ನ. 26ರಂದು ಕನಕದಾಸರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧಾರ
ಚಾಮರಾಜನಗರ, ನ. 17 - ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳು ಸೇರಿದಂತೆ ಎಲ್ಲರ ಸಹಕಾರದೊಂದಿಗೆ ನವೆಂಬರ್ 26ರಂದು ಭಕ್ತಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ನಗರದ ಪೇಟೆ ಪ್ರೈಮರಿ ಶಾಲಾ ಅವರಣದಲ್ಲಿ ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕನಕದಾಸರ ಜಯಂತಿ ಆಚರಣೆ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡಲು ತೀರ್ಮಾನಿಸಲಾಯಿತು.
ಜಯಂತಿ ಕಾರ್ಯಕ್ರಮ ಆಯೋಜನೆ ಸಂಬಂಧ ಸಮುದಾಯದ ಮುಖಂಡರು ಹಾಗೂ ವಿವಿಧ ಸಂಘಸಂಸ್ಥೆಗಳ ಸಲಹೆಗಳನ್ನು ಆಲಿಸಿದ ನಂತರ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯತ್ರಿ ಅವರು ವಿವಿಧ ಇಲಾಖೆಗಳನ್ನೊಳಗೊಂಡ ಮೆರವಣಿಗೆ, ಸ್ವಾಗತ, ಅತಿಥ್ಯ ಸೇರಿದಂತೆ ಹಿಂದಿನ ಸಮಿತಿಗಳನ್ನು ಈ ಬಾರಿಯೂ ಸಹ ಮುಂದುವರೆಸಲಾಗಿದೆ. ಸಮುದಾಯದ ಮುಖಂಡರು ಸೇರಿದಂತೆ ಎಲ್ಲರ ಸಲಹೆ ಹಾಗೂ ಸಹಕಾರ ಪಡೆದು ಜಯಂತಿ ಕಾರ್ಯಕ್ರಮವನ್ನು ಏರ್ಪಡಿಸಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕನಕದಾಸರ ಕೀರ್ತನೆಗಳು, ಅವರ ವಿಚಾರಗಳ ಕುರಿತು ಉಪನ್ಯಾಸ ನೀಡಲು ಸೂಕ್ತ ಮುಖ್ಯ ಭಾಷಣಕಾರರನ್ನು ಆಯ್ಕೆ ಮಾಡುವ ಸಂಬಂಧ ನೀಡುವ ಸಲಹೆಗಳನ್ನು ಪರಿಗಣಿಸಲಾಗುವುದು. ಅಂತಿಮವಾಗಿ ಎಲ್ಲರ ಒಪ್ಪಿಗೆ ಅನುಸಾರ ಆಯ್ಕೆ ನಡೆಸಿ ಕಾರ್ಯಕ್ರಮ ನಡೆಸಲಾಗುವುದು. ಕಾರ್ಯಕ್ರಮಕ್ಕೆ ಬೇಕಿರುವ ಸಿದ್ಧತೆಗಳನ್ನು ಅಚ್ಚುಕಟ್ಟಾಗಿ ಅಧಿಕಾರಿಗಳು ಸುಸೂತ್ರವಾಗಿ ವಹಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ತಿಳಿಸಿದರು.
ಆಹ್ವಾನ ಪತ್ರಿಕೆ, ಮುದ್ರಣ, ವಿತರಣೆಯಂತಹ ಕೆಲಸಗಳನ್ನು ಸಮರ್ಪಕವಾಗಿ ಕೈಗೊಳ್ಳಬೇಕು. ವೇದಿಕೆ ಸಿದ್ಧತೆಗೆ ಸಹ ಅಗತ್ಯ ಅನುಸಾರ ಕಾರ್ಯೋನ್ಮುಖರಾಗಬೇಕು. ಶಿಷ್ಠಾಚಾರ ಪ್ರಕಾರ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸಲು ಅಧಿಕಾರಿಗಳು ಎಲ್ಲ ಕ್ರಮಗಳಿಗೆ ಮುಂದಾಗಬೇಕೆಂದು ಗಾಯತ್ರಿ ಅವರು ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯತ್ ಸದಸ್ಯರಾದ ಬಾಲರಾಜು, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧಿಕಾರಿ ಗೀತಾ ಪ್ರಸನ್ನ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಎಚ್. ಚೆನ್ನಪ್ಪ, ಕನಕ ಸಮಾಜದ ಅಧ್ಯಕ್ಷರಾದ ರಾಜಶೇಖರ್, ಮುಖಂಡರಾದ ಜನ್ನೂರು ಮಹದೇವ್, ಕೆ.ಬಿ. ಮಹದೇವೇಗೌಡ, ನಂಜುಂಡೇಗೌಡ, ಬಸಪ್ಪನಪಾಳ್ಯ ನಟರಾಜು, ಶಿವರಾಮು, ಹೇಮಂತ್ ಕುಮಾರ್, ಚಿನ್ನಸ್ವಾಮಿ, ಲಿಂಗಣ್ಣ, ಸೋಮಣ್ಣ, ಆಲೂರು ನಾಗೇಂದ್ರ, ಬ್ಯಾಡಮೂಡ್ಲು ಬಸವಣ್ಣ, ಕೆ.ಎಂ. ನಾಗರಾಜು, ಅಂಬರೀಷ ಕದಂಬ, ಪುರುಷೋತ್ತಮ್, ನಿಜದನಿ ಗೋವಿಂದರಾಜು, ಪರ್ವತರಾಜು, ಜಯಕುಮಾರ್, ಜಿಲ್ಲಾಮಟ್ಟದ ಅಧಿಕಾರಿಗಳು, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ 24111 ಫಲಾನುಭವಿಗಳಿಗೆ ಅನಿಲಭಾಗ್ಯ : ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಪುಟ್ಟರಂಗಶೆಟ್ಟಿ
ಚಾಮರಾಜನಗರ, ನ. 17- ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಿಗೆ ಉಚಿತವಾಗಿ ಅಡುಗೆ ಅನಿಲ ಒದಗಿಸುವ ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ 24111 ಫಲಾನುಭವಿಗಳಿಗೆ ಉಚಿತವಾಗಿ ಅಡುಗೆ ಅನಿಲ ವಿತರಿಸುವ ಗುರಿ ಹೊಂದಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ತಿಳಿಸಿದರು.ನಗರದ ರತ್ನೇಶ್ವರಿ ಹೋಟೆಲ್ ಸಭಾಂಗಣದಲ್ಲಿ ಇಂದು ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಯಡಿ ತಾಲೂಕಿನ ಫಲಾನುಭವಿಗಳಿಗೆ ಉಚಿತವಾಗಿ ಅಡುಗೆ ಅನಿಲ ಸಿಲಿಂಡರ್, ಸ್ಟೌವ್ ವಿತರಿಸಿ ಅವರು ಮಾತನಾಡಿದರು.
ಬಿಪಿಎಲ್ ಕುಟುಂಬದ ಅಡುಗೆ ಅನಿಲ ಸಂಪರ್ಕ ಹೊಂದಿಲ್ಲದವರಿಗೆ ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಯಡಿ ಉಚಿತವಾಗಿ ಅಡುಗೆ ಅನಿಲ ಸಿಲಿಂಡರ್, ಒಲೆ, ರೆಗ್ಯುಲೇಟರ್ ನೀಡಲಾಗುತ್ತಿದೆ. ಅನಿಲಭಾಗ್ಯ ಯೋಜನೆಯಡಿ ಪ್ರತಿ ಫಲಾನುಭವಿಗೆ 2704 ರೂ. ವೆಚ್ಚದಲ್ಲಿ ಸೌಲಭ್ಯವನ್ನು ತಲುಪಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ 15 ಲಕ್ಷ ಕುಟುಂಬಗಳಿಗೆ ಯೋಜನೆ ಸೌಲಭ್ಯ ಸಿಗಲಿದೆ ಎಂದು ಅಂದಾಜಿಸಲಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಮೊದಲನೆ ಹಂತವಾಗಿ 2411 ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲಾಗುತ್ತಿದೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಫಲಾನುಭವಿಗಳಿಗೆ ಯೋಜನೆ ಸೌಕರ್ಯ ಲಭ್ಯವಾಗಲಿದೆ. ಚಾಮರಾಜನಗರ ತಾಲೂಕಿನ 806 ಫಲಾನುಭವಿಗಳಿಗೆ ಮೊದಲ ಹಂತದಲ್ಲಿ ಅನಿಲಭಾಗ್ಯ ಯೋಜನೆಯಡಿ ಅಡುಗೆ ಅನಿಲ ಸಿಲಿಂಡರ್, ಸ್ಟೌವ್‍ಗಳನ್ನು ನೀಡಲಾಗುತ್ತಿದೆ ಎಂದರು.
ಚಾಮರಾಜನಗರ ತಾಲೂಕಿನ ಒಟ್ಟು 7 ಅಡುಗೆ ಅನಿಲ ಏಜೆನ್ಸಿಗಳ ಮೂಲಕ ತಾಲೂಕಿನ ಫಲಾನುಭವಿಗಳಿಗೆ ಅನಿಲ ಭಾಗ್ಯ ಯೋಜನೆಯನ್ನು ತಲುಪಿಸಲಾಗುತ್ತಿದೆ. ಹಂತಹಂತವಾಗಿ ಉಳಿದ ಎಲ್ಲ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಹೊಗೆರಹಿತ ಹಾಗೂ ಅರಣ್ಯ ಸಂರಕ್ಷಣೆ ಉದ್ದೇಶದಿಂದ ಅನಿಲಭಾಗ್ಯ ಯೋಜನೆ ಜಾರಿಗೆ ತರಲಾಗಿದೆ. ಕಾಡಂಚಿನ ಹಾಗೂ ಅರಣ್ಯ ವಾಸಿಗಳ ಜನತೆಗೆ ಉಚಿತವಾಗಿ ಈ ಹಿಂದಿನಿಂದಲೂ ಅರಣ್ಯ ಇಲಾಖೆ ಮೂಲಕ ಅಡುಗೆ ಅನಿಲ ಸಿಲಿಂಡರ್ ನೀಡಲಾಗುತ್ತಿದೆ. ಎಲ್ಲ ಬಿಪಿಎಲ್ ಕುಟುಂಬಗಳಿಗೂ ಸೌಲಭ್ಯ ಲಭಿಸಬೇಕೆಂಬ ಸದುದ್ದೇಶದಿಂದ ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಯನ್ನು ವ್ಯಾಪಕವಾಗಿ ಅನುಷ್ಠಾನ ಮಾಡಲಾಗುತ್ತಿದೆ ಎಂದು ಉಸ್ತುವಾರಿ ಸಚಿವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶಿವಮ್ಮ ಅವರು ಮಾತನಾಡಿ ಪರಿಸರ ಕಾಳಜಿ ಹಾಗೂ ಎಲ್ಲ ಜನರ ನೆರವಿಗಾಗಿ ಜಾರಿಗೆ ತರಲಾಗಿರುವ ಅನಿಲಭಾಗ್ಯ ಯೋಜನೆಯನ್ನು ಜಿಲ್ಲೆಯ ಜನತೆ ಪೂರ್ಣ ಪ್ರಮಾಣದಲ್ಲಿ ಸದುಪಯೋಗ ಮಾಡಿಕೊಳ್ಳಬೇಕೆಂದು ಸಲಹೆ ಮಾಡಿದರು.
ಆಹಾರ ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರಾದ ಆರ್. ರಾಚಪ್ಪ ಯೋಜನೆ ಕುರಿತು ವಿವರ ನೀಡಿದರು. ಇದೇವೇಳೆ ಅಡುಗೆ ಅನಿಲ ವಿತರಕರಿಂದ ಅಡುಗೆ ಅನಿಲ ಸಿಲಿಂಡರ್ ಬಳಕೆ ಹಾಗೂ ಬೆಂಕಿ ಅನಾಹುತಗಳಾಗದಂತೆ ವಹಿಸಬೇಕಿರುವ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಪ್ರಾತ್ಯಕ್ಷಿಕೆ ಸಹ ನಡೆಯಿತು.
ತಾಲೂಕು ಪಂಚಾಯತ್ ಅಧ್ಯಕ್ಷರಾದ ದೊಡ್ಡಮ್ಮ, ಸದಸ್ಯರಾದ ಮಹದೇವಶೆಟ್ಟಿ, ಅಡುಗೆ ಅನಿಲ ವಿತರಕ ಏಜೆನ್ಸಿ ಮಾಲೀಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸುಜಲ ಯೋಜನೆ ಸದುಪಯೋಗಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಸಲಹೆ
ಚಾಮರಾಜನಗರ, ನ. 17 - ಒಣಭೂಮಿ ಪ್ರದೇಶ ಹಾಗೂ ಮಳೆಯಾಶ್ರಿತ ಕೃಷಿಗೆ ಸಂಬಂದಿಸಿದಂತೆ ಆಧುನಿಕ ಮತ್ತು ವೈಜ್ಞಾನಿಕ ಮಾರ್ಗಗಳನ್ನು ಅನುಸರಿಸುವ ಸುಜಲ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಸಲಹೆ ಮಾಡಿದರು.
ನಗರದ ಶಿವಕುಮಾರಸ್ವಾಮಿ ಭವನದಲ್ಲಿ ಇಂದು ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಹಾಗೂ ಜಲಾನಯನ ಅಭಿವೃದ್ಧಿ ಇಲಾಖೆ ವತಿಯಿಂದ ಕೆಡಬ್ಲ್ಯೂಡಿಡಿ (ಸುಜಲ) ಯೋಜನೆಯಡಿ ರೈತರಿಗೆ ಹಮ್ಮಿಕೊಳ್ಳಲಾಗಿದ್ದ ಭೂ ಸಂಪನ್ಮೂಲ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವ ಬ್ಯಾಂಕಿನ ನೆರವಿನೊಂದಿಗೆ ಈ ಹಿಂದೆ ಕರ್ನಾಟಕ ಜಲಾನಯನ ಅಭಿವೃದ್ಧಿ ಯೋಜನೆ ಸುಜಲ-1 ಯೋಜನೆಯನ್ನು ರಾಜ್ಯದ 6 ಜಿಲ್ಲೆಗಳಲ್ಲಿ ಕೈಗೊಳ್ಳಲಾಗಿತ್ತು. ಸುಜಲ-3 ಯೋಜನೆಯಡಿ ಚಾಮರಾಜನಗರವೂ ಸೇರಿದಂತೆ ಒಟ್ಟು 11 ಜಿಲ್ಲೆಗಳಲ್ಲಿ 10 ಲಕ್ಷ ಹೆಕ್ಟೇರ್ ಭೂ ಪ್ರದೇಶದಲ್ಲಿ 1931 ಕಿರು ಜಲಾನಯನ ಪ್ರದೇಶಗಳಲ್ಲಿ ವೈಜ್ಞಾನಿಕ ತಂತ್ರಜ್ಞಾನದ ಆಧಾರದ ಮೇಲೆ ಜಲಾನಯನ ಅಭಿವೃದ್ಧಿಗೊಳಿಸಲು ಕಾರ್ಯಕ್ರಮ ನಡೆಯುತ್ತಿದೆ ಎಂದರು.
ಒಣ ಭೂಮಿ ಪ್ರದೇಶಗಳಲ್ಲಿ ಯೋಜನೆ ಅನುಷ್ಠಾನವಾಗುತ್ತಿದೆ. ಹರವೆ ಭಾಗದಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಹೆಚ್ಚು ಪರಿಣಾಮಕಾರಿಯಾಗಿ ಜಲಾನಯನ ನಿರ್ವಹಣೆ ಮಹತ್ವ ತೋರಿಸಲು ಹಾಗೂ ಮಳೆಯಾಶ್ರಿತ ಕೃಷಿ ಸಂಬಂಧಿತ ಕಾರ್ಯಕ್ರಮಗಳನ್ನು ಒಗ್ಗೂಡಿಸುವುದರ ಜತೆಗೆ ಆಧುನಿಕ ಮತ್ತು ವೈಜ್ಞಾನಿಕ ವಿಧಾನಗಳನ್ನು ಅನುಸರಿಸುವುದು ಯೋಜನೆಯ ಮುಖ್ಯ ಗುರಿಯಾಗಿದೆ ಎಂದು ಸಚಿವರು ತಿಳಿಸಿದರು.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ಸಹ ಗ್ರಾಮೀಣ ಭಾಗಗಳ ಚಟುವಟಿಕೆಗಳಿಗೆ ನೆರವಾಗಲಿದೆ. ಅಂತರ್ಜಲ ಅಭಿವೃದ್ಧಿಯಂತಹ ಕಾರ್ಯಕ್ರಮಗಳಿಗೆ ವಿಶೇಷ ಗಮನ ಕೊಡಲಾಗುತ್ತಿದೆ. ಕೃಷಿ ಹೊಂಡ, ಬದು ನಿರ್ಮಾಣ ಇತರೆ ಕೆಲಸ ನಿರ್ವಹಣೆ ಮಾಡಬಹುದಾಗಿದೆ ಎಂದು ಉಸ್ತುವಾರಿ ಸಚಿವರು ವಿವರಿಸಿದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಯೋಗೇಶ್ ಅವರು ಮಾತನಾಡಿ ರೈತರು ಕೃಷಿ ಕಟುವಟಿಕೆಗಳ ಜತೆಯಲ್ಲಿಯೇ ಹೈನುಗಾರಿಕೆಯನ್ನು ಸಹ ಕೈಗೊಳ್ಳಬೇಕಿದೆ. ಇದರಿಂದ ಆದಾಯ ವೃದ್ಧಿಗೊಳ್ಳಲಿದೆ. ಜಿಲ್ಲೆಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಅನುಷ್ಠಾನ ಮಾಡಿದ ಫಲವಾಗಿ ಅಂತರ್ಜಲ ವೃದ್ಧಿಯಾಗಿದೆ. ರೈತಪರ ಕಾರ್ಯಕ್ರಮಗಳು ಮುಂದುವರೆದಿವೆ ಎಂದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶಿವಮ್ಮ ಅವರು ಯೋಜನೆ ಸಂಬಂಧ ಮಾಹಿತಿ ಕಾರ್ಡುಗಳನ್ನು ಬಿಡುಗಡೆ ಮಾಡಿದರು. ಜಂಟಿ ಕೃಷಿ ನಿರ್ದೇಶಕರಾದ ಎಂ. ತಿರುಮಲೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ತಾಲೂಕು ಪಂಚಾಯತ್ ಅಧ್ಯಕ್ಷರಾದ ದೊಡ್ಡಮ್ಮ, ಜಿಲ್ಲಾ ಪಂಚಾಯತ್ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಚನ್ನಪ್ಪ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮರಗದಮಣಿ, ಸದಸ್ಯರಾದ ಬಿ.ಕೆ. ಬೊಮ್ಮಯ್ಯ, ಲೇಖಾ, ಕೆರೆಹಳ್ಳಿ ನವೀನ್, ತಾಲೂಕು ಪಂಚಾಯತ್ ಸದಸ್ಯರಾದ ಕುಮಾರನಾಯ್ಕ, ಮಹದೇವಶೆಟ್ಟಿ, ರೇವಣ್ಣ, ಶೋಭ, ನಂದೀಶ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ನ. 19ರಂದು ವಿಶ್ವ ಶೌಚಾಲಯ ದಿನಾಚರಣೆ : ನಗರದಿಂದ ಹರದನಹಳ್ಳಿಯವರೆಗೆ ಸೈಕಲ್ ಜಾಥಾ
ಚಾಮರಾಜನಗರ, ನ. 17 :- ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ವತಿಯಿಂದ ವಿಶ್ವ ಶೌಚಾಲಯ ದಿನಾಚರಣೆಯನ್ನು ನವೆಂಬರ್ 19ರಂದು ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ 10 ಗಂಟೆಗೆ ನಗರದ ಜಿಲ್ಲಾಡಳಿತ ಭವನದಿಂದ ಅಧಿಕಾರಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು ಸೈಕಲ್ ಜಾಥಾ ಮೂಲಕ ಹರದನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣಕ್ಕೆ ತಲುಪಲಿದ್ದಾರೆ. ಹರದನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಬೆಳಿಗ್ಗೆ 11 ಗಂಟೆಗೆ ವಿಶ್ವ ಶೌಚಾಲಯ ದಿನ ಆಚರಣೆಯ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರÉ.
ಕೊಳ್ಳೇಗಾಲ : ಪಿಟ್ ಪದ್ದತಿಯಲ್ಲಿ ತ್ಯಾಜ್ಯ ನೀರು ವಿಲೇವಾರಿಗೆ ಮನವಿ
ಚಾಮರಾಜನಗರ, ನ. 17 ಕೊಳ್ಳೇಗಾಲ ಪಟ್ಟಣದಲ್ಲಿ ಈ ಹಿಂದೆ ಅನುಸರಿಸುತ್ತಿದ್ದ ಪಿಟ್ ಪದ್ಧತಿಯಲ್ಲಿ ತ್ಯಾಜ್ಯ ನೀರನ್ನು ವಿಲೇವಾರಿ ಮಾಡುವಂತೆ ನಗರಸಭೆ ತಿಳಿಸಿದೆ.
ಕೊಳ್ಳೇಗಾಲ ಪಟ್ಟಣದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ 2ನೇ ಹಂತದ ಒಳಚರಂಡಿ ಕಾಮಗಾರಿ ಯೋಜನೆ ಇನ್ನು ಅನುಷ್ಠಾನ ಹಂತದಲ್ಲಿದ್ದು ಅಪೂರ್ಣಗೊಂಡಿರುತ್ತದೆ. ಸಂಸ್ಕರಣಾ ಘಟಕ, ವೆಟ್ ವೆಲ್ ನಿರ್ಮಾಣ ಮತ್ತು ಕೆಲವು ಸ್ಥಳಗಳಲ್ಲಿ ಒಳಚರಂಡಿ ಮಾರ್ಗಗಳನ್ನು ಅಳವಡಿಸುವ ಕಾಮಗಾರಿ ಇನ್ನು ಪ್ರಾರಂಭಿಸಿಲ್ಲ. ಪಟ್ಟಣದಲ್ಲಿ ಭಾಗಶ: ಅಳವಡಿಸಿರುವ ಒಳಚರಂಡಿ ಮಾರ್ಗಕ್ಕೆ ಯಾವುದೇ ಪೂರ್ವ ಅನುಮತಿ ಇಲ್ಲದೆ ಮನೆ ಸಂಪರ್ಕಗಳನ್ನು ನೀಡಿರುವುದರಿಂದ ಕೊಳಚೆ ನೀರು ಅಲ್ಲಲ್ಲಿ ಉಕ್ಕಿ ಹರಿಯುತ್ತಿದ್ದು ಅನೈರ್ಮಲ್ಯ ವಾತಾವರಣ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾಗರಿಕರು ಒಳಚರಂಡಿ ಮಾರ್ಗಗಳಿಗೆ ಇರುವ ಮನೆ ಸಂಪರ್ಕಗಳನ್ನು ಕೂಡಲೇ ಕಡಿತಗೊಳಿಸಿ ಈ ಹಿಂದೆ ಅನುಸರಿಸುತ್ತಿದ್ದ ಪಿಟ್ ಪದ್ಧತಿಯಲ್ಲಿ ತ್ಯಾಜ್ಯ ನೀರನ್ನು ವಿಲೇವಾರಿ ಮಾಡಬೇಕು. 2ನೇ ಹಂತದ ಕಾಮಗಾರಿಯು ಇನ್ನು ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿದ್ದು ನಂತರ ತೊಂದರೆ ಬಾರದಂತೆ ನಿಯಮಾನುಸಾರ ಒಳಚರಂಡಿ ಸಂಪರ್ಕ ಒದಗಿಸಿಕೊಡಲಾಗುತ್ತದೆ.
ಸಾರ್ವಜನಿಕ ಹಿತದೃಷ್ಠಿಯಿಂದ ನಾಗರಿಕರು ನಗರಸಭೆ ಮತ್ತು ಒಳಚರಂಡಿ ಮಂಡಳಿಯೊಂದಿಗೆ ಸಹಕರಿಸುವಂತೆ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ಕೋರಿದ್ದಾರÉ.
ನ. 20ರಂದು ನಗರದಲ್ಲಿ ಜಿಲ್ಲಾಮಟ್ಟದ ಯುವಜನೋತ್ಸವ ಉದ್ಘಾಟನೆ
ಚಾಮರಾಜನಗರ, ನ. 17 - ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಸಂಯುಕ್ತ ಯುವಜನ ಸಂಘದ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಯುವಜನೋತ್ಸವ ಉದ್ಘಾಟನಾ ಕಾರ್ಯಕ್ರಮವು ನವೆಂಬರ್ 20ರಂದು ಬೆಳಿಗ್ಗೆ 11.30 ಗಂಟೆಗೆ ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ನಡೆಯಲಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅಧ್ಯಕ್ಷತೆ ವಹಿಸುವರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶಿವಮ್ಮ, ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ, ಶಾಸಕರಾದ ಆರ್. ನರೇಂದ್ರ, ಎನ್. ಮಹೇಶ್, ಸಿ.ಎಸ್. ನಿರಂಜನಕುಮಾರ್, ಮರಿತಿಬ್ಬೇಗೌಡ, ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜು), ಧರ್ಮಸೇನ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಜೆ. ಯೋಗೀಶ್, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮರುಗದಮಣಿ, ತಾಲೂಕು ಪಂಚಾಯತ್ ಅಧ್ಯಕ್ಷರಾದ ದೊಡ್ಡಮ್ಮ, ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರೆಂದು ಪ್ರಕಟಣೆ ತಿಳಿಸಿದÉ.
ಕೆ.ಪಿ.ಎಸ್.ಸಿ ನೇಮಕಾತಿ: ಸಿ.ಎಂ ಅವರೊಂದಿಗೆ ಚರ್ಚೆ-ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ
ಚಾಮರಾಜನಗರ, ನ. 17- ಕರ್ನಾಟಕ ಲೋಕಸೇವಾ ಆಯೋಗದ ನೇರ ನೇಮಕಾತಿ ಸಂಬಂಧ ತಳೆದಿರುವ ನಿಲುವಿನ ಕುರಿತು ಮಾನ್ಯ ಮುಖ್ಯಮಂತ್ರಿಯವರೊಂದಿಗೆ ಹಾಗೂ ಕ್ಯಾಬಿನೇಟ್‍ನಲ್ಲಿ ವಿಷಯ ಪ್ರಸ್ತಾಪಿಸಿ ಸಂಬಂಧಪಟ್ಟ ವರ್ಗಗಳಿಗೆ ಅನ್ಯಾಯವಾಗದಂತೆ ಸರಿಪಡಿಸಲು ಕ್ರಮ ವಹಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟಗಂಗಶೆಟ್ಟಿ ಅವರು ತಿಳಿಸಿದ್ದಾರೆ.
ಸರ್ಕಾರದ ಆದೇಶಸಂಖ್ಯೆ: ಸಿಆಸುಇ:08:ಸೆಹಿಮ:95 ಬೆಂಗಳೂರು ದಿನಾಂಕ: 20.06.1995 ರಲ್ಲಿ ಪರಿಶಿಷ್ಟಜಾತಿ, ಪರಿಶಿಷ್ಟವರ್ಗ ಹಾಗೂ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನಿಗದಿಪಡಿಸುವಾಗ ಯಾವ ರೀತಿ ಆಯ್ಕೆ ವಿಧಾನವನ್ನು ಅನುಸರಿಸಬೇಕೆಂಬುದನ್ನು ಸ್ಪಷ್ಟಪಡಿಸಲಾಗಿರುತ್ತದೆ. ಇದನ್ನು ಪರಿಶಿಷ್ಟ ಜಾತಿ, ವರ್ಗಗಳಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುತ್ತಾ ಕಳೆದ 23 ವರ್ಷಗಳಿಂದಲೂ ಅನುಷ್ಠಾನಗೊಳಿಸಲಾಗುತ್ತಿದೆ.
ಆದರೆ ಸರ್ಕಾರದ ಪತ್ರಸಂಖ್ಯೆ: ಸಿಆಸುಇ:66:ಸೇಲೋಸೇ:2018. ದಿನಾಂಕ: 03.11.2018ರಲ್ಲಿ ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿಸಂಖ್ಯೆ 27674/2012ರಲ್ಲಿ ಹೊರಡಿಸಿರುವ ತೀರ್ಪಿನಲ್ಲಿ ಮಾರ್ಗಸೂಚಿಯನ್ನು ನಿಗದಿಪಡಿಸಲಾಗಿದ್ದು, ಅದನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕೆಂದು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿಗೆ ಸೂಚಿಸಲಾಗಿದೆ.
ಈ ರಿಟ್ ಅರ್ಜಿಯಲ್ಲಿ ಅನುಸರಿಸಲು ಸೂಚಿಸಿರುವ ಮಾರ್ಗಸೂಚಿಯು ಕೇವಲ ಆ ರಿಟ್ ಅರ್ಜಿಯಲ್ಲಿ ಇರುವಂತಹ ಪ್ರಕರಣಕ್ಕೆ ಮಾತ್ರವೇ ಸಂಬಂಧಿಸಿದ್ದಾಗಿರುತ್ತದೆ. ಮೇಲಾಗಿ ಆ ತೀರ್ಪಿನ ವಿರುದ್ಧ ಸರ್ಕಾರವು ಮರುಪರಿಶೀಲನಾ ಅರ್ಜಿಯನ್ನು ದಾಖಲಿಸಿರುತ್ತದೆ. ಆದರೂ ಕೂಡ ಈ ರೀತಿ ನಿರ್ದೇಶನ ನೀಡಿರುವುದು ಪರಿಶಿಷ್ಟ ಜಾತಿ, ವರ್ಗಗಳ ಹಾಗೂ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಅನ್ಯಾಯವಾಗುವುದರಿಂದ ಅದನ್ನು ನಾನು ವಿರೋಧಿಸುತ್ತೇನೆ.
ಈ ತೀರ್ಪಿನಲ್ಲಿ ನೀಡಿರುವ ಮಾರ್ಗಸೂಚಿಯನ್ನು ಅನುಸರಿಸುವುದರಿಂದ ಪರಿಶಿಷ್ಟ ಜಾತಿ, ವರ್ಗ ಮತ್ತು ಹಿಂದುಳಿದ ವರ್ಗಗಳ ಪ್ರತಿಭಾವಂತ ವಿದ್ಯಾರ್ಥಿಗಳು ಸಾಮಾನ್ಯ ವರ್ಗದ ಕೋಟಾದ ಅಡಿಯಲ್ಲಿ ಹುದ್ದೆಗಳನ್ನು ಪಡೆಯುವ ಅವಕಾಶದಿಂದ ವಂಚಿತರಾಗುತ್ತಾರೆ. ಇದು ಸಹಜ ಸಾಮಾಜಿಕ ನ್ಯಾಯಕ್ಕೆ ವಿರೋಧವಾದ ಮಾರ್ಗದರ್ಶನವಾಗುತ್ತದೆ.
ಈ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳ ಜೊತೆ ಹಾಗೂ ಕ್ಯಾಬಿನೆಟ್‍ನಲ್ಲಿ ಈ ವಿಷಯ ಪ್ರಸ್ತಾಪಿಸಿ ಈ ವರ್ಗಗಳಿಗೆ ಅನ್ಯಾಯವಾಗದಂತೆ ಸರಿಪಡಿಸಲುಕ್ರಮ ಕೈಗೊಳ್ಳುತ್ತೇನೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟಗಂಗಶೆಟ್ಟಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನವೆಂಬರ್ 20, 21ರಂದು ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವರ ಜಿಲ್ಲಾ ಪ್ರವಾಸ
ಚಾಮರಾಜನಗರ, ನ. 17:- ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವರಾದ ಸಾ.ರಾ. ಮಹೇಶ್ ಅವರು ನವೆಂಬರ್ 20 ಮತ್ತು 21ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ನ. 20ರಂದು ಮಧ್ಯಾಹ್ನ 3 ಗಂಟೆಗೆ ಚಾಮರಾಜನಗರಕ್ಕೆ ಆಗಮಿಸುವ ಸಚಿವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರೊಂದಿಗೆ ಸಭೆ ನಡೆಸುವರು. ನಂತರ 4.30 ಗಂಟೆಗೆ ರೇಷ್ಮೆ ಗೂಡಿನ ಮಾರುಕಟ್ಟೆ ಸ್ಥಳ ಪರಿಶೀಲನೆ ಮಾಡುವರು. ಸಂಜೆ 5.30 ಗಂಟೆಗೆ ಚಿಕ್ಕಹೊಳೆ ಹಾಗೂ ಸುವರ್ಣಾವತಿ ಜಲಾಶಯಗಳಿಗೆ ಭೇಟಿ ಬಳಿಕ ವಾಸ್ತವ್ಯ ಮಾಡುವರು.
ನ. 21ರಂದು ಬೆಳಿಗ್ಗೆ 9 ಗಂಟೆಗೆ ಬಿಳಿಗಿರಿರಂಗನ ಬೆಟ್ಟಕ್ಕೆ ಭೇಟಿ ನೀಡುವರು. 11.30 ಗಂಟೆಗೆ ಸಂತೇಮರಹಳ್ಳಿಯಲ್ಲಿ ರೇಷ್ಮೆ ಇಲಾಖೆಯ ಸ್ಥಳ ಪರಿಶೀಲನೆ ನಡೆಸುವರು. ಮಧ್ಯಾಹ್ನ 12.30 ಗಂಟೆಗೆ ಕುದೇರಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡುವರು. ಸಂಜೆ 4 ಗಂಟೆಗೆ ಮೈಸೂರಿಗೆ ತೆರಳುವರು ಎಂದು ಸಚಿವರ ಅಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
x
No comments:
Post a Comment