Wednesday, 21 February 2018

ದ್ವಿತೀಯ ಪಿಯುಸಿ ಪರೀಕ್ಷೆ ಕಾರ್ಯ ಕಟ್ಟುನಿಟ್ಟಾಗಿ ನಿರ್ವಹಿಸಲು ಜಿಲ್ಲಾಧಿಕಾರಿ ಬಿ.ರಾಮು ಸೂಚನೆ (21-02-2018)

ದ್ವಿತೀಯ ಪಿಯುಸಿ ಪರೀಕ್ಷೆ ಕಾರ್ಯ ಕಟ್ಟುನಿಟ್ಟಾಗಿ ನಿರ್ವಹಿಸಲು ಜಿಲ್ಲಾಧಿಕಾರಿ ಬಿ.ರಾಮು ಸೂಚನೆ 

ಚಾಮರಾಜನಗರ, ಫೆ. 21- ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಕಾರ್ಯವು ಯಾವುದೇ ಲೋಪವಿಲ್ಲದಂತೆ ಅತ್ಯಂತ ಪಾರದರ್ಶಕತೆ ಹಾಗೂ ಕಟ್ಟುನಿಟ್ಟಾಗಿ ನಿರ್ವಹಿಸಲು ಸಕಲ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಬಿ. ರಾಮು ಅವರು ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ದ್ವಿತೀಯ ಪಿಯುಸಿ ಪರೀಕ್ಷೆ ಸಂಬಂಧ ನಡೆದ ಪ್ರಾಂಶುಪಾಲರು, ತಹಸೀಲ್ದಾರರು, ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇದೇ ಮಾರ್ಚ್ 1ರಿಂದ 17ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದೆ. ಈಗಾಗಲೇ ನಿಗದಿಮಾಡಿರುವ ವೇಳಾಪಟ್ಟಿ ಅನುಸಾರ ಪರೀಕ್ಷೆ ಕಾರ್ಯಗಳನ್ನು ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸಬೇಕಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಗೊಂದಲಕ್ಕೆ ಆಸ್ಪದ ನೀಡದೆ ಸುಸೂತ್ರವಾಗಿ ಪರೀಕ್ಷಾ ಪ್ರಕ್ರಿಯೆ ನಡೆಯಲು ಆಗಬೇಕಿರುವ ಸಿದ್ಧತೆಗಳನ್ನು ಪೂರ್ಣಗೊಳಿಸಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.
ಪ್ರಶ್ನೆಪತ್ರಿಕೆ ರವಾನಿಸುವ ವಾಹನಗಳಿಗೆ ಜಿಪಿಎಸ್ ಅಳವಡಿಸಲು ಪದವಿಪೂರ್ವ ಶಿಕ್ಷಣ ಇಲಾಖೆ ಈಗಾಗಲೇ ಆದೇಶ ಹೊರಡಿಸಿದೆ. ಇದರ ಪಾಲನೆಗೆ ಕಟ್ಟುನಿಟ್ಟಾಗಿ ಮುಂದಾಗಬೇಕು. ಜಿಪಿಎಸ್ ಅಳವಡಿಕೆ ಸಂಬಂಧ ಕಾರ್ಯವನ್ನು ಪೂರ್ಣಗೊಳಿಸಬೇಕು. ಅತ್ಯಂತ ಹೊಣೆಗಾರಿಕೆಯಿಂದ ಕರ್ತವ್ಯ ನಿಭಾಯಿಸಬೇಕೆಂದು ಬಿ. ರಾಮು ಅವರು ತಿಳಿಸಿದರು.
ಪರೀಕ್ಷಾ ನಡೆಯುವ ಎಲ್ಲ ದಿನಗಳಲ್ಲಿ ಪರೀಕ್ಷಾ ಕೆಲಸಕ್ಕೆ ನಿಯೋಜಿತರಾಗಿರುವ ಮುಖ್ಯ ಅಧೀಕ್ಷಕರು ಸೂಚಿಸಲಾಗಿರುವ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ಚಾಚೂ ತಪ್ಪದೆ ನಿರ್ವಹಿಸಬೇಕು. ಪರೀಕ್ಷಾ ಕೆಲಸ ನಿರ್ವಹಿಸದೆ ಇತರೆ ಕೆಲಸಗಳಲ್ಲಿ ತೊಡಗಿದಲ್ಲಿ ಶಿಕ್ಷಣ ಕಾಯಿದೆ ಅನುಸಾರ ಕ್ರಮ ಜರುಗಿಸಲಾಗುತ್ತದೆ. ಪರೀಕ್ಷಾ ಕೆಲಸಗಳಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮನವರಿಕೆ ಮಾಡಿ ಅದರ ನಿರ್ವಹಣೆಗೆ ಅವಶ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ನಿರ್ದೇಶನ ನೀಡಿದರು.
ಪರೀಕ್ಷಾ ಕೇಂದ್ರದ ಒಳಗಡೆ ಪುಸ್ತಕ, ಕೈಬರಹ, ಮುದ್ರಿತ ಹಾಳೆ, ಇತ್ಯಾದಿಗಳನ್ನು ತರದಂತೆ ಎಚ್ಚರಿಕೆ ನೀಡಬೇಕು. ಪರೀಕ್ಷಾಕೇಂದ್ರಕ್ಕೆ ವಿದ್ಯಾರ್ಥಿಗಳಾಗಲಿ, ಸಿಬ್ಬಂದಿಯಾಗಲಿ ಮೊಬೈಲ್ ಫೋನ್, ಇ ಕ್ಯಾಮರಾ, ಲ್ಯಾಪ್ ಟಾಪ್, ಇನ್ನಿತರ ಎಲೆಕ್ಟ್ರಾನಿಕ್ ಉಪಕರಣಗಳನ್ನು ತರುವುದನ್ನು ನಿಷೇಧಿಸಬೇಕು. ಪದವಿಪೂರ್ವ ಶಿಕ್ಷಣ ಇಲಾಖೆ ನಿಗದಿಪಡಿಸಿದ ವಸ್ತುಗಳನ್ನು ಹೊರತುಪಡಿಸಿ ಇನ್ನಾವುದೇ ಉಪಕರಣಗಳನ್ನು ತರುವಂತಿಲ್ಲ. ಈ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಬೇಕೆಂದು ಸೂಚಿಸಿದರು.
ಪರೀಕ್ಷಾ ನಡೆಯುವ ಸಂದರ್ಭದಲ್ಲಿ ಕೊಠಡಿ ಮೇಲ್ವಿಚಾರಣೆ ನಿರ್ವಹಿಸುವ ಸಿಬ್ಬಂದಿಗೆ ಆದೇಶಾನುಸಾರ ಸೂಚನೆಗಳನ್ನು ನೀಡಬೇಕು. ಪರೀಕ್ಷೆ ಮುಗಿದನಂತರ ನಡೆಸಬೇಕಿರುವ ಪ್ರಕ್ರಿಯೆ ಬಗ್ಗೆಯೂ ಸ್ಪಷ್ಟ ಮಾರ್ಗದರ್ಶನ ಮಾಡಬೇಕು. ಯಾವುದೇ ಅಕ್ರಮಕ್ಕೆ ಅವಕಾಶವಾಗಬಾರದು. ಪರೀಕ್ಷಾ ಕಾರ್ಯವು ಅತ್ಯಂತ ಪಾರದರ್ಶಕ ಹಾಗೂ ಪಾವಿತ್ರತೆಯಿಂದ ನಡೆಯುವಂತೆ ಪೂರಕವಾಗಿರುವ ಎಲ್ಲ ಕ್ರಮಗಳನ್ನು ವಹಿಸಬೇಕು. ಇಲ್ಲವಾದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ರಾಮು ಕಟ್ಟುನಿಟ್ಟಾಗಿ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ವಿ.ಆರ್.ಶ್ಯಾಮಲ, ಇನ್ನಿತರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.



ಪ.ಜಾ. ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಮಂಜೂರಾತಿ : ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಚಾಮರಾಜನಗರ, ಫೆ. 21 - ಸಮಾಜ ಕಲ್ಯಾಣ ಇಲಾಖೆಯು 2017-18ನೇ ಶೈಕ್ಷಣಿಕ ಸಾಲಿನಲ್ಲಿ ಮೆಟ್ರಿಕ್ ನಂತರದ ಕೋರ್ಸುಗಳ ಪಬ್ಲಿಕ್ ಪರೀಕ್ಷೆಗಳಲ್ಲಿ (ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ) ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ನೀಡಲಾಗುವ ಪ್ರೋತ್ಸಾಹಧನಕ್ಕಾಗಿ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಕೆ ಅವಧಿಯನ್ನು ವಿಸ್ತರಿಸಿದೆ.
ಅರ್ಜಿ ಸಲ್ಲಿಕೆಗೆ ಈ ಹಿಂದೆ 2018ರ ಫೆಬ್ರವರಿ 15 ಕಡೆಯ ದಿನವಾಗಿತ್ತು ಎಂದು ತಿಳಿಸಲಾಗಿತ್ತು. ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಅರ್ಜಿ ಸಲ್ಲಿಕೆ ಅವಧಿಯನ್ನು ಫೆಬ್ರವರಿ 28ರವರೆಗೆ ವಿಸ್ತರಿಸಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರÉ.

ಕೊಳ್ಳೇಗಾಲ : ಪ್ರತೀ ಮಂಗಳವಾರ ಜನಸ್ಪಂದನ ದಿನ

ಚಾಮರಾಜನಗರ, ಫೆ. 21 - ಕೊಳ್ಳೇಗಾಲ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ಪ್ರತೀ ಮಂಗಳವಾರದಂದು ಜನಸ್ಪಂದನ ದಿನವನ್ನಾಗಿ ಹಮ್ಮಿಕೊಳ್ಳಲಾಗುತ್ತಿದೆ.
ಪ್ರತಿ ಮಂಗಳವಾರ ದಿನದಂದು ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ಕೊಳ್ಳೇಗಾಲದ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜನಸ್ಪಂದನ ಕಾರ್ಯಕ್ರಮವನ್ನು ಏರ್ಪಡಿಸಲಾಗುವುದು.
ನಾಗರಿಕರು ಕುಂದುಕೊರತೆಗಳನ್ನು ಪರಿಹರಿಸಿಕೊಳ್ಳುವಂತೆ ಕೊಳ್ಳೇಗಾಲ ಉಪವಿಭಾಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಂಕ್ರಮಿಕ  ರೋಗಗಳ ತಡೆಗೆ ಮುನ್ನಚ್ಚೆರಿಕೆ ವಹಿಸಲು ಸಲಹೆ

ಚಾಮರಾಜನಗರ, ಫೆ. 21 :- ಬೇಸಿಗೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಸಾಂಕ್ರಮಿಕ ರೋಗಗಳು ಹರಡದಂತೆ ತಡೆಗಟ್ಟಲು ನಾಗರಿಕರು ವಹಿಸಬೇಕಿರುವ ಮುನ್ನಚ್ಚೆರಿಕೆ ಕ್ರಮಗಳ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಲಹೆ ಮಾಡಿದೆ.
ಕಲುಷಿತ ನೀರು, ಆಹಾರ ಸೇವನೆಯಿಂದ ಜಾಂಡೀಸ್, ಪೋಲಿಯೋ, ಕಾಲರಾ, ಕರಳುಬೇನೆ, ವಿಷಮಶೀತ ಜ್ವರ, ಆಮಶಂಕೆ, ಇಲಿಜ್ವರ, ಇತರೆ ಸೂಕ್ಷ್ಮ ಜೀವಿಗಳಿಂದ ಹರಡುವ ವಾಂತಿಭೇದಿ ಇನ್ನಿತರ ರೋಗಗಳು ಹರಡುತ್ತವೆ.
ಈ ಹಿನ್ನಲೆಯಲ್ಲಿ ಜನರು ಮುನ್ನಚ್ಚರಿಕೆ ಕ್ರಮಗಳನ್ನು ಪಾಲಿಸುವುದು ಒಳಿತು. ಕುದಿಸಿ ಆರಿಸಿದ ನೀರನ್ನು ಕುಡಿಯಲು ಉಪಯೋಗಿಸಬೇಕು. ಆಹಾರ ಪದಾರ್ಥಗಳನ್ನು ಮುಚ್ಚಿಟ್ಟು ಬಿಸಿ ಇರುವಾಗಲೇ ಸೇವಿಸಬೇಕು. ರಸ್ತೆ ಬದಿಗಳಲ್ಲಿ,  ಹೋಟೆಲ್‍ಗಳಲ್ಲಿ ತೆರೆದಿಟ್ಟ ಆಹಾರ, ಹಣ್ಣು ಬಳಸಬಾರದು.
ಬಯಲಿನಲ್ಲಿ ಮಲಮೂತ್ರ ವಿರ್ಸಜನೆ ಮಾಡದೇ ಶೌಚಾಲಯ ಬಳಕೆ ಮಾಡಬೇಕು. ಕೈಗಳನ್ನು ಸೋಪಿನಿಂದ ಸ್ವಚ್ಚಗೊಳಿಸಿಕೊಳ್ಳಬೇಕು. ಮನೆಯ ಒಳ ಹಾಗೂ ಹೊರ ಆವರಣದಲ್ಲಿ ಶುಚ್ಚಿತ್ವ ಕಾಪಡಿಕೊಳ್ಳಬೇಕು.
ಜ್ವರ, ಕಾಮಾಲೆ, ವಾಂತಿಭೇದಿ, ರಕ್ತದೊಂದಿಗೆ ಭೇದಿ ಆಗುವುದು, ಹೊಟ್ಟೆನೋವು ಮತ್ತು ಭೇದಿ, ಇತರೆ ರೋಗ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಅಥವಾ ಆರೋಗ್ಯ, ಆಶಾ ಕಾರ್ಯಕರ್ತೆಯರನ್ನು ಸಂರ್ಪಕಿಸಬೇಕು.
ಹೆಚ್ಚಿನ ಮಾಹಿತಿಗೆ ನಗರದ ಜಿಲ್ಲಾ ಕಣ್ಗಾವಲು ಘಟಕ  (ದೂರವಾಣಿ ಸಂಖ್ಯೆ 08226-226561) ಸಂರ್ಪಕಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಸಂತೆಮರಹಳ್ಳಿ : ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

ಚಾಮರಾಜನಗರ, ಫೆ. 21:- ತಾಲೂಕಿನ ಸಂತೆಮರಹಳ್ಳಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಬೆಂಡರವಾಡಿ -2 (ಪ.ಪಂ), ಬೆಂಡರವಾಡಿ-3 (ಪ.ಜಾ) ಹಾಗೂ ಮುರಟ್ಟಿಪಾಳ್ಯ (ಪ.ಪಂ) ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕರ್ತೆಯರ ಹುದ್ದೆಗಳು ಖಾಲಿ ಇದ್ದು ಅರ್ಜಿ ಸಲ್ಲಿಸಬಹುದು.
ಬದನಗುಪ್ಪೆ-3 (ಪ.ಪಂ), ಮರಿಯಾಲ (1 ಮತ್ತು 2) ಬೂದಂಬಳ್ಳಿ ಹಾಗೂ ಮಂಗಲ-1ನೇ (ಇತರೆ) ಮತ್ತು ನಾಗವಳ್ಳಿ-5ನೇ (ಪ.ಪಂ) ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಮಾರ್ಚ್ 17 ಕಡೆಯ ದಿನ. ಹೆಚ್ಚಿನ ವಿವರಗಳನ್ನು ವೆಬ್ ಸೈಟ್ ತಿತಿತಿ.ಚಿಟಿgಚಿಟಿತಿಚಿಜiಡಿeಛಿಡಿuiಣ.ಞಚಿಡಿ.ಟಿiಛಿ.iಟಿ ನಿಂದ ಹಾಗೂ ಸಂತೆಮರಹಳ್ಳಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಕಚೇರಿಯಲ್ಲಿ ಪಡೆಯುವಂತೆ   (ದೂ.ಸಂ. 08226-240215) ಪ್ರಕಟಣೆ ತಿಳಿಸಿದೆ.

ಚಾ.ನಗರ : ಸ್ವಚ್ಚತೆ ಕಾಪಾಡಲು ನಗರಸಭೆ ಸೂಚನೆ

ಚಾಮರಾಜನಗರ, ಫೆ. 21 ಬೇಸಿಗೆ ಆರಂಭವಾಗಿದ್ದು ಸಾಂಕ್ರಮಿಕ ರೋಗಗಳು ಹರಡುವ ಸಾಧ್ಯತೆಯನ್ನು ತಡೆಯಲು ನಗರಸಭಾ ವ್ಯಾಪ್ತಿಯ ಹೋಟೆಲ್, ವೈನ್‍ಶಾಪ್ ಮಾಲೀಕರು, ಮಾಂಸ, ರಸ್ತೆ ಬದಿ ಎಳನೀರು, ಹಣ್ಣು, ಪಾನಿಪುರಿ, ಫಾಸ್ಟ್ ಫುಡ್, ಆಹಾರ ಪದಾರ್ಥ, ಪಾನೀಯ ಮಾರಾಟಗಾರರು ಹಾಗೂ ಇತರೆ ಎಲ್ಲಾ ತರಹದ ಮಾರಾಟಗಾರರಿಗೆ ಸ್ವಚ್ಚತೆ ಕಾಪಾಡುವ ಕುರಿತು ಸೂಚನೆ ನೀಡಿದೆ.
ನಗರದಲ್ಲಿ ಕಾಮಗಾರಿಗಳು ನಡೆಯುತ್ತಿರುವುದರಿಂದ ರಸ್ತೆ ಬದಿಯಲ್ಲಿಟ್ಟು ಮಾರಾಟ ಮಾಡುವ ಹಾಗೂ ಮಾಂಸ ಮಾರಾಟಗಾರರು ಗಾಜಿನ ಪೆಟ್ಟಿಗೆಯಲ್ಲಿಟ್ಟು ಮಾರಾಟ ಮಾಡಬೇಕು. ತ್ಯಾಜ್ಯಗಳನ್ನು ನಿಗದಿಪಡಿಸಿದ ಸ್ಥಳಗಳಲ್ಲಿ ವಿಲೇ ಮಾಡುವುದು, ಬಿಸಿ ನೀರು ಹಾಗೂ ಆಹಾರ ಪದಾರ್ಥಗಳನ್ನು ಒದಗಿಸಬೇಕು. ಸಿಹಿ ತಿಂಡಿ, ವಗೈರೆಗಳನ್ನು ಮುಚ್ಚಿಟ್ಟು ನೊಣ, ಕ್ರಿಮಿಕೀಟಗಳು ಕೂರದ ಹಾಗೆ ಜಾಗ್ರತೆ ವಹಿಸಬೇಕು.
ಗ್ರಾಹಕರಿಗೆ ಹೋಟೆಲ್, ಕಾಫಿ ಟೀ ಅಂಗಡಿಗಳಲ್ಲಿ ಬಿಸಿ ನೀರು ಒದಗಿಸಬೇಕು. ಮನೆ ಹಾಗೂ ಹೊರಗಡೆ ಕ್ರಿಮಿಕೀಟಗಳು ಕೂರದಂತೆ ಸ್ವಚ್ಚತೆ ಕಾಪಾಡಬೇಕು. ಮನೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಚರಂಡಿ ಹಾಗೂ ಖಾಲಿ ನಿವೇಶನಗಳಲ್ಲಿ ಬಿಸಾಡದೆ ನಗರಸಭೆ ವಾಹನಗಳಿಗೆ ನೀಡಬೇಕು.
ನಗರಸಭೆ ಆರೋಗ್ಯ ಸಿಬ್ಬಂದಿಗಳು ಹೋಟೆಲ್, ಕ್ಯಾಂಟೀನ್, ಬಾರ್ ಅಂಡ್ ರೆಸ್ಟೋರೆಂಟ್ ಮತ್ತು ವಸತಿಗ್ಥಹಗಳಿಗೆ ಅನಿರೀಕ್ಷಿತ ಭೇಟಿ ನೀಡಿದ ಸಂದರ್ಭದಲ್ಲಿ ಶುಚಿತ್ವ ಇಲ್ಲದಿದ್ದಲ್ಲಿ ಸ್ಥಳದಲ್ಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ನಾಗರಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಉಪಕಸುಬು ಅವಲಂಬನೆಯಿಂದ ಆರ್ಥಿಕ ಅಭಿವೃದ್ಧಿ : ಜಿ.ಪಂ. ಸದಸ್ಯ ಸಿ.ಎನ್. ಬÁಲರಾಜು

ಚಾಮರಾಜನಗರ, ಫೆ. 21 - ಕೃಷಿಯೊಂದಿಗೆ ಹೈನುಗಾರಿಕೆ, ಕೋಳಿ ಸಾಕಣೆಯಂತಹ ಉಪಕಸುಬುಗಳನ್ನು ಅವಲಂಬಿಸುವುದರಿಂದ ಜೀವನದಲ್ಲಿ ಆರ್ಥಿಕವಾಗಿ ಮೇಲೆ ಬರಲು ಸಾಧ್ಯವಾಗುವ ಹಿನ್ನೆಲೆಯಲ್ಲಿ ಗ್ರಾಮೀಣ ಜನರು ಇದರತ್ತ ಹೆಚ್ಚು ಒಲವು ತೋರಬೇಕೆಂದು ಮಾದಾಪುರ ಜಿಲ್ಲಾ ಪಂಚಾಯತ್ ಕ್ಷೇತ್ರದ ಸಿ.ಎನ್. ಬಾಲರಾಜು ಅವರು ಸಲಹೆ ಮಾಡಿದರು.
ನಗರದ ತಾಲೂಕು ಪಶುವೈದ್ಯ ಆಸ್ಪತ್ರೆ ಕಟ್ಟಡ ಆವರಣದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಫಲಾನುಭವಿಗಳಿಗೆ ಗಿರಿರಾಜ ಕೋಳಿಗಳನ್ನು ವಿತರಿಸಿ ಅವರು ಮಾತನಾಡಿದರು.
2017-18ನೇ ಸಾಲಿಗೆ 12 ಮಂದಿ ಪರಿಶಿಷ್ಟ ಜಾತಿ, 8 ಮಂದಿ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ತಲಾ ಒಬ್ಬರಿಗೆ 10 ಕೋಳಿಗಳನ್ನು ಇಂದು ವಿತರಿಸಲಾಗಿದೆ. ಇದರ ಸಾಕಣೆ ಮಾಡಿ ಆರ್ಥಿಕವಾಗಿ ಅಭಿವೃದ್ಧಿಯಾಗಲು ನೆರವಾಗಲಿದೆ. ಈ ಸೌಲಭ್ಯವನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ಬಾಲರಾಜು ಅವರು ತಿಳಿಸಿದರು.
ಹೈನುಗಾರಿಕೆ, ಕೋಳಿ ಸಾಕಣೆ ಮಾಡುವುದನ್ನು ಕೃಷಿಯೊಂದಿಗೆ ಉಪಕಸುಬಾಗಿ ಅಳವಡಿಸಿಕೊಳ್ಳಬಹುದಾಗಿದೆ. ಹೈನುಗಾರಿಕೆಯಲ್ಲಿ ತೊಡಗುವುದರಿಂದ ಆದಾಯದಲ್ಲೂ ಹೆಚ್ಚಳವಾಗಲಿದೆ. ಹೀಗಾಗಿ ಜನರು ಹೈನುಗಾರಿಕೆ, ಕೋಳಿ ಸಾಕಾಣೆಯಂತಹ ಉಪಕಸುಬುಗಳನ್ನು ಸಹ ಮಾಡುವತ್ತ ಆಸಕ್ತಿ ತೋರಬೇಕು ಎಂದರು.
ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರಾದ ನಟರಾಜು ಮಾತನಾಡಿ ಚಾಮರಾಜನಗರ ತಾಲೂಕಿನಲ್ಲಿ ಕೋಳಿ ಸಾಕಣೆಗಾಗಿ 150 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಈ ಎಲ್ಲರೂ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡದವರಾಗಿದ್ದಾರೆ. ಮೊದಲ ಹಂತದಲ್ಲಿ 60 ಮಂದಿ ಫಲಾನುಭವಿಗಳಿಗೆ ತಲಾ 10ರಂತೆ ಗಿರಿರಾಜ ಕೋಳಿಗಳನ್ನು ನೀಡುವ ಸೌಲಭ್ಯವನ್ನು ಇಲಾಖೆ ಅನುಷ್ಠಾನ ಮಾಡುತ್ತಿದೆ ಎಂದರು.
ಹರದನಹಳ್ಳಿ, ಅಮಚವಾಡಿ, ಉಡಿಗಾಲ ಜಿಲ್ಲಾ ಪಂಚಾಯತ್ ಕ್ಷೇತ್ರದ ಫಲಾನುಭವಿಗಳಿಗೂ ಕೋಳಿ ವಿತರಿಸಲಾಗಿದೆ.          ಇಲಾಖೆ ವತಿಯಿಂದ ಆರ್ಥಿಕ ಸ್ವಾವಲಂಬನೆಗೆ ವಿವಿಧ ಯೋಜನೆಯಡಿ ನೆರವು ನೀಡಲಾಗುತ್ತಿದೆ. ಈ ಯೋಜನೆಗಳ ಪ್ರಯೋಜನವನ್ನು ಪಡೆದು ಆರ್ಥಿಕವಾಗಿ ಸದೃಢರಾಗಬೇಕೆಂದು ನಟರಾಜು ಅವರು ತಿಳಿಸಿದರು.
ತಾಲೂಕು ಪಂಚಾಯಿತಿ ಸದಸ್ಯರಾದ ಬಸವಣ್ಣ, ಮಂಗಲ ಶ್ರೀನಿವಾಸ್, ಕಲ್ಲಹಳ್ಳಿ ಗುರುಸಿದ್ದಯ್ಯ, ಬದನಗುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮುಕುಂದಮೂರ್ತಿ, ಸದಸ್ಯರಾದ ಮಹದೇವಸ್ವಾಮಿ, ಇನ್ನಿತರರು ಈ ಸಂದರ್ಭದಲ್ಲಿ ಹಾಜರಿದ್ದರು.












No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು