Thursday, 8 November 2018

27-09-2018 (ಪ್ರವಾಸೋದ್ಯಮಕ್ಕೆ ಜಾಗತಿಕ ಮಹತ್ವ: ಜಿಲ್ಲಾ ನ್ಯಾಯಧೀಶರ ಅಭಿಮತ )


ಪ್ರವಾಸೋದ್ಯಮಕ್ಕೆ ಜಾಗತಿಕ ಮಹತ್ವ: ಜಿಲ್ಲಾ ನ್ಯಾಯಧೀಶರ ಅಭಿಮತ  

ಚಾಮರಾಜನಗರ, ಸೆ.27   ಪ್ರವಾಸೋದ್ಯಮವು ಇಂದಿನ ಜಾಗತಿಕ ಯುಗದಲ್ಲಿ ಅತ್ಯಂತ ಮಹತ್ವ ಪಡೆದುಕೊಂಡಿದೆ ಎಂದು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಜಿ.ಬಸವರಾಜ ಅವರು ತಿಳಿಸಿದರು.
ಭರಚುಕ್ಕಿಯಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಪ್ರವಾಸೋದ್ಯಮ ಇಲಾಖೆ, ಆರಣ್ಯ ಇಲಾಖೆ ವತಿಯಿಂದ ಅಯೋಜಿಸಲಾಗಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶ ಸುತ್ತಬೇಕು, ಕೋಶ ಓದಬೇಕು ಎಂಬ ಮಾತು ನಿಜವಾಗಿದೆ. ಎಲ್ಲ ಪ್ರವಾಸಿ ಸ್ಥಳಗಳ ಮಹತ್ವದ ಬಗ್ಗೆ ತಿಳಿದುಕೊಳ್ಳಬೇಕು. ಜ್ಞಾನ ಸಂಪಾದನೆ ಮಾಡಬೇಕು ಎಂದು ಸಲಹೆ ಮಾಡಿದರು.
ಇಂದಿನ ಆಧುನಿಕ ಕಾಲವು ಡಿಜಟಲಿಕರಣವಾಗಿದೆ. ಇಡೀ ವಿಶ್ವವನ್ನು ಕಡಿಮೆ ಅವಧಿಯಲ್ಲಿ ಸುತ್ತುಹಾಕಬಹುದಾಗಿದೆ. ಪ್ರವಾಸೋದ್ಯಮ ಪ್ರಗತಿಯನ್ನ ಕಾಣಬಹುದಾಗಿದೆ ಎಂದು  ಜಿಲ್ಲಾ ನ್ಯಾಯಧೀಶರು ತಿಳಿಸಿದರು.
ಪರಿಸರ ರಕ್ಷಣೆಗೆ ಪ್ರತಿಯೊಬ್ಬರು ಮುಂದಾಗಬೇಕು. ನಿಸರ್ಗದ ಸೌಂದರ್ಯವನ್ನು ಕಾಪಾಡುವಲ್ಲಿ ಗಮನ ನೀಡಬೇಕು. ಪರಿಸರ ಮತ್ತು ಆರಣ್ಯ ಕಾಪಾಡುವುದು ಪ್ರತಿಯೊಬ್ಬರ ಮೂಲಭೂತ ಕರ್ತವ್ಯ ಕೂಡಅಗಿದೆ ಎಂದರು.
ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿಯವರಾದ ಸಿ.ಜಿ. ವಿಶಾಲಕ್ಷಿ ಅವರು ಮಾತನಾಡಿ ಪ್ರವಾಸಿಗರನ್ನು ಗೌರವದಿಂದ ಕಾಣಬೇಕು. ಇದರಿಂದ ದೇಶಕ್ಕೂ ನಾಡಿಗೂ ಓಳ್ಳೆಯ ಹೆಸರು ಬರಲಿದೆ ಎಂದು ತಿಳಿಸಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಉಮತ್ತೂರು ಇಂದುಶೇಖರ್ ಮಾತನಾಡಿ ವಿದೇಶಿ, ಹೊರರಾಜ್ಯದ ಪ್ರವಾಸಿಗರು ಬಂದಾಗ ಅವರಿಗೆ ನೆರವಾಗಬೇಕು. ಯಾವುದೇ ಗೊಂದಲ ಮೂಡಿಸಬಾರದು. ಆದಾಯ ಗಳಿಕೆಯನ್ನೆ ಪ್ರಮುಖವಾಗಿ ನೋಡಬಾರದು. ಪ್ರವಾಸಿಗರು ಸಂತಸದಿಂದ ಪ್ರವಾಸ ಮಾಡುವ ಅವಕಾಶಗಳನ್ನು ನೀಡಬೇಕು ಎಂದರು.
ಪ್ರವಾಸೋದ್ಯಮ ಇಲಾಖೆ ಸಮಲೋಚಕರಾದ ನವೀನ್‍ಕುಮಾರ್, ಜಿಲ್ಲಾ ವಕೀಲರ ಸಂಘದ ಪ್ರಧಾನಕಾರ್ಯದರ್ಶಿ ಆರ್.ಅರುಣ್‍ಕುಮಾರ್,ಬಾಲ ನ್ಯಾಯಮಂಡಳಿ ಸದಸ್ಯರಾದ ಟಿ.ಜೆ. ಸುರೇಶ್ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು
ಸೆ.28ರಂದು ಗೋಲಕ ಹಣ ಎಣಿಕೆ
ಚಾಮರಾಜನಗರ, ಸೆ.27 -  ಕೊಳ್ಳೇಗಾಲ ತಾಲ್ಲೂಕಿನ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರ ಸ್ವಾಮಿ ದೇವಾಲಯದ ಗೋಲಕಗಳ ಹಣ ಎಣಿಕೆ ಕಾರ್ಯವು ಸೆಪ್ಟೆಂಬರ್ 28ರಂದು ಬೆಳಗ್ಗೆ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣ ಕಟ್ಟಡದ ಮೊದಲ ಮಹಡಿಯ ವಿಶ್ರಾಂತಿ ಗೃಹದಲ್ಲಿ ನಡೆಯಲಿದೆ ಎಂದು ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿಯವರು ಪ್ರಕಟಣೆಯಲ್ಲಿ  ತಿಳಿಸಿದ್ದಾರೆ
ಮಾನ್ಯತೆ ಪಡೆದ ವಾಣಿಜ್ಯ ಕಂಪ್ಯೂಟರ್ ಶಾಲೆಗಳ ಪಟ್ಟಿ ಪ್ರಕಟ
ಚಾಮರಾಜನಗರ, ಸೆ. 27 - ಜಿಲ್ಲೆಯಲ್ಲಿ ಮಾನ್ಯತೆ ಪಡೆದಿರುವ ಮಾನ್ಯತೆ ಪಡೆದಿರುವ ವಾಣಿಜ್ಯ ಮತ್ತು ಕಂಪ್ಯೂಟರ್ ಶಾಲೆಗಳ ಪಟ್ಟಿಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ವಿದ್ಯಾರ್ಥಿಗಳಿಗೆ ಮಾಹಿತಿಗಾಗಿ ಪ್ರಕಟಿಸಿದೆ. ಇವುಗಳ ಪಟ್ಟಿ ಇಂತಿದೆ.
ಶ್ರೀ ವಾಣಿಜ್ಯ ಮತ್ತು ಕಂಪ್ಯೂಟರ್ ವಿದ್ಯಾಸಂಸ್ಥೆ, ತ್ಯಾಗರಾಜ ಬಿ ವಿಭಾಗ, ತ್ಯಾಗರಾಜ ರಸ್ತೆ, ಪಚ್ಚಪ್ಪ ಹೋಟೆಲ್ ಬಿಲ್ಡಿಂಗ್, ಹಳೆ ಕಾವೇರಿ ಗ್ರಾಮೀಣ ಬ್ಯಾಂಕ್ ಕಟ್ಟಡ, ಚಾಮರಾಜನಗರ,  ಪದ್ಮ ವಾಣಿಜ್ಯ ಮತ್ತು ಕಂಪ್ಯೂಟರ್ ವಿದ್ಯಾಸಂಸ್ಥೆ, 11/294, 2ನೇ ಕ್ರಾಸ್, ದೇವಾಂಗ ಬೀದಿ, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಎದುರು, ಚಾಮರಾಜನಗರ, ಶ್ರೀ ಜಯ ವಾಣಿಜ್ಯ ಮತ್ತು ಕಂಪ್ಯೂಟರ್ ಶಿಕ್ಷಣ ಸಂಸ್ಥೆ, 7/254, ದಕ್ಷಿಣ ಬಡಾವಣೆ, ಕೊಳ್ಳೇಗಾಲ, ಚಾಮರಾಜನಗರ, ವಿಷ್ಯೂಯಲ್ ಸಾಫ್ಟೆಕ್ ಕಂಪ್ಯೂಟರ್ ಎಜುಕೇಷನ್ ಇನ್‍ಸ್ಟಿಟ್ಯೂಟ್, ನಂ.1, 1ನೇ ಹಂತ, ಹಳೇ ಅಂಚೆ ಕಚೇರಿ ರಸ್ತೆ, ಯಳಂದೂರು, ಚಾಮರಾಜನಗರ,  ವಿಷ್ಯೂಯಲ್ ಸಾಫ್ಟೆಕ್, ನಂ. 1, 1ನೇ ಹಂತ, ಕಾನ್ವೆಂಟ್ ಹಾಸ್ಪಿಟಲ್ ರಸ್ತೆ, ತಾಲೂಕು ಕಚೇರಿ ಮುಂಭಾಗ, ಸಿದ್ದಾರ್ಥನಗರ, ಚಾಮರಾಜನಗರ, ಮಾತೃಭೂಮಿ ಇನ್‍ಸ್ಟಿಟ್ಯೂಟ್ ಆಪ್ ಇನ್‍ಫಾರ್ಮೇಷನ್ ಟೆಕ್ನಾಲಜಿ, 1ನೇ ಅಡ್ಡ ರಸ್ತೆ, ಬಂಡಳ್ಳಿ ಮುಖ್ಯ ರಸ್ತೆ, ವಿನಾಯಕ ನಗರ, ಹನೂರು, ಕೊಳ್ಳೇಗಾಲ ತಾಲೂಕು, ಚಾಮರಾಜನಗರ ಜಿಲ್ಲೆ, ಶ್ರೀನಿಧಿ ಕಂಪ್ಯೂಟರ್ ವಿದ್ಯಾಸಂಸ್ಥೆ, ನಂ. 88, 7ನೇ ವಾರ್ಡ್, ಹಳೇ ಆಸ್ಪತ್ರೆ ರಸ್ತೆ, ಗುಂಡ್ಲುಪೇಟೆ, ಪವಿತ್ರ ವಾಣಿಜ್ಯ ವಿದ್ಯಾಸಂಸ್ಥೆ, ನಂ. 42, ಎಂಐಜಿ 2, ಹೌಸಿಂಗ್ ಬೋರ್ಡ್ ಕಾಲೋನಿ, ಚಾಮರಾಜನಗರ, ಮಂತ್ರಾಲಯ ಐಟಿ ಹಬ್ಸ್ ಕಂಪ್ಯೂಟರ್ ಶಾಲೆ, ನಂ. 833, ಮಹದೇಶ್ವರ ಕಾಲೇಜು ರಸ್ತೆ, ಪತಂಜಲಿ ಯೋಗ ಮಂದಿರ ಹತ್ತಿರ, ಕೊಳ್ಳೇಗಾಲ, ಚಾಮರಾಜನಗರ ಜಿಲ್ಲೆ.
ಸೆ. 28ರಂದು ವಿದ್ಯುತ್ ವ್ಯತ್ಯಯ
ಚಾಮರಾಜನಗರ, ಸೆ. 27 :- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು ತಾಲೂಕಿನ ಪಣ್ಯದಹುಂಡಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಸೆಪ್ಟೆಂಬರ್ 28ರಂದು ತ್ರೈಮಾಸಿಕ ಕಾರ್ಯನಿರ್ವಹಣೆ ಕಾರ್ಯವನ್ನು ಹಮ್ಮಿಕೊಂಡಿದೆ.
ಈ ಹಿನ್ನೆಲೆಯಲ್ಲಿ ಅಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಪಣ್ಯದಹುಂಡಿ, ದಾಸನೂರು, ಇಂಡಸ್ಟ್ರಿಯಲ್ ಏರಿಯಾ, ಕೆಲ್ಲಂಬಳ್ಳಿ, ಬೆಂಡರವಾಡಿ, ಮಹದೇವನಗರ, ಬದನಗುಪ್ಪೆ, ತೊರವಳ್ಳಿ ಎನ್‍ಜೆವೈ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಕಾರ್ಯನಿವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಸೆ. 29ರಂದು ನಗರದಲ್ಲಿ ಡಿ. ದೇವರಾಜ ಅರಸು ಅವರ ಜನ್ಮ ದಿನಾಚರಣೆ
ಚಾಮರಾಜನಗರ, ಸೆ. 27 - ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಹಾಗೂ ಪ್ರಗತಿಪರ ಸಾಧನೆಗಳ ನೇತಾರ, ಸಾಮಾಜಿಕ ಪರಿವರ್ತನೆ ಹರಿಕಾರರಾದ ಡಿ. ದೇವರಾಜ ಅರಸು ಅವರ 103ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಸೆಪ್ಟೆಂಬರ್ 29ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 10 ಗಂಟೆಗೆ ಡಿ. ದೇವರಾಜ ಅರಸು ಅವರ ಭಾವಚಿತ್ರದ ಮೆರವಣಿಗೆಯು ಕಲಾತಂಡಗಳೊಂದಿಗೆ ಚಾಮರಾಜೇಶ್ವರ ದೇವಸ್ಥಾನದಿಂದ ಹೊರಡಿಲಿದೆ.
ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಎನ್. ಮಹೇಶ್ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಅಧ್ಯಕ್ಷತೆ ವಹಿಸುವರು. ಲೋಕಸಭಾ ಸಂಸದರಾದ ಆರ್. ಧ್ರುವನಾರಾಯಣ ಅವರು ಅರಸು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು. ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶಿವಮ್ಮ ಕೃಷ್ಣ ಘನ ಉಪಸ್ಥಿತಿ ವಹಿಸÀುವರು.
ಶಾಸಕರಾದ ಆರ್. ನರೇಂದ್ರ, ಸಿ.ಎಸ್. ನಿರಂಜನಕುಮಾರ್, ಮರಿತಿಬ್ಬೇಗೌಡ, ಕೆ.ಟಿ. ಶ್ರೀಕಂಠೇಗೌಡ, ಸಂದೇಶ್ ನಾಗರಾಜು, ಆರ್. ಧರ್ಮಸೇನ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಜೆ. ಯೋಗೇಶ್, ತಾಲೂಕು ಪಂಚಾಯತ್ ಅಧ್ಯಕ್ಷರಾದ ದೊಡ್ಡಮ್ಮ, ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ ಅತಿಥಿಗಳಾಗಿ ಭಾಗವಹಿಸುವರು.
ಮುಖ್ಯ ಭಾಷಣಕಾರರಾಗಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾದ ಸಿ.ಎಸ್. ದ್ವಾರಕಾನಾಥ್ ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.

ಬೆಳೆ ಸ್ಪರ್ಧೆಗೆ ನೊಂದಾಯಿಸಲು ಕೃಷಿ ಇಲಾಖೆ ಮನವಿ
ಚಾಮರಾಜನಗರ, ಸೆ. 27 ಕೃಷಿ ಇಲಾಖೆಯು ಕೃಷಿ ಪ್ರಶಸ್ತಿ ಯೋಜನೆಯಡಿ ಏರ್ಪಡಿಸಿರುವ ಬೆಳೆ ಸ್ಪರ್ಧೆಗೆ ರೈತರಿಂದ ಅರ್ಜಿ ಆಹ್ವಾನಿಸಿದೆ.
ವಿವಿಧ ಹಂತದ ಬೆಳೆ ಸ್ಪರ್ಧೆಗೆ ನಿಗದಿಪಡಿಸಿದ ಬೆಳೆಗಳಲ್ಲಿ ಮಾತ್ರ ಸ್ಪರ್ಧೆ ಏರ್ಪಡಿಸಲಾಗುತ್ತದೆ. ತಾಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ  ಸ್ಪರ್ಧೆ ನಡೆಯಲಿದೆ.
ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಾಗಿ 15 ಸಾವಿರ ರೂ, ದ್ವಿತೀಯ ಬಹುಮಾನವಾಗಿ 10 ಸಾವಿರ ರೂ, ತೃತೀಯ ಬಹುಮಾನವಾಗಿ 5 ಸಾವಿರ ರೂ. ನೀಡಲಾಗುತ್ತದೆ. ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಾಗಿ 25 ಸಾವಿರ ರೂ., ದ್ವಿತೀಯ ಬಹುಮಾನವಾಗಿ 15 ಸಾವಿರ ರೂ., ತೃತೀಯ ಬಹುಮಾನವಾಗಿ 10 ಸಾವಿರ ರೂ. ನೀಡಲಾಗುತ್ತದೆ.
ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಾಗಿ 50 ಸಾವಿರ ರೂ, ದ್ವಿತೀಯ ಬಹುಮಾನವಾಗಿ 25 ಸಾವಿರ ರೂ, ತೃತೀಯ ಬಹುಮಾನವಾಗಿ 15 ಸಾವಿರ ರೂ. ನೀಡಲಾಗುತ್ತದೆ.
ಸ್ಪರ್ಧೆಗೆ ಭಾಗವಹಿಸುವ ಸಾಮಾನ್ಯ ವರ್ಗದ ರೈತರು 100 ರೂ. ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ರೈತರಾಗಿದ್ದಲ್ಲಿ 25 ರೂ. ಪ್ರವೇಶ ಶುಲ್ಕ ನೀಡಬೇಕಿದೆ.
ವಿವಿಧ ಹಂತದ ಬೆಳೆ ಸ್ಪರ್ಧೆಗೆ ಕನಿಷ್ಟ 15 ಪ್ರವೇಶ ಅರ್ಜಿಗಳು ಕಡ್ಡಾಯವಾಗಿ ನೋಂದಣಿಯಾಗಬೇಕಿದೆ. ಪ್ರತಿ ಬೆಳೆ ಸ್ಪರ್ಧೆಯಲ್ಲಿ ಕನಿಷ್ಟ 12 ತಾಕುಗಳಲ್ಲಿ ಕಟಾವು ಕಡ್ಡಾಯವಾಗಿ ಮಾಡಬೇಕಾಗುತ್ತದೆ.
ಬೆಳೆ ಸ್ಪರ್ಧೆಗೆ ಅರ್ಜಿ, ಪಹಣಿ, ಶುಲ್ಕ ಪಾವತಿ ಚಲನ್, ಭಾವಚಿತ್ರ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವÀರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರ, ಇತರೆ ಮೂಲ ದಾಖಲೆಗಳೊಂದಿಗೆ ಹತ್ತಿರದ ರೈತಸಂಪರ್ಕ ಕೇಂದ್ರ ಸಂಪರ್ಕಿಸಿ ನೊಂದಾಯಿಸಬೇಕು. ಮುಂಗಾರು ಹಂಗಾಮಿನ ಸ್ಪರ್ಧೆಗೆ ನೊಂದಾಯಿಸಲು ಸೆಪ್ಟೆಂಬರ್ 30 ಮತ್ತು ಹಿಂಗಾರು ಹಂಗಾಮಿನ ಸ್ಪರ್ಧೆಗೆ ನೊಂದಾಯಿಸಲು ನವೆಂಬರ್ 30 ಕಡೆಯ ದಿನವಾಗಿದೆ. ಹೆಚ್ಚಿನ ಮಾಹಿತಿಯನ್ನು ರೈತ ಸಂಪರ್ಕ ಕೇಂದ್ರ ಮತ್ತು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರ ಸಂಪರ್ಕಿಸುವಂತೆ ಜಂಟಿ ಕೃಷಿ ನಿರ್ದೇಶಕರಾದ ಎಂ. ತಿರುಮಲೇಶ್ ಪ್ರಕಟಣೆಯಲ್ಲಿ ಕೋರಿದ್ದಾರೆ.
ಸೆ. 28ರಂದು ವೈಯಕ್ತಿಕ ಪೋಷಣೆ, ರಕ್ಷಣೆ, ಸಾಮಾಜಿಕ ತನಿಖೆ ವರದಿ ಕುರಿತು ಕಾರ್ಯಾಗಾರ
ಚಾಮರಾಜನಗರ, ಸೆ. 27 - ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ಇತರೆ ಇಲಾಖೆ ಆಶ್ರಯದಲ್ಲಿ ಮಕ್ಕಳ ಪಾಲನಾ ಸಂಸ್ಥೆಗಳ ಮುಖ್ಯಸ್ಥರು ಮತ್ತು ಸಿಬ್ಬಂದಿಗೆ ವೈಯಕ್ತಿಕ ಘೋಷಣೆ, ರಕ್ಷಣೆ, ಸಾಮಾಜಿಕ ತನಿಖೆ, ವರದಿ ಕುರಿತು ತರಬೇತಿ ಕಾರ್ಯಕ್ರಮವನ್ನು ಸೆಪ್ಟೆಂಬರ್ 28ರಂದು ಬೆಳಿಗ್ಗೆ 10 ಗಂಟೆಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಕಾರ್ಯಕ್ರಮ ಉದ್ಘಾಟಿಸುವರು. ಬಾಲನ್ಯಾಯ ಮಂಡಳಿ ಅಧ್ಯಕ್ಷರು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಮೇಶ್ ಅವರು ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಹರೀಶ್ ಕುಮಾರ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್. ಗೀತಾ ಪ್ರಸನ್ನ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಡಿ. ಬಸವರಾಜು, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಟಿ.ಎಂ. ಜಯಶೀಲ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಸರಸ್ವತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕೆ.ಎಚ್. ಪ್ರಸಾದ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಎ. ರಮೇಶ್ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ಬಾಲನ್ಯಾಯ ಕಾಯಿದೆ 2015 ಹಾಗೂ ಮಕ್ಕಳ ಪ್ರಕರಣಗಳ ನಿರ್ವಹಣೆ ಕುರಿತು ಪಿ.ಪಿ. ಬಾಬುರಾಜ್, ವೈಯಕ್ತಿಕ ಪೋಷಣೆ ಯೋಜನೆ ಕುರಿತು ಶ್ರೀನಿವಾಸರಾಜೇ ಅರಸ್, ಸಾಮಾಜಿಕ ತನಿಖಾ ವರದಿ ಕುರಿತು ಡಿ.ಕೆ. ಮಂಜುನಾಥ್ ಹಾಗೂ ಮಕ್ಕಳ ವೈಯಕ್ತಿಕ ಕಡತ ದಾಖಲಾತಿ ನಿರ್ವಹಣೆ ಕುರಿತು ಕುಮಾರ ಅವರು ಉಪನ್ಯಾಸ ನೀಡುವರೆಂದು ಪÀ್ರಕಟಣೆ ತಿಳಿಸಿದೆ.
ಆರು ತಿಂಗಳೊಳಗೆ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪೂರ್ಣ: ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ
ಚಾಮರಾಜನಗರ, ಸೆ. 27 - ಕುಡಿಯುವ ನೀರಿನ ಉದ್ದೇಶಕ್ಕಾಗಿ ಚಾಮರಾಜನಗರ, ಯಳಂದೂರು ತಾಲ್ಲೂಕಿನ 22 ಕೆರೆಗಳು ಮತ್ತು ನಂಜನಗೂಡಿನ 02 ಕೆರೆಗಳು ಸೇರಿದಂತೆ ಒಟ್ಟು 24 ಕೆರೆಗಳಿಗೆ ಕಬಿನಿ ನದಿಯಿಂದ ನೀರು ತುಂಬಿಸುವ ಕಾಮಗಾರಿಯು ಇನ್ನು ಆರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ಸುತ್ತೂರು ಏತ ಯೋಜನೆಯಡಿ ಕೈಗೆತ್ತಿಕೊಂಡಿರುವ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಪರಿಶೀಲನೆಯನ್ನು ಸುತ್ತೂರು ಜಾಕ್‍ವೆಲ್ ಬಳಿಯಿಂದ ಆರಂಭಿಸಿದ ಸಚಿವರು ಹಲವು ಕೆರೆಗಳಿಗೆ ಭೇಟಿ ನೀಡಿದ ಬಳಿಕ ಮಾತನಾಡಿದರು.
ಒಟ್ಟು 233 ಕೋಟಿ ರೂ ಅಂದಾಜು ವೆಚ್ಚದ ಯೋಜನೆಗೆ ಕಳೆದ ವರ್ಷ ಚಾಲನೆ ನೀಡಲಾಗಿದೆ. ಒಟ್ಟು 186.24 ಕೋಟಿ ರೂ ಗುತ್ತಿಗೆ ಮೊತ್ತವಾಗಿದೆ. ಒಟ್ಟು 18 ತಿಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕಿದೆ ಎಂದರು.
ಯೋಜನೆಯಲ್ಲಿ ಒಟ್ಟು ಮೂರು ಹಂತಗಳಿವೆ. ಮೊದಲನೇ ಹಂತದಲ್ಲಿ ಚಾಮರಾಜನಗರ ತಾಲ್ಲೂಕಿನ ಎಂಟು, ಯಳಂದೂರು ತಾಲ್ಲೂಕಿನ ಒಂದು ಹಾಗೂ ನಂಜನಗೂಡು ತಾಲ್ಲೂಕಿನ ಎರಡು ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ. ಎರಡನೇ ಹಂತದಲ್ಲಿ ಚಾಮರಾಜನಗರ ತಾಲ್ಲೂಕಿನ ಆರು ಕೆರೆಗಳು ಮತ್ತು ಮೂರನೇ ಹಂತದಲ್ಲಿ ಏಳು ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ ಎಂದು ಸಚಿವರು ವಿವರಿಸಿದರು.
ಮೊದಲನೇ ಹಾಗೂ ಎರಡನೇ ಹಂತದ ಪಂಪ್ ಹೌಸ್ ಕಾಮಗಾರಿಗಳು ಪ್ರಗತಿಯಲ್ಲಿವೆ. ಈ ಯೋಜನೆ ಅಡಿಯಲ್ಲಿಯೆ ಯಳಂದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೆಂಪನಪುರ ಕೆರೆಗಳಿಗೂ ನೀರು ತುಂಬಿಸಲಾಗುತ್ತದೆ ಎಂದರು.
ಉಮ್ಮತ್ತೂರು ಕೆರೆಯೊಂದಕ್ಕೆ ನೀರು ಬಂದರೆ ದೊಡ್ಡರಾಯಪೇಟೆ, ಕರಡಿಮೊಳೆ, ಕೋಡಿಮೊಳೆ ಕೆರೆ, ದೊಡ್ಡಕೆರೆ, ಸಿಂಡಿಗೆರೆ, ಬಂಡಿಗೆರೆ ಕೆರೆ, ಮಲ್ಲದೇವನಹಳ್ಳಿ, ಮರಗದಕೆರೆ, ನಾಗವಳ್ಳಿಕೆರೆ, ಪುಟ್ಟನಪುರಕೆರೆ, ಸರಗೂರುಕೆರೆ, ಅಂಬಳೆಕೆರೆ ಸೇರಿದಂತೆ ಈ ವ್ಯಾಪ್ತಿಯ ಇನ್ನೂ ಹೆಚ್ಚಿನ ಕೆರೆಗಳ ಪ್ರದೇಶದ ರೈತರಿಗೆ ಅನುಕೂಲವಾಗಲಿದೆ ಎಂದು ಉಸ್ತುವಾರಿ ಸಚಿವರು ತಿಳಿಸಿದರು.
ಪೈಪ್‍ಲೈನ್ ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದೆ ಒಟ್ಟು 34.22 ಕಿ.ಮೀ ಪೈಕಿ 15.30 ಕಿ.ಮೀ ಉದ್ದದಷ್ಟು ಎಂ.ಎಸ್ ಪೈಪ್‍ಗಳನ್ನು ಅಳವಡಿಸಲಾಗಿದೆ. ಬಾಕಿ ಉಳಿದ 18.92 ಉದ್ದದ ಪೈಪ್ ಲೈನ್ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಸಚಿವರು ತಿಳಿಸಿದರು.
ಇದೇ ವೇಳೆ ಸಚಿವರು ಹನುಮನಪುರ ಬಳಿ ಇರುವ ಕಾಮಗಾರಿ ಸರಕು ದಾಸ್ತಾನು ಯಾರ್ಡ್, ಉಮ್ಮತ್ತೂರು ಕೆರೆ, ಹೊಮ್ಮಕೆರೆ, ಕೋಡಿಮೊಳೆಕೆರೆ ಇತರೆ ಭಾಗಗಳಿಗೆ ಸಚಿವರು ಭೇಟಿಕೊಟ್ಟು ಪರಿಶೀಲಿಸಿದರು. ಉಮ್ಮತ್ತೂರು ಕೆರೆ ಅಭಿವೃದ್ದಿಗೆ ಅಗತ್ಯವಿರುವ ಅಂದಾಜು ತಯಾರಿಸುವಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಎಪಿಎಂಸಿ ಅಧ್ಯಕ್ಷರಾದ ಬಿ.ಕೆ. ರವಿಕುಮಾರ್, ಕಾವೇರಿ ನೀರಾವರಿ ನಿಗಮದ ಎಂಜಿನಿಯರ್‍ಗಳಾದ ಮಂಜುನಾಥ್, ಮಹೇಶ್ ಇತರರು ಹಾಜರಿದ್ದರು.
ಮನೆ ಮೇಲೆ ದಾಳಿ: ಗಾಂಜಾ, ಅಕ್ರಮ ಮದ್ಯ ವಶ
ಚಾಮರಾಜನಗರ, ಸೆ. 27  ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಅರೆಪಾಳ್ಯ ಗ್ರಾಮದ ಮನೆಯೊಂದರ ಮೇಲೆ ಅಬಕಾರಿ ಅಧಿಕಾರಿಗಳು ಬುಧವಾರ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಗಾಂಜಾ ಹಾಗೂ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ಪಿ. ಕೆಂಪೇಗೌಡ ಎಂಬಾತನಿಗೆ ಸೇರಿದ ಮನೆಯ ಮೇಲೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು ಮನೆಯಲ್ಲಿ ಅಕ್ರಮವಾಗಿ ಸಂಸ್ಕರಿಸಿ ಇಡಲಾಗಿದ್ದ 60 ಸಾವಿರ ರೂ ಮೌಲ್ಯದ ಗಾಂಜಾವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಅಲ್ಲದೆ ಅಕ್ರಮವಾಗಿ ಇಟ್ಟುಕೊಂಡಿದ್ದ 4176 ರೂ ಮೌಲ್ಯದ ವಿವಿಧ ಬ್ರಾಂಡಿನ ಮದ್ಯದ ಬಾಟಲಿ ಹಾಗೂ ಟೆಟ್ರಾಪ್ಯಾಕ್‍ಗಳನ್ನು ಜಪ್ತಿ ಮಾಡಿದ್ದಾರೆ.
ಆರೋಪಿ ಕೆಂಪೇಗೌಡ ದಾಳಿಯ ವೇಳೆ ಪರಾರಿಯಾಗಿದ್ದು ಈತನ ಪತ್ತೆಗೆ ಕ್ರಮವಹಿಸಲಾಗಿದೆ. ಎನ್.ಡಿ.ಪಿ.ಎಸ್ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.
ಚಾಮರಾಜನಗರ ಅಬಕಾರಿ ಉಪ ಆಯುಕ್ತರಾದ ಎ.ಎಲ್. ನಾಗೇಶ್ ಅವರ ಮಾರ್ಗದರ್ಶನದಲ್ಲಿ ಮೈಸೂರು ವಿಭಾಗದ ಅಬಕಾರಿ ಅಧೀಕ್ಷಕರಾದ ಡಿ. ನಾಗೇಶ್‍ಕುಮಾರ್, ಉಪಅಧೀಕ್ಷಕರಾದ ಗಂಗಾಧರ್ ಹೆಚ್ ಮುದೆಣ್ಣವರ್, ನಿರೀಕ್ಷಕರಾದ ಎ.ಎ. ಮುಜಾವರ್, ಕೆ.ವಿ. ಲೋಹೀತ್, ಅರಣ್ಯ ಅಧಿಕಾರಿಗಳಾದ ಮಹೇಶ್, ನಾಗಪ್ಪ ಪಟ್ಟಾತ್ತರ್, ಅಬಕಾರಿ ಸಿಬ್ಬಂದಿ ರವಿಕುಮಾರ್, ಕೃಷ್ಣಮೂರ್ತಿ, ಪ್ರದೀಪ್, ಜಯಪ್ರಕಾಶ್, ಸುಂದ್ರಪ್ಪ, ವೀರತ್ತಪ್ಪ, ಮಂಜುನಾಥ್, ಮಹೇಶ್, ಆನಂದ್, ಹೇಮಂತ್, ಮೋಹನ್ ದಾಳಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರೆಂದು ಪ್ರಕಟಣೆ ತಿಳಿಸಿದೆ.
x

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು