Wednesday, 12 July 2017

ಮುಖ್ಯಮಂತ್ರಿ ಭೇಟಿ ಹಿನ್ನೆಲೆ : ಉಮ್ಮತ್ತೂರಿನಲ್ಲಿ ಲೋಕಸಭಾ ಸದಸ್ಯರು, ಶಾಸಕರು, ಜಿಲ್ಲಾಧಿಕಾರಿಯವರಿಂದ ಸಿದ್ಧತೆ ಪರಿಶೀಲನೆ (12-07-2017)

ಮುಖ್ಯಮಂತ್ರಿ ಭೇಟಿ ಹಿನ್ನೆಲೆ : ಉಮ್ಮತ್ತೂರಿನಲ್ಲಿ ಲೋಕಸಭಾ ಸದಸ್ಯರು, ಶಾಸಕರು, ಜಿಲ್ಲಾಧಿಕಾರಿಯವರಿಂದ ಸಿದ್ಧತೆ ಪರಿಶೀಲನೆ

  ಚಾಮರಾಜನಗರ, ಜು. 12 :- ಕುಡಿಯುವ ನೀರಿನ ಉದ್ದೇಶಕ್ಕಾಗಿ ಚಾಮರಾಜನಗರ, ಯಳಂದೂರು ಹಾಗೂ ನಂಜನಗೂಡು ತಾಲೂಕಿನ ಒಟ್ಟು 24 ಕೆರೆಗಳಿಗೆ ನೀರು ತುಂಬಿಸುವ ಮಹತ್ವಾಕಾಂಕ್ಷೆ ಯೋಜನೆ ಕಾಮಗಾರಿಯ ಶಿಲಾನ್ಯಾಸವನ್ನು ವÀುುಖ್ಯಮಂತ್ರಿಯವರು ಜುಲೈ 14ರಂದು ಉಮ್ಮತ್ತೂರಿನಲ್ಲಿ ನೆರವೇರಿಸಲಿರುವ ಹಿನ್ನೆಲೆಯಲ್ಲಿ ಅಲ್ಲಿ ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ, ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಹಾಗೂ ಜಿಲ್ಲಾಧಿಕಾರಿ ಡಾ. ಕೆ. ಹರೀಶ್ ಕುಮಾರ್ ಇಂದು ಪರಿಶೀಲಿಸಿದರು.
ಉಮ್ಮತ್ತೂರು ಕೆರೆಯ ಪಕ್ಕದಲ್ಲಿ ಕಾರ್ಯಕ್ರಮ ಆಯೋಜನೆಗಾಗಿ ನಡೆದಿರುವ ಪ್ರತಿಯೊಂದು ಹಂತದ ಸಿದ್ಧತೆಯನ್ನು ವೀಕ್ಷಿಸಿದರು. ಬೃಹತ್ ವೇದಿಕೆ, ವಿಶಾಲವಾದ ಶಾಮಿಯಾನ, ಸಭಿಕರ ಆಸನಗಳು, ಗಣ್ಯವ್ಯಕ್ತಿಗಳು ಸೇರಿದಂತೆ ಎಲ್ಲರಿಗೂ ಕಲ್ಪಿಸಿರುವ ಆಸನಗಳ ವ್ಯವಸ್ಥೆ, ಪ್ರವೇಶ ಸ್ಥಳ ಇನ್ನಿತರ ಕಾರ್ಯಗಳನ್ನು ಪರಿಶೀಲಿಸಿದರು.
ಸಮಾರಂಭ ನಡೆಯುವ ಸ್ಥಳದ ಬಳಿಗೆ ಜನರಿಗೆ ಉಪಾಹಾರ ವಿತರಿಸಲು ಸಿದ್ಧಪಡಿಸುತ್ತಿರುವ ಕೌಂಟರ್, ಕುಡಿಯುವ ನೀರಿನ ವ್ಯವಸ್ಥೆ, ವಾಹನ ನಿಲುಗಡೆ ಸ್ಥಳವನ್ನು ವೀಕ್ಷಿಸಿದರು. ಕಾರ್ಯಕ್ರಮದ ಸುಗಮ ನಿರ್ವಹಣೆಗೆ ಯಾವುದೇ ಅಡಚಣೆಯಾಗದಂತೆ ಎಲ್ಲಾ ಬಗೆಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಧ್ರುವನಾರಾಯಣ ಸೂಚನೆ ನೀಡಿದರು.
ಇದೇವೇಳೆ ಮಾಹಿತಿ ನೀಡಿದ ಧ್ರುವನಾರಾಯಣ ಅವರು ಮುಖ್ಯಮಂತ್ರಿಯವರು ಜುಲೈ 14ರಂದು ಮಧ್ಯಾಹ್ನ 2 ಗಂಟೆಗೆ ಕುದೇರಿನಲ್ಲಿರುವ ಚಾಮರಾಜನಗರ ಹಾಲು ಉತ್ಪಾದಕರ ಒಕ್ಕೂಟ ಚಾಮುಲ್‍ಗೆ ಭೇಟಿ ನೀಡುವರು. ಚಾಮುಲ್‍ನಲ್ಲಿ ಈಗಾಗಲೇ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ಈ ಕಾಮಗಾರಿಯನ್ನು ಮುಖ್ಯಮಂತ್ರಿಯವರು ವೀಕ್ಷಣೆ ಮಾಡಲಿದ್ದಾರೆ. ಇನ್ನು 54 ಕೋಟಿ ರೂ. ಯಂತ್ರೋಪಕರಣಗಳಿಗೆ ಅಗತ್ಯವಿದೆ. ಮುಖ್ಯಮಂತ್ರಿಯವರು ಕಾಮಗಾರಿ ಪರಿಶೀಲಿಸಿದ ವೇಳೆ ಈ ವಿಷಯವನ್ನು ಗಮನಕ್ಕೆ ತಂದು ಮಂಜೂರು ಮಾಡಿಸಿಕೊಳ್ಳುವ ಉದ್ದೇಶವು ಇದೆ ಎಂದರು.
ಬಳಿಕ ಮುಖ್ಯಮಂತ್ರಿಯವರು ಮಧ್ಯಾಹ್ನ 3 ಗಂಟೆಗೆ ಉಮ್ಮತ್ತೂರಿನಲ್ಲಿ ಚಾಮರಾಜನಗರ ತಾಲೂಕಿನ 21, ಯಳಂದೂರು ತಾಲೂಕಿನ 1 ಹಾಗೂ ನಂಜನಗೂಡು ತಾಲೂಕಿನ 2 ಕೆರೆಗಳೂ ಸೇರಿದಂತೆ ಒಟ್ಟು 24 ಕೆರೆಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಕಬಿನಿ ನದಿಯಿಂದ ನೀರು ತುಂಬಿಸುವ ಯೋಜನೆ ಕಾಮಗಾರಿಗೆ ಶಂಕುಸ್ಥಾಪನೆ ಮಾಡುವರು ಎಂದರು.
ಒಟ್ಟು 233 ಕೋಟಿ ರೂ. ವೆಚ್ಚದ ಈ ಯೋಜನೆಯಿಂದ ಮೂರೂ ತಾಲೂಕುಗಳ 59 ಗ್ರಾಮಗಳ ವ್ಯಾಪ್ತಿಗೆ ಅನುಕೂಲವಾಗಲಿದೆ. ಕೆರೆಗಳಿಗೆ ನೀರು ತುಂಬಿಸುವುದರಿಂದ ಅಂತರ್ಜಲ ಮಟ್ಟ ಹೆಚ್ಚಳವಾಗಲಿದ್ದು ಕುಡಿಯುವ ನೀರಿನ ಬವಣೆಯು ನೀಗಲಿದೆ. ರೈತಾಪಿ ವರ್ಗದವರು ಕೊಳವೆ ಬಾವಿ ಮೂಲಕ ವ್ಯವಸಾಯ ಮಾಡಲೂ ಸಹ ಉಪಯೋಗವಾಗಲಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ದಿವಂಗತ ಎಚ್.ಎಸ್. ಮಹದೇವಪ್ರಸಾದ್ ಮತ್ತು ಸ್ಥಳೀಯ ಶಾಸಕರ ಪರಿಶ್ರಮದಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ಸಿಗುತ್ತಿದೆ ಎಂದರು.
ಈ ಹಿಂದೆ 20 ಕೆರೆಗಳಿಗೆ ನೀರು ತುಂಬಿಸಿದ ಫಲವಾಗಿ ಅಂತರ್ಜಲ ವೃದ್ಧಿಯಾಗಿದ್ದು ಕೃಷಿ ಚಟುವಟಿಕೆಗಳಿಗೆ ಅನುಕೂಲವಾಯಿತು. ಇನ್ನು 24 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯು ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿದ್ದ ಸಂತೆಮರಹಳ್ಳಿ ಭಾಗ ಸೇರಿದಂತೆ ಇನ್ನು ಹಲವಾರು ಗ್ರಾಮಗಳಿಗೆ ಅನುಕೂಲವಾಗಲಿದೆ ಎಂದು ಧ್ರುವನಾರಾಯಣ ತಿಳಿಸಿದರು.
ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯವರಾದ ಸಿದ್ಧರಾಮಯ್ಯ ಅವರೊಂದಿಗೆ ಜಲಸಂಪನ್ಮೂಲ ಸಚಿವರಾದ ಎಂ.ಬಿ. ಪಾಟೀಲ್, ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಸಿ. ಮಹದೇವಪ್ಪ, ಸಚಿವರಾದ ಎಚ್.ಕೆ. ಪಾಟೀಲ್, ಟಿ.ಬಿ. ಜಯಚಂದ್ರ, ತನ್ವೀರ್ ಸೇಠ್, ಜಿಲ್ಲೆಯ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು ಪಾಲ್ಗೊಳ್ಳುವರೆಂದು ಧ್ರುವನಾರಾಯಣ ತಿಳಿಸಿದರು.
ಎಪಿಎಂಸಿ ಅಧ್ಯಕ್ಷರಾದ ಬಿ.ಕೆ. ರವಿಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಉಪವಿಭಾಗಾಧಿಕಾರಿ ರೂಪ, ಕಾವೇರಿ ನೀರಾವರಿ ನಿಗಮದ ಎಂಜಿನಿಯರ್‍ಗಳಾದ ಮರಿಸ್ವಾಮಿ, ರಾಜೇಂದ್ರ ಪ್ರಸಾದ್, ತಹಸೀಲ್ದಾರ್ ಕೆ. ಪುರಂಧರ, ಇತರರು ಹಾಜರಿದ್ದರು.
  

ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ಮಾಹಿತಿಹಕ್ಕು ಅಧಿನಿಯಮ ಕಾರ್ಯಾಗಾರ

ಚಾಮರಾಜನಗರ, ಜು. 12- ಮಲೆಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ಇದೇ ಮೊದಲ ಬಾರಿಗೆ ಮಾಹಿತಿ ಹಕ್ಕು ಅಧಿನಿಯಮ 2005ರ ಕುರಿತು ಮಂಗಳವಾರ ಮಲೆಮಹದೇಶ್ವರ ಬೆಟ್ಟದ ನಾಗಮಲೆ ಭವನದಲ್ಲಿ ಕಾರ್ಯಾಗಾರ ನಡೆಯಿತು.
ಮಲೆಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಕಾರ್ಯಾಗಾರ ಉದ್ಘಾಟಿಸಿದರು.
ಇದೇವೇಳೆ ಮಾತನಾಡಿದ ಗಾಯತ್ರಿಯವರು ಮಾಹಿತಿ ಹಕ್ಕು ಅಧಿನಿಯಮದಡಿ ಪ್ರಾಧಿಕಾರಕ್ಕೆ ಸಾಕಷ್ಟು ಅರ್ಜಿಗಳು ಮಾಹಿತಿ ಕೋರಿ ಸಲ್ಲಿಕೆಯಾಗುತ್ತಿವೆ. ಕಾಯಿದೆ ಅನುಸಾರ ಸ್ವೀಕರಿಸಲಾಗುವ ಅರ್ಜಿಗಳನ್ನು ವಿಲೇವಾರಿ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸಂಪೂರ್ಣ ಮಾಹಿತಿ ನೀಡುವ ಅವಶ್ಯಕತೆಯನ್ನು ಮನಗಂಡು ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು.
ಕಚೇರಿ ನಿರ್ವಹಣೆ ಮಾಡುವ ಅಧಿಕಾರಿಗಳು ಕರ್ತವ್ಯದ ಪ್ರತಿಯೊಂದು ವಿಷಯದ ಬಗ್ಗೆಯೂ ಸಂಪೂರ್ಣವಾಗಿ ತಿಳಿದುಕೊಳ್ಳಬೇಕು. ವಿಶೇಷವಾಗಿ ಮಾಹಿತಿ ಹಕ್ಕು ಅಧಿನಿಯಮದಡಿ ಸ್ವೀಕರಿಸಲಾಗುವ ಅರ್ಜಿ ವಿಲೇವಾರಿಯಲ್ಲಿ ಯಾವುದೇ ಗೊಂದಲ ಇರಬಾರದು. ಕಾಲಮಿತಿಯೊಳಗೆ ಮಾಹಿತಿ ಅರ್ಜಿದಾರರು ಕೇಳುವ ಮಾಹಿತಿಗೆ ಸಂಬಂಧಿಸಿದಂತೆ ಮಾಹಿತಿ ನೀಡುವ ಕ್ರಮದಲ್ಲಿ ಹೆಚ್ಚಿನ ತಿಳಿವಳಿಕೆ ಹೊಂದಬೇಕು. ಈ ನಿಟ್ಟಿನಲ್ಲಿ ಮಾಹಿತಿ ಕಾರ್ಯಾಗಾರವನ್ನು ಅಧಿಕಾರಿ ಸಿಬ್ಬಂದಿಗಳಿಗೆ ಅನುಕೂಲವಾಗಲಿದೆ ಎಂಬ ವಿಶ್ವಾಸವನ್ನು ಗಾಯತ್ರಿಯವರು ವ್ಯಕ್ತಪಡಿಸಿದರು.
ಕಚೇರಿ ಕರ್ತವ್ಯಗಳ ನಿರ್ವಹಣೆಗೆ ಮತ್ತಷ್ಟು ಸುಗಮವಾಗುವ ನಿಟ್ಟಿನಲ್ಲಿ ಕರ್ನಾಟಕ ಖಜಾನೆ ಸಂಹಿತೆ, ಕಂಡಕ್ಟ್ ರೂಲ್ಸ್, ಇನ್ನಿತರ ವಿಷಯಗಳ ಬಗ್ಗೆಯೂ ಸಂಪನ್ಮೂಲ ವ್ಯಕ್ತಿಗಳಿಂದ ಪ್ರಾಧಿಕಾರದಿಂದಲೇ ತರಬೇತಿ ನೀಡುವ ಕಾರ್ಯಕ್ರಮವನ್ನು ಸಹ ಏರ್ಪಾಡು ಮಾಡುವ ಉದ್ದೇಶ ಹೊಂದಿರುವುದಾಗಿ ಗಾಯತ್ರಿಯವರು ತಿಳಿಸಿದರು.
ಮೈಸೂರಿನ ಜೆ ಎಸ್ ಎಸ್ ಕಾನೂನು ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸುರೇಶ್ ಹಾಗೂ ಸಹಾಯಕ ಪ್ರಾಧ್ಯಾಪಕರಾದ ಜಗದೀಶ್ ಅವರು ಮಾಹಿತಿ ಹಕ್ಕು ಅಧಿನಿಯಮದಡಿ ಸ್ವೀಕರಿಸಲಾಗುವ ಅರ್ಜಿ ವಿಲೇವಾರಿ, ವಹಿ ನಿರ್ವಹಣೆ, ಸೇರಿದಂತೆ ಅಗತ್ಯ ವಿಷಯಗಳ ಬಗ್ಗೆ ಸವಿವರವಾಗಿ ತಿಳಿಸಿದರು.







No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು