Saturday, 20 May 2017

20-05-2017 ನರೇಗಾ ಅಡಿ ಉದ್ಯೋಗ ಅವಕಾಶ ಒದಗಿಸಲು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರ ಸೂಚನೆ.

ನರೇಗಾ ಅಡಿ ಉದ್ಯೋಗ ಅವಕಾಶ ಒದಗಿಸಲು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರ ಸೂಚನೆ.

ಚಾಮರಾಜನಗರ, ಮೇ. 20:- ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಹೆಚ್ಚು ಜನರಿಗೆ ಉದ್ಯೋಗ ಅವಕಾಶ ನೀಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ತ.ಮ.ವಿಜಯಭಾಸ್ಕರ್ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಜಿಲ್ಲೆಯ ಬರ ಪರಿಸ್ಥಿತಿ ಹಾಗೂ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಹೆಚ್ಚು ಜನರಿಗೆ ಉದ್ಯೋಗ ಲಭಿಸಲು ಅನುವಾಗುವಂತೆ ಕಾಮಗಾರಿಗಳನ್ನು ಕೈಗೊಳ್ಳಬೇಕು. ವಿಶೇಷವಾಗಿ ಸಮುದಾಯ ಕಾಮಗಾರಿಗಳನ್ನು ಹೆಚ್ಚಾಗಿ ತೆಗೆದುಕೊಳ್ಳಬೇಕು ಇದರಿಂದ ಹೆಚ್ಚು ಮಾನವ ದಿನಗಳ ಸೃಜನೆ ಮಾಡಬಹುದು ಎಂದರು.


ಜಿಲ್ಲೆಯಲ್ಲಿ ಬರಗಾಲ ಹಿನ್ನೆಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಗೋಶಾಲೆಗಳನ್ನು ತೆರೆಯಲಾಗಿದೆ. ಗೋಶಾಲೆಗೆ ಜಾನುವಾರುಗಳನ್ನು ತರುವವರು ಸುಮ್ಮನೆ ಕುಳಿತುಕೊಳ್ಳುವ ಬದಲಿ ಗೋಶಾಲೆ ಸಮೀಪದಲ್ಲೆ ಇರುವ ಸ್ಥಳಗಳಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ಮಾಡಲು ಅವಕಾಶ ನೀಡಿದರೆ ಜನರ ಆರ್ಥಿಕ ಪರಿಸ್ಥಿತಿಯು ಸುಧಾರಣೆಗೊಳ್ಳಲಿದೆ. ಹೀಗಾಗಿ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ಕೂಡಲೇ ಈ ಸಂಬಂಧ ಅಗತ್ಯವಿರುವ ಕ್ರಮವಹಿಸಬೇಕೆಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನಿರ್ದೇಶನ ನೀಡಿದರು.
ಮೇವು ಬೆಳೆಯಲು ಜನರನ್ನು ಪ್ರೇರೆಪಿಸಬೇಕು. ಮೇವು ಕಿಟ್‍ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ವಿತರಿಸುವ ಮೂಲಕ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಿ ಸಾಕಷ್ಟು ಮೇವು ಬೆಳೆದು ಸ್ಥಳೀಯವಾಗಿ ಬಳಕೆ ಮಾಡಿಕೊಳ್ಳಲು ಈಗಿನಿಂದಲೆ ಬೇಕಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು. ಮುಂಬರುವ ದಿನಗಳಲ್ಲಿ ಮೇವು ಅಭಾವ ಕಾಡದಂತೆ ಮುನ್ನೆಚರಿಕೆ ವಹಿಸಬೇಕು ಎಂದರು.

ಕುಡಿಯುವ ನೀರಿನ ಪರಿಸ್ಥಿತಿ ಬಗ್ಗೆ ಪರಾಮರ್ಶೆ ನಡೆಸಿದ ಹೆಚ್ಚುವರಿ ಕಾರ್ಯದರ್ಶಿಯವರು ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಿ ಜನರಿಗೆ ಶುದ್ದ ಕುಡಿಯುವ ನೀರು ಪೂರೈಸಬೇಕು. ಪ್ರಸ್ತುತ ಅಭಾವ ಪರಿಸ್ಥಿತಿ ಇರುವ ಗ್ರಾಮಗಳಲ್ಲಿ ಅಗತ್ಯಕ್ಕೆ ತಕ್ಕಂತೆ ತಾತ್ಕಾಲಿಕವಾಗಿ ನೀರು ಒದಗಿಸುವ ಕೆಲಸ ನಿರ್ವಹಿಸಬೇಕು. ಯಾವುದೇ ಕಾರಣಕ್ಕು ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು.
ಕೃಷಿ, ಅರಣ್ಯ ಮತ್ತು ತೋಟಗಾರಿಕೆ ಕ್ಷೇತ್ರಕ್ಕೆ ಹಲವಾರು ಉಪಯೋಗಿ ಯೋಜನೆಗಳು ಇವೆ. ಇದರ ಬಳಕೆಗೆ ಅಧಿಕಾರಿಗಳು ಮಾರ್ಗದರ್ಶನ ಮಾಡಬೇಕು. ಬೆಳೆ ಪರಿಹಾರ ಒದಗಿಸಲು ಅನುಕೂಲವಾಗುವಂತೆ ರೈತರ ಬ್ಯಾಂಕ್ ಖಾತೆಗೆ ಆಧಾರ ಜೋಡಣೆ ಮಾಡುವ ಕೆಲಸವನ್ನು ನಿಗಧಿತ ವೇಳೆಗೆ ಪೂರ್ಣಗೊಳಿಸಬೇಕು. ಸಾಮಾಜಿಕ ಭದ್ರತ ಯೋಜನೆಯಡಿ ಫಲಾನುಭವಿಗಳು ಪಿಂಚಣಿ, ಮಾಸಾಶನ ಪಡೆಯಲು ಅನುಕೂಲವಾಗುವಂತೆ ಆಧಾರ್ ಜೋಡಣೆ ಕಾರ್ಯವನ್ನು ಸಹ ನಿಗಧಿಪಡಿಸಲಾಗಿರುವ ಗಡುವಿನೊಳಗೆ ಮುಗಿಸಬೇಕು ಎಂದರು.
ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದ್ದು ಇದು ಬಳಕೆಯಾಗಬೇಕು. ಶೌಚಾಲಯ ಬಳಕೆಗೆ ಉತ್ತೇಜಿಸಲು ಶಾಲಾ ಮಕ್ಕಳನ್ನು ಬಳಸಿಕೊಳ್ಳಬೇಕು. ಶಾಲೆಯ ಬೆಳಗಿನ ಪ್ರಾರ್ಥನೆ ಸಮಯದಲ್ಲಿ ಶೌಚಾಲಯ ಬಳಸುವುದರಿಂದ ಆಗುವ ಅನುಕೂಲತೆಗಳ ಬಗ್ಗೆ ಮಕ್ಕಳಿಗೆ ತಿಳಿಸುವ ಮೂಲಕ ಅವರ ಪೋಷಕರಿಗು ಈ ಬಗ್ಗೆ ಅರಿವು ಮೂಡಿಸುವಂತೆ ಶಿಕ್ಷಕರು ತಿಳಿವಳಿಕೆ ನೀಡಲು ಶಿಕ್ಷಣ ಇಲಾಖೆಯ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕೆಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತಿಳಿಸಿದರು.
ವಿವಿಧ ಇಲಾಖೆ ಇತರೆ ಯೋಜನೆಗಳ ಬಗ್ಗೆ ಸಭೆಯಲ್ಲಿ ಪರಿಶೀಲಿಸಲಾಯಿತು.
ಜಿಲ್ಲಾಧಿಕಾರಿ ಬಿ.ರಾಮು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಹರೀಶ್ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯತ್ರಿ, ಉಪ ವಿಭಾಗಾಧಿಕಾರಿ ಎಂ.ಜಿ.ರೂಪ ಸೇರಿದಂತೆ ಜಿಲ್ಲೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಜಿಲ್ಲೆಯ ವಿವಿಧ ಭಾಗಗಳಿಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಭೇಟಿ: ಕಾಮಗಾರಿ ಅಭಿವೃದ್ಧಿ ಯೋಜನೆ ಪರಿಶೀಲನೆ.

ಚಾಮರಾಜನಗರ, ಮೇ. 20 - ಜಿಲ್ಲೆಯಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಯೋಜನೆ ಹಾಗೂ ಕಾಮಗಾರಿ ಸ್ಥಳಕ್ಕೆ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ತ.ಮ.ವಿಜಯಭಾಸ್ಕರ್ ಅವರು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬೆಳಗಿನಿಂದಲೆ ಭೇಟಿ ಕಾರ್ಯಕ್ರಮವನ್ನು ಆರಂಭಿಸಿದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ಮೊದಲಿಗೆ ಹರದನಹಳ್ಳಿಯ ಮರಗದ ಕೆರೆ ಬಳಿಕೆ ಬಂಡಿಗೆರೆ ಕೆರೆಯನ್ನು ವೀಕ್ಷಿಸಿದರು. ಸ್ಥಳೀಯ ಜನರೊಂದಿಗೆ ಮಾತನಾಡಿ ಶೌಚಾಲಯ, ಪಡಿತರ ವಿತರಣೆ, ಉದ್ಯೋಗ ಖಾತರಿ ಯೋಜನೆ ಹೇಗೆ ನಿಮಗೆ ತಲುಪುತ್ತಿದೆ ಎಂದು ಪ್ರಶ್ನಿಸಿದರು. ಬಳಿಕ ಉದ್ಯೋಗ ಖಾತರಿ ಯೋಜನೆಯಡಿ ನಿರ್ವಹಿಸಲಾಗುತ್ತಿರುವ ಕಾಮಗಾರಿಯನ್ನು ಪರಿಶೀಲಿಸಿದರು. ಗಂಗಾ ಕಲ್ಯಾಣ ಯೋಜನೆಯಡಿ ಪ್ರಯೋಜನ ಪಡೆದಿರುವ ಫಲಾನುಭವಿಯೊಬ್ಬರ ತೋಟಕ್ಕೆ ತೆರಳಿ ವೀಕ್ಷಣೆ ಮಾಡಿದರು.
ಬಳಿಕ ಹುತ್ತೂರು ಗೋಶಾಲೆಗೆ ತೆರಳಿ ಅಲ್ಲಿನ ವ್ಯವಸ್ಥೆಗಳ ಬಗ್ಗೆ ವೀಕ್ಷಿಸಿದರು. ಜಾನುವಾರು ಮಾಲೀಕರಿಂದ ಅಹವಾಲು ಆಲಿಸಿದರು. ಬೊಮ್ಮಲಾಪುರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಬಗ್ಗೆ ಖುದ್ದು ಪರಿಶೀಲನೆ ಮಾಡಿದರು. ಹಂಗಳ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಕೈಗೊಂಡಿರುವ ಕಲ್ಯಾಣಿ ನವೀಕರಣ ಕಾಮಗಾರಿ, ತೆರಕಣಾಂಬಿಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಮೇಲುಕಾಮನಹಳ್ಳಿಯಲ್ಲಿ ಗಿರಿಜನರಿಗೆ ನಿರ್ಮಿಸಲಾಗಿರುವ ಮನೆಗಳ ವೀಕ್ಷಣೆ ಮಾಡಿದರು.
ಹರವೆಯಲ್ಲಿ ಪ್ರಾಥಮಿಕ ಆರೋಗ್ಯ ಕೆಂದ್ರ, ಸುಜಲ ಕಾಮಗಾರಿ, ಕೃಷಿ ಹೊಂಡ, ನಿರ್ಮಾಣ ಹಂತದಲ್ಲಿರುವ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮಾರ್ಗ ಮಧ್ಯದಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ನಿರ್ವಹಿಸಲಾಗುತ್ತಿರುವ ಕಾಮಗಾರಿ ವೀಕ್ಷಿಸಿದರು. ಪುತ್ತನಪುರ ಗ್ರಾಮ ಪಂಚಾಯಿತಿ ಕಚೇರಿಗೂ ಭೇಟಿ ನೀಡಿದರು. ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಭೇಟಿ ನೀಡಿದರು.










No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು