Wednesday, 20 December 2017

ಕಾನೂನು ಗೌರವಿಸಿ: ಸಿವಿಲ್ ನ್ಯಾಯಾಧೀಶರಾದ ಆರ್. ಪಿ ನಂದೀಶ್ (19-12-2017)

   

ಕಾನೂನು ಗೌರವಿಸಿ: ಸಿವಿಲ್ ನ್ಯಾಯಾಧೀಶರಾದ ಆರ್. ಪಿ ನಂದೀಶ್

ಚಾಮರಾಜನಗರ, ಡಿ. 18 :- ಕಾನೂನು ಒಂದು ಸಂಕೀರ್ಣವಾದ ಭಾಷೆಯಾಗಿದ್ದು, ಅದನ್ನು ಗೌರವಿಸಿ ಪಾಲಿಸುವುದನ್ನು ಪ್ರತಿಯೊಬ್ಬರು ಕಲಿಯಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಆರ್. ಪಿ. ನಂದೀಶ್ ಅವರು ಅಭಿಪ್ರಾಯ ಪಟ್ಟರು. 
ನಗರದ ಜೆ.ಎಸ್.ಎಸ್ ಮಹಿಳಾ ಕಾಲೇಜಿನ ಸಂಭಾಗಣದಲ್ಲಿಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜೆ.ಎಸ್.ಎಸ್ ಮಹಿಳಾ ಕಾಲೇಜು ಹಾಗೂ ಸಾಧನಾ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಕಾಯ್ದೆ-ಕಾನೂನುಗಳನ್ನು ಜನರ ರಕ್ಷಣೆಗಾಗಿಯೇ ಜಾರಿಗೊಳಿಸಲಾಗಿದೆ. ಆದರೆ ನಿತ್ಯ ಜೀವನದಲ್ಲಿ ಕಾನೂನು ಉಲ್ಲಂಘನೆಯಾಗುತ್ತ್ತಿದೆ. ಕಾನೂನಿನ ಅರಿವಿಲ್ಲವೆಂದು ಯಾರೂ ಸಹ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಈಗಿನಿಂದಲೇ ಕಾನೂನನ್ನು ಗೌರವಿಸಿ ಪಾಲಿಸಲು ನಿತ್ಯಜೀವನದಲ್ಲಿ ನೈತಿಕತೆಯನ್ನು ಅಳವಡಿಸಿಕೊಳ್ಳಬೇಕು ಎಂದರು.
ವಿವಾಹ ವಿಚ್ಚೇದನ, ಭ್ರಷ್ಟಚಾರ, ಕಳ್ಳತನದಂತಹ ಪ್ರಕರಣಗಳು ಹೆಚ್ಚಾಗುತ್ತಲಿದೆ. ಇದು ಕಾನೂನಿನ ಅರಿವಿನ ಕೊರತೆಯಿಂದ ಸಂಭವಿಸುತ್ತಿವೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ತರಗತಿ ಬೋಧನೆಯ ಜೊತೆಗೆ ಭವಿಷ್ಯದ ಉತ್ತಮ ಜೀವನದ ಕುರಿತು ನೈತಿಕ ತಿಳುವಳಿಕೆಗಳ ಅರಿವು ಮೂಡಿಸುವುದರ ಮೂಲಕ ಉತ್ತಮ ನಾಗರಿಕರಾಗುವಂತೆ ಮಾಡಿ ಸದೃಢ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಬೇಕು ಎಂದು ತಿಳಿಸಿದರು.
ಇಂದಿನ ಮಕ್ಕಳು, ಯುವಕರು ಯುಟೂಬ್, ಫೇಸ್‍ಬುಕ್, ವಾಟ್ಸಾಪ್ ನಂತಹ ಸಾಮಾಜಿಕ ಜಾಲತಾಣಗಳ ದಾಸರಾಗುತ್ತಿದಾರೆ. ಪೊಷಕರು ಇದಕ್ಕೆ ಅವಕಾಶ ಮಾಡಿಕೊಡದೆ ಓದಿನತ್ತ ಮಕ್ಕಳು ಗಮನ ಹರಿಸುವಂತೆ ಮಾಡಬೇಕು. ಆ ಮೂಲಕ ವಿದ್ಯಾರ್ಥಿಗಳನ್ನು ಭವಿಷ್ಯದ ಸತ್ಪ್ರ್ಪಜೆಗಳಾಗಿ ರೂಪಿಸಲು ಪೋಷಕರು ಸಕ್ರಿಯರಾಗಬೇಕು ಎಂದು ನಂದೀಶ್ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿ ಮಾತನಾಡಿದ ಜಿಲ್ಲಾ ಆಸ್ಪತ್ರೆಯ ಮನೋರೋಗ ತಜ್ಞರಾದ ವತ್ಸಲ ಇಂದಿನ ದಿನಗಳಲ್ಲಿ ಕುಲ್ಲಕ ಕಾರಣಕ್ಕಾಗಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ಮಾನಸಿಕ ಒತ್ತಡ ಮುಖ್ಯ ಕಾರಣವಾಗಿದೆ. ಒತ್ತಡವು ಈ ಶತಮಾನದ ಅತಿದೊಡ್ಡ ಖಾಯಿಲೆಯಾಗಿದೆ. ಒತ್ತಡದಂತಹ ದುಷ್ಪರಿಣಾಮದಿಂದ ಹೊರಬರಲು ವಿದ್ಯಾರ್ಥಿ ದೆಸೆಯಿಂದಲೇ ಒತ್ತಡಮುಕ್ತ ಜೀವನವನ್ನು ಅಳವಡಿಸಿಕೊಳ್ಳಬೇಕಾಗಿದೆ. ಮಾನಸಿಕ ಒತ್ತಡ ಎದುರಾದಾಗ ಪೋಷಕರು, ಸೇಹಿತರು, ಶಿಕ್ಷಕರು ಮತ್ತು ವೈದ್ಯರೊಂದಿಗೆ ಚರ್ಚಿಸಿ ಪರಿಹರಿಸಿಕೊಳ್ಳಬಹುದು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಉಮ್ಮತ್ತೂರು ಇಂದುಶೇಖರ್, ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಕಾನೂನು ಅರಿವು ಕುರಿತು ಮಾತನಾಡಿದರು.
ಜೆ.ಎಸ್.ಎಸ್ ಮಹಿಳಾ ಪದವಿ ಕಾಲೇಜು ಪ್ರಾಂಶುಪಾಲರಾದ ಎ. ಜಿ. ಶಿವಕುಮಾರ್ ಅವರು ಕಾರ್ಯಕ್ರಮದ ಅಧ್ಯತಕ್ಷತೆ ವಹಿಸಿದ್ದರು.
ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಬಿ. ಮಹಾಲಿಂಗಪ್ಪ, ಸಾಧನಾ ಸಂಸ್ಥೆಯ ನಿರ್ದೇಶಕರದ ಟಿ.ಜೆ. ಸುರೇಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
   


ಡಿ. 20ರಂದು ವಿಶ್ವ ಮಾನವ ದಿನಾಚರಣೆ ಪೂರ್ವಭಾವಿ ಸಭೆ

ಚಾಮರಾಜನಗರ, ಡಿ. 19- ವಿಶ್ವ ಮಾನವ ದಿನಾಚರಣೆಯನ್ನು ಚಾಮರಾಜನಗರ ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರದಲ್ಲಿ ಅರ್ಥಪೂರ್ಣವಾಗಿ ಆಚರಿಸುವ ಕುರಿತು ಪೂರ್ವಭಾವಿ ಸಭೆಯನ್ನು ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಡಿಸೆಂಬರ್ 20ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಭೆ ಕರೆಯಲಾಗಿದೆ.
ಈ ಸಭೆಗೆ ಎಲ್ಲ ಸಂಘಸಂಸ್ಥೆ, ಸಮುದಾಯದ ಮುಖಂಡರು, ಪ್ರತಿನಿಧಿಗಳು, ನಾಗರಿಕರು ಹಾಜರಾಗಿ ಅಗತ್ಯ ಸಲಹೆ ನೀಡುವಂತೆ ಕೋರಲಾಗಿದೆ.

ಡಿ. 20ರಂದು ನಗರಸಭಾ ಸದಸ್ಯರಿಗೆ ಸ್ವಚ್ಚ ಸರ್ವೇಕ್ಷಣೆ ಸಭೆ

ಚಾಮರಾಜನಗರ, ಡಿ. 19- ಚಾಮರಾಜನಗರ ನಗರಸಭೆ ವತಿಯಿಂದ ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿಯಲ್ಲಿ ನಗರಸಭಾ ಸದಸ್ಯರುಗಳಿಗೆ ಸ್ವಚ್ಚ ಸರ್ವೇಕ್ಷಣೆ-2018ರ ಕುರಿತು ಡಿಸೆಂಬರ್ 20ರಂದು ಮಧ್ಯಾಹ್ನ 3 ಗಂಟೆಗೆ ನಗರಸಭೆ ಕಚೇರಿ ಸಭಾಂಗಣದಲ್ಲಿ ಸಭೆ ಕರೆಯಲಾಗಿದೆ ಎಂದು ಪೌರಾಯುಕ್ತರ ಪ್ರಕಟಣೆ ತಿಳಿಸಿದೆ. 

ಕೊಳ್ಳೇಗಾಲ : ಕಂದಾಯ ನ್ಯಾಯಾಲಯದ ಪ್ರಕರಣ ಮುಂದೂಡಿಕೆ
ಚಾಮರಾಜನಗರ, ಡಿ. 19 - ಕ್ರಿಸ್‍ಮಸ್ ಹಬ್ಬದ ಅಂಗವಾಗಿ ಜಿಲ್ಲೆಯ ಎಲ್ಲಾ ಸಿವಿಲ್ ನ್ಯಾಯಾಲಯಗಳಿಗೆ  ಡಿಸೆಂಬರ್ 31ರವರೆಗೆ ರಜೆ ಘೋಷಿಸಿರುವುದರಿಂದ ಕಂದಾಯ ನ್ಯಾಯಾಲಯಗಳಲ್ಲಿ ಈ ಅವಧಿಯಲ್ಲಿರುವ ಪ್ರಕರಣಗಳನ್ನು ವಿಚಾರಣೆ ಮಾಡದಂತೆ ಮುಂದೂಡಲು ಕೋರಿರುವುದರಿಂದ ರಜೆ ಅವಧಿಯ ಪ್ರಕರಣಗಳನ್ನು ಮುಂದೂಡಿರುವುದಾಗಿ ಕೊಳ್ಳೇಗಾಲ ಉಪವಿಭಾಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ. 23ರಂದು ನೇರ ಫೋನ್-ಇನ್ ಕಾರ್ಯಕ್ರಮ

ಚಾಮರಾಜನಗರ, ಡಿ. 19 - ಜಿಲ್ಲೆಯ ನಾಗರಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ಜಿಲ್ಲಾಡಳಿತದ ವತಿಯಿಂದ ಡಿಸೆಂಬರ್ 23ರಂದು ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನೇರ ಫೋನ್ ಇನ್ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ನಾಗರಿಕರು ಕುಂದುಕೊರತೆಗಳಿದ್ದಲ್ಲಿ ದೂರವಾಣಿ ಸಂಖ್ಯೆ 08226-224888ಗೆ ಕರೆ ಮಾಡಿ ಪರಿಹರಿಸಿಕೊಳ್ಳುವಂತೆ ಜಿಲ್ಲಾಧಿಕಾರಿಯವರ ಪ್ರಕಟಣೆ ತಿಳಿಸಿದೆ.

ಡಿ. 23ರಂದು ಪ.ಜಾ. ನಿರುದ್ಯೋಗಿ ಅಭ್ಯರ್ಥಿಗಳಿಗೆ ಲಘುವಾಹನ ಚಾಲನಾ ತರಬೇತಿಗೆ ಸಂದರ್ಶನ

ಚಾಮರಾಜನಗರ, ಡಿ. 19 :- ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿಗೆ ಪರಿಶಿಷ್ಟ ಜಾತಿ ನಿರುದ್ಯೋಗಿ ಯುವಕ, ಯುವತಿಯರಿಗೆ ಡಿಸೆಂಬರ್ 23ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಲಘು ವಾಹನ ಚಾಲನಾ ತರಬೇತಿ ನೀಡುವ ಸಂಬಂಧ ನೇರ ಸಂದರ್ಶನ ಏರ್ಪಡಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ವಿಕಲಚೇತನರಿಂದ ಅರ್ಜಿ ಆಹ್ವಾನ


ಚಾಮರಾಜನಗರ, ಡಿ. 19 :- ಚಾಮರಾಜನಗರ ತಾಲೂಕಿನ ಶಿವಪುರ, ಸಂತೆಮರಹಳ್ಳಿ, ಗೋವಿಂದವಾಡಿ, ಮಸಗಾಪುರ, ಕೊತ್ತಲವಾಡಿ, ಹೆಬ್ಬಸೂರು, ದೊಡ್ಡಮೋಳೆ, ನವಿಲೂರು, ಯರಗನಹಳ್ಳಿ, ಮುಕ್ಕಡಹಳ್ಳಿ, ಹರವೆ ಹಾಗೂ ಕೆಂಪನಪುರ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆ ನೇಮಕಾತಿಗಾಗಿ ಅರ್ಹ ವಿಕಲಚೇತನ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಅಭ್ಯರ್ಥಿಗಳು 18 ರಿಂದ 45ರ ವಯೋಮಾನದವರಾಗಿದ್ದು ಆರೋಗ್ಯವಂತರಾಗಿರಬೇಕು. ಎಸ್‍ಎಸ್‍ಎಲ್‍ಸಿ ಉತ್ತೀರ್ಣರಾಗಿರಬೇಕು. ಸಂಬಂಧಿಸಿದ ಸ್ಥಳೀಯ ಗ್ರಾಮ ಪಂಚಾಯಿತಿಗೆ ಸೇರಿದವರಾಗಿದ್ದು, ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಿಸುತ್ತಿರಬೇಕು. ಅಂಧರಿಗೆ, ಭಾಗಶ: ಶ್ರವಣದೋಷವುಳ್ಳವರಿಗೆ, ದೈಹಿಕ ಅಂಗವಿಕಲರಿಗೆ ಅವಕಾಶ ಕಲ್ಪಿಸಲಾಗುವುದು. ಅಂಗವಿಕಲತೆಯು ಶೇ. 40ಕ್ಕಿಂತ ಹೆಚ್ಚು ಹಾಗೂ 75ಕ್ಕಿಂತ ಕಡಿಮೆ ಇದ್ದು ವೈದ್ಯರಿಂದ ವೈದ್ಯಕೀಯ ಹಾಗೂ ಗುರುತಿನ ಪ್ರಮಾಣ ಪತ್ರ ಹೊಂದಿರಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚರಿಸಿ ಮಾಹಿತಿ, ಸೌಲಭ್ಯ ಕಲ್ಪಿಸಲು ಸಮರ್ಥರಿರಬೇಕು. ಗೌರವಧನದ ಆಧಾರದ ಮೇಲೆ ಕಾರ್ಯ ನಿರ್ವಹಿಸಬೇಕು.
ನಿಗದಿತ ಅರ್ಜಿಯನ್ನು ನಗರದ ತಾಲೂಕು ಪಂಚಾಯಿತಿಯಿಂದ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಡಿಸೆಂಬರ್ 30ರೊಳಗೆ ಕಚೇರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರನ್ನು ಸಂಪರ್ಕಿಸುವಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಪಿಎಚ್‍ಡಿ ಅಧ್ಯಯನಕ್ಕೆ ವೇತನ, ಫೆಲೋಶಿಪ್, ಶುಲ್ಕ ವಿನಾಯಿತಿಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಚಾಮರಾಜನಗರ, ಡಿ. 19- ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2017-18ನೇ ಸಾಲಿನಲ್ಲಿ ಪೂರ್ಣಾವಧಿ ಪಿಎಚ್‍ಡಿ ಅಧ್ಯಯನದಲ್ಲಿ ತೊಡಗಿರುವ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ, 3ಬಿ. ಹಾಗೂ ಇತರೆ ಓಬಿಸಿಗೆ ಸೇರಿದ ವಿದ್ಯಾರ್ಥಿಗಳಿಗೆ ಇಲಾಖೆಯಿಂದ ನೀಡುವ ಮಾಸಿಕ ವ್ಯಾಸಂಗ ವೇತನ, ಫೆಲೋಷಿಪ್ ಹಾಗೂ ನಿಗಧಿತ ಶುಲ್ಕ ವಿನಾಯಿತಿಗೆ ಈ ಹಿಂದೆ ಆಯ್ಕೆಯಾಗಿದ್ದು ಪ್ರಸ್ತುತ ಸಾಲಿನಲ್ಲಿ ಮುಂದುವರೆಯುತ್ತಿರುವ ಅರ್ಹ ನವೀಕರಣ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
2017ರ ಏಪ್ರಿಲ್ 1ರಿಂದಿಚೆಗೆ ಪ್ರಥಮ ವರ್ಷದಲ್ಲಿ ಪೂರ್ಣಾವಧಿ ಪಿಎಚ್‍ಡಿ ಅಧ್ಯಯನದಲ್ಲಿ ತೊಡಗಿರುವ ವಿದ್ಯಾರ್ಥಿಗಳಿಂದ ಈ ಮೊದಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. ಅಂತಹವರು ಈಗಲೂ ಸಹ  ಅರ್ಜಿ ಸಲ್ಲಿಸಬಹುದಾಗಿದೆ.
2, 3 ಮತ್ತು 4ನೇ ವರ್ಷದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸದಿದ್ದಲ್ಲಿ ಡಿಸೆಂಬರ್ 23ರವರೆಗೆ ಅರ್ಜಿ ಸಲ್ಲಿಕೆ ಅವಧಿಯನ್ನು ವಿಸ್ತರಿಸಲಾಗಿದೆ.
ಹೆಚ್ಚಿನ ಮಾಹಿತಿಗೆ ಇಲಾಖಾ ವೆಬ್ ಸೈಟ್ ತಿತಿತಿ.bಚಿಛಿಞತಿಚಿಡಿಜಛಿಟಚಿsses.ಞಚಿಡಿ.ಟಿiಛಿ.iಟಿ ನೋಡಬಹುದು. ಅಥವ ಸಹಾಯವಾಣಿ ಸಂಖ್ಯೆ 080-65970004ನ್ನು ಸಂಪರ್ಕಿಸುವಂತೆ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರÉ.





No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು