Thursday, 16 November 2017

ವೈದ್ಯಕೀಯ ಸೇವೆಗೆ ಕೊರತೆಯಾಗದಂತೆ ಕಾರ್ಯ ನಿರ್ವಹಿಸಲು ಡಿಸಿ ಸೂಚನೆ,ಬೆಳೆ ಸಮೀಕ್ಷೆಗೆ ಮಾಹಿತಿಗೆ ಮೊಬೈಲ್ ಆಪ್ ಬಳಸಲು ಡಿಸಿ ಮನವಿ (16-11-2017)

   

ಬೆಳೆ ಸಮೀಕ್ಷೆಗೆ ಮಾಹಿತಿಗೆ ಮೊಬೈಲ್ ಆಪ್ ಬಳಸಲು ಡಿಸಿ ಮನವಿ

ಚಾಮರಾಜನಗರ, ನ. 16 :- ದೇಶದಲ್ಲೇ ಮೊದಲ ಬಾರಿಗೆ ರಾಜ್ಯ ಸರ್ಕಾರ ರೈತಸ್ನೇಹಿ ಆಪ್ ಬಿಡುಗಡೆ ಮಾಡಿದ್ದು ಈ ಮೂಲಕ ರೈತರ ಬೆಳೆ ಸಮೀಕ್ಷೆಯನ್ನು ಕೈಗೊಂಡಿದ್ದು ಬೆಳೆ ವಿವರವನ್ನು ರೈತರೇ ನೇರವಾಗಿ ಅಪ್ ಲೋಡ್ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಬಿ. ರಾಮು ಅವರು ತಿಳಿಸಿದ್ದಾರೆ.
ಕರ್ನಾಟಕ ಫಾರ್ಮರ್ ಕ್ರಾಪ್ ಸರ್ವೆ ಆಪ್ ಅನ್ನು ಗೂಗಲ್ ಪ್ಲೇಸ್ಟೋರ್ ಮೂಲಕ ಡೌನ್‍ಲೋಡ್ ಮಾಡಿಕೊಂಡು ರೈತರೇ ತಮ್ಮ ಜಮೀನಿನ ಬೆಳೆ ವಿವರಗಳನ್ನು ಅಪ್ ಲೋಡ್ ಮಾಡಲು ಅವಕಾಶವಿದೆ. ಇದು ಭೂಮಿ ತಂತ್ರಾಂಶಕ್ಕೆ ಲಿಂಕ್ ಆಗಿದ್ದು ಅಪ್ ಲೋಡ್ ಮಾಡಿದ ಮಾಹಿತಿ ರೈತರ ಪಹಣಿಯಲ್ಲಿ ನಮೂದಾಗಲಿದೆ. ಕಂದಾಯ ಇಲಾಖೆ ಮಾಹಿತಿ ಸಂಗ್ರಹಿಸದಿದ್ದರೂ ರೈತರೇ ಅಪ್ ಲೋಡ್ ಮಾಡಬಹುದಾದ ವಿಶಿಷ್ಟ ಆಪ್ ಇದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಈ ಆಪ್ ಬಳಕೆಗೆ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಅಗತ್ಯವಿದೆ. ಆಂಡ್ರಾಯ್ಡ್ ಮೊಬೈಲ್ ವರ್ಷನ್ 4.5 ಬೇಕಿದೆ. ರೈತರು ಈ ಆಪ್‍ನ ಮೂಲಕ ಬೆಳೆ ವಿವರ ಮಾಹಿತಿಯನ್ನು ತಿಳಿಸುವುದರಿಂದ ಬೆಳೆ ಸಮೀಕ್ಷೆ ಕಾರ್ಯವು ಮತ್ತಷ್ಟು ಪರಿಣಾಮಕಾರಿ ಹಾಗೂ ನಿಖರÀವಾಗಿ ನಡೆಯಲು ಅನುಕೂಲವಾಗಲಿದೆ. ಅಲ್ಲದೆ ಮುಂದೆ ನೈಸರ್ಗಿಕ ವಿಕೋಪದಂತಹ ಸಂದರ್ಭದಲ್ಲಿ ಉಂಟಾಗುವ ಬೆಳೆ ಹಾನಿಗೆ ಪರಿಹಾರ ನೀಡುವ ಪ್ರಕ್ರಿಯೆಗೆ ಸಹಕಾರಿಯಾಗಲಿದೆ.
ಗ್ರಾಮೀಣ ಭಾಗದಲ್ಲಿ ವಿದ್ಯಾವಂತ ಯುವಕ ಯುವತಿಯರು ಮೊಬೈಲ್ ಆಪ್ ಅನ್ನು ಬಳಸಿಕೊಂಡು ಇತರರಿಗೂ ಬಳಕೆ ಮಾಡಲು ತಿಳಿಸಿಕೊಡಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.
ಈಗಾಗಲೇ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಯನ್ನು ಶೇ. 80ರಷ್ಟು ಅಧಿಕಾರಿ ವರ್ಗ ಪೂರ್ಣಗೊಳಿಸಿದ್ದು ಮುಂದಿನ ಹಿಂಗಾರು ಬೆಳೆ ಸಮೀಕ್ಷೆಯನ್ನು ರೈತರ ಮೊಬೈಲ್ ಆಪ್ ಮೂಲಕವೇ ಕೈಗೊಳ್ಳಬೇಕಿದೆ. ಹೀಗಾಗಿ ರೈತರು ಆಪ್ ಅನ್ನು ಸದುಪಯೋಗ ಮಾಡಿಕೊಳ್ಳಬೇಕು. ಈ ಮೂಲಕ ಹಿಂಗಾರು ಬೆಳೆ ಸಮೀಕ್ಷೆಯನ್ನು ನಿಖರವಾಗಿ ಕೈಗೊಳ್ಳಲು ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಬಿ. ರಾಮು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ. 18ರಂದು ಮಲೆಮಹದೇಶ್ವರಬೆಟ್ಟಕ್ಕೆ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಅಧ್ಯಕ್ಷರ ಭೇಟಿ

ಚಾಮರಾಜನಗರ, ನ. 16 :- ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರಾದ ಎಂ.ಆರ್. ವೆಂಕಟೇಶ್, ಸದಸ್ಯರಾದ ಗೋಕುಲ ನಾರಾಯಣಸ್ವಾಮಿ ಹಾಗೂ ಕಾರ್ಯದರ್ಶಿಯವರು ನವೆಂಬರ್ 18ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ನವೆಂಬರ್ 18ರಂದು ಬೆಳಿಗ್ಗೆ 10.30 ಗಂಟೆಗೆ ಮಲೆಮಹದೇಶ್ವರ ಬೆಟ್ಟಕ್ಕೆ ಆಗಮಿಸುವರು. ಬಳಿಕ ಮಲೆಮಹದೇಶ್ವರ ಬೆಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಚ್ಚತಾ ಕೆಲಸಗಾರರ ಕುಂದುಕೊರತೆಗಳ ಸಭೆ ನಡೆಸುವರು. ಬೆಳಿಗ್ಗೆ 11 ಗಂಟೆಗೆ ಪ್ರಗತಿ ಪರಿಶೀಲನಾ ಸಭೆ ನಡೆಸುವರು. ಮಧ್ಯಾಹ್ನ 1 ಗಂಟೆಗೆ ಮೈಸೂರಿಗೆ ತೆರಳುವರು ಎಂದು ಆಯೋಗದ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ. 20ರಂದು ಹೊಂಗನೂರಿನಲ್ಲಿ ಅಂತರ ರಾಷ್ಟ್ರೀಯ ಮಕ್ಕಳ ಹಕ್ಕುಗಳ ದಿನಾಚರಣೆ

ಚಾಮರಾಜನಗರ, ನ. 16 - ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಇವರುಗಳ ಸಹಯೋಗದೊಂದಿಗೆ ನವೆಂನರ್ 20ರಂದು ಬೆಳಿಗ್ಗೆ 10 ಗಂಟೆಗೆ ಹೊಂಗನೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಅಂತರ ರಾಷ್ಟ್ರೀಯ ಮಕ್ಕಳ ಹಕ್ಕುಗಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸಿಜೆಎಂ ಅವರು ಕಾರ್ಯಕ್ರಮ ಉದ್ಘಾಟಿಸುವರು. ಹೊಂಗನೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಅಧ್ಯಕ್ಷತೆ ವಹಿಸುವರು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವೈದ್ಯಕೀಯ ಸೇವೆಗೆ ಕೊರತೆಯಾಗದಂತೆ ಕಾರ್ಯ ನಿರ್ವಹಿಸಲು ಡಿಸಿ ಸೂಚನೆ


ಚಾಮರಾಜನಗರ, ನ. 16 - ಖಾಸಗಿ ವೈದ್ಯಕೀಯ ಸಂಸ್ಥೆ ಹಾಗೂ ಆಸ್ಪತ್ರೆಗಳ ವೈದ್ಯರು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ವೈದ್ಯರು ಹಾಗೂ ವೈದ್ಯಕಿಯೇತರ ಸಿಬ್ಬಂದಿ ರಜೆಯ ಮೇಲೆ ತೆರಳದೆ 24*7 ಅವಧಿಯಲ್ಲಿಯೂ ಯಾವುದೇ ವೈದ್ಯಕೀಯ ಸೇವೆಗೆ ಕೊರತೆಯಾಗದಂತೆ ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಬಿ. ರಾಮು ಅವರು ಸೂಚನೆ ನೀಡಿದ್ದಾರೆ.
ಖಾಸಗಿ ವೈದ್ಯಕೀಯ ಸಂಸ್ಥೆ ಹಾಗೂ ಆಸ್ಪತ್ರೆಗಳ ವೈದ್ಯರು ಮುಷ್ಕರ ಮುಂದುವರೆಸಿರುವ ಹಿನ್ನೆಲೆಯಲ್ಲಿ ವೈದ್ಯರು ಹಾಗೂ ವೈದ್ಯಕೇತರ ಸಿಬ್ಬಂದಿ ರಜೆ ಮೇಲೆ ತೆರಳುವಂತಿಲ್ಲ. ಖಾಸಗಿ ವೈದ್ಯರ ಮುಷ್ಕರದಿಂದ ಯಾವುದೇ ಅನಾಹುತ ಸಂಭವಿಸದಂತೆ ದಿನದ 24 ಗಂಟೆಗಳಲ್ಲೂ ಸಾರ್ವಜನಿಕರಿಗೆ ವೈದ್ಯಕೀಯ ಸೌಲಭ್ಯ ದೊರೆಯಲು ಅಗತ್ಯ ಮುನ್ನೆಚ್ಚರಿಕೆಗೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.
ಸಾರ್ವಜನಿಕರಿಗೆ ಚಿಕಿತ್ಸೆ ದೊರಕುವಲ್ಲಿ ಯಾವುದೇ ಲೋಪ ಉಂಟಾಗಬಾರದು. ಜಿಲ್ಲೆಯಲ್ಲಿರುವ ಎಲ್ಲ ಆರೋಗ್ಯ ಇಲಾಖೆಯ ಕಾರ್ಯಕ್ರಮ ಅಧಿಕಾರಿಗಳು, ತಾಲೂಕು ಆರೋಗ್ಯ ಅಧಿಕಾರಿಗಳು, ಆರ್‍ಬಿಎಸ್‍ಕೆ ಕಾರ್ಯಕ್ರಮದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು, ನೋಡಲ್ ಅಧಿಕಾರಿಗಳು, ತಾಲೂಕಿನಲ್ಲಿರುವ 24*7 ಪ್ರಾಥಮಿಕ ಆರೋಗ್ಯ ಕೇಂದ್ರವನ್ನೂ ಒಳಗೊಂಡಂತೆ ಎಲ್ಲ ಆರೋಗ್ಯ ಸಂಸ್ಥೆಗಳಲ್ಲಿ  ಮುಂದಿನ ಆದೇಶದವರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು ಹೊರಡಿಸಿರುವ ಸುತ್ತೋಲೆ ಅನ್ವಯ ಪೂರ್ಣ ಪ್ರಮಾಣದಲ್ಲಿ ಕರ್ತವ್ಯ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ನ.17ರಂದು ಜಿಪಂ ಕೆಡಿಪಿ ಸಭೆ

ಚಾಮರಾಜನಗರ, ನ. 16 - ಜಿಲ್ಲೆಯ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಮಾಸಿಕ ಪ್ರಗತಿ ಪರಿಶೀಲನಾ ಸಭೆಯು ಅಧ್ಯಕ್ಷರಾದ ಎಂ. ರಾಮಚಂದ್ರ ಅವರ ಅಧ್ಯಕ್ಷತೆಯಲ್ಲಿ ನವೆಂಬರ್ 17ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಿಗದಿಯಾಗಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಪ್ರಟಣೆಯಲ್ಲಿ ತಿಳಿಸಿದ್ದಾರೆ.



     

ನವೆಂಬರ್ 17 ಮತ್ತು 18ರಂದು ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ

ಚಾಮರಾಜನಗರ, ನ. 16:- ಸಕ್ಕರೆ ಮತ್ತು ಸಣ್ಣ ಕೈಗಾರಿಕೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಸಿ. ಮೋಹನಕುಮಾರಿ (ಗೀತಾ ಮಹದೇವಪ್ರಸಾದ್) ಅವರು ನವೆಂಬರ್ 17 ಮತ್ತು 18ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ನವೆಂಬರ್ 17ರಂದು ಬೆಳಿಗ್ಗೆ 11 ಗಂಟೆಗೆ ಗುಂಡ್ಲುಪೇಟೆಗೆ ಆಗಮಿಸುವ ಸಚಿವರು ಜೆ.ಎಸ್.ಎಸ್ ಸಂಸ್ಥೆಯ ವತಿಯಿಂದ ಅಯೋಜಿಸಲಾಗಿರುವ ಕವಿಗೋಷ್ಠಿ ಕಾರ್ಯಕ್ರಮದÀಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 2.30 ಗಂಟೆಗೆ ಗುಂಡ್ಲುಪೇಟೆ ಪಟ್ಟಣದಲ್ಲಿ ಸಾರ್ವಜನಿಕರನ್ನು ಭೇಟಿ ಮಾಡುವರು.
ನವೆಂಬರ್ 18ರಂದು ಬೆಳಿಗ್ಗೆ 10 ಗಂಟೆಗೆ ಚಾಮರಾಜನಗರಕ್ಕೆ ಆಗಮಿಸಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 2.30 ಗಂಟೆಗೆ ಗುಂಡ್ಲುಪೇಟೆಗೆ ತೆರಳಿ ಸಾರ್ವಜನಿಕರನ್ನು ಭೇಟಿ ಮಾಡುವರು ಎಂದು ಸಚಿವರ ಅಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


 































                                                                                                   


                                                                                                                                                                                       


























































   




No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು