Thursday, 8 November 2018

26-09-2018 (ಸೆ. 26ರಂದು ನಗರದಲ್ಲಿ ವಿದ್ಯಾಗಣಪತಿ ವಿಸರ್ಜನಾ ಮೆರವಣಿಗೆ)

ಸೆ. 26ರಂದು ನಗರದಲ್ಲಿ ವಿದ್ಯಾಗಣಪತಿ ವಿಸರ್ಜನಾ ಮೆರವಣಿಗೆ

ಚಾಮರಾಜನಗರ, ಸೆ. 24 - ಚಾಮರಾಜನಗರ ಪಟ್ಟಣದಲ್ಲಿ ಪ್ರತಿಷ್ಠಾಪಿಸಿರುವ ಶ್ರೀ ವಿದ್ಯಾಗಣಪತಿ ವಿಗ್ರಹದ ವಿಸರ್ಜನಾ ಮೆರವಣಿಗೆಯು ಸೆಪ್ಟೆಂಬರ್ 26ರಂದು ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಹಾದುಹೋಗಲಿದೆ. ಕಾನೂನು ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಬಿ.ಬಿ. ಕಾವೇರಿ ಅವರು 26ರ ಬೆಳಿಗ್ಗೆ 7 ಗಂಟೆಯಿಂದ 27ರ ಬೆಳಿಗ್ಗೆ 7 ಗಂಟೆಯವರೆಗೆ ಮೆರವಣಿಗೆ ಸಂಚರಿಸುವ ಪ್ರಮುಖ ಬೀದಿಗಳಲ್ಲಿ ಕಟ್ಟಡಗಳ ಮೇಲೆ ಸಾರ್ವಜನಿಕರು ಹತ್ತಿ ಕುಳಿತುಕೊಳ್ಳುವುದು ಹಾಗೂ ಮಹಡಿ ಮೇಲಿನಿಂದ ಗುಂಪುಕಟ್ಟಿಕೊಂಡು ಮೆರವಣಿಗೆ ವೀಕ್ಷಿಸುವುದನ್ನು ನಿಷೇಧಿಸಿ ಆದೇಶಿಸಿದ್ದಾರೆ.
ನಗರದ ಪ್ರಮುಖ ಬೀದಿಗಳಾದ ಖಡಕಪುರ ಮೊಹಲ್ಲ, ಅಂಬೇಡ್ಕರ್ ಬಡಾವಣೆ, ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ರಸ್ತೆ, ದೇವಾಂಗ 3ನೇ ಬೀದಿ, ನಾಗಪ್ಪಶೆಟ್ಟರ ವೃತ್ತ, ದೊಡ್ಡ ಅಂಗಡಿ ಬೀದಿ, ಗುಂಡ್ಲುಪೇಟೆ ವೃತ್ತ, ಗಾಡಿಖಾನೆ ಮೊಹಲ್ಲ ಬೀದಿ, ಮೇಗಲ ಪರಿವಾರ ನಾಯಕರ ಬೀದಿ, ಕನ್ನಿಕಾ ಪರಮೇಶ್ವರಿ ದೇವಸ್ಥಾನದ ರಸ್ತೆ, ಮಾರ್ಕೆಟ್ ವೃತ್ತ, ಸಂತೆಮರಹಳ್ಳಿ ವೃತ್ತ, ಆದಿಶಕ್ತಿ ದೇವಸ್ಥಾನದ ಬೀದಿ, ಬಣಜಿಗರ ಬೀದಿ, ಭ್ರಮರಾಂಭ ಬಡಾವಣೆಯ 1 ಹಾಗೂ 2ನೇ ಕ್ರಾಸ್, ಕುರುಬರ ಬೀದಿ, ಹಳ್ಳದ ಬೀದಿ, ಅಗ್ರಹಾರ ಬೀದಿ, ಪೊಲೀಸ್ ಕಚೇರಿ ರಸ್ತೆ, ಖಾಸಗಿ ಬಸ್ ನಿಲ್ದಾಣ, ವೀರಭದ್ರ ದೇವಸ್ಥಾನ, ಜೈನರ ಬೀದಿ, ಆಂಜನೇಯ ದೇವಸ್ಥಾನದ ಬೀದಿಯಲ್ಲಿ ಸಾಗಿ ದೊಡ್ಡ ಅರಸನ ಕೊಳದಲ್ಲಿ ವಿಸರ್ಜನೆ ನಡೆಯಲಿದೆ.
ಸದರಿ ಬೀದಿಗಳಲ್ಲಿನ ಕಟ್ಟಡಗಳ ಮೇಲೆ ಸಾರ್ವಜನಿಕರು ಹತ್ತಿ ಕುಳಿತುಕೊಳ್ಳುವುದು ಹಾಗೂ ಮಹಡಿ ಮೇಲಿನಿಂದ ಗುಂಪು ಕಟ್ಟಿಕೊಂಡು ಮೆರವಣಿಗೆ ವೀಕ್ಷಿಸುವುದನ್ನು ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. 
ಸೆ. 26ರಂದು ನಗರದಲ್ಲಿ ವಿದ್ಯಾಗಣಪತಿ ವಿಸರ್ಜನಾ ಮೆರವಣಿಗೆ : ಸೆಕ್ಟರ್ ಅಧಿಕಾರಿಗಳ ನೇಮಕ
ಚಾಮರಾಜನಗರ, ಸೆ. 2- ಪಟ್ಟಣದಲ್ಲಿ ಪ್ರತಿಷ್ಠಾಪಿಸಿರುವ ಶ್ರೀ ವಿದ್ಯಾಗಣಪತಿ ವಿಗ್ರಹದ ವಿಸರ್ಜನಾ ಮೆರವಣಿಗೆಯು ಸೆಪ್ಟೆಂಬರ್ 26ರಂದು ಬೆಳಿಗ್ಗೆ 7 ಗಂಟೆಯಿಂದ ನಗರದ ಪ್ರಮುಖ ಬೀದಿಗಳಲ್ಲಿ ಹಾದುಹೋಗಲಿದ್ದು, ಕಾನೂನು ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಮೆರವಣಿಗೆ ಹಾದುಹೋಗುವ ಪ್ರಮುಖ ಬೀದಿಗಳನ್ನು ಏಳು ಸೆಕ್ಟರ್‍ಗಳನ್ನಾಗಿ ವಿಂಗಡಿಸಿ ಪ್ರತಿ ಸೆಕ್ಟರ್‍ಗೂ 7 ವಿಶೇಷ ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಬಿ.ಬಿ. ಕಾವೇರಿ ಅವರು ಆದೇಶ ಹೊರಡಿಸಿದ್ದಾರೆ.
ನಗರದ ಖಡಕಪುರ ಮೊಹಲ್ಲ, ಅಂಬೇಡ್ಕರ್ ಬಡಾವಣೆ, ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ರಸ್ತೆ, ದೇವಾಂಗ 3ನೇ ಬೀದಿ ಸೆಕ್ಟರ್ ಅಧಿಕಾರಿಯಾಗಿ ಕೊಳ್ಳೇಗಾಲ ತಾಲೂಕು ದಂಡಾಧಿಕಾರಿ ಹಾಗೂ ತಹಸೀಲ್ದಾರ್ ನೇಮಿಸಲಾಗಿದೆ. ನಾಗಪ್ಪಶೆಟ್ಟರ ವೃತ್ತ, ದೊಡ್ಡ ಅಂಗಡಿ ಬೀದಿ, ಗುಂಡ್ಲುಪೇಟೆ ವೃತ್ತ, ಗಾಡಿಖಾನೆ ಮೊಹಲ್ಲ ಬೀದಿಗೆ ಗುಂಡ್ಲುಪೇಟೆ ತಾಲೂಕು ದಂಡಾಧಿಕಾರಿ ಹಾಗೂ ತಹಸೀಲ್ದಾರ್ ನೇಮಕ ಮಾಡಲಾಗಿದೆ. 
ಮೇಗಲ ಪರಿವಾರ ನಾಯಕರ ಬೀದಿ, ಕನ್ನಿಕಾ ಪರಮೇಶ್ವರಿ ದೇವಸ್ಥಾನದ ರಸ್ತೆ, ಮಾರ್ಕೆಟ್ ವೃತ್ತ, ಸಂತೆಮರಹಳ್ಳಿ ವೃತ್ತ ಭಾಗಕ್ಕೆ ಚಾಮರಾಜನಗರ ತಾಲೂಕು ದಂಡಾಧಿಕಾರಿ ಹಾಗೂ ತಹಸೀಲ್ದಾರ್ ಅವರನ್ನು ಮತ್ತು ಆದಿಶಕ್ತಿ ದೇವಸ್ಥಾನದ ಬೀದಿ, ಬಣಜಿಗರ ಬೀದಿ, ಭ್ರಮರಾಂಭ ಬಡಾವಣೆಯ 1 ಹಾಗೂ 2ನೇ ಕ್ರಾಸ್, ಕುರುಬರ ಬೀದಿ ಭಾಗಕ್ಕೆ ಯಳಂದೂರು ತಾಲೂಕು  ದಂಡಾಧಿಕಾರಿ ಹಾಗೂ ತಹಸೀಲ್ದಾರ್‍ರನ್ನು ಸೆಕ್ಟರ್ ಅಧಿಕಾರಿಯನ್ನಾಗಿ ನಿಯುಕ್ತಿಗೊಳಿಸಲಾಗಿದೆ.
ಹಳ್ಳದ ಬೀದಿ, ಅಗ್ರಹಾರ ಬೀದಿ, ಹಳೇ ಎಸ್ ಪಿ, ಪೊಲೀಸ್ ಅಧೀಕ್ಷಕರ ಕಚೇರಿ ರಸ್ತೆ, ಹಳೇ ಖಾಸಗಿ ಬಸ್ ನಿಲ್ದಾಣ ಮಾರ್ಗಕ್ಕೆ ಗುಂಡ್ಲುಪೇಟೆ ತಹಸೀಲ್ದಾರ್ ಗ್ರೇಡ್-2 ಅವರನ್ನು ಹಾಗೂ ವೀರಭದ್ರ ದೇವಸ್ಥಾನ, ಜೈನರ ಬೀದಿ, ಆಂಜನೇಯ ದೇವಸ್ಥಾನದ ಬೀದಿ ಹಾಗೂ ದೊಡ್ಡ ಅರಸನ ಕೊಳ ಮಾರ್ಗಕ್ಕೆ ಹನೂರು ತಹಸೀಲ್ದಾರ್ ಅವರನ್ನು ನೇಮಕ ಮಾಡಲಾಗಿದೆ.
ವಿದ್ಯಾಗಣಪತಿ ವಿಗ್ರಹದ ವಿಸರ್ಜನಾ ಮೆರವಣಿಗೆಯು 26ರ ಬೆಳಿಗ್ಗೆ ಆರಂಭವಾಗಿ ಕಾರ್ಯಕ್ರಮ ಮುಗಿಯುವವರೆಗೂ ಸಂಪೂರ್ಣ ಕಾನೂನು ಸುವ್ಯವಸ್ಥೆಯ ಉಸ್ತುವಾರಿ ಹಾಗೂ ಮೇಲ್ವಿಚಾರಣೆಯನ್ನು ನೋಡಿಕೊಳ್ಳಲು ಕೊಳ್ಳೇಗಾಲ ಉಪವಿಭಾಗಾಧಿಕಾರಿಗಳನ್ನು ನೇಮಿಸಲಾಗಿದೆ.
ಮೆರವಣಿಗೆ ಸಾಗುವ ಹಾದಿಗಳಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಗೆ ಯಾವುದೇ ಭಂಗ ಉಂಟಾಗದಂತೆ  ನೋಡಿಕೊಳ್ಳಲು ನೇಮಿಸಿ ಆದೇಶಿಸಿರುವ ವಿಶೇಷ ಸೆಕ್ಟರ್ ಅಧಿಕಾರಿಗಳು ಮೇಲ್ವಿಚಾರಣೆಗಾಗಿ ನಿಯೋಜಿಸಿರುವ ಸ್ಥಳದಲ್ಲಿ ಹಾಜರಿರಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಬಿ.ಬಿ. ಕಾವೇರಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಸೆ. 26ರಂದು ಸೆಸ್ಕ್ ಜನಸಂಪರ್ಕ ಸಭೆ
ಚಾಮರಾಜನಗರ, ಸೆ. 24  ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು ಸಂತೆಮರಹಳ್ಳಿ ಉಪವಿಭಾಗದ ಜನಸಂಪರ್ಕ ಸಭೆಯು ಸಂತೆಮರಹಳ್ಳಿ ಉಪವಿಭಾಗದ ಸೆಸ್ಕ್ ಕಚೇರಿಯಲ್ಲಿ ಸೆಪ್ಟೆಂಬರ್ 26ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ನಡೆಯಲಿದೆ.
ವಿದ್ಯುತ್ ಸಮಸ್ಯೆಗಳಿದ್ದಲ್ಲಿ ಸಾರ್ವಜನಿಕರು ಸಭೆಗೆ ಹಾಜರಾಗಿ ತಮ್ಮ ಅಹವಾಲು ಸಲ್ಲಿಸುವಂತೆ ಸಂತೇಮರಹಳ್ಳಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆ. 26ರಂದು ವಿದ್ಯುತ್ ವ್ಯತ್ಯಯ
ಚಾಮರಾಜನಗರ, ಸೆ. 24 :- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು ಹರವೆ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಸೆಪ್ಟೆಂಬರ್ 26ರಂದು ತ್ರೈಮಾಸಿಕ ಕಾರ್ಯನಿರ್ವಹಣಾ ಕಾರ್ಯವನ್ನು ಹಮ್ಮಿಕೊಂಡಿದೆ.
ಅಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಮೂಡ್ನಾಕೂಡು, ಮುಕ್ಕಡಹಳ್ಳಿ, ಉಡಿಗಾಲ, ನಂಜೆದೇವನಪುರ, ಕಲ್ಪುರ, ದೇವಲಾಪುರ, ತಮ್ಮಡಹಳ್ಳಿ, ಎನ್ ಜೆ ವೈ ಹಾಗೂ ಸುತ್ತಮುತ್ತಲ ಪ್ರದೇಶಗಳ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಕಾರ್ಯನಿವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆ. 26, 27ರಂದು ಜಿಲ್ಲಾ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟ
ಚಾಮರಾಜನಗರ, ಸೆ. 24  ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ 2018-19ನೇ ಸಾಲಿನ ಜಿಲ್ಲಾ ಮಟ್ಟದ ಶಾಲಾ ಬಾಲಕ, ಬಾಲಕಿಯರ ಅಥ್ಲೆಟಿಕ್ ಕ್ರೀಡಾಕೂಟವನ್ನು ಸೆಪ್ಟೆಂಬರ್ 26 ಹಾಗೂ 27ರಂದು ಹನೂರಿನ ಶ್ರೀ ಮಹದೇಶ್ವರ ಕ್ರೀಡಾಂಗಣದಲ್ಲಿ ನಡೆಸಲಿದೆ.
ಸೆಪ್ಟೆಂಬರ್ 26ರಂದು ಪ್ರೌಢಶಾಲಾ ವಿಭಾಗಕ್ಕೆ ಹಾಗೂ 27ರಂದು ಹಿರಿಯ ಪ್ರಾಥಮಿಕ ಶಾಲಾ ವಿಭಾಗಕ್ಕೆ ಅಥ್ಲೆಟಿಕ್ ಕ್ರೀಡಾಕೂಟ ನಡೆಯಲಿದೆ.
ತಾಲೂಕು ಮಟ್ಟದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಕ್ರೀಡಾಪಟುಗಳು ಕ್ರೀಡಾಂಗಣದಲ್ಲಿ ಅಂದು ಬೆಳಿಗ್ಗೆ 8.30ಕ್ಕೆ ಹಾಜರಾಗಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಂಗಾರು ಬೆಳೆ ಸಮೀಕ್ಷೆ : ಸಹಾಯಕವಾಣಿ ಕೇಂದ್ರಕ್ಕೆ ಸಿಬ್ಬಂದಿ ನೇಮಕ
ಚಾಮರಾಜನಗರ, ಸೆ. 24  ಜಿಲ್ಲೆಯಲ್ಲಿ 2018ರ ಮುಂಗಾರು ಬೆಳೆ ಸಮೀಕ್ಷೆ ಕಾರ್ಯವನ್ನು ತಂತ್ರಜ್ಞಾನದ ಮೂಲಕ ಖಾಸಗೀ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಸಂಬಂಧ ಜಿಲ್ಲಾಕೇಂದ್ರದಲ್ಲಿ ಸಹಾಯವಾಣಿ ಕೇಂದ್ರವನ್ನು ಜಿಲ್ಲಾಧಿಕಾರಿಗಳ ಕಚೇರಿಯ ಕಂಟ್ರೋಲ್ ರೂಂ ನಂ. 104 ರಲ್ಲಿ ತೆರೆಯಲಾಗಿದ್ದು, ಸಹಾಯವಾಣಿ ಕೇಂದ್ರದ ದೂರವಾಣಿ ಸಂಖ್ಯೆ 08226-223160 ಆಗಿದೆ. ಕಂಟ್ರೋಲ್ ರೂಮ್ ನಿರ್ವಹಣೆಗಾಗಿ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ..
ಜಿಲ್ಲಾಧಿಕಾರಿಗಳ ಕಚೇರಿಯ ದ್ವಿತೀಯ ದರ್ಜೆ ಸಹಾಯಕರಾದ ಸುಚಿತ್ ಮೊಲೋಸ್ (ಮೊ. 9606218311), ಕೃಷಿ ಜಂಟಿ ನಿರ್ದೇಶಕರ ಕಚೇರಿಯ ಕೃಷಿ ಅಧಿಕಾರಿ ಶ್ವೇತಾ (ಮೊ. 8277930790), ತೋಟಗಾರಿಕೆ ಉಪನಿರ್ದೇಶಕರ ಕಚೇರಿಯ ಸಹಾಯಕರಾದ ಕೆಂಡಗಣ್ಣಪ್ಪ (9620106225) ಹಾಗೂ ಆಧಾರ್ ಸಮಾಲೋಚಕರಾದ ಟಿ.ಎಂ. ರಾಮ್‍ಪ್ರಸಾದ್ (ಮೊ. 9945275410) ಇವರನ್ನು ನೇಮಕ ಮಾಡಲಾಗಿದೆ.
ಸಮೀಕ್ಷೆ ಕಾರ್ಯ ಅತ್ಯಂತ ಮಹತ್ವದ್ದಾಗಿದ್ದು ಕೃಷಿ, ಕಂದಾಯ, ತೋಟಗಾರಿಕೆ ಇನ್ನಿತರ ಹಲವು ಇಲಾಖೆಗಳ ಪೂರ್ಣ ಮಾಹಿತಿಯನ್ನು ಸಂಗ್ರಹ ಮಾಡಲಾಗುತ್ತಿದೆ. ಸಮೀಕ್ಷೆ ಕಾರ್ಯವನ್ನು ಮೊಬೈಲ್ ಮೂಲಕ ಅಪ್ಲೋಡ್ ಮಾಡಲು ಬೆಂಗಳೂರಿನ ಇ-ಆಡಳಿತ ಕೇಂದ್ರ ಇವರು ಸಹಕಾರ ನೀಡಲಿದ್ದಾರೆ.
ಕನಿಷ್ಟ ಬೆಂಬಲ ಬೆಲೆ, ಕೃಷಿ ಮತ್ತು ತೋಟಗಾರಿಕೆಯ ಫಲಾನುಭವಿ ಯೋಜನೆಗಳು, ಬೆಳೆ ವಿಮೆ, ಬೆಳೆ ನಷ್ಟದ ಪರಿಹಾರ, ಪ್ರಕೃತಿ ವಿಕೋಪ, ಸಬ್ಸಿಡಿ ಮುಂತಾದ ಯೋಜನೆಗಳ ಅನುಷ್ಠಾನಕ್ಕೆ ಅನುಕೂಲವಾಗಲಿದೆ.
ರೈತರು ಸಮೀಕ್ಷೆ ಪ್ರಯೋಜನ ಪಡೆಯಲು ಗುರುತಿಸಲಾದ ಖಾಸಗಿ ನಿವಾಸಿಗಳಿಗೆ ಸಹಕರಿಸುವಂತೆ ಹಾಗೂ ಸರ್ವೇ ಕಾರ್ಯದಲ್ಲಿ ಉಂಟಾಗುವ ತೊಂದರೆಗಳನ್ನು ಜಿಲ್ಲಾ ಮಟ್ಟದಲ್ಲಿ ತೆರೆಯಲಾಗಿರುವ ಸಹಾಯವಾಣಿ ಕೇಂದ್ರಕ್ಕೆ ತಿಳಿಸಿ ಮುಂಗಾರು ಬೆಳೆ ಸಮೀಕ್ಷೆ ಕಾರ್ಯವನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಮನವಿಯಲ್ಲಿ ತಿಳಿಸಿದ್ದಾರೆ.
x

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು