Thursday, 8 November 2018

17-9-2018(ಹಾಸ್ಟಲ್‍ಗಳಿಗೆ ಭೇಟಿ ನೀಡಿ ಗುಣಮಟ್ಟದ ಸೌಲಭ್ಯ ಕಲ್ಪಿಸಿ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚನೆ )

ಹಾಸ್ಟಲ್‍ಗಳಿಗೆ ಭೇಟಿ ನೀಡಿ ಗುಣಮಟ್ಟದ ಸೌಲಭ್ಯ ಕಲ್ಪಿಸಿ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚನೆ 

ಚಾಮರಾಜನಗರ, ಸೆ. 17 - ಜಿಲ್ಲೆಯಲ್ಲಿರುವ ವಿವಿಧ ಇಲಾಖೆಗಳ ನಿರ್ವಹಣೆಯ ಹಾಸ್ಟಲ್‍ಗಳಿಗೆ ಅಧಿಕಾರಿಗಳು ವ್ಯಾಪಕವಾಗಿ ಭೇಟಿ ನೀಡಿ ಮೂಲ ಸೌಕರ್ಯವನ್ನು ಅಭಿವೃದ್ಧಿಗೊಳಿಸುವಂತೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ (ಎಂ.ಎಸ್.ಎಂ.ಇ ಮತ್ತು ಗಣಿ) ಸರ್ಕಾರದ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಆದ ರಾಜೇಂದರ್ ಕುಮಾರ್ ಕಠಾರಿಯಾ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಾಸ್ಟಲ್‍ಗಳ ನಿರ್ವಹಣೆಗಾಗಿ ಸರ್ಕಾರದ ಹೆಚ್ಚು ಅನುದಾನ ನೀಡುತ್ತಿದೆ. ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲ ಮಾಡಿಕೊಡುವ ದಿಸದೆಯಲ್ಲಿ ತೆರೆಯಲಾಗಿರುವ ಹಾಸ್ಟಲ್‍ಗಳಲ್ಲಿ ಸಮರ್ಪಕವಾಗಿ ಸೌಲಭ್ಯ ಕಲ್ಪಿಸಲಾಗಿದೆಯೆ?, ಊಟ, ಕೊಠಡಿ, ಶುಚಿತ್ವ ಇನ್ನಿತರ ಅಗತ್ಯ ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸಲಾಗುತ್ತಿದೆಯೆ? ಎಂಬ ಬಗ್ಗೆ ಅಧಿಕಾರಿಗಳು ಪ್ರವಾಸ ಕೈಗೊಂಡು ಪರಿಶೀಲಿಸಬೇಕು ಎಂದರು.
ಗುಣಮಟ್ಟದ ಆಹಾರ, ಉತ್ತಮ ಕೊಠಡಿಗಳ ನಿರ್ವಹಣೆ ಬಗ್ಗೆ ನಿಗಾ ವಹಿಸುವುದು ಅಧಿಕಾರಿಗಳ ಹೊಣೆಗಾರಿಕೆಯಾಗಿದೆ. ಪರಿಶೀಲನೆ ವೇಳೆ ಕಂಡುಬರುವ ಲೋಪಗಳನ್ನು ಗಮನಿಸಿ ಸೌಲಭ್ಯವನ್ನು ಸುಧಾರಣೆಗೊಳಿಸಲು ಸೂಚಿಸಬೇಕು. ಹಿರಿಯ ಅಧಿಕಾರಿಗಳು ಹಾಸ್ಟಲ್ ಸೌಲಭ್ಯಗಳನ್ನು ಗಮನಿಸಿ ಅಗತ್ಯ ನಿರ್ದೇಶನ ನೀಡಿದಾಗ ಗುಣಮಟ್ಟದ ಸೌಲಭ್ಯಗಳು ತಲುಪÀಲು ಅನುಕೂಲವಾಗುತ್ತದೆ ಎಂದು ಉಸ್ತುವಾರಿ ಕಾರ್ಯದರ್ಶಿಗಳು ತಿಳಿಸಿದರು.
ನಗರ, ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಆರಂಭಿಸಿರುವ ಮೂಲಸೌಕರ್ಯ ಕಾಮಗಾರಿಯನ್ನು ತ್ವರಿತಗೊಳಿಸಬೇಕು. ನಿರೀಕ್ಷಿತ ಮಟ್ಟದಲ್ಲಿ ಪ್ರಗತಿಯಾಗಬೇಕು. ಈ ಹಿಂದೆಯೆ ಕಾಮಗಾರಿ ಕಾರ್ಯಾದೇಶ ನೀಡಲಾಗಿರುವ ಕೆಲಸಗಳು ಏಕೆ ಕುಂಠಿತವಾಗುತ್ತಿವೆ ಎಂಬ ಬಗ್ಗೆ ಪರಿಶೀಲಿಸಬೇಕು. ಕುಡಿಯುವ ನೀರಿನ ಕಾಮಗಾರಿ ವಿಳಂಬವಾಗಿ ನಡೆಯದಂತೆ ನೋಡಿಕೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲೆಯ ಮಳೆ, ಬೆಳೆ, ಮೇವು ದಾಸ್ತಾನು ಪರಿಸ್ಥಿತಿ ಬಗ್ಗೆ ಪರಾಮರ್ಶೆ ನಡೆಸಿದ ಉಸ್ತುವಾರಿ ಕಾರ್ಯದರ್ಶಿಯವರು ಜಾನುವಾರುಗಳಿಗೆ ಕೊರತೆಯಾಗದಂತೆ ಮೇವು ದಾಸ್ತಾನು ಮಾಡಬೇಕು. ಈ ಹಿಂದೆ ತಲೆದೋರಿದ್ದ ಅಭಾವ ಪೀಡಿತ ಪ್ರದೇಶಗಳಲ್ಲಿ ಮೇವು ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಎಲ್ಲಾ ಭಾಗಗಳಲ್ಲಿಯೂ ಸಹ ಮೇವು ಸಮರ್ಪಕವಾಗಿ ದೊರೆಯಲು ಅಗತ್ಯವಿರುವ ಕ್ರಮ ವಹಿಸುವಂತೆ ಉಸ್ತುವಾರಿ ಕಾರ್ಯದರ್ಶಿ ತಿಳಿಸಿದರು.
ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಹೋಬಳಿ, ಗ್ರಾಮವಾರು ಮಟ್ಟದಲ್ಲಿ ಎಷ್ಟು ಮೇವು ದಾಸ್ತಾನು ಇದೆ ಎಂಬ ಬಗ್ಗೆ ನಿಖರವಾಗಿ ಮಾಹಿತಿ ಸಂಗ್ರಹಣೆ ಮಾಡಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದರೆ ಸಹಿಸಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಸಾಮಾಜಿಕ ಭದ್ರತಾ ಯೋಜನೆಯನ್ನು ಪರಿಶೀಲಿಸಿದ ಉಸ್ತುವಾರಿ ಕಾರ್ಯದರ್ಶಿಯವರು ಪಿಂಚಣಿ ಅರ್ಜಿಗಳನ್ನು ಶೀಘ್ರ ಕೈಗೆತ್ತಿಕೊಂಡು ವಿಲೇವಾರಿ ಮಾಡಿ ಫಲಾನುಭವಿಗಳಿಗೆ ಅನುಕೂಲ ಕಲ್ಪಿಸಬೇಕು. ಪೋಡಿ ಪ್ರಕರಣಗಳನ್ನು ಸಹ ಬಾಕಿ ಇಲ್ಲದಂತೆ ಇತ್ಯರ್ಥಗೊಳಿಸಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ದೀ ಇಲಾಖೆ ವತಿಯಿಂದ ಅನುಷ್ಠಾನಗೊಳಿಸಲಾಗುತ್ತಿರುವ ಮಾತೃಪೂರ್ಣ ಯೋಜನೆ ಬಗ್ಗೆಯೂ ಪರಿಶೀಲಿಸಿ ಸೌಲಭ್ಯಗಳು ತಲುಪುವಂತೆ ನೋಡಿಕೊಳ್ಳಬೇಕು ಎಂದರು.
ಸಾರ್ವಜನಿಕರ ಕುಂದುಕೊರತೆ, ಅಹವಾಲುಗಳನ್ನು ಆಲಿಸಿ ತ್ವರಿತವಾಗಿ ಪರಿಹರಿಸಬೇಕು. ಸ್ವೀಕರಿಸಲಾಗುವ ಪ್ರತಿ ಅರ್ಜಿಗೂ ಸೂಕ್ತ ಸ್ಪಂದನೆ ಸಿಗಬೇಕು. ಅಧಿಕಾರಿಗಳು ಅವರ ಹಂತದಲ್ಲಿ ಸಮಸ್ಯೆ ಪರಿಹರಿಸಲು ಸಾಧ್ಯವಾಗದಿದ್ದಲ್ಲಿ ಉನ್ನತ ಮಟ್ಟಕ್ಕೆ ಕಳುಹಿಸಿದಲ್ಲಿ ಪರಿಹಾರಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ. ಜನರ ಅಹವಾಲುಗಳನ್ನು ಯಾವುದೇ ಕಾರಣಕ್ಕೂ ಹಗುರವಾಗಿ ಪರಿಗಣಿಸಬಾರದು ಎಂದು ರಾಜೇಂದರ್ ಕುಮಾರ್ ಕಠಾರಿಯಾ ಅವರು ತಾಕೀತು ಮಾಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಅವರು ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಸ್ವಚ್ಚ ಭಾರತ್ ಮಿಷನ್, ಗ್ರಾಮ ವಿಕಾಸ್ ಸೇರಿದಂತೆ ವಿವಿಧ ಗ್ರಾಮಾಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಕುರಿತು ವಿವರ ನೀಡಿದರು.
ರೇಷ್ಮೆ, ತೋಟಗಾರಿಕೆ, ಆರೋಗ್ಯ, ಸಾರ್ವಜನಿಕ ಶಿಕ್ಷಣ, ಕಂದಾಯ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು, ಸಮಾಜ ಕಲ್ಯಾಣ, ಅರಣ್ಯ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ವಿವಿಧ ನಿಗಮಗಳು ಅನುಷ್ಟಾನಗೊಳಿಸುತ್ತಿರುವ ಯೋಜನೆಗಳ ಪ್ರಗತಿಯನ್ನು ವ್ಯಾಪಕವಾಗಿ ಸಭೆಯಲ್ಲಿ ಪರಿಶೀಲಿಸಲಾಯಿತು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಉಪವಿಭಾಗಾಧಿಕಾರಿ ಫೌಜಿಯಾ ತರನ್ನುಮ್, ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
    ಗುಂಡ್ಲುಪೇಟೆಯಲ್ಲಿ ಆಧಾರ್ ಅದಾಲತ್
ಚಾಮರಾಜನಗರ, ಸೆ. 17 - ಗುಂಡ್ಲುಪೇಟೆ ಪಟ್ಟಣದ ತಾಲೂಕು ಕಚೇರಿಯಲ್ಲಿ ಆಧಾರ್ ಅದಾಲತ್ ಆರಂಭವಾಗಿದ್ದು, ಸೆಪ್ಟೆಂಬರ್ 22ರ ವರೆಗೆ ನಡೆಯಲಿದೆ.
ಬೆಳಿಗ್ಗೆ 10ರಿಂದ ಸಂಜೆ 5.30 ಗಂಟೆಯವರೆಗೆ ಆಧಾರ್ ಅದಾಲತ್ ನಡೆಯಲಿದ್ದು, ಸದರಿ ಕಾರ್ಯಕ್ರಮದಲ್ಲಿ ಆಧಾರ್‍ಗೆ ಸಂಬಂಧಿಸಿದ ಎಲ್ಲಾ ತೊಂದರೆಗಳ ಸಂಬಂಧ ಅರ್ಜಿ ಸ್ವೀಕರಿಸಲಾಗುತ್ತದೆ. ಹೊಸ ನೊಂದಣಿ, ತಿದ್ದುಪಡಿಗಳನ್ನು ಈಗಾಗಲೇ ಗುಂಡ್ಲುಪೇಟೆ ತಾಲೂಕಿನ ಎಲ್ಲ ಗ್ರಾಮಪಂಚಾಯಿತಿಗಳಲ್ಲಿ ಪ್ರಾರಂಭಿಸಲಾಗಿದ್ದು, ನಾಗರಿಕರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ತಹಶೀಲ್ದಾರ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ಸೆಪ್ಟೆಂಬರ್ 18 ರಂದು ಯಳಂದೂರಿನಲ್ಲಿ ಡಿ.ಸಿ. ಅಧ್ಯಕ್ಷತೆಯಲ್ಲಿ ಜನಸಂಪರ್ಕ ಸಭೆ
ಚಾಮರಾಜನಗರ, ಸೆ. 17 - ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸುವ ಸಲುವಾಗಿ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 18 ರಂದು ಬೆಳಿಗ್ಗೆ 10-30 ಗಂಟೆಗೆ ಯಳಂದೂರಿನ ತಾಲ್ಲೂಕು ಕಚೇರಿಯಲ್ಲಿ ಜನಸಂಪರ್ಕ ಸಭೆ ಏರ್ಪಡಿಸಲಾಗಿದೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಹವಾಲುಗಳನ್ನು ನೀಡುವ ಮೂಲಕ ಜನಸಂಪರ್ಕ ಸಭೆಯ ಸದುಪಯೋಗ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆಪ್ಟೆಂಬರ್ 18ರಂದು ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮ
ಚಾಮರಾಜನಗರ, ಸೆ. 17- ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ವೆಂಕಟಯ್ಯನ ಛತ್ರ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಸಾಧನಾ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಸೆಪ್ಟೆಂಬರ್ 18ರಂದು ಬೆಳಿಗ್ಗೆ 11 ಗಂಟೆಗೆ ವಿದ್ಯಾರ್ಥಿಗಳಿಗಾಗಿ ಕಾನೂನು ಅರಿವು ಕಾರ್ಯಕ್ರಮವನ್ನು ವೆಂಕಟಯ್ಯನ ಛತ್ರದ ಸಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರಾದ ಸಿ.ಜಿ. ವಿಶಾಲಾಕ್ಷಿ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ವೆಂಕಟಯ್ಯನ ಛತ್ರದ ಸಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಂ. ಸೋಮಣ್ಣ ವಹಿಸುವರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಉಮ್ಮತ್ತೂರು ಇಂದುಶೇಖರ್, ಪ್ರಧಾನ ಕಾರ್ಯದರ್ಶಿ ಆರ್. ಅರುಣ್ ಕುಮಾರ್, ಬಾಲ ನ್ಯಾಯ ಮಂಡಳಿಯ ಸದಸ್ಯರಾದ ಟಿ.ಜೆ. ಸುರೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ವಕೀಲರಾದ ಎ. ರಮೇಶ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.

