ದೋಷರಹಿತ ಮತದಾರರ ಪಟ್ಟಿ ತಯಾರಿಕೆಗೆ ರಾಜಕೀಯ ಪಕ್ಷಗಳ ಸಹಕಾರ ಅಗತ್ಯ : ಜಿಲ್ಲಾಧಿಕಾರಿ ಬಿ. ರಾಮು
ಚಾಮರಾಜನಗರ, ಡಿ. 02 - ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿಯನ್ನು ನವೆಂಬರ್ 30 ರಂದು ಪ್ರಕಟಿಸಲಾಗಿದ್ದು ಈ ಸಂಬಂಧ ಹಕ್ಕು ಆಕ್ಷೇಪಣೆಗಳನ್ನು ಸ್ವೀಕರಿಸಿ, ದೋಷರಹಿತ ಮತದಾರರ ಪಟ್ಟಿ ತಯಾರಿಕೆ ಪ್ರಕ್ರಿಯೆ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಸಹ ಈ ಸಂಬಂಧ ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಬಿ. ರಾಮು ತಿಳಿಸಿದರು
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿ ತಯಾರಿ ಪ್ರಕ್ರಿಯೆ ಸಂಬಂಧ ಗುರುವಾರ ಕರೆಯಲಾಗಿದ್ದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿ ತಯಾರಿ ಪ್ರಕ್ರಿಯೆ ಸಂಬಂಧ ಪರಿಷ್ಕøತ ವೇಳಾಪಟ್ಟಿ ನಿಗದಿಯಾಗಿದೆ. ನವೆಂಬರ್ 30 ರಂದು ಕರಡು ಮತದಾರರ ಪಟ್ಟಿಯನ್ನು ಜಿಲ್ಲೆಯ ಎಲ್ಲಾ ತಹಶೀಲ್ದಾರ್ ಕಚೇರಿ, ಉಪ ವಿಭಾಗಾಧಿಕಾರಿ ಕಚೇರಿ, ಆಯಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಮತಗಟ್ಟೆಗಳಲ್ಲಿ ಪ್ರಚುರಪಡಿಸಲಾಗಿದೆ. ಇದನ್ನು ಸಾರ್ವಜನಿಕರು ವೀಕ್ಷಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಭಾವಚಿತ್ರವುಳ್ಳ ಮತದಾರರ ಪಟ್ಟಿಯಲ್ಲಿರುವ ಮತದಾರರ ಹೆಸರುಗಳನ್ನು ಸ್ಥಳೀಯ ಸಂಸ್ಥೆ, ಗ್ರಾಮಸಭೆಗಳಲ್ಲಿ ಡಿಸೆಂಬರ್ 6 ಹಾಗೂ 21 ರಂದು ಓದಲಾಗುತ್ತದೆ. ಡಿಸೆಂಬರ್ 3 ಹಾಗೂ 17 ರಂದು ರಾಜಕೀಯ ಪಕ್ಷಗಳು ನೇಮಕ ಮಾಡಿರುವ ಮತಗಟ್ಟೆ ಮಟ್ಟದ ಏಜೆಂಟರಿಂದ ಹಕ್ಕು ಆಕ್ಷೇಪಣೆಗಳನ್ನು ಸ್ವೀಕರಿಸಲು ವಿಶೇಷ ಆಂದೋಲನ ನಡೆಸಲಾಗುತ್ತದೆ. ಹಕ್ಕು ಆಕ್ಷೇಪಣೆಗಳನ್ನು ಆಯಾ ತಾಲ್ಲೂಕಿನ ಮತಗಟ್ಟೆಗಳಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿ (ಬಿ.ಎಲ್.ಓ ) ಮೂಲಕ ಹಾಗೂ ಆಯಾ ತಾಲ್ಲೂಕು ಕಚೇರಿಗಳಲ್ಲಿ ಡಿಸೆಂಬರ್ 29 ರವರೆಗೂ ಸ್ವೀಕರಿಸಲಾಗುತ್ತದೆ. ವಿಶೇಷ ಆಂದೋಲನ ಕಾರ್ಯಕ್ರಮವು ಡಿಸೆಂಬರ್ 14 ರಿಂದ 29 ರವರೆಗೆ ನಿಗದಿಯಾಗಿದೆ ಎಂದರು.
ಹಕ್ಕು ಆಕ್ಷೇಪಣೆಗಳನ್ನು 2018 ರ ಜನವರಿ 20 ರಂದು ಇತ್ಯರ್ಥಪಡಿಸಲಾಗುತ್ತದೆ. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಭಾವಚಿತ್ರ ಸೇರ್ಪಡೆ, ಪೂರಕ ಪಟ್ಟಿ ಸಿದ್ದಪಡಿಸುವ ಕೆಲಸವು ಪೆಬ್ರವರಿ 5 ರಂದು ನಡೆಯಲಿದೆ. ಅಂತಿಮ ಮತದಾರರ ಪಟ್ಟಿಯನ್ನು ಪೆಬ್ರವರಿ 15 ರಂದು ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿವರಿಸಿದರು.
ರಾಜಕೀಯ ಪಕ್ಷಗಳು ಮತಗಟ್ಟೆಗಳಿಗೆ ಬೂತ್ ಲೆವೆಲ್ ಏಜೆಂಟರನ್ನು ನೇಮಕ ಮಾಡಿ, ಮತಗಟ್ಟೆ ಮಟ್ಟದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಮತದಾರರ ಪಟ್ಟಿಯಲ್ಲಿ ಕಂಡುಬರುವ ನ್ಯೂನತೆಗಳನ್ನು ಸರಿಪಡಿಸಲು ಸಹಕರಿಸಬೇಕಿದೆ. ಮತದಾರರ ಪಟ್ಟಿಯ ಸಂಕ್ಷಿಪ್ತ ಪರಿಷ್ಕರಣೆ ಕೈಗೊಂಡಿರುವ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸುವ ದಿಸೆಯಲ್ಲಿಯೂ ರಾಜಕೀಯ ಪಕ್ಷಗಳು ಕೈಜೋಡಿಸಬೇಕು. ವಿಶೇಷ ಶಿಬಿರ ದಿನಗಳಂದು ಕರಡು ಮತದಾರರ ಪಟ್ಟಿಯೊಂದಿಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು ಮತಗಟ್ಟೆ ಮಟ್ಟದ ಏಜೆಂಟರ ಜೊತೆ ಗ್ರಾಮಗಳಿಗೆ ತೆರಳಿ ಪಟ್ಟಿಯಲ್ಲಿ ಕಂಡುಬರುವ ತಿದ್ದುಪಡಿ, ಹೆಸರು ಕೈಬಿಡುವುದು ಇನ್ನಿತರ ಅಂಶಗಳನ್ನು ಗುರುತಿಸಿ, ದೋಷರಹಿತ ಅಂತಿಮ ಮತದಾರರ ಪಟ್ಟಿ ಸಿದ್ದತೆ ಬಗ್ಗೆ ತೊಡಗಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲೆಯ ಯಾವುದೇ ಅರ್ಹ ವ್ಯಕ್ತಿ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಲಿಂಗ ತಾರತಮ್ಯರಹಿತ ಮತದಾರರ ಪಟ್ಟಿ ಸಿದ್ದಪಡಿಸಬೇಕಿದೆ. ಮತದಾರರ ಗುರುತಿನ ಚೀಟಿ ವಿತರಣೆಯಲ್ಲಿ ಶೇ. 100 ರಷ್ಟು ಸಾಧನೆಯಾಗಬೇಕಿದೆ. ಲಿಂಗತ್ವ ಅಲ್ಪಸಂಖ್ಯಾತರು ಮತದಾರರ ಪಟ್ಟಿಗೆ ಸೇರ್ಪಡೆಯಾಗಬೇಕು. ಈ ಎಲ್ಲಾ ಕಾರ್ಯಗಳಿಗೆ ರಾಜಕೀಯ ಪಕ್ಷಗಳು ಸಂಪೂರ್ಣವಾಗಿ ಸಹಕಾರ ಅಗತ್ಯವಿದೆಯೆಂದು ಜಿಲ್ಲಾಧಿಕಾರಿ ಬಿ.ರಾಮು ತಿಳಿಸಿದರು.
ಇದೇ ಸಂದರ್ಭದಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರದ ಕರಡು ಮತದಾರರ ಪಟ್ಟಿ ಕುರಿತು ವಿವರ ನೀಡಿದ ಜಿಲ್ಲಾಧಿಕಾರಿಯವರು ನವೆಂಬರ್ 21 ರಂದು ಕರಡು ಮತದಾರರ ಪಟ್ಟಿ ಪ್ರಚುರಪಡಿಸಲಾಗಿದೆ. ಈ ಸಂಬಂದ ಹಕ್ಕು ಆಕ್ಷೇಪಣೆಗಳನ್ನು ಸಲ್ಲಿಸಲು ಡಿಸೆಂಬರ್ 21 ರವರೆಗೂ ಕಾಲಾವಕಾಶ ನೀಡಲಾಗಿದೆ. 2018 ರ ಜನವರಿ 19 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ ಹಕ್ಕು ಆಕ್ಷೇಪಣೆಗಳನ್ನು ಜಿಲ್ಲಾಧಿಕಾರಿ ಕಚೇರಿ, ಉಪ ವಿಭಾಗಾಧಿಕಾರಿ ಕಚೇರಿ, ಆಯಾ ತಹಶೀಲ್ದಾರ್ ಕಚೇರಿಯಲ್ಲಿ ಸಲ್ಲಿಸಬಹುದಾಗಿದೆ.
ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟುಹೋಗಿರುವುದಕ್ಕೆ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಬಹುದು. ವಾಸಸ್ಥಳಕ್ಕೆ ಸಂಬಂಧಿಸಿದಂತೆ, ಎಪಿಕ್ ಕಾರ್ಡ್, ರೇಷನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಬ್ಯಾಂಕ್ ಪಾಸ್‍ಪುಸ್ತಕ, ಅನಿಲ ಸಂಪರ್ಕ ಪುಸ್ತಕ, ಆಧಾರ್ ಕಾರ್ಡ್ ಪೈಕಿ ಯಾವುದಾದರೂ ಒಂದು ದಾಖಲಾತಿ ಪ್ರತಿಯನ್ನು ಅರ್ಜಿಯ ಜೊತೆ ಲಗತ್ತಿಸಬೇಕಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಇದೇ ವೇಳೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಕರಡು ಮತದಾರರ ಪಟ್ಟಿಯನ್ನು ಜಿಲ್ಲಾಧಿಕಾರಿಯವರು ವಿತರಿಸಿದರು. ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಎ.ಎಸ್ ಗುರುಸ್ವಾಮಿ, ಪರಶಿವಮೂರ್ತಿ, ಬ್ಯಾಡಮೂಡ್ಲು ಬಸವಣ್ಣ, ಸಿ.ಎಂ ಕೃಷ್ಣಮೂರ್ತಿ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ. ಇತರರು ಸಭೆಯಲ್ಲಿ ಹಾಜರಿದ್ದರು.
ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ಸಿದ್ದತೆ : ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ
ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಶುಕ್ರವಾರ ದಕ್ಷಿಣ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ತಯಾರಿ ಸಂಬಂಧ ನಡೆದ ಮುಖ್ಯೋಪಾಧ್ಯಾಯರು, ಪ್ರಾಂಶುಪಾಲರು, ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು
ಅರ್ಹ ಶಿಕ್ಷಕರು ನಮೂನೆ-19 ರಲ್ಲಿ ಅರ್ಜಿ ಸಲ್ಲಿಸಿ, ಶಿಕ್ಷಕರ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಲು ತನ್ನ ಶೈಕ್ಷಣಿಕ ಸಂಸ್ಥೆಯ ಮುಖ್ಯಸ್ಥರಿಂದ ದೃಢೀಕರಿಸಿ, ಹಿಂದಿನ ಆರು ವರ್ಷಗಳಲ್ಲಿ ಒಟ್ಟು ಮೂರು ವರ್ಷಗಳು ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಕುರಿತು ಪ್ರಮಾಣಪತ್ರವನ್ನು ಲಗತ್ತಿಸಬೇಕಿದೆ ಎಂದರು.
ಈಗಾಗಲೇ ಸಲ್ಲಿಸಲಾಗಿದ್ದ ಅರ್ಜಿಗಳ ಪೈಕಿ ವಾಸಸ್ಥಳ ದೃಢೀಕರಣ ದಾಖಲಾತಿ ನೀಡದೇ ಹಾಗೂ ನ್ಯೂನತೆಯಿಂದ ಕೂಡಿದ್ದ ಅರ್ಜಿದಾರರಿಗೆ ವಾಸಸ್ಥಳ ದಾಖಲಾತಿ ನೀಡಲು ತಿಳಿಸಲಾಗಿದೆ. ವಾಸಸ್ಥಳದ ಬಗ್ಗೆ ಚುನಾವಣಾ ಗುರುತಿನ ಚೀಟಿ, ಆಧಾರ್ , ಗ್ಯಾಸ್ ಸಂಪರ್ಕ, ಪಡಿತರ ಚೀಟಿ, ವಿದ್ಯುತ್ ಬಿಲ್ ಬ್ಯಾಂಕ್ ಪಾಸ್‍ಪುಸ್ತಕ, ಡ್ರೈವಿಂಗ್ ಲೈಸೆನ್ಸ್, ಇನ್ನಿತರ ಯಾವುದೇ ಒಂದು ದಾಖಲೆಯನ್ನು ನೀಡಬಹುದಾಗಿದೆ. ಈ ಕುರಿತು ಮನವರಿಕೆ ಮಾಡಿಕೊಡಬೇಕಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಶಾಲಾ ಮುಖ್ಯೋಪಾಧ್ಯಾಯರು, ಪ್ರಾಂಶುಪಾಲರು ಶೀಘ್ರವೇ ಶಿಕ್ಷಕರ ಸಭೆ ಕರೆದು, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಲು ಅವರ ಗಮನಕ್ಕೆ ತರಬೇಕು. ಈ ಸಂಬಂಧ ಕಾರ್ಯೋನ್ಮುಖರಾಗುವಂತೆ ಜಿಲ್ಲಾಧಿಕಾರಿ ಬಿ.ರಾಮು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ. ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ರೆಜಿನಾ ಮಲಾಕಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಕೆ.ಮಹದೇವಪ್ಪ ಹಾಗೂ ಜಿಲ್ಲೆಯ ತಹಶೀಲ್ದಾರರು ಸಭೆಯಲ್ಲಿ ಹಾಜರಿದ್ದರು.
No comments:
Post a Comment