಶುಲ್ಕ ಕೊಡಬೇಕಾಗಿಲ್ಲ. ಲೋಕ್ ಅದಾಲತ್‍ನಲ್ಲಿ ಇಬ್ಬರೂ ಪಕ್ಷಕಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರಕರಣ ಇತ್ಯರ್ಥಪಡಿಸಲಾಗುತ್ತದೆ. ಆದರೆ ಬಲವಂತವಾಗಿ ಪಕ್ಷಕಾರರನ್ನು ಒಪ್ಪಿಸಲಾಗುವುದಿಲ್ಲ ಎಂದರು.
ಜಿಲ್ಲೆಯಲ್ಲಿ 8694 ಸಿವಿಲ್, 8196 ಕ್ರಿಮಿನಲ್ ಪ್ರಕರಣಗಳು ಸೇರಿದಂತೆ ಒಟ್ಟು 16890 ಪ್ರಕರಣಗಳು ಜಿಲ್ಲೆಯ ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕೆ ಬಾಕಿ ಉಳಿದಿವೆ. ಈ ಪೈಕಿ 1055 ಪ್ರಕರಣಗಳನ್ನು ಲೋಕ್ ಅದಾಲತ್‍ನಲ್ಲಿ ಕೈಗೆತ್ತಿಕೊಳ್ಳಲು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.
ಗಂಭೀರ ಪ್ರಕರಣಗಳನ್ನು ಹೊರತುಪಡಿಸಿ ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಬಹುದಾದ ಎಲ್ಲ ಸಿವಿಲ್, ಕ್ರಿಮಿನಲ್ ಪ್ರಕರಣಗಳನ್ನು ಲೋಕ್ ಅದಾಲತ್‍ನಲ್ಲಿ ತೀರ್ಮಾನಿಸಲಾಗುತ್ತದೆ. ನ್ಯಾಯಾಲಯದಲ್ಲಿ ನೀಡಲಾಗುವ ಡಿಕ್ರಿಯಷ್ಟೇ ಲೋಕ್ ಅದಾಲತ್‍ನಲ್ಲಿ ತೀರ್ಮಾನವಾಗುವ ಡಿಕ್ರಿಗೂ ಮಾನ್ಯತೆ ಇರುತ್ತದೆ. ಅಲ್ಲದೆ ಲೋಕ್ ಅದಾಲತ್‍ನಲ್ಲಿ ಇತ್ಯರ್ಥವಾದ ಪ್ರಕರಣದ ತೀರ್ಪು ಪ್ರಶ್ನಿಸಿ ಯಾವುದೇ ಮೇಲ್ಮನವಿ ಸಲ್ಲಿಸಲು ಅವಕಾಶವಿರುವುದಿಲ್ಲ. ಒಮ್ಮತದಿಂದ ಪ್ರಕರಣ ಇತ್ಯರ್ಥವಾಗುವುದಲ್ಲದೆ ಸಮಯ, ಹಣ ಉಳಿತಾಯವಾಗಲಿದೆ. ಹೀಗಾಗಿ ಜಿಲ್ಲೆಯ ಕಕ್ಷಿದಾರರು ರಾಷ್ಟ್ರೀಯ ಲೋಕ್ ಅದಾಲತ್ ಅನ್ನು ಪೂರ್ಣಪ್ರಮಾಣದಲ್ಲಿ ಪ್ರಯೋಜನ ಪಡೆದುಕೊಳ್ಳಬೇಕು ಎಂದು ನ್ಯಾಯಾಧೀಶರಾದ ಆರ್.ಪಿ. ನಂದೀಶ್ ಅವರು ತಿಳಿಸಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಉಮ್ಮತ್ತೂರು ಇಂದುಶೇಖರ್, ಕಾರ್ಯದರ್ಶಿ ಅರುಣ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
ಫಲಿತಾಂಶ ಸುಧಾರಣೆಗೆ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರ ಸಹಕಾರ ಅಗತ್ಯ : ಡಾ. ಗೀತಾ ಮಹದೇವಪ್ರಸಾದ್
ಚಾಮರಾಜನಗರ, ಫೆ. 01 - ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರ ಒಮ್ಮತದ ಸಹಕಾರದಿಂದ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣೆಗೆ ಶ್ರಮಿಸಿ ಕೀರ್ತಿ ತರಬೇಕೆಂದು ಸಕ್ಕರೆ, ಸಣ್ಣ ಕೈಗಾರಿಕೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಗೀತಾ ಮಹದೇವಪ್ರಸಾದ್ ಅವರು ತಿಳಿಸಿದರು.ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಜಿಲ್ಲಾ ಪಂಚಾಯತ್ ಹಾಗೂ ಶಿಕ್ಷಣ ಇಲಾಖೆ ವತಿಯಿಂದ ಎಸ್ ಎಸ್ ಎಲ್ ಸಿ ಫಲಿತಾಂಶ ಉತ್ತಮಪಡಿಸುವ ಸಂಬಂಧ ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಫಲಿತಾಂಶ ಸುಧಾರಣೆ ಹಾಗೂ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಕೇವಲ ಶಿಕ್ಷಕರದ್ದೇ ಹೊಣೆ ಎಂದು ಭಾವಿಸಬಾರದು. ಜತೆಗೆ ವಿದ್ಯಾರ್ಥಿಗಳು, ಪೋಷಕರ ಪಾತ್ರವೂ ಸಹ ಮುಖ್ಯವಾಗಿದೆ ಎಂಬುದನ್ನು ಮನಗಾಣಬೇಕು. ಎಲ್ಲರ ಸಹಕಾರ ಪರಿಶ್ರಮದಿಂದ ಜಿಲ್ಲೆಯು ಫಲಿತಾಂಶದಲ್ಲಿ ಗಣನೀಯ ಸಾಧನೆ ಮಾಡಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯೋನ್ಮುಖರಾಗಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.
ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರು ಹಾಗೂ ಸಮಾಲೋಚಕರಾಗಿ ಕಾರ್ಯ ನಿರ್ವಹಿಸಬೇಕು. ನಾನಾ ಸಂಕಷ್ಟಗಳನ್ನು ಅನುಭವಿಸಿದ ಕುಟುಂಬದಿಂದ ಬಂದ ವಿದ್ಯಾರ್ಥಿಗಳು ಶಾಲೆಯಲ್ಲಿರುತ್ತಾರೆ. ವಿದ್ಯಾರ್ಥಿಗಳಿಗೆ ಆರೋಗ್ಯಕರ ಸ್ಪರ್ಧಾ ವಾತಾವರಣವನ್ನು ಉಂಟುಮಾಡಿ ಒತ್ತಡ ಮುಕ್ತರಾಗಿ ಕಲಿಕೆಯಲ್ಲಿ ತೊಡಗಲು ಉತ್ತೇಜಿಸುವ ಜವಾಬ್ದಾರಿ ಶಿಕ್ಷಕ ಸಮೂಹ ನಿರ್ವಹಿಸಬೇಕೆಂದು ಉಸ್ತುವಾರಿ ಸಚಿವರು ಸಲಹೆ ಮಾಡಿದರು.
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಉನ್ನತ ಅಂಕ ಗಳಿಸುವ ಜಿಲ್ಲೆಯ ಮೊದಲ ಐವರು ವಿದ್ಯಾರ್ಥಿಗಳಿಗೆ ತಮ್ಮ ಸಂಗಮ ಟ್ರಸ್ಟ್‍ನಿಂದ ಮುಂದಿನ ಕಾಲೇಜು ಪ್ರವೇಶ, ಇನ್ನಿತರ ವ್ಯಾಸಂಗ ಸಂಬಂಧ ನೆರವು ನೀಡುವುದಾಗಿ ಉಸ್ತುವಾರಿ ಸಚಿವರು ಇದೇವೇಳೆ ಪ್ರಕಟಿಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಮಾತನಾಡಿ ಈ ಹಿಂದಿನ ಎಸ್ ಎಸ್ ಎಲ್ ಸಿ ಫಲಿತಾಂಶ ಅವಲೋಕಿಸಿದಾಗ ಗಣಿತ, ಇಂಗ್ಲೀಷ್ ಹಾಗೂ ಹಿಂದಿ ವಿಷಯಗಳಲ್ಲಿ ವಿದ್ಯಾರ್ಥಿಗಳು ಹಿನ್ನೆಡೆ ಇರುವುದು ಕಂಡುಬಂದಿದೆ. ಹೀಗಾಗಿ ಕಲಿಕೆಯಲ್ಲಿ ಹಿಂದೆ ಇರುವ ವಿಷಯಗಳಿಗೆ ಶಿಕ್ಷಕರು ವಿಶೇಷ ಆದ್ಯತೆ ನೀಡಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ. ಸದಾಶಿವಮೂರ್ತಿ ಮಾತನಾಡಿ ಶಿಕ್ಷಕರಿಗೆ ಶಾಲೆಯಲ್ಲಿ ಬೋಧನೆಗೆ ಹೆಚ್ಚು ಸಮಯ ಸಿಗಬೇಕು. ಶಾಲೆಯ ಇನ್ನಿತರ ಚಟುವಟಿಕೆಗಳಲ್ಲಿ ನೀಡುವ ಜವಾಬ್ದಾರಿ ಕಡಿಮೆಯಾಗಬೇಕು. ಖಾಸಗಿ ಅನುದಾನ ರಹಿತ ಶಾಲೆಗಳ ಪೈಕಿ ಶೇ.100ರಷ್ಟು ಫಲಿತಾಂಶ ಪಡೆದ ಶಾಲೆಗಳು ಸಾಕಷ್ಟಿವೆ. ಫಲಿತಾಂಶ ಸುಧಾರಣೆಗೆ ಖಾಸಗಿ ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ ವಹಿಸಲಾಗುವ ಕೆಲವು ಕ್ರಮಗಳನ್ನು ಎಲ್ಲ ಶಾಲೆಗಳು ಪಾಲನೆ ಮಾಡಬೇಕಿದೆ ಎಂದರು.
ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು ಮಾತನಾಡಿ ಶಾಲೆಗಳಲ್ಲಿ ಒತ್ತಡ ರಹಿತವಾಗಿ ಶಿಕ್ಷಕರಿಗೂ ಕಾರ್ಯ ನಿರ್ವಹಿಸಲು ಅನುವು ಮಾಡಿಕೊಡಬೇಕಿದೆ. ಪೋಷಕರು ಸಹ ಮಕ್ಕಳ ಕಲಿಕೆ ಗಮನಿಸಿ ಸೂಕ್ತ ಸಲಹೆ ಸಹಕಾರ ನೀಡಬೇಕಿದೆ ಎಂದರು.
ಜಿಲ್ಲಾ ಪಂಚಾಯತ್ ಕೃಷಿ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆರೆಹಳ್ಳಿ ನವೀನ್ ಮಾತನಾಡಿ ಈ ಬಾರಿಯ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಶೇ. 100ರಷ್ಟು ಫಲಿತಾಂಶ ಪಡೆಯುವ ಎಲ್ಲಾ ಶಾಲೆಗಳಿಗೆ ಉಸ್ತುವಾರಿ ಸಚಿವರಾಗಿದ್ದ ದಿವಂಗತ ಎಚ್.ಎಸ್. ಮಹದೇವಪ್ರಸಾದ್ ಅವರ ಹೆಸರಿನಲ್ಲಿ ತಾವು ವೈಯಕ್ತಿಕವಾಗಿ 5 ಸಾವಿರ ರೂ. ಉತ್ತೇಜನ ಬಹುಮಾನ ನೀಡುವುದಾಗಿ ಘೋಷಿಸಿದರು.
ಜಿಲ್ಲಾ ಪಂಚಾಯತ್ ಸದಸ್ಯರಾದ ಸಿ.ಎನ್. ಬಾಲರಾಜು ಮಾತನಾಡಿ ಶಾಲೆಗಳಲ್ಲಿ ಪೋಷಕರ ಸಭೆ ಕರೆಯಬೇಕು. ಯಾವ ವಿಷಯದಲ್ಲಿ ಮಕ್ಕಳು ಕಲಿಕೆಯಲ್ಲಿ ಹಿಂದಿದ್ದಾರೆ ಎಂಬುದನ್ನು ಶಿಕ್ಷಕರು ಗಮನಿಸಬೇಕು. ಅಂತಹ ವಿಷಯಗಳಿಗೆ ಹೆಚ್ಚು ಕಾಳಜಿ ವಹಿಸಬೇಕೆಂದು ಸಲಹೆ ಮಾಡಿದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಜೆ. ಯೋಗೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹನಾಧಿಕಾರಿ ಡಾ. ಕೆ. ಹರೀಶ್ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಡಿಡಿಪಿಐ ಮಹದೇವಪ್ಪ ಇತರರು ವೇದಿಕೆಯಲ್ಲಿ ಇದ್ದರು.
ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮ |
ಮಡಿವಾಳ ಮಾಚಯ್ಯನವರ ವಚನಗಳು ಸಾರ್ವಕಾಲಿಕ: ಡಾ. ಗೀತಾ ಮಹದೇವಪ್ರಸಾದ್
ಚಾಮರಾಜನಗರ, ಫೆ.01- ಮಡಿವಾಳ ಮಾಚಯ್ಯರವರು ರಚಿಸಿದ ವಚನಗಳು ಸರ್ವ ಕಾಲಕ್ಕೂ ನೀತಿ ಬೋಧನೆಗಳಿಗೆ ಅರ್ಹವಾಗಿದ್ದು ಶ್ರೇಷ್ಠವೆನಿಸಿದೆ ಎಂದು ಸಕ್ಕರೆ ಸಣ್ಣ ಕೈಗಾರಿಕೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಗೀತಾ ಮಹದೇವಪ್ರಸಾದ್‍ರವರು ತಿಳಿಸಿದರು.ನಗರದ ಜೆ ಹೆಚ್ ಪಟೇಲ್ ಸಭಾಂಗಣದಲ್ಲಿ ಇಂದು ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನಡೆದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
12ನೇ ಶತಮಾನದಲ್ಲಿ ದುರ್ಬಲರ ಶೋಷಣೆ, ಜಾತೀಯತೆ, ತಾರತಮ್ಯತೆ ಅಪಾರವಾಗಿದ್ದ ಸಂದರ್ಭದಲ್ಲಿ ಬಸವಾದಿ ಶರಣರು ಸಮಸಮಾಜ ನಿರ್ಮಾಣ ಮಾಡಲು ದೀಕ್ಷೆ ತೊಟ್ಟರು. ಬಸವಣ್ಣ ಅಲ್ಲಮಪ್ರಭು, ಡೋಹರ ಕಕ್ಕಯ್ಯ, ಮಾದಾರ ಚನ್ನಯ್ಯ, ಮಡಿವಾಳ ಮಾಚಯ್ಯ ಸೇರಿದಂತೆ ಹಲವು ಶರಣರು ತಮ್ಮ ವಚನ ಸಾಹಿತ್ಯದ ಮೂಲಕ ಸಮಾಜದ ಕಣ್ಣು ತೆರೆಸಿದರು ಎಂದರು.
ತ್ಯಾಗ ಮತ್ತು ನಿರಾಡಂಬರ ಜೀವನ ನಡೆಸಿದ ಶರಣ ಮಡಿವಾಳ ಮಾಚಯ್ಯ ಅವರದ್ದು ಉತ್ತಮ ವ್ಯಕ್ತಿತ್ವವಾಗಿತ್ತು ಕಾಯಕ ನಿಷ್ಠೆಯಿಂದ ಎಲ್ಲರ ಗಮನ ಸೆಳೆದ ಮಾಚಯ್ಯರವರು ಪ್ರಬಲ ಶಿವಭಕ್ತರು ಆಗಿದ್ದರು ಎಂದು ಸಚಿವರು ತಿಳಿಸಿದರು.
ಮಡಿವಾಳ ಸಮಾಜದವರು ಕಾರ್ಯಕ್ರಮದಲ್ಲಿ ಸಲ್ಲಿಸಿದ ಮನವಿಗೆ ಪ್ರತಿಕ್ರಿಯಿಸಿದ ಉಸ್ತುವಾರಿ ಸಚಿವರು ಬೇಡಿಕೆಗಳನ್ನು ಪರಿಶೀಲಿಸಿ ಕಾರ್ಯಗತಗೊಳಿಸುವ ಸಂಬಂಧ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದೆಂದು ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರಾದ ಸಿ ಪುಟ್ಟರಂಗಶೆಟ್ಟಿರವರು ಮಡಿವಾಳ ಮಾಚಯ್ಯನವರು ಶರಣರಲ್ಲೇ ಪ್ರಮುಖ ಶರಣರು. ಅಪಾರ ದೈವಭಕ್ತಿ ಉಳ್ಳವರಾಗಿದ್ದರು ಎಂದರು.
ಮಡಿವಾಳ ಸಮುದಾಯವು ಹಿಂದುಳಿದಿದೆ. ಈ ವರ್ಗದವರಿಗೆ ರಾಜಕೀಯ ಅವಕಾಶಗಳನ್ನು ಕಲ್ಪಿಸುವ ಸಲುವಾಗಿ ನಾಮಕರಣಗೊಳಿಸುವ ಸಂದರ್ಭದಲ್ಲಿ ಪರಿಗಣಿಸಲು ಶಿಫಾರಸ್ಸು ಮಾಡಲಾಗುವುದು. ಸಮುದಾಯದ ಸಮಸ್ಯೆ ಬೇಡಿಕೆ ಈಡೇರಿಕೆಗೆ ಮುಂದಾಗುವುದಾಗಿ ಶಾಸಕರಾದ ಪುಟ್ಟರಂಗಶೆಟ್ಟಿ ತಿಳಿಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ ರಾಮಚಂದ್ರ ಮಾತನಾಡಿ ರಾಜ್ಯಸರ್ಕಾರ ಸಮಾಜದ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮಡಿವಾಳ ಸಮುದಾಯ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಆರ್ಥಿಕವಾಗಿ ಮುಂದೆ ಬರಬೇಕು ಸಮುದಾಯದ ಅಭಿವೃದ್ಧಿಗೆ ನಾವು ಸಹ ಜತೆಯಲ್ಲಿರುತ್ತೇವೆ ಎಂದರು.
ಮುಖ್ಯ ಉಪನ್ಯಾಸ ನೀಡಿದ ಸಾಹಿತಿ ಸೋಮಶೇಖರ ಬಿಸಲವಾಡಿ ಅವರು ಮಡಿವಾಳ ಮಾಚಯ್ಯನವರು 12ನೇ ಶತಮಾನದಲ್ಲೇ ಸಂಸ್ಕøತ ಬಲ್ಲವರಾಗಿದ್ದರು. ವೇದ, ಉಪನಿಷತ್‍ಗಳನ್ನು ಕಲಿತು ಪ್ರಖರ ಪಂಡಿತರಾಗಿದ್ದರು. ಹೀಗಿದ್ದರೂ ಸಹ ತಮ್ಮ ಕಾಯಕವನ್ನು ಬಿಟ್ಟಿರಲಿಲ್ಲ. ಅತ್ಯಂತ ಪ್ರಾಮಾಣಿಕ ಹಾಗೂ ಸತ್ಯನಿಷ್ಠರಾಗಿದ್ದರು ಎಂದರು.
ನಗರಸಭೆ ಅಧ್ಯಕ್ಷರಾಧ ಶೋಭಾಪುಟ್ಟಸ್ವಾಮಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಜೆ ಯೋಗೇಶ್, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್ ವಿ ಚಂದ್ರು, ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ ಪಿ ಸದಾಶಿವಮೂರ್ತಿ, ಕೆರೆಹಳ್ಳಿ ನವೀನ್, ಎಪಿಎಂಸಿ ಅಧ್ಯಕ್ಷರಾದ ಬಿ ಕೆ ರವಿಕುಮಾರ್, ಜಿ.ಪಂ.ಸದಸ್ಯರಾದ ಸಿ ಎನ್ ಬಾಲರಾಜು, ಶಶಿಕಲಾ ಸೋಮಲಿಂಗಪ್ಪ, ಜಯಂತಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ ಹರೀಶ್‍ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ ಎಂ ಗಾಯತ್ರಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಮಹದೇವಯ್ಯ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
No comments:
Post a Comment