Monday, 25 December 2017

ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರಿಂದ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಪರಿಶೀಲನೆ (24-12-2017) # veerabhadra swamy


ಡಿ.27 ರಂದು ನಗರದಲ್ಲಿ  ಗಾನಯಾನ- ಕನ್ನಡ ಚಿತ್ರಗೀತೆಗಳ ಭಾವಯಾನ

      ಚಾಮರಾಜನಗರ ನ.25.- ಚಲನಚಿತ್ರರಂಗದ ಇತಿಹಾಸ ಬಿಂಬಿಸುವ ಸುಮಧುರ ಕನ್ನಡ ಚಲನಚಿತ್ರಗೀತೆಗಳ ಭಾವಯಾನ ‘ಗಾನಯಾನ’ ಕಾರ್ಯಕ್ರಮ ಡಿಸೆಂಬರ್ 27 ರಂದು ಸಂಜೆ 6.30  ಗಂಟೆಗೆ ನಗರದ ಚಾಮರಾಜೇಶ್ವರ ದೇವಾಲಯದ ಮುಂಭಾಗದ ಆವರಣದಲ್ಲಿ ನಡೆಯಲಿದೆ.
     ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಉದಯೋನ್ಮುಖ ಗಾಯಕ, ಗಾಯಕಿಯರು ಭಾಗವಹಿಸಿ ಚಲನಚಿತ್ರ ಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ.
      ನಾದಮಯ ಈ ಲೋಕವೆಲ್ಲಾ, ಕರೆದರೂ ಕೇಳದೆ, ಏರಿ ಮೇಲೆ ಏರಿ ಮೇಲೆ, ನನ್ನದೆಯ ಕೋಗಿಲೆಯ, ಕುಲದಲ್ಲಿ ಕೀಳ್ಯಾವುದೋ, ನಾನಿರುವುದೆ ನಿಮಗಾಗಿ, ಎಲ್ಲೆಲ್ಲಿ ನೋಡಲಿ ನಿನನ್ನೆ ಕಾಣುವೇ, ಯಾರೇ ನೀನು ರೋಜಾ ಹೂವೆ, ತನಂ ನಂ ತನಂ ನಂ, ಬೊಂಬೆ ಹೇಳತೈತೆ, ಊರಕಣ್ಣು ಮಾರಿಕಣ್ಣು, ಬೆಳ್ಳಿ ಮೂಡಿತು, ಈ ಶತಮಾನದ ಮಾದರಿ ಹೆಣ್ಣು, ಸೇರಿದಂತೆ ಇನ್ನು ಮುಂತಾದ ಪ್ರಸಿದ್ಧ ಚಲನಚಿತ್ರಗೀತೆಗಳನ್ನು ಗಾಯಕರು ಹಾಡಲಿದ್ದಾರೆ.
      ಕನ್ನಡ ಚಿತ್ರರಂಗದ ಬೆಳವಣಿಗೆಯಲ್ಲಿ ಅಮೂಲ್ಯ ಕೊಡುಗೆ ನೀಡಿರುವ ಚಲನಚಿತ್ರ ಕಲಾವಿದರು, ತಂತ್ರಜ್ಞರು,  ಗೀತರಚನಕಾರರು, ಗಾಯಕರು, ನಿರ್ದೇಶಕರು ವಿವಿಧ ವಿಭಾಗಗಳಲ್ಲಿ ಪ್ರಮುಖರು ಕೊಡುಗೆಯನ್ನು ಸ್ಮರಿಸುವ ಯತ್ನವನ್ನು ಮಾಡಲಾಗಿದೆ. ಆಯ್ದ ಚಿತ್ರಗೀತೆಗಳನ್ನು ಪ್ರಸ್ತುತಪಡಿಸುತ್ತಲೇ ಚಿತ್ರರಂಗದ ಇತಿಹಾಸವನ್ನು ಹಾಗೂ ವಿವಿಧ ಕಾಲಘಟ್ಟಗಳಲ್ಲಿ ಕನ್ನಡ ಚಿಂತ್ರರಂಗದಲ್ಲಿ ಉಂಟಾದ ಬದಲಾವಣೆಗಳನ್ನು ಬಿಂಬಿಸಲಾಗುವುದು.
      ಮೈಸೂರಿನ ಹೆಸರಾಂತ ಸುನಿತ ಚಂದ್ರಕುಮಾರ್ ಅವರ ನಿರ್ವಹಣೆಯಲ್ಲಿ   ರಘುಲೀಲಾ ಸಂಗೀತಾ ಮಂದಿರ ಕಲಾವಿದರು  ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಲಿದ್ದಾರೆ.
 ಕಲಾವಿದರಾದ ಶ್ರೇಯಾ ಕೆ.ಭಟ್, ಸಿಂಚನ ಸಿ, ವಸುಧಾಶಾಸ್ತ್ರಿ, ಅಕ್ಷರ ಪ್ರಸಾದ್, ನವನೀತ ಕೃಷ್ಣ, ಕಾರ್ತಿಕ್ ಚಲನಚಿತ್ರಗೀತೆಗಳಿಗೆ ದನಿಯಾಗಲಿದ್ದಾರೆ.
   ವಾದ್ಯ ವೃಂದದಲ್ಲಿ ಮ್ಯಾಂಡೋಲಿನ-ಸಿ. ವಿಶ್ವನಾಥ್, ಕೊಳಲು-ಸಮೀರ್‍ರಾವ್, ಗಿಟಾರ್-ಪ್ರದೀಪ್ ಕಿಗ್ಗಾಲ್, ಕೀಬೋರ್ಡ್-ಪುರುಷೋತ್ತಮ್, ತಬಲ-ಆತ್ಮಾರಾಮ್, ರಿದಮ್‍ಪ್ಯಾಡ್-ವಿನಯ್ ರಂಗಧೋಳ್ ಇರಲಿದ್ದಾರೆ.  ಭಾರತಿ ಕುಲಶೇಖರ್ ಅವರು ಕಾರ್ಯಕ್ರಮ ನಿರೂಪಿಸಲಿದ್ದಾರೆ.ಪ್ರವೇಶ ಉಚಿತವಾಗಿದ್ದು, ಸಾರ್ವಜನಿಕರು ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಣೆಯಲ್ಲಿ ಕೋರಿದೆ.  



ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರಿಂದ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಪರಿಶೀಲನೆ  

ಚಾಮರಾಜನಗರ;ಡಿ-24  ಉತ್ತೂರು ಏತ ಯೋಜನೆಯಡಿ ಚಾಮರಾಜನಗರ ತಾಲ್ಲೂಕಿನ ಸುವರ್ಣನಗರ ಕೆರೆ ಹಾಗೂ ಅರಕಲವಾಡಿ ಕೆರೆಗೆ ನೀರು ತುಂಬಿಸುವ ಯೋಜನೆ ಕಾಮಗಾರಿ ಪರಿಶೀಲನೆಯನ್ನು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಮೊದಲು ಅರಕಲವಾಡಿ ಕೆರೆಗೆ ಭೇಟಿ ನೀಡಿದ ಶಾಸಕರು ಅಧಿಕಾರಿಗಳಿಂದ ಯೋಜನೆ ಕಾಮಗಾರಿ ಬಗ್ಗೆ ವಹಿಸಲಾಗಿರುವ ಕ್ರಮದ ಬಗ್ಗೆ ಮಾಹಿತಿ ಪಡೆದುಕೊಂಡರು. ಕೆರೆಗೆ ನೀರು ತುಂಬಿಸುವ ಮಾರ್ಗಗಳು ಹಾಗೂ ಇತರೆ ಅವಶ್ಯಕ ಪ್ರಕ್ರಿಯೆ ಕುರಿತು ವಿವರ ಪಡೆದುಕೊಂಡರು.
ಕೆರೆಗೆ ನೀರು ತುಂಬಿಸುವ ಕೆಲಸ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ತ್ವರಿತವಾಗಿ ಕಾಮಗಾರಿ ನಡೆಸಬೇಕು. ಈ ಮೂಲಕ ಗ್ರಾಮೀಣರಿಗೆ ನೆರವಾಗಬೇಕೆಂದು ಶಾಸಕರು ಸೂಚಿಸಿದರು. ಇದೇ ವೇಳೆ ಗ್ರಾಮಸ್ಥರು ಮಾಡಿಕೊಂಡ ಮನವಿಯನ್ನು ಶಾಸಕರು ಆಲಿಸಿದರು.
ಬಳಿಕ ಸುವರ್ಣನಗರ ಕೆರೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ಅಲ್ಲಿಯೂ ಕಾಮಗಾರಿ ಕೈಗೊಳ್ಳುವ ಸಂಬಂಧ ನಡೆಸಿರುವ ಸಿದ್ದತೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಅಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ತಿಳಿಸಿದ ಶಾಸಕರು ವಿಳಂಬಮಾಡದೆ ಈ ಭಾಗದಲ್ಲಿ ಕಾಮಗಾರಿ ನಡೆಯಬೇಕು ಎಂದು ತಿಳಿಸಿದರು.
ಬಳಿಕ ನೀರಿನ ಬೃಹತ್ ಪೈಪ್‍ಗಳನ್ನು ದಾಸ್ತಾನು ಮಾಡಿರುವ ಯಾರ್ಡ್‍ಗೆ ಭೇಟಿ ನೀಡಿ ಪೈಪ್ ಅಳವಡಿಕೆಗೆ ಮೊದಲು ಕೈಗೊಂಡಿರುವ ಪೂರ್ವಸಿದ್ದತಾ ಕಾಮಗಾರಿಯನ್ನು ಹಲಹೊತ್ತು ನಿಂತು ಪರಿವೀಕ್ಷಿಸಿದರು.
ಇದೇ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಾಸಕರು ಆಲಂಬೂರು ಏತ ಯೋಜನೆಯ 3ನೇ ಹಂತದಲ್ಲಿರುವ ಉತ್ತೂರು ಕೆರೆಯಿಂದ ಪಂಪ್ ಮಾಡಿ ತಾಲ್ಲೂಕಿನ ಸುವರ್ಣನಗರ ಕೆರೆ ಹಾಗೂ ಅರಕಲವಾಡಿ ಕೆರೆಗೆ ನೀರು ತುಂಬಿಸಲಾಗುತ್ತದೆ. ಇದೇ ಯೋಜನೆಯಡಿ ಗುಂಡ್ಲುಪೇಟೆ ತಾಲ್ಲೂಕಿನ 9 ಕೆರೆಗಳಿಗೂ ನೀರು ತುಂಬಿಸಲಾಗುತ್ತಿದೆ ಎಂದರು.
ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ ಸಂಬಂಧಿಸಿದಂತೆ ಪೈಪ್‍ಗಳಿಗೆ ಇನ್‍ಲೈನಿಂಗ್ ಮಾಡುವ ಕೆಲಸ ಪ್ರಗತಿಯಲ್ಲಿದೆ ಇನ್ನು 3 ತಿಂಗಳಲ್ಲಿ ಯೋಜನೆ ಕಾಮಗಾರಿ ಪೂರ್ಣಗೊಳ್ಳಲಿದೆ. ಒಟ್ಟು 53 ಕೋಟಿ ರೂ ವೆಚ್ಚದಲ್ಲಿ ಉತ್ತೂರು ಏತ ಯೋಜನೆಯಡಿ ಗುಂಡ್ಲುಪೇಟೆ ಹಾಗೂ ಚಾಮರಾಜನಗರ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ ಎಂದು ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.
ಜಿಲ್ಲಾ ಪಂಚಾಯತ್ ಸದಸ್ಯರಾದ ಶಶಿಕಲಾ ಸೋಮಲಿಂಗಪ್ಪ, ಬಗರ್ ಹುಕುಂ ಸಾಗುವಳಿ ಸಮಿತಿಯ ಸದಸ್ಯರಾದ ಸೋಮಲಿಂಗಪ್ಪ, ಕಾವೇರಿ ನೀರಾವರಿ ನಿಗಮದ ಕಾರ್ಯನಿರ್ವಾಹಕ ಎಂಜಿನೀಯರ್ ರಾಜೇಂದ್ರ ಪ್ರಸಾದ್ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು