Tuesday, 6 February 2018

ಶೌಚಾಲಯ ನಿರ್ಮಾಣ ಬಳಕೆ ಜಾಗೃತಿಗೆ ಆಶಾ ಕಾರ್ಯಕರ್ತೆಯರಿಂದ ಬೃಹತ್ ಜಾಥಾ ಮಾನವ ಸರಪಳಿ (06-02-2018)



ಶೌಚಾಲಯ ನಿರ್ಮಾಣ ಬಳಕೆ ಜಾಗೃತಿಗೆ ಆಶಾ ಕಾರ್ಯಕರ್ತೆಯರಿಂದ ಬೃಹತ್ ಜಾಥಾ ಮಾನವ ಸರಪಳಿ

ಚಾಮರಾಜನಗರ, ಫೆ. 06 - ಶೌಚಾಲಯ ನಿರ್ಮಾಣ ಹಾಗೂ ಬಳಕೆಗಾಗಿ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲಾ ಪಂಚಾಯತ್ ವತಿಯಿಂದ ಆಶಾ ಕಾರ್ಯಕರ್ತೆಯರು ನಗರದಲ್ಲಿ ಇಂದು ಬೃಹತ್ ಜಾಥಾ ನಡೆಸಿ ಮಾನವ ಸರಪಳಿಯನ್ನು ರಚಿಸುವ ಮೂಲಕ ಗಮನ ಸೆಳೆದರು.
ನಗರದ ವಾಲ್ಮೀಕಿ ಭವನದಲ್ಲಿ ಆಶಾ ಕಾರ್ಯಕತೆರ್Àಯರ ಜಾಗೃತಿ ಜಾಥಾಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.






ಇದೇವೇಳೆ ಮಾತನಾಡಿದ ರಾಮಚಂದ್ರ ಅವರು ಜಿಲ್ಲೆಯಲ್ಲಿ ಬಯಲು ಬಹಿರ್ದೆಸೆ ಮುಕ್ತಗೊಳಿಸುವ ನಿಟ್ಟಿನಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸ್ವಚ್ಚತೆ ಎನ್ನುವುದು ನಮ್ಮ ಮನೆ ಸುತ್ತಮುತ್ತಲ ಪರಿಸರ ಕಾಪಾಡಿಕೊಳ್ಳುವುದರಿಂದಲೇ ಆರಂಭವಾಗಬೇಕು. ಗ್ರಾಮದ ನೈರ್ಮಲ್ಯ ಚೆನ್ನಾಗಿದ್ದರೆ ಆರೋಗ್ಯವೂ ಸಹ ಉತ್ತಮವಾಗಿರಲಿದೆ. ಹೀಗಾಗಿ ಪ್ರತಿಯೊಬ್ಬರೂ ಶೌಚಾಲಯಕ್ಕೆ ಬಯಲು ಅವಲಂಬಿಸದೆ ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಿಕೊಳ್ಳಬೇಕು. ಈಗಾಗಲೇ ನಿರ್ಮಾಣ ಮಾಡಿಕೊಂಡಿರುವವರು ಬಳಕೆ ಮಾಡಬೇಕು ಎಂದರು.
ಬಳಿಕ ವಾಲ್ಮೀಕಿ ಭವನದಿಂದ ಹೊರಟ ಆಶಾ ಕಾರ್ಯಕರ್ತೆಯರ ಜಾಥಾ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣಕ್ಕೆ ಬಂದು ಸೇರಿತು. ಅಲ್ಲಿ ಬೃಹತ್ ಮಾನವ ಸರಪಳಿಯನ್ನು ರಚಿಸುವ ಮೂಲಕ ಆಶಾ ಕಾರ್ಯಕರ್ತೆಯರು ಶೌಚಾಲಯ ನಿರ್ಮಾಣ ಹಾಗೂ ಬಳಕೆ ಮಹತ್ವ ಕುರಿತು ಘೋಷಣೆಗಳನ್ನು ಮೊಳಗಿಸುವ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು.
ಇದೇವೇಳೆ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಚ್. ಪ್ರಸಾದ್ ಆರೋಗ್ಯದ ಪ್ರಥಮ ಹೆಜ್ಜೆ ನೈರ್ಮಲ್ಯವಾಗಿದೆ. ಸ್ವಚ್ಚತೆ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಸಹ ಆಶಾ ಕಾರ್ಯಕರ್ತೆಯರು ನಿರ್ವಹಿಸಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರೂ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಳ್ಳಬೇಕೆಂದರು.
ತದನಂತರ ವಾಲ್ಮೀಕಿ ಭವನಕ್ಕೆ ಮತ್ತೆ ಮರಳಿದ ಆಶಾ ಕಾರ್ಯಕರ್ತೆಯರು ಭವನದ ಸಭಾಂಗಣದಲ್ಲಿ ಸಮಾವೇಶಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ಹರೀಶ್ ಕುಮಾರ್ ಆರೋಗ್ಯ ಹಾಗೂ ಸ್ವಚ್ಚತೆಗೆ ಅವಿನಾಭಾವ ಸಂಬಂಧವಿದೆ. ಗ್ರಾಮೀಣ ಭಾಗಗಳಲ್ಲಿ ಸಕ್ರಿಯರಾಗಿರುವ ಆಶಾ ಕಾರ್ಯಕರ್ತೆಯರು ಶೌಚಾಲಯ ಬಳಕೆ, ನಿರ್ಮಾಣದ ಬಗ್ಗೆ ಪರಿಣಾಮಕಾರಿಯಾಗಿ ಅರಿವು ಮೂಡಿಸಲು ಸಾಧ್ಯವಾಗಲಿದೆ. ಈ ಕೆಲಸವನ್ನು ಬದ್ಧತೆ ಹಾಗೂ ಪ್ರಾಮಾಣಿಕತೆಯಿಂದ ನಿರ್ವಹಿಸಬೇಕೆಂದು ಸಲಹೆ ಮಾಡಿದರು.
ಗ್ರಾಮ ಪಂಚಾಯತ್ ಮಟ್ಟದಲ್ಲಿ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ ರಚಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಬಹುತೇಕ ಕಡೆ ಶೌಚಾಲಯಗಳ ನಿರ್ಮಾಣ ಮಾಡಲಾಗಿದೆ. ಇದರ ಬಳಕೆಗೆ ನಿರಂತರವಾಗಿ ಉತ್ತೇಜಿಸಿ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ಗುರುತರ ಜವಾಬ್ದಾರಿ ನಿರ್ವಹಿಸಬೇಕಿದೆ ಎಂದು ಹರೀಶ್ ಕುಮಾರ್ ಅವರು ತಿಳಿಸಿದರು.
ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್, ಜಿ.ಪಂ. ಉಪಕಾರ್ಯದರ್ಶಿ ಎನ್. ಮುನಿರಾಜಪ್ಪ, ಯೋಜನಾ ಮುಖ್ಯಾಧಿಕಾರಿ ಮಾದೇಶು, ಯೋಜನಾ ನಿರ್ದೇಶಕರಾದ ಶ್ರೀಧರ್, ಮುಖ್ಯ ಲೆಕ್ಕಾಧಿಕಾರಿ ಬಸವರಾಜು, ಆರ್ ಸಿ ಎಚ್ ಅಧಿಕಾರಿ ಡಾ. ವಿಶ್ವೇಶ್ವರಯ್ಯ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಉಚಿತ ಸಾಮೂಹಿಕ ಸರಳ ವಿವಾಹ : ನೋಂದಣಿಗೆ ಮನವಿ

      ಚಾಮರಾಜನಗರ, ಫೆ. 06- ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಕೊಳ್ಳೇಗಾಲ ತಾಲೂಕಿನ ಹನೂರು ಪಟ್ಟಣದಲ್ಲಿ ನಿರ್ಮಾಣ ಮಾಡಲಾಗಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನ ಉದ್ಘಾಟನೆ ಹಾಗೂ ಉಚಿತ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಫೆಬ್ರವರಿ 18ರಂದು ಬೆಳಿಗ್ಗೆ 11 ಗಂಟೆಗೆ ಪ್ರಬುದ್ಧ ಎಜುಕೇಷನಲ್ ಅಂಡ್ ಚಾರಿಟಬಲ್ ಸೊಸೈಟಿ ಚೇತವನ ಬೌದ್ಧ ವಿಹಾರದ ವತಿಯಿಂದ ಹಮ್ಮಿಕೊಳ್ಳಲಾಗಿದೆ.
ಉಚಿತ ಸರಳ ಸಾಮಾಹಿಕ ವಿವಾಹದಲ್ಲಿ ವಿವಾಹವಾಗಲು ಬಯಸುವವರು ಫೆಬ್ರವರಿ 13ರೊಳಗೆ ಪ್ರಬುದ್ಧ ಎಜುಕೇಷನಲ್ ಅಂಡ್ ಚಾರಿಟಬಲ್ ಸೊಸೈಟಿ ಚೇತವನ ಬೌದ್ಧವಿಹಾರ, 14/96 ಚೆನ್ನಾಲಿಂಗನಹಳ್ಳಿ ಪೋಸ್ಟ್, ಕೊಳ್ಳೇಗಾಲ ತಾಲೂಕು ಅಥವಾ ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಕೊಳ್ಳೇಗಾಲ ತಾಲೂಕು ಇಲ್ಲಿ ನೊಂದಾಯಿಸಿಕೊಳ್ಳಬಹುದು.
ವಧುವಿಗೆ ಕಡ್ಡಾಯವಾಗಿ 18 ವರ್ಷ, ವರನಿಗೆ 21 ವರ್ಷ ಪೂರ್ಣವಾಗಿರಬೇಕು. ಈ ಬಗ್ಗೆ ದಾಖಲಾತಿ ಸಲ್ಲಿಸಬೇಕು. ಸರಳ ಸಾಮಾಹಿಕ ವಿವಾಹದಲ್ಲಿ ವಿವಾಹವಾಗುವ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಿದ ದಂಪತಿಗಳಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ 50 ಸಾವಿರ ರೂ. ಪ್ರೋತ್ಸಾಹಧನ ಮಂಜೂರು ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಕೆಪಿಎಸ್‍ಸಿ ಪರೀಕ್ಷೆ

ಚಾಮರಾಜನಗರ, ಫೆ. 06 - ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ ಫೆಬ್ರವರಿ 4ರಂದು ನಡೆಸಲು ಉದ್ದೇಶಿಸಿದ್ದ ಪ್ರಥಮದರ್ಜೆ ಸಹಾಯಕರ ಸ್ಪರ್ಧಾತ್ಮಕ ಪರೀಕ್ಷೆಯನ್ನು ಮುಂದೂಡಿದ್ದು ಈ ಪರೀಕ್ಷೆಯನ್ನು ಫೆಬ್ರವರಿ 25ರಂದು ಜಿಲ್ಲೆಯಲ್ಲಿ ನಡೆಸಲು ನಿರ್ಧರಿಸಲಾಗಿದೆ.
ಈ ಹಿಂದೆ ನಿಗದಿಪಡಿಸಲಾಗಿದ್ದ ಪರೀಕ್ಷಾ ಕೇಂದ್ರಗಳಲ್ಲಿಯೇ ಪರೀಕ್ಷೆ ನಡೆಸಲಾಗುತ್ತದೆ. ಉಳಿದಂತೆ ಫೆಬ್ರವರಿ 10ರಂದು ಪ್ರಥಮದರ್ಜೆ/ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಮತ್ತು ಫೆಬ್ರವರಿ 11ರಂದು ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಜಿಲ್ಲೆಯಲ್ಲಿ ನಡೆಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳ ಕಾರ್ಯಾಲಯ ಪ್ರಕಟಣೆ ತಿಳಿಸಿದೆ.



ಫೆ. 17ರಂದು ಚಾಮರಾಜನಗರ ಜಿಲ್ಲಾಮಟ್ಟದ ಕ್ರೀಡಾಕೂಟ: ಹೆಸರು ನೊಂದಾಯಿಸಲು ಮನವಿ

ಚಾಮರಾಜನಗರ, ಫೆ. 06 - ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಬಸವಾಪುರದ ಗೌತಮಬುದ್ಧ ಸಾಂಸ್ಕøತಿಕ ಕ್ರೀಡಾ ಮತ್ತು ಕಲಾ ಯುವಜನ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಚಾಮರಾಜನಗರ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಫೆಬ್ರವರಿ 17ರಂದು ಬೆಳಿಗ್ಗೆ 9.30 ಗÀಂಟೆಗೆ ಆಯೋಜಿಸಲಾಗಿದೆ.
ಸ್ಪರ್ಧಿಗಳಿಗೆ 100 ಮೀ, 200 ಮೀ. ಓಟ, ಗುಂಡು ಎಸೆತ, ಉದ್ದ ಜಿಗಿತ, ಎತ್ತರ ಜಿಗಿತ, ಖೋಖೋ ಹಾಗೂ ಕಬಡ್ಡಿ ಸ್ಪರ್ಧೆಗಳಿವೆ.
ಸ್ಪರ್ಧಾಳುಗಳು ಕ್ರೀಡಾಕೂಟದಂದು ಬೆಳಿಗ್ಗೆ 9 ಗಂಟೆಗೆ ಕ್ರೀಡಾಕೂಟದ ಸ್ಥಳದಲ್ಲಿ ಸಂಘಟಿಕರಲ್ಲಿ ಹೆಸರು ನೊಂದಾಯಿಸಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗೆ ಬಸವಣ್ಣ (ಮೊ. 9482708278), ಮಹೇಶ್ (ಮೊ. 9900430748), ಪ್ರಭಾವತಿ (ಮೊ. 8095040475), ಗೋವಿಂದರಾಜ್ (ಮೊ. 7353633360), ಮಂಜಪ್ಪ ಬಿ.ಎಂ. (ಮೊ. 9590632002), ರಾಜೇಶ್ ಎಂ (ಮೊ. 8660640330), ಬಿ.ವಿ. ಮಂಜುನಾಥ (ಮೊ. 9742567733) ಇವರುಗಳನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.


ಮಗುವಿನ ಪೋಷಕರ ಪತ್ತೆಗೆ ಮನವಿ

ಚಾಮರಾಜನಗರ, ಫೆ. 06- ಚಾಮರಾಜನಗರ ತಾಲೂಕು ಪುಣಜನೂರು ಗ್ರಾಮದ ಸರಿತಾ ಹಾಗೂ ಸತ್ತಿವೇಲ್ ದಂಪತಿಗಳು 2017ರ ಮೇ 1ರಂದು ಕೊಯಮತ್ತೂರಿನ ವೈದ್ಯಕೀಯ ಆಸ್ಪತ್ರೆಯಲ್ಲಿ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.
ನಂತರ ಪುಣಜನೂರು ಗ್ರಾಮಕ್ಕೆ ಬಂದು ಮುಸ್ಲಿಂ ದಂಪತಿಗಳಿಗೆ ಸಾಕಲು ನೀಡಿದ್ದರು. ಈ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ದೂರು ಬಂದ ಹಿನ್ನೆಲೆಯಲ್ಲಿ ಮುಸ್ಲಿಂ ದಂಪತಿಗಳಿಂದ ಮಗುವನ್ನು ಇಲಾಖೆಯ ವಶಕ್ಕೆ ಪಡೆದು ರಕ್ಷಿಸಲಾಗಿದೆ.
ಇಲಾಖೆಯ ವಶಕ್ಕೆ ಪಡೆದ ನಂತರ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರಾಗುವಂತೆ ಜೈವಿಕ ಪೋಷಕರಾದ ಸತ್ತಿವೆಲ್ ಹಾಗೂ ಸರಿತಾರಿಗೆ ತಿಳಿಸಿದರೂ ಸಹ ಇದುವರೆಗೆ ಮಗುವಿನ ಬಗ್ಗೆ ವಿಚಾರಿಸಲು, ವಾಪಸ್ಸು ಪಡೆಯಲು ಹಾಜರಾಗಿರುವುದಿಲ್ಲ. ಪುಣಜನೂರು ಗ್ರಾಮದಲ್ಲೂ ವಾಸವಿರುವುದಿಲ್ಲ.
ಮಗುವಿನ ತಂದೆಯಾದ ಸತ್ತಿವೇಲ್ ತಮಿಳುನಾಡಿನÀ ಸತ್ಯಮಂಗಲಂನ ಹಳ್ಳಿಯ ನಿವಾಸಿಯಾಗಿದ್ದು ಅಲ್ಲಿಗೆ ಹೋಗಿರುವುದಾಗಿ ಪುಣಜನೂರು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿರುತ್ತಾರೆ. ಮಗುವನ್ನು ಪ್ರಸ್ತುತ ಮಂಡ್ಯ ಜಿಲ್ಲೆಯ ದತ್ತು ಕೇಂದ್ರ ವಿಕಸನ ಸಂಸ್ಥೆಯಲ್ಲಿ ಪುನರ್ ವಸತಿಗೊಳಿಸಿ ಮಗುವಿಗೆ ವೈದೇಹಿ ಎಂದು ನಾಮಕರಣ ಮಾಡಲಾಗಿರುತ್ತದೆ.
ಮಗುವಿನ ಮೂಲ ಪೋಷಕರ ಪತ್ತೆಗಾಗಿ ಕೋರಲಾಗಿದ್ದು ಸಂಬಂಧಪಟ್ಟವರು ಚಾಮರಾಜನಗರದ ಹೌಸಿಂಗ್ ಬೋರ್ಡ್ ಕಾಲೋನಿಯ ಮಕ್ಕಳ ಕಲ್ಯಾಣ ಸಮಿತಿಯ ಬಾಲಕಿಯರ ಸರ್ಕಾರಿ ಬಾಲಮಂದಿರ (ದೂ.ಸಂ. 08226-225701, ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು (ದೂ.ಸಂ. 08226-222354) ಅಥವಾ ಮಂಡ್ಯದ ವಿಕಸನ ಗ್ರಾಮೀಣ ಮತ್ತು ನಗರ ಅಭಿವೃದ್ಧಿ ಸಂಸ್ಥೆ (ವಿಶೇಷ ದತ್ತು ಸಂಸ್ಥೆ) (ದೂ.ಸಂ. 08232-221717)ಯನ್ನು ಸಂಪರ್ಕಿಸುವಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




ಬಯಲು ಶೌಚಮುಕ್ತ ನಗರ : ಆಕ್ಷೇಪಣೆ, ಪ್ರತಿಕ್ರಿಯೆ ಆಹ್ವಾನ 

ಚಾಮರಾಜನಗರ, ಫೆ. 06- ಕೊಳ್ಳೇಗಾಲ ನಗರಸಭೆಯು ನಗರಾಭಿವೃದ್ಧಿ ಮಂತ್ರಾಲಯದ ಸ್ವಚ್ಚ ಭಾರತ್ ಅಭಿಯಾನದಡಿ ಬಯಲು ಶೌಚ ಮುಕ್ತ ನಗರವನ್ನಾಗಿ ಮಾಡಲು ಉದ್ದೇಶಿಸಿ ಕೆಲವು ವಾರ್ಡುಗಳನ್ನು ಬಯಲು ಶೌಚಮುಕ್ತ ಎಂದು ಘೋಷಿಸಲು ಉದ್ದೇಶಿಸಿದೆ.
ಈ ಹಿನ್ನೆಲೆಯಲ್ಲಿ ನಗರಸಭೆಯ ವಾರ್ಡ್ ಸಂಖ್ಯೆ 8, 10, 14, 15, 16, 17, 18, 19, 20, 21, 22 ಮತ್ತು 23ರ ಒಟ್ಟು 12 ವಾರ್ಡುಗಳನ್ನು ಬಯಲು ಶೌಚ ಮುಕ್ತ ವಾರ್ಡ್‍ಗಳೆಂದು ಘೋಷಿಸಲು ತೀರ್ಮಾನಿಸಿದೆ.
ಈ ಸಂಬಂಧ ಸಾರ್ವಜನಿಕರಿಂದ ಆಕ್ಷೇಪಣೆ ಮತ್ತು ಪ್ರತಿಕ್ರಿಯೆಗಳನ್ನು ಆಹ್ವಾನಿಸಲಾಗಿದೆ. ಸಾರ್ವಜನಿಕರು ಫೆಬ್ರವರಿ 9ರ ಒಳಗೆ  ಆಕ್ಷೇಪಣೆ ಮತ್ತು ಪ್ರತಿಕ್ರಿಯೆಗಳು ಇದ್ದಲ್ಲಿ ಕೊಳ್ಳೇಗಾಲ ನಗರಸಭೆಗೆ ಲಿಖಿತವಾಗಿ ಸಲ್ಲಿಸಲು ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಪೌರಾಯುಕ್ತರು ಪ್ರಕಟಣೆಯಲ್ಲಿ ಕೋರಿದ್ದಾರೆ.


No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು