Friday, 12 January 2018

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಹಕ್ಕು ಆಕ್ಷೇಪಣೆ ಸಲ್ಲಿಕೆಗೆ ಜ. 22ರವರೆಗೂ ಕಾಲಾವಕಾಶ ವಿಸ್ತರಣೆ (12-01-2018)

   

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಹಕ್ಕು ಆಕ್ಷೇಪಣೆ ಸಲ್ಲಿಕೆಗೆ ಜ. 22ರವರೆಗೂ ಕಾಲಾವಕಾಶ ವಿಸ್ತರಣೆ 

ಚಾಮರಾಜನಗರ, ಜ. 12 - ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಹೆಸರು ಸೇರ್ಪಡೆ ಹಕ್ಕು ಆಕ್ಷೇಪಣೆ ಸಲ್ಲಿಕೆಗೆ ಜನವರಿ 22ರವರೆಗೂ ಕಾಲಾವಕಾಶ ವಿಸ್ತರಿಸಲಾಗಿದ್ದು ಜಿಲ್ಲೆಯ ಜನತೆ ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಬಿ. ರಾಮು ಮನವಿ ಮಾಡಿಕೊಂಡಿದ್ದಾರೆ.
ನಗರದ ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಯವರು ದಿನಾಂಕ 1.1.2018ಕ್ಕೆ ಅರ್ಹತಾ ದಿನಾಂಕ ನಿಗದಿಪಡಿಸಿ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿತ್ತು. ಈ ಸಂಬಂಧ ಹಕ್ಕು ಆಕ್ಷೇಪಣೆ ಸಲ್ಲಿಸಲು ಜನವರಿ 12ರವರೆಗೆ ಕಾಲಾವಕಾಶ ನೀಡಲಾಗಿತ್ತು. ಆದರೆ ಚುನಾವಣಾ ಆಯೋಗವು  ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಹಕ್ಕು ಆಕ್ಷೇಪಣೆ ಸಲ್ಲಿಸಲು ಮತ್ತಷ್ಟು ಅವಕಾಶ ನೀಡುವ ಸಲುವಾಗಿ ಜನವರಿ 22ರವರೆಗೂ ಕಾಲಾವಕಾಶ ವಿಸ್ತರಣೆ ಮಾಡಿದೆ ಎಂದರು.
18 ವರ್ಷ ತುಂಬಿದ ಅರ್ಹ ಮತದಾರರು ನಮೂನೆ 6ರ ಅರ್ಜಿಗಳನ್ನು ಸಂಬಂಧಿಸಿದ ತಹಸೀಲ್ದಾರ್ ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿ ಕಚೇರಿಯಿಂದ ಪಡೆದು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬಹುದು. ನಿಗದಿತ ದಿನಾಂಕದೊಳಗೆ ಮತದಾರರ ನೊಂದಣಾಧಿಕಾರಿ, ಸಹಾಯಕ ಮತದಾರರ ನೋಂದಣಾಧಿಕಾರಿ ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ, ತಹಸೀಲ್ದಾರ್ ಕಚೇರಿಯ ಚುನಾವಣಾ ಶಾಖೆಗೆ ಸಲ್ಲಿಸಬೇಕಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, 18 ವರ್ಷ ತುಂಬಿದ ಯುವ ಮತದಾರರನ್ನು ಪಟ್ಟಿಗೆ ಸೇರ್ಪಡೆ, ಮರಣ ಹೊಂದಿದ ಮತದಾರರ ಹೆಸರನ್ನು ಕೈಬಿಡುವುದು ವಿಶೇಷ ಆಂದೋಲನ ಕಾರ್ಯಕ್ರಮದಲ್ಲಿ ನಡೆಸಲಿದೆ. ವಿಶೇಷ ಆಂದೋಲನವನ್ನು ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆಮನೆಗೆ ಭೇಟಿ ನೀಡಿ ಮಾಡಲು ಸೂಚಿಸಲಾಗಿದೆ. ಈ ಸಂಬಂಧ ಮತಗಟ್ಟೆ ಮಟ್ಟದ ಅಧಿಕಾರಿಗಳ (ಬಿಎಲ್‍ಓ) ಸಭೆ ನಡೆಸಲಾಗುತ್ತದೆ ಎಂದರು.
ವಿಶೇಷ ಆಂದೋಲನ ಜನವರಿ 22ರವರೆಗೂ ನಡೆಯಲಿದೆ. ಹಕ್ಕು ಆಕ್ಷೇಪಣೆಗಳನ್ನು ಫೆಬ್ರವರಿ 12ರಂದು ಇತ್ಯರ್ಥಪಡಿಸಲಾಗುತ್ತದೆ. ಮತದಾರರ ಪಟ್ಟಿಗೆ ಹೆಸರುಗಳ ಸೇರ್ಪಡೆ, ಫೋಟೋಗಳ ಸೇರ್ಪಡೆ ಪೂರಕ ಪಟ್ಟಿಗಳನ್ನು ಫೆಬ್ರವರಿ 24ರಂದು ಸಿದ್ಧಪಡಿಸಲಾಗುತ್ತದೆ. ಅಂತಿಮ ಮತದಾರರ ಪಟ್ಟಿಯನ್ನು ಫೆಬ್ರವರಿ 28ರಂದು ಪ್ರಕಟಿಸಲಾಗುತ್ತದೆ.
ಮತದಾರರ ಪಟ್ಟಿಯಲ್ಲಿ ಕಂಡುಬರುವ ಲೋಪದೋಷಗಳನ್ನು ಸರಿಪಡಿಸಿ ಸಮರೋಪಾದಿಯಲ್ಲಿ ಕರ್ತವ್ಯ ನಿರ್ವಹಿಸಿ ಶೇ.100ರಷ್ಟು ದೋಷರಹಿತ ಮತದಾರರ ಪಟ್ಟಿಗೆ ಸಿದ್ಧತೆಗೆ ಎಲ್ಲಾ ಕ್ರಮ ವಹಿಸಲಾಗಿದೆ. ಮತದಾರರ ಪಟ್ಟಿಗೆ ಹಕ್ಕು ಆಕ್ಷೇಪಣೆಗಳನ್ನು ಸಲ್ಲಿಸಲು ಜನವರಿ 22ರವರೆಗೆ ಕಾಲಾವಕಾಶ ಇರುವುದರಿಂದ ಜಿಲ್ಲೆಯ ಜನತೆ ಈ ಅವಕಾಶವನ್ನು ಉಪಯೋಗಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಬಿ. ರಾಮು ಮನವಿ ಮಾಡಿಕೊಂಡರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಹರೀಶ್ ಕುಮಾರ್. ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ ಗಾಯತ್ರಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಜ. 17ರಂದು ಚಾ.ನಗರ ಸಭೆ ಸಾಮಾನ್ಯ ಸಭೆ

ಚಾಮರಾಜನಗರ, ಜ. 12  ಚಾಮರಾಜನಗರ ನಗರಸಭೆಯ ಸಾಮಾನ್ಯ ಸಭೆಯು ಜನವರಿ 17ರಂದು ಮಧ್ಯಾಹ್ನ 3 ಗಂಟೆಗೆ ನಗರಸಭೆ ಕಚೇರಿ ಸಭಾಂಗಣದಲ್ಲಿ ನಗರಸಭಾ ಅಧ್ಯಕ್ಷರಾದ ಶೋಭಾ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ನಗರಸಭೆ ಪೌರಾಯುಕ್ತರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜ. 18ರಂದು ಅಡುಗೆಯವರು, ಅಡುಗೆ ಸಹಾಯಕರ ಹುದ್ದೆಗೆ ಕೌನ್ಸೆಲಿಂಗ್

ಚಾಮರಾಜನಗರ, ಜ. 12 - ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಅಡುಗೆಯವರು ಹಾಗೂ ಅಡುಗೆ ಸಹಾಯಕರ ಹುದ್ದೆಗಳ ನೇಮಕಾತಿ ಸಂಬಂಧ ಅಂತಿಯ ಆಯ್ಕೆ ಪಟ್ಟಿಯಲ್ಲಿನ ಅಭ್ಯರ್ಥಿಗಳಿಗೆ ಜಿಲ್ಲಾ ಮಟ್ಟದ ಆಯ್ಕೆ ಸಮಿತಿ ವತಿಯಿಂದ ಜನವರಿ 18ರಂದು ನಗರದ ಸತ್ಯಮಂಗಲ ರಸ್ತೆಯಲ್ಲಿರುವ ಕೆ.ಎಸ್.ಆರ್.ಟಿ.ಸಿ. ಡಿಪೋ ಹತ್ತಿರದ ಡಿ. ದೇವರಾಜ ಅರಸು ಭವನದಲ್ಲಿ ಕೌನ್ಸೆಲಿಂಗ್ ನಡೆಸಲಾಗುವುದು.
ಅಡುಗೆಯವರ ಹುದ್ದೆಗೆ ಅಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಹಾಗೂ ಅಡುಗೆ ಸಹಾಯಕರ ಹುದ್ದೆಗೆ ಮಧ್ಯಾಹ್ನ 1.30 ರಿಂದ ಸಂಜೆ 5.30ರವರೆಗೆ ಕೌನ್ಸೆಲಿಂಗ್ ನಡೆಯಲಿದೆ.
ರಾಜ್ಯಾದ್ಯಂತ ಏಕರೂಪ ಮಾದರಿಯಲ್ಲಿ ಒಂದೇ ಸಮಯದಲ್ಲಿ ಕೌನ್ಸೆಲಿಂಗ್ ನಡೆಯಲಿರುವುದರಿಂದ ಅಭ್ಯರ್ಥಿಗಳು ಆಯಾ ಹುದ್ದೆಗೆ ನಿಗಧಿಪಡಿಸಿದ ಸಮಯಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಹಾಗೂ ಹೆಚ್ಚಿನ ಮಾಹಿತಿಗೆ ವೆಬ್ ಸೈಟ್ ತಿತಿತಿ.ಛಿhಚಿmಚಿಡಿಚಿರಿಚಿಟಿಚಿgಚಿಡಿ.ಟಿiಛಿ.iಟಿ ಸಂಪರ್ಕಿಸುವಂತೆ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಲೂಕುಗಳಿಗೆ ಲೋಕಾಯುಕ್ತ ಅಧಿಕಾರಿಗಳ ಭೇಟಿ : ನಾಗರಿಕರಿಂದ ದೂರು ಸ್ವೀಕಾರ

ಚಾಮರಾಜನಗರ, ಜ. 12- ಜಿಲ್ಲೆಯ ನಾಲ್ಕೂ ತಾಲೂಕುಗಳಿಗೆ ಲೋಕಾಯುಕ್ತ ಅಧಿಕಾರಿಗಳು ಜನವರಿ 20 ರಿಂದ 24ರವರೆಗೆ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಆಯಾ ತಾಲೂಕಿನ ಸರ್ಕಾರಿ ಅತಿಥಿಗೃಹದಲ್ಲಿ ಸಾರ್ವಜನಿಕರಿಂದ ದÀೂರುಗಳನ್ನು ಸ್ವೀಕರಿಸಲಿದ್ದಾರೆ.
ಜನವರಿ 20ರಂದು ಯಳಂದೂರು, 22ರಂದು ಕೊಳ್ಳೇಗಾಲ, 23ರಂದು ಚಾಮರಾಜನಗರ ಹಾಗೂ 24ರಂದು ಗುಂಡ್ಲುಪೇಟೆ ತಾಲೂಕಿನ ಸಾರ್ವಜನಿಕರಿಂದ ಕರ್ನಾಟಕ ಲೋಕಾಯುಕ್ತ ಕಾಯಿದೆಯಡಿ ಭರ್ತಿ ಮಾಡಿದ ಮತ್ತು ನೋಟರಿಯಿಂದ ಅಫಿಡವಿಟ್ ಮಾಡಿಸಿದ ಅರ್ಜಿಗಳನ್ನು ಸ್ವೀಕರಿಸುವರು.
ಸರ್ಕಾರಿ ಕಚೇರಿಗಳಲ್ಲಿ ವಿಳಂಬ ಹಾಗೂ ಇನ್ನಿತರ ತೊಂದರೆ ನೀಡುತ್ತಿರುವ ಸರ್ಕಾರಿ ಅಧಿಕಾರಿ, ನೌಕರರ ವಿರುದ್ಧ ಸಾರ್ವಜನಿಕರು ದೂರುಗಳನ್ನು ನಿಗದಿತ ಪ್ರಪತ್ರಗಳಲ್ಲಿ ಸಲ್ಲಿಸಬಹುದಾಗಿದ್ದು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಲೋಕಾಯುಕ್ತ ಪೊಲೀಸ್ ಇನ್ಸ್‍ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರÉ.

ಜ. 19ರಂದು ಚಾ.ನಗರ ತಾಲೂಕು ಮಟ್ಟದ ಯುವಜನ ಮೇಳ 

ಚಾಮರಾಜನಗರ, ಜ. 12 :- ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ಚಾಮರಾಜನಗರ ತಾಲೂಕು ಮಟ್ಟದ ಯುವಜನ ಮೇಳವನ್ನು ಜನವರಿ 19ರಂದು ಕರಿನಂಜನಪುರ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಏರ್ಪಡಿಸಲಾಗಿದ್ದು ಬೆಳಿಗ್ಗೆ 9 ಗಂಟೆಗೆ ತಾಲೂಕಿನ ವ್ಯವಸ್ಥಾಪಕರಲ್ಲಿ ವರದಿ ಮಾಡಿಕೊಳ್ಳುವಂತೆ ತಿಳಿಸಿದೆ.
ವೈಯಕ್ತಿಕವಾಗಿ ಭಾವಗೀತೆ, ಲಾವಣಿ, ರಂಗಗೀತೆ ಹಾಗೂ ಏಕಪಾತ್ರಾಭಿನಯ ಸ್ಪರ್ಧೆಗಳಿವೆ.
ಗುಂಪು ಸ್ಪರ್ಧೆಗಳಾಗಿ ಗೀಗೀ ಪದ (5 ಮಂದಿ), ಕೋಲಾಟ ಹಾಗೂ ಜಾನಪದ ನೃತ್ಯ (12 ಮಂದಿ), ಸೋಬಾನೆ ಪದ (4 ಮಂದಿ), ಭಜನೆ (8 ಮಂದಿ), ಜಾನಪದ ಗೀತೆ ಹಾಗೂ ಚರ್ಮವಾದ್ಯ ಮೇಳ (6 ಮಂದಿ) ಸ್ಪರ್ಧೆಗಳು ನಡೆಯಲಿವೆ.
ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಚೇರಿ (ದೂರವಾಣಿ ಸಂಖ್ಯೆ 08226-224932) ಅಥವಾ ಮೊಬೈಲ್ ಸಂಖ್ಯೆ 9482718278, 9880211027ನ್ನು ಸಂಪರ್ಕಿಸುವಂತೆ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
   

ಯುವಜನರು ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಜಾಗೃತಿ ಮೂಡಿಸಿ:ಡಿಸಿ

 ಚಾಮರಾಜನಗರ, ಜ.12 - ಜಿಲ್ಲೆಯಲ್ಲಿ 18 ವರ್ಷ ತುಂಬಿರುವ ಎಲ್ಲಾ ಅರ್ಹ ಯುವಜನರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಅಗತ್ಯ ಜಾಗೃತಿ ಉಂಟು ಮಾಡುವಂತೆ ಜಿಲ್ಲಾಧಿಕಾರಿ ಬಿ.ರಾಮು ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಮತದಾರರ ಜಾಗೃತಿ ಅಭಿಯಾನ ಹಿನ್ನೆಲೆಯಲ್ಲಿ ನಡೆದ ಕಾಲೇಜು ಪ್ರಾಂಶಪಾಲರ ಸಭೆಯಲ್ಲಿ ಅವರು ಮಾತನಾಡಿದರು.
ಚುನಾವಣೆ ಹಿನ್ನೆಲೆಯಲ್ಲಿ ಎಲ್ಲರು ಮತದಾನ ಮಾಡುವ ಮಹತ್ವದ ಬಗ್ಗೆ ತಿಳಿಸಿಕೊಡಬೇಕಿದೆ. 18 ವರ್ಷ ತುಂಬಿರುವ ಎಲ್ಲರನ್ನು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಬೇಕಿದೆ. ಮತದಾನ ಮಾಡುವ ಹಕ್ಕನ್ನು ನೀಡಿದ್ದು, ಇದರ ಬಗ್ಗೆ ಯುವಕರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು. ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿಲ್ಲದಿರುವ ವಿದ್ಯಾರ್ಥಿಗಳನ್ನು ಸೇರ್ಪಡೆಗೊಳಿಸುವುದು ಮತ್ತು ಕಾಲೇಜುಗಳಲ್ಲಿ ಮತದಾರರ ಸಾಕ್ಷರತೆ ಕ್ಲಬ್‍ಗಳನ್ನು ರಚಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪ್ರಸ್ತುತ ವಿದ್ಯುನ್ಮಾನ ಮತ ಯಂತ್ರಗಳನ್ನು (ಇ.ವಿ.ಎಂ) ಚುನಾವಣೆಯಲ್ಲಿ ಬಳಸಲಾಗುತ್ತಿದೆ. ಮತದಾರನು ತಾನು ಯಾರಿಗೆ ಮತ ಹಾಕಿದ್ದೇನೆ ಎಂಬುದನ್ನು ವಿ.ವಿ.ಪ್ಯಾಟ್‍ಗಳ ಮೂಲಕ ತಿಳಿದುಕೊಳ್ಳಲು ಅವಕಾಶವಿದೆ.              ಜಿಲ್ಲೆಯಲ್ಲಿ ಮೊದಲ ಬಾರಿಗೆ ವಿ.ವಿ.ಪ್ಯಾಟ್‍ನ್ನು ಕಳೆದ ಗುಂಡ್ಲುಪೇಟೆ ವಿಧಾನಸಭಾ ಉಪ ಚುನಾವಣೆಯಲ್ಲಿ ಬಳಸಲಾಗಿತ್ತು. ಈ ವಿ.ವಿ.ಪ್ಯಾಟ್ ಹಾಗೂ ಇ.ವಿ.ಎಂ ಬಗ್ಗೆ ನೂತನವಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗುವ ಯುವಜನರಿಗೆ ತಿಳಿವಳಿಕೆ ನೀಡುವ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ರಾಮು ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಹರೀಶ್‍ಕುಮಾರ್ ಅವರು ಮಾತನಾಡಿ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತಿದೆ. ಎಲ್ಲಾ ಶಾಲಾ ಕಾಲೇಜುಗಳಲ್ಲಿ ಮತದಾರರ ಸಾಕ್ಷರತೆ ಕ್ಲಬ್‍ಗಳನ್ನು ರಚಿಸಿ ವಿದ್ಯಾರ್ಥಿಗಳಿಗೆ ಮತದಾನದ ಪ್ರಾಮುಖ್ಯತೆ ಬಗ್ಗೆ ಹೆಚ್ಚಿನ ಅರಿವನ್ನು ಮೂಡಿಸಬೇಕು ಎಂದರು.
ವಿದ್ಯಾರ್ಥಿಗಳಿಗೆ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಮತದಾನದ ಮಹತ್ವ ಕುರಿತು ಚರ್ಚಾಸ್ಪರ್ಧೆ, ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ರಾಷ್ಟ್ರೀಯ ಮತದಾರರ ದಿನಾಚರಣೆಯಂದು ಬಹುಮಾನಗಳನ್ನು ವಿತರಿಸಲಾಗುವುದು. ಈ ಹಿನ್ನಲೆಯಲ್ಲಿ ಪ್ರಾಂಶುಪಾಲರು ಅಗತ್ಯ ಪ್ರಕ್ರಿಯೆಗೆ ಮುಂದಾಗಬೇಕೆಂದು ಹರೀಶ್ ಕುಮಾರ್ ಅವರು ನಿರ್ದೇಶನ ನೀಡಿದರು.
ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಮತದಾರರ ಸಾಕ್ಷರತ ಕ್ಲಬ್‍ಗಳನ್ನು ನಿರ್ವಹಣೆಗೆ ಸಮಾಜ ಶಾಸ್ತ್ರ ಶಿಕ್ಷಕರು, ಉಪನ್ಯಾಸಕರು ಅಥವಾ ಈ ಹಿಂದೆ ಚುನಾವಣಾ ಕರ್ತವ್ಯ ನಿರ್ವಹಿಸಿ ಅನುಭವ ಹೊಂದಿರುವ ಬೋಧಕರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಿಕೊಳ್ಳಬೇಕು. ಈ ಸಂಬಂಧ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಕಚೇರಿಗೆ ಮಾಹಿತಿ ನೀಡಬೇಕು ಎಂದು ಹರೀಶ್ ಕುಮಾರ್ ತಿಳಿಸಿದರು.
ಮತದಾರರ ಸಾಕ್ಷರತೆ ಕ್ಲಬ್‍ಗಳಿಗೆ ಇ.ವಿ.ಎಂ ಮತ್ತು ವಿ.ವಿ.ಪ್ಯಾಟ್‍ಗಳ ಬಳಕೆಯ ಬಗ್ಗೆ ಪ್ರಾಯೋಗಿಕವಾಗಿ ತಿಳಿಸಿಕೊಡಲಾಗುವುದು. ಜಿಲ್ಲೆಯಲ್ಲಿ ಹೆಚ್ಚಾಗಿ ಹಾಡಿಗಳಿದ್ದು, ಸಾಕ್ಷರತೆಯ ಪ್ರಮಾಣ ಕಡಿಮೆ ಇರುವಂತಹ ಹಾಡಿಗಳಲ್ಲಿ ವ್ಯಾಪಕವಾಗಿ ಅರಿವು ಮೂಡಿಸಲಾಗುವುದು ಎಂದು ಹರೀಶ್ ಕುಮಾರ್ ಅವರು ನುಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯತ್ರಿ ಮಾತನಾಡಿ ಕಾಲೇಜಿನಲ್ಲಿರುವ 18 ವರ್ಷ ತುಂಬಿದ ಎಲ್ಲಾ ವಿದ್ಯಾರ್ಥಿಗಳನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ನಮೂನೆ-6ನ್ನು ಭರ್ತಿಮಾಡಿ ಪ್ರಾಂಶಪಾಲರ ಸಹಿಯೊಂದಿಗೆ ಸಂಬಂಧಪಟ್ಟ ತಾಲ್ಲೂಕಿನ ತಹಶೀಲ್ದಾರ್‍ರವರ ಕಚೇರಿಗೆ ಸಲ್ಲಿಸಬೇಕೆಂದು ತಿಳಿಸಿದರು.
ಉಪ ವಿಭಾಗಾಧಿಕಾರಿ ಫೌಜಿಯಾ ತರನ್ನಮ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಮಹದೇವಪ್ಪ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಎಲ್ಲಾ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಕನ್ನಡ ಸಾಹಿತ್ಯಕ್ಕೆ ಶ್ರೀಮಂತ ಇತಿಹಾಸ:ಡಾ.ಗೀತ ಮಹದೇವಪ್ರಸಾದ್ 

ಚಾಮರಾಜನಗರ, ಜ.12:- ಕನ್ನಡ ಸಾಹಿತ್ಯಕ್ಕೆ ಶ್ರೀಮಂತ ಚರಿತ್ರೆಯಿದೆ. ಅದರ ವ್ಯಾಪ್ತಿ ಅತ್ಯಂತ ವಿಶಾಲವಾಗಿದೆ ಎಂದು ಸಕ್ಕರೆ ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಸಿ.ಮೋಹನಕುಮಾರಿ (ಗೀತಾ ಮಹದೇವಪ್ರಸಾದ್) ತಿಳಿಸಿದರು.
ಗುಂಡ್ಲುಪೇಟೆಯಲ್ಲಿ ಇಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆರಂಭಗೊಂಡ 8ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯಾವುದೇ ಭಾಷೆಯ ಸಾಹಿತ್ಯ ಜೀವಂತವಾಗಿದ್ದರೆ ಅದು ನಿಂತ ನೀರಾಗುವುದಿಲ್ಲ. ಬದಲಾಗಿ ಅದು ಸದಾ ಹರಿಯುವ ನೀರಿನಂತೆ ಸಮೃದ್ಧವಾಗಿರುತ್ತದೆ, ಕ್ರಿಯಾಶೀಲವಾಗಿರುತ್ತದೆ. ಪ್ರತಿಯೊಂದು ಕಾಲದಲ್ಲಿಯೂ ಸಾಹಿತ್ಯ ತನ್ನನ್ನು ತಾನು ಬದಲಾವಣೆಗೆ ಒಡ್ಡಿಕೊಳ್ಳುತ್ತದೆ. ಹೊಸದನ್ನು ಸೇರಿಸಿಕೊಂಡು ಹಳೆಯದನ್ನು ಸ್ಮರಿಸಿಕೊಂಡು ಮುಂದೆ ಸಾಗುತ್ತದೆ ಎಂದು ಸಚಿವರು ಅಭಿಪ್ರಾಯಪಟ್ಟರು.
ಪ್ರತಿಯೊಂದು ಸಾಹಿತ್ಯವೂ ಆಯಾ ದೇಶಗಳ, ಆಯಾ ಕಾಲಘಟ್ಟಗಳ ಜೊತೆ ಮುಖಾಮುಖಿಯಾಗುವುದರ ಮೂಲಕವೇ ರೂಪುಗೊಳ್ಳುತ್ತದೆ ಎಂದು ತಿಳಿಸಿದರು.
ಸಾಹಿತ್ಯವು ಸಮಾಜದ ಒಟ್ಟು ಪರಿಸ್ಥಿತಿಯ ಪ್ರಭಾವಕ್ಕೆ ಒಳಗಾಗಿಯೋ ಅಥವಾ ಆಯಾ ಸಾಮಾಜಿಕ ಮನಸ್ಥಿತಿಯನ್ನು ವಿರೋಧಿಸುವ ಹೋರಾಟದ ಫಲವಾಗಿಯೋ ರೂಪುಗೊಳ್ಳುತ್ತದೆ. ಆದರೆ ಸೃಜನಶೀಲ ಸಾಹಿತ್ಯ ಈ ಎರಡೂ ರೀತಿಯ ಒತ್ತಡಗಳನ್ನೂ ಮೀರಿ, ಅದರಾಚೆಗೆ ಸ್ವತಂತ್ರ ಅಭಿವ್ಯಕ್ತಿ ಪಡೆದುಕೊಳ್ಳುತ್ತದೆ ಎಂದು ಉಸ್ತುವಾರಿ ಸಚಿವರು ತಿಳಿಸಿದರು ಹೇಳಿದರು.
ಮುದ್ದುಮಾದಪ್ಪ ದತ್ತಿ ಪ್ರಶಸ್ತಿ ಪ್ರದಾನ ಮಾಡಿದ ಲೋಕಸಭಾ ಸದಸ್ಯರಾದ ಆರ್.ಧ್ರುವನಾರಾಯಣ ಮಾತನಾಡಿ, ಕನ್ನಡ ಭಾಷೆ, ನೆಲ ಜಲಕ್ಕೆ ಧಕ್ಕೆಯಾದಾಗ ಕನ್ನಡ ಪರ ಸಂಘಟನೆಗಳು ಪ್ರತಿಭಟನೆಯ ಮೂಲಕ ಹಾಗೂ ಕವಿಗಳು ಸಾಹಿತಿಗಳು ತಮ್ಮ ಬರಹಗಳ ಮೂಲಕ ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶಂಸಿದರು.
ಸಚಿವರಾದ ದಿ. ಮಹದೇವಪ್ರಸಾದ್ ಅವರು, ಕನ್ನಡ ಮತ್ತು ಸಂಸ್ಕøತಿ ಸಚಿವರಾಗಿದ್ದಾಗ ಜಿಲ್ಲಾ ಸಾಹಿತ್ಯ ಸಮ್ಮೇಳನಗಳಿಗೆ 5 ಲಕ್ಷ ರೂ. ಅನುದಾನ ನೀಡುವ ಮೂಲಕ ಪ್ರೋತ್ಸಾಹ ನೀಡಿದರು. ಅವರನ್ನು ನಾವಿಂದು ಸ್ಮರಿಸಿಕೊಳ್ಳಬೇಕು ಎಂದರು.
ಶೀಲಾ ಸತ್ಯೇಂದ್ರಸ್ವಾಮಿ ಅವರಿಗೆ ಮುದ್ದುಮಾದಪ್ಪ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರೊ. ಮಲೆಯೂರು ಗುರುಸ್ವಾಮಿ ಸ್ಮರಣ ಸಂಚಿಕೆ ಲೋಕಾರ್ಪಣೆ ಮಾಡಿದರು.
ಹಿರಿಯ ಸಾಹಿತಿ ಸಂಶೋಧಕ, ಜಿಜಿ. ಮಂಜುನಾಥನ್ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದರು. ಕಸಾಪ ಜಿಲ್ಲಾಧ್ಯಕ್ಷ ಬಿ.ಎಸ್. ವಿನಯ್, ಮಂಗಳಾ ಮುದ್ದುಮಾದಪ್ಪ, ಜಿ.ಪಂ. ಉಪಾದ್ಯಕ್ಷ ಯೋಗೇಶ್, ಸದಸ್ಯರಾದ ಕೆ.ಎಸ್. ಮಹೇಶ್, ಬಿ.ಕೆ. ಬೊಮ್ಮಯ್ಯ, ಚೆನ್ನಪ್ಪ, ಕಾಡಾ ಆಧ್ಯಕ್ಷ ಎಚ್.ಎಸ್. ನಂಜಪ್ಪ, ಮಾಜಿ ಅಧ್ಯಕ್ಷರಾದ ಎ.ಎಂ. ನಾಗಮಲ್ಲಪ್ಪ, ಸೋಮಶೇಖರ ಬಿಸಲವಾಡಿ, ತಾಲೂಕು ಅಧ್ಯಕ್ಷ ಚಿದಾನಂದಸ್ವಾಮಿ, ಮಲ್ಲಿಕಾರ್ಜುನಪ್ಪ, ನಾಗರಾಜಶರ್ಮನ್, ಗುರುಪ್ರಸಾದ್, ಜಿ. ರಾಜಪ್ಪ, ನವಮಿ ಬಂಡಿಗೆರೆ, ಪಳನಿಸ್ವಾಮಿ, ಬಾಹುಬಲಿ ಜಯರಾಜ್, ರೈತ ಸಂWದ ಮಹೇಶ್‍ಪ್ರಭು ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.




No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು