Wednesday, 26 July 2017

ಸರಕು ಸೇವಾ ತೆರಿಗೆ ಪದ್ಧತಿ ಪೂರ್ಣ ಮಾಹಿತಿ ಹೊಂದಿ : ಹಿರಿಯ ಸಿವಿಲ್ ನ್ಯಾಯಾಧೀಶರ ಸಲಹೆ(26-07-2017)

ಸರಕು ಸೇವಾ ತೆರಿಗೆ ಪದ್ಧತಿ ಪೂರ್ಣ ಮಾಹಿತಿ ಹೊಂದಿ : ಹಿರಿಯ ಸಿವಿಲ್ ನ್ಯಾಯಾಧೀಶರ ಸಲಹೆ
ಚಾಮರಾಜನಗರ, ಜು. 26 - ನೂತನವಾಗಿ ಜಾರಿಗೆ ತರಲಾಗಿರುವ ಸರಕು ಮತ್ತು ಸೇವಾ ತೆರಿಗೆ ಪದ್ಧತಿ (ಜಿಎಸ್‍ಟಿ) ಬಗ್ಗೆ ನಿತ್ಯ ವಾಣಿಜ್ಯ ವಹಿವಾಟಿನಲ್ಲಿ ನಿರತವಾಗಿರುವ ಜಿಲ್ಲೆಯ ವ್ಯಾಪಾರಸ್ಥರು, ಉದ್ಯಮಿಗಳು ಸಂಪೂರ್ಣವಾಗಿ ಮಾಹಿತಿ ಹೊಂದಬೇಕಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್.ಪಿ. ನಂದೀಶ್ ಅವರು ಸಲಹೆ ಮಾಡಿದರು.
ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯ ಕಚೇರಿ ಸಭಾಂಗಣದಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ವಾಣಿಜ್ಯ ತೆರಿಗೆ ಇಲಾಖೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸರಕು ಸೇವಾ ತೆರಿಗೆ ಪದ್ಧತಿ ಕುರಿತ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಾಣಿಜ್ಯ ವಹಿವಾಟು ನಡೆಸುವ ಉದ್ಯಮಿಗಳು, ವರ್ತಕರು ಹೊಸದಾಗಿ ಜಾರಿಗೆ ಬಂದಿರುವ ಸರಕು ಸೇವಾ ತೆರಿಗೆ ಪದ್ಧತಿ ಬಗ್ಗೆ ಹೆಚ್ಚು ತಿಳಿವಳಿಕೆ ಪಡೆದರೆ ದಿನನಿತ್ಯದ ವ್ಯಾಪಾರ ವಹಿವಾಟು ಪ್ರಕ್ರಿಯೆಗೆ ಅನುಕೂಲವಾಗುತ್ತದೆ. ಅಲ್ಲದೆ ಹೆಚ್ಚು ತಿಳಿದುಕೊಂಡಂತೆಲ್ಲ ಗೊಂದಲ ಪರಿಹಾರವಾಗುತ್ತದೆ ಎಂದರು.
ತೆರಿಗೆ ಪಾವತಿಸುವುದು ಪ್ರತಿಯೊಬ್ಬ ಸಾಮಾನ್ಯ ನಾಗರಿಕರ ಕರ್ತವ್ಯವಾಗಿದೆ. ಸರ್ಕಾರ ನಿಗದಿಮಾಡುವ ತೆರಿಗೆಯನ್ನು ಪ್ರಾಮಾಣಿಕವಾಗಿ ಪಾವತಿ ಮಾಡಬೇಕು. ಕೆಲವೊಂದು ಆನ್ ಲೈನ್ ಮೂಲಕ ನಡೆಸುವ ವ್ಯಾಪಾರ ವಹಿವಾಟಿನ ಬಗ್ಗೆ ಗ್ರಾಹಕರು ಎಚ್ಚರದಿಂದ ಇರಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಸಲಹೆ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾದ ಬಿ.ಕೆ. ರವಿಕುಮಾರ್ ಮಾತನಾಡಿ ಎಪಿಎಂಸಿಯಲ್ಲಿ ಸಾಕಷ್ಟು ವಹಿವಾಟು ಪ್ರಕ್ರಿಯೆ ನಡೆಯುವುದರಿಂದ ವ್ಯಾಪಾರಸ್ಥರು, ವರ್ತಕರಿಗೆ ಜಿಎಸ್‍ಟಿ ಬಗ್ಗೆ ಸಂಪೂರ್ಣ ಅರಿವು ಹೊಂದಬೇಕೆಂಬ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಮ್ಮ ಪ್ರಯತ್ನಕ್ಕೆ ವರ್ತಕರ ಸಂಘವು ಪೂರಕವಾಗಿ ಸ್ಪಂದಿಸಿ ಸಹಕರಿಸಿದೆ ಎಂದÀರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾಯಿದೆ, ಬೆಳೆಗಾರರು, ವ್ಯಾಪಾರಿ ಉದ್ಯಮಿಗಳಿಗೆ ಸಮಿತಿಯಲ್ಲಿ ನೋಂದಣಿ ಪರವಾನಗಿ ಪಡೆಯುವುದರಿಂದ ಆಗುವ ಅನುಕೂಲತೆಗಳ ಬಗ್ಗೆ ಮನವರಿಕೆ ಮಾಡಿಕೊಡಲು ಪ್ರತ್ಯೇಕ ಕಾರ್ಯಾಗಾರವನ್ನು ಎಪಿಎಂಸಿ ವತಿಯಿಂದಲೇ ಆಯೋಜನೆ ಮಾಡಲು ಚಿಂತನೆ ನಡೆಸಲಾಗುವುದೆಂದು ಇದೇ ವೇಳೆ ಬಿ.ಕೆ. ರವಿಕುಮಾರ್ ತಿಳಿಸಿದರು.
ವಿಶೇಷ ಉಪನ್ಯಾಸ ನೀಡಿದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಉದಯ್ ಕುಮಾರ್ ಅವರು ಈಹಿಂದೆ ವರ್ತಕರು, ಉದ್ಯಮಿಗಳು ಸರಕು ಸೇವೆಗಳನ್ನು ಬೇರೆ ರಾಜ್ಯಗಳಿಗೆ ತಲುಪಿಸಿದಾಗ ಆಯಾ ರಾಜ್ಯಗಳಲ್ಲಿ ವಿಧಿಸುವ ತೆರಿಗೆಯನ್ನು ಪಾವತಿಸಬೇಕಿತ್ತು. ಕೇಂದ್ರ ಹಾಗೂ ರಾಜ್ಯಗಳು ಪ್ರತ್ಯೇಕವಾಗಿ ತೆರಿಗೆ ನಿಗದಿಮಾಡಿದ್ದರಿಂದ ಹೆಚ್ಚಿನ ತೆರಿಗೆಯು ಬೀಳುತ್ತಿತ್ತು. ನೂತನ ಸರಕು ಸೇವಾ ತೆರಿಗೆ ಪದ್ಧತಿಯಿಂದ (ಜಿಎಸ್‍ಟಿ) ದೇಶದೆಲ್ಲೆಡೆ ತೆರಿಗೆ ಪದ್ಧತಿಯಲ್ಲಿ ಏಕರೂಪತೆ ಇದೆ. ಇದರಿಂದ ಉದ್ಯಮ ಹಾಗೂ ಗ್ರಾಹಕರಿಗೂ ಹೆಚ್ಚಿನ ಹೊರೆ ತಪ್ಪುತ್ತಿದೆ ಎಂದರು.
ಜಿಎಸ್‍ಟಿ ಬಗ್ಗೆ  ವರ್ತಕರಿಗೆ ಉದ್ಯಮಿಗಳಿಗೆ ಮಾಹಿತಿ ನೀಡುವ ಸಲುವಾಗಿಯೇ ವಾಣಿಜ್ಯ ತೆರಿಗೆ ಇಲಾಖೆ ವತಿಯಿಂದ ಈಗಾಗಲೇ ಅನೇಕ ಮಾಹಿತಿ ತಿಳಿವಳಿಕೆ ಕಾರ್ಯಾಗಾರಗಳನ್ನು ಏರ್ಪಡಿಸಲಾಗಿದೆ. ಜಿಎಸ್‍ಟಿ ಅನುಷ್ಠಾನ ಕುರಿತು ಎದುರಾಗುವ ಯಾವುದೇ ಸಮಸ್ಯೆ ಸಂದೇಹ ಪರಿಹರಿಸಲು ಇಲಾಖೆ ಸಿದ್ಧವಿದೆ. ಇನ್ನು ಅನೇಕ ಭಾಗಗಳಲ್ಲಿ ನಡೆಸಲಾಗುತ್ತಿರುವ ಕಾರ್ಯಕ್ರಮಗಳಲ್ಲಿ ಸರಕು ಮತ್ತು ಸೇವಾ ತೆರಿಗೆ ಪದ್ಧತಿ ಬಗ್ಗೆ ವಿವರವಾಗಿ ಮಾಹಿತಿ ನೀಡಲಾಗುತ್ತದೆ ಎಂದು ಉದಯ್ ಕುಮಾರ್ ತಿಳಿಸಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಆರ್. ವಿರೂಪಾಕ್ಷ, ವಕೀಲರಾದ ಪುಟ್ಟಸ್ವಾಮಿ ಕಾರ್ಯಕ್ರಮ ಕುರಿತು ಮಾತನಾಡಿದರು. ಎಪಿಎಂಸಿ ಉಪಾಧ್ಯಕ್ಷರಾದ ಮಹದೇವಸ್ವಾಮಿ, ನಿರ್ದೇಶಕರಾದ ವಿಶ್ವನಾಥ, ಹೆಗ್ಗೂರುಶೆಟ್ಟಿ, ವರ್ತಕರ ಸಂಘದ ಅಧ್ಯಕ್ಷರಾದ ಶ್ರೀನಿವಾಸ್, ವಕೀಲರಾದ ಅರುಣ್ ಕುಮಾರ್, ಎಪಿಎಂಸಿ ಅಧಿಕಾರಿ  ಮಧುಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬೆಳೆ ಸ್ಪರ್ಧೆಗೆ ಅರ್ಜಿ ಆಹ್ವಾನ

ಚಾಮರಾಜನಗರ, ಜು. 26:- ಕೃಷಿ ಉತ್ಪಾದನೆ ಹೆಚ್ಚಳವಾಗಲು ಕಾರಣವಾಗಿರುವ ರೈತರ ಶ್ರಮ ಸಕ್ರಿಯ ಪಾಲ್ಗೊಳ್ಳುವಿಕೆ ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ ಬೆಳೆ ಸ್ಪರ್ಧೆಯನ್ನು ರಾಜ್ಯ ಜಿಲ್ಲಾ ಹಾಗೂ ತಾಲೂಕು ಮಟ್ಟಗಳಲ್ಲಿ ಏರ್ಪಡಿಸಿ ಬಹುಮಾನ ನೀಡುವ ಸಲುವಾಗಿ ಕೃಷಿ ಇಲಾಖೆ ಅರ್ಜಿ ಆಹ್ವಾನಿಸಿದೆ.
ತಾಲೂಕು ಮಟ್ಟದ ಸ್ಪರ್ಧೆಗೆ ಪ್ರಥಮ ಬಹುಮಾನವಾಗಿ 15 ಸಾವಿರ, ದ್ವಿತೀಯ ಬಹುಮಾನವಾಗಿ 10 ಸಾವಿರ, ತೃತೀಯ ಬಹುಮಾನವಾಗಿ 5 ಸಾವಿರ ರೂ. ನೀಡಲಾಗುತ್ತದೆ. ಜಿಲ್ಲಾ ಮಟ್ಟದ ಸ್ಪರ್ಧೆಗೆ ಪ್ರಥಮ ಬಹುಮಾನವಾಗಿ 25 ಸಾವಿರ, ದ್ವಿತೀಯ ಬಹುಮಾನವಾಗಿ 15 ಸಾವಿರ, ತೃತೀಯ ಬಹುಮಾನವಾಗಿ 10 ಸಾವಿರ ರೂ. ನೀಡಲಾಗುತ್ತದೆ. ರಾಜ್ಯ ಮಟ್ಟದ ಸ್ಪರ್ಧೆಗೆ ಪ್ರಥಮ ಬಹುಮಾನವಾಗಿ 50 ಸಾವಿರ, ದ್ವಿತೀಯ ಬಹುಮಾನವಾಗಿ 25 ಸಾವಿರ, ತೃತೀಯ ಬಹುಮಾನವಾಗಿ 15 ಸಾವಿರ ರೂ. ನೀಡಲಾಗುತ್ತದೆ.
ಸ್ಪರ್ಧೆಗೆ ಭಾಗವಹಿಸಲು ಸಾಮಾನ್ಯ ವರ್ಗದ ರೈತರು 100 ರೂ., ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ರೈತರಾಗಿದ್ದಲ್ಲಿ 25 ರೂ. ಪ್ರವೇಶ ಶುಲ್ಕ ಸಂದಾಯ ಮಾಡಬೇಕಿದೆ. ಮುಂಗಾರು ಹಂಗಾಮಿಗೆ ಆಗಸ್ಟ್ 31, ಹಿಂಗಾರು ಹಂಗಾಮಿಗೆ ನವೆಂಬರ್ 30 ಸ್ಪರ್ಧೆಗೆ ನೊಂದಾಯಿಸಿಕೊಳ್ಳಲು ಕಡೆಯ ದಿನವಾಗಿದೆ.
ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಜಿಲ್ಲಾ ಮಟ್ಟದ ಸಮಿತಿ ನಿಗದಿಪಡಿಸುವ ಒಂದು ಬೆಳೆಯಲ್ಲಿ ಮಾತ್ರ ಸ್ಫರ್ಧೆ ನಡೆಸಲು ಅವಕಾಶವಿರುತ್ತದೆ. ವಿವರಗಳಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಭೇಟಿ ಮಾಡುವಂತೆ ಜಂಟಿ ಕೃಷಿ ನಿರ್ದೇಶಕರಾದ ತಿರುಮಲೇಶ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ಸರಳ ಮದುವೆ ಮಾಡಿಕೊಂಡ ಪ.ಪಂ. ದಂಪತಿಗಳಿಗೆ ಪ್ರೋತ್ಸಾಹಧನ : ಅರ್ಜಿ ಆಹ್ವಾನ

ಚಾಮರಾಜನಗರ, ಜು. 26 - ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಸರಳವಾಗಿ ಮದುವೆ ಮಾಡಿಕೊಂಡಿರುವ ಪರಿಶಿಷ್ಟ ಪಂಗಡ ದಂಪತಿಗಳಿಗೆ ಸರಳ ವಿವಾಹ ಯೋಜನೆಯಡಿ 50 ಸಾವಿರ ರೂ. ಪ್ರೋತ್ಸಾಹ ಧನ ನೀಡಲಿದ್ದು ಅರ್ಜಿ ಆಹ್ವಾನಿಸಿದೆ.
2015-16ನೇ ಸಾಲಿನಿಂದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸರಳವಾಗಿ ವಿವಾಹವಾಗಿರುವ ಪರಿಶಿಷ್ಟ ವರ್ಗ ಪಂಗಡ ದಂಪತಿ ಪ್ರೋತ್ಸಾಹಧನ ಪಡೆಯಬಹುದು. ಅರ್ಜಿ ಹಾಗೂ ವಿವರಗಳಿಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕಚೇರಿ (ದೂ.ಸಂ.08226-226070), ತಾಲೂಕು ಸಮಾಜ / ಪರಿಶಿಷ್ಟ ಕಲ್ಯಾಣಾಧಿಕಾರಿ, ಚಾಮರಾಜನಗರ ದೂ.ಸಂ. 08226-223143, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ, ಕೊಳ್ಳೇಗಾಲ ದೂ.ಸಂ. 08224-253196, ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಯಳಂದೂರು ದೂ.ಸಂ. 08226-240309, ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಗುಂಡ್ಲುಪೇಟೆ ದೂ.ಸಂ. 08229-222984 ಸಂಪರ್ಕಿಸುವಂತೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ.ಜಾ. ಪ.ಪಂ. ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ

ಚಾಮರಾಜನಗರ, ಜು. 26 - ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸುತ್ತಿದ್ದು ಈ ಪ್ರಯೋಜನ ಪಡೆಯಲು ಕೋರಿದೆ.
ಅರ್ಜಿ ನಮೂನೆಯಲ್ಲಿ ವಿವರಗಳನ್ನು ನಮೂದಿಸಿ ಜಾತಿ ಪ್ರಮಾಣ ಪತ್ರದ ನಕಲನ್ನು ಲಗತ್ತಿಸಬೇಕು. ವಿದ್ಯಾರ್ಥಿಗಳು ಪಾಸಿನ ದರ ಪಾವತಿಸುವಂತಿಲ್ಲ. ಆದರೆ ಸಂಸ್ಕರಣ ಶುಲ್ಕವಾಗಿ 80 ರೂ. ಹಾಗೂ ಅಪಘಾತ ಪರಿಹಾರ ಶುಲ್ಕವಾಗಿ 50 ರೂ.ಗಳನ್ನು ನಿಯಮಾವಳಿಗಳ ಅನ್ವಯ ಪಾವತಿಸಬೇಕಿದೆ. ಭರ್ತಿ ಮಾಡಿದ ಅರ್ಜಿ, ನಿಗದಿತ ಶುಲ್ಕದೊಂದಿಗೆ ಸಂಬಂಧಪಟ್ಟ ಶೈಕ್ಷಣಿಕ ಸಂಸ್ಥೆಗಳ ಮೂಲಕ ನಿಗಮಕ್ಕೆ ಸಲ್ಲಿಸಿ ಬಸ್ ಪಾಸ್ ಪಡೆದುಕೊಳ್ಳಬೇಕಿದೆ. ಶೈಕ್ಷಣಿಕ ಸಂಸ್ಥೆಯಿಂದ ವಾಸಸ್ಥಳಕ್ಕೆ ಗರಿಷ್ಟ 60 ಕಿ.ಮೀ. ಅಂತರವಿರುವ ವಿದ್ಯಾರ್ಥಿಗಳು ಮಾತ್ರ ಸೌಲಭ್ಯ ಪಡೆಯಲು ಅರ್ಹರಾಗಿದ್ದಾರೆ ಎಂದು ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಆರ್ ಅಶೋಕ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊಳ್ಳೇಗಾಲ : ಮನೆ ನಿರ್ಮಾಣ ಸಹಾಯಧನಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಜು. 26 - ಕೊಳ್ಳೇಗಾಲ ನಗರಸಭೆಯು 2017-18ನೇ ಸಾಲಿಗೆ ಡಾ. ಬಿ.ಆರ್. ಅಂಬೇಡ್ಕರ್ ನಿವಾಸ ಹಾಗೂ ವಾಜಪೇಯಿ ನಗರವಸತಿ  ಯೋಜನೆಯಡಿ ಮನೆ ನಿರ್ಮಿಸಿಕೊಳ್ಳುವವರಿಗೆ ನೀಡಲಾಗುವ ಸಹಾಯಧನಕ್ಕೆ ಅರ್ಜಿ ಆಹ್ವಾನಿಸಿದೆ.
ಅಂಬೇಡ್ಕರ್ ನಿವಾಸ ಯೋಜನೆಯಡಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಮಹಿಳೆಯರು, ವಿದುರ, ಹಿರಿಯ ನಾಗರಿಕರು, ವಿಕಲಚೇತನರು ಅರ್ಜಿ ಸಲ್ಲಿಸಬಹುದು.
ವಾಜಪೇಯಿ ನಗರ ವಸತಿ ಯೋಜನೆಗೆ ಹಿಂದುಳಿದ ವರ್ಗಗಳ ಮಹಿಳೆಯರು ಅರ್ಜಿ ಸಲ್ಲಿಸಬಹುದು. ನಿವೇಶನ, ಕಚ್ಚಾಮನೆ, ಗುಡಿಸಲು ಹೊಂದಿರುವವರಿಗೆ ಸಹಾಯಧನ ನೀಡಲಾಗುತ್ತದೆ. ಅರ್ಜಿ ಜತೆ ಜಾತಿ, ವರಮಾನ ಪತ್ರ, ಆಧಾರ್ ಅಥವಾ ಚುನಾವಣಾ ಗುರುತಿನ ಚೀಟಿ, ಪಡಿತರ ಚೀಟಿ, ನಿವೇಶನ ದಾಖಲೆ ಲಗತ್ತಿಸಬೇಕು. ದಾಖಲಾತಿ ಪ್ರತಿಗಳು ಗೆಜೆಟೆಡ್ ಅಧಿಕಾರಿಗಳ ದೃಢೀಕರಣ ಹೊಂದಿರಬೇಕು. ನಗರಸಭೆ ವ್ಯಾಪ್ತಿಯಲ್ಲಿ ದಾಖಲಾತಿಗಳು ಇರಬೇಕು. ಅರ್ಜಿ ಸಲ್ಲಿಕೆಗೆ ಜುಲೈ 31 ಕಡೆಯ ದಿನವಾಗಿದೆ. ವಿವರಗಳಿಗೆ ನಗರಸಭೆ ಕಾರ್ಯಾಲಯ ಕಚೇರಿ ಸಂಪರ್ಕಿಸುವಂತೆ ಪೌರಾಯುಕ್ತರು ತಿಳಿಸಿದ್ದಾರೆ.


ಜು. 27ರಂದು ನೆರೆಹೊರೆ ಯುವ ಸಂಸತ್, ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮ

ಚಾಮರಾಜನಗರ, ಜು. 26:- ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ನಗರದ ಧ್ವನಿ ಮಹಿಳಾ ಅಭಿವೃದ್ಧಿ ಸಂಸ್ಥೆÀ ಆಶ್ರಯದಲ್ಲಿ ಜುಲೈ 27ರಂದು ಬೆಳಿಗ್ಗೆ 11 ಗಂಟೆÉಗೆ ಕಾಗಲವಾಡಿಯ ಅಂಬೇಡ್ಕರ್  ಸಮುದಾಯ ಭವನದಲ್ಲಿ ನೆರೆಹೊರೆ ಯುವ ಸಂಸತ್ ಕಾರ್ಯಕ್ರಮ ಹಾಗೂ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ನೆಹರು ಯುವ ಕೇಂದ್ರÀದ ಜಿಲ್ಲಾ ಯುವಜನ ಸಮನ್ವಯಾಧಿಕಾರಿಗಳಾದ ಎಲ್. ಸಿದ್ಧರಾಮಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಕಾಗಲವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಿವಮ್ಮ ಅಧ್ಯಕ್ಷತೆ ವಹಿಸುವರು. ಧ್ವನಿ ಮಹಿಳಾ ಅಭಿವೃದ್ಧಿ ಸಂಸ್ಥೆ ಸಂಯೋಜಕರಾದ ಲೀನಾಕುಮಾರಿ ಅತಿಥಿ ಉಪನ್ಯಾಸ ನೀಡುವರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಮರಿಸ್ವಾಮಿ, ಸದಸ್ಮರಾದ ಜ್ಯೋತಿ. ಶ್ರೀದೇವಿ, ರತ್ನಮ್ಮ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.

ಜು. 27ರಂದು ವಿದ್ಯುತ್ ವ್ಯತ್ಯಯ

ಚಾಮರಾಜನಗರ, ಜು. 26 - ತಾಲೂಕಿನ ಸಂತೆಮರಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಜುಲೈ 27ರಂದು ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಹೊನ್ನೂರು, ಸಂತೆಮರಹಳ್ಳಿ, ನವಿಲೂರು, ಆಲ್ದೂರು, ಅಂಬಳೆ, ಕುದೇರು, ಮಂಗಲ, ಕೆಂಪನಪುರ, ದುಗ್ಗಟ್ಟಿ, ಚಂಗಡಿಪುರ ಗ್ರಾಮಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಸಾರ್ವಜನಿಕರು ನಿಗಮದೊಂದಿಗೆ ಸಹಕರಿಸುವಂತೆ ಚೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ಜು. 31ರಂದು ಮಲೆಮಹದೇಶ್ವರ ದೇವಾಲಯದ ಗೋಲಕ ಹಣ ಎಣಿಕೆ
ಚಾಮರಾಜನಗರ, ಜು. 26:- ಕೊಳ್ಳೇಗಾಲ ತಾಲೂಕಿನ ಮಹದೇಶ್ವರ ಬೆಟ್ಟದ ಮಲೆಮಹದೇಶ್ವರ ಸ್ವಾಮಿ ದೇವಾಲಯದ ಗೋಲಕಗಳ ಹಣ ಎಣಿಕೆ ಕಾರ್ಯವು ಜುಲೈ 31ರಂದು ಬೆಳಿಗ್ಗೆ ನಡೆಯಲಿದೆ.
ಬಸ್ ನಿಲ್ದಾಣದಲ್ಲಿರುವ ವಾಣಿಜ್ಯ ಸಂಕೀರ್ಣ ಕಟ್ಟಡದ ಮೊದಲ ಮಹಡಿಯ ವಿಶ್ರಾಂತಿ ಗೃಹದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸಿಬ್ಬಂದಿ ಸಹಯೋಗದೊಂದಿಗೆ ಪರ್ಕಾವಣೆ ಕಾರ್ಯವನ್ನು ನಡೆಸಲಾಗುವುದೆಂದು ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜು. 31ರಂದು ಪ.ಜಾ., ಪ.ವರ್ಗಗಳ ಹಿತರಕ್ಷಣಾ ಸಮಿತಿ ಸಭೆ

ಚಾಮರಾಜನಗರ, ಜು. 26 - ಚಾಮರಾಜನಗರ ತಾಲೂಕು ಮಟ್ಟದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಹಿತರಕ್ಷಣಾ ಸಮಿತಿ ಸಭೆಯು ತಹಸೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ಜುಲೈ 31ರಂದು ಬೆಳಿಗ್ಗೆ 11 ಗಂಟೆಗೆ ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಲಿದೆ ಎಂದು ತಾಲೂಕು ಸಮಾಜ ಕಲ್ಯಾಣ ಇಲಾಖೆ ಪ್ರಕಟಣೆ ತಿಳಿಸಿದೆ.


No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು