ವಾಣಿಜ್ಯ ಪರೀಕ್ಷೆ: ನಿಷೇದಾಜ್ಞೆ ಜಾರಿ
ಚಾಮರಾಜನಗರ, ಜು. 11 - ಚಾಮರಾಜನಗರ ಪಟ್ಟಣದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್)ಯಲ್ಲಿ ವಾಣಿಜ್ಯ ಪರೀಕ್ಷೆಯು ಜುಲೈ 12ರವರೆಗೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸದರಿ ಪರೀಕ್ಷಾ ಕೇಂದ್ರದ 200 ಮೀ. ವ್ಯಾಪ್ತಿಯಲ್ಲಿ ನಿಷ್ಭೆದಾಜ್ಞೆ ವಿಧಿಸಿ ಜಿಲ್ಲಾಧಿಕಾರಿ ಡಾ.ಕೆ. ಹರೀಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.ಪರೀಕ್ಷಾ ಕಾರ್ಯವು ಶಾಂತಿ ಮತ್ತು ಸುವ್ಯವಸ್ಥೆಯಿಂದ ನಡೆಯಲೆಂಬ ಉದ್ದೇಶದಿಂದ ಪರೀಕ್ಷಾ ದಿನಗಳಂದು ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ನಿಷೇದಾಜ್ಞೆ ಆದೇಶ ಜಾರಿಯಲ್ಲಿರುತ್ತದೆ. ಅಲ್ಲದೆ ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ಬರುವ ಜೆರಾಕ್ಸ್ ಅಂಗಡಿಗಳನ್ನು ಬೆಳಿಗ್ಗೆ 9 ರಿಂದ ಸಂಜೆ 5.30 ಗಂಟೆಯವರೆಗೆ ಮುಚ್ಚುವಂತೆಯೂ ಆದೇಶಿಸಲಾಗಿದೆ. ಆದರೆ ಪರೀಕ್ಷಾ ಕೆಲಸಕ್ಕೆ ನಿಯೋಜಿತರಾದ ಸಿಬ್ಬಂದಿ ವರ್ಗದವರಿಗೆ ಹಾಗೂ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ನಿಷೇಧಾಜ್ಞೆ ಆದೇಶ ಅನ್ವಯವಾಗುವುದಿಲ್ಲವೆಂದು ತಿಳಿಸಲಾಗಿದೆ.
ಜು. 14ರಂದು ಜಿಲ್ಲೆಯಲ್ಲಿ ಮುಖ್ಯಮಂತ್ರಿಯವರ ಪ್ರವಾಸ
ಚಾಮರಾಜನಗರ, ಜು. 11:- ಮುಖ್ಯಮಂತ್ರಿಯವರಾದ ಸಿದ್ದರಾಮಯ್ಯ ಅವರು ಜುಲೈ 14ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.ಅಂದು ಮಧ್ಯಾಹ್ನ 2 ಗಂಟೆಗೆ ಕುದೇರಿನಲ್ಲಿರುವ ಚಾಮರಾಜನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ (ಚಾಮುಲ್)ಕ್ಕೆ ಭೇಟಿ ನೀಡುವರು. ಮಧ್ಯಾಹ್ನ 3 ಗಂಟೆಗೆ ಉಮ್ಮತ್ತೂರಿನಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡುವರು ಮತ್ತು ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಬಳಿಕ ಮೈಸೂರಿಗೆ ತೆರಳುವರೆಂದು ಪ್ರಕಟಣೆ ತಿಳಿಸಿದೆ.
ನರೇಗಾ ಪ್ರಗತಿ ಸಾಧಿಸದ ಅಧಿಕಾರಿಗಳ ವಿರುದ್ದ ಕ್ರಮಕೈಗೊಳ್ಳಿ : ಜಿ.ಪಂ ಅಧ್ಯಕ್ಷರ ಸೂಚನೆ
ಚಾಮರಾಜನಗರ, ಜು. 11:- ಬಹು ಮಹತ್ವದ ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಪ್ರಗತಿ ಸಾಧಿಸದ ಗುಂಡ್ಲುಪೇಟೆ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ವರದಿ ನೀಡುವಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ವೇಳೆ ಅವರು ಈ ಸೂಚನೆ ನೀಡಿದರು.
ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ಗುಂಡ್ಲುಪೇಟೆ ತಾಲೂಕು ಈವರೆಗೆ ಶೇ.18ರಷ್ಟು ಮಾತ್ರ ಪ್ರಗತಿ ಸಾಧಿಸಿರುವ ಕುರಿತು ತೀವ್ರ ಅಸಮಧಾನ ವ್ಯಕ್ತಪಡಿಸಿದ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಈ ಹಿಂದಿನ ವರ್ಷಗಳಲ್ಲಿಯೂ ಸಹ ನಿಮಗೆ ಪ್ರಗತಿ ಸಾಧಿಸಲು ಸೂಚಿಸಲಾಗಿತ್ತು. ಆದರೂ ಸಹ ಯಾವುದೇ ಸಾಧನೆಯಾಗಿಲ್ಲ. ಅಭಿವೃದ್ಧಿ ಹಿನ್ನಡೆಗೆ ಕಾರಣರಾಗಿರುವ ಎಷ್ಟು ಮಂದಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿದ್ದೀರಿ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪುಷ್ಪಾ ಕಮ್ಮಾರ್ ಇತ್ತೀಚೆಗೆ ಉದ್ಯೋಗ ಖಾತರಿ ಯೋಜನೆ ಕಾಮಗಾರಿಗೆ ಹೆಚ್ಚು ಗಮನ ನೀಡಲಾಗುತ್ತಿದ್ದು ನಿಗಧಿತ ಗುರಿ ಸಾಧಿಸಲು ಮುಂದಾಗುತ್ತೇನೆ ಎಂದರು. ಇದಕ್ಕೆ ತೃಪ್ತರಾಗದ ಜಿಲ್ಲಾ ಪಂಚಾಯತ್ ಅಧ್ಯಕ್ಷರು ನೀವು ಕಾರ್ಯಸಂಬಂಧಿ ದೂರವಾಣಿ ಕರೆಗಳನ್ನು ಸ್ವೀಕರಿಸುವುದಿಲ್ಲ. ಸಾಕಷ್ಟು ಅವಕಾಶಗಳನ್ನು ನೀಡಿದ್ದರೂ ಉದ್ಯೋಗ ಖಾತರಿ ಯೋಜನೆ ಸೇರಿದಂತೆ ಇತರೆ ಕೆಲವು ಅಭಿವೃದ್ಧಿ ಕೆಲಸಗಳಲ್ಲಿ ಆಸಕ್ತಿ ತೋರುತ್ತಿಲ್ಲ ಎಂದರು. ಇದೇವೇಳೆ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಗುಂಡ್ಲುಪೇಟೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಪತ್ರ ಬರೆಯುವಂತೆ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅವರು ಗುಂಡ್ಲುಪೇಟೆ ಹಾಗೂ ಕೊಳ್ಳೇಗಾಲ ತಾಲ್ಲೂಕಿನಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಪ್ರಗತಿ ನಿರೀಕ್ಷಿತ ಮಟ್ಟದಲ್ಲಿ ಇರದೇ ಇರುವ ಹಿನ್ನೆಲೆಯಲ್ಲಿ ಸಾಕಾಷ್ಟು ಅವಕಾಶಗಳನ್ನು ಅಲ್ಲಿನ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನೀಡಲಾಗಿತ್ತು. ಆದರೂ ಪರಿಸ್ಥಿತಿ ಸುಧಾರಿಸಿಲ್ಲ. ಹೀಗಾಗಿ ಈ ಇಬ್ಬ್ಬರು ಕಾರ್ಯನಿರ್ವಾಹಕ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಈಗಾಗಲೇ ವರದಿ ನೀಡಲಾಗಿದೆ ಎಂದರು.
ಸ್ವಚ್ಛತೆ ಹಾಗೂ ಆರೋಗ್ಯ ಪೂರಕ ಕ್ರಮಗಳಿಗೆ ಸಂಬಂಧಿಸಿದಂತೆ ಪರಿಶೀಲಿಸಿದ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಜಿಲ್ಲೆಯಲ್ಲಿ ಡೆಂಗ್ಯೂ ಸೇರಿದಂತೆ ಯಾವುದೇ ಜ್ವರ ಪ್ರಕರಣಗಳಿಗೆ ಅವಕಾಶವಾಗದಂತೆ ಸ್ವಚ್ಛತೆ ಕಾಪಾಡಬೇಕು. ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ನೈರ್ಮಲ್ಯ ಕಾರ್ಯವನ್ನು ಸರಿಯಾಗಿ ನಿರ್ವಹಿಸಲಾಗುತ್ತಿದೆಯೇ ಎಂಬ ಬಗ್ಗೆ ಪರಿಶೀಲಿಸಬೇಕು ಎಂದರು.
ಬೆಳೆ ವಿಮೆ, ಬೆಳೆ ಪರಿಹಾರ ಸಂಬಂಧ ಪ್ರಸ್ತಾಪದ ವೇಳೆ ಮಾತನಾಡಿದ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆರೆಹಳ್ಳಿ ನವೀನ್ ಅವರು ಬೆಳೆ ಪರಿಹಾರ ಹಣವನ್ನು ಸಾಲದ ಬಾಬ್ತಿಗೆ ವಜಾ ಮಾಡಿಕೊಳ್ಳುತ್ತಿರುವ ಬಗ್ಗೆ ದೂರುಗಳು ಬಂದಿವೆ. ಈ ರೀತಿಯಾಗದಂತೆ ಲೀಡ್ ಬ್ಯಾಂಕ್ ಮ್ಯಾನೇಜರ್ ನೋಡಿಕೊಳ್ಳಬೇಕೆಂದು ತಿಳಿಸಿದರು.
ಇದೇ ವೇಳೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಲಾಯಿತು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್.ಬಸವರಾಜು, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ.ಸದಾಶಿವಮೂರ್ತಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಕೆ.ಬೊಮ್ಮಯ್ಯ, ಮುಖ್ಯ ಯೋಜನಾ ಕಾರ್ಯದರ್ಶಿ ಮಾದೇಶು ಸಭೆಯಲ್ಲಿ ಹಾಜರಿದ್ದರು.
ಜನಸಂಖ್ಯೆ ಹೆಚ್ಚಳದ ಪರಿಣಾಮಗಳ ಬಗ್ಗೆ ಜಾಗೃತಿ ಅಗತ್ಯ: ಎಂ.ರಾಮಚಂದ್ರ
ಚಾಮರಾಜನಗರ, ಜು. 11 - ಜನ ಸಂಖ್ಯೆ ಹೆಚ್ಚಳದಿಂದ ಸಮಾಜದ ಮೇಲೆ ಉಂಟಾಗುತ್ತಿರುವ ಗಂಬೀರ ಪರಿಣಾಮಗಳ ಬಗ್ಗೆ ಜನರಲ್ಲಿ ಸಮರ್ಪಕವಾಗಿ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ.ರಾಮಚಂದ್ರ ತಿಳಿಸಿದರು.ನಗರದ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜನಸಂಖ್ಯೆ ಏರಿಕೆಯಿಂದ ಹಲವಾರು ಸಮಸ್ಯೆಗಳು ಉಂಟಾಗುತ್ತಿವೆ. ಪ್ರಸ್ತುತ ಇರುವ ಸಂಪನ್ಮೂಲಗಳಿಗೆ ತಕ್ಕಂತೆ ವಿತರಣೆ ಪ್ರಮಾಣವು ಆಗಬೇಕಿದೆ. ಈ ಹಿನ್ನೆಲೆಯಲ್ಲಿ ವಾಸ್ತವ ಪರಿಸ್ಥಿತಿಯನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕಿದೆ. ಜನಸಂಖ್ಯೆ ಸಮತೋಲನದಿಂದ ಆಗುವ ಒಳಿತಯನ್ನು ತಿಳಿಸಬೇಕಿದೆ ಎಂದರು.
ಆರೋಗ್ಯ ಅತಿ ಅವಶ್ಯವಿದ್ದು, ಶುದ್ದ ಗಾಳಿ, ನೀರು ಸೇರಿದಂತೆ ಉತ್ತಮ ಪರಿಸರ ನಿರ್ಮಾಣ ಮಾಡುವ ಹೊಣೆಗಾರಿಕೆಯೂ ಎಲ್ಲರ ಮೇಲಿದೆ. ಆರೋಗ್ಯ ಹಿತದೃಷ್ಠಿಯಿಂದ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಆಶಾ ಕಾರ್ಯಕರ್ತೆಯರೊಂದಿಗೆ ಇತರರು ಸೇರಿ ಜಾಗೃತಿ ಮೂಡಿಸಬೇಕಿದೆ ಎಂದು ರಾಮಚಂದ್ರ ತಿಳಿಸಿದರು.
ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ.ಸದಾಶಿವಮೂರ್ತಿ ಅವರು ಮಾತನಾಡಿ ಜನಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದರೂ ಅದಕ್ಕೆ ಅನುಗುಣವಾಗಿ ಸಂಪನ್ಮೂಲ ಹೆಚ್ಚಳವಾಗುವುದಿಲ್ಲ. ಇರುವ ಲಭ್ಯತೆಗೆ ಅನುಸಾರವಾಗಿ ಎಲ್ಲಾರಿಗೂ ಎಲ್ಲಾ ಸೌಲಭ್ಯಗಳು ಸಮರ್ಪಕವಾಗಿ ತಲುಪಿಸಬೇಕಿದೆ. ಜನಸಂಖ್ಯಾ ಸ್ಪೋಟದಿಂದ ಆಗುವ ಪರಿಣಾಮಗಳ ಬಗ್ಗೆ ಹೆಚ್ಚಿನ ಅರಿವು ಉಂಟು ಮಾಡಬೇಕಿದೆ ಎಂದರು.
ಜಿಲ್ಲಾ ಪಂಚಾಯತ್‍ನ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಕೆ.ಬೊಮ್ಮಯ್ಯ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆರೆಹಳ್ಳಿ ನವೀನ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ, ಮುನಿರಾಜಪ್ಪ, ಆರೋಗ್ಯ ಇಲಾಖೆ ಅಧಿಕಾರಿಗಳಾದ ಡಾ.ಮಹದೇವು, ಡಾ.ವಿಶ್ವೇಶ್ವರಯ್ಯ, ಆರೋಗ್ಯ ಶಿಕ್ಷಣ ಅಧಿಕಾರಿ ದೊರೆಸ್ವಾಮಿನಾಯ್ಕ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇದಕ್ಕೂ ಮೊದಲು ನಗರದ ಪ್ರಮುಖ ಬೀದಿಗಳಲ್ಲಿ ನಡೆದ ಜಾಗೃತಿ ಜಾಥಾಗೆ ಪ್ರವಾಸಿ ಮಂದಿರದ ಬಳಿ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರು ಚಾಲನೆ ನೀಡಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ.ರಾಮಚಂದ್ರ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ.ಸದಾಶಿವಮೂರ್ತಿ, ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.
No comments:
Post a Comment