ಸೆಪ್ಟೆಂಬರ್ 18ರಂದು ದೂರಸಂಪರ್ಕ ಗ್ರಾಹಕರ ಜಾಗೃತಿ ಕಾರ್ಯಕ್ರಮ
ಚಾಮರಾಜನಗರ, ಸೆ. 17 - ಬೆಂಗಳೂರಿನ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ವತಿಯಿಂದ ಗ್ರಾಹಕರ ಹಕ್ಕು ಮತ್ತು ಸವಲತ್ತುಗಳ ಬಗ್ಗೆ ಜಾಗೃತಿ ಮೂಡಿಸುವ ಗ್ರಾಹಕರ ಸಂಪರ್ಕ ಕಾರ್ಯಕ್ರಮವನ್ನು ಸೆಪ್ಟೆಂಬರ್ 18ರಂದು ಮಧ್ಯಾಹ್ನ 2 ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಅವರಣದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ದೂರಸಂಪರ್ಕ ಗ್ರಾಹಕರ ಹಕ್ಕು, ಸವಲತ್ತುಗಳು, ಸೇವಾಸಂಸ್ಥೆಗಳು ಗ್ರಾಹಕರಿಗೆ ಸೇವೆಯನ್ನು ಹೇಗೆ ಪೂರೈಸಬೇಕು ಮತ್ತು ಗ್ರಾಹಕರ ಹಿತಾಸಕ್ತಿಗಳ ಬಗ್ಗೆ ಟ್ರಾಯ್ ತೆಗೆದುಕೊಂಡ ಕ್ರಮಗಳ ಬಗ್ಗೆ ಟ್ರಾಯ್ ಸಲಹೆಗಾರರಾದ ಶ್ರೀನಿವಾಸ ಎಸ್. ಗಲಗಲಿ ಅವರು ತಿಳಿಸಿಕೊಡಲಿದ್ದಾರೆ.
ದೂರು ನಿವಾರಣಾ ವ್ಯವಸ್ಥೆ, ಮೇಲ್ಮನವಿ ಪ್ರಾಧಿಕಾರ, ಮೊಬೈಲ್ ಪೋರ್ಟಬಿಲಿಟಿ, ಅನಪೇಕ್ಷಿತ ವಾಣಿಜ್ಯ ಸಂದೇಶಗಳ ಮೇಲೆ ನಿಷೇಧ, ಮೌಲ್ಯವರ್ಧಿತ ಸೇವೆ, ಕೇಬಲ್ ಡಿಜಿಟಲಿಕರಣದ ಲಾಭ ಸೇರಿದಂತೆ ಇತರೆ ದೂರಸಂಪರ್ಕ ವಿಷಯಗಳ ಕುರಿತು ಕಾರ್ಯಕ್ರಮದಲ್ಲಿ ಚರ್ಚಿಸಲಾಗುವುದು.
ಇದೇ ವೇಳೆ ಗ್ರಾಹಕರ ಕೈಪಿಡಿಯನ್ನು ಉಚಿತವಾಗಿ ವಿತರಿಸಲಾಗುತ್ತದೆ. ಹೆಚ್ಚಿನ ವಿವರಗಳಿಗೆ ಟ್ರಾಯ್‍ನ ಹಿರಿಯ ಸಂಶೋಧನಾ ಅಧಿಕಾರಿ ಎಚ್.ಸಿ. ಲತಾ (ಮೊ. ಸಂ: 9449850060) ಅವರನ್ನು ಸಮಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.




No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು