ಕಡೆಯ ಕಾರ್ತಿಕ ಸೋಮವಾರದ ಪ್ರಯುಕ್ತ ಶ್ರೀ ಮಹದೇಶ್ವರ ಸ್ವಾಮಿಗೆ ವಿಷೇಶ ಪೂಜೆ
ಕಡೆಯ ಕಾರ್ತಿಕ ಸೋಮವಾರದ ಪ್ರಯುಕ್ತ ಶ್ರೀ ಮಹದೇಶ್ವರ ಸ್ವಾಮಿಗೆ ವಿಷೇಶ ಪೂಜೆ, ದೀಪೋತ್ಸವ ಹಾಗು ರಾತ್ರಿ ತೆಪ್ಪೋತ್ಸವ ಬಹಳ ವಿಂಜೃಂಭಣೆಯಿಂದ ಜರುಗಿತು,
ಹಾಗು ಶ್ರೀ ಸ್ವಾಮಿಯ ದರ್ಶನಕ್ಕೆ ಆಗಮಿಸಿದ್ದ ಸಾವಿರಾರು ಭಕ್ತರು ತಮ್ಮ ಹರಕೆ,ಪೂಜೆಗಳನ್ನು ನೆರವೇರಿಸಿದರು,
ಪ್ರಾಧಿಕಾರದ ವತಿಯಿಂದ ಬಂದಿದ್ದ ಭಕ್ತಾಧಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ,ಶೌಚಾಲಯದ ವ್ಯವಸ್ಥೆ, ವಿಶೇಷ ದಾಸೋಹ ಹಾಗು ನೆರಳಿನ ವ್ಯವಸ್ಥೆಯನ್ನು ಸಮರ್ಪಕವಾಗಿ ಕಲ್ಪಿಸಿಕೊಡಲಾಯಿತು
,ಇದೇ ವೇಳೆ ಪ್ರಾಧಿಕಾರದ ಕಾರ್ಯದರ್ಶಿಗಳಾದ ಶ್ರೀಮತಿ ಎಂ.ಜೆ.ರೂಪಾ ಕ.ಆ.ಸೇ(ಕಿ.ಶ್ರೇ), ಉಪಕಾರ್ಯದರ್ಶಿಗಳಾದ ಶ್ರೀ ಎಂ ಬಸವರಾಜು,ಶ್ರೀ ಮಾಧುರಾಜು ಅಧೀಕ್ಷಕರು, ಹಾಗು ದೇವಸ್ಥಾನದ ಎಲ್ಲಾ ನೌಕರ ವರ್ಗದವರು, ಬೇಡಗಂಪಣ ಅರ್ಚಕ ವೃಂದದವರು ಹಾಗು ಸಹಸ್ರಾರು ಭಕ್ತರು ಪಾಲ್ಗೊಂಡು ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾದರು.
ನ. 14 ರಿಂದ ಅಖಿಲ ಭಾರತ ಸಹಕಾರ ಸಪ್ತಾಹ
ಚಾಮರಾಜನಗರ, ನ. 13 :- ಚಾಮರಾಜನಗರ ಜಿಲ್ಲಾ ಸಹಕಾರ ಒಕ್ಕೂಟವು ಜಿಲ್ಲೆಯಲ್ಲಿ ನವೆಂಬರ್ 14 ರಿಂದ 20ರವರೆಗೆ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಆಚರಿಸುತ್ತಿದೆ.ನವೆಂಬರ್ 14ರಂದು ರಾಮಸಮುದ್ರದ ಡಾ. ರಾಜ್‍ಕುಮಾರ್ ಸಭಾಂಗಣದಲ್ಲಿ ಸಹಕಾರ ಸಂಸ್ಥೆಗಳ ಮೂಲಕ ಉತ್ತಮ ಆಡಳಿತ ಮತ್ತು ವೃತ್ತಿಪರತೆ ಕುರಿತು ಕಾರ್ಯಕ್ರಮ ನಡೆಯಲಿದೆ. ನವೆಂಬರ್ 15ರಂದು ಯಳಂದೂರಿನಲ್ಲಿ ಸಹಕಾರ ಸಂಸ್ಥೆಗಳು : ಉತ್ಪಾದಕರಿಂದ ಗ್ರಾಹಕರವರೆಗೆ ಕುರಿತು ಕಾರ್ಯಕ್ರಮ, 16ರಂದು ಪಣ್ಯದಹುಂಡಿಯ ಎಂಪಿಸಿಎಸ್‍ನಲ್ಲಿ ಸಹಕಾರ ಅಭಿವೃದ್ಧಿಗೆ ಶಾಸನವನ್ನು ಸಶಕ್ತಗೊಳಿಸುವಿಕೆ ಕುರಿತು, 17ರಂದು ಗುಂಡ್ಲುಪೇಟೆಯಲ್ಲಿ ಸಾರ್ವಜನಿಕ-ಖಾಸಗಿ-ಸಹಕಾರ ಸಹಭಾಗಿತ್ವ ಕುರಿತು ಕಾರ್ಯಕ್ರಮ ನಡೆಯಲಿದೆ. 18ರಂದು ಕೊಳ್ಳೇಗಾಲದಲ್ಲಿ ತಾಂತ್ರಿಕ ಜಾಗೃತಿ ಮತ್ತು ನಗದು ರಹಿತ ಪಾವತಿ ಮೂಲಕ ಆರ್ಥಿಕ ಸೇರ್ಪಡೆಯಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಕುರಿತು, 19ರಂದು ಗುಂಡ್ಲುಪೇಟೆಯಲ್ಲಿ ಅವಕಾಶ ವಂಚಿತ ಮತ್ತು ಆರ್ಥಿಕ ಅಬಲ ವರ್ಗದವರಿಗಾಗಿ ಸಹಕಾರಿ ಸಂಸ್ಥೆಗಳು ಕುರಿತು ಹಾಗೂ ನವೆಂಬರ್ 20ರಂದು ಕೊಳ್ಳೇಗಾಲದಲ್ಲಿ ಕೌಶಲ್ಯ ಅಭಿವೃದ್ಧಿಯಲ್ಲಿ ಸಹಕಾರ ಸಂಸ್ಥೆಗಳ ಪ್ರಮುಖ ಸಹಭಾಗಿತ್ವ ಕುರಿತು ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾ ಸಹಕಾರ ಒಕ್ಕೂಟದ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ. 14ರಂದು ವಿಶೇಷ ಉಪನ್ಯಾಸ ಕಾರ್ಯಕ್ರಮ
ಚಾಮರಾಜನಗರ, ನ. 13 (ಕರ್ನಾಟಕ ವಾರ್ತೆ):- ನಗರದ ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ವಾಣಿಜ್ಯ ವಿಭಾಗವು ನವೆಂಬರ್ 14ರಂದು ಮಧ್ಯಾಹ್ನ 12 ಗಂಟೆಗೆ ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ಸುವರ್ಣ ಗಂಗೋತ್ರಿ ಸಭಾಂಗಣದಲ್ಲಿ ಗ್ರಾಹಕರ ಹಕ್ಕುಗಳು ಮತ್ತು ಕರ್ತವ್ಯಗಳು ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಿದೆ.ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಗ್ರಾಹಕರ ವೇದಿಕೆ ಅಧ್ಯಕ್ಷರೂ ಆದ ಕೆ.ಎಲ್ ಶಿವಲಿಂಗೇಗೌಡರು ಕಾರ್ಯಕ್ರಮ ಉದ್ಘಾಟಿಸಿ ಉಪನ್ಯಾಸ ನೀಡುವರು.
ಡಾ. ಬಿ. ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಪ್ರೊ. ಶಿವಬಸವಯ್ಯ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
ಸ್ತ್ರೀಶಕ್ತಿ ಗುಂಪುಗಳಿಗೆ ಬಡ್ಡಿರಹಿತ ಸಾಲ : ಅರ್ಜಿ ಆಹ್ವಾನ
ಚಾಮರಾಜನಗರ, ನ. 13 (- ಮಹಿಳಾ ಅಭಿವೃದ್ಧಿ ನಿಗಮವು 2017-18ನೇ ಸಾಲಿಗೆ ಸ್ತ್ರೀಶಕ್ತಿ ಗುಂಪುಗಳು ಆರ್ಥಿಕ ಚಟುವಟಿಕೆ ಕೈಗೊಳ್ಳಲು 2 ಲಕ್ಷ ರೂ.ವರೆಗೆ ಬಡ್ಡಿರಹಿತವಾಗಿ ಸಾಲ ನೀಡಲಿದ್ದು ಅರ್ಜಿ ಆಹ್ವಾನಿಸಿದೆ.ಸ್ತ್ರೀಶಕ್ತಿ ಗುಂಪು ಆರ್ಥಿಕವಾಗಿ ಸದೃಢವಾಗಿದ್ದು ಗುಂಪಿನ ಉಳಿತಾಯ 2 ಲಕ್ಷ ರೂ.ಗೂ ಮೀರಿರಬೇಕು. ಈಗಾಗಲೇ ಕಿರುಸಾಲ ಯೋಜನೆಯಡಿ ಪ್ರಯೋಜನ ಪಡೆಯದೆ ಇರುವ ಸಂಘಗಳು ಮಾತ್ರ ಸಾಲ ಪಡೆಯಲು ಅರ್ಹರು. ಅರ್ಜಿಯನ್ನು ಆಯಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಿಂದ ಪಡೆದು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ನವೆಂಬರ್ 18ರೊಳಗೆ ಸಲ್ಲಿಸಬೇಕು.
ಅರ್ಜಿ ಹಾಗೂ ಮಾಹಿತಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ, ಚಾಮರಾಜನಗರ, ದೂ.ಸಂ. 08226-222603, ಕೊಳ್ಳೇಗಾಲ 08224-252367, ಗುಂಡ್ಲುಪೇಟೆ 08229-222286 ಹಾಗೂ ಯಳಂದೂರು 08226-240224 ಸಂಪರ್ಕಿಸುವಂತೆ ಜಿಲ್ಲಾ ಮಹಿಳಾ ಅಭಿವೃದ್ಧಿ ನಿಗಮದ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ. 14ರಂದು ಜಿಲ್ಲಾ ಅತ್ಯುತ್ತಮ ಯುವಸಂಘ ಪ್ರಶಸ್ತಿ ವಿತರಣೆ ಕಾರ್ಯಕ್ರಮ
ಚಾಮರಾಜನಗರ, ನ. 13:- ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಹಾಗೂ ಹುರಳಿನಂಜನಪುರದ ಉದಯ್ ಭೀಮ್ ಯುವಜನ ಸಂಘ ಇವರ ಸಹಯೋಗದೊಂದಿಗೆ ನವೆಂಬರ್ 14ರಂದು ಬೆಳಿಗ್ಗೆ 11 ಗಂಟೆಗೆ ನಗರದ ಸರ್ಕಾರಿ ಕೈಗಾರಿಕಾ ಸಂಸ್ಥೆಯಲ್ಲಿ ನೆಹರು ಯುವ ಕೇಂದ್ರದ ಸ್ಥಾಪನಾ ದಿವಸದ ಅಂಗವಾಗಿ ಜಿಲ್ಲಾ ಅತ್ಯುತ್ತಮ ಯುವ ಸಂಘ ಪ್ರಶಸ್ತಿ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಜಿಲ್ಲಾಧಿಕಾರಿ ಬಿ. ರಾಮು ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ ಪ್ರಶಸ್ತಿ ವಿತರಿಸುವರು. ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಗೋವಿಂದರಾಜು ಅಧ್ಯಕ್ಷತೆ ವಹಿಸುವರು.
