Wednesday, 17 January 2018

ಸಂಸದ ಧ್ರುವನಾರಾಯಣ ಅವರಿಂದ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಪರಿಶೀಲನೆ , ಹಳೆ ವಿದ್ಯುತ್ ತಂತಿ ಕಂಬ ಬದಲಿಸಲು ಜಿ.ಪಂ. ಅಧ್ಯಕ್ಷರ ಸೂಚನೆ(17-01-2018)


ಸಂಸದ ಧ್ರುವನಾರಾಯಣ ಅವರಿಂದ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಪರಿಶೀಲನೆ 
 ಚಾಮರಾಜನಗರ, ಜ. 17- ಜಿಲ್ಲೆಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 209 ವಿಸ್ತರಣೆ ಕಾಮಗಾರಿಯ ವಿವಿಧ ಸ್ಥಳಕ್ಕೆ ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.


ಬೆಂಗಳೂರಿನಿಂದ  ಚಾಮರಾಜನಗರ ಜಿಲ್ಲೆಯ ಮಾರ್ಗವಾಗಿ ತಮಿಳುನಾಡಿನ ದಿಂಡಿಗಲ್ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 209ರ ವಿಸ್ತರಣೆ ಕಾಮಗಾರಿಯು 1961.94 ಕೋಟಿ ರೂ.ಗಳಾಗಿದ್ದು ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ಕಾಮಗಾರಿ ಸ್ಥಳಗಳಿಗೆ ಧ್ರುವನಾರಾಯಣ ಅವರು ಭೇಟಿ ಕೊಟ್ಟು ವೀಕ್ಷಣೆ ಮಾಡಿದರು.
ಮೊದಲಿಗೆ ನಗರದ ಹೊರವಲಯ ಸೋಮವಾರಪೇಟೆ ಬಳಿ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿದರು. ಹಲಹೊತ್ತು ನಿಂತು ಅಲ್ಲಿನ ಕಾಮಗಾರಿಯನ್ನು ವೀಕ್ಷಿಸಿ ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಿದರು. ಬಳಿಕ ನಂಜನಗೂಡು-ಮೈಸೂರು ಮುಖ್ಯ ರಸ್ತೆಯ ಬಳಿ ತೆರಳಿ ಅಲ್ಲಿಯೂ ಕಾಮಗಾರಿ ನಿರ್ವಹಣೆ ಸಂಬಂಧ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಬಳಿಕ ದೊಡ್ಡರಾಯಪೇಟೆ ಬಳಿ ನಿರ್ಮಾಣವಾಗಲಿರುವ ಬೈಪಾಸ್ ರಸ್ತೆ ಕಾಮಗಾರಿ ಸ್ಥಳಕ್ಕೆ ಭೇಟಿ ಕೊಟ್ಟು ಪ್ರಗತಿಯಲ್ಲಿರುವ ಕೆಲಸವನ್ನು ಪರಿಶೀಲಿಸಿದರು. ತದನಂತರ ಸಂತೆಮರಹಳ್ಳಿ ಬಳಿಯೂ ಬೈಪಾಸ್ ನಿರ್ಮಾಣಕ್ಕೆ ಗುರುತಿಸಲÁಗಿರುವ ಜಾಗಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಕಾಮಗಾರಿ ನಿರ್ವಹಣೆ ಸಂಬಂಧ ಅಗತ್ಯ ಸೂಚನೆಯನ್ನು ಧ್ರುವನಾರಾಯಣ ಅವರು ನೀಡಿದರು.
ರಾಷ್ಟ್ರೀಯ ಹೆದ್ದಾರಿ 209 ವಿಸ್ತರಣೆ ಕಾಮಗಾರಿ ಕುರಿತು ಸುದ್ದಿಗಾರರಿಗೆ ವಿವರ ನೀಡಿದ ಧ್ರುವನಾರಾಯಣ ಅವರು ಒಟ್ಟು ರಸ್ತೆ ನಿರ್ಮಾಣಕ್ಕೆ 1008 ಕೋಟಿ ರೂ. ಹಾಗೂ ಭೂಸ್ವಾಧೀನಕ್ಕಾಗಿ 953.94 ಕೋಟಿ ರೂ.ಗಳನ್ನು ನಿಗದಿ ಮಾಡಲಾಗಿದೆ. ಜಿಲ್ಲೆಯಲ್ಲಿ 67.400 ಕಿ.ಮೀ. ಉದ್ದದಷ್ಟು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯಾಗಲಿದೆ. 2 ತಿಂಗಳ ಹಿಂದೆಯೇ ಕಾಮಗಾರಿ ಆರಂಭವಾಗಿತ್ತು. ಇದುವರೆಗೆ 44 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದರು.
ಬೆಂಗಳೂರಿನಿಂದ ಕನಕಪುರದವರೆಗೆ ಚತುಷ್ಪಥ ಹೆದ್ದಾರಿಯಾಗಿ ಅಭಿವೃದ್ಧಿಗೊಳ್ಳಲಿದೆ. ಚಾಮರಾಜನಗರ ತಾಲೂಕಿನಲ್ಲಿ 7.570 ಕಿ.ಮೀ., ಕೊಳ್ಳೇಗಾಲ ತಾಲೂಕಿನಲ್ಲಿ 8.060 ಕಿ.ಮೀ, ಸತ್ತೇಗಾಲ ಬಳಿ 6.580 ಕಿ.ಮೀ.ನಷ್ಟು ಬೈಪಾಸ್ ನಿರ್ಮಾಣವಾಗಲಿದೆ. ಒಟ್ಟಾರೆ 42.14 ಕಿ.ಮೀ. ನಷ್ಟು ಬೈಪಾಸ್ ನಿರ್ಮಾಣವಾಗಲಿದೆ ಎಂದು ಧ್ರುವನಾರಾಯಣ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 3 ಬೃಹತ್ ಸೇತುವೆಗಳು ನಿರ್ಮಾಣವಾಗಲಿವೆ. ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ, ಮುಡಿಗುಂಡ ಹಾಗೂ ಚಾಮರಾಜನಗರ ತಾಲೂಕಿನ ಚಿಕ್ಕಹೊಳೆ ಬಳಿ ಈ ಬೃಹತ್ ಸೇತುವೆಗಳನ್ನು ನಿರ್ಮಿಸಲಾಗುತ್ತದೆ. 12 ಕಿರು ಸೇತುವೆಗಳು ನಿರ್ಮಾಣಗೊಳ್ಳಲಿವೆ. ಅಲ್ಲದೆ ಒಂದು ರೈಲ್ವೆ ಮೇಲು ಸೇತುವೆ, 3 ವೆಹಿಕಲ್ ಅಂಡರ್ ಪಾಸ್ ಸಹ ಬರಲಿದೆ ಎಂದು ಲೋಕಸಭಾ ಸದಸ್ಯರು ತಿಳಿಸಿದರು.
ಚಾಮರಾಜನಗರ ಸಮೀಪ ರೈಲು ಹಳಿಯನ್ನು ದಾಟಿ ಬೈಪಾಸ್ ಹಾದುಹೋಗಲಿದ್ದು ಇಲ್ಲಿಯೇ ರೈಲ್ವೆ ಮೇಲು ಸೇತುವೆ ನಿರ್ಮಾಣವಾಗಲಿದೆ. 193 ಕನ್ವರ್ಟ್‍ಗಳು ನಿರ್ಮಾಣಗೊಳ್ಳಲಿವೆ. ಒಟ್ಟಾರೆ ರಾಷ್ಟ್ರೀಯ ಹೆದ್ದಾರಿ 209ರ ಅಭಿವೃದ್ಧಿಯಿಂದ ಜಿಲ್ಲೆಯ ಬೆಳವಣಿಗೆಗೆ ಅನುಕೂಲವಾಗಲಿದೆ ಎಂದು ಧ್ರುವನಾರಾಯಣ ಅವರು ತಿಳಿಸಿದರು.
ಹೆದ್ದಾರಿ ಭೂಸ್ವಾಧೀನಕ್ಕಾಗಿ ಕೊಳ್ಳೇಗಾಲ ತಾಲೂಕಿನಲ್ಲಿ 19.71 ಕೋಟಿ ರೂ., ಯಳಂದೂರು ತಾಲೂಕಿನಲ್ಲಿ 16.62, ಚಾಮರಾಜನಗರ ತಾಲೂಕಿನಲ್ಲಿ 39.34 ಕೋಟಿ ರೂ.ಗಳನ್ನು ಪರಿಹಾರÀವಾಗಿ ನೀಡಲಾಗುತ್ತದೆ. ಇದುವರೆಗೆ ಕೊಳ್ಳೇಗಾಲ ತಾಲೂಕಿಗೆ 8.54 ಕೋಟಿ ರೂ., ಯಳಂದೂರಿಗೆ 3.56 ಕೋಟಿ. ರೂ., ಚಾಮರಾಜನಗರ ತಾಲೂಕಿಗೆ 14.97 ಕೋಟಿ ರೂ. ಪರಿಹಾರವಾಗಿ ವಿತರಿಸಲಾಗಿದೆ ಎಂದು ಧ್ರುವನಾರಾಯಣ ವಿವರಿಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ.ರಾಮಚಂದ್ರ, ನಗರಸಭೆ ಅಧ್ಯಕ್ಷರಾದ ಶೋಭಾ ಪುಟ್ಟಸ್ವಾಮಿ, ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪ, ಎಪಿಎಂಸಿ ಅಧ್ಯಕ್ಷರಾದ ಬಿ.ಕೆ. ರವಿಕುಮಾರ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನೆ ವ್ಯವಸ್ಥಾಪಕ ಶ್ರೀಧರ್, ರವೀಂದ್ರನಾಥ್, ಇತರೆ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

ಜ. 18ರಂದು ಶಿವಯೋಗಿ ಸಿದ್ಧರಾಮ, ಮಹಾಯೋಗಿ ವೇಮನ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಿದೇವ ಜಯಂತಿ ಆಚರಣೆ ಪೂರ್ವಭಾವಿ ಸಭೆ 

ಚಾಮರಾಜನಗರ, ಜ. 17 - ಜಿಲ್ಲಾ ಹಾಗೂ ತಾಲೂಕು ಕೇಂದ್ರದಲ್ಲಿ ಶಿವಯೋಗಿ ಸಿದ್ಧರಾಮ, ಮಹಾಯೋಗಿ ವೇಮನ, ಅಂಬಿಗರ ಚೌಡಯ್ಯ ಮತ್ತು ಮಡಿವಾಳ ಮಾಚಿದೇವರ ಜಯಂತಿ ಆಚರಿಸುವ ಸಂಬಂಧ ಚರ್ಚಿಸುವ ಸಲುವಾಗಿ ಜನವರಿ 18ರಂದು ಮಧ್ಯಾಹ್ನ 3 ಗಂಟೆಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೆ ಕೆಡಿಪಿ ಸಭಾಂಗಣದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ.
ಈ ನಾಲ್ಕೂ ಜಯಂತಿಗಳನ್ನು ಹಮ್ಮಿಕೊಳ್ಳುವ ಸಂಬಂಧ ನಡೆಯಲಿರುವ ಪೂರ್ವಭಾವಿ ಸಭೆಗೆ ವಿವಿಧ ಸಂಘಸಂಸ್ಥೆಯ ಮುಖಂಡರು, ಕನ್ನಡಪರ ಸಂಸ್ಥೆಯ ಮುಖಂಡರು, ಸಮುದಾಯ ಪ್ರತಿನಿಧಿಗಳು, ಮುಖಂಡರು, ನಾಗರಿಕರು ಹಾಜರಾಗಿ ಸಲಹೆ ನೀಡುವಂತೆ ಜಿಲ್ಲಾಡಳಿತದ ಪ್ರಕಟಣೆ ಕೋರಿದೆ.
   

ಗ್ರಾಮೀಣ ಭಾಗಗಳಲ್ಲಿ ಮತದಾರರ ಪಟ್ಟಿಗೆ ಅರ್ಹರ ಸೇರ್ಪಡೆಗೆ ಜಾಗೃತಗೊಳಿಸಲು ಸಿ.ಇ.ಒ ಸೂಚನೆ 

ಚಾಮರಾಜನಗರ, ಜ.12 - ಗ್ರಾಮೀಣ ಭಾಗಗಳಲ್ಲಿ ಅರ್ಹ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ವ್ಯಾಪಕವಾಗಿ ತಿಳಿವಳಿಕೆ ನೀಡಲು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮುಂದಾಗುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಹರೀಶ್‍ಕುಮಾರ್ ಸೂಚಿಸಿದರು.
ಮತದಾರರ ಜಾಗೃತಿ ಅಭಿಯಾನ ಅಂಗವಾಗಿ ಯಳಂದೂರು, ಕೊಳ್ಳೇಗಾಲ ಮತ್ತು ಚಾಮರಾಜನಗರ ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಪ್ರತ್ಯೇಕವಾಗಿ ನಡೆದ ಪಿ.ಡಿ.ಒ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಂಘ ಸಂಸ್ಥೆಯ ಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಜನವರಿ 22 ರವರೆಗೆ ಚುನಾವಣಾ ಆಯೋಗದಿಂದ ಕಡ್ಡಾಯವಾಗಿ ಅರ್ಹ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಮತ್ತು ದೋಷಗಳಿದ್ದಲ್ಲಿ ಸರಿಪಡಿಸಲು ಸೂಚನೆ ನೀಡಲಾಗಿದೆ. ಎಲ್ಲಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಈ ಬಗ್ಗೆ ಜನರಿಗೆ ಅರಿವನ್ನು ಮೂಡಿಸಬೇಕಾಗಿರುವುದರಿಂದ ಗ್ರಾಮಗಳಲ್ಲಿ ಟಾಂ ಟಾಂ ಮೂಲಕ ಪ್ರಚುರಪಡಿಸುವಂತೆ ಹರೀಶ್ ಕುಮಾರ್ ಅವರು ನಿರ್ದೇಶನ ನೀಡಿದರು.
ಆಶಾ ಕಾರ್ಯಕತೆಯರು, ಅಂಗನವಾಡಿ ಕಾರ್ಯಕತೆಯರು ಹಾಗೂ ಸಂಘ ಸಂಸ್ಥೆಯ ಪ್ರತಿನಿಧಿಗಳು ಗ್ರಾಮೀಣಾ ಭಾಗಗಳಲ್ಲಿ ಮನೆ ಮನೆಗೆ ತೆರಳಿ ಅರ್ಹ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಮತ್ತು ವಿಳಾಸಗಳಲ್ಲಿ ದೋಷಗಳಿದ್ದಲ್ಲಿ ಸರಿಪಡಿಸಿಕೊಳ್ಳಲು ಮನವರಿಕೆ ಮಾಡಿಕೊಡಬೇಕು ಎಂದರು.
ಮರಣ ಅಥವಾ ಎರಡು ಕಡೆ ಮತದಾರರ ಪಟ್ಟಿಯಲ್ಲಿ ಇರುವಂತಹ ಹೆಸರುಗಳನ್ನು ತೆಗೆದು ಹಾಕಲು ಸಂಬಂಧಪಟ್ಟ ನಮೂನೆಗಳನ್ನು ಅಗತ್ಯ ಮಾಹಿತಿಯೊಂದಿಗೆ ಭರ್ತಿ ಮಾಡಿ ಸಂಬಂಧಪಟ್ಟ ಮತಗಟ್ಟೆ ಅಧಿಕಾರಿ ಅಥವಾ ತಾಲ್ಲೂಕು ಕಚೇರಿಗೆ ಸಲ್ಲಿಸುವಂತೆ ತಿಳಿಸಬೇಕು. ಎಲ್ಲರಿಗೂ ಮತದಾನದ ಮಹತ್ವದ ಬಗ್ಗೆ ತಿಳಿಸಿಕೊಟ್ಟು ಪ್ರತಿಯೊಬ್ಬರು ಸಕ್ರಿಯವಾಗಿ ಪಾಲ್ಗೊಳ್ಳವಂತೆ ಅರಿವು ಮೂಡಿಸಬೇಕು ಎಂದು ಹರೀಶ್ ಕುಮಾರ್ ಅವರು ತಿಳಿಸಿದರು.
ಕೊಳ್ಳೇಗಾಲ ತಾಲ್ಲೂಕು ಕೇಂದ್ರದ ಗುರುಭವನದಲ್ಲಿ ನಡೆದ ಮತಗಟ್ಟೆ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿ.ಇ.ಒ ರವರು ಅರ್ಹ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸುವುದು ಮತ್ತು ಮರಣ ಅಥವಾ ಎರಡು ಕಡೆ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿರುವುದನ್ನು ತೆಗೆದು ಹಾಕಲು ಕ್ರಮ ತೆಗೆದುಕೊಳ್ಳಬೇಕು.  ಎಲ್ಲಾ ಮತಗಟ್ಟೆ ಅಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಂದ ನಮೂನೆ-6,7,8 ಮತ್ತು ನಮೂನೆ(8ಎ) ಗಳನ್ನು ಪಡೆದು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಇತರೆ ಪ್ರಕ್ರಿಯೆಯನ್ನು ಮನೆ ಮನೆಗೆ ತೆರಳಿ ನಿರ್ವಹಿಸಬೇಕೆಂದು ಸೂಚಿಸಿದರು.
ಉಪ ವಿಭಾಗಾಧಿಕಾರಿ ಫೌಜಿಯಾ ತರನಮ್ ಮಾತನಾಡಿ ಮತಗಟ್ಟೆ ಅಧಿಕಾರಿಗಳು ಗ್ರಾಮಗಳಲ್ಲಿ ಜನರ ಜೊತೆ ಹೆಚ್ಚಿನ ಸಂಪರ್ಕ ವಿಟ್ಟುಕೊಳ್ಳಬೇಕು. ನಿಮ್ಮ ಮತಗಟ್ಟೆಯ ವ್ಯಾಪ್ತಿಯಲ್ಲಿ ಇರುವಂತಹ ಅಂಗನವಾಡಿ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ನಿಮ್ಮ ವಿವರಗಳನ್ನು ದೊರವಾಣಿ ಸಂಖ್ಯೆಯ ಸಮೇತ ನಾಮಫಲಕದಲ್ಲಿ ಹಾಕಬೇಕೆಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎನ್.ಮುನಿರಾಜಪ್ಪ, ಮುಖ್ಯ ಯೋಜನಾಧಿಕಾರಿ ಮಾದೇಶು, ಮುಖ್ಯ ಲೆಕ್ಕಾಧಿಕಾರಿ ಬಸವರಾಜು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಶಿಧರ್, ಪ್ರಕಾಶ್, ರಮೇಶ್ ಇತರರು ಉಪಸ್ಥಿತರಿದ್ದರು.
   

ಹಳೆ ವಿದ್ಯುತ್ ತಂತಿ ಕಂಬ ಬದಲಿಸಲು ಜಿ.ಪಂ. ಅಧ್ಯಕ್ಷರ ಸೂಚನೆ

ಚಾಮರಾಜನಗರ, ಜ. 17 - ಜಿಲ್ಲೆಯಲ್ಲಿ ಹಳೆಯ ಕಬ್ಬಿಣದ  ಹಾಗೂ ಮರದ ವಿದ್ಯುತ್ ಕಂಬಗಳನ್ನು ಬದಲಿಸದ ಕಾರಣ ರೈತರ ಜಮೀನುಗಳಲ್ಲಿ ವಿದ್ಯುತ್ ತಂತಿ ಬಿದ್ದು, ಬೆಳೆ ಹಾನಿ ಪ್ರಾಣಹಾನಿಯಂತಹ ಪ್ರಕರಣಗಳು ಸಂಭವಿಸುತ್ತಿದೆ. ಈ ಬಗ್ಗೆ ಅಧಿಕಾರಿಗಳು ಮುನ್ನೆಚ್ಚರಿಕೆಯಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಸೂಚನೆ ನೀಡಿದರು.
      ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ಮಾಸಿಕ ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ವಿದ್ಯುತ್  ಇಲಾಖೆಯಲ್ಲಿ ಅನುದಾನದ ಸಮಸ್ಯೆಯಿಲ್ಲ. ಅನುದಾನ ಲಭ್ಯ ಇರುವಾಗ ಕಂಬ ತಂತಿ ಬದಲಿಸಲು ನಿಮಗೇನು ತೊಂದರೆ? ನಿಮ್ಮ ಲೈನ್‍ಮೆನ್‍ಗಳು ಏನು ಮಾಡುತ್ತಿದ್ದಾರೆ ಎಂದು ಸೆಸ್ಕ್ ಎಇಇ ಅವರನ್ನು ಪ್ರಶ್ನಿಸಿದರು.
      ಉಪಾಧ್ಯಕ್ಷರಾದ ಯೋಗೇಶ್ ಅವರು ಮಾತನಾಡಿ, ಬೇಸಿಗೆ ಕಾಲ ಆರಂಭವಾಗುತ್ತಿದೆ. ಈ ಸಮಯದಲ್ಲಿ ಕಬ್ಬಿನ ಗದ್ದೆಗಳಲ್ಲಿ ವಿದ್ಯುತ್ ತಂತಿಗಳು ಕಳಚಿ ಬಿದ್ದು, ವರ್ಷದಿಂದ ಬೆಳೆದ ಬೆಳೆಗೆ ಬೆಂಕಿ ತಗುಲುತ್ತದೆ. ಹೀಗೆ ಬೆಂಕಿ ತಗುಲಿ ಉಳಿದುಕೊಂಡ ಕಬ್ಬಿಗೂ ಸಕ್ಕರೆ ಕಾರ್ಖಾನೆಯವರು ಸರಿಯಾದ ಬೆಲೆ ನೀಡುವುದಿಲ್ಲ. ಇದರಿಂದ ರೈತರಿಗೆ ಬಹಳ ಅನ್ಯಾಯವಾಗುತ್ತಿದೆ. ಚಾಮುಂಡೇಶ್ವರಿ ವಿದ್ಯುತ್ ನಿಗಮ (ಸೆಸ್ಕ್) ಅಧಿಕಾರಿಗಳು ಹಳೆಯ ಕಂಬಗಳನ್ನ ಬದಲಿಸಬೇಕು. ವಿದ್ಯುತ್ ತಂತಿ ಜೋಲಾಡುತ್ತಿದ್ದರೆ ಅದನ್ನು ಸರಿಪಡಿಸಬೇಕು ಎಂದರು.
      ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆರೆಹಳ್ಳಿ ನವೀನ್ ಮಾತನಾಡಿ ಈ ಹಿಂದಿನಿಂದಲೂ ಮರದ, ಕಬ್ಬಿಣದ, ಹಾಗೂ ಟೊಳ್ಳಾದ ವಿದ್ಯುತ್ ಕಂಬಗಳನ್ನು ತೆಗೆಸಿಹಾಕಲಾಗುವುದು ಎಂದು ಅಧಿಕಾರಿಗಳು ಹೇಳುತ್ತಲೇ ಬಂದಿದ್ದಾರೆ. ಆದರೆ ಸರಿಯಾದ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ತೀವ್ರ ಅಸಮಧಾನ ವ್ಯಕ್ತಪಡಿಸಿದರು.
     ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ಅರಸು ಅಭಿವೃದ್ಧಿ ನಿಗಮದಲ್ಲಿ ಕೊರೆಸಲಾದ ಬೋರ್‍ವೆಲ್‍ಗಳಿಗೆ ನಿಗದಿತ ವೇಳೆಗೆ ವಿದ್ಯುತ್ ಸಂಪರ್ಕ ನೀಡಿಲ್ಲ. ಇದರಿಂದ ಫಲಾನುಭವಿಗಳಿಗೆ ಸರ್ಕಾರ ಸೌಲಭ್ಯ ನೀಡಿದರೂ, ಅದು ತಲುಪುತ್ತಿಲ್ಲ ಎಂದು ನವೀನ್ ದೂರಿದರು.
     ಅಧ್ಯಕ್ಷ ರಾಮಚಂದ್ರ ಅವರು ಸೆಸ್ಕ್ ಎಇಇ ಗೆ ಸೂಚನೆ ನೀಡಿ, ಕೂಡಲೇ ಹಳೆಯ ಶಿಥಿಲ ಮರದ, ಕಬ್ಬಿಣದ ವಿದ್ಯುತ್ ಕಂಬಗಳನ್ನು ಬದಲಿಸಲು ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು. ಅಂಬೇಡ್ಕರ್ ನಿಗಮ ಇತ್ಯಾದಿ ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ಆದ್ಯತೆಯ ಮೇಲೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು  ಎಂದು ಸೂಚಿಸಿದರು.
    ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಹರೀಶ್‍ಕುಮಾರ್ ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಎಷ್ಟು ಮಂದಿ ನಕಲಿ ವೈದ್ಯರಿದ್ದಾರೆ? ಅವರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ? ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯವರನ್ನು ಪ್ರಶ್ನಿಸಿದರು.
     ಡಿಎಚ್‍ಓ ಡಾ. ಪ್ರಸಾದ್ ಉತ್ತರಿಸಿ ಕಳೆದ ವರ್ಷ ನಾಲ್ವರು ವೈದ್ಯರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ. ಅದರಲ್ಲಿ ಓರ್ವ ಶಿಕ್ಷಕರೂ ಇದ್ದಾರೆ ಎಂದರು. ಇತ್ತೀಚಿಗೆ ತೆರಕಣಾಂಬಿಯಲ್ಲಿ ಖಾಸಗಿ ವೈದ್ಯೆಯರೊಬ್ಬರ ಬಗ್ಗೆ ಆರೋಪ ಕೇಳಿಬಂದಿತ್ತು. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದರು.
 



















No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು