ತಂಬಾಕು ಸೇವನೆ: ಜು. 10ರಿಂದ ನಿರಂತರ ದಾಳಿ ನಡೆಸಲು ಜಿಲ್ಲಾಧಿಕಾರಿ ನಿರ್ಧಾರ
ಚಾಮರಾಜನಗರ, ಜು. 04 :- ಸಾರ್ವಜನಿಕ ಸ್ಥಳದಲ್ಲಿ ತಂಬಾಕು ಸೇವನೆ ಮಾಡುವವರ ವಿರುದ್ಧ ಜಿಲ್ಲೆಯಾದ್ಯಂತ ಜುಲೈ 10ರಿಂದ ತಂಬಾಕು ನಿಯಂತ್ರಣ ತನಿಖಾಧಿಕಾರಿಗಳಿಂದ ನಿರಂತರ ದಾಳಿ ನಡೆಸÀಲಾಗುವುದೆಂದು ಪ್ರಭಾರ ಜಿಲ್ಲಾಧಿಕಾರಿ ಡಾ. ಕೆ ಹರೀಶ್ ಕುಮಾರ್ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಕೋಟ್ಪಾ-2003 ಕಾಯ್ದೆ ಅನುಷ್ಠಾನ ಸಂಬಂಧ ನಡೆದ ತ್ರೈಮಾಸಿಕ ಪರಿಶೀಲನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.ತಂಬಾಕು ಸೇವನೆ ನಿಯಂತ್ರಣ ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಕೋಟ್ಪಾ-2003 ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ನಿಟ್ಟಿನಲ್ಲಿ ಕೇಂದ್ರಸರ್ಕಾರವು ರಾಜ್ಯಕ್ಕೆ ತಿಳಿಸಿದೆ. ಅದರನ್ವಯ ಕಾಯ್ದೆಯ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ರಚಿಸಲಾಗಿರುವ ಜಿಲ್ಲಾ ಹಾಗೂ ತಾಲೂಕುಮಟ್ಟದ ತಂಬಾಕು ನಿಯಂತ್ರಣ ತನಿಖಾದಳಗಳನ್ನು ಕ್ರಿಯಾಶೀಲಗೊಳಿಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ತಂಬಾಕು ಸೇವನೆಯಿಂದ ಜಗತ್ತಿನಲ್ಲಿ ಪ್ರತಿವರ್ಷ 60 ಲಕ್ಷ ಜನ ಮರಣ ಹೊಂದುತ್ತಿದ್ದಾರೆ. ಭಾರತದಲ್ಲಿ ಪ್ರತಿದಿನ 2200ಕ್ಕಿಂತ ಅಧಿಕ ಮಂದಿ ಹಾಗೂ ವಾರ್ಷಿಕವಾಗಿ 10 ಲಕ್ಷ ಜನರು ಸಾವಿಗೀಡಾಗುತ್ತಿರುವುದು ದುರಂತ. ಅದುದರಿಂದ ಜನರಲ್ಲಿ ತಂಬಾಕು ವಿರುದ್ಧ ಅರಿವು ಮೂಡಿಸಬೇಕಾಗಿದೆ. ಎಲ್ಲ ಅಂಗಡಿ ಮುಂಗಟ್ಟುಗಳು, ಹೋಟೆಲ್, ರೆಸ್ಟೋರೆಂಟ್ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ನಿಷೇಧದ ನಾಮಫಲಕಗಳನ್ನು ಅಳವಡಿಸಿಕೊಳ್ಳಬೇಕು. ತಪ್ಪಿದಲ್ಲಿ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯನ್ನು ತಂಬಾಕು ಮುಕ್ತ ಪ್ರದೇಶವಾಗಿಸಲು ಆಯಾ ಇಲಾಖಾವಾರು ಜಿಲ್ಲಾ ಮತ್ತು ತಾಲೂಕುಮಟ್ಟದಲ್ಲಿ ದಾಳಿ ನಡೆಸಿ, ದಂಡ ವಿಧಿಸುವುದಲ್ಲದೆ ಪ್ರಕರಣ ದಾಖಲಿಸುವುದು ಅವಶ್ಯವಾಗಿದೆ. ಇದರಿಂದ ಜನರಿಗೆ ಜಾಗೃತಿ ಮೂಡಿಸಿ ಬದಲಾವಣೆ ತರಬೇಕಾಗಿದೆ. ಈ ಮೂಲಕ ಜಿಲ್ಲೆಯನ್ನು ತಂಬಾಕು ನಿಷೇಧದ ಉನ್ನತಮಟ್ಟದ ಅನುಷ್ಠಾನ ಜಿಲ್ಲೆ ಎಂದು ಘೋಷಿಸಲು ಸಕಲ ಸಿದ್ಧತೆಯನ್ನು ತನಿಖಾ ತಂಡಗಳು ಮಾಡಕೊಳ್ಳಬೇಕು ಎಂದು ಡಾ ಹರೀಶ್‍ಕುಮಾರ್ ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಗಾಯಿತ್ರಿ ಅವರು ಮಾತನಾಡಿ ತಂಬಾಕು ನಿಯಂತ್ರಣಕ್ಕಾಗಿ ಜಿಲ್ಲಾ, ತಾಲೂಕುಮಟ್ಟದಲ್ಲಿ ನಿಯೋಜಿಸಲಾಗಿರುವ ಪೊಲೀಸ್, ಕಾರ್ಮಿಕ, ಆರೋಗ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ತನಿಖಾಧಿಕಾರಿಗಳನ್ನು ಸಂಘಟಿಸಿ ಮಾಸಿಕ 500 ಪ್ರಕರಣ ದಾಖಲಿಸಲು ಗುರಿ ನೀಡಬೇಕು. ನಂತರ ತಹಶೀಲ್ದಾರ್ ನೇತೃತ್ವದಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಅಂಗಡಿ ಮುಂಗಟ್ಟುಗಳಿಗೆ ಜುಲೈ 10ರಿಂದ ದಾಳಿ ನಡೆಸಿ ಅದರ ವರದಿಯನ್ನು ಆಯಾ ದಿನವೇ ತಾಲೂಕು ವೈದ್ಯಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಸಲ್ಲಿಸಬೇಕು ಎಂದರು.
ಪ್ರಮುಖವಾಗಿ ಜಿಲ್ಲೆಯ ಎಲ್ಲಾ ಶಾಲೆಗಳ ಪ್ರವೇಶದ್ವಾರಲ್ಲಿ ಅಥವಾ ಗೋಡೆಯಲ್ಲಿ 100 ಗಜ ಅಂತರದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧ ಎಂದು ಬರೆಸಬೇಕು. ಶಾಲಾಮಕ್ಕಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಿ ತಂಬಾಕು ಸೇವನೆ ವಿರುದ್ಧ ಅರಿವು ಮೂಡಿಸಬೇಕು. ಪ್ರತಿ ತಿಂಗಳ ಮೊದಲ ಶನಿವಾರವನ್ನು ತಂಬಾಕು ವಿರೋಧಿ ದಿನವನ್ನಾಗಿ ಆಚರಿಸಬೇಕು. ಜಿಲ್ಲೆಯ ಎಲ್ಲ ಇಲಾಖಾಧಿಕಾರಿಗಳು ಜುಲೈ 10ರೊಳಗೆ ಆಯಾ ಇಲಾಖೆಯ ಪ್ರವೇಶದ್ವಾರದಲ್ಲಿ ಸಾರ್ವಜನಿಕ ಧೂಮಪಾನ ನಿಷೇಧ ಕುರಿತು ನಾಮಫಲಕವನ್ನು ಕಡ್ಡಾಯವಾಗಿ ಪ್ರಕಟಿಸಬೇಕು ಎಂದು ಗಾಯಿತ್ರಿಯವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಚ್. ಪ್ರಸಾದ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೀತಾಪ್ರಸನ್ನ, ಡಿ.ವೈ.ಎಸ್.ಪಿ. ಗಂಗಾಧರಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಮಂಜುಳ, ಜಿಲ್ಲಾ ತಂಬಾಕು ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ನಾಗರಾಜು, ಆರ್.ಸಿ.ಎಚ್.ಆಧಿಕಾರಿ ಡಾ.ವಿಶ್ವೇಶ್ವರಯ್ಯ, ಎಲ್ಲ ತಾಲೂಕುಗಳ ತಹಶೀಲ್ದಾರರು, ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಸಭೆಯ ನಂತರ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಹಯೋಗದೊಂದಿಗೆ ತಾಲೂಕುಮಟ್ಟದ ಪ್ರಾಧಿಕೃತ ತನಿಖಾಧಿಕಾರಿಗಳಿಗೆ ಆಯೋಜಿಸಲಾಗಿದ್ದ ಕಾರ್ಯಾಗಾರವನ್ನು ಪ್ರಭಾರ ಜಿಲ್ಲಾಧಿಕಾರಿ ಡಾ.ಕೆ. ಹರೀಶ್‍ಕುಮಾರ್ ಉದ್ಘಾಟಿಸಿದರು. ಬೆಂಗಳೂರಿನ ಬ್ಲೂಂಬರ್ಗ್ ಇನಿಷಿಯೇಟೆಡ್ ಪ್ರಾಜೆಕ್ಟ್‍ನ ವಿಭಾಗೀಯ ಸಂಯೋಜಕರಾದ ಡಾ. ಹನುಮಂತರಾಯಪ್ಪ ಅವರು ಕಾರ್ಯಾಗಾರವನ್ನು ನಡೆಸಿಕೊಟ್ಟರು.
ಕಾರ್ಯಾಗಾರದ ನಂತರ ತನಿಖಾತಂಡದವರಿಂದ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಸುತ್ತಮುತ್ತ ದಾಳಿ ನಡೆÀಸಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ 5 ಪ್ರಕರಣಗಳನ್ನು ದಾಖಲಿಸಿ 900 ರೂ. ಗಳ ದಂಡ ಸಂಗ್ರಹಿಸÀಲಾಯಿತು.
ಅಂಬೇಡ್ಕರ್ ನಿವಾಸ್ ಯೋಜನೆಯಡಿ ಮನೆ ನಿರ್ಮಾಣಕ್ಕೆ ಅರ್ಜಿ ಅಹ್ವಾನ
ಚಾಮರಾಜನಗರ, ಜು. 04 - 2017-18ನೇ ಸಾಲಿಗೆ ಚಾಮರಾಜನಗರ ನಗರಸಭಾ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ಡಾ.ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಲು ಅರ್ಹ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿದಾರರು ಮಹಿಳೆಯಾಗಿರಬೇಕು. ಅಂಗವಿಕಲರು, ಹಿರಿಯ ನಾಗರಿಕರಾಗಿದ್ದಲ್ಲಿ ಪುರುಷರು ಸಹ ಅರ್ಜಿ ಸಲ್ಲಿಸಬಹುದು. ವಾರ್ಷಿಕ ಆದಾಯ 87,600 ರೂ.ಗಳಿಗಿಂತ ಕಡಿಮೆಯಿರಬೇಕು. ಸ್ವಂತ ನಿವೇಶನಕ್ಕೆ ಸಂಬಂದಿಸಿದಂತೆ ಖಾತಾ ನಕಲು, ಬಿ.ಪಿ.ಎಲ್. ಪಡಿತರ ಚೀಟಿ, ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ ಮತ್ತು ಇತರ ದಾಖಲಾತಿಗಳನ್ನು ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಜುಲೈ 31 ಕಡೆಯ ದಿನ. ಹೆಚ್ಚಿನ ಮಾಹಿತಿಗಾಗಿ ನಗರಸಭಾ ಕಾರ್ಯಾಲಯವನ್ನು ಸಂಪರ್ಕಿಸುವಂತೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿಜಿನೆಸ್ ಪಾರ್ಕ್ ನಿರ್ಮಾಣ: ಜುಲೈ 10ರಂದು ಭೂ ಮಾಲೀಕರೊಂದಿಗೆ ಸಭೆ
ಚಾಮರಾಜನಗರ, ಜು. 04 :- ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಚಾಮರಾಜನಗರ ಗ್ರಾಮದ ಭಾಗಶ: ಸರ್ವೇ ನಂಬರ್ 32, 33, 34, 35, 37 ಮತ್ತು 39ರಲ್ಲಿ ಸುಮಾರು 15 ಎಕರೆ ಜಮೀನಿನಲ್ಲಿ ಉದ್ದೇಶಿತ ಬಿಜಿನೆಸ್ ಪಾರ್ಕ್ ನಿರ್ಮಿಸಲು ಭೂ ಮಾಲೀಕರ ಜೊತೆ ಚರ್ಚಿಸುವ ಸಂಬಂಧ ಜುಲೈ 10ರಂದು ಬೆಳಿಗ್ಗೆ 11 ಗಂಟೆಗೆ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿ ಖಾನ್ ಅವರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿದೆ.ಸಭೆಗೆ ಅಸಕ್ತಿಯುಳ್ಳ ಭೂ ಮಾಲೀಕರು ತಮ್ಮ ಜಮೀನಿನ ಮಾಲೀಕತ್ವದ ಎಲ್ಲಾ ದಾಖಲಾತಿಗಳೊಂದಿಗೆ ಸಭೆಗೆ ಹಾಜರಾಗುವಂತೆ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ತಿಳಿಸಿದ್ದಾರೆ.
ಜುಲೈ 5ರಿಂದ 7ರವರೆಗೆ ಶೌಚಾಲಯ ಗುಂಡಿಗಳನ್ನು ತೆಗೆಯುವ ಅಭಿಯಾನ
ಚಾಮರಾಜನಗರ, ಜು. 04 :- ಸ್ವಚ್ಚ ಭಾರತ ಅಭಿಯಾನ ಯೋಜನೆಯಡಿ ಜುಲೈ 5ರಿಂದ 7ರ ವರೆಗೆ ಚಾಮರಾಜನಗರ ತಾಲೂಕಿನ 43 ಗ್ರಾಮಪಂಚಾಯಿತಿಗಳಲ್ಲಿ ಶೌಚಾಲಯ ಗುಂಡಿಗಳನ್ನು ತೆಗೆಯುವ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಈ ಕಾರ್ಯಕ್ರಮದಲ್ಲಿ ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯತ್ ಸದಸ್ಯರು ಭಾಗವಹಿಸಿ ಅಭಿಯಾನವನ್ನು ಯಶಸ್ಸಿಗೆ ಸಹಕರಿಸಬೇಕೆಂದು ತಾಲೂಕು ಪಂಚಾಯತ್ ಕಾರ್ಯನಿವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
No comments:
Post a Comment