Tuesday, 21 November 2017

ಮಕ್ಕಳ ಹಕ್ಕುಗಳ ರಕ್ಷಣೆಗೆ ಮಹತ್ವ ನೀಡಲು ಹಿರಿಯ ಸಿವಿಲ್ ನ್ಯಾಯಾಧೀಶರ ಸಲಹೆ ,ನ. 24ರಿಂದ ನಗರದಲ್ಲಿ ಚಿತ್ರೋತ್ಸವ : ನಾಗರಿಕರಿಗೆ ಉಚಿತವಾಗಿ ಕನ್ನಡ ಸಿನಿಮಗಳ ವೀಕ್ಷಣೆಗೆ ಅವಕಾಶ ( 21-11-2017 )


ಮಕ್ಕಳ ಹಕ್ಕುಗಳ ರಕ್ಷಣೆಗೆ ಮಹತ್ವ ನೀಡಲು ಹಿರಿಯ ಸಿವಿಲ್ ನ್ಯಾಯಾಧೀಶರ ಸಲಹೆ 

ಚಾಮರಾಜನಗರ, ನ. 21 :- ಮಕ್ಕಳಿಗಾಗಿ ಇರುವ ಹಕ್ಕುಗಳು ಹಾಗೂ ಕಾನೂನುಗಳನ್ನು ಅನುಷ್ಠಾನಗೊಳಿಸಿ ಪಾಲನೆ ಮಾಡುವುದು ಅತ್ಯವಶ್ಯಕವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್.ಪಿ. ನಂದೀಶ್ ತಿಳಿಸಿದರು.
ತಾಲೂಕಿನ ಹೊಂಗನೂರಿನಲ್ಲಿ ಸೋಮವಾರ ನಡೆದ ಅಂತರ ರಾಷ್ಟ್ರೀಯ ಮಕ್ಕಳ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಹಲವಾರು ಯೋಜನೆಗಳು ಹಾಗೂ ಹಕ್ಕುಗಳನ್ನು ನೀಡಲಾಗಿದೆ. ಬದುಕುವ ಹಕ್ಕು, ವಿಕಾಸ ಹೊಂದುವ ಹಾಗೂ ಭಾಗವಹಿಸುವಿಕೆ ಹಕ್ಕುಗಳನ್ನು ಸಂವಿಧಾನಬದ್ಧವಾಗಿ ಕೊಡಲಾಗಿದೆ. ಸಮಾಜಕ್ಕೆ ತೊಂದರೆಯಾಗದಂತೆ ಬದುಕುವ ರೀತಿಯಲ್ಲಿ ಮಕ್ಕಳನ್ನು ಪೋಷಿಸಬೇಕಿದೆ. ಮಕ್ಕಳ ಕಾನೂನುಗಳು ಅನುಷ್ಠಾನಗೊಳಿಸುವಲ್ಲಿ ವಿಫಲವಾಗುವುದಕ್ಕೆ ಅರಿವಿನ ಕೊರತೆ ಕಾರಣವಾಗಿದೆ ಎಂದು ನ್ಯಾಯಾಧೀಶರು ತಿಳಿಸಿದರು.
ಭಾರತ ದೇಶ ವಿಶ್ವಸಂಸ್ಥೆಯೊಂದಿಗೆ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ 1992ರ ನವೆಂಬರ್ 20ರಂದು ಸಹಿ ಮಾಡಿದೆ. ಇದರ ಅಂಗವಾಗಿ ಅಂತರ ರಾಷ್ಟ್ರೀಯ ಮಕ್ಕಳ ಹಕ್ಕುಗಳ ದಿನವನ್ನಾಗಿ ಆಚರಿಸಲಾಗುತ್ತಿದೆ. ಪುಸ್ತಕಗಳಲ್ಲಿ ಕಾನೂನುಗಳು, ಹಕ್ಕುಗಳು ಅಡಕವಾಗಿರದೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಅನುಷ್ಠಾನಗೊಳಿಸುವುದು ಮುಖ್ಯವಾಗಿದೆ ಎಂದು ನ್ಯಾಯಾಧೀಶರು ನುಡಿದರು.
ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು ಮಾತನಾಡಿ ಸರ್ಕಾರ ಮಕ್ಕಳಿಗಾಗಿ ಜಾರಿಗೊಳಿಸಿರುವ ಕಾನೂನುಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಪಾತ್ರವು ಮುಖ್ಯವಾಗಿದೆ. ಮಕ್ಕಳು ಹಾಗೂ ಪೋಷಕರಿಗೂ ಸಹ ಹಕ್ಕುಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕಿದೆ. ನಾಗರಿಕ ಸಮಾಜದಲ್ಲಿ ಶಿಕ್ಷಣ ಪಡೆಯಬೇಕಿರುವುದು ಅತಿ ಪ್ರಾಮುಖ್ಯ ವಿಷಯವಾಗಿದೆ. ಉತ್ತಮ ಸಮಾಜ ನಿರ್ಮಾಣ ಮಾಡಲು ಭದ್ರ ಬುನಾದಿ ಹಾಕಿಕೊಡಬೇಕಿದೆ ಎಂದರು.
ಜಿಲ್ಲಾ ಬಾಲನ್ಯಾಯ ಮಂಡಳಿ ಸದಸ್ಯರಾದ ಟಿ.ಜೆ. ಸುರೇಶ್ ಮಾತನಾಡಿ ಮನೆಯೇ ಮಗುವಿಗೆ ಮೊದಲ ಪಾಠಶಾಲೆಯಾಗಿದ್ದು ಮನೆಯ ವಾತಾವರಣ ಪರಿಣಾಮ ಬೀರಲಿದೆ. ಮನೆಗಳಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗದಂತೆ ರಕ್ಷಣೆ ನೀಡಬೇಕಿರುವುದು ಮುಖ್ಯ ಕರ್ತವ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ನಿರ್ದೇಶಕರಾದ ಮಹೇಶ್ ಮಾತನಾಡಿ ಪ್ರಸ್ತುತ ದಿನಗಳಲ್ಲಿ ಪೋಷಕರು  ಮಕ್ಕಳ ಜತೆ ಮುಕ್ತವಾಗಿ ಮಾತನಾಡುವುದು ಕಡಿಮೆಯಾಗಿದೆ. ಇದರಿಂದ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಪೋಷಕರು ಪ್ರೀತಿ ವಾತ್ಸಲ್ಯದಿಂದ ಮಕ್ಕಳನ್ನು ಕಂಡು ಆತ್ಮವಿಶ್ವಾಸ ಮೂಡಿಸಬೇಕಿದೆ ಎಂದರು.
ಎಸ್‍ಡಿಎಂಸಿ ಅಧ್ಯಕ್ಷರಾದ ದಿವಾಕರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಟಿ.ಎಂ. ಜಯಶೀಲ, ತಾಲೂಕು ವೈದ್ಯಾಧಿಕಾರಿ ಶ್ರೀನಿವಾಸ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೀತಾ, ಗ್ರಾಮ ಪಂಚಾಯಿತಿ ಸದಸ್ಯರಾದ ಗೌರಮ್ಮ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಮಾರಂಭಕ್ಕೂ ಮೊದಲು ಗ್ರಾಮದಲ್ಲಿ ನಡೆದ ಜಾಗೃತಿ ಜಾಥಾಗೆ ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್.ಪಿ. ನಂದೀಶ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
   


ನ. 25ರಂದು ನಗರದಲ್ಲಿ ಜಿಲ್ಲಾ ಯೋಜನಾ ಸಮಿತಿಗೆ ಅಧ್ಯಕ್ಷರ ಆಯ್ಕೆ

ಚಾಮರಾಜನಗರ, ನ. 21 - ಜಿಲ್ಲೆಯ ಜಿಲ್ಲಾ ಯೋಜನಾ ಸಮಿತಿಗೆ ಅಧ್ಯಕ್ಷರನು ಆಯ್ಕೆ ಮಾಡಲು  ನವೆಂಬರ್ 25ರಂದು ಮಧ್ಯಾಹ್ನ 12 ಗಂಟೆಗೆ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಯೋಜನಾ ಸಮಿತಿ ಸದಸ್ಯರ ಸಭೆ ಕರೆಯಲಾಗಿದೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ನ. 24ರಂದು ನಗರದಲ್ಲಿ ಉದ್ಯೋಗ ಮೇಳ
ಚಾಮರಾಜನಗರ, ನ. 21  ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯು ಖಾಸಗಿ ಕಂಪನಿಗಳಾದ ಫೋರ್ಟಿಸ್ ಆಸ್ಪತ್ರೆ, ಹಿಂದೂ ಗ್ಲೋಬಲ್ ಸಲ್ಯೂಷನ್ಸ್ ಪ್ರೈ. ಲಿ., ಯುರೇಕಾ ಫೋಬ್ರ್ಸ, ರಾಕ್ ಬಯೋಟೆಕ್, ತೇಜಸ್ವಿನಿ ಎಂಟರ್ ಪ್ರೈಸಸ್, ಎಲ್‍ಐಸಿ, ಎಕ್ಸೈಡ್ ಲೈಫ್ ಇನ್ಯೂರೆನ್ಸ್ ಮತ್ತು ಆರ್ ಪ್ರೋಸಸ್ ಔಟ್ ಸೊರ್ನಸಸಿಂಗ್ ಸರ್ವೀಸ್ ಸಹಯೋಗದೊಂದಿಗೆ ನವೆಂಬರ್ 24ರಂದು ಬೆಳಿಗ್ಗೆ 10 ಗಂಟೆಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ (ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ)ದಲ್ಲಿ ಉದ್ಯೋಗ ಮೇಳ ಆಯೋಜಿಸಿದೆ.
ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿ, ಐಟಿಐ, ಡಿಪ್ಲೊಮಾ ಹಾಗೂ ಬಿಎಸ್ಸಿ ನರ್ಸಿಂಗ್ (ಎಎನ್‍ಎಂ, ಜಿಎನ್‍ಎಂ) ವಿದ್ಯಾಹರ್Àತೆಯುಳ್ಳ 18 ರಿಂದ 35 ವರ್ಷದೊಳಗಿನ ನಿರುದ್ಯೋಗಿ ಅಭ್ಯರ್ಥಿಗಳು ಭಾಗವಹಿಸಬಹುದು.
ಆಸಕ್ತ ಅಭ್ಯರ್ಥಿಗಳು ಸ್ವವಿವರದೊಂದಿಗೆ ಸಂದರ್ಶನಕ್ಕೆ ಹಾಜರಾಗುವುದು. ಹೆಚ್ಚಿನ ಮಾಹಿತಿಗೆ ಉದ್ಯೋಗಾಧಿಕಾರಿಯವರನ್ನು (ದೂರವಾಣಿ ಸಂಖ್ಯೆ 08226-224430) ಸಂಪರ್ಕಿಸÀುವಂತೆ ಉದ್ಯೋಗಾಧಿಕಾರಿ ಸಿ.ಎಂ. ಉಮಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ನ. 24ರಿಂದ ನಗರದಲ್ಲಿ ಚಿತ್ರೋತ್ಸವ : ನಾಗರಿಕರಿಗೆ ಉಚಿತವಾಗಿ ಕನ್ನಡ ಸಿನಿಮಗಳ ವೀಕ್ಷಣೆಗೆ ಅವಕಾಶ

ಚಾಮರಾಜನಗರ, ನ. 21 - ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾಡಳಿತದ ವತಿಯಿಂದ ಕನ್ನಡ ಚಿತ್ರ ರಸಿಕರಿಗೆ ಕನ್ನಡ ಸಿನಿಮಾಗಳನ್ನು ಉಚಿತವಾಗಿ ವೀಕ್ಷಿಸುವ ಅವಕಾಶ ನವೆಂಬರ್ 24 ರಿಂದ 30ರವರೆಗೆ ನಗರದಲ್ಲಿ ಲಭಿಸಲಿದೆ.
ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪಡೆದ ಕನ್ನಡ ಹಾಗೂ ಪ್ರಾದೇಶಿಕ ಭಾಷಾ ಚಲನಚಿತ್ರಗಳ ಪ್ರದರ್ಶನದ ಚಿತ್ರೋತ್ಸವ ಸಪ್ತಾಹವು ನವೆಂಬರ್ 24 ರಿಂದ 30ರವರೆಗೆ ನಗರದ ಸಿಂಹ ಮೂವಿ ಪ್ಯಾರಡೈಸ್‍ನಲ್ಲಿ ಏರ್ಪಾಡಾಗಿದೆ.
ನವೆಂಬರ್ 24 ರಿಂದ 30ರವರೆಗೆ ಪ್ರತಿದಿನ ಬೆಳಿಗ್ಗೆ 10 ಗಂಟೆಗೆ (ಬೆಳಗಿನ ಆಟ) ಚಲನಚಿತ್ರಗಳ ಪ್ರದರ್ಶನ ನಡೆಯಲಿದ್ದು ಚಿತ್ರ ವೀಕ್ಷಣೆಗೆ ಸಾರ್ವಜನಿಕರಿಗೆ ಉಚಿತವಾಗಿ ಪ್ರವೇಶ ಅವಕಾಶ ಇರಲಿದೆ.
ನವೆಂಬರ್ 24ರಂದು ಅಮರಾವತಿ, ನವೆಂಬರ್ 25ರಂದು ಕಿರಿಕ್ ಪಾರ್ಟಿ, ನವೆಂಬರ್ 26ರಂದು ರಾಮ ರಾಮ ರೇ, ನವೆಂಬರ್ 27ರಂದು ಮದಿಪು (ತುಳು ಭಾಷೆ), ನವೆಂಬರ್ 28ರಂದು ಯೂ ಟರ್ನ್, ನವೆಂಬರ್ 29ರಂದು ಅಲ್ಲಮ ಹಾಗೂ ನವೆಂಬರ್ 30ರಂದು ಮಾರಿಕೊಂಡವರು ಚಲನಚಿತ್ರಗಳ ಪ್ರದರ್ಶನ ನಡೆಯಲಿದೆ.
ಅಮರಾವತಿ ಚಲನಚಿತ್ರವು 2016ನೇ ವರ್ಷದ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಯಲ್ಲಿ ಮೊದಲನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿದೆ. ಕಿರಿಕ್ ಪಾರ್ಟಿ ಚಲನಚಿತ್ರವು 2016ನೇ ವರ್ಷದ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರಪ್ರಶಸ್ತಿ ಪಡೆದುಕೊಂಡಿದೆ. ರಾಮರಾಮರೇ ಚಲನಚಿತ್ರವು 2016ನೇ ವರ್ಷದ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಯಲ್ಲಿ ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ. ಮದಿಪು (ತುಳು ಭಾಷೆ) ಚಲನಚಿತ್ರವು 2016ನೇ ವರ್ಷದ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ ಹಾಗೂ ಅತ್ಯುತ್ತಮ ತುಳು ಭಾಷಾ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದೆ. ಯೂ ಟರ್ನ್ ಚಲನಚಿತ್ರವು 2016ನೇ ಸಾಲಿನ ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದೆ. ಅಲ್ಲಮ ಚಲನಚಿತ್ರವು 2016ನೇ ಸಾಲಿನ ಪನೊರಮಾ ವಿಭಾಗದಲ್ಲಿ ಪ್ರದರ್ಶನಗೊಂಡಿದೆ. ಮಾರಿಕೊಂಡವರು ಚಲನಚಿತ್ರವು 2015ನೇ ಸಾಲಿನ ರಾಜ್ಯ ವಾರ್ಷಿಕ ಚಲನಚಿತ್ರ ಪ್ರದರ್ಶನದಲ್ಲಿ ದ್ವಿತೀಯ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ.
ಚಲನಚಿತ್ರೋತ್ಸವ ಸಪ್ತಾಹದಲ್ಲಿ ಪ್ರದರ್ಶಿತವಾಗಲಿರುವ ಚಲನಚಿತ್ರಗಳನ್ನು ಉಚಿತವಾಗಿ ವೀಕ್ಷಿಸುವ ಮೂಲಕ ಜಿಲ್ಲೆಯ ನಾಗರಿಕರು ಚಿತ್ರೋತ್ಸವ ಯಶಸ್ವಿಗೆ ಸಹಕರಿಸಬೇಕೆಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಣೆಯಲ್ಲಿ ಕೋರಿದೆ.

ಡಿ. 5ರಂದು ಜಿ.ಪಂ. ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ

ಚಾಮರಾಜನಗರ, ನ. 21 - ಜಿಲ್ಲಾ ಪಂಚಾಯಿತಿಯ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ಡಿಸೆಂಬರ್ 5ರಂದು ಮಧ್ಯಾಹ್ನ 3 ಗಂಟೆಗೆ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ಚುನಾವಣಾ ಸಭೆ ಕರೆಯಲಾಗಿದೆ ಎಂದು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರಾದ ಜಯಂತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ. 27ರಂದು ಹರದನಹಳ್ಳಿಯಲ್ಲಿ ಗ್ರಾಮೀಣ ಕ್ರೀಡೋತ್ಸವ

ಚಾಮರಾಜನಗರ, ನ. 21 - ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಚಾಮರಾಜನಗರ ತಾಲೂಕಿನ ಹರದನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ನವೆಂಬರ್ 27ರಂದು ಬೆಳಿಗ್ಗೆ 10.30 ಗಂಟೆಗೆ ಗ್ರಾಮೀಣ ಕ್ರೀಡೋತ್ಸವ ಹಮ್ಮಿಕೊಳ್ಳಲಾಗಿದೆ.
ಪುರುಷರ ವಿಭಾಗದಲ್ಲಿ ವಾಲಿಬಾಲ್, ಮಹಿಳೆಯರ ವಿಭಾಗದಲ್ಲಿ ಕಬಡಿ ಸ್ಪರ್ಧೆಗಳು ಇದ್ದು ಪ್ರಥಮ ಬಹುಮಾನವಾಗಿ 5 ಸಾವಿರ, ದ್ವಿತೀಯ ಬಹುಮಾನವಾಗಿ 3 ಸಾವಿರ ರೂ. ನೀಡಲಾಗುತ್ತದೆ.
ಹರದನಹಳ್ಳಿ ಹೋಬಳಿಯ ಶಾಲಾಕಾಲೇಜು, ಯುವಸಂಘಗಳು, ಸ್ತ್ರೀಶಕ್ತಿ, ಮಹಿಳಾ ಪುರುಷ ಸ್ವಸಹಾಯ ಸಂಘಗಳ ಸದಸ್ಯರು ಭಾಗವಹಿಸಬಹುದು. ಹರದನಹಳ್ಳಿ ಹೋಬಳಿ ಹೊರತುಪಡಿಸಿ ಇತರೆ ಹೋಬಳಿಯವರು ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ.
ಆಸಕ್ತರು ಅಂದು ಬೆಳಿಗ್ಗೆ 9 ಗಂಟೆಗೆ ಆಧಾರ್ ಕಾರ್ಡ್, ಡಿಎಲ್, ಪಡಿತರ ಚೀಟಿ ಅಥವಾ ಇತರೆ ಯಾವುದೇ ದಾಖಲಾತಿಯನ್ನು ಹಾಜರುಪಡಿಸಿ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ಹೆಚ್ಚಿನ ಮಾಹಿತಿಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ (ದೂ.ಸಂ. 08226-224932, ಮೊಬೈಲ್ 9482718278 ಹಾಗೂ 9880211027) ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.

ನ. 24ರಂದು ಸರ್ಕಾರಿ ಇಲಾಖೆ ವಾಹನಗಳ ವಾಯು ಮಾಲಿನ್ಯ ತಪಾಸಣೆ

ಚಾಮರಾಜನಗರ, ನ. 21 - ಪ್ರಾದೇಶಿಕ ಸಾರಿಗೆ ಇಲಾಖೆ ವತಿಯಿಂದ ವಾಯುಮಾಲಿನ್ಯ ತಡೆ ಮಾಸಾಚರಣೆ ಅಂಗವಾಗಿ ನವೆಂಬರ್ 24ರಂದು ಬೆಳಿಗ್ಗೆ 8 ಗಂಟೆಗೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸರ್ಕಾರಿ ವಾಹನಗಳ ವಾಯು ಮಾಲಿನ್ಯ ತಪಾಸಣಾ ಕಾರ್ಯಾಗಾರ ಏರ್ಪಡಿಸಲಾಗಿದೆ.
ಕಾರ್ಯಾಗಾರದಲ್ಲಿ ಜಿಲ್ಲೆಯ ಎಲ್ಲ ಇಲಾಖೆಗಳ ಸರ್ಕಾರಿ ವಾಹನಗಳನ್ನು ತಪಾಸಣೆ ನಡೆಸಿ ಹೊಗೆ ಸೂಸುವ ಪ್ರಮಾಣವನ್ನು ಪರೀಕ್ಷಿಸಲಾಗುತ್ತದೆ. ಮಾಲಿನ್ಯ ನಿಯಂತ್ರಣ ಪರಿಸರ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಈ ಕಾರ್ಯಾಗಾರಕ್ಕೆ ಎಲ್ಲ ಇಲಾಖಾ ವಾಹನಗಳನ್ನು ಕಡ್ಡಾಯವಾಗಿ ತಂದು ತಪಾಸಣೆಗೆ ಒಳಪಡಿಸಬೇಕೆಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಕಟಣೆಯಲ್ಲಿ ಕೋರಿದ್ದಾರೆ.



















                                                                                                   


                                                                                                                                                                                       


























































   



No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು