ಗಡಿಯಂಚಿನ ಹಾಡಿಯಲ್ಲಿ ಜಿ.ಪಂ ಸಿ.ಇ.ಒ ಗ್ರಾಮ ವಾಸ್ತವ್ಯ : ಆದಿವಾಸಿಗಳ ಅಹವಾಲು ಆಲಿಕೆ.
ಚಾಮರಾಜನಗರ, ನ ಜನವಸತಿ ಪ್ರದೇಶಗಳಿಂದ ಬಹುದೂರವಿರುವ ಗಡಿಯಂಚಿನ ಆದಿವಾಸಿಗಳ ಹಾಡಿ ಆಲಂಬಾಡಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ. ಕೆ. ಹರೀಶ್‍ಕುಮಾರ್ ಅವರು ಶನಿವಾರ ರಾತ್ರಿ ವಾಸ್ತವ್ಯ ಹೂಡಿ ಕುಂದುಕೊರತೆಗಳನ್ನು ಆಲಿಸಿದರು.ಹನೂರು ತಾಲ್ಲೂಕು ವ್ಯಾಪ್ತಿಯ ಗೋಪಿನಾಥಂ ಗ್ರಾಮ ಪಂಚಾಯತ್‍ಗೆ ಸೇರಿದ ಆಲಂಬಾಡಿಯಲ್ಲಿ ನಡೆದ ಗ್ರಾಮ ವಾಸ್ತವ್ಯ ವಿಶೇಷವಾಗಿ ಗಮನ ಸೆಳೆಯಿತು. ಮಲೆ ಮಹದೇಶ್ವರ ಬೆಟ್ಟದಿಂದ ಸುಮಾರು 2 ತಾಸಿಗೂ ಹೆಚ್ಚು ಕಾಲ ಪ್ರಯಾಣಿಸಬೇಕಾಗಿರುವ ಆಲಂಬಾಡಿಯನ್ನು ತಲುಪಲು ದುರ್ಗಮ ಅರಣ್ಯವನ್ನು ದಾಟಿ ಹೋಗಬೇಕಾಗಿದೆ. ಜನವಾಸ ಪ್ರದೇಶಗಳೇ ಅತಿ ವಿರಳವಾಗಿರುವ ಕುಗ್ರಾಮ ಎನಿಸುವ ಆಲಂಬಾಡಿಯಲ್ಲಿ ಜಿ.ಪಂ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿಗಳು ಇತರೆ ಅಧಿಕಾರಿಗಳ ಜೊತೆ ಗ್ರಾಮ ವಾಸ್ತವ್ಯ ಕೈಗೊಂಡು ಜನರ ಸಮಸ್ಯೆಗಳ ವಾಸ್ತವ ದರ್ಶನ ಪಡೆದರು.
ಹಾಡಿಗೆ ಕಾಲಿಡುತ್ತಿದ್ದಂತೆಯೇ ಅಲ್ಲಿನ ಮನೆ-ಮನೆಗೆ ತೆರಳಿ ಜನರ ಕಷ್ಟ ಕಾರ್ಪಣ್ಯಗಳನ್ನು ಕೇಳಿದರು. ವಸತಿ, ಕುಡಿಯುವ ನೀರು, ಇನ್ನಿತರ ಮೂಲ ಸೌಲಭ್ಯಗಳನ್ನು ಸಮಪರ್ಕವಾಗಿ ಕಲ್ಪಿಸಿಕೊಡುವಂತೆ ಜನರು ಮನವಿ ಮಾಡಿದರು.
ಬಳಿಕ ಅಲ್ಲಿನ ಶಾಲಾ ಆವರಣದಲ್ಲಿ ನಡೆದ ಸಭೆಯಲ್ಲಿ ಸ್ಥಳೀಯರು ತಾವು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಅಳಲು ತೋಡಿಕೊಂಡರು. ಗ್ರಾಮದ ಹಿರಿಯರು, ಮುಖಂಡರು ಮಾತನಾಡಿ ಬದುಕಿಗೆ ಅಗತ್ಯವಾದ ಮೂಲ ಸೌಲಭ್ಯಗಳಿಂದ ನಾವು ವಂಚಿತರಾಗಿದ್ದೇವೆ. ಪಕ್ಕದಲ್ಲೇ ಕಾವೇರಿ ನದಿ ಹರಿಯುತ್ತಿದ್ದರೂ ನಮಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ರಸ್ತೆ ಇಲ್ಲವಾಗಿದೆ. ವಿದ್ಯುತ್ ಸೌಲಭ್ಯವಂತೆ ಕಲ್ಪಿಸಿಯೇ ಇಲ್ಲ ಎಂದು ಎಳೆಎಳೆಯಾಗಿ ಅಲ್ಲಿನ ಕೊರತೆಗಳನ್ನು ಬಿಡಿಸಿಟ್ಟರು.
ಆಲಂಬಾಡಿಯಲ್ಲಿ ನ್ಯಾಯಬೆಲೆ ಅಂಗಡಿ ಇಲ್ಲ. ಪಡಿತರ ಪಡೆಯಲು ಪಕ್ಕದ 5 ಕಿ.ಮೀ ಗ್ರಾಮಕ್ಕೆ ಹೋಗಿ ಬರಬೇಕಿದೆ. ಇದನ್ನು ತಪ್ಪಿಸಲು ಸಂಚಾರಿ ಪಡಿತರ ವಿತರಣ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು.
ಎಲ್ಲರ ಅಹವಾಲುಗಳನ್ನು ವಿವರವಾಗಿ ಆಲಿಸಿದ ಬಳಿಕ ಮಾತನಾಡಿದ ಜಿ.ಪಂ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಡಾ. ಕೆ. ಹರೀಶ್‍ಕುಮಾರ್ ಅವರು ನಿಮ್ಮ ಎಲ್ಲಾ ನೋವು, ಸಮಸ್ಯೆಗಳು ನನಗೆ ಮನವರಿಕೆಯಾಗಿದೆ. ಈ ಹಿಂದೆ ಎರಡು ಗ್ರಾಮ ವಾಸ್ತವ್ಯಗಳನ್ನು ಮಾಡಿದ್ದೇನೆ. ಆದರೆ, ಆಲಂಬಾಡಿಯಲ್ಲಿ ಕೈಗೊಂಡಿರುವ ಈ ಗ್ರಾಮ ವಾಸ್ತವ್ಯ ನನಗೆ ಆತ್ಮತೃಪ್ತಿ ತಂದಿದೆ ಎಂದರು.
ಜನರ ಮನೆ ಬಾಗಿಲಿಗೆ ತೆರಳಿ ಅವರ ಕುಂದು-ಕೊರತೆ ನೈಜ್ಯ ಚಿತ್ರಣ ಪಡೆದು ಪರಿಹರಿಸಬೇಕೆಂಬ ಸರ್ಕಾರದ ನಿರ್ದೇಶನದ ಮೇರೆಗೆ ಗ್ರಾಮ ವಾಸ್ತವ್ಯ ಮಾಡುತ್ತಿದ್ದೇನೆ. ಆರೋಗ್ಯ, ಶಿಕ್ಷಣ, ರಸ್ತೆ, ಶುದ್ಧ ಕುಡಿಯುವ ನೀರು ಸೇರಿದಂತೆ ಅವಶ್ಯ ಮೂಲ ಸೌಕರ್ಯಗಳನ್ನು ಒದಗಿಸುವ ಜವಬ್ದಾರಿ ನಮ್ಮ ಮೇಲಿದೆ ಎಂದರು.
ಪರಿಶಿಷ್ಟರ ಕಲ್ಯಾಣಕ್ಕೆ ನಿಗದಿಯಾಗಿರುವ ಅನುದಾನ ಪೂರ್ಣ ಪ್ರಮಾಣದಲ್ಲಿ ಸದ್ವಿನಿಯೋಗವಾಗಬೇಕು. ಇದರಿಂದ ಅರಣ್ಯವಾಸಿಗಳ, ಗಿರಿಜನರ ಬದುಕು ಹಸನಾಗಬೇಕಿದೆ. ಸ್ಥಳೀಯವಾಗಿ ವ್ಯಕ್ತವಾಗಿರುವ ಎಲ್ಲಾ ಬೇಡಿಕೆ, ಸಮಸ್ಯೆ ಪರಿಹರಿಸಿ ಮೂಲಸೌಕರ್ಯ ಕಲ್ಪಿಸಲು ಸ್ಪಂದಿಸಲಾಗುವುದು ಎಂದು ಡಾ. ಕೆ. ಹರೀಶ್‍ಕುಮಾರ್ ಅವರು ತಿಳಿಸಿದರು.
ಮುಖಂಡರಾದ ಮಹದೇವು, ದೊಡ್ಡಯ್ಯ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕೃಷ್ಣಪ್ಪ, ಜಂಟಿ ಕೃಷಿ ನಿರ್ದೇಶಕರಾ ಎಂ. ತಿರುಮಲೇಶ್ ಮಾತನಾಡಿದರು.
ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಲ್. ಗಂಗಾಧರ್, ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಾಹಕಾಧಿಕಾರಿ, ಉಮೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಬಸವರಾಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಹೆಚ್. ಪ್ರಸಾದ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಶಿವಪ್ರಸಾದ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಸಾರ್ಥಕ ಭಾವ ಮೂಡಿಸಿದ ಗ್ರಾಮ ವಾಸ್ತವ್ಯ
ಚಾಮರಾಜನಗರ, ನ 04 ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಡಾ. ಕೆ. ಹರೀಶ್‍ಕುಮಾರ್ ಅವರ ಆಲಂಬಾಡಿ ಗ್ರಾಮ ವಾಸ್ತವ್ಯ ಅಚ್ಚುಕಟ್ಟಾದ ಆಯೋಜನೆಯಿಂದ ಯಶಸ್ವಿಯಾಗಿದೆ.
ಈ ಹಿಂದೆ ಬಿಳಿಗಿರಿರಂಗನಬೆಟ್ಟದ ಮುತ್ತುಗದ ಗದ್ದೆ ಪೋಡು, ಗುಂಡ್ಲುಪೇಟೆ ತಾಲ್ಲೂಕಿನ ಮದ್ದೂರು ಕಾಲೋನಿಯಲ್ಲಿ ಹರೀಶ್‍ಕುಮಾರ್ ಅವರು ಗ್ರಾಮ ವಾಸ್ತವ್ಯ ಮಾಡಿದ್ದರು. ಈ ಬಾರಿ ಬಹುದೂರದ ದುರ್ಗಮ ಹಾಡಿಯನ್ನು ಗ್ರಾಮ ವಾಸ್ತವ್ಯಕ್ಕೆ ಆಯ್ಕೆ ಮಾಡಿಕೊಂಡಿದ್ದರು. ಗ್ರಾಮ ವಾಸ್ತವ್ಯದ ಸಾರ್ಥಕತೆಯ ಭಾವ ಆಲಂಬಾಡಿಯಲ್ಲಿ ಹೆಚ್ಚು ಗೋಚರವಾಯಿತು. ಇದಕ್ಕೆ ಪುಷ್ಠಿಕರಿಸುವಂತ ಹರೀಶ್‍ಕುಮಾರ್ ಅವರೇ ಈ ಹಿಂದಿನ ಗ್ರಾಮ ವಾಸ್ತವ್ಯಕ್ಕಿಂತ ಆಲಂಬಾಡಿ ಗ್ರಾಮ ವಾಸ್ತವ್ಯ ತಮಗೆ ಹೆಚ್ಚು ತೃಪ್ತಿ ತಂದಿದೆ ಎಂಬ ಮನದಾಳದ ಮಾತನ್ನು ಹೊರಹಾಕಿದರು.
ಹಾಡಿಯ ದೊಡ್ಡಮ್ಮ ಎಂಬುವವರ ಮನೆಯಲ್ಲಿ ಅರಣ್ಯವಾಸಿಗಳ ದೇಸಿ ಖಾದ್ಯಗಳಾದ ಔಷಧೀಯ ಗುಣವುಳ್ಳ ಸುಂಡೇಕಾಯಿ, ಅಣ್ಣೆಸೊಪ್ಪು ಪಲ್ಯ, ಅವರೆಕಾಳು ಹಲಸಿನಕಾಯಿ ಹುಳಿ, ಅನ್ನ, ಮಜ್ಜಿಗೆ, ಅಕ್ಕಿ ಪಾಯಸ ಸವಿದರು.
ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಲ್. ಗಂಗಾಧರ್ ಮತ್ತು ಸಿಬ್ಬಂದಿ ಅವರ ಪರಿಶ್ರಮ ಆಲಂಬಾಡಿ ಗ್ರಾಮ ವಾಸ್ತವ್ಯ ಯಶಸ್ವಿಗೆ ಕಾರಣವಾಯಿತೆಂಬ ಮೆಚ್ಚುಗೆಯು ಕೇಳಿ ಬಂದಿತು.
ಕೊಳ್ಳೇಗಾಲ - ಹನೂರು ಹೆದ್ದಾರಿ ಯೋಜನೆ : ರೈತರಿಗೆ ತಕ್ಷಣ ಪರಿಹಾರ
ಚಾಮರಾಜನಗರ, ನ 04 - ಕರ್ನಾಟಕ ರಾಜ್ಯ ಭೂ ಅಭಿವೃದ್ಧಿ ಯೋಜನೆಯಡಿ (ಕೆಶಿಪ್-3) ಕೊಳ್ಳೇಗಾಲ-ಹನೂರು ರಾಜ್ಯ ಹೆದ್ದಾರಿ ಅಭಿವೃದ್ಧಿಗಾಗಿ ಕೈಗೊಂಡಿರುವ ಭೂ ಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಜಮೀನು ಕ್ರಯಕ್ಕೆ ನೀಡಿರುವ ರೈತರಿಗೆ ಆಯಾ ದಿನವೇ ಪರಿಹಾರವನ್ನು ನೀಡಲಾಗುತ್ತಿದೆ ಎಂದು ಉಪ ವಿಭಾಗಾಧಿಕಾರಿ ಫೌಜೀಯಾ ತರನ್ನುಮ್ ತಿಳಿಸಿದ್ದಾರೆ.
ರಸ್ತೆ ಅಭಿವೃದ್ಧಿಗೆ ಒಳಪಡುವ 12 ಗ್ರಾಮಗಳ ರೈತರು ಜಮೀನು ನೇರ ಖರೀದಿಗೆ ಒಪ್ಪಿಗೆ ಕೊಡುತ್ತಿದ್ದು, ಮಧುವನಹಳ್ಳಿ, ಹಾರುವಪುರ, ಸಿಂಗಾನಲ್ಲೂರು ಗ್ರಾಮದ ರೈತರು ಸಹ ನೇರ ಖರೀದಿಗೆ ಒಪ್ಪಿಗೆ ನೀಡಿದ್ದಾರೆ. ಮಧುವನಹಳ್ಳಿ ಗ್ರಾಮದ 7 ಮತ್ತು ಸಿಂಗಾನಲ್ಲೂರು ಗ್ರಾಮದ 1 ಸರ್ವೇ ನಂಬರ್‍ಗಳ ಜಮೀನನ್ನು ರೈತರಿಂದ ನವೆಂಬರ್ 3 ರಂದು ಕ್ರಯಕ್ಕೆ ಪಡೆಯಲಾಗಿದ್ದು, ಅಂದೇ ಪರಿಹಾರ ಧನವನ್ನು ಚೆಕ್ ಮೂಲಕ ರೈತರಿಗೆ ವಿತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಜಮೀನು ಹಕ್ಕುದಾರರು ಕ್ರಯದ ಕರಾರು ಪತ್ರಕ್ಕೆ ಸಹಿ ಹಾಕಿದ ಪ್ರಕರಣಗಳಲ್ಲಿ ಸರ್ಕಾರದ ವತಿಯಿಂದಲೇ 11-ಇ ಸ್ಕೆಚ್ ಮಾಡಿಸಿ ಸಹಿ ಮಾಡಿದ ದಿನದಂದೆ ಚೆಕ್ ವಿತರಿಸಲಾಗುತ್ತಿದೆ. ರಾಜ್ಯ ಹೆದ್ದಾರಿ ಯೋಜನೆ ಕಾಮಗಾರಿ ತ್ವರಿತವಾಗಿ ಕಾರ್ಯಗತಗೊಳಿಸಲು ಯೋಜನ ವ್ಯಾಪ್ತಿಯ ಗ್ರಾಮಗಳ ಇನ್ನುಳಿದ ರೈತರು ಮುಂದೆ ಬಂದು ಒಪ್ಪಿಗೆ ಪತ್ರ ನೀಡುವಂತೆ ಉಪ ವಿಭಾಗಾಧಿಕಾರಿ ಫೌಜೀಯಾ ತರನ್ನುಮ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
x
No comments:
Post a Comment