ಆದರ್ಶ ಗ್ರಾಮ ಯೋಜನೆ : ಡಿಸಂಬರ್‍ನಲ್ಲಿ ಕಾಮಗಾರಿ ಆರಂಭಿಸಲು ಸಿದ್ದತೆ ಕೈಗೊಳ್ಳಲು ಧ್ರುವನಾರಾಯಣ ಸೂಚನೆ
ಚಾಮರಾಜನಗರ: ನ 19 - ಸಂಸದರ ಆದರ್ಶ ಗ್ರಾಮ ಯೋಜನೆಗೆ ಆಯ್ಕೆಯಾಗಿರುವ ತಾಲೂಕಿನ ದೊಡ್ಡಮೋಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಡಿಸೆಂಬರ್ ಮೊದಲ ವಾರ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಅಗತ್ಯ ಸಿದ್ದತೆ ಕೈಗೊಳ್ಳುವÀಂತೆ ಲೋಕಸಭಾ ಸದಸ್ಯರಾದ ಆರ್.ಧ್ರುವನಾರಾಯಣ ಅಧಿಕಾರಿಗಳಿಗೆ ಸೂಚಿಸಿದರು.ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಂಸದರ ಆದರ್ಶ ಗ್ರಾಮ ಯೋಜನಗೆ ಆಯ್ಕೆಯಾಗಿರುವ ಗ್ರಾಮಗಳಲ್ಲಿ ಅಭಿವೃದ್ಧಿ ಕಾಯಕ್ರಮ ಕೈಗೊಳ್ಳುವ ಸಂಬಂಧ ನಡೆದ ಅಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮ ಪಂಚಾಯಿತಿ ಕೇಂದ್ರವಾಗಿರುವ ದೊಡ್ಡಮೋಳೆ ಹಾಗೂ ಇದರ ವ್ಯಾಪ್ತಿಗೆ ಒಳಪಡುವ ದೊಳ್ಳಿಪುರ, ಬ್ಯಾಡಮೂಡ್ಲು ಗ್ರಾಮಗಳನ್ನು ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಅಭಿವೃದ್ದಿ ಪಡಿಸಬೇಕಿದೆ. ಈ ಸಂಬಂಧ ಎಲ್ಲ ರೂಪೂರೇಷೆಗಳನು ನವೆಂಬರ್ ಅಂತ್ಯದೊಳಗೆ ಅಂತಿಮಗೊಳಿಸಬೇಕು. ಡಿಸೆಂಬರ್‍ನಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಆರಂಭಿಸಬೇಕು ಎಂದು ತಿಳಿಸಿದರು.
ನವೆಂಬರ್ ಅಂತ್ಯದೊಳಗೆ ದೊಡ್ಡಮೋಳೆ ಗ್ರಾಮ ಪಂಚಾಯಿತಿಗೆ ಸೇರಿದ ಗ್ರಾಮಗಳಿಗೆ ಅಧಿಕಾರಿಗಳು ಭೇಟಿ ನೀಡಬೇಕು. ಈಗಾಗಲೇ ವಿವಿಧ ಇಲಾಖೆಗಳು ಗ್ರಾಮಗಳ ಅಭಿವೃದ್ಧಿ ಸಂಬಂಧ ತಯಾರಿಸಿರುವ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಹೇಗೆ ಜಾರಿಗೆ ಬರಬೇಕು ಎಂಬುದರ ಕುರಿತು ಗ್ರಾಮದಲ್ಲಿ ಜತೆ ಚರ್ಚಿಸಬೇಕು. ತಾವು ಸಹ ಇಲಾಖೆಯ ಅಧಿಕಾರಿಗಳ ಜತೆಯಿದ್ದು ಗ್ರಾಮ ಸಂಚಾರ ಮಾಡುವುದಾಗಿ ತಿಳಿಸಿದರು.
ಗ್ರಾಮಕ್ಕೆ ಭೇಟಿ ನೀಡಿದ ಆಯಾಯ ಇಲಾಖೆಯ ಅಧಿಕಾರಿಗಳು ಗ್ರಾಮ ಸಭೆ ನಡೆಸಬೇಕು. ಯೋಜನೆಯಡಿ ಕೈಗೊಳ್ಳಲಿರುವ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಸ್ಥಳೀಯರಿಗೆ ಮಾಹಿತಿ ನೀಡಬೇಕು. ಇದರಿಂದ ಗ್ರಾಮದಲ್ಲಿ ಯಾವ ಕಾರ್ಯಗಳು ನಡೆಯಲಿವೆ ಎಂಬುದು ಮನವರಿಕೆ ಆಗಲಿದೆ ಎಂದು ಹೇಳಿದರು.
ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ರೇಷ್ಮೆ, ಮೀನುಗಾರಿಕೆ ಇಲಾಖೆಗಳ ಅಧಿಕಾರಿಗಳು ಗ್ರಾಮಗಳಿಗೆ ತೆರಳಿ ಅಭಿವೃದ್ಧಿ ಪರ ಚಟುವಟಿಕೆಗಳನ್ನು ಕೈಗೊಳ್ಳುವಂತೆ ಉತ್ತೇಜಿಸಬೇಕು. ಯೋಜನೆಯ ಫಲ ಹೆಚ್ಚು ಫಲಾನುಭವಿಗಳಿಗೆ ತಲುಪಿ ಅನುಕೂಲ ಆಗುವಂತೆ ಸಂಬಂಧಪಟ್ಟ ಇಲಾಖೆಗಳು ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಸೂಚಿಸಿದರು.
ಶಿಕ್ಷಣ, ಆರೋಗ್ಯ, ಸಾಕ್ಷರತೆ, ಗ್ರಾಮ ನೈರ್ಮಲ್ಯ ಕಾಪಾಡುವ ಸಂಬಂಧ ಕಾರ್ಯಾಗಾರ ನಡೆಸಬೇಕು. ಮೂಲ ಸೌಲಭ್ಯಗಳನ್ನು ಕಲ್ಪಿಸಲು ಆದ್ಯತೆ ನೀಡಬೇಕು. ಗ್ರಾಮೀಣ ನಿರುದ್ಯೋಗಿ ಯುವಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಬೇಕು. ಯುವಕರನ್ನು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕು. ಸ್ಥಳೀಯರ ಅಪೇಕ್ಷೆಗೆ ಅನುಗುಣವಾಗಿ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಬಿ.ರಾಮು ಮಾತನಾಡಿ, ಕಾಲಮಿತಿಯೊಳಗೆ ಕೆಲಸ ಮಾಡಲಾಗುವುದು. ಗ್ರಾಮ ಸಭೆ ನಡೆಸಲು ಹಾಗೂ ಕಾಮಗಾರಿಗಳ ಆರಂಭಕ್ಕೆ ಪೂರ್ವ ಪ್ರಕ್ರಿಯೆಗಳನ್ನು ಏರ್ಪಾಡು ಮಾಡಲಾಗುವುದು ಎಂದರು.
ಜಿಪಂ ಸಿಇಒ ಡಾ.ಕೆ.ಹರೀಶಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯತ್ರಿ, ತಾಪಂ ಇಒ ರಮೇಶ್, ಉಪ ಕೃಷಿ ನಿರ್ದೇಶಕ ಯೋಗೆಶ್ , ಆಹಾರ ಇಲಾಖೆ ಉಪ ನಿರ್ದೇಶಕ ಆರ್.ರಾಚಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಪ್ರಸಾದ್, ಪಶು ಪಾಲನೆ ಮತ್ತು ಸಂಗೋಪನೆ ಇಲಾಖೆಯ ಉಪ ನಿರ್ದೇಶಕ ವೀರಯ್ಯ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
No comments:
Post a Comment