Wednesday, 17 May 2017

16-05-2017 ಜೈನ ಧರ್ಮದಲ್ಲಿ ಸತ್ಯ ಅಹಿಂಸೆಗೆ ಒತ್ತು : ಸಿ.ಪುಟ್ಟರಂಗಶೆಟ್ಟಿ,ಬಹುಗ್ರಾಮ ಕುಡಿಯುವ ನೀರು ಯೋಜನೆ ತ್ವರಿತ ಪೂರ್ಣಗೊಳಿಸಿ : ಯು ಟಿ ಖಾದರ್


ಬಹುಗ್ರಾಮ ಕುಡಿಯುವ ನೀರು ಯೋಜನೆ ತ್ವರಿತ ಪೂರ್ಣಗೊಳಿಸಿ : ಯು ಟಿ ಖಾದರ್


ಚಾಮರಾಜನಗರ, ಮೇ. 16 :- ಚಾಮರಾಜನಗರ ತಾಲೂಕಿನ 166 ಹಾಗೂ ಗುಂಡ್ಲುಪೇಟೆ ತಾಲೂಕಿನ 131 ಗ್ರಾಮಗಳಿಗೆ ನದಿ ಮೂಲದಿಂದ ಕುಡಿಯುವ ನೀರು ಒದಗಿಸುವ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಬಾಕಿ ಇರುವ ಕೆಲಸವನ್ನು ತ್ವರಿತವಾಗಿ ಪೂರ್ಣಗೊಳಿಸಿ ಎಲ್ಲ ಗ್ರಾಮಗಳಿಗೆ ನೀರು ಪೂರೈಸುವಂತೆ ಆಹಾರ, ನಾಗರಿಕ ಸರಬರಾಜು ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಸಂಜೆ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಬಾಕಿ ಇರುವ ವಿದ್ಯುತ್ ಸಂಪರ್ಕ ಇತರೆ ಕಾಮಗಾರಿಗಳನ್ನು ವಿಳಂಬ ಮಾಡದೆ ಶೀಘ್ರವಾಗಿ ಮುಗಿಸಬೇಕು. ನೀರಿನ ಬವಣೆ ನೀಗಿಸುವ ಸಲುವಾಗಿ ಜೂನ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಿ ಉದ್ದೇಶಿತ ಎಲ್ಲ ಗ್ರಾಮಗಳಿಗೂ ಸಮರ್ಪಕವಾಗಿ ನೀರು ಪೂರೈಸುವ ಕೆಲಸ ಆಗಲೇಬೇಕು ಎಂದು ಉಸ್ತುವಾರಿ ಸಚಿವರು ತಿಳಿಸಿದರು.
ನಗರದಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಉಸ್ತುವಾರಿ ಸಚಿವರು ರಿಸೀವಿಂಗ್ ಚೇಂಬರ್ಸ್ ಇನ್ನು ಶೇ. 50ರಷ್ಟು ಅಗತ್ಯವಿದ್ದರೆ ಅದಕ್ಕೆ ಬೇಕಾಗುವ ನೆರವನ್ನು ಉನ್ನತ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಆದಷ್ಟು ಕೂಡಲೇ ನೀಡಲಾಗುತ್ತದೆ. ಮೇ 31ರೊಳಗೆ ಪ್ರಸ್ತುತ ಕೈಗೊಂಡಿರುವ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ನಿರ್ದೇಶನ ನೀಡಿದರು.
ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಪ್ರಗತಿ ಪರಿಶೀಲಿಸಿದ ಸಚಿವರು ಗ್ರಾಮೀಣ ಭಾಗದಲ್ಲಿ ಕೆಲವೆಡೆ ಉದ್ಯೋಗ ನೀಡದೇ ಇರುವ ಬಗ್ಗೆ ಖುದ್ದು ನನಗೆ ದೂರುಗಳು ಬಂದಿವೆ. ಬರಗಾಲ ಸಂದರ್ಭದಲ್ಲಿ ಯಾರೂ ಸಹ ಉದ್ಯೋಗ ಅರಸಿ ಹೊರಭಾಗಗಳಿಗೆ ತೆರಳಲು ಅವಕಾಶ ನೀಡದೇ ಸ್ಥಳೀಯವಾಗಿ ಕೆಲಸ ನೀಡಿ ಸಕಾಲದಲ್ಲಿ ಹಣ ಪಾವತಿ ಮಾಡಬೇಕು. ಉದ್ಯೋಗ ನೀಡದೇ ಇರುವ ಬಗ್ಗೆ ಮತ್ತೆ ದೂರುಗಳು ಕೇಳಿಬಂದರೆ ಹಾಗೂ ನಿಗದಿತ ಗುರಿಗೆ ಅನುಗುಣವಾಗಿ ಸಾಧನೆ ಮಾಡದೇ ಇದ್ದರೆ ಹೋಬಳಿ ನೋಡಲ್ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸಚಿವರು ಎಚ್ಚರಿಕೆ ನೀಡಿದರು.
ಜಿಲ್ಲೆಯ ಕೆಲ ಅನುದಾನಿತ ಶಾಲೆಗಳಲ್ಲಿ ಈ ಬಾರಿಯ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಫಲಿತಾಂಶದಲ್ಲಿ ತೀವ್ರÀ ಕುಸಿತ ಕಂಡುಬಂದಿದೆ. ಸರ್ಕಾರದ ವೇತನ ಪಡೆಯುವ ಶಿಕ್ಷಕರು ಹೇಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂಬ ಬಗ್ಗೆ ಪರಿಶೀಲಿಸಬೇಕಿದೆ. ಫಲಿತಾಂಶ ಕಡಿಮೆ ಬಂದಿರುವ ಬಗ್ಗೆ ವಿಶ್ಲೇಷಿಸಿ ಕಾರಣಗಳನ್ನು ತಿಳಿದುಕೊಳ್ಳಲು ಶೀಘ್ರವೇ ಅನುದಾನಿತ ಶಾಲೆಗಳ ಆಡಳಿತ ಮಂಡಳಿ ಹಾಗೂ ಮುಖ್ಯ ಶಿಕ್ಷಕರ ಸಭೆ ಕರೆಯಬೇಕು. ಫಲಿತಾಂಶ ಸುಧಾರಣೆಗೆ ಅಗತ್ಯವಿರುವ ಕ್ರಮಗಳನ್ನು ತೆಗೆದುಕೊಳ್ಳಲು ಸೂಚನೆ ನೀಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಉಸ್ತುವಾರಿ ಸಚಿವರು ನಿರ್ದೇಶನ ನೀಡಿದರು.
ಬರಲಿರುವ ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಗೆ ವಿದ್ಯಾರ್ಥಿಗಳಿಗೆ ಅಗತ್ಯ ಮಾರ್ಗದರ್ಶನ ಮಾಡುವ ಮೂಲಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ತಕ್ಷಣದಿಂದಲೇ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಶಿಕ್ಷಕರು ಮುಂದಾಗಬೇಕೆಂದು ತಿಳಿಸಿದರು.
ತೋಟಗಾರಿಕೆ, ಮೇವು, ಕೃಷಿ ಪರಿಸ್ಥಿತಿ ಕುರಿತು ಪರಾಮರ್ಶೆ ನಡೆಸಿದ ಸಚಿವರು ಮಳೆಯಾಗಿರುವ ಪ್ರದೇಶದಲ್ಲಿ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ, ಇತರೆ ಕೃಷಿ ಪರಿಕರಗಳಿಗೆ ಅಭಾವವಾಗದಂತೆ ನೋಡಿಕೊಳ್ಳಬೇಕು. ಜಾನುವಾರುಗಳಿಗೆ ಮೇವು ಕೊರತೆ ಕಾಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದರು.
ತೋಟಗಾರಿಕೆ ಇಲಾಖೆಯಿಂದ ಹನೂರು ಭಾಗಕ್ಕೆ ಬೇಡಿಕೆ ಇರುವ ಆಲೂಗೆಡ್ಡೆ ಬಿತ್ತನೆ ಬೀಜವನ್ನು ರಾಷ್ಟ್ರೀಯ ಬೀಜ ನಿಗಮದಿಂದ 100 ಟನ್ ಖರೀದಿಸಿರುವ ಬಗ್ಗೆ ಮಾಹಿತಿ ಪಡೆದ ಶಾಸಕ ಆರ್. ನರೇಂದ್ರ ಅವರು ಇನ್ನೂ ಹೆಚ್ಚುವರಿಯಾಗಿ ಬೀಜ ಖರೀದಿಸಿ ರೈತರಿಗೆ ಬೆಳೆಗಾರರಿಗೆ ವಿತರಿಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕೈಗೊಂಡಿರುವ ಹೆದ್ದಾರಿ ನಿರ್ಮಾಣ ಕಾಮಗಾರಿ ಸೇರಿದಂತೆ ಇತರೆ ಅಭಿವೃದ್ಧಿ ಯೋಜನೆಗಳು ಹಾಗೂ  ವಿವಿಧ ಇಲಾಖೆಗಳ ಪ್ರಗತಿಯನ್ನು ಪರಿಶೀಲಿಸಲಾಯಿತು.
ಶಾಸಕರಾದ ಎಸ್. ಜಯಣ್ಣ, ಜಿಲ್ಲಾಧಿಕಾರಿ ಬಿ. ರಾಮು, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ. ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮುನಿರಾಜಪ್ಪ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಮೇ. 17ರಂದು ಪಡಗೂರಿನಲ್ಲಿ ಅಂಚೆ ಸಂತೆ

ಚಾಮರಾಜನಗರ, ಮೇ. 16 - ಅಂಚೆ ಇಲಾಖೆ ವತಿಯಿಂದ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಹೋಬಳಿಯ ಪಡಗೂರು ಗ್ರಾಮದಲ್ಲಿ ಅಂಚೆ ಸಂತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಉಳಿತಾಯ ಖಾತೆ, ಆವರ್ತಕ ಖಾತೆ, ಸುಕನ್ಯಾ ಸಮೃದ್ಧಿ ಖಾತೆ, ಸಾರ್ವಜನಿಕ ಭವಿಷ್ಯ ನಿಧಿ ಖಾತೆ, ಪ್ರಧಾನಮಂತ್ರಿ ಜೀವನಜ್ಯೋತಿ ಬಿಮಾ ಯೋಜನೆ, ಜೀವನ ಸುರಕ್ಷಾ ವಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಗ್ರಾಮೀಣ ಅಂಚೆಜೀವ ವಿಮೆ, ಸಾಮಾನ್ಯ ಅಂಚೆ ಜೀವ ವಿಮೆ, ಇತರೆ ಯೋಜನೆಗಳನ್ನು ಸ್ಥಳದಲ್ಲೇ ಪರಿಶೀಲಿಸಿ ಸ್ವೀಕರಿಸಲಾಗುತ್ತದೆ.
ಅಂಚೆ ಸಂತೆಯ ಸದುಪಯೋಗ ಮಾಡಿಕೊಳ್ಳುವಂತೆ ಅಂಚೆ ಅಧೀಕ್ಷಕರಾದ ಜಿ.ಸಿ. ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಳಂದೂರು : ಪ.ಜಾ. ಪ.ವರ್ಗಗಳ ಹಿತರಕ್ಷಣಾ ಸಮಿತಿ ಸಭೆ – ಮನವಿ ಸಲ್ಲಿಕೆಗೆ ಅವಕಾಶ
ಚಾಮರಾಜನಗರ, ಮೇ. 16 :- ಯಳಂದೂರು ತಾಲೂಕು ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಹಿತರಕ್ಷಣಾ (ಕ್ಷೇಮಾಭಿವೃದ್ಧಿ) ಸಭೆಯು ತಹಸೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ಮೇ 18ರಂದು ಬೆಳಿಗ್ಗೆ 11 ಗಂಟೆಗೆ ಯಳಂದೂರು ಪಟ್ಟಣದ ತಹಸೀಲ್ದಾರ್ ಸಭಾಂಗಣದಲ್ಲಿ ನಡೆಯಲಿದೆ.
ಸಮಿತಿಗೆ ಮಹದೇವಪ್ಪ ಸಿದ್ದೇಶ್ವರಪೇಟೆ ಮಾಂಬಳ್ಳಿ (ಮೊಬೈಲ್ ನಂ. 9739825516), ಆರ್. ನಾಗರಾಜು, ಅಗರ (ಮೊ. ಸಂ. 9986585161), ಮಹದೇವಶೆಟ್ಟಿ ಬಿನ್ ನಾಗರಂಗಮ್ಮ, ವೈ ಕೆ ಮೋಳೆ (ಮೊ.ನಂ. 9480003951) ಇವರು ನಾಮನಿರ್ದೇಶಿತ ಸದದ್ಯರಾಗಿ ನೇಮಕವಾಗಿರುತ್ತಾರೆ. ವೈಯಕ್ತಿಕ ವಿಷಯಗಳನ್ನು ಹೊರತುಪಡಿಸಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ಸಮುದಾಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ತೊಂದರೆಗಳು ಇದ್ದಲ್ಲಿ ಸಮಿತಿಯ ಸದಸ್ಯರು ಅಥವಾÀ ತಹಸೀಲ್ದಾರ್ ಅಥವಾ ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕರಿಗೆ ಮನವಿ ಸ್ಲಲಿಸಬಹುದೆಂದು ಸಮಾಜ ಕಲ್ಯಾಣ ಇಲಾಖೆಯ ಪ್ರಕಟಣೆ ತಿಳಿಸಿದೆ.

ಜೈನ ಧರ್ಮದಲ್ಲಿ ಸತ್ಯ ಅಹಿಂಸೆಗೆ ಒತ್ತು : ಸಿ.ಪುಟ್ಟರಂಗಶೆಟ್ಟಿ

ಚಾಮರಾಜನಗರ, ಮೇ. 16 - ಸತ್ಯ ಹಾಗೂ ಅಹಿಂಸಾ ಮಾರ್ಗ ಪಾಲನೆಗೆ ಅತಿಹೆಚ್ಚು ಒತ್ತು ನೀಡಿರುವ ಪೈಕಿ ಜೈನಧರ್ಮಕ್ಕೆ ಅಗ್ರಸ್ಥಾನವಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಭಿಪ್ರಾಯಪಟ್ಟರು.
ನಗರದ ಜೆ ಎಚ್ ಪಟೇಲ್ ಸಭಾಂಗಣದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ವರಿಗೂ ಲೇಸನ್ನೇ ಬಯಸಿದ ಮಹಾವೀರರು ಸತ್ಯ ಹಾಗೂ ಅಹಿಂಸೆಯನ್ನು ಪ್ರತಿಪಾದಿಸಿದರು. ಸುಳ್ಳು, ಕಪಟ ತ್ಯಜಿಸಿ ಉನ್ನತ ಮಾರ್ಗದಲ್ಲಿ ನಡೆಯಬೇಕೆಂಬ ಶ್ರೇಷ್ಠ ಮೌಲ್ಯಗಳನ್ನು ತಮ್ಮ ಸಂದೇಶದ ಮೂಲಕ ಸಾರಿದರು ಎಂದರು.
ಮಹಾವೀರರು ರಾಜ ವೈಭೋಗವನ್ನು ತ್ಯಜಿಸಿ ತಪಸ್ಸು ಸಾಧನೆ ಮಾಡಿ ಶಾಂತಿಯುತ ಜೀವನ ಸಂದೇಶಗಳಿಗೆ ಮಾದರಿಯಾಗಿದ್ದಾರÉ. ಸತ್ಯ ಅಹಿಂಸೆಯನ್ನು ಪ್ರತಿಪಾದಿಸಿದ ಧರ್ಮಗಳಲ್ಲಿ ಜೈನಧರ್ಮವು ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಶಾಂತಿಪ್ರಿಯತೆಗೆ ಹೆಸರಾಗಿದೆ ಎಂದು ಪುಟ್ಟರಂಗಶೆಟ್ಟಿ ತಿಳಿಸಿದರು.

ಜೈನಧರ್ಮದ ಸಮುದಾಯ ಪಟ್ಟಣದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದೆ. ವಿಶೇಷವಾಗಿ ವಾಣಿಜ್ಯ ವಹಿವಾಟು ಉದ್ಯಮಗಳಲ್ಲಿ ತೊಡಗಿಕೊಂಡಿರುವ ಸಮುದಾಯದ ಜನರು ತಮ್ಮದೇ ಆದ ಪ್ರಗತಿಪರ ಚಟುವಟಿಕೆಗಳಿಂದ ನಗರದ ಪ್ರಗತಿಗೂ ಕಾರಣರಾಗಿದ್ದಾರೆ ಎಂದು ಪುಟ್ಟರಂಗಶೆಟ್ಟಿಯವರು ಸ್ಮರಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು ಅವರು ತ್ಯಾಗ ಪ್ರಧಾನವೇ ಜೈನ ಧರ್ಮದ ಮುಖ್ಯ ಸಾರವಾಗಿದೆ. ಅಹಿಂಸೆ ಸತ್ಯ ಮಾರ್ಗವನ್ನು ಪಾಲನೆ ಮಾಡುವ ಮಹತ್ವವನ್ನು ತಿಳಿಸಿದ ಮಹಾವೀರರ ಜಯಂತಿ ಆಚರಣೆಯು ಅರ್ಥಪೂರ್ಣವಾಗಿದೆ. ತಾಲೂಕಿನ ಕನಕಗಿರಿಯು ಜೈನರ ಪವಿತ್ರ ಕ್ಷೇತ್ರವಾಗಿರುವುದು ಜಿಲ್ಲೆಗೆ ಹಮ್ಮೆ ತರುವ ಸಂಗತಿ ಎಂದರು.

ಜಿಲ್ಲಾ ಪಂಚಾಯತ್ ಸದಸ್ಯರಾದ ಸಿ.ಎನ್. ಬಾಲರಾಜು ಮಾತನಾಡಿ ಪ್ರಸ್ತುತ ಸಂದರ್ಭದಲ್ಲಿ ಮಹಾವೀರರ ಅಹಿಂಸೆ ಸತ್ಯ ಸಂದೇಶಗಳು ಅಗತ್ಯವಾಗಿವೆ. ಶಾಂತಿಯಿಂದ ಎಲ್ಲವನ್ನು ಸಾಧಿಸಬಹುದೆಂಬ ವಿಷಯ ಮನದಟ್ಟಾಗಬೇಕಿದೆ ಎಂದರು.
ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕರಾದ ಪ್ರೊ. ಪ್ರೀತಿ ಶ್ರೀ ಮಂದರ್ ಕುಮಾರ್ ಮುಖ್ಯ ಭಾಷಣ ಮಾಡಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮುನಿರಾಜಪ್ಪ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಕೆ.ಎಚ್. ಸತೀಶ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಿ. ನಾಗವೇಣಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದಲ್ಲಿ ನಡೆದ ಭಗವಾನ್ ಮಹಾವೀರರ ಭಾವಚಿತ್ರದ ಮೆರವಣಿಗೆಗೆ ಚಾಮರಾಜೇಶ್ವರ ದೇವಾಲಯ ಬಳಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು, ನಗರಸಭೆ ಅಧ್ಯಕ್ಷರಾದ ಎಸ್.ಎನ್. ರೇಣುಕಾ ಇತರರು ಚಾಲನೆ ನೀಡಿದರು.

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು