ಜಿಲ್ಲಾ ಉಸ್ತುವಾರಿ ಸಚಿವರಿಂದ ಹಾಲಿನ ಡೇರಿ ನಿರ್ಮಾಣ ಕಾಮಗಾರಿ ಪರಿಶೀಲನೆ
ಚಾಮರಾಜನಗರ, ಸೆ. 25- ತಾಲೂಕಿನ ಕುದೇರು ಗ್ರಾಮದಲ್ಲಿ ಪ್ರಗತಿಯಲ್ಲಿರುವ ಮಹತ್ವಾಕಾಂಕ್ಷಿ ಹಾಲಿನ ಡೇರಿ ನಿರ್ಮಾಣ ಕಾಮಗಾರಿಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಪುಟ್ಟರಂಗಶೆಟ್ಟಿ ಅವರು ಇಂದು ಪರಿಶೀಲಿಸಿದರು.ಒಟ್ಟು 3 ಲಕ್ಷ ಲೀಟರ್ ಯೋಜನಾ ಸಾಮಥ್ರ್ಯದ (5 ಲಕ್ಷ ಲೀಟರ್‍ಗೆ ವಿಸ್ತರಿಸುವ ಸಾಮಥ್ರ್ಯದ) ಹಾಲು ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಪೂರಕವಾಗಿ ಕೈಗೊಂಡಿರುವ ವಿವಿಧ ಘಟಕ ಕಾಮಗಾರಿಯನ್ನು ಸಚಿವರು ವೀಕ್ಷಿಸಿದರು.
2 ಲಕ್ಷ ಲೀಟರ್ ಸಾಮಥ್ರ್ಯದ ಯುಎಚ್‍ಟಿ ಹಾಲಿನ ಘಟಕ, 30 ಸಾವಿರ ಲೀಟರ್ ಸಾಮಥ್ರ್ಯದ ಮೊಸರು ತಯಾರಿಕಾ ಸ್ಥಾವರ, 4 ಸಾವಿರ ಕೆಜಿ ಬೆಣ್ಣೆ, 3 ಸಾವಿರ ಲೀಟರ್ ತುಪ್ಪ ತಯಾರಿಕೆಗಾಗಿ ನಿರ್ಮಾಣಗೊಳ್ಳುತ್ತಿರುವ ಪ್ರತ್ಯೇಕ ಘಟಕಗಳು ಹಾಗೂ ಇದಕ್ಕೆ ಸಂಬಂಧಿಸಿದ ಯಂತ್ರೋಪಕರಣಗಳ ಅಳವಡಿಕೆ ಕೆಲಸವನ್ನು ಸಚಿವರು ಪರಿಶೀಲಿಸಿ ಮಾಹಿತಿ ಪಡೆದರು. ಪ್ರಸ್ತುತ ನಡೆಯುತ್ತಿರುವ ಕಾಮಗಾರಿ ವೇಗವಾಗಿ ಪೂರ್ಣಗೊಳಿಸುವಂತೆಯೂ ಸಚಿವರು ಸೂಚಿಸಿದರು.
ಘಟಕ ನಿರ್ಮಾಣ ಕೆಲಸ ಪರಿಶೀಲನೆ ಬಳಿಕ ಮಾತನಾಡಿದ ಉಸ್ತುವಾರಿ ಸಚಿವರು ಮೈಸೂರಿನಿಂದ ಪ್ರತ್ಯೇಕಗೊಂಡು ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟವು ಕಾರ್ಯ ನಿರ್ವಹಣೆ ಮಾಡುತ್ತಿದೆ. ಆಗಸ್ಟ್ 2015ರಿಂದಲೇ ಸಿವಿಲ್ ಕೆಲಸಗಳು ಪ್ರಾರಂಭವಾದವು. 2016ರಲ್ಲಿ ಯಂತ್ರೋಪಕರಣಗಳ ಟೆಂಡರ್ ಪ್ರಕ್ರಿಯೆ ನಡೆದಿದ್ದು ಇಟಿಪಿ, ಎಲೆಕ್ಟ್ರಿಕಲ್ ಸಬ್ ಸ್ಟೇಷನ್, ನೀರಿನ ವ್ಯವಸ್ಥೆ ಇನ್ನಿತರ ಕೆಲಸಗಳು ಪೂರ್ಣಗೊಂಡಿವೆ ಎಂದರು.
ಯಂತ್ರೋಪಕರಣಗಳ ಅಳವಡಿಕೆ ಕೆಲಸವು ಭರದಿಂದ ಸಾಗಿದ್ದು ಇನ್ನೆರಡು ತಿಂಗಳೊಳಗೆ ಎಲ್ಲ ಕೆಲಸಗಳು ಪೂರ್ಣಗೊಂಡು ಹಾಲಿನ ಡೇರಿಯು ಪೂರ್ಣಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲು ಸಜ್ಜುಗೊಳ್ಳಲಿದೆ. ಬಳಿಕ ಡೇರಿಯ ಉದ್ಘಾಟನೆಗೆ ಸಿದ್ಧವಾಗಲಿವೆ ಎಂದು ಸಚಿವರು ತಿಳಿಸಿದರು.
ಜಿಲ್ಲೆಯಲ್ಲಿ ಹಾಲು ಉತ್ಪಾದನೆಗೆ ತಕ್ಕಂತೆ ಮುಂದೆ ಡೇರಿಯಲ್ಲಿ ಇನ್ನಷ್ಟು ಉಪ ಉತ್ಪನ್ನಗಳ ತಯಾರಿಕೆಗೆ ಅವಕಾಶವಾಗಲಿದೆ. ಸಧ್ಯಕ್ಕೆ ಈಗಾಗಲೇ ನಿಗದಿಗೊಳಿಸಿರುವ ಯೋಜನೆಯನ್ನು ಚಾಲನೆಗೊಳಿಸಲಾಗುತ್ತದೆ. ಒಟ್ಟು 133 ಕೋಟಿ ರೂ ಯೋಜನಾ ವೆಚ್ಚದ ಡೇರಿ ಕಾಮಗಾರಿಗೆ ಯಾವುದೇ ಹಣಕಾಸಿನ ತೊಂದರೆಯಾಗಿಲ್ಲ. ಕಾಮಗಾರಿಯು ಶೀಘ್ರಗತಿಯಲ್ಲಿ ನಡೆಯುತ್ತಿದೆ ಎಂದು ಸಚಿವರು ತಿಳಿಸಿದರು.
ಮೈಸೂರಿನ ಡೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಹಲವು ಸಿಬ್ಬಂದಿಯನ್ನು ಚಾಮರಾಜನಗರ ಜಿಲ್ಲಾ ಡೇರಿಗೆ ನಿಯೋಜಿಸಲಾಗಿದೆ. ಇನ್ನು ಅಗತ್ಯವಿರುವ ಸಿಬ್ಬಂದಿ ನೇಮಕವನ್ನು ಮಾಡಿಕೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್, ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಗುರುಮಲ್ಲಪ್ಪ, ನಿರ್ದೇಶಕರಾದ ಎಚ್.ಎಸ್. ನಂಜುಂಡಪ್ರಸಾದ್, ಡಿ. ಮಾದಪ್ಪ, ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕರಾದ ಡಾ. ಎಂ.ಎಸ್. ವಿಜಯ್ ಕುಮಾರ್, ತಹಸೀಲ್ದಾರ್ ಕೆ. ಪುರಂಧರ್, ಇತರೆ ಅಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು.
ಪಿಯು ಫಲಿತಾಂಶ ಸುಧಾರಣೆಗೆ ಶೈಕ್ಷಣಿಕ ಕಾರ್ಯಾಗಾರ
ಚಾಮರಾಜನಗರ, ಸೆ. 25 ಜಿಲ್ಲೆಯು ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಈ ಬಾರಿ ಅತ್ಯುತ್ತಮ ಸ್ಥಾನ ಪಡೆಯಲು ಅನುವಾಗುವಂತೆ ಪದವಿಪೂರ್ವ ಶಿಕ್ಷಣ ಇಲಾಖೆಯು ಪ್ರಾಂಶುಪಾಲರಿಗೆ ಹಾಗೂ ಉಪನ್ಯಾಸಕರಿಗೆ ಶೈಕ್ಷಣಿಕ ಕಾರ್ಯಾಗಾರವನ್ನು ತಾಲೂಕುವಾರು ಹಮ್ಮಿಕೊಂಡಿದೆ.
ಸೆಪ್ಟೆಂಬರ್ 26ರಂದು ಯಳಂದೂರಿನ ಜೆಎಸ್‍ಎಸ್ ಪದವಿಪೂರ್ವ ಕಾಲೇಜು, 27ರಂದು ಗುಂಡ್ಲುಪೇಟೆಯ ಕೆಎಸ್‍ಎನ್ ಪದವಿಪೂರ್ವ ಕಾಲೇಜು ಹಾಗೂ 28ರಂದು ಕೊಳ್ಳೇಗಾಲದ ವಾಸವಿ ಪದವಿಪೂರ್ವ ಕಾಲೇಜಿನಲ್ಲಿ ಕಾರ್ಯಾಗಾರ ಏರ್ಪಡಿಸಿದೆ. ಆಯಾ ದಿನಾಂಕದಂದು ಬೆಳಿಗ್ಗೆ 9 ಗಂಟೆಗೆ ಕಾರ್ಯಾಗಾರ ಆರಂಭಗೊಳ್ಳಲಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ವಿ.ಆರ್. ಶ್ಯಾಮಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಯೋಜಕರು, ಕಚೇರಿ ಸಹಾಯಕರ ಹುದ್ದೆಗಳಿಗೆ ಅರ್ಜಿ ಆಹ್ವಾನ
ಚಾಮರಾಜನಗರ, ಸೆ. 25 - ಜಿಲ್ಲಾ, ತಾಲೂಕು ಬಾಲಭವನಗಳ ಚಟುವಟಿಕೆ ಹಾಗೂ ಕಾರ್ಯಕ್ರಮಗಳನ್ನು ನಿರ್ವಹಿಸುವ ಸಲುವಾಗಿ ಕಾರ್ಯಕ್ರಮ ಸಂಯೋಜಕರು ಹಾಗೂ ಕಚೇರಿ ಸಹಾಯಕರ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ಅರ್ಜಿ ಆಹ್ವಾನಿಸಲಾಗಿದೆ.
ಕಾರ್ಯಕ್ರಮ ಸಂಯೋಜಕರ ಹುದ್ದೆಗೆ ಯಾವುದಾದರೂ ಪದವಿ ಮತ್ತು ಕಂಪ್ಯೂಟರ್ ಜ್ಞಾನದೊಂದಿಗೆ ಸೃಜನಾತ್ಮಕ, ಕ್ರಿಯಾತ್ಮಕ ಚಟುವಟಿಕೆಗಳ ಯಾವುದಾದರೂ ಒಂದು ಕಲಾ ಕ್ಷೇತ್ರದಲ್ಲಿ ಕೌಶಲ್ಯ ಹೊಂದಿರಬೇಕು. ಕಚೇರಿ ಸಹಾಯಕರ ಹುದ್ದೆಗೆ ಕನಿಷ್ಠ ಪಿಯುಸಿ ಮತ್ತು ಮೇಲ್ಪಟ್ಟ ವಿದ್ಯಾರ್ಹತೆಯೊಂದಿಗೆ ಕಂಪ್ಯೂಟರ್ ಜ್ಞಾನ ಹೊಂದಿರುವುದು ಕಡ್ಡಾಯವಾಗಿದೆ.
ಈ ಹಿಂದೆ ಉತ್ತಮವಾಗಿ ಕೆಲಸ ನಿರ್ವಹಿಸಿ ದಾಖಲೆ ಹೊಂದಿರುವ, ಪತ್ರ ವ್ಯವಹಾರ ನಿರ್ವಹಣೆ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಓದುವ, ಬರೆಯುವ, ಮಾತನಾಡುವ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗುತ್ತದೆ. ಆಸಕ್ತರು ಸ್ವವಿವರಗಳನ್ನು ಅಗತ್ಯ ದಾಖಲೆಗಳೊಂದಿಗೆ ಲಗತ್ತಿಸಿ ಅಕ್ಟೋಬರ್ 6ರೊಳಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರ ಕಚೇರಿಗೆ (ಕೊಠಡಿ ಸಂಖ್ಯೆ 129) ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.
ಸೆ. 27ರಂದು ವಿದ್ಯುತ್ ವ್ಯತ್ಯಯ
ಚಾಮರಾಜನಗರ, ಸೆ. 25 - ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು ಚಂದಕವಾಡಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಸೆಪ್ಟೆಂಬರ್ 27ರಂದು ತ್ರೈಮಾಸಿಕ ಕಾರ್ಯನಿರ್ವಹಣಾ ಕಾರ್ಯ ಹಮ್ಮಿಕೊಂಡಿದೆ.
ಈ ಹಿನ್ನೆಲೆಯಲ್ಲಿ ಅಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಹಿರಿಕೆರೆ, ಕಾಳಿಕಾಂಬ, ಚಂದಕವಾಡಿ, ರೇಚಂಬಳ್ಳಿ, ಮಲ್ಲೆದೇವನಹಳ್ಳಿ, ನವೋದಯ, ಹೊಂಡರಬಾಳು, ಜ್ಯೋತಿಗೌಡನಪುರ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಕಾರ್ಯನಿವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆ. 29ರಂದು ನಗರದಲ್ಲಿ ಡಿ. ದೇವರಾಜ ಅರಸು ಅವರ ಜನ್ಮ ದಿನಾಚರಣೆ
ಚಾಮರಾಜನಗರ, ಸೆ. 25 ಜಿಲ್ಲಾಡಳಿತದ ವತಿಯಿಂದ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸು ಅವರ 103ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಸೆಪ್ಟೆಂಬರ್ 29ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು, ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು. ಸದಸ್ಯರು, ವಿವಿಧ ಸಮುದಾಯಗಳ ಮುಖಂಡರು ಭಾಗವಹಿಸುವರು ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿವೇತನಕ್ಕೆ ವಿಕಲಚೇತನರಿಂದ ಅರ್ಜಿ ಆಹ್ವಾನ
ಚಾಮರಾಜನಗರ, ಸೆ. 25 - ಕೇಂದ್ರ ಸರ್ಕಾರವು ವಿದ್ಯಾರ್ಥಿ ವೇತನ ಯೋಜನೆಯಡಿ ವಿಕಲಚೇತನ ವಿದ್ಯಾರ್ಥಿಗಳಿಗೆ ನೀಡಲಾಗುವ ವಿದ್ಯಾರ್ಥಿ ವೇತನಕ್ಕೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್ ತಿತಿತಿ.sಛಿhoಟಚಿಡಿshiಠಿs.gov.iಟಿ ನಲ್ಲಿ ಅರ್ಜಿ ಸಲ್ಲಿಸಬೇಕು. ಪ್ರಿಮೆಟ್ರಿಕ್ ವಿದ್ಯಾರ್ಥಿಗಳು ಸೆಪ್ಟೆಂಬರ್ 30ರೊಳಗೆ ಹಾಗೂ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿಗಳು ಅಕ್ಟೋಬರ್ 31ರ ಒಳಗೆ ಅರ್ಜಿ ಸಲ್ಲಿಸಬೇಕು.
ಶೇ.40ರಷ್ಟು ಅಂಗವೈಕಲ್ಯ ಹೊಂದಿರುವ ಹಾಗೂ ಈ ಸಂಬಂಧ ಪ್ರಮಾಣಪತ್ರ ಹೊಂದಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಯೋಜನೆ ಅನ್ವಯವಾಗಲಿದೆ. ವಿವರಗಳಿಗೆ ತಿತಿತಿ.ಜisಚಿbiಟiಣಥಿಚಿಜಿಜಿಚಿiಡಿs.gov.iಟಿ ನೋಡಬಹುದು. ಅಲ್ಲದೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಕಚೇರಿ (ದೂ.ಸಂ. 08226-223688/224688) ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.
ಸೆ. 28ರಂದು ಚಾ.ನಗರ ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ
ಚಾಮರಾಜನಗರ, ಸೆ. 25:- ಚಾಮರಾಜನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಸಲು ಸೆಪ್ಟೆಂಬರ್ 28ರಂದು ಬೆಳಿಗ್ಗೆ 10 ಗಂಟೆಗೆ ಚಾಮರಾಜನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ಚುನಾಯಿತ ಸದಸ್ಯರ ಸಭೆ ಕರೆಯಲಾಗಿದೆ ಎಂದು ಚುನಾವಣಾ ಅಧಿಕಾರಿಗಳಾಗಿರುವ ತಹಸೀಲ್ದಾರ್ ಕೆ. ಪುರಂಧರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರ ಯುವ ಪ್ರಶಸ್ತಿಗೆ ಅರ್ಜಿ ಆಹ್ವಾನ
ಚಾಮರಾಜನಗರ, ಸೆ. 25:- ಕೇಂದ್ರದ 2016-17ನೇ ಸಾಲಿನ ರಾಷ್ಟ್ರ ಯುವ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಯುವಜನಸೇವೆ, ರಾಷ್ಟ್ರೀಯ ಅಭಿವೃದ್ಧಿ ಮತ್ತು ಸಮಾಜ ಸೇವೆಯಲ್ಲಿ ಗಣನೀಯ ಸೇವೆ ಸಲ್ಲಿಸಿರುವ 15 ರಿಂದ 29ರ ವಯೋಮಿತಿಯ ಯುವಜನರು ಮತ್ತು ಯುವ ಸಂಘಗಳಿಗೆ ಪ್ರಶಸ್ತಿ ನೀಡಲಾಗುತ್ತದೆ. ವಿವರಗಳಿಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಅಥವಾ ದೂರವಾಣಿ ಸಂಖ್ಯೆ 08226-224932 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
x
No comments:
Post a Comment