ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ : ಉಸ್ತುವಾರಿ ಸಚಿವರಾದ ಗೀತಾ ಮಹದೇವಪ್ರಸಾದ್
ಚಾಮರಾಜನಗರ, ಫೆ. 03 - ರಾಜ್ಯ ಸರ್ಕಾರ ಆರೋಗ್ಯ ರಕ್ಷಣೆಗಾಗಿ ಹೆಚ್ಚಿನ ಅನುದಾನವನ್ನು ವೆಚ್ಚ ಮಾಡುವ ಮೂಲಕ ಎಲ್ಲರಿಗೂ ಸಮರ್ಪಕವಾಗಿ ಆರೋಗ್ಯ ಸೇವೆಗಳನ್ನು ಒದಗಿಸಲು ಮುಂದಾಗಿದೆ ಎಂದು ಸಕ್ಕರೆ, ಸಣ್ಣ ಕೈಗಾರಿಕೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಸಿ. ಮೋಹನಕುಮಾರಿ ಉರುಫ್ ಗೀತಾ ಮಹದೇವಪ್ರಸಾದ್ ತಿಳಿಸಿದರು.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ತಾಲೂಕಿನ ಸಂತೆಮರಹಳ್ಳಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇಂದು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿ ನಿರ್ಮಾಣ ಮಾಡಿರುವ 60 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಆರೋಗ್ಯ ಸೇವೆ ನೀಡುವ ಸಲುವಾಗಿಯೇ ಸರ್ಕಾರ ವಿಶೇಷ ಒತ್ತು ನೀಡಿದೆ. ಗುಣಮಟ್ಟದ ಆರೋಗ್ಯ ಸೌಲಭ್ಯಗಳು ಲಭಿಸಬೇಕು ಎನ್ನುವ ಉದ್ದೇಶದಿಂದ ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡುತ್ತಿದೆ. ಚಾಮರಾಜನಗರ ಜಿಲ್ಲೆಯ ತಾಲೂಕು ಕೇಂದ್ರ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಘಟಕಗಳು ಇನ್ನು ಒಂದು ತಿಂಗಳಲ್ಲಿ ಕಾರ್ಯಾರಂಭ ಮಾಡಲಿವೆ ಎಂದರು.
ಕಡಿಮೆ ವೆಚ್ಚದಲ್ಲಿ ಔಷಧಿ ಸಿಗಬೇಕೆಂಬ ಉದ್ದೇಶದಿಂದ ಜನರಿಕ್ ಔಷಧಿ ಮಳಿಗೆಗಳನ್ನು ತೆರೆಯಲಾಗುತ್ತಿದೆ. ಸಿ.ಟಿ. ಸ್ಕ್ಯಾನ್, ಎಂ ಆರ್ ಐ ಸ್ಕ್ಯಾನ್ ಮಾಡಿಸಲು ದೊಡ್ಡ ಜಿಲ್ಲಾ ಕೇಂದ್ರಗಳಿಗೆ ತೆರಳಬೇಕಿತ್ತು. ಈ ಸೌಲಭ್ಯವನ್ನು ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲೇ ನೀಡುವ ಉದ್ದೇಶದಿಂದ ಸಂಬಂಧಪಟ್ಟ ಕೆಲಸ ಪ್ರಕ್ರಿಯೆಯಲ್ಲಿದೆ ಎಂದು ಉಸ್ತುವಾರಿ ಸಚಿವರು ತಿಳಿಸಿದರು.
ತಾಯಿ ಮತ್ತು ಮಗುವಿನ ಮರಣ ಪ್ರಮಾಣ ತಗ್ಗಿಸಬೇಕೆಂಬ ಹಿನ್ನೆಲೆಯಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಗುಂಡ್ಲುಪೇಟೆಯಲ್ಲಿ ಕೆಲ ತಿಂಗಳ ಹಿಂದೆ ತಾಯಿ ಮಕ್ಕಳ ಆಸ್ಪತ್ರೆ ಜನರ ಬಳಕೆಗೆ ಉದ್ಘಾಟಿಸಲಾಗಿದೆ. ಸಂತೆಮರಹಳ್ಳಿಯಲ್ಲಿಯೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಸಂತೋಷದಿಂದ ಉದ್ಘಾಟಿಸಿದ್ದು ಜನರ ನೆರವಿಗೆ ಅನುಕೂಲವಾಗಲಿದೆ ಎಂದು ಉಸ್ತುವಾರಿ ಸಚಿವರು ತಿಳಿಸಿದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಕಾರ್ಯಕ್ರಮ ಯಶಸ್ವಿಯಿಂದಾಗಿ ಜಿಲ್ಲೆಯಲ್ಲಿ ತಾಯಿ ಶಿಶುವಿನ ಪ್ರಮಾಣ ಗಣನೀಯವಾಗಿ ತಗ್ಗಿದೆ. ಜಿಲ್ಲೆಯಲ್ಲಿ ಆಶಾ ಕಾರ್ಯಕರ್ತೆಯರು ಶ್ರಮವಹಿಸಿ ಕಾರ್ಯನಿರ್ವಹಿಸುತ್ತಿರುವ ಪರಿಣಾಮ ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೇವೆ ಸಮರ್ಪಕವಾಗಿ ತಲುಪುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಧ್ರುವನಾರಾಯಣ ಮೆಚ್ಚುಗೆ ವ್ಯಕ್ತಪಡಿಸಿದರು.
ಚಾಮರಾಜನಗರ ಜಿಲ್ಲೆಯು ಆರೋಗ್ಯ ಕ್ಷೇತ್ರದಲ್ಲಿ ದೇಶದ 599 ಜಿಲ್ಲೆಗಳ ಪೈಕಿ 231ನೇ ಸ್ಥಾನದಲ್ಲಿದೆ ಎಂಬ ವರದಿ ಬಂದಿದೆ. ರಕ್ತಹೀನತೆಯಿಂದ ಬಳಲುವವರ ಪ್ರಮಾಣ ಶೇ. 44ರಷ್ಟು ಇದೆ. ಶೇ. 32ರಷ್ಟು ಹೆಣ್ಣುಮಕ್ಕಳು 18 ವಯಸ್ಸಿನ ಒಳಗೆ ವಿವಾಹವಾಗುತ್ತಿದ್ದಾರೆ. ಶೌಚಾಲಯ ಬಳಕೆ ಪ್ರಮಾಣವು ಕಡಿಮೆ ಇದೆ ಎಂದು ವರದಿ ಇದೆ. ಈ ಎಲ್ಲಾ ಅಂಶಗಳ ಬಗ್ಗೆಯೂ ಗಮನ ಹರಿಸಿ ವೈಯಕ್ತಿಕ ಶೌಚಾಲಯಗಳ ನಿರ್ಮಾಣ ಹಾಗೂ 18 ವರ್ಷ ತುಂಬಿದ ನಂತರವೇ ಮದುವೆ ಮಾಡುವ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವ ಕೆಲಸವೂ ಆಗಬೇಕಿದೆ ಎಂದು ಧ್ರುವನಾರಾಯಣ ಸಲಹೆ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರಾದ ಎಸ್. ಜಯಣ್ಣ ಮಹಿಳೆಯರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸಂತೆಮರಹಳ್ಳಿ ತಾಲೂಕು ಕೇಂದ್ರದಲ್ಲಿ ತಾಯಿ ಮಕ್ಕಳ ಆಸ್ಪತ್ರೆ ಸೌಲಭ್ಯ ಕಲ್ಪಿಸಲಾಗಿದೆ. ಈ ಆಸ್ಪತ್ರೆ ಮತ್ತು ಸೇವೆ ನಿಮಗಾಗಿಯೇ ಎಂಬ ಭಾವನೆ ಎಲ್ಲ ಮಹಿಳೆಯರಲ್ಲೂ ಮೂಡಿಬರಬೇಕೆಂದು ಆಶಿಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಮಾತನಾಡಿ ಜನರ ಆರೋಗ್ಯ ಕಾಳಜಿಗಾಗಿ ಸರ್ಕಾರ ಜಿಲ್ಲೆಯಲ್ಲಿ ಹಲವಾರು ಸೌಲಭ್ಯಗಳನ್ನು ಕಲ್ಪಿಸಿದೆ. ಗ್ರಾಮೀಣ ಭಾಗಗಳಲ್ಲಿಯೂ ಜನರಿಗೆ ಆರೋಗ್ಯ ಸೇವೆ ಯಾವುದೇ ತೊಂದರೆ ಇಲ್ಲದೆ ತಲುಪಿಸಬೇಕೆಂಬ ಉದ್ದೇಶದಿಂದ ನಾನಾ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದುರ.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಜೆ. ಯೋಗೇಶ್, ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು, ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ, ಮಾಜಿ ಶಾಸಕರಾದ ಬಾಲರಾಜು, ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ. ಸದಾಶಿವಮೂರ್ತಿ, ತಾಲೂಕು ಪಂಚಾಯತ್ ಸದಸ್ಯರಾದ ರವೀಶ್, ಮಹದೇವಯ್ಯ, ಮಹದೇವಸ್ವಾಮಿ, ಎಪಿಎಂಸಿ ಅಧ್ಯಕ್ಷರಾದ ಬಿ.ಕೆ. ರವಿಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶೋಭ, ಉಪಾಧ್ಯಕ್ಷರಾದ ಟಿ.ಎಸ್. ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಹರೀಶ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಚ್. ಪ್ರಸಾದ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಆದರ್ಶ ವಿದ್ಯಾಲಯ : 6ನೇ ತರಗತಿ ಪ್ರವೇಶಕ್ಕೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ
ಚಾಮರಾಜನಗರ, ಫೆ. 03 - ಜಿಲ್ಲೆಯ ಚಾಮರಾನಗರ, ಗುಂಡ್ಲುಪೇಟೆ, ಕೊಳ್ಳೇಗಾಲ ಹಾಗೂ ಯಳಂದೂರು ತಾಲೂಕುಗಳಲ್ಲಿ ಆದರ್ಶ ವಿದ್ಯಾಲಯಗಳಲ್ಲಿ 6ನೇ ತರಗತಿ ಪ್ರವೇಶಕ್ಕೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಆಯಾ ತಾಲೂಕಿನ ಶಾಲೆಯ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅದೇ ತಾಲೂಕಿನಲ್ಲಿ ಅರ್ಜಿ ಸಲ್ಲಿಸಬಹುದು. ಆಯಾ ತಾಲೂಕಿನ ಮೂಲ ನಿವಾಸಿಗಳ ಮಕ್ಕಳು ಬೇರೆ ತಾಲೂಕು, ಜಿಲ್ಲೆ, ರಾಜ್ಯಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರೂ ಸಹ 6ನೇ ತರಗತಿಗೆ ಮೂಲ ತಾಲೂಕಿನಲ್ಲಿ ವ್ಯಾಸಂಗ ಮಾಡಲು ಇಚ್ಚಿಸಿದಲ್ಲಿ ಅರ್ಜಿ ಸಲ್ಲಿಸಬಹುದು.
ಅರ್ಜಿಯನ್ನು ಫೆಬ್ರವರಿ 17ರ ಒಳಗೆ ವೆಬ್ ಸೈಟ್ ತಿತಿತಿ.sಛಿhooಟeಜuಛಿಚಿಣioಟಿ.ಞಚಿಡಿ.ಟಿiಛಿ.iಟಿ ಅಥವಾ ತಿತಿತಿ.viಜಥಿಚಿvಚಿhiಟಿi.ಞಚಿಡಿಟಿಚಿಣಚಿಞಚಿ.gov.iಟಿ ಮೂಲಕ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಆದರ್ಶ ಶಾಲೆಗಳ ಮುಖ್ಯ ಶಿಕ್ಷಕರನ್ನು ಸಂಪರ್ಕಿಸಿ ಸೇವಾ ಕೇಂದ್ರಗಳ ಸೌಲಭ್ಯ ಪಡೆದುಕೊಂಡು ಆನ್ ಲೈನ್ ಮೂಲಕವೇ ಅರ್ಜಿ ಸಲ್ಲಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಧಾನ ಸಭಾ ಚುನಾವಣೆ ಪೂರ್ವ ಸಿದ್ಧತೆಗೆ ಮುಂಜಾಗರೂಕತೆ ವಹಿಸಲು ಜಿಲ್ಲಾಧಿಕಾರಿ ಬಿ. ರಾಮು ಸೂಚನೆ
ಚಾಮರಾಜನಗರ, ಫೆ. 03 - ಮುಂಬರುವ ವಿಧಾನ ಸಭಾ ಚುನಾವಣೆ ಹಿನ್ನಲೆಯಲ್ಲಿ ಅಧಿಕಾರಿಗಳು ಅಗತ್ಯ ಪೂರ್ವ ಸಿದ್ಧತೆ ಕ್ರಮಗಳಿಗೆ ಈಗಿನಿಂದಲೇ ಮುಂಜಾಗರೂಕತೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಬಿ. ರಾಮು ಅವರು ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಇಂದು ನಡೆದ ವಿಧಾನ ಸಭಾ ಚುನಾವಣೆಯ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಗಡಿ ಭಾಗದಲ್ಲಿ ಚಕ್ ಪೋಸ್ಟ್‍ಗಳನ್ನು ತೆರೆದು ಅವುಗಳಿಗೆ ಸಿಸಿ ಕ್ಯಾಮರಾ ಅಳವಡಿಸುವ ವ್ಯವಸ್ಥೆಯಾಗಬೇಕು. ಅಕ್ರಮವಾಗಿ ಹಣ ಮದ್ಯ ಸಾಗಣೆ ಹಾಗೂ ಸಂಗ್ರಹಣೆಗೆ ಅವಕಾಶವಾಗದಂತೆ ಪೊಲೀಸ್, ಅಬಕಾರಿ ಅಧಿಕಾರಿಗಳು ನಿಗಾವಹಿಸಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಚಾಮರಾಜನಗರ ಗಡಿ ಜಿಲ್ಲೆಯಾಗಿರುವುದರಿಂದ ಜಿಲ್ಲೆಯ ಎಲ್ಲಾ ಚೆಕ್ ಪೋಸ್ಟ್‍ಗಳಲ್ಲಿ ಬಿಗಿ ಭದ್ರತೆ ಇರಬೇಕು. ಅಬಕಾರಿ, ಪೊಲೀಸ್ ಹಾಗೂ ಅರಣ್ಯ ಇಲಾಖೆ ಸಮನ್ಮಯದೊಂದಿಗೆ ಕಾರ್ಯ ಪ್ರವೃತ್ತರಾಗಬೇಕು ಎಂದರು.
ಮತಗಟ್ಟೆಗಳ ಸಿದ್ದತೆ ಬಗ್ಗೆ ಮಾತನಾಡಿದ ಅವರು ಪ್ರತಿ ಮತಗಟ್ಟೆಯಲ್ಲಿ ಎಲ್ಲಾ ಸೌಲಭ್ಯಗಳು ಇದೆಯೇ ಎಂದು ಪರಿಶೀಲಿಸಬೇಕು. ಮತಗಟ್ಟೆಗೆ ಗುರುತಿಸಲಾಗಿರುವ ಕೊಠಡಿಗಳು ಸುಸ್ಥತಿಯಲ್ಲಿ ಇದೆಯೇ ಎಂಬ ಬಗ್ಗೆ ನೋಡಿಕೊಳ್ಳಬೇಕು. ಕುಡಿಯುವ ನೀರಿನ ಸೌಲಭ್ಯ, ರ್ಯಾಂಪ್, ವಿದ್ಯುತ್, ಶೌಚಾಲಯ ಇರಬೇಕು. ವಿಕಲಚೇತನರಿಗೆ ಗಾಲಿ ಕುರ್ಚಿಯ ವ್ಯವಸ್ಥೆ ಸಹಾ ಮಾಡಬೇಕಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧಮೇಂದ್ರ ಕುಮಾರ್ ಮೀನಾ ಮಾತನಾಡಿ ಚುನಾವಣ ಆಯೋಗದ ಮಾರ್ಗಸೂಚಿ ಅನುಸಾರ ಎಲ್ಲಾ ಸಿದ್ದತೆಗಳನ್ನು ನಿರ್ವಹಿಸಬೇಕು. ಅರಣ್ಯವ್ಯಾಪ್ತಿಯ ಭಾಗಗಳಲ್ಲಿ ರಕ್ಷಣೆಗಾಗಿ ಹೊಂದಲಾಗಿರುವ ಆಯಧ ಬಂದೂಕುಗಳಿಗೆ ಪರವಾನಗಿ ಪಡೆಯಲಾಗಿದೆಯೇ ಎಂಬ ಬಗ್ಗೆ ಪರಿಶೀಲಿಸಬೇಕು. ಆಯೋಗದ ನಿರ್ದೇಶನ ಪ್ರಕಾರ ನೀಡಲಾಗಿರುವ ಕ್ರಮಗಳನ್ನು ವಹಿಸಬೇಕು ಎಂದರು.
ಚುನಾವಣ ಸಂಬಂಧ ಇತರೆ ವಿಷಯಗಳನ್ನು ಚರ್ಚಿಸಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಯವರು ಅಗತ್ಯ ಸೂಚನೆಗಳನ್ನು ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಉಪವಿಭಾಧಿಕಾರಿ ಫೌಜಿಯಾ ತರನಮ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೀತಾ ಪ್ರಸನ್ನ, ತಹಸೀಲ್ದಾರರು, ಅಬಕಾರಿ, ಅರಣ್ಯ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಶೈಕ್ಷಣಿಕ ಪ್ರಗತಿಗೆ ಜಿಲ್ಲಾ ಉಸ್ತುವಾರಿ ಸಚಿವರ ಕರೆ
ಚಾಮರಾಜನಗರ, ಫೆ. 03 :- ಚಾಮರಾಜನಗರ ಜಿಲ್ಲೆಯನ್ನು ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಶೈಕ್ಷಣಿಕವಾಗಿಯೂ ಹೆಚ್ಚು ಪ್ರಗತಿ ಹೊಂದಬೇಕು. ಈ ನಿಟ್ಟಿನಲ್ಲಿ ತಾಲೂಕು ಆಡಳಿತ ಎಸ್‍ಎಸ್‍ಎಲ್‍ಸಿ ಮಕ್ಕಳಿಗಾಗಿ ಪ್ರಕಟಿಸಿರುವ ಜ್ಞಾನ ಅಮೃತ ಹೊತ್ತಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಸಕ್ಕರೆ ಮತ್ತು ಸಣ್ಣ ಕೈಗಾರಿಕೆಗಳ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಗೀತಾ ಮಹದೇವಪ್ರಸಾದ್ ತಿಳಿಸಿದರು.
ನಗರದ ತಾಲೂಕು ಪಂಚಾಯಿತಿ ಆವರಣದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಸಹಯೋಗದದಲ್ಲಿ ಇಂದು ನಡೆÀದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಿಸಿರುವ ರಾಜೀವ್‍ಗಾಂಧಿ ಸೇವಾ ಕೇಂದ್ರ ನೂತನ ಕಟ್ಟಡ ಉದ್ಘಾಟನೆ ಹಾಗೂ ಡಾ. ಡಿ.ಎಂ. ನಂಜುಂಡಪ್ಪ ವರದಿಯ ಅನುದಾನದಡಿಯಲ್ಲಿ ನಿರ್ಮಿಸಿರುವ ಅಂಗಡಿ ಮಳಿಗೆಗಳ ಉದ್ಘಾಟನಾ ಸಮಾರಂಭದಲ್ಲಿ 2017-18 ಸಾಲಿನ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗಾಗಿ ಪ್ರಕಟಿಸಿರುವ ಜ್ಞಾನ ಅಮೃತ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕಳೆದ ನಾಲ್ಕೂವರೆ ವರ್ಷಗಳಿಂದ ಜಿಲ್ಲೆಯ ಸರ್ವಾಂಗೀಣ ಅಭಿವೃದ್ದಿಯಾಗುತ್ತಿದೆ. ಮೂಲ ಸೌಲಭ್ಯಗಳಾದ ರಸ್ತೆ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಅನೇಕ ಸಲವತ್ತುಗಳನ್ನು ಕಲ್ಪಿಸಲಾಗಿದೆ. ಇದರ ಜೊತೆಗೆ ಪ್ರಮುಖವಾಗಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಜಿಲ್ಲೆಯು ಶೈಕ್ಷಣಿಕವಾಗಿ ಪ್ರಗತಿ ಹೊಂದುವತ್ತ ಸಾಗಿದೆ. ಸರ್ಕಾರದ ಯೋಜನೆಗಳು ಸದ್ಬಳಕೆಯಾಗುತ್ತಿದೆ. ತಾಲೂಕು ಪಂಚಾಯಿತಿ ಪ್ರಾಥಮಿಕ ಹಂತದಲ್ಲಿಯೇ ಈ ಕೆಲಸವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ 37 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ರಾಜೀವ್‍ಗಾಂಧಿ ಸೇವಾ ಕೇಂದ್ರ ತಾಲೂಕಿನ ಅಭಿವೃದ್ದಿಗೆ ಬಳಕೆಯಾಗಬೇಕು. ಈ ಕಟ್ಟಡದಲ್ಲಿ ಲೆಕ್ಕ ಪರಿಶೋಧನೆ, ಗ್ರಾ.ಪಂ.ಆಡಳಿತಕ್ಕೆ ಸಂಬಂಧಪಟ್ಟ ಎಲ್ಲಾ ವ್ಯವಹಾರಗಳು ನಡೆಯುವ ಜೊತೆಗೆ ಜ್ಞಾನ ಸಂಪನ್ಮೂಲ ಕೇಂದ್ರವಾಗಿ ಹೊರ ಹೊಮ್ಮಬೇಕು ಎಂದರು.
ಹಿಂದುಳಿದ ತಾಲೂಕುಗಳ ಅಭಿವೃದ್ದಿಗಾಗಿ ನಂಜುಂಡಪ್ಪ ವರದಿ ಅನ್ವಯ 2012-13ನೇ ಸಾಲಿನಲ್ಲಿ 7 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ 4 ವಾಣಿಜ್ಯ ಮಳಿಗೆಗಳು ತಾಲೂಕು ಪಂಚಾಯಿತಿ ಆದಾಯದ ಮೂಲವಾಗಿದೆ ಎಂದರು.
ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಮಾತನಾಡಿ, ಮಹತ್ವಪೂರ್ಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ರಾಜೀವ್ ಗಾಂಧಿ ಸೇವಾ ಕೇಂದ್ರ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಗ್ರಾಮ ಪಂಚಾಯಿತಿಗಳ ಅಭಿವೃದ್ದಿ ಹಾಗೂ ಗ್ರಾಮಗಳ ಪ್ರಗತಿಹೊಂದುವಲ್ಲಿ ಉದ್ಯೋಗ ಖಾತರಿ ಯೋಜನೆ ಅನುಷ್ಠಾನವೂ ಸಹಾ ಕಾರಣವಾಗಿದೆ. ಜಿಲ್ಲೆಯಲ್ಲಿ ಉದ್ಯೋಗ ಖಾತರಿ ಯೋಜನೆಯಡಿ 63 ಕೋಟಿ ರೂ. ವೆಚ್ಚವಾಗಿದ್ದರೆ, ತಾಲೂಕಿನಲ್ಲಿ 23 ಕೋಟಿ ರೂ.ಗಳ ಕಾಮಗಾರಿಗಳು ನಡೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತಾ.ಪಂ. ಅಧ್ಯಕ್ಷರಾದ ಹೆಚ್.ವಿ. ಚಂದ್ರು ಮತ್ತು ಸದಸ್ಯರು ಕಳೆದ ವರ್ಷವು ಸಹ ಎಸ್.ಎಸ್.ಎಲ್.ಸಿ ಯಶಸ್ಸು ಪುಸ್ತಕವನ್ನು ಹೊರತಂದು ತಾಲೂಕಿನಲ್ಲಿ ಫಲಿತಾಂಶ ಉತ್ತಮಗೊಳ್ಳವಂತೆÉ ಮಾಡಿದ್ದರು. ಈ ಬಾರಿಯು ಸಹ ಜ್ಞಾನ ಅಮೃತ ಎಂಬ ಕೈಪಿಡಿಯನ್ನು ಎಸ್.ಎಸ್.ಎಲ್.ಸಿ ವಿಧ್ಯಾರ್ಥಿಗಳು ಸಜ್ಜುಗೊಳ್ಳಲು ಹೊರತಂದಿದ್ದಾರೆ. ಇದರ ಪ್ರಯೋಜನ ಪಡೆದು ಜಿಲ್ಲೆಯೂ ಫಲಿತಾಂಶದಲ್ಲಿ ಉತ್ತಮ ಸ್ಥಾನ ಪಡೆಯಲಿ ಎಂದು ದ್ರುವನಾರಾಯಣ ಹಾರೈಸಿದರು.
ಶಾಸಕ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನರೇಗಾ ಯೋಜನೆ ಗ್ರಾಮಗಳ ಅಭಿವೃದ್ದಿಗೆ ಪೂರಕವಾಗಿದ್ದು, ಗ್ರಾಮ ಪಂಚಾಯಿತಿಗಳಲ್ಲಿ ಜನಪ್ರತಿನಿಧಿಗಳು ಹಾಗೂ ಪಿಡಿಓಗಳು ಸಮನ್ವಯ ಮೂಲಕ ಹೆಚ್ಚು ಪ್ರಗತಿಗೆ ಮುಂದಾಬೇಕೆಂದರು.
ತಾ.ಪಂ. ಅಧ್ಯಕ್ಷರಾದ ಹೆಚ್,ವಿ. ಚಂದ್ರು ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ವರ್ಷದಿಂದ ತಾಲೂಕಿನ ಶೈಕ್ಷಣಿಕ ಪ್ರಗತಿಯನ್ನು ಹೆಚ್ಚಿಸಲು ಹಾಗು ಎಸ್‍ಎಸ್‍ಎಲ್‍ಸಿಯಲ್ಲಿ ಹೆಚ್ಚು ಮಕ್ಕಳು ಅನುತ್ತೀರ್ಣ ಆಗುವುದನ್ನು ತಪ್ಪಿಸಲು ಕೈಪಿಡಿಯನ್ನು ಬಿಡುಗಡೆ ಮಾಡಲಾಗುತ್ತಿದೆ. ಈ ವರ್ಷ ಜ್ಞಾನ ಅಮೃತ ಹೊತ್ತಿಗೆಯನ್ನು ಹೊರತಂದಿದ್ದು, ಜಿಲ್ಲೆಯ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಅನುದಾನವನ್ನು ನೀಡಿ ಪುಸ್ತಕ ಪ್ರಕಟಿಸಲು ಸಹಕಾರ ನೀಡಿದ್ದಾರೆ. ಅದೇ ರೀತಿ ತಾ.ಪಂ. ಸದಸ್ಯರು ಒಂದು ತಿಂಗಳ ಗೌರವ ಧನವನ್ನು ನೀಡಿದ್ದಾರೆ ಎಂದು ಕೃತಜ್ಞತೆ ಸಲ್ಲಿಸಿದರು.
ಸಮಾರಂಭದಲ್ಲಿ ಶಾಸಕ ಎಸ್. ಜಯಣ್ಣ, ಜಿ.ಪಂ. ಉಪಾಧ್ಯಕ್ಷ ಜೆ. ಯೋಗೇಶ್, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅದ್ಯಕ್ಷ ಕೆ.ಪಿ. ಸದಾಶಿವಮೂರ್ತಿ, ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆರೆಹಳ್ಳಿ ನವೀನ್, ತಾಪಂ. ಉಪಾಧ್ಯಕ್ಷ ಪಿ.ಎನ್. ದಯಾನಿಧಿ, ಚುಡಾ ಅಧ್ಯಕ್ಷ ಸುಹೇಲ್ ಆಲಿ ಖಾನ್, ನಗರಸಭಾ ಅಧ್ಯಕ್ಷೆ ಶೋಭಾ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ಎಂ. ನಾಗಸುಂದ್ರಮ್ಮ, ಎಪಿಎಂಸಿ ಅಧ್ಯಕ್ಷ ಬಿ.ಕೆ. ರವಿಕುಮಾರ್, ಜಿಪಂ. ಸದಸ್ಯೆ ಶಶಿಕಲಾ ಸೋಮಲಿಂಗಪ್ಪ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಹರೀಶ್‍ಕುಮಾರ್, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಎಂ.ಎಸ್. ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಲಕ್ಷ್ಮಿಪತಿ, ತಾ.ಪಂ. ಸದಸ್ಯರು ಉಪಸ್ಥಿತರಿದ್ದರು.
No comments:
Post a Comment