ಅಂತರ್ಜಲ ಪೋಷಣೆಗೆ ಜಾಗೃತಿ ಅಗತ್ಯ : ಜಿಲ್ಲಾಧಿಕಾರಿ ಬಿ. ರಾಮು
ಚಾಮರಾಜನಗರ, ಫೆ. 09 - ಜೀವಸಂಕುಲ ಪ್ರಕೃತಿ ಪೋಷಣೆಗೆ ನೀರು ಅತ್ಯವಶ್ಯವಾಗಿದ್ದು ಇದರ ಸದ್ಬಳಕೆ ಹಾಗೂ ಮಿತವ್ಯಯದ ಬಗ್ಗೆ ಪ್ರತಿಯೊಬ್ಬರಿಗೂ ಜಾಗೃತಿ ಇರಬೇಕಿದೆ ಎಂದು ಜಿಲ್ಲಾಧಿಕಾರಿ ಬಿ. ರಾಮು ಸಲಹೆ ಮಾಡಿದರು.ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೆಡಿಪಿ ಸಭಾಂಗಣದಲ್ಲಿ ಇಂದು ಭೂವಿಜ್ಞಾನ ಇಲಾಖೆ ವತಿಯಿಂದ ನಡೆದ ಅಂತರ್ಜಲ ಸದ್ಬಳಕೆ, ವಿಫಲ ಕೊಳವೆಬಾವಿಗಳಲ್ಲಿ ಸಂಭವಿಸಬಹುದಾದ ಅವಘಡಗಳ ನಿಯಂತ್ರಣ, ಮಳೆ ನೀರಿನ ಸಂಗ್ರಹಣೆ ಕುರಿತ ಅಂತರ್ಜಲ ಜನಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಅಂತರ್ಜಲ ಪ್ರಮಾಣ ಇಂದು ಕುಸಿಯತೊಡಗಿದೆ. ಮಾನವನ ವಿಕಾಸವಾದ, ಮಿತಿಮೀರಿದ ಬಳಕೆಯೇ ಅಂತರ್ಜಲ ಪ್ರಮಾಣ ಇಳಿಮುಖವಾಗಲು ಕಾರಣವಾಗುತ್ತಿದೆ. 80ರ ದಶಕದಲ್ಲಿ ಕೇವಲ 100 ಅಡಿಗೆ ನೀರು ಲಭ್ಯವಾಗುತ್ತಿತ್ತು. ಆದರೆ ಇಂದು 1000 ದಿಂದ 1300 ಅಡಿ ಆಳ ಕೊರೆದರೂ ನೀರು ಲಭ್ಯವಾಗುತ್ತಿಲ್ಲ. ಹೀಗಾಗಿ ನೀರಿನ ಮಿತವ್ಯಯದ ಬಗ್ಗೆ ಎಲ್ಲರೂ ಅರಿವು ಹೊಂದಬೇಕು ಎಂದರು.
ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅರಣ್ಯ ಪ್ರದೇಶವಿದೆ. ಜಿಲ್ಲೆಯಲ್ಲಿ ಸಾಕಷ್ಟು ಕೆರೆಗಳೂ ಇವೆ. ಆದರೂ ಮಳೆಯ ಪ್ರಮಾಣ ಕಡಿಮೆ ಇದೆ. ಹೀಗಾಗಿ ಕೆರೆ ಕಟ್ಟೆಗಳಲ್ಲಿ ನೀರು ಸಂಗ್ರಹಣೆ ಕೆಲಸಕ್ಕೆ ಆದ್ಯತೆ ನೀಡಬೇಕಿದೆ. ಇದರಿಂದ ಅಂತರ್ಜಲ ಹೆಚ್ಚಳವೂ ಆಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಹರೀಶ್ ಕುಮಾರ್ ಅವರು ಅಂತರ್ಜಲ ಜಾಗೃತಿ ಕೈಪಿಡಿ ಬಿಡುಗಡೆ ಮಾಡಿ ಮಾತನಾಡಿ ನೈಸರ್ಗಿಕವಾಗಿ ಅಂತರ್ಜಲವನ್ನು ಕಾಪಾಡಿಕೊಂಡರೆ ಭವಿಷ್ಯದಲ್ಲಿ ನೀರಿಗಾಗಿ ಪರಿತಪಿಸುವ ಸ್ಥಿತಿ ಬರುವುದಿಲ್ಲ. ನೀರು ಪೋಲು ಮಾಡುವುದನ್ನು ತಡೆದು ಅಗತ್ಯವಿದ್ದಷ್ಟು ಮಾತ್ರ ಬಳಕೆ ಮಾಡಬೇಕು. ಈ ಬಗ್ಗೆ ಎಲ್ಲರಲ್ಲೂ ತಿಳಿವಳಿಕೆ ನೀಡಬೇಕು ಎಂದು ಅಭಿಪ್ರಾಯಪಟ್ಟರು.
ಅನುಪಯುಕ್ತವಾದ ಕೊಳವೆ ಬಾವಿಗಳನ್ನು ಮುಚ್ಚುವ ಕೆಲಸ ಮಾಡಬೇಕು. ಇದರಿಂದ ದೊಡ್ಡ ಅನಾಹುತಗಳನ್ನು ತಪ್ಪಿಸಬಹುದು. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಆಯಾ ಭಾಗದಲ್ಲಿ ವಿಫಲವಾಗಿರುವ ಕೊಳವೆಬಾವಿಗಳನ್ನು ಗುರುತಿಸಿ ಅದನ್ನು ಮುಚ್ಚಿಸುವ ಕೆಲಸವನ್ನೂ ಸಹ ನಿರ್ವಹಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಹಿರಿಯ ಭೂವಿಜ್ಞಾನಿ ಕೆ.ವಿ.ಆರ್. ಚೌಧರಿ, ಧನಲಕ್ಷ್ಮಿ, ಸಂಪನ್ಮೂಲ ವ್ಯಕ್ತಿಗಳಾದ ಭೂವಿಜ್ಞಾನಿ ಪ್ರಾಣೇಶ್ ರಾವ್, ವಿಷಯ ಪರಿಣಿತರಾದ ಹೆಚ್. ರಮೇಶ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕೆಪಿಎಸ್ಸಿ ಪರೀಕ್ಷೆ : ನಿಷೇದಾಜ್ಞೆ
ಚಾಮರಾಜನಗರ, ಫೆ. 09 - ಕರ್ನಾಟಕ ಲೋಕ ಸೇವಾ ಆಯೋಗದ ವತಿಯಿಂದ ಫೆಬ್ರವರಿ 10 ಪ್ರಥಮ ದರ್ಜೆ / ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ಚಾಮರಾಜನಗರ ಪಟ್ಟಣದ ಒಂದು ಪರೀಕ್ಷಾ ಕೇಂದ್ರದಲ್ಲಿ ಕಡ್ಡಾಯ ಕನ್ನಡ ಪರೀಕ್ಷೆ ಹಾಗೂ ಫೆಬ್ರವರಿ 11ರಂದು ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ಸ್ಪರ್ಧಾತ್ಮ ಪರೀಕ್ಷೆಯನ್ನು ಚಾಮರಾಜನಗರ ಪಟ್ಟಣದ 17 ಹಾಗೂ ಕೊಳ್ಳೇಗಾಲ ಪಟ್ಟಣದ 12 ಕೇಂದ್ರಗಳಲ್ಲಿ ನÀಡೆಯಲಿದೆ.ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಹಾಗೂ ಶಾಂತಿ ಸುವ್ಯವಸ್ಥೆಯಿಂದ ಪರೀಕ್ಷೆ ನಡೆಯಲು ಅನುವಾಗುವಂತೆ ಪರೀಕ್ಷಾ ದಿನದಂದು ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ನಿಷೇದಾಜ್ಞೆ ವಿಧಿಸಿ ಜಿಲ್ಲಾಧಿಕಾರಿ ಬಿ, ರಾಮು ಅವರು ಆದೇಶ ಹೊರಡಿಸಿದ್ದಾರೆ. ಅಲ್ಲದೆ 200 ಮೀ. ವ್ಯಾಪ್ತಿಯಲ್ಲಿ ಬರುವ ಜೆರಾಕ್ಸ್ ಅಂಗಡಿಗಳನ್ನು ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಮುಚ್ಚಲು ಆದೇಶಿಸಿದ್ದಾರೆ.
ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಹಾಗೂ ಪರೀಕ್ಷಾ ಕೆಲಸಕ್ಕೆ ನಿಯೋಜಿತರಾದ ಸಿಬ್ಬಂದಿ ವರ್ಗದವರಿಗೆ ನಿಷೇಧ ಆದೇಶ ಅನ್ವಯವಾಗುವುದಿಲ್ಲವೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಫೆ. 12ರಿಂದ ಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ
ಚಾಮರಾಜನಗರ, ಫೆ. 09 - ಇತಿಹಾಸ ಪ್ರಸಿದ್ದ ಕೊಳ್ಳೇಗಾಲ ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಫೆಬ್ರವರಿ 12 ರಿಂದ 16ರವರೆಗೆ ಮಹಾಶಿವರಾತ್ರಿ ಹಾಗೂ ಮಾರ್ಚ್ 14 ರಿಂದ 18ರವರೆಗೆ ಯುಗಾದಿ ಜಾತ್ರಾ ಮಹೋತ್ಸವ ನಡೆಯಲಿದೆ.ಫೆಬ್ರವರಿ 12ರಂದು ಮಹಾಶಿವರಾತ್ರಿ ಜಾತ್ರೆ ಮಹೋತ್ಸವ ಆರಂಭವಾಗಲಿದ್ದು 13ರಂದು ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಸೇವೆ ಹಾಗೂ ಜಾಗರಣೆ ಉತ್ಸವಗಳು ನಡೆಯಲಿವೆ. 14ರಂದು ಶ್ರೀಸ್ವಾಮಿಗೆ ಎಣ್ಣೆಮಜ್ಜನ, ವಿಶೇಷ ಸೇವೆ ಹಾಗೂ ಉತ್ಸವಾದಿಗಳು ಜರುಗಲಿವೆ. 15ರಂದು ಅಮಾವಾಸ್ಯೆ ಉತ್ಸವಾದಿಗಳು ನಡೆಯಲಿವೆ. 16ರಂದು ಬೆಳಿಗ್ಗೆ 10.15 ರಿಂದ 11 ಗಂಟೆಯವರೆಗೆ ಮಹಾರಥೋತ್ಸವ ಜರುಗಲಿದೆ. ರಾತ್ರಿ ಅಭಿಷೇಕ ಪೂಜೆ ಕೈಂಕರ್ಯಗಳು ನೆರವೇರಿದ ಬಳಿಕ ಕೊಂಡೋತ್ಸವ ನಡೆಯಲಿದೆ.
ಮಾರ್ಚ್ 14ರಂದು ಯುಗಾದಿ ಜಾತ್ರಾ ಮಹೋತ್ಸವ ಪ್ರಾರಂಭವಾಗಲಿದೆ. 15ರಂದು ಶ್ರೀಸ್ವಾಮಿಗೆ ಎಣ್ಣೆಮಜ್ಜನ, ವಿಶೇಷ ಸೇವೆ ಹಾಗೂ ಉತ್ಸವಾದಿಗಳು ಜರುಗಲಿವೆ. 16 ಹಾಗೂ 17ರಂದು ಅಮಾವಾಸ್ಯೆ ವಿಶೇಷ ಪೂಜೆ, ಉತ್ಸವಾದಿಗಳು ನಡೆಯಲಿವೆ. 18ರಂದು ಚಾಂದ್ರಮಾನ ಯುಗಾದಿ ಹಾಗೂ ಮಹಾರಥೋತ್ಸವವು ಬೆಳಿಗ್ಗೆ 10.30 ರಿಂದ 12 ಗಂಟೆಯವರೆಗೆ ನಡೆಯಲಿದೆ.
ಎರಡೂ ಜಾತ್ರಾ ಮಹೋತ್ಸವ ವಿಶೇಷ ಸೇವೆ ಉತ್ಸವಗಳು ಸಾಲೂರು ಮಠದ ಬೃಹನ್ಮಠಾಧ್ಯಕ್ಷರಾದ ಪ್ರಣವ ಶ್ರೀ ಪಟ್ಟದ ಶ್ರೀ ಗುರುಸ್ವಾಮಿಗಳು ಹಾಗೂ ಪ್ರಣವ ಶ್ರೀ ಪಟ್ಟದ ಶ್ರೀ ಇಮ್ಮಡಿ ಮಹದೇವಸ್ವಾಮಿಗಳ ಅಧ್ಯಕ್ಷತೆಯಲ್ಲಿ ನೆರವೇರಲಿದೆÀ ಎಂದು ಶ್ರೀ ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೊರಗುತ್ತಿಗೆ ಆಧಾರದ ಮೇಲೆ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಚಾಮರಾಜನಗರ, ಫೆ. 09 (ಕರ್ನಾಟಕ ವಾರ್ತೆ):- ನಗರದ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಸಂಜೀವಿನಿ ಯೋಜನೆಯಡಿ 2017-18ನೇ ಸಾಲಿಗೆ ತಾಲೂಕು ಅಭಿಯಾನ ನಿರ್ವಹಣಾ ಘಟಕಗಳಿಗೆ ಮಂಜೂರಾಗಿರುವ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಯನ್ನು ಫೆಬ್ರವರಿ 12 ರಿಂದ ನಗರದ ಜಿಲ್ಲಾ ಪಂಚಾಯತ್ ಕಚೇರಿಯ ಕೊಠಡಿ ಸಂಖ್ಯೆ 14ರಲ್ಲಿ ಪಡೆಯಬಹುದಾಗಿದೆ. ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಲು ಫೆಬ್ರವರಿ 20 ಕಡೆಯ ದಿನವಾಗಿದೆ. ಮಾರ್ಚ್ 4ರಂದು ಲಿಖಿತ ಪರೀಕ್ಷೆಗೆ ಹಾಜರಾಗಬೇಕು. ಮೌಖಿಕ ಸಂದರ್ಶನದ ದಿನಾಂಕವನ್ನು ನಂತರ ತಿಳಿಸಲಾಗುವುದು.
ಹೆಚ್ಚಿನ ವಿವರಗಳನ್ನು ಜಿಲ್ಲಾ ಪಂಚಾಯತ್ ಕಚೇರಿ ಅಥವಾ ವೆಬ್‍ಸೈಟ್ hಣಣಠಿ://164.100.80.171/zಠಿಠಿoಡಿಣಚಿಟನಿಂದ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದÉ.
ಕೆಪಿಎಸ್‍ಸಿ ಪರೀಕ್ಷೆ: ಅಭ್ಯರ್ಥಿಗಳಿಗೆ ಸೂಚನೆ
ಚಾಮರಾಜನಗರ, ಫೆ. 09 - ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ ಫೆಬ್ರವರಿ 10ರಂದು ಪ್ರಥಮ ದರ್ಜೆ ಸಹಾಯಕರು / ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಿಗೆ ಕಡ್ಡಾಯ ಕನ್ನಡ ಪರೀಕ್ಷೆ ಹಾಗೂ ಫೆಬ್ರವರಿ 11ರಂದು ನಡೆಯುವ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದಂತೆ ಸದರಿ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಆಯೋಗದ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಲಾಗಿದೆ.
ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಡೌನ್‍ಲೋಡ್ ಮಾಡಿಕೊಂಡ ಪ್ರವೇಶ ಪತ್ರವನ್ನು ಮತ್ತು ಅವರ ಅರ್ಜಿಯೊಂದಿಗಿನ ಅಪ್‍ಲೋಡ್ ಮಾಡಿದ ಆಧಾರ್ ಕಾರ್ಡ್ (ಆಧಾರ್ ಕಾರ್ಡ್ ಹೊಂದಿರುವ ಅಭ್ಯರ್ಥಿಗಳು ಆಧಾರ್‍ಕಾರ್ಡ್ ಪಡೆಯಲು ಸಲ್ಲಿಸಿದ ಅರ್ಜಿಯ ಸ್ವೀಕೃತಿ ಹಾಗೂ ಒಂದು ಗುರುತಿನ ಚೀಟಿ, ಡ್ರೈವಿಂಗ್ ಲೈಸೆನ್ಸ್/ವೋಟರ್ ಐಡಿ, ಇಪಿಐಸಿ/ಪಾಸ್‍ಪೋರ್ಟ್/ಪಾನ್ ಕಾರ್ಡ್/ಸರ್ಕಾರಿ ನೌಕರರ ಐಡಿ) ಪ್ರತಿಯನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು. ಇಲ್ಲವಾದಲ್ಲಿ ಪರೀಕ್ಷಾ ಉಪ ಕೇಂದ್ರಕ್ಕೆ ಪ್ರವೇಶವನ್ನು ನೀಡಲಾಗುವುದಿಲ್ಲ. ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರ ಹಾಗೂ ಅರ್ಜಿಯೊಂದಿಗೆ ಅಪ್‍ಲೋಡ್ ಮಾಡಿದ ಆಧಾರ್ ಕಾರ್ಡ್ (ಆಧಾರ್‍ಕಾರ್ಡ್ ಪಡೆಯಲು ಸಲ್ಲಿಸಿದ ಅರ್ಜಿಯ ಸ್ವೀಕೃತಿ ಹಾಗೂ ಒಂದು ಗುರುತಿನ ಚೀಟಿ) ಮುಖ್ಯ ದ್ವಾರದಲ್ಲಿ ಹಾಜರುಪಡಿಸಿದ ನಂತರವೇ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರದೊಳಗೆ ಪ್ರವೇಶಿಸಲು ಅನುಮತಿ ನೀಡಲಾಗುವುದು.
ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಬೆಳಿಗ್ಗೆ 10 ಗಂಟೆಯ ನಂತರ ಮತ್ತು ಮಧ್ಯಾಹ್ನ 2 ಗಂಟೆಯ ನಂತರ ಪರೀಕ್ಷಾ ಕೊಠಡಿಗೆ ಪ್ರವೇಶಕ್ಕೆ ಅವಕಾಶವಿಲ್ಲವೆಂದು ಕಟ್ಟುನಿಟ್ಟಾಗಿ ಆಯೋಗ ತಿಳಿಸಿದೆ. ಪರೀಕ್ಷೆ ಪ್ರಾರಂಭವಾದ 10 ನಿಮಿಷಗಳ ನಂತರ ಬರುವ ಯಾವುದೇ ಅಭ್ಯರ್ಥಿಗಳಿಗೆ ಪರೀಕ್ಷಾ ಕೊಠಡಿಗೆ ಪ್ರವೇಶಿಸಲು ಅನುಮತಿ ನೀಡಲಾಗುವುದಿಲ್ಲ ಹಾಗೂ ಪರೀಕ್ಷೆಯ ನಿಗಧಿತ ಪೂರ್ಣ ಅವಧಿ ಮುಗಿಯುವವರೆಗೂ ಯಾವುದೇ ಅಭ್ಯರ್ಥಿಗೆ ಪರೀಕ್ಷಾ ಕೊಠಡಿಯಿಂದ ಹೊರಹೋಗಲು ಅನುಮತಿಸಲಾಗುವುದಿಲ್ಲ. ಎಲ್ಲಾ ಅಭ್ಯರ್ಥಿಗಳು ಪರೀಕ್ಷೆ ಪ್ರಾರಂಭವಾಗುವ 30 ನಿಮಿಷಗಳ ಮುಂಚಿತವಾಗಿ ಪರೀಕ್ಷಾ ಕೊಠಡಿಯಲ್ಲಿ ಹಾಜರಿರತಕ್ಕದ್ದು. ಬೆಳಿಗ್ಗೆ 10 ಗಂಟೆಯ ನಂತರ ಮತ್ತು ಮಧ್ಯಾಹ್ನ 2 ಗಂಟೆಯ ನಂತರ ಪ್ರವೇಶವನ್ನು ನಿರಾಕರಿಸಲಾಗುವುದು.
ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದ ಮುಖ್ಯ ದ್ವಾರದಲ್ಲಿಯೇ ಮೊಬೈಲ್ ಫೋನ್, ಬ್ಲೂಟೂತ್ ಡಿವೈಸ್, ಡಿಜಿಟಲ್ ವಾಚ್, ಪೇಜರ್, ವೈರ್‍ಲೆಸ್, ಕ್ಯಾಲ್ಕ್ಯೂಲೇಟರ್ ಇತರೆ ಮೊದಲಾದ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳು, ಸ್ಲೈಡ್ ರೋಲ್‍ಗಳು, ಮಾರ್ಕರ್‍ಗಳು, ಲಾಂಗ್ ಟೇಬಲ್‍ಗಳು, ವೈಟ್ ಫ್ಲೂಯಿಡ್‍ಗಳು, ಬ್ಲೇಡು, ಎರೇಸರ್ ಇವುಗಳನ್ನು ಪರೀಕ್ಷಾ ಕೇಂದ್ರದ ಆವರಣದೊಳಗೆ ತರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿರುತ್ತದೆ. ಅಭ್ಯರ್ಥಿಗಳು ಕರ್ನಾಟಕ ಲೋಕಸೇವಾ ಆಯೋಗದ ಸೂಚನೆಗಳನ್ನು ಪಾಲಿಸದಿದ್ದಲ್ಲಿ, ಅವರ ಅಭ್ಯರ್ಥಿತ್ವವನ್ನು ರದ್ದುಗೊಳಿಸಿ ಆಯೋಗವು ನಡೆಸುವ ಎಲ್ಲಾ ಪರೀಕ್ಷೆಗಳಿಂದ ಡಿಬಾರ್ ಮಾಡಲಾಗುವುದು ಹಾಗೂ ಈ ಬಗ್ಗೆ ಆಯೋಗವು ತೆಗೆದುಕೊಳ್ಳುವ ತೀರ್ಮಾನವೇ ಅಂತಿಮವಾಗಿರುತ್ತದೆಂದು ಎಂದು ಆಯೋಗವು ಎಚ್ಚರಿಕೆ ನೀಡಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗರಕ್ಕೆ ನೀರು ವ್ಯತ್ಯಯ:ಸಹಕರಿಸಲು ನಗರಸಭೆ ಮನವಿ
ಚಾಮರಾಜನಗರ, ಫೆ. 09:- ಚಾಮರಾಜನಗರ ಪಟ್ಟಣಕ್ಕೆ ನೀರು ಸರಬರಾಜಾಗುವ ಟಿ.ನರಸೀಪುರದ ಕಬಿನಿ ನದಿಯಲ್ಲಿ ಬಂಡ್ ನಿರ್ಮಿಸಿ ನೀರಿನ ಮಟ್ಟ ಹೆಚ್ಚಿಸಿಕೊಳ್ಳುವ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣಕ್ಕೆ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.ಟಿ.ನರಸೀಪುರದ ಕೆಳಮಟ್ಟದ ನೀರೆತ್ತುವ ಯಂತ್ರಾಗಾರದ ನದಿಮೂಲವಾದ ಕಬಿನಿಯಲ್ಲಿ ನೀರಿನ ಮಟ್ಟ ಕಡಿಮೆಯಾಗಿದ್ದು, ಪಂಪ್‍ಗೆ ಸಾಕಾಗುವಷ್ಟು ನೀರು ದೊರಕದ ಕಾರಣ ಪಂಪ್ ಚಾಲನೆ ಸ್ಥಗಿತಗೊಂಡಿದೆ, ಇದರಿಂದ ಚಾಮರಾಜನಗರ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಪೂರೈಸುವುದು ಕಷ್ಟಕರವಾಗಿದೆ. ಬಂಡ್ ನಿರ್ಮಿಸಿ ನೀರನ್ನು ತಡೆಗಟ್ಟಿ ನೀರಿನ ಮಟ್ಟ ಹೆಚ್ಚಿಸಿಕೊಂಡು ಪಂಪ್‍ಗೆ ನೀರು ದೊರಕುವಂತೆ ಮಾಡುವ ಕಾಮಗಾರಿ ಪ್ರಗತಿಯಲ್ಲಿದೆ. ಕಾಮಗಾರಿ ಪೂರ್ಣಗೊಳ್ಳುವವರೆಗೆ ಪಟ್ಟಣಕ್ಕೆ ಕಬಿನಿ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಈ ಹಿನ್ನೆಲೆಯಲ್ಲಿ ಪಟ್ಟಣದ ನಾಗರಿಕರು ಸಮೀಪವಿರುವ ಕೈಪಂಪು, ಕೊಳವೆಬಾವಿ ಹಾಗೂ ಕಿರುನೀರು ಸರಬರಾಜು ಯೋಜನೆಗಳಿಂದ ನೀರು ಪಡೆದುಕೊಂಡು ನಗರಸಭೆಯೊಂದಿಗೆ ಸಹಕರಿಸುವಂತೆ ಪೌರಾಯುಕ್ತರು ಪ್ರಕಟಣೆಯಲ್ಲಿ ಕೋರಿದ್ದಾರೆ.
No comments:
Post a Comment