Monday, 10 July 2017

ಜ್ವರ ಪ್ರಕರಣ ಹಿನ್ನೆಲೆ : ಸಂಚಾರಿ ಚಿಕಿತ್ಸಾ ಸೇವೆಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆ ,ಜಿಲ್ಲಾ ಆಸ್ಪತ್ರೆಗೆ ಉಸ್ತುವಾರಿ ಸಚಿವರ ಭೇಟಿ : ಅಗತ್ಯ ವ್ಯವಸ್ಥೆಗೆ ತಾಕೀತು (09-07-2017)

ಜ್ವರ ಪ್ರಕರಣ ಹಿನ್ನೆಲೆ : ಸಂಚಾರಿ ಚಿಕಿತ್ಸಾ ಸೇವೆಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆ 


ಚಾಮರಾಜನಗರ, ಜು. 10- ಜಿಲ್ಲಾ ಕೇಂದ್ರದಲ್ಲಿ ಜ್ವರದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮನೆಯ ಬಾಗಲಿಗೆ ತೆರಳಿ ಚಿಕಿತ್ಸೆ ನೀಡುವ ಸಂಚಾರಿ ಚಿಕಿತ್ಸಾ ವಾಹನ ಸೇವೆಗೆ ಆಹಾರ, ನಾಗರಿಕ ಪೂರೈಕೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಅವರು ಭಾನುವಾರ ಚಾಲನೆ ನೀಡಿದರು.
ನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಪಟ್ಟಣದ ಜನತೆಯ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ ನೀಡಲು ಸಜ್ಜುಗೊಳಿಸಿರುವ 3 ವಾಹನಗಳಿಗೆ ಉಸ್ತುವಾರಿ ಸಚಿವರು ಹಸಿರು ನಿಶಾನೆ ತೋರಿದರು. 
ಜಿಲ್ಲಾ ಆಸ್ಪತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜ್ವರದಿಂದ ಬಳಲುತ್ತಿರುವವರು ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ನಗರ ಪ್ರದೇಶಗಳಲ್ಲೇ ಸಂಚಾರಿ ಚಿಕಿತ್ಸಾ ವಾಹನಗಳ ಮೂಲಕ ರೋಗಿಗಳ ತಪಾಸಣೆ ನಡೆಸಿ ಚಿಕಿತ್ಸೆ ನೀಡುವ ಉದ್ದೇಶದಿಂದ ಈ ನೂತನ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಸಚಿವರು ತಿಳಿಸಿದರು.
ಚಿಕಿತ್ಸಾ ವಾಹನದಲ್ಲಿ ವೈದ್ಯರು, ಸುಶ್ರೂಷಕರು, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಇರಲಿದ್ದು ಬೆಳಿಗ್ಗೆ ಮತ್ತು ಮಧ್ಯಾಹ್ನ ವಿವಿಧ ಬಡಾವಣೆಗಳಿಗೆ ವಾಹನ ಭೇಟಿ ಕೊಡಲಿದೆ. ರೋಗಿಗಳ ತಪಾಸಣೆ ನಡೆಸಿ ಸಂಶಯಾಸ್ಪದ ಜ್ವರ ಪ್ರಕರಣ ಕಂಡುಬಂದಲ್ಲಿ ರಕ್ತ ಮಾದರಿ ಸಂಗ್ರಹಿಸಿ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದಲ್ಲಿ ಜಿಲ್ಲಾ ಆಸ್ಪತ್ರೆಗೆ ಶಿಫಾರಸು ಮಾಡಲಾಗುತ್ತದೆ ಎಂದು ಉಸ್ತುವಾರಿ ಸಚಿವರು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಚ್. ಪ್ರಸಾದ್ ಅವರು ವಾಹನ ಸಂಚಾರದ ವಿವರಣೆ ನೀಡಿ ಮೊದಲನೇ ವಾಹನವು ಬೆಳಿಗ್ಗೆ 10 ರಿಂದ 1 ಗಂಟೆಯವರೆಗೆ ಮಹದೇಶ್ವರ ಬಡಾವಣೆ, ಉಪ್ಪಾರ ಬೀದಿ, ಭುಜಂಗೇಶ್ವರ ಬಡಾವಣೆ, ಕೊಳದ ಬೀದಿ, ನಾಯಕರ ಬೀದಿ, ಶಂಕರಪುರ ಬಡಾವಣೆ, ಅಗಸರ ಬೀದಿ, ನಗರ ಖಾನೆ, ಭ್ರಮರಾಂಭ ಬಡಾವಣೆ, ರೈಲ್ವೆ ಬಡಾವಣೆಯಲ್ಲಿ ಸಂಚರಿಸಲಿದೆ. ಮಧ್ಯಾಹ್ನ 2 ರಿಂದ 5 ಗಂಟೆಯವರೆಗೆ ದೇವಾಂಗಬೀದಿ, ಕೆ.ಎನ್. ಮೊಹಲ್ಲ, ಅಂಬೇಡ್ಕರ್ ಬಡಾವಣೆ, ಕೆ ಜೆ ಕಾಲೋನಿ, ಸ್ವೀಪರ್ ಕಾಲೋನಿ, ಕೆಪಿ ಮೊಹಲ್ಲಾದಲ್ಲಿ ಸಂಚರಿಸಲಿದೆ ಎಂದರು.
ಎರಡನೇ ವಾಹನವು ಬೆಳಿಗ್ಗೆ 10 ರಿಂದ 1 ಗಂಟೆಯವರೆಗೆ ಬೀಡಿ ಕಾಲೋನಿ, ಗಾಡಿಖಾನೆ, ಗುಂಡ್ಲುಪೇಟೆ ರಸ್ತೆ, ಮೇಗಲ ನಾಯಕರ ಬೀದಿ, ಮೇಗಲ ಉಪ್ಪಾರ ಬೀದಿ, ಬೆಸ್ತರ ಬೀದಿ, ಜಾಮಿಯಾ ಮಸೀದಿ, ಮಧ್ಯಾಹ್ನ 2 ರಿಂದ ಸಂಜೆ 5 ಗಂಟೆಯವರೆಗೆ ಕರಿನಂಜನಪುರ, ಕುವೆಂಪು ಬಡಾವಣೆ, ಭಗೀರಥ ಬಡಾವಣೆ, ಹೌಸಿಂಗ್ ಬೋರ್ಡ್ ಕಾಲೋನಿ, ಆದಿಜಾಂಬವರ ಬೀದಿಯಲ್ಲಿ ಸಂಚರಿಸಲಿದೆ ಎಂದರು.
ಮೂರನೇ ವಾಹನವು ಬೆಳಿಗ್ಗೆ 10 ರಿಂದ 1 ಗಂಟೆಯವರೆಗೆ ಸೋಮವಾರಪೇಟೆ, ಎಳವರ ಬೀದಿ, ವರದರಾಜಪುರ, ಲಿಂಗಾಯಿತರ ಬೀದಿ, ಹರಿಜನ ಬೀದಿ, ಗಾಳಿಪುರ, ಅಹಮದ್ ನಗರ, ಮಧ್ಯಾಹ್ನ 2 ರಿಂದ 5 ಗಂಟೆಯವರೆಗೆ ಚೆನ್ನಿಪುರದಮೋಳೆ, ದೊಡ್ಡ ಹರಿಜನ ಮತ್ತು ಚಿಕ್ಕಹರಿಜನ ಬೀದಿ, ನಾಯಕರ ಬೀದಿ, ಸುಬೇದಾರ್ ಕಟ್ಟೆ ಬೀದಿ, ಹಳ್ಳದ ಬೀದಿ, ಉಪ್ಪಾರ ಬೀದಿ. ಎಜೆ ಬೀದಿ, ದುರ್ಗಿ ಬೀದಿ, ಕುರುಬರ ಬೀದಿಯಲ್ಲಿ ಸಂಚರಿಸಲಿದೆ. ಪಟ್ಟಣದ ನಾಗರಿಕರು ಈ ಸಂಚಾರಿ ಚಿಕಿತ್ಸಾ ವಾಹನದ ಸೌಲಭ್ಯ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ, ಶಾಸಕರಾದ ಆರ್. ನರೇಂದ್ರ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ. ಸದಾಶಿವಮೂರ್ತಿ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು, ಪ್ರಭಾರ ಜಿಲ್ಲಾಧಿಕಾರಿ ಡಾ. ಕೆ. ಹರೀಶ್ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಜಿಲ್ಲಾ ಆಸ್ಪತ್ರೆಗೆ ಉಸ್ತುವಾರಿ ಸಚಿವರ ಭೇಟಿ : ಅಗತ್ಯ ವ್ಯವಸ್ಥೆಗೆ ತಾಕೀತು



ಚಾಮರಾಜನಗರ, ಜು. 10 :- ಆಹಾರ, ನಾಗರಿಕ ಪೂರೈಕೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಅವರು ನಗರದ ಜಿಲ್ಲಾ ಆಸ್ಪತ್ರೆಗೆ ಭಾನುವಾರ ಸಂಜೆ ಭೇಟಿ ನೀಡಿ ವ್ಯಾಪಕವಾಗಿ ಪರಿಶೀಲನೆ ನಡೆಸಿದರು.
ಡೆಂಗ್ಯು ಸೇರಿದಂತೆ ಇತರೆ ಜ್ವರ ಸಂಬಂಧಿ ಪ್ರಕರಣಗಳು ಜಿಲ್ಲಾ ಆಸ್ಪತ್ರೆಯಲ್ಲಿ ಹೆಚ್ಚು ದಾಖಲೆಯಾಗಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು. ಪುರುಷರು, ಮಹಿಳೆಯರ ಪ್ರತ್ಯೇಕ ವಾರ್ಡ್‍ಗಳಿಗೆ ಭೇಟಿ ಕೊಟ್ಟ ಸಚಿವರು ಪ್ರತಿಯೊಬ್ಬ ರೋಗಿಯನ್ನು ಕಂಡು ಯಾವ ತೊಂದರೆಯಿಂದ ಬಳಲುತ್ತಿದ್ದೀರಿ? ನಿಮಗೆ ಉಚಿತವಾಗಿ ಔಷದ ಉಪಚಾರ ನೀಡಲಾಗುತ್ತಿದೆಯೇ? ಮೊದಲಿಗಿಂತ ಆರೋಗ್ಯ ಸುಧಾರಿಸಿದೆಯೇ? ವೈದ್ಯರು, ಸಿಬ್ಬಂದಿ ಸರಿಯಾಗಿ ಸ್ಪಂದಿಸುತ್ತಿದ್ದಾರೆಯೇ? ಎಂದು ಪ್ರಶ್ನೆ ಮಾಡಿ ಜಿಲ್ಲಾ ಆಸ್ಪತ್ರೆಯ ಕಾರ್ಯವೈಖರಿ ಬಗ್ಗೆ ಸಚಿವರು ಮನವರಿಕೆ ಮಾಡಿಕೊಂಡರು.
ತೀವ್ರವಾಗಿ ಬಳಲುತ್ತಿದ್ದ ಕೆಲ ರೋಗಿಗಳ ಬಳಿ ಬಹಳ ಹೊತ್ತು ಅವರ ತೊಂದರೆ ಬಗ್ಗೆ ಪ್ರಶ್ನಿಸಿದ ಸಚಿವರು ಯಾವ ಬಗೆಯ ಔಷಧಿ ನೀಡಲಾಗುತ್ತಿದೆ ಎಂಬುದನ್ನು ವೈದ್ಯರಿಂದ ಮಾಹಿತಿ ಪಡೆದುಕೊಂಡರು. ಅಗತ್ಯವಿರುವ ಸುಧಾರಿತ ಚಿಕಿತ್ಸೆಗಳನ್ನು ನೀಡಿ ಆರೋಗ್ಯ ಪೂರಕ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದರು.
ಇದೇವೇಳೆ ರೋಗಿಗಳ ಸಂಬಂಧಿಕರಿಂದಲೂ ಚಿಕಿತ್ಸೆ ವ್ಯವಸ್ಥೆಗಳ ಬಗ್ಗೆ ಕೇಳಿ ತಿಳಿದುಕೊಂಡ ಸಚಿವರು ಜತೆಯಲ್ಲಿಯೇ ಇದ್ದ ಹಿರಿಯ ವೈದ್ಯರಿಗೆ ಸರಿಯಾಗಿ ವ್ಯವಸ್ಥೆಗಳನ್ನು ಕಲ್ಪಿಸುವಂತೆ ತಾಕೀತು ಮಾಡಿದರು.
ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಸಂಜೆಯ ವೇಳೆ ವೈದ್ಯರು ಲಭ್ಯವಿರುವುದಿಲ್ಲ ಎಂಬ ಸ್ಥಳೀಯರು ಗಮನಕ್ಕೆ ತಂದ ಹಿನ್ನೆಲೆಯಲ್ಲಿ ತೀವ್ರ ವಿಚಾರಣೆ ನಡೆಸಿದ ಸಚಿವರು ಯಾವುದೇ ಕಾರಣಕ್ಕೂ ಹಗಲು ವೇಳೆಯಲ್ಲಿ ಚಿಕಿತ್ಸೆಗೆ ವೈದ್ಯ ಸಿಬ್ಬಂದಿ ಲಭ್ಯವಿರುತ್ತಾರೋ ಹಾಗೆಯೇ ಸಂಜೆ ಹಾಗೂ ರಾತ್ರಿ ಪಾಳಿಯಲ್ಲಿಯೂ ವೈದ್ಯರು ಲಭ್ಯವಿರಬೇಕು. ಯಾವುದೇ ಸಮಯದಲ್ಲಿ ಬಂದರೂ ವೈದ್ಯರ ಸೇವೆಗೆ ಕೊರತೆಯಾಗಬಾರದು. ಈ ಹಿನ್ನೆಲೆಯಲ್ಲಿ ಅವಶ್ಯಕತೆಗೆ ತಕ್ಕಂತೆ ವೇಳಾಪಟ್ಟಿ ಮಾಡುವಂತೆ ಸಚಿವರು ಸೂಚನೆ ನೀಡಿದರು.
ಆಸ್ಪತ್ರೆಯ ವಾರ್ಡ್‍ಗಳಲ್ಲಿ ಇರುವ ಶೌಚಾಲಯಗಳಲ್ಲಿ ಸ್ಪಚ್ಚತೆಯಿಲ್ಲದೆ ಇರುವುದನ್ನು ಕಂಡು ತೀವ್ರ ಅಸಮಧಾನ ವ್ಯಕ್ತಪಡಿಸಿದ ಸಚಿವರು ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಯಲ್ಲಿ ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕು. ಇಲ್ಲವಾದರೆ ಮತ್ತಷ್ಟು ಸಮಸ್ಯೆಗೆ ಒಳಪಡಬೇಕಾಗುತ್ತದೆ. ಹೀಗಾಗಿ ಶೌಚಾಲಯವನ್ನು ಪ್ರತಿದಿನ ಆಗಾಗ್ಗೆ ಸ್ವಚ್ಚಗೊಳಿಸಲು ಕ್ರಮ ವಹಿಸುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಡೆಂಗ್ಯುನಿಂದ ತೀವ್ರವಾಗಿ ಬಳಲುವ ರೋಗಿಗಳಿಗೆ ಪ್ಲೇಟೆಟ್ಸ್‍ಗಳು ಸ್ಥಳೀಯವಾಗಿಯೇ ಶೇಖರಣೆ ಮಾಡಿಕೊಳ್ಳಲು ವಹಿಸಬೇಕಿರುವ ಪ್ರಕ್ರಿಯೆಗೆ ಮುಂದಾಗಬೇಕು. ಜಿಲ್ಲಾ ಆಸ್ಪತ್ರೆಯಲ್ಲಿ ಯಾವುದೇ ಔಷಧಿಗೆ ಕೊರತೆಯಾಗಬಾರದು. ಯಾವುದೇ ಸಬೂಬು ಹೇಳದೆ ರೋಗಿಗಳಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಸ್ಥಳೀಯವಾಗಿಯೇ ನೀಡಬೇಕು. ಒಟ್ಟಾರೆ ವೈದ್ಯಕೀಯ ಚಿಕಿತ್ಸೆ ಸೌಕರ್ಯ ಸಮರ್ಪಕವಾಗಿ ತಲುಪಿಸುವ ಹೊಣೆಗಾರಿಕೆ ಆರೋಗ್ಯ ಇಲಾಖೆ ಅಧಿಕಾರಿಗಳ ಮೇಲಿದೆ ಎಂದು ಸಚಿವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಸಂಜೀವರೆಡ್ಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಚ್. ಪ್ರಸಾದ್, ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಉಸ್ತುವಾರಿ ಸಚಿವರಿಂದ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ: ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಉಸ್ತುವಾರಿ ಸಚಿವರು ಜಿಲ್ಲಾಧಿಕಾರಿಗಳ ಕಚೆರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಜ್ವರ ಸೇರಿದಂತೆ ಇತರೆ ಸಾಂಕ್ರಾಮಿಕ ರೋಗ ಪ್ರಕರಣಗಳು ಹಾಗೂ ಇದರ ನಿವಾರಣೆಗೆ ಕೈಗೊಂಡಿರುವ ಕ್ರಮಗಳ ಪರಿಶೀಲನೆ ನಡೆಸಿದರು.
ತಾಲೂಕುವಾರು ಮಾಹಿತಿ ಪಡೆದ ಉಸ್ತುವಾರಿ ಸಚಿವರು ಎಲ್ಲಿಯೂ ವೈದ್ಯರ ಸೇವೆಗೆ ಕೊರತೆಯಾಗದಂತೆ ಕಟ್ಟುನಿಟ್ಟಾಗಿ ನೋಡಿಕೊಳ್ಳಬೇಕು. ದಾಖಲಾಗುವ ರೋಗಿಗಳು, ಅವರಿಗೆ ನೀಡುತ್ತಿರುವ ಚಿಕಿತ್ಸಾ ಸೌಲಭ್ಯ, ನೆರವು ಲಭ್ಯವಿರುವ ಸಿಬ್ಬಂದಿ ಸೇರಿದಂತೆ ಎಲ್ಲ ಬಗೆಯ ವರದಿಯನ್ನು ಪ್ರತಿನಿತ್ಯ ನೀಡಬೇಕು ಎಂದು ಸಚಿವರು ಸೂಚಿಸಿದರು.
ರೋಗಿಗಳ ರಕ್ತ ಮಾದರಿ ಪರೀಕ್ಷೆಯನ್ನು ಸಕಾಲಕ್ಕೆ ನಡೆಸಿ ಆದಷ್ಟು ಶೀಘ್ರವೇ ವರದಿ ಪಡೆದುಕೊಳ್ಳಬೇಕು. ಯಾವ ಕಾರಣಕ್ಕೂ ದೂರುಗಳು ಬಾರದಂತೆ ಸ್ಪಂದಿಸಬೇಕು. ಎಲ್ಲ ಸಮಯದಲ್ಲಿಯೂ ವೈದ್ಯರು ಲಭ್ಯರಿದ್ದು ಚಿಕಿತ್ಸೆ ನೀಡಬೇಕು. ಆರೋಗ್ಯ ಅಧಿಕಾರಿಗಳೂ ಪ್ರಸ್ತುತ ಸಂದರ್ಭದಲ್ಲಿ ಅತ್ಯಂತ ಕ್ಷಿಪ್ರವಾಗಿ ಕಾರ್ಯೋನ್ಮುಖರಾಗಬೇಕು. ಯಾವುದೇ ಲೋಪವನ್ನು ತಾವು ಸಹಿಸುವುದಿಲ್ಲವೆಂದು ಉಸ್ತುವಾರಿ ಸಚಿವರಾದ ಖಾದರ್ ಕಟ್ಟುನಿಟ್ಟಾಗಿ ಸೂಚನೆ ನೀಡಿದರು.

ಜಿ.ಪಂ. ನ ನಾಲ್ಕು ವಿಶಿಷ್ಟ ಕಾರ್ಯಕ್ರಮಗಳಿಗೆ ಚಾಲನೆ

ಚಾಮರಾಜನಗರ, ಜು. 10 :- ಆರೋಗ್ಯ, ಶಿಕ್ಷಣ, ಕೃಷಿ ಹಾಗೂ ಉದ್ಯೋಗ ಖಾತರಿ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವ ಉದ್ದೇಶದಿಂದ ರೂಪಿಸಿರುವ 4 ವಿಶಿಷ್ಟ ಯೋಜನೆಗಳಿಗೆ ಭಾನುವಾರ ವಿದ್ಯುಕ್ತವಾಗಿ ಚಾಲನೆ ದೊರೆಯಿತು.
ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶದ ಸುಧಾರಣೆ ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ರೂಪಿಸಲಾಗಿರುವ ಸಿಸ್ಟಮ್ಯಾಟಿಕ್ ಟೀಚಿಂಗ್ ಎನ್‍ಹಾನ್ಸ್‍ಮೆಂಟ್ ಪ್ರೋಗ್ರಾಮ್ (ಸ್ಟೆಪ್) ಗುಣಮಟ್ಟ ಶಿಕ್ಷಣದ ಸಾಧನೆಯೆಡೆಗೆ ಒಂದು ಹೆಜ್ಜೆ, ಮಹಿಳಾ ಉದ್ಯೋಗ ಖಾತರಿ ಅಭಿಯಾನ, ಗರ್ಭಿಣೀಯರು ಮತ್ತು ಮಕ್ಕಳ ಆರೋಗ್ಯ ವೃದ್ಧಿಗಾಗಿ ರಕ್ತ ಹೀನತೆ ಹೋಗಲಾಡಿಸುವ ನಿಟ್ಟಿನಲ್ಲಿ ಅನುಸರಿಸಬೇಕಿರುವ ಕ್ರಮಬದ್ಧ ವಿಧಾನಗಳ ಸತ್ವ, ಮಣ್ಣು ಮತ್ತು ಮಳೆ ನೀರು ಸಂರಕ್ಷಣೆಗಾಗಿ ಹಮ್ಮಿಕೊಳ್ಳಲಾಗುತ್ತಿರುವ ಬದು ಸಂಜೀವಿನಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಈ ನಾಲ್ಕೂ ವಿಶಿಷ್ಟ ಯೋಜನೆಗಳ ಸಮಾರಂಭವನ್ನು  ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಉದ್ಘಾಟಿಸಿದರು. ಯೋಜನೆ ಕುರಿತ ಮಾಹಿತಿ ಇರುವ ಕಿರು ಹೊತ್ತಿಗೆಯನ್ನು ಆಹಾರ ನಾಗರಿಕ ಪೂರೈಕೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು ಟಿ ಖಾದರ್ ಅವರು ಬಿಡುಗಡೆ ಮಾಡಿದರು.
ಇದೇವೇಳೆ ಮಾತನಾಡಿದ ಉಸ್ತುವಾರಿ ಸಚಿವರಾದ ಯು ಟಿ ಖಾದರ್ ಅವರು ಜಿಲ್ಲೆಯಲ್ಲಿ ಶಿಕ್ಷಣ ಆರೋಗ್ಯ ಕೃಷಿ ಹಾಗೂ ಮಹಿಳಾ ಉದ್ಯೋಗ ಖಾತರಿಗೆ ರೂಪಿಸಲಾಗಿರುವ ಯೋಜನೆ ಹೆಮ್ಮೆಯ ವಿಷಯವಾಗಿದೆ. ಈ ಕಾರ್ಯಕ್ರಮಗಳು ಯಶಸ್ವಿಯಾಗಬೇಕೆಂದು ಹಾರೈಸಿದರು.
ಆರೋಗ್ಯ ಪೂರಕವಾದ ಸೊಪ್ಪು, ತರಕಾರಿ, ಹಣ್ಣುಹಂಪಲುಗಳನ್ನು ಸೇವನೆ ಮಾಡುವುದರಿಂದ ಆರೋಗ್ಯ ಸುಧಾರಿಸಲಿದೆ. ಕಬ್ಬಿಣಾಂಶದ ಕೊರತೆಯೂ ನೀಗಲಿದೆ ಎಂದರು.

ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಮಾತನಾಡಿ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿರುವ ಯೋಜನೆಗಳ ಅನುಷ್ಠಾನ ಸರಿಯಾನ ದಿಕ್ಕಿನಲ್ಲಿ ನಡೆದರೆ ಉದ್ದೇಶ ಸಫಲವಾಗುತ್ತದೆ. ಹೀಗಾಗಿ ಅಧಿಕಾರಿಗಳು ಹೊಣೆಗಾರಿಕೆಯಿಂದ ಕಾರ್ಯೋನ್ಮುಖರಾಗಬೇಕೆಂದರು.
ಪ್ರಭಾರ ಜಿಲ್ಲಾಧಿಕಾರಿ ಹಾಗೂ ಯೋಜನೆಯ ರೂವಾರಿಗಳಾದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಕೆ. ಹರೀಶ್ ಕುಮಾರ್ ಮಾತನಾಡಿ ಅಭಿವೃದ್ಧಿಯ ಆಶಯದೊಂದಿಗೆ 4 ವಿಶಿಷ್ಟ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಜಿಲ್ಲೆಯ ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಸಹಕರಿಸಿದ್ದಾರೆ. ಯೋಜನೆ ಅನುಷ್ಠಾನ ಹಂತದಲ್ಲಿಯೂ ಎಲ್ಲರ ನೆರವು ಅಗತ್ಯವಾಗಿದೆ ಎಂದರು.
ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಶಾಸಕರಾದ ಆರ್. ನರೇಂದ್ರ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ. ಸದಾಶಿವಮೂರ್ತಿ, ಬಿ ಕೆ ಬೊಮ್ಮಯ್ಯ, ಕೆರೆಹಳ್ಳಿ ನವೀನ್, ಕಾಡಾ ಅಧ್ಯಕ್ಷರಾದ ನಂಜಪ್ಪ, ಚೂಡಾ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ತಾ.ಪಂ. ಅಧ್ಯಕ್ಷರಾದ ಎಚ್.ವಿ. ಚಂದ್ರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.





No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು