ಪಲ್ಲಟ ನಾಟಕ ಪ್ರದರ್ಶನ ಉದ್ಘಾಟನಾ ಸಮಾರಂಭ; ಎಂ. ರಾಮಚಂದ್ರ ಅಭಿಪ್ರಾಯ
ಚಾಮರಾಜನಗರ: ಸಿನಿಮಾ, ಟಿ.ವಿ. ಧಾರಾವಾಹಿಗಳ ಅಬ್ಬರದಲ್ಲಿ ನಾಟಕ ಕಲೆ ಕ್ಷೀಣಿಸಬಾರದು. ನಿರಂತರವಾಗಿ ರಂಗಚಟುವಟಿಕೆಗಳು ನಡೆಯಬೇಕು. ರಂಗಭೂಮಿ ಜೀವಂತವಾಗಿದ್ದಾಗ ಮಾತ್ರ ಇತರ ಪ್ರದರ್ಶಕ ಕಲೆಗಳಿಗೂ ಬೆಲೆ ಬರುತ್ತದೆ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಎಂ. ರಾಮಚಂದ್ರ ಅಭಿಪ್ರಾಯಪಟ್ಟರು.
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಶಾಂತಲಾ ಕಲಾವಿದರು ತಂಡ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆದ ಪಲ್ಲಟ ನಾಟಕ ಪ್ರದರ್ಶನ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚಾಮರಾಜನಗರ ಜಿಲ್ಲೆಯ ಸಾಂಸ್ಕøತಿಕ ಕಲೆಗಳ ತವರೂರು. ಗೊರವರ ಕುಣಿತ, ಕಂಸಾಳೆ, ಸೋಲಿಗರ ಕುಣಿತ, ನೀಲಗಾರರು, ಮಹದೇಶ್ವರ, ಮಂಟೇಸ್ವಾಮಿ ಕಾವ್ಯದಿಂದಾಗಿ ಸಮೃದ್ಧ ಜನಪದ ಕಲೆಗಳ ಕಣಜವನ್ನೇ ಜಿಲ್ಲೆ ಹೊಂದಿದೆ. ಇಂದಿಗೂ ಅನೇಕ ಹಳ್ಳಿಗಳಲ್ಲಿ ಜಾತ್ರೆ ಸಂದರ್ಭದಲ್ಲಿ ಕುರುಕ್ಷೇತ್ರ, ದಾನಶೂರಕರ್ಣ ನಾಟಕಗಳನ್ನು ಪ್ರದರ್ಶಿಸಲಾಗುತ್ತಿದೆ. ಹಾಗೆಯೇ ಚಾಮರಾಜನಗರ ಪಟ್ಟಣದಲ್ಲಿ ಶಾಂತಲಾ ಕಲಾವಿದರು ತಂಡ ನೂತನ ಸಾಮಾಜಿಕ ರಂಗ ಪ್ರಯೋಗಗಳನ್ನು ನಡೆಸುತ್ತಿದೆ ಎಂದು ಶ್ಲಾಘಿಸಿದರು.
ಸಿನಿಮಾ, ಟಿವಿ ಧಾರಾವಾಹಿಗಳಿಂದಾಗಿ ನಾಟಕಗಳನ್ನು ನೋಡುವುದು ಕಡಿಮೆಯಾಗುತ್ತಿದೆ. ಮನೆಗಳಲ್ಲಿ ಗೃಹಿಣಿಯರು ಟಿವಿಯ ಮುಂದೆ ಧಾರಾವಾಹಿಗಳನ್ನು ನೋಡುತ್ತಾ ಕುಳಿತಿರುತ್ತಾರೆ. ಸಿನಿಮಾ, ಧಾರಾವಾಹಿಗಳ ಮೂಲವಾದ ನಾಟಕ ಕಲೆಗೂ ಪ್ರೋತ್ಸಾಹ ನೀಡಬೇಕು ಎಂದ ರಾಮಚಂದ್ರ, ಶಾಂತಲಾ ಕಲಾವಿದರು ತಂಡಕ್ಕೆ ಸರ್ಕಾರದಿಂದ ದೊರಕಬಹುದಾದ ನೆರವು ನೀಡುವುದಾಗಿ ಭರವಸೆ ನೀಡಿದರು.
ಬಿ. ವಿ. ಭಾರತಿ ರಚಿಸಿದ, ಚಿತ್ರಾ ವಿ ನಿರ್ದೇಶನದ ಪಲ್ಲಟ ನಾಟಕದ ಉಚಿತ ಪ್ರದರ್ಶನ ನಡೆದು ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ಪ್ರಸನ್ನ ಸಾಗರ್ ವಿನ್ಯಾಸ, ಸಂಗೀತ ನಿರ್ವಹಣೆ ಪ್ರಜ್ವಲ್, ವಿ. ಶ್ರೀನಿವಾಸ್ ಬೆಳಕು ಸಂಯೋಜಿಸಿದ್ದರು. ಬಿ.ಎಸ್. ವಿನಯ್, ಚಿತ್ರಾ, ಚೇತನ್, ದಾಕ್ಷಾಯಿಣಿ, ಅಕ್ಷತಾಜೈನ್, ಪ್ರಣವ್, ನಾಗೇಶು, ಸುರೇಶ್ ಪಾತ್ರ ವಹಿಸಿದ್ದರು.
No comments:
Post a Comment