ಜನತಂತ್ರ ಯಶಸ್ವಿಗೆ ಸಕ್ರಿಯ ಪಾಲ್ಗೊಳ್ಳುವಿಕೆ ಅವಶ್ಯ : ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್.ಪಿ. ನಂದೀಶ್ ಅಭಿಮತ
ಚಾಮರಾಜನಗರ, ಜ. 25 - ಪ್ರಜಾಪ್ರಭುತ್ವ ವ್ಯವಸ್ಥೆ ಯಶಸ್ವಿಯಾಗಬೇಕಾದರೆ ಪ್ರತಿಯೊಬ್ಬ ಮತದಾರ ಸಕ್ರಿಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಅವÀಶ್ಯಕವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್.ಪಿ. ನಂದೀಶ್ ಅವರು ತಿಳಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಚುನಾವಣಾ ಆಯೋಗ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಮತದಾರರ ದಿನ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಅಭಿವೃದ್ಧಿ ಹಾಗೂ ಜನತಂತ್ರ ವ್ಯವಸ್ಥೆ ಸರಿಯಾಗಿ ನಡೆಯಬೇಕಿದ್ದರೆ ಪ್ರತಿಯೊಬ್ಬರೂ ಸಹ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ಮತದಾನದ ಮೂಲಕ ಜನರು ತಮ್ಮ ಧ್ವನಿಯನ್ನು ಎತ್ತಬಹುದು. ಪ್ರಜಾಪ್ರಭುತ್ವ ಬಲವರ್ಧನೆ ಹೆಚ್ಚು ಜನರ ಭಾಗವಹಿಸುವಿಕೆಯಿಂದ ಸಾಧ್ಯವಾಗಲಿದೆ. ಈ ಮೂಲಕ ಜನತಂತ್ರದ ಘನತೆಯನ್ನು ಎತ್ತಿ ಹಿಡಿಯಬೇಕು ಎಂದರು.ಚುನಾವಣೆ ಸಂದರ್ಭದಲ್ಲಿ ಮತದಾನ ಪ್ರಮಾಣ ಹೆಚ್ಚಿನ ಮಟ್ಟದಲ್ಲಿ ಇಲ್ಲದಿರುವುದನ್ನು ಗಮನಿಸಲಾಗಿದೆ. ಅತ್ಯಂತ ಪ್ರಮುಖ ಮತದಾನ ಹಕ್ಕನ್ನು ಚಲಾಯಿಸಲು ಅಧಿಕಾರಿಗಳು ಎಲ್ಲರ ಸಹಕಾರದೊಂದಿಗೆ ತಿಳಿವಳಿಕೆ ನೀಡಬೇಕಿದೆ. ಹಕ್ಕುಗಳ ಜತೆ ಕರ್ತವ್ಯಗಳ ಬಗ್ಗೆಯೂ ಮನವರಿಕೆ ಮಾಡಿಕೊಡಬೇಕಿದೆ. ಇಂದಿನ ಯುವಜನತೆÀ ರಾಷ್ಟ್ರದ ಭವಿಷ್ಯದಲ್ಲಿ ಪ್ರಮುಖ ಪಾತ್ರ ವಹಿಸಲಿರುವ ಹಿನ್ನೆಲೆಯಲ್ಲಿ ಅವರಿಗೂ ಸಹ ಮತದಾನದ ಮಹತ್ವವನ್ನು ತಿಳಿಸಬೇಕಿದೆ ಎಂದು ನ್ಯಾಯಾಧೀಶರು ಸಲಹೆ ಮಾಡಿದರು.
ರಾಷ್ಟ್ರೀಯ ಮತದಾರರ ದಿನದ ಪ್ರತಿಜ್ಞಾವಿಧಿ ಭೋಧಿಸಿದ ಹಾಗೂ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಬಿ. ರಾಮು ಅವರು ಮಾತನಾಡಿ ಪ್ರಜಾಪ್ರಭುತ್ವ ಬಲವರ್ಧನೆಗೊಳ್ಳಲು ಪ್ರತಿಯೊಬ್ಬರೂ ಪಾಲ್ಗೊಳ್ಳಲೇಬೇಕಿದೆ. ಪಾರದರ್ಶಕವಾಗಿ ಚುನಾವಣೆ ಪ್ರಕ್ರಿಯೆಯನ್ನು ನಡೆಸುವ ಗುರುತರ ಜವಾಬ್ದಾರಿಗೆ ಎಲ್ಲರ ಸಹಕಾರ ಅಗತ್ಯವಿದೆ ಎಂದರು.
ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆದಿದ್ದು ಹೊಸದಾಗಿ ಸೇರ್ಪಡೆ, ಬಲಾವಣೆ, ಕೈಬಿಡುವಿಕೆ, ಇನ್ನಿತರ ಸಂಬಂಧ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಅಂತಿಮ ಪಟ್ಟಿಯು ಸಿದ್ಧವಾಗಲಿದೆ. ಯುವ ಮತದಾರರಿಗೆ ಜವಾಬ್ದಾರಿಗಳನ್ನು ಹಾಗೂ ಮತದಾನ ಮಹತ್ವವನ್ನು ತಿಳಿಸುವ ಸಲುವಾಗಿ ರಾಷ್ಟ್ರೀಯ ಮತದಾರರ ದಿನ ಆಚರಣೆಯಲ್ಲಿ ವಿಶೇಷ ಗಮನ ನೀಡಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ರಾಮು ತಿಳಿಸಿದರು.
ಮುಖ್ಯ ಉಪನ್ಯಾಸ ನೀಡಿದ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಸಿ. ಬಸವರಾಜು ಅವÀರು ಪ್ರಜಾಪ್ರಭುತ್ವ ಮತ್ತು ಮತದಾನ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಖ್ಯ ಶಕ್ತಿ ಜನತೆಯಾಗಿದ್ದಾರೆ. ಮತದಾನದ ಹಕ್ಕನ್ನು ಮೂಲಭೂತ ಹಕ್ಕಾಗಿ ನೀಡಲಾಗಿದೆ. ಸಂವಿದಾನಾತ್ಮಕವಾಗಿ ನೀಡಲಾಗಿರುವ ಈ ಹಕ್ಕನ್ನು ಕಸಿಯಲು ಸಾಧ್ಯವಿಲ್ಲ. ಯಾವುದೇ ಆಮಿಷಕ್ಕೆ ಒಳಗಾಗದೆ ನಿರ್ಭೀತಿಯಿಂದ ಮತದಾನದ ಹಕ್ಕನ್ನು ಚಲಾಯಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕು ಎಂದರು.
ದೇಶದ ಅಭಿವೃದ್ಧಿ ಹಾಗೂ ಇಡೀ ರಾಷ್ಟ್ರದ ಸ್ವರೂಪನ್ನೇ ಬದಲಿಸುವ ಅಗಾಧ ಶಕ್ತಿ ಮತದಾನಕ್ಕಿದೆ. ಪ್ರತಿಯೊಬ್ಬರಿಗೂ ಈ ಪ್ರಾಮುಖ್ಯತೆ ಬಗ್ಗೆ ತಿಳಿಸಿಕೊಡುವುದು ದೊಡ್ಡ ಜವಾಬ್ದಾರಿಯಾಗಿದೆ. ಮತದಾನ ಹಕ್ಕು ಪಡೆಯುವ ಯುವಜನರಿಗೂ ಈ ಬಗ್ಗೆ ಪರಿಣಾಮಕಾರಿಯಾಗಿ ತಿಳಿಸಿಕೊಡಬೇಕಿದೆ ಎಂದು ಬಸವರಾಜು ಅವರು ಅಭಿಪ್ರಾಯಪಟ್ಟರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಮಾತನಾಡಿ ಮತದಾನ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು ಎಂಬ ಉದ್ದೇಶದಿಂದ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. 14 ರಿಂದ 18 ವರ್ಷದ ವಿದ್ಯಾರ್ಥಿಗಳಿಗೂ ಸಹ ಚುನಾವಣೆ ಪ್ರಕ್ರಿಯೆ ಮಾಹಿತಿ ನೀಡುವ ಸಲುವಾಗಿ ಸಾಕ್ಷರತಾ ಕ್ಲಬ್‍ಗಳನ್ನು ರಚಿಸಲಾಗಿದೆ. ವಿಶೇಷ ಚೇತನರು, ಲಿಂಗತ್ವ ಅಲ್ಪಸಂಖ್ಯಾತರು, ಯುವ ಜನರು ಸೇರಿದಂತೆ ಎಲ್ಲ ವರ್ಗದವರಿಗೂ ಮಾರ್ಗದರ್ಶನ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುತ್ತಿದ್ದೇವೆ ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಉಮ್ಮತ್ತೂರು ಇಂದುಶೇಖರ್ ಮಾತನಾಡಿ ಸಮಾಜದಲ್ಲಿನ ಬದಲಾವಣೆಗೆ ಪ್ರತಿಯೊಬ್ಬರೂ ಆಸಕ್ತಿ ವಹಿಸಬೇಕು. ಮತದಾನದ ಘನತೆಯನ್ನು ಅರಿಯಬೇಕು ಎಂದು ಸಲಹೆ ಮಾಡಿದರು.
ಇದೇವೇಳೆ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಶಾಲಾಕಾಲೇಜು ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಜ್ಞಾನ ಬೆಳೆಯಲು ಸಾಧ್ಯವಾಗಬೇಕೆ ಹೊರತು, ನಿಮ್ಮ ಭವಿಷ್ಯಕ್ಕೆ ಮಾರಕವಾಗಬಾರದು: ರೆಜಿನಾ ಪಿ.ಮಲಾಕಿ
ಪಟ್ಟಣದ ಜೆಎಸ್‍ಎಸ್ ಬಾಲಕಿಯರ ಪದವಿಪೂರ್ವ ಕಾಲೇಜಿನ ಸಾಂಸ್ಕøತಿಕ ಹಾಗೂ ಕ್ರೀಡಾ ವೇದಿಕೆಯ ಸಮಾರೋಪ ಭಾಷಣ ಮಾಡುತ್ತಾ, ನೀವು ಇಷ್ಠೆಲ್ಲ ಬೆಳವಣಿಗೆಗೆ ಕಾರಣ ನಿಮ್ಮ ತಂದೆ-ತಾಯಿ ಮರೆಯಬೇಡಿ. ನಿಮ್ಮ ಸಂಸ್ಥೆಯನ್ನು ಮರೆಯಬೇಡಿ ನಿಮಗೆ ಅಧಿಕಾರ ದೊರೆತರೆ ಸಂಸ್ಥೆ ನಿಮ್ಮಿಂದ ಆಗುವ ಋಣವನ್ನು ತೀರಿಸಿ ಎಂದರು. ಸಂಸ್ಥೆ ಇಂದು ವಿಶಾಲವಾಗಿ ಬೆಳೆದಿದೆ. ಸಂಸ್ಥೆಯು ನಿಮ್ಮಿಂದ ಏನನ್ನು ನಿರೀಕ್ಷಿಸುವುದಿಲ್ಲ. ನೀವು ಅಧ್ಯಯನ ಮಾಡಿದ ಸಂಸ್ಥೆಗೆ ಹೆಸರನ್ನು ತನ್ನಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳುತ್ತಾ, ನಿಮ್ಮ ಮುಂದಿನ ಪರೀಕ್ಷೆಯಲ್ಲಿ ಉತ್ತಮವಾದ ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ, ಕಾಲೇಜಿಗೆ, ಜಿಲ್ಲೆಗೆ, ಇಲಾಖೆಗೆ ಹೆಸರನ್ನು ತನ್ನಿ ಎಂದು ಹಾರೈಸಿದರು. ಅಧ್ಯಾಪಕರಿಗೆ ನಿಮ್ಮ ವಿದ್ಯಾರ್ಥಿಗಳನ್ನು ನಿಮ್ಮ ಮನೆಯ ಮಕ್ಕಳಾಗಿ ನೋಡಿಕೊಂಡು ಅವರನ್ನು ಈ ದೇಶದ ಸ್ವಪ್ರಜೆಯಾಗಿ ರೂಪಿಸುವ ಜವಬ್ದಾರಿ ನಿಮ್ಮೆಲ್ಲರ ಮೇಲಿದೆ ಎಂದು ತಿಳಿಸುತ್ತಾ ಅಧ್ಯಾಪಕರಿಗೆ ಕಿವಿಮಾತು ಹೇಳಿದರು ಇಡೀ ವಿಶ್ವದಲ್ಲಿ ಭಾರತ ಬಲಾಡ್ಯ ದೇಶ ಮಾಡಲು ನೀವು ಕಾರಣ ಎಂದು ಹೇಳುತ್ತಾ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಬೇಡಿ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವ ಅನೇಕ ದಾನಿಗಳು ಇರುತ್ತಾರೆ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತರಾದ ಎಸ್.ನಾಗರಾಜು ಮಾತನಾಡುತ್ತಾ, ಗ್ರಾಮೀಣ ವಿದ್ಯಾರ್ಥಿಗಳಾದ ನಿಮ್ಮಲ್ಲಿ ಸೂಪ್ತ ಪ್ರತಿಭೆಯು ಅಡಗಿದೆ. ನಿಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಇಂತಹ ವೇದಿಕೆಗಳ ಮೂಲಕ ಪ್ರದರ್ಶಿಸಬೇಕು ಮತ್ತು ನೀವು ಯಾವುದೇ ಕಾರಣಕ್ಕೆ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳಬೇಡಿ ಹಾಗೂ ನನ್ನಿಂದ ಸಾಧ್ಯವಿಲ್ಲ ಎಂಬ ಕೀಳರಿಮೆಯನ್ನು ತೊರೆಯಿರಿ ನಿಮ್ಮಿಂದ ಎಲ್ಲವೂ ಸಾಧ್ಯ ಎಂದು ತಿಳಿಸುತ್ತಾ, ಇಂತಹ ಸಂಸ್ಕಾರ ಸಂಸ್ಕøತಿಯನ್ನು ಹೊಂದಿರುವ ಸಂಸ್ಥೆಯಲ್ಲಿ ನೀವು ಅಧ್ಯಯನ ಮಾಡುತ್ತಿರುವುದು. ನಿಮ್ಮೆಲ್ಲರ ಸೌಭಾಗ್ಯ ಎಂದು ತಿಳಿಸಿ ಎಲ್ಲರಿಗೂ ಮುಂದಿನ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ಎಂದು ಹಾರೈಸಿ, ಸರ್ಕಾರದ ಆಡಳಿತಾತ್ಮಕ ಪರೀಕ್ಷೆಯನ್ನು ತೆಗೆದುಕೊಳ್ಳಿ ಅದಕ್ಕೆ ಬೇಕಾದ ಎಲ್ಲ ಸಹಾಯವನ್ನು ಹಾಗೂ ಮಾರ್ಗದರ್ಶನ ಮಾಡಲು ನಾವು ಸಿದ್ಧರಿದ್ದೇವೆ. ಕಾಲ ನಮ್ಮನ್ನು ಕಾಯಲ್ಲ ಕಾಲವನ್ನು ನಾವು ಕಾಯೋಣ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಎಸ್.ವಿ.ಕೆ. ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಉಷಾದೇವಿ ಕಾಲೇಜಿನ ಪ್ರಾಂಶುಪಾಲರಾದ ಎನ್.ಮಹದೇವಸ್ವಾಮಿ, ಅದ್ಯಾಪಕರು ಹಾಗೂ ಅದ್ಯಾಪಕೇತರರು ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಜ. 26ರಂದು ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ
ಚಾಮರಾಜನಗರ, ಜ. 25- ಸಕ್ಕರೆ, ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಸಿ. ಮೋಹನಕುಮಾರಿ ಉರುಫ್ ಗೀತಾ ಮಹದೇವಪ್ರಸಾದ್ ಅವರು ಜನವರಿ 26ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.ಬೆಳಿಗ್ಗೆ 8.30 ಗಂಟೆಗೆ ನಗರಕ್ಕೆ ಆಗಮಿಸುವರು. ಬಳಿಕ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವರು. ತದನಂತರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಲೈಮಹದೇಶ್ವರ ಬೆಟ್ಟದಲ್ಲಿ ನಡೆಯುವ ಶಿವರಾತ್ರಿ ಜಾತ್ರೆ ಪ್ರಯುಕ್ತ ಸಭೆ ನಡೆಸುವರು. ನಂತರ ನಗರದಲ್ಲಿ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.
ಸಂಜೆ 4 ಗಂಟೆಗೆ ಮೈಸೂರಿಗೆ ತೆರಳುವರು ಎಂದು ಸಚಿವರ ವಿಶೇಷಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜ. 26ರಂದು ನಗರದಲ್ಲಿ ಗಣರಾಜ್ಯೋತ್ಸವ ದಿನ ಆಚರಣೆ
ಚಾಮರಾಜನಗರ, ಜ. 25- ಜಿಲ್ಲಾಡಳಿತದ ವತಿಯಿಂದ ಗಣರಾಜ್ಯೋತ್ಸವ ದಿನ ಆಚರಣೆಯನ್ನು ಜನವರಿ 26ರಂದು ಬೆಳಿಗ್ಗೆ 9 ಗಂಟೆಗೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.ಸಣ್ಣ ಕೈಗಾರಿಕೆ ಮತ್ತು ಸಕ್ಕರೆ ಖಾತೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಸಿ. ಮೋಹನಕುಮಾರಿ ಉರುಫ್ ಗೀತಾ ಅವರು ಧ್ವಜಾರೋಹಣ ನೆರವೇರಿಸುವರು. ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು.
ವಿಧಾನ ಪರಿಷತ್ ಉಪಸಭಾಪತಿಯವರಾದ ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ, ಶಾಸಕರಾದ ಎಸ್. ಜಯಣ್ಣ, ಆರ್. ನರೇಂದ್ರ, ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ಕರ್ನಾಟಕ ರಾಜ್ಯ ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಆರ್. ಉಮೇಶ್, ನಗರಸಭೆ ಅಧÀ್ಯಕ್ಷರಾದ ಶೋಭ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಜೆ. ಯೋಗೇಶ್, ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ನಗರಸಭೆ ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪ, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಅಂದು ಸಂಜೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ ಚಾಮರಾಜೇಶ್ವರ ದೇವಸ್ಥಾನದ ಆವರಣದ ಬಳಿ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 5.30 ರಿಂದ 6.30ರವರೆಗೆ ನಗರದ ಎಂ. ನಟರಾಜು ಮತ್ತು ತಂಡದವರು ದೇಶಭಕ್ತಿ ಗೀತೆಗಳನ್ನು ಹಾಡಲಿದ್ದಾರೆ. 6.30 ರಿಂದ 7.30ರವರೆಗೆ ಶಾಲಾಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ. 7.30 ರಿಂದ 8.30ರವರೆಗೆ ಗುಂಡ್ಲುಪೇಟೆಯ ಎಸ್.ಎಂ. ಡ್ಯಾನ್ಸ್ ಗ್ರೂಪ್ ಅಂಡ್ ಮೆಲೋಡಿಸ್, ಸದ್ದಾಂ ಅಹಮದ್ ಮತ್ತು ತಂಡದವರು ನೃತ್ಯ ರೂಪಕ ಪ್ರಸ್ತುತ ಪಡಿಸುವರೆಂದು ಪ್ರಕಟಣೆ ತಿಳಿಸಿದೆ.
ಜ. 28ರ ಪಲ್ಸ್ ಪೋಲಿಯೋ : ಚಾ.ನಗರ ಪಟ್ಟಣದಲ್ಲಿ ತೆರೆಯಲಾಗಿರುವ ಬೂತುಗಳ ವಿವರ
ಚಾಮರಾಜನಗರ, ಜ. 25 :- ಚಾಮರಾಜನಗರ ಪಟ್ಟಣದಲ್ಲಿ ಜನವರಿ 28ರಂದು ನಡೆಯಲಿರುವ ಮೊದಲ ಸುತ್ತಿನ ಪಲ್ಸ್ ಪೋಲಿಯೋ ಕಾರ್ಯಕ್ರಮ ಪ್ರಯುಕ್ತ ಪೋಲಿಯೋ ಲಸಿಕೆ ನೀಡುವ ಸಲುವಾಗಿ ನಗರ ಪ್ರದೇಶದಲ್ಲಿ ತೆರೆದಿರುವ ಬೂತುಗಳ ವಿವರ ಇಂತಿದೆ.ಚನ್ನಿಪುರಮೋಳೆ, ಚನ್ನಿಪುರ ಮೋಳೆ ಸೈಟು, ರೋಟರಿ ಶಾಲೆ, ಪಿಡಬ್ಲ್ಯೂಡಿ ಕಾಲೋನಿ, ಎ.ಜೆ. ಕಾಲೋನಿ, ಕರಿನಂಜನಪುರ, ಅಂಬೇಡ್ಕರ್ ಬೀದಿ, ಕೆ.ಪಿ. ಮೊಹಲ್ಲಾ 1 ಮತ್ತು 2, ದೇವಾಂಗ ಬೀದಿ, ಪ್ರಜ್ವಲ್ ಮಹಿಳಾ ಸಂಘ, ಜಿಲ್ಲಾ ಆಸ್ಪತ್ರೆ, ಗಾಡಿಖಾನೆ ಮೊಹಲ್ಲಾ, ಅಹಮದ್ ನಗರ 1 ಮತ್ತು 2, ಬೀಡಿ ಕಾಲೋನಿ, ಬೀಡಿ ಕಾಲೋನಿ (ಉರ್ದು ಶಾಲೆ), ಗಾಳೀಪುರ 1 ಮತ್ತು 2, ವರದರಾಜಪುರ, ರಹಮತ್ ನಗರ, ಸೋಮವಾರಪೇಟೆ, ಕೆಳಗಡೆ ನಾಯಕರ ಬೀದಿ, ಕೆ.ಎನ್. ಮೊಹಲ್ಲಾ, ಜಾಮಿಯಾ ಮಸೀದಿ, ಮೇಗಲನಾಯ್ಕರ ಬೀದಿ, ರೈಲ್ವೆ ಬಡಾವಣೆ, ಭುಜಂಗೇಶ್ವರ ಬಡಾವಣೆ, ಮಂಟೆಸ್ವಾಮಿ ದೇವಸ್ಥಾನ, ಉಪ್ಪಾರ ಬೀದಿ, ಗಣಪತಿ ದೇವಸ್ಥಾನ, ಶಂಕರಪುರ, ಮಹದೇಶ್ವರ ಕಾಲೋನಿ, ರಾಮಸಮುದ್ರ ಕುರುಬರ ಬೀದಿ, ರಾಮಸಮುದ್ರ ನಾಯಕರ ಬೀದಿ, ರಾಮಸಮುದ್ರ ದೊಡ್ಡ ಹರಿಜನರ ಬೀದಿ, ರಾಮಸಮುದ್ರ ಉರ್ದು ಶಾಲೆ, ರಾಮಸಮುದ್ರ ಚಿಕ್ಕ ಹರಿಜನ ಬೀದಿ, ರಾಮಸಮುದ್ರ ಎ ಜೆ ಬೀದಿ, ರೈಲ್ವೆ ನಿಲ್ದಾಣ, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣ, ಚಾಮರಾಜೇಶ್ವರ ದೇವಸ್ಥಾನ ಹಾಗೂ ಸಂತೆಮರಹಳ್ಳಿ ವೃತ್ತಗಳಲ್ಲಿ ಪೋಲಿಯೋ ಲಸಿಕೆ ನೀಡಲಾಗುತ್ತದೆ ಎಂದು ತಾಲೂಕು ಆರೋಗ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರÉ.
ಜ. 30ರಂದು ಚಾ.ನಗರದಲ್ಲಿ ಜಿಲ್ಲಾ ಮಟ್ಟದ ಯುವಜನ ಮೇಳ
ಚಾಮರಾಜನಗರ, ಜ. 25 - ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ಚಾಮರಾಜನಗರ ಜಿಲ್ಲಾ ಮಟ್ಟದ ಯುವಜನ ಮೇಳವನ್ನು ಜನವರಿ 30ರಂದು ನಗರದ ಜೆ ಎಚ್ ಪಟೇಲ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದು ಬೆಳಿಗ್ಗೆ 9 ಗಂಟೆಯೊಳಗೆ ಸ್ಪರ್ಧಿಗಳು ವ್ಯವಸ್ಥಾಪಕರಲ್ಲಿ ವರದಿ ಮಾಡಿಕೊಳ್ಳುವಂತೆ ತಿಳಿಸಿದೆ.ವೈಯಕ್ತಿಕವಾಗಿ ಭಾವಗೀತೆ, ಲಾವಣಿ, ರಂಗಗೀತೆ ಹಾಗೂ ಏಕಪಾತ್ರಾಭಿನಯ ಸ್ಪರ್ಧೆಗಳಿವೆ.
ಗುಂಪು ಸ್ಪರ್ಧೆಗಳಾಗಿ ಗೀಗೀ ಪದ (5 ಮಂದಿ), ಕೋಲಾಟ ಹಾಗೂ ಜಾನಪದ ನೃತ್ಯ (12 ಮಂದಿ), ಸೋಬಾನೆ ಪದ (4 ಮಂದಿ), ಭಜನೆ (8 ಮಂದಿ), ಜಾನಪದ ಗೀತೆ ಹಾಗೂ ಚರ್ಮವಾದ್ಯ ಮೇಳ (6 ಮಂದಿ) ಸ್ಪರ್ಧೆಗಳು ನಡೆಯಲಿವೆ.
ಜಿಲ್ಲಾ ಮಟ್ಟದಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆದವರು ಹಾಗೂ ಗುಂಪು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಯುವಜನ ಮೇಳದಲ್ಲಿ ಭಾಗವಹಿಸಲು ಅರ್ಹರಾಗಲಿದ್ದಾರೆ.
ಜಿಲ್ಲಾಮಟ್ಟದ ಸ್ಪರ್ಧೆಗಳಿಗೆ ಭಾಗವಹಿಸುವ ಸ್ಪರ್ಧಿಗಳಿಗೆ ಪ್ರಯಾಣ, ದಿನ ಭತ್ಯೆಯನ್ನು ಇಲಾಖಾ ವತಿಯಿಂದ ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಚೇರಿ (ದೂರವಾಣಿ ಸಂಖ್ಯೆ 08226-224932) ಅಥವಾ ಮೊಬೈಲ್ ಸಂಖ್ಯೆ 9482718278, 9880211027ನ್ನು ಸಂಪರ್ಕಿಸುವಂತೆ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆ : ಅರ್ಜಿ ಮರು ಪರಿಶೀಲನೆಗೆ ದಿನಾಂಕ, ಸ್ಥಳ ನಿಗದಿ
ಚಾಮರಾಜನಗರ, ಜ. 25 - ಮತದಾರರ ಪಟ್ಟಿ ಪರಿಷ್ಕರಣೆ 2018ರ ಸಂಬಂಧ ನಮೂನೆ 6, 7, 8 ಮತ್ತು 8ಎ ಅರ್ಜಿಗಳನ್ನು ಮರು ಪರಿಶೀಲನೆ ಮಾಡುವ ಸಲುವಾಗಿ ಚಾಮರಾಜನಗರ ತಾಲೂಕಿನ ಹೋಬಳಿಗಳಲ್ಲಿ ದಿನಾಂಕ ಹಾಗೂ ಸ್ಥಳಗಳನ್ನು ನಿಗದಿಪಡಿಸಲಾಗಿದೆ.ನಿಗದಿಪಡಿಸಿರುವ ದಿನಾಂಕಗಳಂದು ಹೋಬಳಿ ಮಟ್ಟದ ನೋಡಲ್ ಅಧಿಕಾರಿಗಳು, ಬಿಎಲ್‍ಓಗಳು, ಗ್ರಾಮ ಲೆಕ್ಕಾಧಿಕಾರಿಗಳು, ರಾಜಸ್ವ ನಿರೀಕ್ಷಕರು ಹಾಗೂ ಉಪತಹಸೀಲ್ದಾರರು ಕಡ್ಡಾಯವಾಗಿ ಹಾಜರಿದ್ದು ಮರುಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು. ಯಾವುದೇ ನೌಕರರು ಗೈರುಹಾಜರಾದಲ್ಲಿ 1950ರ ಪ್ರಜಾ ಪ್ರತಿ ಕಾಯಿದೆಯಂತೆ ಕಠಿಣ ಕ್ರಮ ಜರುಗಿಸಲಾಗುವುದು.
ಜನವರಿ 31ರಂದು ಕಸಬಾ ಹೋಬಳಿಗೆ ಸಂಬಂಧಿಸಿದಂತೆ ನಗರದ ತಾಲೂಕು ಕಚೇರಿಯಲ್ಲಿ ಮರುಪರಿಶೀಲನೆ ಕಾರ್ಯ ನಡೆಯಲಿದೆ.
ಫೆಬ್ರವರಿ 1ರಂದು ಹರದನಹಳ್ಳಿ ಹೋಬಳಿಗೆ ಹರದನಹಳ್ಳಿಯ ಉಪ್ಪಾರ ಸಮುದಾಯ ಭವನದಲ್ಲಿ, ಫೆಬ್ರವರಿ 2ರಂದು ಚಂದಕವಾಡಿ ಹೋಬಳಿಗೆ ಸಂಬಂಧಿಸಿದಂತೆ ಚಂದಕವಾಡಿಯ ಗಾಣಿಗರ ಸಮುದಾಯ ಭವನದಲ್ಲಿ, ಫೆಬ್ರವರಿ 3ರಂದು ಹರವೆ ಹೋಬಳಿಗೆ ಸಂಬಂಧಿಸಿದಂತೆ ಹರವೆ ರೇಷ್ಮೆ ಇಲಾಖೆ ಕಚೇರಿ ಆವರಣದಲ್ಲಿ ಹಾಗೂ ಫೆಬ್ರವರಿ 5ರಂದು ಸಂತೇಮರಹಳ್ಳಿ ಹೋಬಳಿಗೆ ಸಂಬಂಧಿಸಿದಂತೆ ಸಂತೆಮರಹಳ್ಳಿಯ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಅರ್ಜಿಗಳ ಮರು ಪರಿಶೀಲನೆ ಕಾರ್ಯ ನಡೆಯಲಿದೆ ಎಂದು ತಾಲೂಕು ತಹಸೀಲ್ದಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
No comments:
Post a Comment