ಉಚಿತ ಅನಿಲಭಾಗ್ಯ ಪುನರ್ ಬೆಳಕು ಯೋಜನೆ ಬಳಕೆಗೆ ಮನವಿ
ಚಾಮರಾಜನಗರ, ಮೇ. 10:- ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯಡಿ ಅನಿಲಭಾಗ್ಯ ಮತ್ತು ಪುನರ್ ಬೆಳಕು ಯೋಜನೆ ಪಡೆಯಲು ಮುಂದಾಗುವಂತೆ ಜಿಲ್ಲಾಧಿಕಾರಿ ಬಿ. ರಾಮು ಅವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಉಜ್ವಲ ಯೋಜನೆ ವ್ಯಾಪ್ತಿಗೆ ಒಳಪಡದೇ ಇರುವ ಕುಟುಂಬಗಳು ರಾಜ್ಯ ಸರ್ಕಾರದ ಅನಿಲಭಾಗ್ಯ ಯೋಜನೆಯಡಿ ಉಚಿತ ಅನಿಲ ಸಂಪರ್ಕ ಪಡೆಯಬಹುದು. ಗ್ರಾಮಾಂತರ ಪ್ರದೇಶದ ಕೆಲಕುಟುಂಬಗಳು ಅನಿಲಸಂಪರ್ಕ ಹೊಂದಿದ್ದರೂ ಬೆಳಕಿಗಾಗಿ ಸಹಾಯಧನಯುಕ್ತ 1 ಲೀ. ಸೀಮೆಎಣ್ಣೆಯನ್ನು ಪಡೆಯುತ್ತಿವೆ. ಇದರ ಬದಲಾಗಿ ರೀಚಾರ್ಜಬಲ್ ಎಲ್‍ಇಡಿ ಬಲ್ಬ್‍ಗಳನ್ನು ಪುನರ್ ಬೆಳಕು ಯೋಜನೆಯಡಿ ಪಡೆಯಬಹುದಾಗಿದೆ.ಆಸಕ್ತರು ಆಹಾರ ಇಲಾಖೆಯು ಸಿದ್ದಪಡಿಸಿದ ತಂತ್ರಾಂಶದಲ್ಲಿ ಇಲಾಖಾಯ ಸೇವಾ ಕೇಂದ್ರಗಳಾದ ಗ್ರಾಮ ಪಂಚಾಯಿತಿ ಖಾಸಗಿ ಫ್ರಾಂಚೈಸಿ, ಜನಸ್ನೇಹಿ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬೇಕು. ನಂತರ ಉಜ್ವಲ ಯೋಜನೆಯಡಿ ಅನಿಲ ಸಂಪರ್ಕ ಪಡೆದುಕೊಳ್ಳಲು ಅನುವು ಮಾಡಿಕೊಡಲಾಗುತ್ತದೆ. ಉಳಿದ ಅರ್ಹ ಕುಟುಂಬಗಳು ಆದ್ಯತಾ ಅಥವಾ ಅಂತ್ಯೋದಯ ಪಡಿತರ ಚೀಟಿ ಹೊಂದಿದ್ದಲ್ಲಿ ಅನಿಲಭಾಗ್ಯ ಯೋಜನೆಯಡಿ ಅನಿಲಸಂಪರ್ಕ ಪಡೆದುಕೊಳ್ಳಲು ಸಹಾಯಧನ ಪಾವತಿಸಲಾಗುತ್ತದೆ.
ಫಲಾನುಭವಿ ಮೊದಲು ಹಣ ಪಾವತಿಸಿ ಅನಿಲಸಂಪರ್ಕ ಪಡೆದುಕೊಂಡ ನಂತರ ಸಹಾಯಧನವನ್ನು ಅವರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ. ಉಜ್ವಲ ಯೋಜನೆಯಡಿ ಅನಿಲಸಂಪರ್ಕಕ್ಕೆ ವಿಶೇಷ ದರವಾಗಿ 1600 ರೂ. ಇದ್ದು ಇದರ ಬದಲಾಗಿ ಸಾಮಾನ್ಯ ಅನಿಲ ಸಂಪರ್ಕಕ್ಕೆ 1920 ರೂ. ಪಾವತಿಸಲಾಗುವುದು.
ಗ್ರಾಮೀಣ ಪ್ರದೇಶದ ಅಧ್ಯತಾ ಅಥವಾ ಅಂತ್ಯೋದಯ ಅನಿಲಪಡಿತರ ಚೀಟಿದಾರರು ಸಹಾಯಧನಯುಕ್ತ 1 ಲೀ ಸೀಮೆಎಣ್ಣೆಯನ್ನು ಪಡೆಯಲು ತಮ್ಮ ಇಚ್ಚೆಯನ್ನು ಗ್ರಾಮ ಪಂಚಾಯಿತಿ ತಂತ್ರಾಂಶದಲ್ಲಿ ದಾಖಲಿಸಬೇಕು. ಇಂಥಹ ಕುಟುಂಬಗಳು ಸಹಾಯಧನಯುಕ್ತ ಸೀಮೆಎಣ್ಣೆಯನ್ನು ಆದ್ಯರ್ಪಿಸಿದಲ್ಲಿ 300 ರೂ. ಮೌಲ್ಯದ ರೀಚಾರ್ಜಬಲ್ ಎಲ್‍ಇಡಿ ಬಲ್ಪನ್ನು ಉಚಿತವಾಗಿ ನೀಡಲಾಗುತ್ತದೆ. ಇಚ್ಚೆಯುಳ್ಳ ಕುಟುಂಬಗಳು ಇಲಾಖೆಯ ಸೇವಾಕೇಂದ್ರ ಸಂಪರ್ಕಿಸಿ ದಾಖಲಿಸಬೇಕು.
ಅನಿಲಭಾಗ್ಯ ಹಾಗೂ ಪುನರ್ ಬೆಳಕು ಯೋಜನೆ ಪ್ರಯೋಜನ ಪಡೆದು ಜಿಲ್ಲೆಯನ್ನು ಸೀಮೆಎಣ್ಣೆ ಮುಕ್ತವನ್ನಾಗಿಸಲು ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಬಿ. ರಾಮು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಉದ್ಯೋಗ ಕೌಶಲ ತರಬೇತಿಗೆ ಯುವಜನರ ಮಾಹಿತಿ ಕ್ರೋಢೀಕರಣ : ಅಗತ್ಯ ಸಿದ್ಧತೆಗೆ ಡಿಸಿ ಸೂಚನೆ
ಚಾಮರಾಜನಗರ, ಮೇ. 10 :- ಉದ್ಯೋಗ ಮಾರುಕಟ್ಟೆಗೆ ಅಗತ್ಯವಿರುವ ನೈಪುಣ್ಯತೆ ತರಬೇತಿ ಪಡೆಯಲು ಇಚ್ಚಿಸುವ ಯುವಜನರಿಗೆ ಹೆಸರು ನೊಂದಾಯಿಸಿ ಕೌಶಲ್ಯ ನೈಪುಣ್ಯತೆ ವೃದ್ಧಿಗೊಳಿಸಲು ವಿನ್ಯಾಸಗೊಳಿಸಲಾಗಿರುವ ವೆಬ್ ಪೋರ್ಟಲ್ ಚಾಲನೆ ಕಾರ್ಯಕ್ರಮವು ಮೇ 15ರಂದು ಜಿಲ್ಲಾ ಮಟ್ಟದಲ್ಲಿ ನಡೆಯಲಿದ್ದು ಇದಕ್ಕಾಗಿ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಬಿ. ರಾಮು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ವೆಬ್ ಪೋರ್ಟಲ್ ಪ್ರಾರಂಭ ಸಂಬಂಧ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
2017-18ನೇ ಸಾಲಿನ ಆಯವ್ಯಯದಲ್ಲಿ ಮುಖ್ಯಮಂತ್ರಿಯವರ ಕೌಶಲ್ಯ ಅಭಿವೃದ್ಧಿ ಕರ್ನಾಟಕ ಕಾರ್ಯಕ್ರಮದಡಿ ಬೇಡಿಕೆ ಸಮೀಕ್ಷೆಯನ್ನು ಆಧರಿಸಿ ವಿವಿಧ ಯೋಜನೆಗಳ ಅಡಿಯಲ್ಲಿ 5 ಲಕ್ಷ ಯುವಜನರಿಗೆ ತರಬೇತಿ ನೀಡಲು ಘೋಷಿಸಲಾಗಿದೆ. ಇದನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ತರಬೇತಿ ಕಾರ್ಯಕ್ರಮವನ್ನು ರೂಪಿಸಲಾಗುತ್ತದೆ. ಅಭ್ಯರ್ಥಿ, ತರಬೇತಿ ಸಂಸ್ಥೆ ಹಾಗೂ ಉದ್ಯೋಗದಾತ ಸಂಸ್ಥೆಗಳ ಮಾಹಿತಿ ಕ್ರೋಢೀಕರಿಸಿ ತರಬೇತಿ ಪಡೆಯಲು ಇಚ್ಚಿಸುವ ಯುವಜನರ ಹೆಸರು ನೊಂದಾಯಿಸಿ ಕೌಶಲ್ಯ ನೈಪುಣ್ಯತೆ ಒದಗಿಸುವ ಅವಕಾಶಗಳು ವೆಬ್ ಪೋರ್ಟಲ್‍ನಿಂದ ಲಭ್ಯವಾಗಲಿದೆ ಎಂದರು.
ಬಳಕೆದಾರ ಸ್ನೇಹಿ ಮೊಬೈಲ್ ಆಪ್ ಅನ್ನು ಸಹ ಅಭಿವೃದ್ಧಿಗೊಳಿಸಲಾಗಿದ್ದು ಬಿಡುಗಡೆ ಮಾಡಲಾಗುತ್ತದೆ. ವೆಬ್ ಪೋರ್ಟಲ್ ಮತ್ತು ಮೊಬೈಲ್ ಆಪ್ ಸಹಾಯದಿಂದ ನೈಪುಣ್ಯ ಕೌಶಲ್ಯ ತರಬೇತಿ ಮಾಹಿತಿಗಳನ್ನು ಪಡೆಯಬಹುದಾಗಿದೆ. ಮೇ 15ರಂದು ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ವೆಬ್ ಪೋರ್ಟಲ್ ಉದ್ಘಾಟನೆ ನೆರವೇರಿಸಿ ಅರ್ಜಿ ಸಂಗ್ರಹಣೆ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮೇ 15ರಿಂದಲೇ ಉದ್ಯೋಗಕ್ಕೆ ಅವಶ್ಯವಾದ ನೈಪುಣ್ಯತೆಗಳಲ್ಲಿ ತರಬೇತಿ ಪಡೆಯಲು ಇಚ್ಚಿಸುವ ಯುವಜನರ ಹೆಸರನ್ನು ನೊಂದಾಯಿಸಿಕೊಳ್ಳಲಾಗುತ್ತದೆ. ಇದಕ್ಕಾಗಿ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಅಗತ್ಯವಿರುವ ಸ್ಥಳ ಗುರುತಿಸಿ ಸರ್ವಸಿದ್ಧತೆ ಕಾರ್ಯಗಳನ್ನು ಕೈಗೊಳ್ಳಬೇಕು. ಪ್ರತಿ ಇಲಾಖೆಯು ಯುವಜನರಿಗೆ ಮಾಹಿತಿ ನೀಡಿ ಹೆಸರು ನೊಂದಾಯಿಸಿ ಉದ್ಯೋಗ ಪಡೆಯಲು ಅವಕಾಶವಾಗುವಂತೆ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ರಾಮು ಸೂಚಿಸಿದರು.
ಜಿಲ್ಲಾ ಹಾಗೂ ತಾಲೂಕು ಕೇಂದ್ರದ ನಿರ್ಧಿಷ್ಟ ಸ್ಥಳದÀಲ್ಲಿ ಕಂಪ್ಯೂಟರ್ ಹಾಗೂ ಇಂಟರ್‍ನೆಟ್ ವ್ಯವಸ್ಥೆ ಅಳವಡಿಸಬೇಕು. ಹೆಚ್ಚು ಯುವಜನರು ಕೌಶಲ್ಯ ತರಬೇತಿ ಪಡೆಯಲು ನೆರವಾಗುವಂತೆ ಉತ್ತೇಜಿಸಬೇಕು. ನೋಂದಣಿ ಕೇಂದ್ರಗಳಲ್ಲಿ ಯಾವುದೇ ಗೊಂದಲಕ್ಕೆ ಅವಕಾಶವಾಗದಂತೆ ಬೇಕಿರುವ ಪೂರ್ವಸಿದ್ಧತೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮÁರ್ ಮಾತನಾಡಿ ಅಧಿಕಾರಿಗಳು ಅವರ ಇಲಾಖೆ ವ್ಯಾಪ್ತಿಗೆ ಬರುವ ಕಾರ್ಯಕ್ರಮದ ಜತೆಯಲ್ಲಿಯೇ ಕೌಶಲ್ಯ ತರಬೇತಿ ಅಗತ್ಯವಿರುವ ಯುವ ಅಭ್ಯರ್ಥಿಗಳನ್ನು ಗುರುತಿಸಿ ಮಾರ್ಗದರ್ಶನ ಮಾಡಬೇಕು. ನಿಗದಿತ ಅವಧಿಯೊಳಗೆ ನೊಂದಣಿ, ಅಭ್ಯರ್ಥಿಗಳ ಬೇಡಿಕೆಗೆ ತಕ್ಕಂತೆ ನೀಡಬೇಕಿರುವ ತರಬೇತಿ ಇತರೆ ಮಾಹಿತಿಯನ್ನು ಕ್ರೋಢೀಕರಿಸಬೇಕಿದೆ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಸರಸ್ವತಿ, ಆಹಾರ ಇಲಾಖೆಯ ಉಪನಿರ್ದೇಶಕರಾದ ಆರ್. ರಾಚಪ್ಪ, ಉಪ ಕೃಷಿ ನಿರ್ದೇಶಕರಾದ ಯೋಗೇಶ್, ಜಿಲ್ಲಾ ಉದ್ಯೋಗಾಧಿಕಾರಿ ಸಿ.ಎಂ. ಉಮಾ, ಜಿಲ್ಲಾ ಸರ್ಜನ್ ಡಾ. ರಘುರಾಂ, ತಹಸೀಲ್ದಾರ್‍ರವರಾದ ಕೆ. ಪುರಂಧರ, ಚಂದ್ರಮೌಳಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಪ್ಯಾಕೇಜ್ ಕುಡಿಯುವ ನೀರು ತಯಾರಿಕೆ ಮಾರಾಟಕ್ಕೆ ಪರವಾನಗಿ ಕಡ್ಡಾಯ
ಚಾಮರಾಜನಗರ, ಮೇ. 10 :- ಜಿಲ್ಲೆಯಲ್ಲಿ ಕುಡಿಯುವ ನೀರು ತಯಾರಿಕಾ ಘಟಕಗಳು ಕಡ್ಡಾಯವಾಗಿ ಪರವಾನಗಿ ಪಡೆದುಕೊಳ್ಳುವಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಸೂಚನೆ ನೀಡಿದೆ.ಪ್ಯಾಕೇಜ್ ಕುಡಿಯುವ ನೀರು ಮತ್ತು ಆಹಾರ ತಯಾರಿಸಲು ಉಪಯೋಗಿಸುವ ನೀರನ್ನು ಆಹಾರ ಎಂದು ವ್ಯಾಖ್ಯಾನಿಸಲಾಗಿದೆ. ಹೀಗಾಗಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ ನಿಬಂಧನೆಗೆ ಕುಡಿಯುವ ನೀರು ಸಹ ಒಳಪಡಲಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ 2006ರನ್ವಯ ಪ್ಯಾಕೇಜ್ ಕುಡಿಯುವ ನೀರು ತಯಾರಿಕೆ ಮಾರಾಟಕ್ಕೆ ಪ್ರಮಾಣಪತ್ರ ಪಡೆಯುವುದು ಕಡ್ಡಾಯವಾಗಿದೆ. ಪರವಾನಗಿ ಇಲ್ಲದೆ ತಯಾರಿಕೆ ಮಾರಾಟ ಮಾಡಿದಲ್ಲಿ 5 ಲಕ್ಷ ರೂವರೆಗೆ ದಂಡ ಹಾಗೂ 6 ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಲು ಕಾಯಿದೆಯಡಿ ಅವಕಾಶವಿದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಂಕಿತಾಧಿಕಾರಿ ತಿಳಿಸಿದ್ದಾರೆ.
ಯುವತಿ ಕಾಣೆ
ಚಾಮರಾಜನಗರ, ಮೇ. 10 :- ನಗರದ ಗಾಳಿಪುರ ಬಡಾವಣೆಯಿಂದ ಯುವತಿಯೊಬ್ಬಳು ಕಾಣೆಯಾಗಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಚಾಮರಾಜನಗರ ತಾಲೂಕಿನ ನಾಗವಳ್ಳಿ ಗ್ರಾಮದ ರಂಗಸ್ವಾಮಿ ಎಂಬುವರ ಮಗಳು ಅಮೃತ ನಗರದ ಗಾಳಿಪುರ ಬಡಾವಣೆಯಲ್ಲಿರುವ ಚಿಕ್ಕಮ್ಮನ ಮನೆಗೆ ಬಂದಿದ್ದ ವೇಳೆ ಕಾಣೆಯಾಗಿರುವ ಬಗ್ಗೆ ದೂರು ನೀಡಲಾಗಿದೆ.
19 ವರ್ಷ ವಯಸ್ಸಿನ ಅಮೃತ ದುಂಡುಮುಖ, ಗೋದಿ ಮೈಬಣ್ಣ ಹೊಂದಿದ್ದು 5 ಅಡಿ ಎತ್ತರವಿದ್ದಾರೆ. ಹಸಿರು ಬಣ್ಣದ ಚೂಡಿದಾರ್ ಧರಿಸಿದ್ದು ಕನ್ನಡ ಮತ್ತು ಮಲೆಯಾಳ ಭಾಷೆ ಮಾತನಾಡಬಲ್ಲರು. ಸದರಿ ಯುವತಿಯ ಪತ್ತೆಗೆ ಮಾಹಿತಿಯನ್ನು ನೀಡುವಂತೆ ನಗರದ ಪಟ್ಟಣ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಪ್ರಕಟಣೆಯಲ್ಲಿ ಕೋರಿದ್ದಾರÉ.
ಸಹಕಾರ ಸಂಘ ರದ್ದು : ಪುನಶ್ಚೇತನಕ್ಕೆ ಅವಕಾಶ
ಚಾಮರಾಜನಗರ, ಮೇ. 10:- ಚಾಮರಾಜನಗರ ತಾಲೂಕಿನ ಮೂಕನಪಾಳ್ಯ ಹಾಗೂ ಹಂಚಿತಾಳಪುರದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳ ನೋಂದಣಿ ರದ್ದುಗೊಳಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಈ ಸಂಘಗಳನ್ನು ಪುನಶ್ಚೇತನಗೊಳಿಸಿ ಮುಂದುವರೆಸಿಕೊಂಡು ಹೋಗುವ ಉದ್ದೇಶವಿದ್ದಲ್ಲಿ ಸದಸ್ಯರು ಅಥವಾ ನಾಗರಿಕರು 15 ದಿನಗಳೊಳಗೆ ನಗರದ ಸಹಕಾರ ಸಂಘಗಳ ನಿಬಂಧಕರ ಕಚೇರಿಯಲ್ಲಿರುವ ಸಮಾಪನ ಅಧಿಕಾರಿಂiÀiವರನ್ನು ಸಂಪರ್ಕಿಸಬಹುದÁಗಿದೆ.ನಿಗದಿತ ಅವಧಿಯೊಳಗೆ ಸಂಪರ್ಕಿಸದಿದ್ದಲ್ಲಿ ಯಾವುದೇ ಆಕ್ಷೇಪಣೆ ಇಲ್ಲವೆಂದು ಪರಿಗಣಿಸಿ ಸಂಘದ ನೋಂದಣಿ ರದ್ದುಮಾಡಲಾಗುವುದೆಂದು ಸಮಾಪನ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಳಂದೂರು : ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಮೇ. 10 :- ಯಳಂದೂರು ತಾಲೂಕಿನ ವಿವಿಧೆಡೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಿರ್ವಹಣೆಯಲ್ಲಿರುವ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ಬಾಲಕ ಬಾಲಕಿಯರ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.5 ರಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ಮೆಟ್ರಿಕ್ ಪೂರ್ವ ಹಾಗೂ ಯಳಂದೂರು ಪಟ್ಟಣದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ಆಯಾ ವಿದ್ಯಾರ್ಥಿನಿಲಯದ ಮೇಲ್ವಿಚಾರಕರು ಅಥವಾ ಯಳಂದೂರು ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿಗಳ ಕಚೇರಿಯಲ್ಲಿ ಪಡೆಯಬಹುದು.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂ. 08226-240221 ಸಂಪರ್ಕಿಸುವಂತೆ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ತಿಳಿಸಿದ್ದಾರೆ.
ಸರ್ವಜನಾಂಗದ ಸಮಾನತೆಗಾಗಿ ಶ್ರಮಿದವರು ಬಿ.ಆರ್.ಅಂಬೇಡ್ಕರ್-ಸೋಮಶೇಖರ ಬಿಸಲ್ವಾಡಿ
ಚಾಮರಾಜನಗರ ಮೇ.10-ಡಾ.ಬಿ.ಆರ್.ಅಂಬೇಡ್ಕರ್ ರವರು ಕೇವಲ ಒಂದು ವರ್ಗದ ನಾಯಕರಲ್ಲ ಅವರು ಸರ್ವ ಜನಾಂಗದ ಶ್ರೇಯೋಭಿವೃದ್ಧಿಗಾಗಿ ಸಮಾನತೆಗಾಗಿ ಅವಿರಥವಾಗಿ ಶ್ರಮಿಸಿದ ಪುಣ್ಯಪುರುಷರಾಗಿದ್ದಾರೆ ಎಂದು ಸಾಹಿತಿ ಸೋಮಶೇಖರ ಬಿಸಲ್ವಾಡಿ ತಿಳಿಸಿದರು.
ನಗರದ ಜಿಲ್ಲಾ ಗೃಹರಕ್ಷಕದಳ ಕಛೇರಿ ಆವರಣದಲ್ಲಿ ತಾಲ್ಲೂಕು ಗೃಹರಕ್ಷಕ ದಳ ಅಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಕಾರರಾಗಿ ಮಾತನಾಡುತ್ತ ಅಂಬೇಡ್ಕರ್ ರವರು ಜ್ಞಾನ,ಶೀಲ,ಸ್ವಾಭಿಮಾನ ಎಂಬ ಮೂರು ದ್ಯೇಯಗಳನ್ನಿರಿಸಿ ಕೊಂಡು ಬದಿಕಿನುದ್ದಕ್ಕೂ ಚಾತುರ್ವರ್ಣವನ್ನು ವಿರೋಧಿಸುತ್ತಾ ಮೌಡ್ಯಗಳನ್ನು ಧಿಕ್ಕರಿಸಿದರು. ದಿನಂಪ್ರತಿ 18 ಘಂಟೆಗಳಕಾಲ ಅಧ್ಯಯನ ಶೀಲರಾಗಿ ಮಾಧರಿ ಸಂವಿಧಾನವನ್ನು ಬರೆದುಕೊಟ್ಟರು.ಪ್ರಯತ್ನ ಮತ್ತು ಶ್ರಮದ ಮೇಲೆ ನಂಬಿಕೆಯಿಡಿ, ಭವಿಷ್ಯದಮೇಲೆ ನಂಬಿಕೆ ಇಡಬೇಡಿ ಹಕ್ಕುಗಳನ್ನು ಪ್ರತಿಪದಿಸಲು ಸಿಕ್ಷಣದ ಜ್ಞಾನ ಅತ್ಯಾವಶ್ಯಕ ಎಂದು ಅಂಬೇಡ್ಕರ್ ಹೇಳಿದ್ದಾರೆ ಮೀಸಲಾತಿ ಕೇವಲ ದಲಿತರಿಗೆ ಮಾತ್ರವಲ್ಲ ಎಲ್ಲ ವರ್ಗಕ್ಕು ಸಲ್ಲುವಂತೆ ಅವಕಾಶ ಕಲ್ಪಿಸಿದ್ದಾರೆ ಅವರ ಮಾಧರಿ ಬದುಕು ನಮ್ಮೆಲ್ಲರಿಗೂ ಅದರ್ಶವಾಗಬೇಕು ಎಂದು ತಿಳಿಸಿದರು.ಕಾರ್ಯಕ್ರಮವನ್ನು ಜ್ಯೋತಿಬೆಳಗಿಸಿ ಮಾತನಾಡಿದ ಆರಕ್ಷಕ ಉಪಧೀಕ್ಷರಾದ ಕೆ.ಇ. ಗಂಗಾಧರಸ್ವಾಮಿ ಜಗತ್ತಿನಲ್ಲಿ ಸರ್ವಶ್ರೇಷ್ಠ ಎನಿಸಿದ ಸಂವಿಧಾನವನ್ನು ಬರೆದುಕೊಟ್ಟು ಅಂಬೇಡ್ಕರ್ ವಿಶ್ವಜ್ಞಾನಿಯಾಗಿದ್ದಾರೆ ಸಂವಿಧಾನ ಬದ್ದ 2000ಕ್ಕೂ ಹೆಚ್ಚು ಕಾನೂನುಗಳಿವೆ ಆ ಕಾನೂನಡಿಯಲ್ಲಿ ಪ್ರತಿಯೊಬ್ಬರೂ ನೆಮ್ಮದಿಯ ಬದುಕು ಸಾಗಿಸಲು ಸಾಧ್ಯವಾಗಿದೆ ಎಂದಿ ಹೇಳಿದರು.
ಡಾ. ಬಿ.ಆರ್.ಆಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಚಾಚನೆಮಾಡಿದ ಜಿಲ್ಲಾ ಕಾರಗೃಹದ ಅಧಿಕಾರಿ ಎಂ.ಸುಂದರ್ ಮಾತನಾಡಿ ಅನ್ಯದೇಶದಲ್ಲಿ ಅಂಬೇಡ್ಕರ್ ಅವರನ್ನು ಅನನ್ಯವಾಗಿ ಗೌರಸುತ್ತಾರೆ ಅವರು ಬರೆದಿರುವ ಸಂವಿಧಾನದ ಕಾನೂನುಗಳನ್ನು ಒಪ್ಪಿಕೊಂಡಿದ್ದಾರೆ ಇಂತಹ ಮಹಾ ಪುರುಷರ ಜಯಂತಿಗಳನ್ನು ಆಚರಿಸುವುದರಿಂದ ಅವರ ತತ್ವ ಸಿದ್ದಾಂತಗಳನ್ನು ಮೈಗೂಡಿಸಿಕೊಳ್ಳಬಹುದು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಮಾಂಡೆಂಟ್ ಬಿ.ಎಸ್.ಬಸವರಾಜು ವಹಿಸಿದ್ದರು. ಬೋಧಕರಾದ ಎಂ.ರಾಮಣ್ಣ, ಪ್ರ.ದ.ಸ.ಸಂತೋಶ್‍ಕುಮಾರ್ ಉಪಸ್ಥಿತರಿದ್ದರು.
No comments:
Post a Comment