ನಂಜನಗೂಡು ನಗರಸಭೆ ಪೌರಾಯುಕ್ತರಾದ ವಿಜಯ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಅಧ್ಯಕ್ಷರಾದ ಎಲ್. ಸುರೇಶ್, ಸಾಧನಾ ಸಂಸ್ಥೆ ನಿರ್ದೇಶಕರಾದ ಟಿ.ಜೆ. ಸುರೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
ಸಹಕಾರ ಸಂಘ ರದ್ದು : ಆಕ್ಷೇಪಣೆಗೆ ಆಹ್ವಾನ
ಚಾಮರಾಜನಗರ, ನ. 13 - ಕೊಳ್ಳೇಗಾಲ ತಾಲೂಕಿನ ಬಸ್ತೀಪುರದ ಕನಕ ವಿವಿದೋದ್ದೇಶ ಸಹಕಾರ ಸಂಘವು ಬೈಲಾ ರೀತ್ಯ ಉದ್ದೇಶಗಳನ್ನು ಈಡೇರಿಸದೆ ಕಾರ್ಯ ಸ್ಥಗಿತಗೊಂಡಿರುವುದರಿಂದ ಸಮಾಪನೆಗೊಳಿಸಲು ಸಮಾಪನಾಧಿಕಾರಿಯನ್ನು ನೇಮಿಸಿದೆ.
ಸಮಾಪನಾಧಿಕಾರಿಯವರು ಸಂಘದ ಸಮಾಪನಾ ಕಾರ್ಯವನ್ನು ಪೂರ್ಣಗೊಳಿಸಿ ಸಮಾಪನಾ ಕಾರ್ಯ ಪ್ರಗತಿ ಸಾಧಿಸಬೇಕಾದ ಹಿನ್ನೆಲೆಯಲ್ಲಿ ಸಂಘವನ್ನು ಮುನ್ನಡೆಸಿಕೊಂಡು ಹೋಗಲು ಸಂಘದ ಯಾವುದೇ ಸದಸ್ಯರು ಇದುವರೆವಿಗೂ ಆಸಕ್ತಿ ತೋರಿಸದ ಕಾರಣ ಸಂಘದ ನೋಂದಣಿ ರದ್ದತಿಗೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಗಿದೆ.
ಸಂಘದ ನೋಂದಣಿ ರದ್ದುಗೊಳಿಸುವ ಸಂಬಂಧ ಸಂಘದ ಸದಸ್ಯರುಗಳಾಗಳಿ, ಸಾರ್ವಜನಿಕರಿಂದಾಗಲಿ ಯಾವುದಾದರೂ ಆಕ್ಷೇಪಣೆ ಇದ್ದಲ್ಲಿ 15 ದಿನಗಳೊಳಗೆ ಸಮಾಪನಾಧಿಕಾರಿಗಳನ್ನು ಖುದ್ದು ಭೇಟಿ ಮಾಡಿ ಲಿಖಿತವಾಗಿ ಆಕ್ಷೇಪಣೆ ಸಲ್ಲಿಸಲು ತಿಳಿಸಿದೆ. ಸಂಘವನ್ನು ಪುನಶ್ಚೇತನಗೊಳಿಸಲು ಆಸಕ್ತಿ ಇದ್ದಲ್ಲಿ ಲಿಖಿತ ಮನವಿಯನ್ನು ಸಲ್ಲಿಸುವುದು.
ನಿಗದಿತ ಅವಧಿಯೊಳಗೆ ಯಾವುದೇ ಆಕ್ಷೇಪಣೆಗಳು, ಅಹವಾಲುಗಳು ಸ್ವೀಕೃತವಾಗದಿದ್ದಲ್ಲಿ ಸಂಘದ ನೋಂದಣಿ ಸಂಖ್ಯೆ ರದ್ದತಿಗೆ ಯಾರಿಂದಲೂ ಯಾವುದೇ ಆಕ್ಷೇಪಣೆಗಳು ಇಲ್ಲವೆಂದು ಹಾಗೂ ಸಂಘದ ಪುನಶ್ಚೇತನಕ್ಕೆ ಯಾವ ಸದಸ್ಯರಿಂದಲೂ ಆಸಕ್ತಿ ಇಲ್ಲವೆಂದು ಪರಿಗಣಿಸಿ ಸಂಘದ ನೋಂದಣಿ ರದ್ದತಿಗೆ ಸಕ್ಷಮ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ನ. 25ರಂದು ಹೊನ್ನಹಳ್ಳಿ ಗ್ರಾಮದಲ್ಲಿ ಅಂಚೆ ಸಂತೆ
ಚಾಮರಾಜನಗರ, ನ. 13 - ಅಂಚೆ ಇಲಾಖೆಯು ಹರದನಹಳ್ಳಿ ಹೋಬಳಿಯ ಹೊನ್ನಹಳ್ಳಿ ಗ್ರಾಮದಲ್ಲಿ ನವೆಂಬರ್ 25ರಂದು ಅಂಚೆ ಸಂತೆ ಹಮ್ಮಿಕೊಂಡಿದೆ.ಅಂಚೆ ಸಂತೆಯಲ್ಲಿ ಅಂಚೆ ಕಚೇರಿ ಉಳಿತಾಯ ಖಾತೆ, ಆವರ್ತಕ ಖಾತೆ, ಸುಕನ್ಯಾ ಸಮೃದ್ಧಿ ಖಾತೆ, ಸಾರ್ವಜನಿಕ ಭವಿಷ್ಯ ನಿಧಿ ಖಾತೆ, ಪ್ರಧಾನಮಂತ್ರಿ ಜೀವನಜ್ಯೋತಿ ವಿಮಾ ಯೋಜನೆ, ಪ್ರಧಾನಮಂತ್ರಿ ಜೀವನ ಸುರಕ್ಷಾ ವಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಗ್ರಾಮೀಣ ಅಂಚೆ ಜೀವ ವಿಮೆ, ಇತರೆ ಅಂಚೆ ಜೀವವಿಮೆ ಇನ್ನಿತರ ಅಂಚೆ ಯೋಜನೆಗಳನ್ನು ಸ್ವೀಕರಿಸಲಾಗುವುದು.
ಹೊನ್ನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಅಂಚೆಸಂತೆಯ ಸದುಪಯೋಗ ಮಾಡಿಕೊಳ್ಳುವಂತೆ ಅಂಚೆ ಅಧೀಕ್ಷಕರಾದ ಜಿ.ಸಿ. ಶ್ರೀನಿವಾಸ್ ಪ್ರಕಟಣೆಯಲ್ಲಿ ಕೋರಿದ್ದಾರೆ.
ನ. 22ರಂದು ಉಪವಿಭಾಗ ಮಟ್ಟದ ಪ.ಜಾ, ಪ.ವರ್ಗ ಹಿತರಕ್ಷಣಾ ಸಮಿತಿ, ಜಾಗೃತಿ ಉಸ್ತುವಾರಿ ಸಮಿತಿ ಹಾಗೂ ಸಫಾಯಿ ಕರ್ಮಚಾರಿಗಳ ಉಸ್ತುವಾರಿ ಸಮಿತಿ ಸಭೆ : ಕುಂದುಕೊರತೆ ಸಲ್ಲಿಕೆಗೆ ಅವಕಾಶ
ಚಾಮರಾಜನಗರ, ನ. 13 :- ಕೊಳ್ಳೇಗಾಲ ಉಪವಿಭಾಗ ಮಟ್ಟದ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದವರ ಹಿತರಕ್ಷಣಾ ಸಮಿತಿ ಸಭೆಯು ನವೆಂಬರ್ 22ರಂದು ಬೆಳಿಗ್ಗೆ 11 ಗಂಟೆಗೆ, ಉಪವಿಭಾಗ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯು ಮಧ್ಯಾಹ್ನ 12 ಗಂಟೆಗೆ ಹಾಗೂ ಉಪವಿಭಾಗ ಮಟ್ಟದ ಸಫಾರಿ ಕರ್ಮಚಾರಿಗಳ ಉಸ್ತುವಾರಿ ಸಮಿತಿ ಸಭೆಯು ಮಧ್ಯಾಹ್ನ 1 ಗಂಟೆಗೆ ಕೊಳ್ಳೇಗಾಲ ಉಪವಿಭಾಗ ಕಚೇರಿಯಲ್ಲಿ ನಡೆಯಲಿದೆ.ಉಪವಿಭಾಗ ಮಟ್ಟದ ಪರಿಶಿಷ್ಟ ಜಾತಿ, ವರ್ಗ, ಸಫಾಯಿ ಕರ್ಮಚಾರಿಗಳು, ಸಂಘಸಂಸ್ಥೆಗಳು, ಸಂಬಂಧಪಟ್ಟವರು ಹಿತರಕ್ಷಣೆ ಹಾಗೂ ಕುಂದುಕೊರತೆಗಳ ಬಗ್ಗೆ ಚರ್ಚಿಸಲು ಇಚ್ಚಿಸಿದಲ್ಲಿ ಲಿಖಿತವಾಗಿ ಕೊಳ್ಳೇಗಾಲ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗೆ ನವೆಂಬರ್ 20ರೊಳಗೆ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.
ನ. 14ರಂದು ಡೇನಲ್ಮ್ ಯೋಜನೆ ಕುರಿತು ಕಾರ್ಯಾಗಾರ
ಚಾಮರಾಜನಗರ, ನ. 13 - ಡೇನಲ್ಮ್ ಯೋಜನೆಯಡಿ ಬೀದಿಬದಿ ವ್ಯಾಪಾರಿಗಳ ಸಂರಕ್ಷಣೆ, ಜೀವನೋಪಾಯ ಹಾಗೂ ನಿಯಂತ್ರಣ ಅಧಿನಿಯಮ ಕುರಿತ ಜಿಲ್ಲಾಮಟ್ಟದ ಕಾರ್ಯಾಗಾರವು ನವೆಂಬರ್ 14ರಂದು ಬೆಳಿಗ್ಗೆ 9.30 ಗಂಟೆಗೆ ನಗರದ ಜಿಲ್ಲಾಡಳಿತ ಭವವನದಲ್ಲಿರುವ ಕೆಡಿಪಿ ಸಭಾಂಗಣದಲ್ಲಿ ನಡೆಯಲಿದೆ.ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಾಗಾರದಲ್ಲಿ ಡೇನಲ್ಮ್ ಯೋಜನೆಯಡಿ ರಚಿಸಲಾಗಿರುವ ಪಟ್ಟಣ ವ್ಯಾಪಾರ ಸಮಿತಿ ಸದಸ್ಯರು, ನಗರ ಸ್ಥಳೀಯ ಸಂಸ್ಥೆ ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು ಯೋಜನೆಯ ಅನುಷ್ಠಾನದ ಪಾಲುದಾರರು ಭಾಗವಹಿಸುವರೆಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ವಿದ್ಯುತ್ ವ್ಯತ್ಯಯ
ಚಾಮರಾಜನಗರ, ನ. 13 - ಮೈಸೂರು-ಚಾಮರಾಜನಗರ ವ್ಯಾಪ್ತಿಯಲ್ಲಿ ಹೊಸದಾಗಿ 66ಕೆವಿ ವಿದ್ಯುತ್ ಮಾರ್ಗವನ್ನು ನಿರ್ಮಿಸುವ ಸಂಬಂಧ ನವೆಂಬರ್ 14ರಂದು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಚಾಮರಾಜನಗರ ವಿಭಾಗ ವ್ಯಾಪ್ತಿಯ ಕೆಲವು ಪ್ರದೇಶಗಳಲ್ಲಿ ಲೋಡ್ ರಿಸ್ಟ್ರಿಕ್ಷನ್ ಇರುತ್ತದೆ.ಈ ಹಿನ್ನಲೆಯಲ್ಲಿ ಅಂದು ಬೆಳಿಗ್ಗೆ 9ರಿಂದ 6 ಗಂಟೆಯವರೆಗೆ ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಸರಬರಾಜಾಗದೇ ವ್ಯತ್ಯಯ ಉಂಟಾಗಲಿದೆ ಎಂದು ಸೆಸ್ಕ್ ಕಾರ್ಯನಿವಾಹಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
No comments:
Post a Comment