Tuesday, 12 December 2017

ತಾಲ್ಲೂಕಿನ ವಿವಿಧ ಶಾಲೆ, ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿ.ಪಂ ಸಿಇಒ ಭೇಟಿ: ವ್ಯವಸ್ಥೆ ಪರಿಶೀಲನೆ (11-12-2017)

   

ತಾಲ್ಲೂಕಿನ ವಿವಿಧ ಶಾಲೆ, ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿ.ಪಂ ಸಿಇಒ ಭೇಟಿ: ವ್ಯವಸ್ಥೆ ಪರಿಶೀಲನೆ 
 ಚಾಮರಾಜನಗರ, ಡಿ. 11 :- ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅವರು ತಾಲ್ಲೂಕಿನ ಹರದನಹಳ್ಳಿ ಹಾಗೂ ಅಮಚವಾಡಿ ಭಾಗದ ವಿವಿಧ ಶಾಲೆ, ಅಂಗನವಾಡಿಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇಂದು ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ವ್ಯಾಪಕವಾಗಿ ಪರಿಶೀಲಿಸಿದರು,

ಮೊದಲು ಹರದನಹಳ್ಳಿಯ ಸರ್ಕಾರಿ ಪ್ರೌಢಶಾಲೆಗೆ ಭೇಟಿ ಕೊಟ್ಟ ಹರೀಶ್ ಕುಮಾರ್ ಅವರು ಶಾಲಾ ಮಕ್ಕಳ ಹಾಗೂ ಶಿಕ್ಷಕರ ಹಾಜರಾತಿಯನ್ನು ಪರಿಶೀಲಿಸಿದರು. ಮಕ್ಕಳ ಸಂಖ್ಯೆ ಹಾಜರಾತಿಗಿಂತ ಕಡಿಮೆ ಕಂಡುಬಂದ ಹಿನ್ನೆಲೆಯಲ್ಲಿ ಕಾರಣ ಕೇಳಲಾಗಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸ ತೆರಳಿರುವುದಾಗಿ ಸಹ ಶಿಕ್ಷಕರು ತಿಳಿಸಿದರು. 

ಬಳಿಕ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ವೇಳೆ ಶಿಕ್ಷಕರ ಹಾಜರಾತಿಯನ್ನು ಸಹ ಪರಿಶೀಲಿಸಿದರು. ಇದೇ ವೇಳೆ ಗೈರು ಹಾಜರಾಗಿದ್ದ ಇಬ್ಬರು ಶಿಕ್ಷಕರ ಬಗ್ಗೆ ಪ್ರಶ್ನಿಸಿದ ಸಿ.ಇ.ಓ ಅವರು ಸಂಬಂಧಪಟ್ಟವರ ವಿರುದ್ದ ಕ್ರಮವಹಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.

ಇದೇ ವೇಳೆ ಅಲ್ಲಿನ ಶಾಲೆಯ ಅಡುಗೆ ಕೊಠಡಿ, ದಾಸ್ತಾನು ಕೊಠಡಿಯನ್ನು ಪರಿಶೀಲಿಸಿದ ವೇಳೆ ಶುಚಿತ್ವವಿಲ್ಲದಿರುವುದು ಕಂಡುಬಂದಿತು. ಈ ಎರಡು ಕೊಠಡಿಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಶಿಕ್ಷಕರಿಗೆ ಸಿಇಒ ಅವರು ತಾಕೀತು ಮಾಡಿದರು. ಶಾಲೆಯ ಮುಂಭಾಗದಲ್ಲಿ ಮಣ್ಣನ್ನು ಪೇರಿಸಿ ಹಾಕಿರುವ ಬಗ್ಗೆ ತೀವ್ರ ಅಸಮಾದಾನ ವ್ಯಕ್ತಪಡಿಸಿದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕೂಡಲೇ ಸರಿಪಡಿಸಿ ಮಕ್ಕಳಿಗೆ ಆಟವಾಡಲು ಅನುಕೂಲ ಕಲ್ಪಿಸುವಂತೆ ನಿರ್ದೇಶನ ನೀಡಿದರು.
ಶಾಲೆ ಆವರಣದಲ್ಲಿ ಕಸ ಕಡ್ಡಿಗಳು ತುಂಬಿರುವುದನ್ನು ವೀಕ್ಷಿಸಿದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಶ್ರಮದಾನದ ಮೂಲಕ ಶಾಲಾ ಆವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಅಗತ್ಯ ಕಾರ್ಯಕ್ರಮ ಆಯೋಜಿಸುವಂತೆಯು ಮುಖ್ಯ ಶಿಕ್ಷಕರು ಹಾಗೂ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದರು.
ತದನಂತರ ಬಂಡಿಗೆರೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ಕೊಟ್ಟು ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಸ್ಥಳಿಯ ಮೂರು ಅಂಗನವಾಡಿ ಕೇಂದ್ರಗಳಿಗೆ ಭೇಟಿ ಕೊಟ್ಟರು. ಈ ಸಂದರ್ಭದಲ್ಲಿ ಶೇ.25 ರಷ್ಟು ಹಾಜರಾತಿ ಮಾತ್ರ ಇರುವುದನ್ನು ಗಮನಿಸಿ ಮಕ್ಕಳ ಹಾಜರಾತಿ ಏಕೆ ಕಡಿಮೆಯಾಗಿದೆ ಎಂದು ಪ್ರಶ್ನಿಸಿದರು. ಇಂದು ಧಾರ್ಮಿಕ ಕಾರ್ಯ ಒಂದು ಗ್ರಾಮದಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳು ನೀರಿಕ್ಷಿತ ಸಂಖ್ಯೆಯಲ್ಲಿ ಬಂದಿಲ್ಲವೆಂದು ಕಾರ್ಯಕರ್ತೆಯರು ಉತ್ತರಿಸಿದರು.
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಮಾತೃಪೂರ್ಣ ಅನುಷ್ಠಾನ ಕುರಿತು ಮಾಹಿತಿ ಪಡೆದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಎಷ್ಟು ಮಹಿಳೆಯರು ಊಟ ಸ್ವೀಕರಿಸುತ್ತಿದ್ದಾರೆ? ಅರ್ಹರಿಗೆ ಈ ಯೋಜನೆ ತಲುಪುತ್ತಿದೆಯೇ? ಈ ಸಂಬಂಧ ವಹಿಸಿರುವ ಕ್ರಮಗಳು ಸರಿ ಇದೆಯೇ? ಎಂಬ ಬಗ್ಗೆ ಕೂಲಂಕಶವಾಗಿ ಪರಿಶೀಲಿಸಿದರು.
ಬಳಿಕ ಹರದನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಕಾರ್ಯ ವೈಖರಿಯನ್ನು ವೀಕ್ಷಿಸಿದರು. ಪ್ರತಿದಿನ 80 ರಿಂದ 90 ಮಂದಿ ರೋಗಿಗಳು ಈ ಪ್ರಾಥಮಿಕ ಆರೋಗ್ಯ ಕೇಂದ್ರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಯಾವುದೇ ಸಮಸ್ಯೆ ಇಲ್ಲವೆಂದು ಅಲ್ಲಿನ ವೈದ್ಯರು ಉತ್ತರಿಸಿದರು.
ನಂತರ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ಕೊಟ್ಟು ಅಲ್ಲಿ ಕಲ್ಪಿಸಿರುವ ಸೌಲಭ್ಯಗಳನ್ನು ಪರಿಶೀಲಿಸಿದರು. ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಭೇಟಿ ಕೊಟ್ಟ ಸಮಯದಲ್ಲಿ ಸ್ವಂತ ಕಟ್ಟಡವಿಲ್ಲದ ಕಾರಣ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂಬ ಅಂಶವು ಮನವರಿಕೆಯಾಯಿತು.
ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿಲಯಕ್ಕೆ ತೆರಳಿ ಪರಿಶೀಲಿಸಿದ ಸಂದರ್ಭದಲ್ಲಿ ಸ್ನಾಹ ಗೃಹ, ಅಡುಗೆ ಇನ್ನಿತರ ಕೊಠಡಿಗಳಿಗೆ ಅಳವಡಿಸಲಾಗಿರುವ ಬಾಗಿಲುಗಳು ಸುಸ್ಥಿತಿಯಲ್ಲಿ ಇರದ ಕಾರಣ ಬದಲಿಸುವಂತೆ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಿಗೆ ಹರೀಶ್ ಕುಮಾರ್ ರವರು ಸೂಚಿಸಿದರು. ವಿದ್ಯಾರ್ಥಿಗಳಿಗೆ ಮೆನು ಪ್ರಕಾರವೇ ಆಹಾರ ತಯಾರಿಸಿ ನೀಡಬೇಕು, ವಿದ್ಯಾರ್ಥಿನಿಲಯದಲ್ಲಿ ನೈರ್ಮಲ್ಯ ಕಾಪಾಡಬೇಕು ಎಂದು ತಿಳಿಸಿದರು.
ಅಮಚವಾಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ಬಿಸಿಯೂಟ ಯೋಜನೆಯಡಿ ನೀಡುತ್ತಿರುವ ಆಹಾರ ಪದಾರ್ಥಗಳನ್ನು ವೀಕ್ಷಿಸಿದರು. ದಾಸ್ತಾನು ವಹಿಯನ್ನು ಸಹ ಪಡೆದುಕೊಂಡು ಹೇಗೆ ದಾಖಲು ಮಾಡಲಾಗುತ್ತಿದೆ ಎಂಂಬ ಬಗ್ಗೆ ಪರಿಶೀಲಿಸಿದರು. ಗ್ರಾಮದ ಅಂಗನವಾಡಿಗೂ ಭೇಟಿ ಕೊಟ್ಟು ಮಾತೃ ಪೂರ್ಣ ಯೋಜನೆ ಕುರಿತು ವ್ಯಾಪವಾಗಿ ಪರಿಶೀಲಿಸಿದರು.
ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಕೆ.ಎಚ್.ಸತೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ಲಕ್ಷ್ಮೀಪತಿ ಈ ಸಂದರ್ಭದಲ್ಲಿ ಹಾಜರಿದ್ದರು.

ಡಿ. 12ರಂದು ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಸಭೆ

ಚಾಮರಾಜನಗರ, ಡಿ. 11 :- ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರ ಅಧ್ಯಕ್ಷತೆಯಲ್ಲಿ ಡಿಸೆಂಬರ್ 12ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾ ಪಂಚಾಯತ್ ನೂತನ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಪರಿಶೀಲನಾ ಸಭೆ ಕರೆಯಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಡಿ. 13ರಂದು ಹೋಬಳಿ ಮಟ್ಟದ ಗ್ರಾಮೀಣ ಕ್ರೀಡೋತ್ಸವ

ಚಾಮರಾಜನಗರ, ಡಿ. 11  ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಹುರಳಿನಂಜನಪುರದ ಉದಯ್ ಭೀಮ್ ಯುವಜನ ಸಂಘ ಇವರ ಸಹಯೋಗದೊಂದಿಗೆ ಡಿಸೆಂಬರ್ 13ರಂದು ಬೆಳಿಗ್ಗೆ 11 ಗಂಟೆಗೆ ತಾಲೂಕಿನ ಜ್ಯೋತಿಗೌಡನಪುರದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಚಂದಕವಾಡಿ ಹೋಬಳಿ ಮಟ್ಟದ ಗ್ರಾಮೀಣ ಕ್ರೀಡೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ. ಸದಾಶಿವ ಮೂರ್ತಿ ಕಾರ್ಯಕ್ರಮ ಉದ್ಘಾಟಿಸುವರು. ಜ್ಯೋತಿಗೌಡನಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಚಂದ್ರಮ್ಮ ಅಧ್ಯಕ್ಷತೆ ವಹಿಸುವರು. ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಹೆಚ್.ವಿ. ಚಂದ್ರು, ಚಂದಕವಾಡಿ ಜಿಲ್ಲಾ ಪಂಚಾಯತ್ ಸದಸ್ಯರಾದ ಆರ್. ಬಾಲರಾಜು. ತಾಲೂಕು ಪಂಚಾಯಿತಿ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ, ಜ್ಯೋತಿಗೌಡನಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಯಶೋಧಮ್ಮ, ತಾಲೂಕು ಪಂಚಾಯಿತಿ ಸದಸ್ಯರಾದ ಎನ್.ಆರ್. ಆಶಾ. ಜ್ಯೋತಿಗೌಡನಪುರದ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ಡಾ.ಹೆಚ್.ಪಿ. ಬಸವರಾಜು, ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರಸಾದ್ ಮೂರ್ತಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಎಂ. ಚಲುವಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರÉ.

ಪರಿಹಾರ ಬೋಧನಾ ಕೇಂದ್ರದಲ್ಲಿ ಶಿಕ್ಷಕರ ಹುದ್ದೆಗೆ ಸಂಪರ್ಕಿಸಿ

ಚಾಮರಾಜನಗರ, ಡಿ. 11 - ಸಾರ್ವಜನಿಕ ಶಿಕ್ಷಣ ಇಲಾಖೆಯು 2017-18ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯ ಭಾಷಾ ಅಲ್ಪಸಂಖ್ಯಾತ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪರಿಹಾರ ಬೋಧನಾ ಕಾರ್ಯಕ್ರಮವನ್ನು ಡಿಸೆಂಬರ್ 12 ರಿಂದ 31ರವರೆಗೆ ನಡೆಸಲಿದೆ.
ಕೇಂದ್ರದಲ್ಲಿ ಸಂಜೆ 3.30 ರಿಂದ 5.30ರವರೆಗೆ ಶಿಕ್ಷಕರಾಗಿ ಕಾರ್ಯನಿರ್ವಹಿಸಲು ಬಿಎಸ್ಸಿ, ಬಿಎಡ್ ಪದವೀಧರರು, ಬಿಎ, ಬಿಎಡ್ ಪದವೀಧರರು ಹಾಗೂ ಇಂಗ್ಲೀಷ್ ಜ್ಞಾನವುಳ್ಳವರು ಅಗತ್ಯವಿರುವುದರಿಂದ ತುರ್ತಾಗಿ ಉರ್ದು ಜಿಲ್ಲಾ ನೋಡಲ್ ಅಧಿಕಾರಿಯಾದ ಶಬನಾ ಅಂಜುಮ್ (ಮೊಬೈಲ್ 9449769004) ಅವರನ್ನು ಸಂಪರ್ಕಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರÉ.


ಚಾ.ನಗರ ನಗರಸಭೆ : ನಾಗರಿಕರ ಕುಂದುಕೊರತೆ ದಾಖಲಿಸಲು ಜನಹಿತ ತಂತ್ರಾಂಶ

ಚಾಮರಾಜನಗರ, ಡಿ. 11 - ಚಾಮರಾಜನಗರ ನಗರಸಭಾ ವ್ಯಾಪ್ತಿಯ ನಾಗರಿಕರು ತಮ್ಮ ಕುಂದುಕೊರತೆಗಳನ್ನು ದಾಖಲಿಸಲು ಅನುಕೂಲವಾಗುವಂತೆ ಜನಹಿತ ತಂತ್ರಾಂಶವನ್ನು ಅನುಷ್ಠಾನಗೊಳಿಸಲಾಗಿದೆ.
ಜನಹಿತ ಮೊಬೈಲ್ ತಂತ್ರಾಂಶವನ್ನು (ಮೊಬೈಲ್ ಆಪ್) ಕರ್ನಾಟಕ ಮುನಿಸಿಪಲ್ ಡಾಟಾ ಸೊಸೈಟಿಯಿಂದ ಅಭಿವೃದ್ಧಿಪಡಿಸಲಾಗಿದ್ದು ನಾಗರಿಕರು ಮೊಬೈಲ್ ತಂತ್ರಾಂಶದ ಮೂಲಕ ದೂರುಗಳನ್ನು ದಾಖಲಿಸಬಹುದು ಹಾಗೂ ದೂರುಗಳ ಸ್ಥಿತಿಗತಿಗಳನ್ನು ತಿಳಿದುಕೊಳ್ಳಬಹುದು.
ಮೊಬೈಲ್ ಆಪ್ ಅನ್ನು ಗೂಗಲ್ ಪ್ಲೇ ಸ್ಟೋರ್‍ನಲ್ಲಿ (ಎಂಓಂಊIಖಿಊಂ) ಎಂದು ನಮೂದಿಸಿ ಡೌನ್ ಲೋಡ್ ಮಾಡಿಕೊಂಡು ಮೊಬೈಲ್ ಸಂಖ್ಯೆಯನ್ನು ನೋಂದಣಿ ಮಾಡಿಕೊಂಡ ನಂತರ ದೂರು ದಾಖಲಿಸಲು ಜಿಲ್ಲೆಯ ಹೆಸರು, ನಗರ ಸ್ಥಳೀಯ ಸಂಸ್ಥೆಯ ಹೆಸರು, ವಾರ್ಡ್‍ಗಳ ಸಂಖ್ಯೆ, ದೂರಿನ ವರ್ಗ ಮತ್ತು ಉಪವಿಭಾಗವನ್ನು ಆಯ್ಕೆ ಮಾಡಿ ದೂರಿನ ವಿಳಾಸ, ವಿವರ ಮತ್ತು ಛಾಯಾಚಿತ್ರವನ್ನು ಅಪ್‍ಲೋಡ್ ಮಾಡಿ ದೂರನ್ನು ದಾಖಲಿಸಬೇಕು. ವಾಟ್ಸಾಪ್ ನಂಬರ್ 8277777728 ಮತ್ತು ಕಾಲ್ ಸೆಂಟರ್ ನಂಬರ್ 080-23108108 (24*7) ಹಾಗೂ ಕಚೇರಿ ದೂರವಾಣಿ ಸಂಖ್ಯೆ 08226-222035ಗೆ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ತಮ್ಮ ದೂರುಗಳನ್ನು ದಾಖಲಿಸಬಹುದಾಗಿದೆ ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಳಂದ ಬೌದ್ಧ ವಿವಿ ಕಾಮಗಾರಿಗೆ 10 ಕೋಟಿ ರೂ.: ಧ್ರುವನಾರಾಯಣ ಅವರಿಂದ ಧನ್ಯವಾದ

ಚಾಮರಾಜನಗರ, ಡಿ. 11- ಚಾಮರಾಜನಗರ ತಾಲೂಕಿನ ಉತ್ತುವಳ್ಳಿಯಲ್ಲಿ ನಳಂದ ಬೌದ್ಧ ವಿಶ್ವವಿದ್ಯಾಲಯ ಸ್ಥಾಪನೆ ಸಂಬಂಧ ಕಾಮಗಾರಿಯನ್ನು 10 ಕೋಟಿ ರೂ. ಅನುದಾನದಲ್ಲಿ ಕೈಗೊಳ್ಳಲು ಇಂದು ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರು ಮುಖ್ಯಮಂತ್ರಿಯವರಾದ ಸಿದ್ಧರಾಮಯ್ಯ ಹಾಗೂ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ನಳಂದ ಬೌದ್ಧ ವಿಶ್ವವಿದ್ಯಾನಿಲಯ ಸ್ಥಾಪನೆಗಾಗಿ ಭಂತೆ ಬೋಧಿದತ್ತ ಸೆಕ್ರೇಟರಿ ಜನರಲ್ ಇಂಟರ್ ನ್ಯಾಷನಲ್ ಬುದ್ಧಿಸ್ಟ್ ಮಾಂಕ್ಸ್ ಚಾರಿಟಬಲ್ ಟ್ರಸ್ಟ್‍ಗೆ ತಾಲೂಕಿನ ಕಸಬಾ ಹೋಬಳಿಯ ಉತ್ತುವಳ್ಳಿ ಗ್ರಾಮದಲ್ಲಿ 25 ಎಕರೆ ಜಮೀನನ್ನು ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಕಳೆದ ಜನವರಿ 10ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮಂಜೂರು ಮಾಡಲಾಗಿತ್ತು. ಇಂದು ನಡೆದ ಸಚಿಸಂಪುಟ ಸಭೆಯಲ್ಲಿ ನಳಂದ ವಿಶ್ವವಿದ್ಯಾನಿಲಯ ಸ್ಥಾಪನೆಗೆ 10 ಕೋಟಿ ಅನುದಾನದಲ್ಲಿ ಕಾಮಗಾರಿ ಕೈಗೊಳ್ಳಲು ಅನುಮೋದನೆ ನೀಡಲಾಗಿದೆ. ಚಾಮರಾಜನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಬಗ್ಗೆ ಕಾಳಜಿ ಹೊಂದಿರುವ ಮುಖ್ಯಮಂತ್ರಿಯವರಾದ ಸಿದ್ಧರಾಮಯ್ಯರವರಿಗೆ ಹಾಗೂ ಸರ್ಕಾರಕ್ಕೆ ವೈಯಕ್ತಿಕವಾಗಿ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು,  ನಾಗರಿಕರ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆಂದು ಲೋಕಸಭಾ ಸದಸ್ಯರಾದ ಧ್ರುವನಾರಾಯಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿ. 13ರಂದು ಸಂತೆಮರಹಳ್ಳಿಯಲ್ಲಿ ವಿದ್ಯುತ್ ಸಂಬಂಧ ಜನಸಂಪರ್ಕ ಸಭೆ
ಚಾಮರಾಜನಗರ, ಡಿ. 11 :- ತಾಲೂಕಿನ ಸಂತೆಮರಹಳ್ಳಿಯಲ್ಲಿ ಉಪವಿಭಾಗದ ಸೆಸ್ಕ್ ಕಚೇರಿಯಲ್ಲಿ ವಿದ್ಯುತ್ ಸÀಂಬಂಧ ಕುಂದುಕೊರತೆ ಆಲಿಕೆಗಾಗಿ ಡಿಸೆಂಬರ್ 13ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಜನಸಂಪರ್ಕ ಸಭೆ ನಿಗದಿಯಾಗಿದೆ.
ವಿದ್ಯುತ್ ಸಮಸ್ಯೆಗಳಿದ್ದಲ್ಲಿ ಸಾರ್ವಜನಿಕರು ಸಭೆಗೆ ಹಾಜರಾಗಿ ಗಮನಕ್ಕೆ ತರುವಂತೆ ಪ್ರಕಟಣೆ ತಿಳಿಸಿದೆ.

ಗ್ರಾಮಲೆಕ್ಕಿಗರ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ : ಆಕ್ಷೇಪಣೆ ಸಲ್ಲಿಕೆಗೆ ಅವಕಾಶ

ಚಾಮರಾಜನಗರ, ಡಿ. 11- ಜಿಲ್ಲೆಯಲ್ಲಿ ಖಾಲಿ ಇರುವ 47 ಗ್ರಾಮಲೆಕ್ಕಿಗರ ಹುದ್ದೆಗಳಿಗೆ ಮೆರಿಟ್ ಹಾಗೂ ಮೀಸಲಾತಿಗೆ ಅನುಗುಣವಾಗಿ ತಾತ್ಕಾಲಿಕ ಆಯ್ಕೆ ಪಟ್ಟಿ ಹಾಗೂ ಹೆಚ್ಚುವರಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಿ ಪ್ರಕಟಿಸಲಾಗಿದೆ. ಈ ಸಂಬಂಧ ಆಕ್ಷೇಪಣೆ ತಕರಾರು ಇದ್ದಲ್ಲಿ ಡಿಸೆಂಬರ್ 22ರೊಳಗೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ತಾತ್ಕಾಲಿಕ ಆಯ್ಕೆ ಪಟ್ಟಿ ಹಾಗೂ ಹೆಚ್ಚುವರಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ವೆಬ್ ಸೈಟ್ hಣಣಠಿ://ಛಿhಚಿmಚಿಡಿಚಿರಿಚಿಟಿಚಿgಚಿಡಿ.ಟಿiಛಿ.iಟಿ ರಲ್ಲಿ ಪ್ರಕಟಿಸಲಾಗಿದೆ. ಪಟ್ಟಿಗೆ ಸಂಬಂಧಿಸಿದಂತೆ ಯಾವುದಾದರೂ ಆಕ್ಷೇಪಣೆ ತಕರಾರು ಇದ್ದಲ್ಲಿ ಲಿಖಿತವಾಗಿ ಪೂರಕ ದಾಖಲಾತಿಗಳೊಂದಿಗೆ ಅಧ್ಯಕ್ಷರು, ಆಯ್ಕೆ ಮತ್ತು ನೇಮಕಾತಿ ಪ್ರಾಧಿಕಾರ ಹಾಗೂ ಜಿಲ್ಲಾಧಿಕಾರಿ, ಚಾಮರಾಜನಗರ ಜಿಲ್ಲೆ, ಚಾಮರಾಜನಗರ ಇವರಿಗೆ ನೋಂದಣಿ ಅಂಚೆ ಮೂಲಕ ಡಿಸೆಂಬರ್ 22ರ ಸಂಜೆ 5.30 ಗಂಟೆಯೊಳಗೆ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಬೇಕು. ತಾತ್ಕಾಲಿಕ ಆಯ್ಕೆ ಪಟ್ಟಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳು ಅವರ ದ್ವಿತೀಯ ಪಿಯುಸಿ ಮೂಲ ಅಂಕಪಟ್ಟಿ ಮತ್ತು ಇತರೆ ಮೂಲ ದಾಖಲಾತಿಗಳನ್ನು ಡಿಸೆಂಬರ್ 22ರೊಳಗೆ ಜಿಲ್ಲಾಧಿಕಾರಿ, ಚಾಮರಾಜನಗರ ಇವರ ಕಚೇರಿಗೆ ಖುದ್ದು ಹಾಜರಾಗಿ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ಬಿ. ರಾಮು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು