Monday, 31 July 2017

ಆಗಸ್ಟ್ 10 ರಂದು ಜಿಲ್ಲೆಗೆ ಸಿ.ಎಂ. ಭೇಟಿ ಹಿನ್ನಲೆ : ಜನಪ್ರತಿನಿಧಿ, ಜಿಲ್ಲಾಧಿಕಾರಿಗಳಿಂದ ಪೂರ್ವಭಾವಿ ಸಭೆ (29-07-2017)


ಆಗಸ್ಟ್ 10 ರಂದು ಜಿಲ್ಲೆಗೆ ಸಿ.ಎಂ. ಭೇಟಿ ಹಿನ್ನಲೆ : ಜನಪ್ರತಿನಿಧಿ, ಜಿಲ್ಲಾಧಿಕಾರಿಗಳಿಂದ ಪೂರ್ವಭಾವಿ ಸಭೆ 

ಚಾಮರಾಜನಗರ, ಜು. 29 :- ಮಾಜಿ ರಾಜ್ಯಪಾಲರು ಹಾಗೂ ಧೀಮಂತ ಹಿರಿಯ ನಾಯಕರಾದ  ದಿವಂಗತ ಬಿ. ರಾಚಯ್ಯ ಅವರ ಸ್ಮಾರಕ ನಿರ್ಮಾಣ ಶಿಲಾನ್ಯಾಸ ಹಾಗೂ ನಗರದ ಬಿ. ರಾಚಯ್ಯ ಜೋಡಿ ರಸ್ತೆಯ ಅಗಲೀಕರಣ ಕಾಮಗಾರಿ ಚಾಲನೆಗೆ ಮುಖ್ಯಮಂತ್ರಿಯವರಾದ ಸಿದ್ಧರಾಮಯ್ಯ ಅವರು ಆಗಸ್ಟ್ 10 ರಂದು ಆಗಮಿಸಲಿರುವ ಹಿನ್ನಲೆಯಲ್ಲಿ ಇಂದು ಕಾರ್ಯಕ್ರಮ ಸಂಬಂಧ ನಗರದಲ್ಲಿ ಪೂರ್ವಸಿದ್ದತೆ ಸಭೆ ನಡೆಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ   ಲೋಕಸಭಾ ಸದಸ್ಯರಾದ  ಆರ್. ಧ್ರುವನಾರಾಯಣ, ಶಾಸಕರು ಹಾಗೂ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಸಿ. ಪುಟ್ಟರಂಗಶೆಟ್ಟಿ, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರು ಹಾಗೂ ಮಾಜಿ ಶಾಸಕರು ಆದ ಎ.ಆರ್. ಕೃಷ್ಣಮೂರ್ತಿ ಅವರ ಜಿಲ್ಲಾ ಪಂಚಾಯತ್ ಸದಸ್ಯರಾದ ಎ.ಆರ್. ಬಾಲರಾಜು ಜಿಲ್ಲಾಧಿಕಾರಿ  ಡಾ. ಕೆ. ಹರೀಶ್ ಕುಮಾರ್ ಅವರ ಸಮ್ಮುಖದಲ್ಲಿ  ಕಾರ್ಯಕ್ರಮ ಆಯೋಜನೆ ಸಂಬಂಧ ಪೂರ್ವಭಾವಿ ಸಭೆ ನಡೆಯಿತು.
ಲೋಕಸಭಾ ಸದಸ್ಯರಾದ ಆರ್. ದ್ರುವನಾರಾಯಣ ಅವರು ಮಾತನಾಡಿ ಬಿ. ರಾಚಯ್ಯ  ಅವರ 95ನೇ ವರ್ಷಾಚರಣೆ ಸ್ಮರಣಾರ್ಥ ಚಾಮರಾಜನಗರ ತಾಲ್ಲೂಕಿನ ಆಲೂರಿನಲ್ಲಿ ಬಿ. ರಾಚಯ್ಯ ನವರ ಸ್ಮಾರಕ ನಿರ್ಮಾಣಕ್ಕೆ ಮುಖ್ಯಮಂತ್ರಿಯವರು ಶಿಲಾನ್ಯಾಸ ನೆರವೇರಿಸಲಿದ್ದಾರೆ.  ಈ ಹಿನ್ನಲೆಯಲ್ಲಿ  ಆಲೂರು ಗ್ರಾಮದಲ್ಲಿ ಕಾರ್ಯಕ್ರಮಕ್ಕೆ ಅಗತ್ಯ ವಿರುವ ಎಲ್ಲಾ ಸಿದ್ಧತೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದು ಸೂಚಿಸಿದರು.
ಸ್ಮಾರಕ ನಿರ್ಮಾಣ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಅದ್ದೂರಿಯಾಗಿ ಶಾಮಿಯಾನ, ವೇದಿಕೆ ಇತರ ಆಸನಗಳ ವ್ಯವಸ್ಥೆಯನ್ನು ಕೈಗೊಳ್ಳಬೇಕು. ನಾಗರಿಕರು,  ಗಣ್ಯರು, ಆಹ್ವಾನಿತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶಗೊಳ್ಳುವುದರಿಂದ ಯಾವುದೇ ತೊಂದರೆಯಾಗದಂತೆ ಎಲ್ಲಾ ಸಿದ್ದತೆಯನ್ನು ಸಮರ್ಪಕವಾಗಿ ಕೈಗೊಳ್ಳಬೇಕು ಎಂದು ಧ್ರುವನಾರಾಯಣ ಅವರು ತಿಳಿಸಿದರು.
ನಗರದ ಪ್ರಮುಖ ಬಿ. ರಾಚಯ್ಯ ಜೋಡಿ ರಸ್ತೆ ಅಗಲೀಕರಣ ಕಾಮಗಾರಿಗೂ ಆಗಸ್ಟ್ 10 ರಂದು ಮುಖ್ಯಮಂತ್ರಿಯವರು ಚಾಲನೆ ನೀಡಲಿದ್ದಾರೆ. ಹೀಗಾಗಿ ನಗರದಲ್ಲಿ ಸಾರ್ವಜನಿಕ ಸಮಾರಂಭ ಆಯೋಜನೆಗೆ  ಅತ್ಯಂತ ಪ್ರಶಸ್ತವಾದ ಸ್ಥಳ ಗುರುತಿಸಿ ಆಯ್ಕೆ ಮಾಡುವಂತೆಯೂ ಧ್ರುವನಾರಾಯಣ ಅವರು ತಿಳಿಸಿದರು.
ಮಾಜಿ ಶಾಸಕರು ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ  ಮಾಜಿ ಅಧ್ಯಕ್ಷರು ಮತ್ತು ಬಿ. ರಾಚಯ್ಯ ನವರ ಪುತ್ರರು ಆದ ಎ. ಆರ್. ಕೃಷ್ಣಮೂರ್ತಿ ಅವರು ಸ್ಮಾರಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಾಸ್ತು ಶಿಲ್ಪಿ ತಯಾರಿಸಿರುವ ಮಾದರಿ ನೀಲಿ ನಕ್ಷೆ ಹಾಗೂ ಅಂದಾಜು ಪಟ್ಟಿಯನ್ನು ಸಭೆಯಲ್ಲಿ ಪ್ರದರ್ಶಿಸಿದರು.  ಸ್ಮಾರಕ ನಿರ್ಮಾಣಕ್ಕೆ ಅವಶ್ಯವಿರುವ ಹೆಚ್ಚುವರಿ ಅನುದಾನದ ಬಗ್ಗೆಯೂ ಪ್ರಸ್ತಾಪಿಸಿದರು.
ಸ್ಮಾರಕ ನಿರ್ಮಾಣ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿಕೊಡಲು ಮುಖ್ಯಮಂತ್ರಿಯವರನ್ನು ತಾವು ಸಹ ಖುದ್ದು ಮನವಿ ಮಾಡಿದ್ದೇವೆ. ಕಾರ್ಯಕ್ರಮಕ್ಕೆ ಅಗತ್ಯವಿರುವ ಸಹಕಾರವನ್ನು ತಮ್ಮ ಕುಟುಂಬ ವತಿಯಿಂದಲೂ ಸಂಪೂರ್ಣವಾಗಿ ನೀಡಲಿದ್ದೇವೆ ಎಂದು ಎ.ಆರ್. ಕೃಷ್ಣಮೂರ್ತಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಮಾತನಾಡಿ ಸ್ಮಾರಕಕ್ಕೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರಕ್ರಿಯೆಯು ಅಚ್ಚುಕಟ್ಟಾಗಿ ಇರಬೇಕು. ಬಿ. ರಾಚಯ್ಯ ಜೋಡಿ ರಸ್ತೆ ಅಗಲೀಕರಣ ಕಾಮಗಾರಿ ಶಿಲಾನ್ಯಾಸ ಸಮಾರಂಭಕ್ಕೂ ಎಲ್ಲಾ ರೂಪುರೇಷಗಳನ್ನು ಸಮರ್ಪಕವಾಗಿ ಕೈಗೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ. ಕೆ. ಹರೀಶ್‍ಕುಮಾರ್ ಅವರು ಮಾತನಾಡಿ ಬಿ. ರಾಚಯ್ಯ ರವರ ಸ್ಮಾರಕ ನಿರ್ಮಾಣಕ್ಕೆ ಸ್ಮಾರಕ ನಿರ್ಮಾಣಕ್ಕಾಗಿ ಸರ್ಕಾರದಿಂದ 1 ಕೋಟಿ ರೂ ಅನುದಾನ ಬಿಡುಗಡೆಯಾಗಿದೆ. ಸ್ಮಾರಕ ಶಿಲಾನ್ಯಾಸ ಹಾಗೂ ಜೋಡಿ ರಸ್ತೆ ಕಾಮಗಾರಿ ಅಗಲೀಕರಣ ಕಾಮಗಾರಿ  ಆರಂಭ ಸಮಾರಂಭಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ದತೆ ಕೈಗೊಳ್ಳಲಾಗುವುದು. ನಗರದಲ್ಲಿ ಮುಖ್ಯಮಂತ್ರಿಯವರ ಸಾರ್ವಜನಿಕರ ಸಮಾರಂಭಕ್ಕೂ ಸೂಕ್ತ ಸ್ಥಳ ಗುರುತಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮುನಿರಾಜಪ್ಪ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಕೆ.ಎಚ್. ಸತೀಶ್, ನಿರ್ಮಿತಿ ಕೇಂದ್ರದ ಎಂಜಿನಿಯರ್ ವೃಷಬೇಂದ್ರ,  ಇತರರು ಸಭೆಯಲ್ಲಿ ಹಾಜರಿದ್ದರು.


ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ತುರ್ತಾಗಿ ಸ್ಪಂದಿಸಿ : ಎಸ್‍ಪಿ ಸೂಚನೆ

 ಚಾಮರಾಜನಗರ, ಜು. 29 - ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಮೇಲಿನ ದೌರ್ಜನ್ಯ ಕುರಿತು ದೂರುಗಳು ಬಂದಲ್ಲಿ ತಕ್ಷಣವೇ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಪೋಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ಸಂಬಂಧಿಸಿದ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪರಿಶಿಷ್ಟರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳ ಬಗ್ಗೆ  ತುರ್ತಾಗಿ ಸ್ಪಂದಿಸಬೇಕು. ಅಸ್ಪಶ್ಯತಾ ದೌರ್ಜನ್ಯ ತಡೆ ಕಾಯಿದೆ ಪ್ರಕಾರ ಪರಿಶಿಷ್ಟರಿಗೆ ರಕ್ಷಣೆ ಒದಗಿಸುವುದು ಪೊಲೀಸರ ಮುಖ್ಯ ಹೊಣೆಗಾರಿಕೆಯಾಗಿದೆ. ಪರಿಶಿಷ್ಟರ ಮೇಲೆ ಯಾವುದೇ ಭಾಗದಲ್ಲಿ ದೌರ್ಜನ್ಯ, ದಬ್ಬಾಳಿಕೆ ನಡೆದ ಕುರಿತು ದೂರುಗಳು ಬಂದರೆ ವಿಳಂಬ ಮಾಡದೆ ಪ್ರಕರಣ ದಾಖಲಿಸಿಕೊಂಡು ಅಗತ್ಯ ಪ್ರಕ್ರಿಯೆಗೆ ಮುಂದಾಗಬೇಕೆಂದು ತಿಳಿಸಿದರು.
ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಜನರ ಮೇಲೆ ಉಂಟಾಗುವ ಪ್ರಕರಣಗಳ ಬಗ್ಗೆ ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ಸ್ವೀಕರಿಸಲು ನಿರಾಕರಿಸಿದರೆ ಅಥವಾ ಅನಗತ್ಯವಾಗಿ ತೊಂದರೆ ನೀಡುವುದು ಕಂಡುಬಂದರೆ ನೇರವಾಗಿ ತಮಗೆ ದೂರು ನೀಡಬಹುದು. ದೂರವಾಣಿ ಮೂಲಕವೂ ಸಂಪರ್ಕಿಸಬಹುದು. ಪರಿಶಿಷ್ಟರಿಗೆ ರಕ್ಷಣೆ ನೀಡುವ ವಿಷಯದಲ್ಲಿ ಪೊಲೀಸರು ಕಟ್ಟುನಿಟ್ಟಾಗಿ ಕರ್ತವ್ಯ ನಿರ್ವಹಿಸಲು ಸೂಚನೆ ನೀಡಿರುವುದಾಗಿ ಧಮೇಂದ್ರ ಕುಮಾರ್ ಮೀನಾ ತಿಳಿಸಿದರು.
ಸಭೆಯಲ್ಲಿ ಮುಖಂಡರು ಪ್ರಸ್ತಾಪಿಸಿರುವ ವಿಷಯಗಳ ಬಗ್ಗೆ ಗಮನ ಹರಿಸಲಾಗುವುದು. ಸಭೆಯಲ್ಲಿ ಕೇಳಿಬಂದಿರುವ ದೂರುಗಳ ಕುರಿತು ಸಂಬಂಧಪಟ್ಟ ಪೊಲೀಸ್ ಠಾಣೆ ಅಧಿಕಾರಿಗಳಿಂದ ಸ್ಪಷ್ಟ ಮಾಹಿತಿ ಪಡೆದು ಮುಂದಿನ ಕ್ರಮ ವಹಿಸಲು ಸೂಚನೆ ನೀಡಲಾಗುವುದು. ಯಾವುದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಧಿಷ್ಟ ಅಂಶಗಳನ್ನು ಒಳಗೊಂಡ ಲಿಖಿತ ಪತ್ರವನ್ನು ನೀಡಿದಲ್ಲಿ ವಹಿಸಬೇಕಿರುವ ಮುಂದಿನ ಹಂತದ ಕ್ರಮಕ್ಕೆ ತಕ್ಷಣವೇ ಸ್ಪಂದಿಸಲು ನಿರ್ದೇಶನ ನೀಡಲಾಗುವುದು ಎಂದು ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದರು.
ಜಿಲ್ಲಾಧಿಕಾರಿ ಡಾ. ಕೆ. ಹರೀಶ್ ಕುಮಾರ್ ಅವರು ಮಾತನಾಡಿ ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಅಧಿಕಾರಿಗಳು ಸರಿಯಾದ ಕ್ರಮವನ್ನು ವಹಿಸುತ್ತಿಲ್ಲವೆಂಬ ಬಗ್ಗೆ ಪರಿಶೀಲಿಸಲಾಗುವುದು. ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಒದಗಿಸಲು ಯಾವುದೇ ವಿಳಂಬ ಧೋರಣೆ ಅನುಸರಿಸದೆ ತ್ವರಿತವಾಗಿ ಪರಿಹಾರ ಇತ್ಯರ್ಥಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಪರಿಶಿಷ್ಟರು ಇತರೆ ವರ್ಗದವರ ಗಂಭೀರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಇನ್ನು ಮುಂದೆ ಆಯಾ ಭಾಗದಲ್ಲೇ ಸಭೆಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ತಾವು ನಡೆಸಲು ಚಿಂತನೆ ಮಾಡಲಾಗಿದೆ. ವಿಶೇಷವಾಗಿ ನಾಗರಿಕರು ಜಿಲ್ಲಾ ಕೇಂದ್ರಕ್ಕೆ ಬಂದು ಸಮಸ್ಯೆ ನಿವೇದಿಸಿಕೊಳ್ಳಲು ಸಾಧ್ಯವಾಗದ ಸ್ಥಳಗಳಲ್ಲಿ ಸಭೆ ಆಯೋಜಿಸುವುದರಿಂದ ಜನರಿಗೂ ಅನುಕೂಲವಾಗುತ್ತದೆ. ಹಿರಿಯ ಅಧಿಕಾರಿಗಳಿಗೂ ಸಮಸ್ಯೆಯ ಸಂಪೂರ್ಣ ಚಿತ್ರಣ ಲಭಿಸಲಿದ್ದು ಪರಿಹಾರ ಕ್ರಮಗಳಿಗೆ ಸಾಧ್ಯವಾಗಲಿದೆ ಎಂದು ಹರೀಶ್ ಕುಮಾರ್ ತಿಳಿಸಿದರು.
ಮುಖಂಡರಾದ ಅರಕಲವಾಡಿ ನಾಗೇಂದ್ರ ಮಾತನಾಡಿ ಜಿಲ್ಲಾಡಳಿತದಿಂದ ನಡೆಸಲಾಗುವ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಹಿತರಕ್ಷಣಾ ಸಮಿತಿ ಸಭೆಯಲ್ಲಿ ದೂರುಗಳನ್ನು ನೇರವಾಗಿ ಪ್ರಸ್ತಾಪಿಸಲು ಅವಕಾಶವಾಗುತ್ತಿಲ್ಲ. ಹೀಗಾದರೆ ಪರಿಹಾರ ಹೇಗೆ ದೊರಕುತ್ತದೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಯವರು ಮುಂದಿನ ಸಭೆಗೆ ಎಲ್ಲರನ್ನೂ ಆಹ್ವಾನ ಮಾಡುವ ದಿಸೆಯಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಉಪನಿರ್ದೇಶಕರೊಂದಿಗೆ ಚರ್ಚೆ ನಡೆಸಿರುವುದಾಗಿ ತಿಳಿಸಿದರು.
ಮತ್ತೋರ್ವ ಮುಖಂಡರಾದ ಸಿ.ಎಂ. ಕೃಷ್ಣಮೂರ್ತಿ ಮಾತನಾಡಿ ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ನೊಂದವರಿಗೆ ಧೈರ್ಯ ತುಂಬುವ ಕೆಲಸವಾಗಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುವ ಮೊಕದ್ದಮೆಗೆ ಹಾಜರಾಗುವ ಪರಿಶಿಷ್ಟರಿಗೆ ಪ್ರಯಾಣಭತ್ಯೆ, ಇತರ ಭತ್ಯೆಗಳನ್ನು ಸಕಾಲಕ್ಕೆ ನೀಡಬೇಕು ಎಂದರು.
ಇನ್ನೊಬ್ಬ ಮುಖಂಡರಾದ ಕೆ.ಎಂ. ನಾಗರಾಜು ಅವರು ಮಾತನಾಡಿ ಪರಿಶಿಷ್ಟರ ಮೇಲಿನ ದಬ್ಬಾಳಿಕೆ ಪ್ರಕರಣಗಳನ್ನು ಪ್ರತಿಭಟಿಸಿ ಗಮನ ಸೆಳೆಯುವ ಸಂದರ್ಭದಲ್ಲಿ ಪ್ರತಿಭಟನಾಕಾರರ ವಿರುದ್ಧವೇ ಕ್ರಮ ಕೈಗೊಳ್ಳಲಾಗುತ್ತಿದೆ. ಅಮಾಯಕರನ್ನು ಅನಗತ್ಯವಾಗಿ ಪ್ರಕರಣಗಳಲ್ಲಿ ಸಿಲುಕಿಸುವ ಯತ್ನವೂ ನಡೆಯುತ್ತಿದೆ. ಇಂತಹ ಕ್ರಮಗಳು ನಿಲ್ಲಬೇಕಿದೆ ಎಂದರು.
ಅಕ್ರಮ ಮದ್ಯ ಮಾರಾಟ ಪ್ರಕರಣಗಳು ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ನಡೆಯುತ್ತಿದ್ದು ಇದಕ್ಕೆ ಯಾವುದೇ ಕಡಿವಾಣ ಹಾಕಲಾಗುತ್ತಿಲ್ಲವೆಂದು ಅನೇಕ ಮುಖಂಡರು ದೂರಿದರು. ಈ ಬಗ್ಗೆ ಉತ್ತರಿಸಿದ ಹಿರಿಯ ಅಧಿಕಾರಿಗಳು ಗಸ್ತು ಸಿಬ್ಬಂದಿಗೆ ಸೂಚನೆ ನೀಡಿ ಮಾಹಿತಿ ಕೊಡಲು ತಿಳಿಸಲಾಗುವುದು. ದಾಳಿ ಕಾರ್ಯಾಚರಣೆಯನ್ನು ಕೈಗೊಳ್ಳಲು ಸಹ ಅಬಕಾರಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು ಎಂದರು.
ಇನ್ನಿತರ ಸಮಸ್ಯೆಗಳ ಬಗ್ಗೆಯೂ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು. ಮುಖಂಡರಾದ ವೆಂಕಟರಮಣ ಪಾಪು, ಪಿ. ಸಂಘಸೇನ, ಆಲೂರು ನಾಗೇಂದ್ರ, ಕಂದಹಳ್ಳಿ ನಾರಾಯಣ, ದೊಡ್ಡಿಂದುವಾಡಿ ಸಿದ್ಧರಾಜು, ರಾಮಸಮುದ್ರ ಸುರೇಶ್, ಮೂಡ್ನಾಕೂಡು ಪ್ರಕಾಶ್, ಶಿವಣ್ಣ, ನಾಗೇಶ್, ಅಂಬರೀಶ್, ಬ್ಯಾಡಮೂಡ್ಲು ಬಸವಣ್ಣ, ರವಿಕುಮಾರ್, ಮಾಂಬಳ್ಳಿ ರಾಮು, ಹೊನ್ನೇಗೌಡನಹಳ್ಳಿ ರವಿಕುಮಾರ್, ಬದನಗುಪ್ಪೆ ಸುರೇಶ್, ಮಹೇಶ್, ಇನ್ನಿತರರು ಪರಿಶಿಷ್ಟ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮುನಿರಾಜಪ್ಪ, ಡಿವೈಎಸ್‍ಪಿ ಗಂಗಾಧರಸ್ವಾಮಿ, ಪುಟ್ಟಮಾದಯ್ಯ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಸತೀಶ್, ಅಬಕಾರಿ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಪ.ಜಾ. ಕಾನೂನು ಪದವೀಧರರಿಂದ ಆಡಳಿತ ನ್ಯಾಯಾಧೀಕರಣ ತರಬೇತಿಗೆ ಅರ್ಜಿ ಆಹ್ವಾನ

ಚಾಮರಾಜನಗರ, ಜು. 29 - ಸಮಾಜ ಕಲ್ಯಾಣ ಇಲಾಖೆ ವತಿಯಿಂದ 2017-18ನೇ ಸಾಲಿಗೆ ಪರಿಶಿಷ್ಟ ಜಾತಿಯ ಕಾನೂನು ಪದವೀಧರರಿಗೆ ಆಡಳಿತ ನ್ಯಾಯಾಧೀಕರಣದಲ್ಲಿ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ಕಡೆಯ ದಿನಾಂಕಕ್ಕೆ ಕಾನೂನು ಪದವಿಯಲ್ಲಿ ತೇರ್ಗಡೆಯಾಗಿ 2 ವರ್ಷ ಮೀರಿರಬಾರದು. ಅಭ್ಯರ್ಥಿಗಳು ಜಿಲ್ಲೆಯವರಾಗಿದ್ದು ಬಾರ್ ಕೌನ್ಸಿಲ್‍ನಲ್ಲಿ ಈಗಾಗಲೇ ನೊಂದಾಯಿಸಿರಬೇಕು. 40 ವರ್ಷ ವಯೋಮಿತಿಯೊಳಗಿರಬೇಕು. ಕುಟುಂಬದ ವಾರ್ಷಿಕ ಆದಾಯ 2 ಲಕ್ಷ ರೂ. ಮಿತಿಯೊಳಗಿರಬೇಕು. ಆಯ್ಕೆಯಾದ ಅಭ್ಯರ್ಥಿಗಳು 4 ವರ್ಷಗಳವರೆಗೆ ತರಬೇತಿ ಪಡೆದುಕೊಳ್ಳಬೇಕು. ತರಬೇತಿ ಅವಧಿಯಲ್ಲಿ 5 ಸಾವಿರ ರೂ.ಗಳ ಶಿಷ್ಯ ವೇತನ ಮಂಜೂರು ಮಾಡಲಾಗುವುದು.
ನಿಗದಿತ ಅರ್ಜಿ ನಮೂನೆಯನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೆಶಕ ಕಚೇರಿಯಿಂದ ಪಡೆದು, ಭರ್ತಿ ಮಾಡಿ ತಹಸೀಲ್ದಾರ್ ಅವರಿಂದ ಪಡೆದ ಜಾತಿ ಪ್ರಮಾಣ ಪತ್ರ, ಆದಾಯ, ಕಾನೂನು ಪದವಿ ಅಂಕಪಟ್ಟಿಗಳು, ಪದವಿ ಪತ್ರ, ಬಾರ್ ಕೌನ್ಸಿಲ್ ನೋಂದಣಿ ಪತ್ರದ ದೃಢೀಕೃತ ಪ್ರತಿಗಳೊಂದಿಗೆ 2 ಪಾಸ್ ಪೋರ್ಟ್ ಅಳತೆಯ ಭಾವಚಿತ್ರವನ್ನು ಲಗತ್ತಿಸಿ ಆಗಸ್ಟ್ 16ರ ಸಂಜೆ 4 ಗಂಟೆಂiÀÉೂಳಗೆ ತಲುಪಿಸುವಂತೆ ಪ್ರಕಟಣೆ ತಿಳಿಸಿದೆ
ಮರಿಯಾಲ ಶ್ರೀ ನಿಧನಕ್ಕೆ ಸಂತಾಪ
ಚಾಮರಾಜನಗರ, ಜು. 29 (ಕರ್ನಾಟಕ ವಾರ್ತೆ):- ತಾಲೂಕಿನ ಮರಿಯಾಲದ ಶ್ರೀ ಮುರುಘರಾಜೇಂದ್ರ ಸ್ವಾಮಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ವಿದ್ವಾನ್ ಶ್ರೀ ಮಹಂತ ಸ್ವಾಮೀಜಿ ಅವರ ನಿಧನಕ್ಕೆ ಜಿಲ್ಲಾ ಪಂಚಾಯತ್ ಸದಸ್ಯರಾದ ಸಿ.ಎನ್. ಬಾಲರಾಜು ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.
ಉಚಿತ ಶಿಕ್ಷಣ, ದಾಸೋಹ ಕಲ್ಪಿಸುವ ಸಲುವಾಗಿ ವಿದ್ಯಾಸಂಸ್ಥೆ ಸ್ಥಾಪನೆ ಮಾಡಿ ಸಾವಿರಾರು ಬಡವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಸ್ವಾಮೀಜಿಯವರು ನೀಡಿದ ಕೊಡುಗೆ ಅಪಾರವಾಗಿದೆ. ಜಿಲ್ಲೆಯಲ್ಲದೆ ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿಯೂ ಅಪಾರವಾದ ಭಕ್ತವೃಂದ ಹೊಂದಿದ್ದ ಸ್ವಾಮೀಜಿಯವರ ನಿಧನವು ತಮಗೆ ಅತೀವ ದು:ಖ ಉಂಟುಮಾಡಿದೆ ಎಂದು ಸಿ.ಎನ್. ಬಾಲರಾಜು ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಜು. 31ರಂದು ಪ.ಜಾ., ಪ.ವರ್ಗಗಳ ಹಿತರಕ್ಷಣಾ ಸಮಿತಿ ಸಭೆ

ಚಾಮರಾಜನಗರ, ಜು. 29 :- ಚಾಮರಾಜನಗರ ತಾಲೂಕು ಮಟ್ಟದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಹಿತರಕ್ಷಣಾ ಸಮಿತಿ ಸಭೆಯು ತಹಸೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ಜುಲೈ 31ರಂದು ಬೆಳಿಗ್ಗೆ 11 ಗಂಟೆಗೆ ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಲಿದೆ ಎಂದು ತಾಲೂಕು ಸಮಾಜ ಕಲ್ಯಾಣ ಇಲಾಖೆ ಪ್ರಕಟಣೆ ತಿಳಿಸಿದೆ.

ಜು. 31ರಂದು ಚಂದಕವಾಡಿಯಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ

ಚಾಮರಾಜನಗರ, ಜು. 29:- ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಚಂದಕವಾಡಿಯ ಸಂಯುಕ್ತ ಸರ್ಕಾರಿ ಪದವಿಪೂರ್ವ ಕಾಲೇಜು  ಸಂಯುಕ್ತ ಆಶ್ರಯದಲ್ಲಿ ಜುಲೈ 31ರಂದು ಬೆಳಿಗ್ಗೆ 10 ಗಂಟೆಗೆ ಚಂದಕವಾಡಿಯ ಸಂಯುಕ್ತ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಾದಕ ವಸ್ತುಗಳ ನಿಷೇಧ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ ಏರ್ಪಡಿಸಲಾಗಿದೆ.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್.ಪಿ. ನಂದೀಶ್ ಕಾರ್ಯಕ್ರಮ ಉದ್ಘಾಟಿಸುವರು. ಚಂದಕವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಡಿ.ಎಸ್. ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸುವರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಆರ್. ವಿರೂಪಾಕ್ಷ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಾದೇಶ್ ಹಾಗೂ ಸಾಧನ ಸಂಸ್ಥೆ ಅಧ್ಯಕ್ಷರಾದ ಟಿ.ಜಿ. ಸುರೇಶ್ ಮುಖ್ಯ ಅತಿಥಿಗಳಾಗಿ ಆಗಮಿಸುವರು. ವಕೀಲರಾದ ಪ್ರಸನ್ನಕುಮಾರ್ ಅವರು ಮಾದಕ ವಸ್ತುಗಳ ಕುರಿತು, ಮಹೇಶ್ ಅವರು ಬಾಲ್ಯವಿವಾಹ ಹಾಗೂ ಮೋಟಾರ್ ವಾಹನ ಕಾಯ್ದೆ ಕುರಿತು ಮಾತನಾಡುವರು ಎಂದು ಪ್ರಕಟಣೆ ತಿಳಿಸಿದÉ.


No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು