Thursday, 8 November 2018

23-09-2018 (ಮದ್ದೂರು ಕಾಲೋನಿಯಲ್ಲಿ ಜಿ.ಪಂ ಸಿಇಒ ವಾಸ್ತವ್ಯ:ಸಮಸ್ಯೆಗಳ ವಾಸ್ತವ ದರ್ಶನ)

ಮದ್ದೂರು ಕಾಲೋನಿಯಲ್ಲಿ ಜಿ.ಪಂ ಸಿಇಒ ವಾಸ್ತವ್ಯ:ಸಮಸ್ಯೆಗಳ ವಾಸ್ತವ ದರ್ಶನ

ಚಾಮರಾಜನಗರ, ಸೆ. 23-  ಜನರ ಅಹವಾಲು ಆಲಿಸಿ ಪರಿಹರಿಸುವ ಸಲುವಾಗಿ ಗ್ರಾಮ ವಾಸ್ತವ್ಯ ಆರಂಭಿಸಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ|| ಕೆ.ಹರೀಶ್ ಕುಮಾರ್ ಅವರು ಶನಿವಾರ ರಾತ್ರಿ ಗುಂಡ್ಲುಪೇಟೆ ತಾಲ್ಲೂಕಿನ ಮದ್ದೂರು ಕಾಲೋನಿಯಲ್ಲಿ ವಾಸ್ತವ್ಯ ಹೂಡಿ ಸ್ಥಳೀಯರ ಕುಂದುಕೊರತೆ ವಿಚಾರಿಸಿದರು.
ಸಂಜೆಯ ವೇಳೆಗೆ ಹರೀಶ್ ಕುಮಾರ್ ರವರು ಕಾಲೋನಿಗೆ ಆಗಮಿಸುತ್ತಿದ್ದಂತೆಯೇ ಅರಣ್ಯವಾಸಿಗಳು ಆರತಿ ಮಾಡಿ ಸಾಂಪ್ರದಾಯಿಕ ವಾದ್ಯಗಳನ್ನು ನುಡಿಸಿ ಅಕ್ಕರೆಯಿಂದ ಬರಮಾಡಿಕೊಂಡರು.
ಬಳಿಕ ಕಾಲೋನಿಯ ಪ್ರತೀಬೀದಿಗಳಲ್ಲೂ ಸಂಚರಿಸಿದ ಹರೀಶ್ ಕುಮಾರ್ ಅವರು ಮನೆಗಳಿಗೆ ಭೇಟಿಕೊಟ್ಟು ಮೂಲಸೌಕರ್ಯಗಳನ್ನು ಪರಿಶೀಲಿಸಿದರು. ಜನರು ಅನುಭವಿಸುತ್ತಿರುವ ಸಮಸ್ಯೆಗಳ ವಾಸ್ತವ ಚಿತ್ರಣ ಪಡೆದುಕೊಂಡರು.
ಕುಡಿಯುವ ನೀರು ಪೂರೈಕೆ ಸರಿಯಾಗಿ ಆಗುತ್ತಿಲ್ಲ. ಸ್ಥಳೀಯವಾಗಿ ಉದ್ಯೋಗಖಾತರಿಯೋಜನೆಯಡಿ ಉದ್ಯೋಗ ಲಭಿಸುತ್ತಿಲ್ಲ. ಇರುವ ಮನೆಗಳು ತೀರಾ ಹಳೆಯದಾಗಿವೆ. ದುರಸ್ತಿಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಜನರು ಅಳಲು ತೋಡಿಕೊಂಡರು.
ಕಾಲೋನಿಯ ಹಲವು ಭಾಗಗಳಿಗೆ ಸಿ.ಸಿ.ರಸ್ತೆಯಿಲ್ಲ. ಚರಂಡಿ ಸೌಲಭ್ಯ ಕಲ್ಪಿಸಿಲ್ಲ. ಮೂಲ ಸೌಲಭ್ಯಗಳನ್ನು ಒದಗಿಸುವಲ್ಲಿ ಕಾಲೋನಿಯನ್ನು ಕಡೆಗಣಿಸಲಾಗುತ್ತಿದೆ ಎಂದು ಸ್ಥಳೀಯರು ದೂರಿದರು.
ತದನಂತರ ಗ್ರಾಮದಲ್ಲೇ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಜಿಲ್ಲಾ ಪಂಚಾಯತ್ ವತಿಯಿಂದ ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿದ ಆದಿವಾಸಿಗಳ ಮುಖಂಡರು ಸ್ಥಳೀಯರಿಗೆ ಬಹುಮುಖ್ಯವಾಗಿ ವಸತಿ ಸೌಲಭ್ಯ ಕಲ್ಪಿಸಬೇಕಿದೆ. ಮನೆಗಳನ್ನು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದಲೇ ನೇರವಾಗಿ ಫಲಾನುಭವಿಗಳಿಗೆ ನಿರ್ಮಿಸಿಕೊಡಬೇಕಿದೆ. ರಾಜೀವ್‍ಗಾಂಧಿ ವಸತಿ ನಿಗಮದ ವತಿಯಿಂದ ಯೋಜನೆ ಅನುಷ್ಠಾನವಾಗುತ್ತಿದ್ದು, ದಾಖಲೆಗಳನ್ನು ನೀಡುವ ಬಿಗಿ ಪ್ರಕ್ರಿಯೆಯಿಂದ ಅರ್ಹ ಫಲಾನುಭವಿಗಳು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಎಷ್ಟೋ ಅರ್ಹರಿಗೆ ಇನ್ನೂ ವೈಯಕ್ತಿಕ ಪ್ರಮಾಣ ಪತ್ರಗಳು ದಾಖಲೆಗಳು ಹಲವು ಕಾರಣಗಳಿಂದ ಪಡೆಯಲು ಸಾಧ್ಯವೇ ಆಗುತ್ತಿಲ್ಲ. ಬಿಗಿ ನಿಯಮ ಅನುಸರಿಸಿದರೆ ಮನೆಗಳನ್ನು ಪಡೆಯಲು ಸಾಧ್ಯವೇ ಇಲ್ಲ ಎಂದು ಗಮನ ಸೆಳೆದರು.
ಅರಣ್ಯ ಹಕ್ಕುಗಳನ್ನು ತ್ವರಿತವಾಗಿ ನೀಡಿದರೆ ಅನುಕೂಲವಾಗುತ್ತದೆ. ಕಿರುಅರಣ್ಯ ಉತ್ಪನ್ನ ಸಂಗ್ರಹಣೆಗೆ ಯಾವುದೇ ಅಡಚಣೆ ಮಾಡಬಾರದು ಎಂಬುದು ಸೇರಿದಂತೆ ಇನ್ನೂ ಹಲವು ಸಮಸ್ಯಗಳನ್ನು ಪರಿಹರಿಸುವಂತೆ  ಮುಖಂಡರು ಮನವಿ ಮಾಡಿದರು.
ಎಲ್ಲರ ಅಹವಾಲುಗಳನ್ನು ಆಲಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕಾಧಿಕಾರಿ ಡಾ|| ಕೆ.ಹರೀಶ್ ಕುಮಾರ್ ಅವರು ವಸತಿ ಯೋಜನೆಯಲ್ಲಿ ದುರುಪಯೋಗವಾಗದಂತೆ ನೋಡಿಕೊಳ್ಳುವ ಮತ್ತು ಪಾರದರ್ಶಕತೆ ಕಾಪಾಡಿಕೊಳ್ಳುವ ಉದ್ದೇಶದಿಂದ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಮನೆಗಳ ಮಂಜೂರಾತಿಗೆ ಕ್ರಮ ವಹಿಸಲಾಗಿದೆ. ದಾಖಲೆಗಳನ್ನು ಒದಗಿಸುವಲ್ಲಿ ಸರಳೀಕರಣ ಪ್ರಕ್ರಿಯೆ ಅಳವಡಿಸಿಕೊಳ್ಳಲು ಸ್ಥಳೀಯರು ಕೋರಿರುವಂತೆ ಉನ್ನತ ಮಟ್ಟದಲ್ಲಿ ಈ ಬಗ್ಗೆ ಗಮನ ಸೆಳೆಯುವುದಾಗಿ ನುಡಿದರು.
ಸ್ಥಳೀಯವಾಗಿ ವಸತಿ ಸೌಲಭ್ಯಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ. ಈ ಬಗ್ಗೆ ಆದ್ಯತೆ ನೀಡಿ ಸ್ಥಳೀಯ ಇತರೆ ಸಮಸ್ಯೆಗಳನ್ನು ಸಹಾ ಪ್ರಾಮಾಣಿಕವಾಗಿ ಪರಿಹರಿಸಲು ಕಾರ್ಯೋನ್ಮುಖರಾಗುವುದಾಗಿ ಹರೀಶ್ ಕುಮಾರ್ ರವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ಚೆನ್ನಪ್ಪ, ಸದಸ್ಯರಾದ ಬಿ.ಕೆ.ಬೊಮ್ಮಯ್ಯ, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಕೆ.ಎಸ್.ಜಗದೀಶ ಮೂರ್ತಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಾಜೇಶ್, ಮುಖಂಡರಾದ ಮುದ್ದಮ್ಮ, ರಾಜೇಂದ್ರ, ಮುದ್ದಯ್ಯ, ನಾಗರಾಜು ಮಾತನಾಡಿದರು.
ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷರಾದ ರೂಪ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕೃಷ್ಣಪ್ಪ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಪರಿಸರ ಮಿತ್ರ ಶಾಲಾ ಪ್ರಶಸ್ತಿ ಸ್ಪರ್ಧೆಗೆ ಆಹ್ವಾನ
ಚಾಮರಾಜನಗರ, ಸೆ. 23-   2018-19ರ ಪರಿಸರ ಮಿತ್ರ ಶಾಲಾ ಪ್ರಶಸ್ತಿ ಸ್ಪರ್ಧೆಗೆ ಜಿಲ್ಲೆಯ ಎಲ್ಲಾ ಶಾಲೆಗಳನ್ನು ಆಹ್ವಾನಿಸಲಾಗಿದೆ.
ಶಾಲೆಗಳನ್ನು ನೊಂದಣಿ ಮಾಡಿ ಸಂವಾದ ಕಾರ್ಯಕ್ರಮ ಏರ್ಪಡಿಸಿ ಮಾಹಿತಿ ನೀಡಿ ಮಾರ್ಗದರ್ಶಿ ಪುಸ್ತಕ ಪ್ರಶ್ನಾವಳಿ ನೀಡಲಾಗುತ್ತದೆ. ಮಾರ್ಗದರ್ಶಿ ಪುಸ್ತಕದ ಅಂಶಗಳ ಆಧಾರದಲ್ಲಿ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಮೌಲ್ಯ ಮಾಪನದಲ್ಲಿ ಶಾಲಾ ಮಕ್ಕಳನ್ನು ತೊಡಗಿಸಿಕೊಳ್ಳಲಾಗುತ್ತದೆ. ಶಾಲೆಗಳು ಹಿಂತಿರಿಗಿಸಿದ ಸ್ವಯಂ ಮೌಲ್ಯ ಮಾಪನ, ಪ್ರಶ್ನಾವಳಿಯ ವರದಿ ಆಧಾರದಮೇಲೆ ಶಾಲೆಗಳನ್ನು ಆಯ್ಕೆಮಾಡಲಾಗುತ್ತದೆ.
ಪ್ರಥಮ ಬಹುಮಾನವಾಗಿ 30 ಸಾವಿರ ರೂ, ಪರಿಸರ ಮಿತ್ರ ಶಾಲೆ ಪ್ರಮಾಣ ಪತ್ರ ನೀಡಲಾಗುತ್ತದೆ. ದ್ವಿತೀಯ ಬಹುಮಾನವಾಗಿ 10 ಶಾಲೆಗಳಿಗೆ ತಲಾ 5 ಸಾವಿರ ರೂ ಬಹುಮಾನ, ಹಸಿರು ಶಾಲೆ ಪ್ರಮಾಣ ಪತ್ರ ನೀಡಲಾಗುತ್ತದೆ. ತೃತೀಯ ಬಹುಮಾನವಾಗಿ 10 ಶಾಲೆಗಳಿಗೆ ತಲಾ 4 ಸಾವಿರ ರೂ, ಹಳದಿ ಶಾಲೆ ಪ್ರಮಾಣ ಪತ್ರ ನೀಡಲಾಗುತ್ತದೆ.
ಆಸಕ್ತ ಶಾಲೆಗಳು ತಮ್ಮ ಒಪ್ಪಿಗೆಯನ್ನು ಇ-ಮೇಲ್ ಛಿhm@ಞsಠಿಛಿb.gov.iಟಿ ಅಥವಾ ಕಚÉೀರಿ ದೂರವಾಣಿ ಸಂಖ್ಯೆ: 08226-223846 ಮೂಲಕ ನೀಡಬಹುದು. ಪರಿಸರ ಅಧಿಕಾರಿ ಎಂ.ಜಿ.ರಘುರಾಮ್(ಮೊ : 9845026348, ಬಿ.ಎನ್.ಶಿವಶಂಕರ್, ಕಾರ್ಯದರ್ಶಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ಮೊ-9449179383, ವೈ.ಎಸ್.ರಾಧಾ, ಉಪ ಪರಿಸರ ಅಧಿಕಾರಿ, ಮೊ-9880933020, ಹರಿಪ್ರಸಾದ್, ಸಹಾಯಕ ಪರಿಸರ ಅಧಿಕಾರಿ, ಮೊ-9008147755, ಅಥವಾ ನಗರದ ವಾಣಿಯರ್ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿಯ ಪ್ರಾದೇಶಿಕ ಕಚೇರಿಗೆ ಪತ್ರ ಬರೆದು ನೊಂದಾಯಿಸಿಕೊಳ್ಳಬೇಕು, ಸೆಪ್ಟೆಂಬರ್ 30 ನೊಂದಣಿಗೆ ಕಡೆಯ ದಿನವಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
x

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು