Tuesday, 26 September 2017

ಹಣ ದುರುಪಯೋಗ : ದ್ವಿದಸ ನೌಕರರಿಗೆ 3 ವರ್ಷಗಳ ಸಜೆ (26-09-2017)


ಹಣ ದುರುಪಯೋಗ : ದ್ವಿದಸ ನೌಕರರಿಗೆ 3 ವರ್ಷಗಳ ಸಜೆ 

ಚಾಮರಾಜನಗರ, ಸೆ. 26 - ಖೋಟಾ ಬಿಲ್ಲುಗಳಿಗೆ ಅಧಿಕಾರಿಯ ಫೋರ್ಜರಿ ಸಹಿ ಮಾಡಿ ಹಣ ದುರುಪಯೋಗಪಡಿಸಿಕೊಂಡ ಜಲಾನಯನ ಅಭಿವೃದ್ಧಿ ಇಲಾಖೆಯ ದ್ವಿತೀಯ ದರ್ಜೆ ಸಹಾಯಕರೊಬ್ಬರಿಗೆ ನಗರದ ಹಿರಿಯ ಸಿವಿಲ್ ಜಡ್ಜ್ ಮತ್ತು ಸಿಜೆಎಂ ನ್ಯಾಯಾಲಯ 3 ವರ್ಷಗಳ ಸಜೆ ಹಾಗೂ 60 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಚಾಮರಾಜನಗರ ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಜಲಾನಯನ ಅಭಿವೃದ್ಧಿ ಇಲಾಖೆಯ ದ್ವಿತೀಯ ದರ್ಜೆ ಸಹಾಯಕರಾಗಿದ್ದ ಎ.ಎಂ. ವೆಂಕಟೇಶ್ ಶಿಕ್ಷೆಗೆ ಗುರಿಯಾದವರು. ಇವರು ಕಳೆದ 2001ರ ಸೆಪ್ಟೆಂಬರ್‍ನಿಂದ 2002ರ ಮಾರ್ಚ್ ಅವಧಿಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ತಿಳಿಯದಂತೆ ಅವರ ಪೂರಕ ವೇತನದ ಖೋಟಾ ಬಿಲ್ಲುಗಳನ್ನು ತಯಾರಿಸಿ ಬಟವಾಡೆ ಅಧಿಕಾರಿಗಳಂತೆ ಸಹಿ ಮಾಡಿ ಇಲಾಖೆಯ ಡಿ ದರ್ಜೆ ನೌಕರರಾಗಿದ್ದ ಬಸವಯ್ಯನವರ ಮುಖಾಂತರ ಜಿಲ್ಲಾ ಖಜಾನೆಗೆ ಸಲ್ಲಿಸಿ ಚೆಕ್ಕುಗಳನ್ನು ಪಡೆದುಕೊಂಡಿದ್ದರು. ಬಳಿಕ ಚೆಕ್ಕಿನ ಹಿಂಭಾಗದಲ್ಲೂ ಬಡವಾಡೆ ಅಧಿಕಾರಿಯ ಫೋರ್ಜರಿ ಸಹಿ ಮಾಡಿ ಬ್ಯಾಂಕಿನಿಂದ 8,79,070 ರೂ.ಗಳನ್ನು ಪಡೆದು ದುರುಪಯೋಗ ಮಾಡಿಕೊಂಡಿದ್ದರು. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ವೆಂಕಟೇಶ್ 768172 ರೂ.ಗಳನ್ನು ಸರ್ಕಾರಕ್ಕೆ ಪಾವತಿಸಿದ್ದು ಉಳಿಕೆ 1,10,898 ರೂ.ಗಳನ್ನು ಪಾವತಿಸಬೇಕಿರುವುದು ತನಿಖೆಯಿಂದ ಕಂಡುಬಂದಿತ್ತು. ಸದರಿ ಪ್ರಕರಣ ಪಟ್ಟಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಹಣ ದುರುಪಯೋಗ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ವೆಂಕಟೇಶನಿಗೆ ಹಿರಿಯ ಸಿವಿಲ್ ಜಡ್ಜ್ ಮತ್ತು ಸಿಜೆಎಂ ನ್ಯಾಯಾಲಯವು 3 ವರ್ಷಗಳ ಸಜೆ ಹಾಗೂ 60 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರಾದ ಜಯಶ್ರೀ ಎಸ್ ಶೆಣೈ ಅವರು ವಾದ ಮಂಡಿಸಿದ್ದರು.

     

ವಿಷನ್ 2025 ಡಾಕ್ಯುಮೆಂಟ್ ಪ್ರಾಜೆಕ್ಟ್: ಅಗತ್ಯ ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ 

ಚಾಮರಾಜನಗರ, ಸೆ. 26 - ವಿಷನ್ 2025 ಡಾಕ್ಯುಮೆಂಟ್ ಯೋಜನೆ ಅಂಗವಾಗಿ 2025ರಲ್ಲಿ ಕರ್ನಾಟಕ ಹೇಗಿರಬೇಕು ಎಂಬುದರ ಕುರಿತು ಜನಪ್ರತಿನಿಧಿಗಳು ಸೇರಿದಂತೆ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಧಿಕಾರಿ ಬಿ.ರಾಮು ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ವಿಷನ್ 2025 ಡಾಕ್ಯುಮೆಂಟ್ ಪ್ರಾಜೆಕ್ಟ್ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಮುಂದಿನ ಏಳು ವರ್ಷಗಳ ಅವಧಿಯಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸರ್ಕಾರ ಈ ಯೋಜನೆಯ ನೀಲನಕ್ಷೆ ಮತ್ತು ಅನುಷ್ಠಾನ ಕಾರ್ಯಕ್ರಮಗಳ ಬಗ್ಗೆ ರೂಪುರೇಷೆ ಸಿದ್ಧಪಡಿಸಲು ಕಾರ್ಯರಂಭ ಮಾಡಿದೆ. ಇದಕ್ಕಾಗಿ ಕೃಷಿ, ಮೂಲಸೌಕರ್ಯ, ಕೈಗಾರಿಕೆ, ಶಿಕ್ಷಣ ಮತ್ತು ಆರೋಗ್ಯ, ನಗರ ಮತ್ತು ಗ್ರಾಮೀಣಾಭಿವೃದ್ಧಿ, ಆಡಳಿತ, ಕಾನೂನು ಸೇರಿದಂತೆ ಪ್ರಮುಖ ಇಲಾಖೆಗಳನ್ನೊಳಗೊಂಡ 13 ವಲಯಗಳನ್ನು ಗುರುತಿಸಿದೆ ಎಂದರು.
ವಿಷನ್ ಡಾಕ್ಯುಮೆಂಟರಿ ಪ್ರಾಜೆಕ್ಟ್ ತಯಾರಿಸಲು ಜಿಲ್ಲಾಡಳಿತ 13 ವಲಯಗಳನ್ನು ಪರಿಷ್ಕರಿಸಿ 5 ಗುಂಪು-ತಂಡಗಳನ್ನಾಗಿ ವಿಂಗಡಿಸಿದೆ. ನಗರ ಮೂಲಸೌಲಭ್ಯ ಹಾಗೂ ಸ್ಮಾರ್ಟ್‍ಸಿಟಿ, ಸಾಮಾಜಿಕ ನ್ಯಾಯ ಹಾಗೂ ಆರೋಗ್ಯ ಶಿಕ್ಷಣ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ, ಕೈಗಾರಿಕಾಭಿವೃದ್ಧಿ ಮತ್ತು ಸೇವೆಗಳು ಮತ್ತು ಕಾನೂನು ಮತ್ತು ಸುವ್ಯವಸ್ಥೆ ಇವೇ 5 ಪ್ರಮುಖ ವಲಯಗಳಾಗಿವೆ ಎಂದರು.
ನಗರ ಮೂಲಸೌಲಭ್ಯ ಹಾಗೂ ಸ್ಮಾರ್ಟ್‍ಸಿಟಿ ತಂಡದಲ್ಲಿ ಲೋಕೋಪಯೋಗಿ, ನಗರಸಭೆ, ಜಿಲ್ಲಾಧಿಕಾರಿ ಕಚೇರಿಯ ಡಿ.ಯು.ಡಿ.ಸಿ. ಅಧಿಕಾರಿಗಳಿರುತ್ತಾರೆ. ಸಾಮಾಜಿಕ ನ್ಯಾಯ ಹಾಗೂ ಆರೋಗ್ಯ ಶಿಕ್ಷಣ ತಂಡದಲ್ಲಿ ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಆರೋಗ್ಯಾಧಿಕಾರಿ ಪದವಿಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಜಿಲ್ಲಾಪಂಚಾಯತ್, ಕೃಷಿ, ರೇಷ್ಮೆ, ಮೀನುಗಾರಿಕೆ, ತೋಟಗಾರಿಕೆ ಅಧಿಕಾರಿಗಳು ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ತಂಡದಲ್ಲಿರುತ್ತಾರೆ ಎಂದರು.
ಕೈಗಾರಿಕಾಭಿವೃದ್ಧಿ ಮತ್ತು ಸೇವೆಗಳ ತಂಡದಲ್ಲಿ ಡಿ.ಐ.ಸಿ, ಸೆಡಾಕ್, ಎನ್.ಐ.ಸಿ, ರುಡ್ಸೆಟ್, ಜಿ.ಟಿ.ಟಿ.ಸಿ ಮತ್ತು ಪ್ರವಾಸೋದ್ಯಮ ಅಧಿಕಾರಿಗಳು ಹಾಗೂ ಎ.ಸಿ., ಸಿ.ಜೆ.ಎಂ. ಜೆ.ಎಂ.ಸಿ, ಬಾರ್ ಕೌನ್ಸಿಲ್ ಅಧಿಕಾರಿಗಳಿರುವ ಕಾನೂನು ಸುವ್ಯವಸ್ಥೆ ತಂಡಗಳನ್ನು ರಚಿಸಲಾಗಿದೆ. ಈ ಐದು ತಂಡಗಳಲ್ಲಿ ಪ್ರತಿತಂಡದಲ್ಲಿ ಜನಪ್ರತಿನಿಧಿಗಳು, ಧರ್ಮದರ್ಶಿಗಳು, ಎನ್.ಜಿ.ಒ ಗಳು, ಶಿಕ್ಷಣ ತಜ್ಞರು, ಬುದ್ದಿಜೀವಿಗಳು ಸಂಪನ್ಮೂಲ ವ್ಯಕ್ತಿಗಳು, ನಾಗರಿಕರನ್ನೊಳಗೊಂಡಂತೆ 20 ಮಂದಿ ಸದಸ್ಯರಿರÀಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಮಾತನಾಡಿ ಪ್ರಸ್ತುತ ಈಗಿರುವ ಯೋಜನೆಗಳನ್ನು ಅಭಿವೃದ್ಧಿಪಡಿಸಿ ಮುಂದೆ ಕೊಂಡೊಯ್ಯಬಹುದು ಎಂಬ ಬಗ್ಗೆ ಜಿಲ್ಲಾಮಟ್ಟದಲ್ಲಿ ರಚಿಸಲಾಗಿರುವ ಪ್ರತಿತಂಡಗಳಲ್ಲಿಯೂ ಗುಂಪು ಚರ್ಚೆ ನಡೆಯಬೇಕು. ಮುಖ್ಯವಾಗಿ ಆಯಾ ಕ್ಷೇತ್ರದ ವಿಷಯವ್ಯಾಪ್ತಿಯ ಅರಿವಿದ್ದು, ಸುಲಲಿತವಾಗಿ ಮಾತನಾಡುವ ಪರಿಣತಿ ಇರುವ ಪ್ರತಿಭಾನ್ವಿತರನ್ನು ಗುರುತಿಸಬೇಕು. ಅಕ್ಟೋಬರ್ 3ರಂದು ಅಂತಹ ವಿಷಯ ಪರಿಣತರ ಪಟ್ಟಿ ಸಂಗ್ರಹಿಸಿ, ಸಿದ್ದಪಡಿಸಿ ಜಿಲ್ಲಾಡಳಿತಕ್ಕೆ ವರದಿ ಮಾಡಬೇಕು ಎಂದು ಜಿಲ್ಲಾಧಿಕಾರಿಯವರು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
5 ತಂಡಗಳಲ್ಲಿನ ಪ್ರಮುಖರು ಅಕ್ಟೋಬರ್ 6ರಂದು ನಡೆಯುವ ಮೊದಲ ಸುತ್ತಿನ ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾಡಳಿತ ಮುಂದೆ ವಿಷಯ ಮಂಡಿಸಬೇಕು. ಇದೇ ರೀತಿ ಅ. 9ಮತ್ತು 10ರಂದು 2 ಮತ್ತು 3ನೇ ಸುತ್ತಿನ ಸಂವಾದಗಳು ನಡೆಯಲಿವೆ. ಅ. 11ರಂದು ಸರ್ಕಾರದ ಹಿರಿಯ ಅಧಿಕಾರಿಗಳ ತಂಡ ಜಿಲ್ಲೆಗೆ ಭೇಟಿ ನೀಡಿ ಜಿಲ್ಲಾಮಟ್ಟದಲ್ಲಿ ನಡೆಸಲಾಗಿರುವ ಸಿದ್ಧತೆ ಕುರಿತು ಪೂರ್ವಭಾವಿ ಸಭೆ ನಡೆಸಲಿದೆ. ಈ ಹಂತದಲ್ಲಿ ನಾವು ವಿಷಯ ಮಂಡನೆಗೆ ಸಿದ್ಧರಿರಬೇಕು ಎಂದರು.
ಅ. 30 ರಂದು ವಿಷನ್ ಡಾಕ್ಯುಮೆಂಟ್ ಪ್ರಾಜೆಕ್ಟ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರೇಣುಕಾ ಚಿದಂಬರಂ ಅವರು ಜಿಲ್ಲೆಗೆ ಭೇಟಿ ನೀಡಿ ಮುಂದಿನ 7 ವರ್ಷಗಳಲ್ಲಿ ರಾಜ್ಯದ ಸಮಗ್ರಾಭಿವೃದ್ಧಿಗೆ ನೀವು ಏನು ಬಯಸುತ್ತೀರಿ. ಎನ್ನುವ ಕುರಿತು ಪ್ರತಿ ವಿಷಯ ತಜ್ಞ ತಂಡಗಳಿಂದ ಅಭಿಪ್ರಾಯ, ಅನಿಸಿಕೆ ಹಾಗೂ ಪ್ರತಿಕ್ರಿಯೆಗಳನ್ನು ಸಂಗ್ರಹಿಸಲಿದೆ ಎಂದು ಜಿಲ್ಲಾಧಿಕಾರಿ ರಾಮು ಅವರು ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ  ಕೆ.ಎಂ.ಗಾಯತ್ರಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮುನಿರಾಜಪ್ಪ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.



    


 


  


 

 



ತೋಟಗಾರಿಕೆ ಇಲಾಖೆಯಿಂದ ಕೃಷಿ ಭಾಗ್ಯ ಯೋಜನೆಯಡಿ ಪಾಲಿಮನೆ ನೆರಳು ಪರದೆ ನಿರ್ಮಾಣಕ್ಕೆ 6 ಕೋಟಿ ರೂ. ಅನುದಾನ

ಚಾಮರಾಜನಗರ, ಸೆ. 26 ತೋಟಗಾರಿಕೆ ಇಲಾಖೆ ವತಿಯಿಂದ 2017-18ನೇ ಸಾಲಿಗೆ ಕೃಷಿ ಭಾಗ್ಯ ಯೋಜನೆಯಡಿ ಪಾಲಿಮನೆ ನೆರಳು ಪರದೆ ನಿರ್ಮಾಣಕ್ಕಾಗಿ ನೆರವು ನೀಡುವ ಕಾರ್ಯಕ್ರಮ ಅನುಷ್ಠಾನಕ್ಕಾಗಿ ಪ್ರಕ್ರಿಯೆ ನಡೆದಿದೆ.
ಜಿಲ್ಲೆಯ ಮೂರೂ ತಾಲೂಕುಗಳಾದ ಚಾಮರಾಜನಗರ, ಯಳಂದೂರು ಹಾಗೂ ಕೊಳ್ಳೇಗಾಲದಲ್ಲಿ ಯೋಜನೆ ಅನುಷ್ಠಾನಕ್ಕಾಗಿ 6 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಯೋಜನೆಯಡಿ ಪಾಲಿಮನೆ, ನೆರಳು ಪರದೆ ಘಟಕಗಳನ್ನು ನಿರ್ಮಿಸಿಕೊಳ್ಳಲು ಸಾಮಾನ್ಯವರ್ಗದ ರೈರತಿಗೆ ಶೇ. 50ರಷ್ಟು ಮತ್ತು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ರೈತರಿಗೆ ಶೇ. 90ರಷ್ಟು ಸಹಾಯಧನ ನೀಡಲಾಗುತ್ತದೆ. ಪ್ರತಿ ಫಲಾನುಭವಿಗೆ ಕನಿಷ್ಟ 500 ಚದರ ಮೀ.ನಿಂದ ಗರಿಷ್ಟ 4 ಸಾವಿರ ಚ.ಮೀ. ಪಾಲಿಮನೆ ನೆರಳು ಪರದೆ ನಿಮಾಣ ಮಾಡಿಕೊಳ್ಳಲು ಸಹಾಯಧನ ಒದಗಿಸಲಾಗುತ್ತದೆ.
ಯೋಜನೆಯಡಿ ಎಲ್ಲ ವರ್ಗದ ರೈತ ಫಲಾನುಭವಿಗಳು ಸಹಾಯಧನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳೆಯರಿಗೆ ನಿಯಮಾನುಸಾರ ಆದ್ಯತೆ ಸಿಗಲಿದೆ.
ಯೋಜನೆ ಪ್ರಯೋಜನ ಪಡೆಯಲು ಫಲಾನುಭವಿಗಳು ರೈತರಾಗಿದ್ದು ಜಮೀನು ಅರ್ಜಿದಾರರ ಹೆಸರಿನಲ್ಲಿರಬೇಕು. ಪಾಲಿಮನೆ ನೆರಳು ಪರದೆ ಪ್ರದೇಶದ ವಿಸ್ತೀರ್ಣಕ್ಕೆ ಅನುಗುಣವಾಗಿ ಎರಡು ಪಟ್ಟು ವಿಸ್ತೀರ್ಣದ ಜಮೀನು ಫಲಾನುಭವಿಯ ಹೆಸರಿನಲ್ಲಿರಬೇಕು. ಯಾವುದೇ ಜಮೀನನ್ನು ಭೋಗ್ಯಕ್ಕೆ ಪಡೆದು ಅಥವಾ ಪರಭಾರೆ ಪಡೆದು ಅನುಷ್ಠಾನ ಮಾಡುವಂತಿಲ್ಲ. ಫಲಾನುಭವಿಯು ಈ ಹಿಂದೆ ಇಲಾಖೆಯ ಯಾವುದಾದರೂ ಯೋಜನೆಯಡಿ ಸಹಾಯಧನ ಪಡೆದಿದ್ದಲ್ಲಿ ಅದನ್ನೂ ಸೇರಿದಂತೆ ಪ್ರತಿ ಕುಟುಂಬ ಗರಿಷ್ಟ ಒಂದು ಎಕರೆ ವಿಸ್ತೀರ್ಣಕ್ಕೆ ಮಾತ್ರ ಸಹಾಯಧನ ಪಡೆಯಲು ಮಾತ್ರ ಅರ್ಹರಾಗಲಿದೆ.
ನೀರಾವರಿ ಮೂಲ ಹೊಂದಿದ್ದು ಸೂಕ್ಷ್ಮ ನೀರಾವರಿಗೆ ಯೋಗ್ಯವಿರುವ ನೀರು ಹೊಂದಿರುವುದು ಕಡ್ಡಾಯವಾಗಿದೆ. ಪಾಲಿಮನೆ ಮತ್ತು ನೆರಳು ಪರದೆ ಘಟಕಗಳ ನಿರ್ಮಾಣ ಕಾರ್ಯವನ್ನು ಇಲಾಖೆಯಿಂದ ನೊಂದಾಯಿತವಾಗಿರುವ ಸಂಸ್ಥೆಗಳಿಂದಲೇ ಕೈಗೊಳ್ಳಬೇಕಿದೆ. ಘಟಕ ನಿರ್ಮಾಣಕ್ಕೆ ಸಾಲ ಪಡೆಯಬೇಕಿದ್ದರೆ ಸ್ಥಳೀಯ ಬ್ಯಾಂಕುಗಳಿಂದಲೇ ಪಡೆದು ಕೊಳ್ಳಬೇಕಿದೆ.
ಪಾಲಿಮನೆಗೆ 4 ಸಾವಿರ ಚ.ಮೀ. ವಿಸ್ತೀರ್ಣ ಘಟಕಕ್ಕೆ ಒಟ್ಟು 31.32 ಲಕ್ಷ ರೂ. ವೆಚ್ಚವಾಗಲಿದ್ದು ಇದಕ್ಕಾಗಿ ಸಾಮಾನ್ಯ ವರ್ಗದವರಿಗೆ 15.66 ಲಕ್ಷ ರೂ., ಪರಿಶಿಷ್ಟ ಜಾತಿ  ಪರಿಶಿಷ್ಟ ಪಂಗಡದವರಾಗಿದ್ದಲ್ಲಿ 28.188 ಲಕ್ಷ ರೂ., ಮಳೆ ನೀರು ಸಂಗ್ರಹಣ ಘಟಕಕ್ಕೆ (ಕೃಷಿ ಹೊಂಡ) 1.55 ಲಕ್ಷ ರೂ. ವೆಚ್ಚವಾಗಲಿದ್ದು ಇದಕ್ಕಾಗಿ ಸಾಮಾನ್ಯ ವರ್ಗದ ರೈತರಿಗೆ 0.775 ಲಕ್ಷ ರೂ., ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಾಗಿದ್ದಲ್ಲಿ 1.395 ಲಕ್ಷ ರೂ, ಡೀಸಲ್, ಸೋಲಾರ್ ಮೋಟಾರ್ ಅಳವಡಿಕೆಗೆ 40 ಸಾವಿರ ರೂ. ವೆಚ್ಚವಾಗಲಿದ್ದು ಸಾಮಾನ್ಯ ವರ್ಗದವರಿಗೆ 20 ಸಾವಿರ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ರೈತರಿಗೆ 30 ಸಾವಿರ ನೀಡಲಾಗುತ್ತದೆ. ಅಧಿಕ ಮೌಲ್ಯದ ಬೆಳೆ ಉತ್ಪಾದನೆಗೆ 5.60 ಲಕ್ಷ ರೂ. ವೆಚ್ಚವಾಗಲಿದ್ದು ಸಾಮಾನ್ಯ ವರ್ಗದವರಿಗೆ 2.80 ಲಕ್ಷ ರೂ., ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ರೈತರಿಗೆ 5.040 ಲಕ್ಷ ರೂ. ಲಭಿಸಲಿದೆ.
ನೆರಳು ಪರದೆ ಹಾಗೂ ಇದರ ಸಂಬಂಧಪಟ್ಟ ಚಟುವಟಿಕೆಗಳಿಗಾಗಿ 4 ಸಾವಿರ ಚ.ಮೀ. ವಿಸ್ತೀರ್ಣಕ್ಕೆ 15.36 ಲಕ್ಷ ರೂ. ವೆಚ್ಚವಾಗಲಿದ್ದು ಇದಕ್ಕಾಗಿ ಸಾಮಾನ್ಯವರ್ಗದ ರೈತರಿಗೆ 7.680 ಲಕ್ಷ ರೂ., ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ರೈತರಿಗೆ 13.824 ಲಕ್ಷ ರೂ. ಅಧಿಕ ಮೌಲ್ಯ ಬೆಳೆ ಉತ್ಪಾದನೆಗೆ 5.60 ಲಕ್ಷ ರೂ. ವೆಚ್ಚವಾಗಲಿದ್ದು ಇದಕ್ಕಾಗಿ ಸಾಮಾನ್ಯ ವರ್ಗದವರಿಗೆ 2.80 ಲಕ್ಷ ರೂ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ರೈತರಿಗೆ 5.040 ಲಕ್ಷ ರೂ. ನೀಡಲಾಗುತ್ತದೆ.
ಪಾಲಿಮನೆ ನಿರ್ಮಾಣಕ್ಕೆ ಅನುಗುಣವಾಗಿ ಕೃಷಿ ಹೊಂಡವನ್ನು ನಿರ್ಮಿಸಬೇಕಿದ್ದು 987 ಘ.ಮೀ. ಸಂಗ್ರಹಣ ಸಾಮಥ್ರ್ಯ ಕೃಷಿ ಹೊಂಡಕ್ಕೆ 1.550 ಲಕ್ಷ ರೂ. ವೆಚ್ಚವಾಗಲಿದೆ. ಇದಕ್ಕಾಗಿ ಸಾಮಾನ್ಯವರ್ಗದ ರೈತರಿಗೆ 0.775 ಲಕ್ಷ ರೂ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ 1.395 ಲಕ್ಷ ರೂ. ಸಹಾಯಧನ, 447 ಘ.ಮೀ. ನೀರು ಸಂಗ್ರಹಣಾ ಸಾಮಥ್ರ್ಯ ಕೃಷಿ ಹೊಂಡಕ್ಕೆ 0.896 ಲಕ್ಷ ರೂ. ವೆಚ್ಚವಾಗಲಿದ್ದು ಸಾಮಾನ್ಯವರ್ಗದ ರೈತರಿಗೆ 0.448 ಲಕ್ಷ ರೂ., ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ 0.806 ಲಕ್ಷ ರೂ. ಸಹಾಯಧನ ನೀಡಲಾಗುತ್ತದೆ. 258 ಘ.ಮೀ. ನೀರು ಸಂಗ್ರಹಣಾ ಸಾಮಥ್ರ್ಯ ಕೃಷಿ ಹೊಂಡಕ್ಕೆ 0.625 ಲಕ್ಷ ರೂ. ವೆಚ್ಚವಾಗಲಿದ್ದು ಸಾಮಾನ್ಯ ವರ್ಗದ ರೈತರಿಗೆ 0.312 ಲಕ್ಷ ರೂ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ರೈತರಿಗೆ 0.562 ಲಕ್ಷ ರೂ. ಸಹಾಯಧನ ಲಭಿಸಲಿದೆ.
ತೋಟಗಾರಿಕೆ ಇಲಾಖೆಯು ಕೃಷಿ ಭಾಗ್ಯ ಯೋಜನೆಯಡಿ ನೀಡುವ ಈ ಎಲ್ಲ ಸೌಲಭ್ಯಕ್ಕೆ ಅರ್ಜಿ ಆಹ್ವಾನಿಸಿದೆ. ಅರ್ಜಿಯೊಂದಿಗೆ ಭಾವಚಿತ್ರ, ವೈಯಕ್ತಿಕ ವಿವರ, ಮೊಬೈಲ್ ಸಂಖ್ಯೆ, ಆಧಾರ್ ಕಾರ್ಡ್ ಪ್ರತಿ (ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ನೊಂದಾಯಿಸಿ ವಿವರ ಸಲ್ಲಿಸಲಾಗುವುದು ಎಂಬ ಸ್ವಯಂ ಘೋಷಣಾ ಪತ್ರ), ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ, ಪಹಣಿ, ಚೆಕ್ಕುಬಂದಿ, ನೀರಿನ ಮೂಲಕ ವಿವರ, ಲಭ್ಯತೆಯ ಪ್ರಮಾಣ, ವಿದ್ಯುತ್ ಅಥವಾ ಶಕ್ತಿಮೂಲಗಳ ಲಭ್ಯತೆ, ಮಣ್ಣು. ನೀರು ವಿಶ್ಲೇಷಣೆ ಪ್ರಮಾಣಪತ್ರ, ಪರಿಶಿಷ್ಟ ಜಾತಿ ಪಂಗಡದವರಾಗಿದ್ದಲ್ಲಿ ಜಾತಿ ಪ್ರಮಾಣಪತ್ರ, ಬ್ಯಾಂಕ್ ವಿವರ ಇನ್ನಿತರ ಅಗತ್ಯ ವಿವರಗಳೊಂದಿಗೆ ಅಕ್ಟೋಬರ್ 24ರೊಳಗೆ ಆಯಾ ತಾಲೂಕಿನ ತೋಟಗಾರಿಕೆ ಕಚೇರಿಗೆ ಅರ್ಜಿ ಸಲ್ಲಿಸಲು ತೋಟಗಾರಿಕೆ ಇಲಾಖೆ ಮನವಿ ಮಾಡಿದೆ.
ಜಿಲ್ಲಾಮಟ್ಟದ ಗುರಿಗಿಂತ ಹೆಚ್ಚಿನ ಅರ್ಜಿಗಳು ಸ್ವೀಕೃತವಾದಲ್ಲಿ ಗುರಿಗೆ ಅನುಗುಣವಾಗಿ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತದೆ. ಲಾಟರಿ ಮೂಲಕವೇ ಜೇಷ್ಠತೆಯ ಆಧಾರದ ಮೇಲೆ ಪಟ್ಟಿ ಮಾಡಲಾಗುತ್ತದೆ ಎಂದು ತೋಟಗಾರಿಕೆ ಉಪನಿರ್ದೇಶಕರಾದ ಬಿ.ಎಲ್. ಶಿವಪ್ರಸಾದ್ ಮಾಹಿತಿ ನೀಡಿದ್ದಾರೆ.
ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಉಪನಿರ್ದೇಶಕರು, ಜಿ.ಪಂ, ಚಾಮರಾಜನಗರ ದೂ.ಸಂ. 08226-225022, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿ.ಪಂ, ಚಾಮರಾಜನಗರ ದೂ.ಸಂ. 08226-223049, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಕೊಳ್ಳೇಗಾಲ ದೂ.ಸಂ. 08226-253449, ಸಹಾಯಕ ತೋಟಗಾರಿಕೆ ನಿರ್ದೇಶಕರು, ಯಳಂದೂರು, ದೂ.ಸಂ. 08226-24600 ಹಾಗೂ ಆಯಾ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸುವಂತೆ ತೋಟಗಾರಿಕೆ ಉಪನಿರ್ದೇಶಕರಾದ ಬಿ.ಎಲ್. ಶಿವಪ್ರಸಾದ್ ಕೋರಿದ್ದಾರೆ.

ಸೆ. 27ರ ಚಾಮರಾಜನಗರ ದಸರಾ ಕಾರ್ಯಕ್ರಮಗಳ ವಿವರ

 ಚಾಮರಾಜನಗರ, ಸೆ. 26 - ವಿಶ್ವ ವಿಖ್ಯಾತ ಮೈಸೂರು ದಸರಾ ಅಂಗವಾಗಿ ನಡೆಯುತ್ತಿರುವ ಚಾಮರಾಜನಗರ ದಸರಾ ಮಹೋತ್ಸವದ ಸಾಂಸ್ಕøತಿಕ ಕಾರ್ಯಕ್ರಮಗಳು ಚಾಮರಾಜೇಶ್ವರ ದೇವಾಲಯದ ಮುಂಭಾಗದಲ್ಲಿ ನಡೆಯುತ್ತಿದ್ದು ಸೆಪ್ಟಂಬರ್ 27ರ ಕಾರ್ಯಕ್ರಮಗಳು ಇಂತಿವೆ.
ಸಂಜೆ 5 ರಿಂದ 5.30ರವರೆಗೆ ಗುಂಡ್ಲುಪೇಟೆಯ ಮೋಹನ ಜಾನಪದ ನೃತ್ಯ ಕಲಾಸಂಘದಿಂದ ಜಾನಪದ ನೃತ್ಯ, ಸಂಜೆ 5.30 ರಿಂದ 6 ಗಂಟೆಯವರೆಗೆ ಯಳಂದೂರು ತಾಲ್ಲೂಕು ಗಂಗವಾಡಿಯ ಶಿವರುದ್ರಸ್ವಾಮಿ ತಂಡದಿಂದ ವೀರಗಾಸೆ, 6 ರಿಂದ 6.15ರವರೆಗೆ ಬಿಳಿಗಿರಿರಂಗನ ಬೆಟ್ಟದ ಸೋಲಿಗರ ಪುಷ್ಪಮಾಲೆ ಕಲಾಸಂಘದಿಂದ ಗೋರುಕಾನ ನೃತ್ಯ, 6.15 ರಿಂದ 6.30ರವರೆಗೆ ದೊಡ್ಡಮೋಳೆಯ ಸಿದ್ದಪ್ಪಾಜಿ ನೀಲಗಾರರ ಕಲಾಸಂಘದಿಂದ ನೀಲಗಾರರ ಮತ್ತು ತಂಬೂರಿ ಪದ, 7 ರಿಂದ 8.30ರವರೆಗೆ ಕಾಲೇಜು ವಿದ್ಯಾರ್ಥಿಗಳಿಂದ ಕಾಲೇಜು ಸಂಜೆ, 8.30 ರಿಂದ 9.30ರವರೆಗೆ ಮೈಸೂರಿನ ದಿಶಾ ರಮೇಶ್ ಮತ್ತು ತಂಡದಿಂದ ರಂಗಗೀತೆಗಳು, 9.30 ರಿಂದ 10.30ರವರೆಗೆ ಡಾ.ಸಂಜಯ್ ಮತ್ತು ತಂಡದಿಂದ ಕರ್ನಾಟಕ ಕ್ಷೇತ್ರ ವೈಭವ ಕಾರ್ಯಕ್ರಮ ನಡೆಯಲಿದೆ.



















No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು