Thursday, 8 November 2018

02-11-2018 (ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯ ಸಮರ್ಪಕ ನಿರ್ವಹಣೆಗೆ ಜಿಲ್ಲಾಧಿಕಾರಿ ಸೂಚನೆ)

ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯ ಸಮರ್ಪಕ ನಿರ್ವಹಣೆಗೆ ಜಿಲ್ಲಾಧಿಕಾರಿ ಸೂಚನೆ

ಚಾಮರಾಜನಗರ, ನ. 02 - ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯವನ್ನು ಅಧಿಕಾರಿಗಳು ಸಮರ್ಪಕವಾಗಿ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯ ಕುರಿತು ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದಿನಾಂಕ 1.1.2019 ಕ್ಕೆ ಅರ್ಹತಾ ದಿನಾಂಕ ನಿಗಧಿಪಡಿಸಿ, ಭಾವಚಿತ್ರವಿರುವ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯವನ್ನು ಜಿಲ್ಲೆಯಲ್ಲಿ ಈಗಾಗಲೇ ಆರಂಭಿಸಲಾಗಿದೆ. ಮತದಾರರ ಪಟ್ಟಿಯಿಂದ ಅರ್ಹರು ಯಾವುದೇ ಕಾರಣಕ್ಕೆ ಹೊರಗುಳಿಯದಂತೆ ಅತ್ಯಂತ ಜಾಗರೂಕತೆಯಿಂದ ಪರಿಷ್ಕರಣೆ ಕಾರ್ಯ ಮಾಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮತದಾರರ ಪಟ್ಟಿಯಲ್ಲಿ ಕಂಡುಬರುವ ನ್ಯೂನತೆಗಳನ್ನು ಸರಿಪಡಿಸಿ, ಮತದಾರರ ಪಟ್ಟಿ ಗುಣಮಟ್ಟವನ್ನು ವೃದ್ದಿಸಲು ನವೆಂಬರ್ 30 ರವರೆಗೆ ವಿಶೇಷ ಆಂದೋಲನ ನಡೆಸಬೇಕು. ಮತದಾರರ ಹೆಸರು, ಎಪಿಕ್ ಸಂಖ್ಯೆ ಖಾತರಿಪಡಿಸಿಕೊಳ್ಳಬೇಕು. ಮತದಾರರ ಮೊಬೈಲ್, ಸ್ಥಿರ ದೂರವಾಣಿ, ಇ-ಮೇಲ್ ಇತರೆ ಮಾಹಿತಿಗಳಿಂದಲೂ ದೃಢೀಕರಿಸಿಕೊಳ್ಳಬೇಕು. ಕರಡು ಮತದಾರರ ಪಟ್ಟಿಯಲ್ಲಿರುವ ಮತದಾರರ ಭಾವಚಿತ್ರ ಸ್ಪಷ್ಟವಾಗಿ ಇರದಿದ್ದರೆ ಅದಕ್ಕೆ ಸರಿಪಡಿಸಲು ಕ್ರಮ ವಹಿಸಬೇಕು. ತಪ್ಪು ನೋಂದಣಿ, ಮರಣ ಹೊಂದಿದವರು, ಸ್ಥಳಾಂತರ ಹೊಂದಿರುವವರ ಅರ್ಜಿಗಳ ಬಗ್ಗೆಯೂ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಬೇಕು ಎಂದರು.
ದಿನಾಂಕ 01.01.2019 ಕ್ಕೆ 18 ವರ್ಷ ತುಂಬಲಿರುವ ಹಾಗೂ ಈಗಾಗಲೇ ನೋಂದಾಯಿಸದೇ ಇರುವ ಅರ್ಹರಿಂದ ಅರ್ಜಿಗಳನ್ನು ಪಡೆಯಬೇಕು. ವಿಶೇಷ ಆಂದೋಲನದ ಸಮಯದಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳು, ಆಯಾ ಮತಗಟ್ಟೆ ವ್ಯಾಪ್ತಿಯಲ್ಲಿರುವ ಪ್ರತಿ ಮನೆಗೂ ಭೇಟಿ ನೀಡಿ ಮತದಾರರ ಹೆಸರು ಹಾಗೂ ವಿವರಗಳನ್ನು  ಪರಿಶೀಲಿಸಿ,. ಸರಿಯಿದೆಯೇ ಎಂದು ಖಾತರಿಪಡಿಸಿಕೊಳ್ಳಬೇಕು. ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಹಕಾರವನ್ನು ಮತದಾರರ ಪಟ್ಟಿ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯಕ್ಕೆ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮತದಾರರ ಪಟ್ಟಿಗೆ ವಿಕಲಚೇತನರೂ ಸಹಾ ಸೇರ್ಪಡೆಗೊಳಿಸಲು ಅಗತ್ಯ ಕ್ರಮ ವಹಿಸಬೇಕು. ವಿಕಲಚೇತನರ ಹೆಸರು ನೋಂದಣಿಗೆ ವಾರಾಂತ್ಯದಲ್ಲಿ ವಿಶೇಷ ಕ್ಯಾಂಪ್‍ಗಳನ್ನು ಆಯೋಜಿಸಬೇಕು. ಇದಕ್ಕಾಗಿ ಸ್ಥಳ ಹಾಗೂ ದಿನಾಂಕವನ್ನು ನಿಗಧಿಪಡಿಸಿ, ಈ ಬಗ್ಗೆ ಮುಂಚಿತವಾಗಿಯೇ ಮಾಹಿತಿ ನೀಡಬೇಕೆಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಕೆ.ಹೆಚ್. ಪ್ರಸಾದ್, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ|| ರಘುರಾಮ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಮೂಲಿಮನಿ, ತಹಶೀಲ್ದಾರ್‍ರಾದ ಕೆ.ಪುರಂದರ, ರಾಯಪ್ಪ ಹುಣಸಗಿ, ಭಾರತಿ, ಗೀತಾ ಹುಡೇದ ಇತರೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
   
ಸ್ಥಳೀಯ ಸಂಸ್ಥೆಗಳ ಮತದಾರರ ಪಟ್ಟಿ ಗಣಕೀಕರಣ : ಕಾರ್ಯಕ್ರಮ ಪಟ್ಟಿ ನಿಗದಿ
ಚಾಮರಾಜನಗರ, ನ. 02  - ನಗರ ಸ್ಥಳೀಯ ಸಂಸ್ಥೆಗಳ ಮತದಾರರ ಪಟ್ಟಿ ಗಣಕೀಕರಣ ಹಾಗೂ ಮುದ್ರಣ ಸಂಬಂಧ ಚುನಾವಣಾ ಆಯೋಗವು ಕಾರ್ಯಕ್ರಮ ಪಟ್ಟಿಯನ್ನು ನಿಗದಿಪಡಿಸಿದೆ.
2019ರ ಮಾರ್ಚ್ ಮಾಹೆಯಲ್ಲಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಾದ ಗುಂಡ್ಲುಪೇಟೆ ಪುರಸಭೆ, ಯಳಂದೂರು ಹಾಗೂ ಹನೂರು ಪಟ್ಟಣ ಪಂಚಾಯಿತಿಗಳ ಅವಧಿಯು ಪೂರ್ಣಗೊಳ್ಳಲಿರುವ ಹಿನ್ನೆಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವ ಸಂಬಂಧ ವಿಧಾನಸಭಾ ಮತದಾರರ ಪಟ್ಟಿಯನ್ನು ಅಳವಡಿಸಿಕೊಂಡು, ವಾರ್ಡ್‍ವಾರು ಮತದಾರರ ಪಟ್ಟಿ ತಯಾರಿಸಬೇಕಿದೆ.
ನವೆಂಬರ್ 9 ರಿಂದ 14 ರವರೆಗೆ ವಾರ್ಡ್‍ಗಳ ವ್ಯಾಪ್ತಿಯಲ್ಲಿ ಮನೆಮನೆಗೆ ಭೇಟಿ ನೀಡಿ, ಮತದಾರರ ಪಟ್ಟಿಯಲ್ಲಿರುವ ಮತದಾರರನ್ನು ಗುರುತಿಸುವ ಪ್ರಕ್ರಿಯೆ ನಡೆಸಲಾಗುತ್ತದೆ. ನವೆಂಬರ್ 17 ರಿಂದ 19 ರವರೆಗೆ ಪ್ರಥಮ ಚೆಕ್‍ಲಿಸ್ಟ್‍ನಂತೆ ವಾರ್ಡ್‍ವಾರು ಪರಿಶೀಲನೆ ಮಾಡಲಾಗುತ್ತದೆ. ಡಿಸೆಂಬರ್ 10 ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ ಈ ಸಂಬಂಧ ಆಕ್ಷೇಪಣೆ ಸಲ್ಲಿಕೆಗೆ ಡಿಸೆಂಬರ್ 15 ಕಡೆಯ ದಿನವಾಗಿದೆ. ಡಿಸೆಂಬರ್ 17 ರಿಂದ 20 ರವರೆಗೆ ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಲಾಗುತ್ತದೆ. ಡಿಸೆಂಬರ್ 26 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ ಎಂದು ಜಿಲ್ಲಾಧಿಕಾರಿಯವರಾದ ಬಿ.ಬಿ.ಕಾವೇರಿ ಅವರು ತಿಳಿಸಿದ್ದಾರೆ.
ಉದ್ಯೋಗ ಖಾತರಿ ಯೋಜನೆ ಪರಿಣಾಮಕಾರಿ ಬಳಕೆಗೆ ಜಿ.ಪಂ. ಸಿ.ಇ.ಒ ಹರೀಶ್‍ಕುಮಾರ್ ಸಲಹೆ
ಚಾಮರಾಜನಗರ, ನ. 02  :- ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ರೈತರಿಗೆ ತುಂಬಾ ನೆರವಾಗಲಿದ್ದು, ಇದನ್ನು ಪರಿಣಾಮಕಾರಿಯಾಗಿ ಜಿಲ್ಲೆಯ ರೈತರು ಬಳಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್‍ಕುಮಾರ್ ಸಲಹೆ ಮಾಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕುರಿತು ರೈತರಿಗೆ ಹಾಗೂ ರೈತ ಸಂಘಟನೆಗಳ ಮುಖಂಡರಿಗೆ ಹಮ್ಮಿಕೊಳ್ಳಲಾಗಿದ್ದ ಅರಿವು ಕಾರ್ಯಾಗಾರ ಉದ್ದೇಶಿಸಿ ಅವರು ಮಾತನಾಡಿದರು.
ಮಹತ್ವಾಂಕ್ಷಿಯ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಿಂದ ಹಲವರು ಪ್ರಯೋಜನೆಗಳನ್ನು ರೈತರು ಪಡೆಯಲು ಸಾಧ್ಯವಾಗಲಿದೆ. ರೈತರು ಅವರ ಜಮೀನಿನಲ್ಲಿ ವೈಯಕ್ತಿಕವಾಗಿ ಕೆಲಸ ನಿರ್ವಹಿಸಿ ಅನುಕೂಲತೆಗಳನ್ನು ಪಡೆದುಕೊಳ್ಳಬಹುದು. ಬೇರೆ ಜಿಲ್ಲೆಗಳಿಗೆ ಹೋಲಿಸಿದಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಉದ್ಯೋಗ ಖಾತರಿ ಯೋಜನೆಗೆ ರೈತರು ನಿರೀಕ್ಷಿತ ಮಟ್ಟದಲ್ಲಿ ಮುಂದಾಗದೇ ಇರುವುದು ಕಂಡುಬಂದಿದೆ. ಯೋಜನೆಯ ಸದ್ಭಳಕೆಗೆ ರೈತರು ಒಲವು ತೋರಬೇಕೆಂದು ಹರೀಶ್ ಕುಮಾರ್ ಅವರು ಮನವಿ ಮಾಡಿದರು.
ಯೋಜನೆ ಅತ್ಯಂತ ಪಾರದರ್ಶಕವಾಗಿದೆ. ನೇರವಾಗಿ ರೈತರ ಖಾತೆಗೆ ಹಣ ಜಮೆ ಅಗಲಿದೆ. ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ರೈತರು ಮುಂದೆ ಬಂದು ಗ್ರಾಮ ಪಂಚಾಯಿತಿಗಳಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನೀಡುವಂತೆ ಅರ್ಜಿ ಸಲ್ಲಿಸಬೇಕು. ಜಾಬ್‍ಕಾರ್ಡ್‍ಗಳನ್ನು ಹೊಂದಬೇಕು. ಉದ್ಯೋಗ ನೀಡಲು ನಿರಾಕರಿಸಿದಲ್ಲಿ ನಿರುದ್ಯೋಗ ಭತ್ಯೆಯನ್ನು ಪಡೆಯಲು ಸಹ ಅವಕಾಶವಿದೆ ಎಂದು ಜಿ.ಪಂ.ಸಿ.ಇ.ಒ ತಿಳಿಸಿದರು.
ಕೃಷಿ, ರೇಷ್ಮೆ, ತೋಟಗಾರಿಕೆ, ಮೀನುಗಾರಿಕೆ ಇಲಾಖೆಗಳಿಂದ ಸಾಕಷ್ಟು ಅನುಕೂಲತೆಗಳನ್ನು ಉದ್ಯೋಗ ಖಾತರಿ ಯೋಜನೆಯಡಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಕ್ರಿಯಾಯೋಜನೆ ಅನುಮೋದನೆಗೆ ವಿಳಂಬ ನೀತಿ ಅನುಸರಿಸಲಾಗುತ್ತಿಲ್ಲ. ಕೆಲಸ ನಿರ್ವಹಿಸಿದ ಬಳಿಕ ಹಣವನ್ನು ಜಮೆ ಮಾಡಲು ಹೆಚ್ಚು ಕಾಲಾವಕಾಶ ತೆಗೆದುಕೊಳ್ಳಲಾಗುತ್ತಿಲ್ಲ. ಎಲ್ಲ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇವೆ. ಯಾವುದೇ ಹಿಂಜರಿಕೆ ಬಿಟ್ಟು ಯೋಜನೆಗೆ ರೈತರು, ಬೆಳೆಗಾರರು ಸಹಕಾರ ನೀಡಬೇಕೆಂದರು.
ಜಿಲ್ಲೆಯಲ್ಲಿ 23 ಲಕ್ಷ ಮಾನವ ದಿನಗಳನ್ನು ಇಲಾಖೆ ಕಾರ್ಯಕ್ರಮಗಳಿಂದಲೇ ಸೃಜಿಸಬೇಕಾದ ಗುರಿ ನೀಡಲಾಗಿದೆ. ಮೂಲ  ಸೌಕರ್ಯಗಳ ಗುರಿ ಮಾತ್ರ ಸಾಧನೆಯಾಗುವುದಿಲ್ಲ. ವೈಯಕ್ತಿಕವಾಗಿಯೂ ಹೆಚ್ಚು ಆದಾಯ ಬರುವ ಚಟುವಟಿಕೆಗಳನ್ನು ಉದ್ಯೋಗ ಖಾತರಿಯಲ್ಲಿ ನಿರ್ವಹಿಸಲು ಬೆಳೆಗಾರರು ರೈತರಿಗೆ ಅವಕಾಶಗಳಿವೆ. ಹೀಗಾಗಿ ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ಮುಂದಾಗಬೇಕೆಂದು ಹರೀಶ್‍ಕುಮಾರ್ ಅವರು ತಿಳಿಸಿದರು.
ಜಂಟಿ ಕೃಷಿ ನಿರ್ದೇಶಕರಾದ ಡಾ. ತಿರುಮಲೇಶ್ ಅವರು ಮಾತನಾಡಿ ರೈತರು ತಮ್ಮ ಜಮೀನಿನಲ್ಲಿಯೇ ಕಂದಕ, ಕೃಷಿಹೊಂಡ ನಿರ್ಮಾಣ ಮಾಡಿಕೊಂಡು ಮಳೆ ನೀರು ಸಂಗ್ರಹ ಮಾಡಿಕೊಳ್ಳಬಹುದು. ಇಂತಹ ಹಲವಾರು ಕಾಮಗಾರಿಗಳನ್ನು ನಿರ್ವಹಿಸಿ ಜಮೀನು ಉಪಯುಕ್ತತೆಯನ್ನು ಹೆಚ್ಚಿಕೊಳ್ಳಲು ಉದ್ಯೋಗ ಖಾತರಿ ಯೋಜನೆ ನೆರವಾಗಲಿದೆ. ನಿಮ್ಮ ಜಮೀನಿನಲ್ಲಿ ನೀವೆ ಕೆಲಸ ಮಾಡಿ ಆದಾಯ ಪಡೆಯಬಹುದು. ಉದ್ಯೋಗ ಖಾತರಿ ಯೋಜನೆಯಡಿ ಶೀಘ್ರವಾಗಿ ಹಣ ಪಾವತಿಸಲು ಕ್ರಮ ವಹಿಸಲಾಗಿದೆ ಎಂದರು.
ಕಾರ್ಯಾಗಾರದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಯೋಜನೆಯ ಪ್ರಯೋಜನ ಕುರಿತು ವಿವರವಾಗಿ ಮಾಹಿತಿ ನೀಡಿದರು. ರೈತ ಮುಖಂಡರು, ಪ್ರತಿನಿಧಿಗಳು ಸಹ ಅಧಿಕಾರಿಗಳೊಂದಿಗೆ ಸಂವಾದ ನಡೆಸಿ ಯೋಜನೆಯ ಬಗ್ಗೆ ವಿವರ ಪಡೆದುಕೊಂಡರು. ಹಲವು ಸಮಸ್ಯೆಗಳನ್ನು ಸಹ ಗಮನಕ್ಕೆ ತಂದರು.
ನವೆಂಬರ್ 3 ರಂದು ಆಲಂಬಾಡಿಯಲ್ಲಿ ಜಿ.ಪಂ. ಸಿ.ಇ.ಒ. ಗ್ರಾಮವಾಸ್ತವ್ಯ
ಚಾಮರಾಜನಗರ, ನ. 02 - ಜನರ ಕುಂದುಕೊರತೆಗಳನ್ನು ಆಲಿಸುವ ಸಲುವಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಾದ ಡಾ. ಕೆ. ಹರೀಶ್‍ಕುಮಾರ್ ಅವರು ನವೆಂಬರ್ 3ರಂದು ಕೊಳ್ಳೇಗಾಲ ತಾಲೂಕಿನ ಆಲಂಬಾಡಿ ಬುಡಕಟ್ಟು ಕಾಲೋನಿಯಲ್ಲಿ ಗ್ರಾಮ ವಾಸ್ತವ್ಯ ಮಾಡುವರೆಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕೃಷ್ಣಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ. 3ರಂದು ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜನಸಂಪರ್ಕ ಸಭೆ
ಚಾಮರಾಜನಗರ, ನ. 02 - ಮುಸ್ಲಿಂ ಸಮುದಾಯ ಜನರ ಕುಂದುಕೊರತೆಗಳನ್ನು ಆಲಿಸುವ ಸಲುವಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನವೆಂಬರ್ 3ರಂದು ಮಧ್ಯಾಹ್ನ 12 ಗಂಟೆಗೆ ನಗರದ ಮುಸ್ತಾಫ ಮಸೀದಿ ಮುಂಭಾಗದಲ್ಲಿ ಜನಸಂಪರ್ಕ ಸಭೆ ಏರ್ಪಡಿಸಲಾಗಿದೆ ಎಂದು ಸಚಿವರ ಅಪ್ತ ಸಹಾಯಕ ಆನಂದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ. 4ರಂದು ನಗರದಲ್ಲಿ ಎನ್‍ಟಿಎಸ್‍ಇ, ಎನ್‍ಎಂಎಸ್‍ಎಸ್ ಪರೀಕ್ಷೆ
ಚಾಮರಾಜನಗರ, ನ. 02   ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಚಾಮರಾಜನಗರ ತಾಲೂಕಿನಿಂದ 2018-19ನೇ ಸಾಲಿಗೆ ಅರ್ಜಿ ಸಲ್ಲಿಸಿದ್ದ ಎನ್‍ಟಿಎಸ್‍ಇ ಮತ್ತು ಎನ್‍ಎಂಎಂಎಸ್ ಪರೀಕ್ಷೆಗಳಿಗೆ 8 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ನವೆಂಬರ್ 4ರಂದು ನಗರದಲ್ಲಿ ನಡೆಸಲಾಗುವುದು. ಪರೀಕ್ಷಾ ಕೇಂದ್ರಗಳ ವಿವರ ಇಂತಿದೆ-
10ನೇ ತರಗತಿ ವಿದ್ಯಾರ್ಥಿಗಳಿಗೆ ಎನ್‍ಟಿಎಸ್‍ಇ ಪರೀಕ್ಷೆಯು ನಗರದ ಸತ್ತಿ ರಸ್ತೆಯಲ್ಲಿರುವ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದೆ.
8ನೇ ತರಗತಿ ವಿದ್ಯಾರ್ಥಿಗಳಿಗೆ ಎನ್‍ಎಂಎಂಎಸ್ ಪರೀಕ್ಷೆಯು ನಗರದ ಜೆಎಸ್‍ಎಸ್ ಬಾಲಕಿಯರ ಪ್ರೌಢಶಾಲೆ, ಜೆಎಸ್‍ಎಸ್ ಬಾಲಕರ ಪ್ರೌಢಶಾಲೆ ಹಾಗೂ ಸಿದ್ದಾರ್ಥನಗರದ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ನಡೆಯಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರÉ.
ಚಾ.ನಗರ ನಗರಸಭೆ : ಆಸ್ತಿ ತೆರಿಗೆ, ನೀರಿನ ಕಂದಾಯ ಪಾವತಿಗೆ ಸೂಚನೆ
ಚಾಮರಾಜನಗರ, ನ. 02  ಚಾಮರಾಜನಗರ ನಗರಸಭಾ ವ್ಯಾಪ್ತಿಗೆ ಒಳಪಡುವ 31 ವಾರ್ಡುಗಳಲ್ಲಿ ಆಸ್ತಿ ತೆರಿಗೆ, ನೀರಿನ ಕಂದಾಯ ಪಾವತಿಸದೇ ಇರುವವರು ತಪ್ಪದೇ ಪಾವತಿ ಮಾಡುವಂತೆ ಸೂಚಿಸಲಾಗಿದೆ.
ಅನೇಕ ಕಟ್ಟಡ, ನಿವೇಶನಗಳ ಮಾಲೀಕರು ಆಸ್ತಿ ತೆರಿಗೆ ಹಾಗೂ ನೀರಿನ ಕಂದಾಯ ಪಾವತಿಸದೇ ಬಾಕಿ ಉಳಿಸಿಕೊಂಡಿರುವುದು ಕಂಡುಬಂದಿದೆ.
ಈಗಾಗಲೇ ಅನೇಕ ಬಾರಿ ಬಾಕಿ ಪಾವತಿಸುವಂತೆ ಸೂಚಿಸಿದ್ದರೂ ಮಾಲೀಕರು ಪಾವತಿಸಿರುವುದಿಲ್ಲ. ಆದ್ದರಿಂದ ಆಸ್ತಿ ಮಾಲೀಕರು ಕೂಡಲೇ ಆಸ್ತಿ ತೆರಿಗೆ ಹಾಗೂ ನೀರಿನ ಕಂದಾಯ ಪಾವತಿಸಿ ಗಣಕೀಕೃತ ಇ-ಆಸ್ತಿಯ ಪ್ರತಿಯನ್ನು (ನಮೂನೆ-3) ಪಡೆದುಕೊಳ್ಳುಬೇಕು. ಅಕ್ರಮ ನಲ್ಲಿ ಸಂಪರ್ಕ ಹೊಂದಿರುವವರು ನಿಗಧಿತ ಶುಲ್ಕ ಪಾವತಿಸಿ ಸಕ್ರಮಗೊಳಿಸಿಕೊಳ್ಳಬೇಕು. 
ತಪ್ಪಿದಲ್ಲಿ ಕರ್ನಾಟಕ ಪುರಸಭೆ ಕಾಯ್ದೆ 1964ರ ಅಧಿನಿಯಮದಡಿ ತೆರಿಗೆ, ಕಂದಾಯ ಬಾಕಿದಾರರ, ಅಕ್ರಮ ನಲ್ಲಿ ಸಂಪರ್ಕ ಹೊಂದಿರುವವರ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಾ.ನಗರ ನಗರಸಭೆ : ತ್ಯಾಜ್ಯ ವಿಂಗಡಿಸಿ ವಿಲೇವಾರಿಗೆ ಸೂಚನೆ
ಚಾಮರಾಜನಗರ, ನ. 02   ನಗರದಲ್ಲಿ ಘನತ್ಯಾಜ್ಯವನ್ನು ಮೂಲದಲ್ಲಿಯೇ ವಿಂಗಡಿಸಿ ಸೂಚಿಸಿದ ವಾಹನಗಳಿಗೆ ನೀಡುವಂತೆ ಚಾಮರಾಜನಗರ ನಗರಸಭೆಯು ಸಾರ್ವಜನಿಕರಿಗೆ ತಿಳಿಸಿದೆ.
ತ್ಯಾಜ್ಯ ಉತ್ಪಾದಕರು ಮೂಲದಲ್ಲಿಯೇ ಹಸಿ ಕಸ, ಒಣ ಕಸ ಹಾಗೂ ಗೈಹಬಳಕೆ ಹಾನಿಕಾರಕ ತ್ಯಾಜ್ಯವೆಂದು 3 ವಿಧವಾಗಿ ವಿಂಗಡಿಸಿ ಕಸದ ಬುಟ್ಟಿಗಳಲ್ಲಿ ಸಂಗ್ರಹಿಸಿ ವಾಹನಗಳಿಗೆ ನೀಡಬೇಕು. ಯಾವುದೇ ರೀತಿಯ ಕಸವನ್ನು ರಸ್ತೆ, ಸಾರ್ವಜನಿಕ ಪ್ರದೇಶಗಳಲ್ಲಿ ಚರಂಡಿ, ಜಲಮೂಲಗಳಿಗೆ ಎಸೆಯಕೂಡದು. ಸಭೆ ಸಮಾರಂಭಗಳಲ್ಲಿ ಸಂಗ್ರಹಣೆಯಾಗುವ ತ್ಯಾಜ್ಯವನ್ನು ಮೂಲದಲ್ಲಿಯೇ ವಿಂಗಡಿಸಿ ನಗರಸಭೆ ವಾಹನಗಳಿಗೆ ನೀಡಬೇಕು.
ರಸ್ತೆಬದಿ ವ್ಯಾಪಾರಿಗಳು ಬಳಸಿ ಬಿಸಾಡುವ ಕ್ಯಾನ್, ಪ್ಲೇಟ್‍ಗಳು, ಪ್ಯಾಕೇಜ್ ಸಾಮಗ್ರಿಗಳು, ತೆಂಗಿನ ಚಿಪ್ಪು, ತರಕಾರಿ, ಹಣ್ಣುಗಳು ಮುಂತಾದವುಗಳನ್ನು ಸಂಗ್ರಹಿಸಲು ಸೂಕ್ತ ಕಸದ ಬುಟ್ಟಿಗಳನ್ನು ಇಟ್ಟು ನಗರಸಭೆ ಸೂಚಿಸುವ ವಾಹನಗಳಿಗೆ ಹಾಕಬೇಕು. ಸಾಧ್ಯವಾದಷ್ಟು ತ್ಯಾಜ್ಯ ಉತ್ಪಾದನೆಯನ್ನು ಕಡಿಮೆ ಮಾಡಬೇಕು. 
ಹೋಟೆಲ್, ಕಲ್ಯಾಣ ಮಂಟಪಗಳು, ಫಾಸ್ಟ್ ಫುಡ್ ಉದ್ದಿಮೆದಾರರು ತ್ಯಾಜ್ಯಗಳನ್ನು ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ಕಸದ ಬುಟ್ಟಿಗಳಲ್ಲಿ ಸಂಗ್ರಹಿಸಿ ನಗರಸಭೆ ವಾಹನಗಳಿಗೆ ನೀಡಬೇಕು. ಕಟ್ಟಡದ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಹಾಕದೇ ನಗರಸಭೆ ನಿಗದಿಪಡಿಸಿರುವ ಸ್ಥಳದಲ್ಲಿಯೇ ಹಾಕಬೇಕು.
ನಿಯಮಗಳನ್ನು ಉಲ್ಲಂಘಿಸಿದಲ್ಲಿ ಪುರಸಭೆ ಕಾಯ್ಕೆ 1964ರನ್ವಯ ದಂಡ ವಿಧಿಸಲಾಗುವುದು ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

x

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು