ಭ್ರಷ್ಟಾಚಾರ ನಿರ್ಮೂಲನೆಗೆ ಸಾರ್ವಜನಿಕರ ಸಹಕಾರವು ಅಗತ್ಯ : ಲೋಕಾಯುಕ್ತ ನ್ಯಾಯಮೂರ್ತಿಯವರ ಅಭಿಮತ
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಬಳಿಕ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಲೋಕಾಯುಕ್ತ ನ್ಯಾಯಮೂರ್ತಿಯವರು ಭ್ರಷ್ಟಾಚಾರ ಕಡಿವಾಣಕ್ಕೆ ನಾಗರಿಕರು ಸಹ ತೀವ್ರ ಗತಿಯಲ್ಲಿ ಪೂರಕವಾಗಿ ಸಹಕರಿಸಬೇಕಿದೆ. ವಿಶೇಷವಾಗಿ ಯುವಜನಾಂಗ ಕೂಡ ಭ್ರಷ್ಟಾಚಾರ ನಿರ್ಮೂಲನೆಗೆ ಕೈಜೋಡಿಸಬೇಕಿದೆ ಎಂದರು.
ತಾವು ಇದುವರೆಗೆ ರಾಜ್ಯದ 20 ಜಿಲ್ಲೆಯಲ್ಲಿ ಪ್ರವಾಸ ಮಾಡಿದ್ದು ಆಯಾ ಭಾಗದ ಅಧಿಕಾರಿಗಳ ಸಭೆ ನಡೆಸಿ ಜನರಿಗೆ ಅಧಿಕಾರಿಗಳು ಹೇಗೆ ಸ್ಪಂದಿಸುತ್ತಿದ್ದಾರೇ? ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತಿದೇಯೆ ? ಎಂಬ ಬಗ್ಗೆ ತಿಳಿದುಕೊಳ್ಳಲಾಗುತ್ತಿದೆ. ಪ್ರಥಮ ಹಂತದಲ್ಲಿ ಅಧಿಕಾರಿಗಳಿಂದ ಕಾರ್ಯನಿರ್ವಹಣೆ ಕುರಿತು ಮಾಹಿತಿ ಪಡೆಯಲಾಗುತ್ತಿದೆ. ಬಳಿಕ ಜಿಲ್ಲೆಗಳಿಗೆ ತೆರಳಿ ಸಾರ್ವಜನಿಕರಿಂದ ಅಹವಾಲುಗಳನ್ನು ಆಲಿಸಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಲೋಕಾಯುಕ್ತರು ತಿಳಿಸಿದರು.
ಜನರಿಗೆ ಉತ್ತಮವಾಗಿ ಸ್ಪಂದಿಸಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ಯಾವುದೇ ತೊಂದರೆ ನೀಡದೆ ಉತ್ತೇಜನ ನೀಡಬೇಕಾಗುತ್ತದೆ. ದುರಾಡಳಿತ ಭ್ರಷ್ಟಾಚಾರ ಎಸಗುವ ಅಧಿಕಾರಿ ಸಿಬ್ಬಂಧಿ ವಿರುದ್ಧ ಗಂಭೀರ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ ಎಂದರು.ಪ್ರತಿ ಜಿಲ್ಲೆಯಲ್ಲಿಯು ಸಭೆ ನಡೆಸಿ ಜನರ ನಿರೀಕ್ಷೆಗೆ ಅನುಗುಣವಾಗಿ ಕೆಲಸ ನಿರ್ವಹಿಸಬೇಕು. ಸರ್ಕಾರಿ ಕೆಲಸ ಯೋಜನೆ ನಿರ್ವಹಣೆಯಲ್ಲಿ ಯಾವುದೇ ವಿಳಂಬ, ಲೋಪಕ್ಕೆ ಅವಕಾಶವಾಗಬಾರದು, ಪಾರದರ್ಶಕವಾಗಿ ಕೆಲಸ ಮಾಡಬೇಕು ಎಂದು ಸೂಚಿಸಲಾಗಿದೆ. ಸಾರ್ವಜನಿಕರ ಕೆಲಸ ಕಾರ್ಯ ಪ್ರಕ್ರಿಯೆಗಳಿಗೆ ತೊಡಕು ಉಂಟು ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿಯವರು ವಿವರಿಸಿದರು.
ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಡಾ.ಎಸ್.ಪರಶಿವಮೂರ್ತಿ, ಜಿಲ್ಲಾಧಿಕಾರಿ ಬಿ.ರಾಮು, ಜಿಲ್ಲಾ ಪೊಲೀಸ್‍ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ, ಜಿಲ್ಲಾಪಂಚಾಯತ್ ಮುಖ್ಯಕಾರ್ಯನಿರ್ವಾಹಕಾಧಿಕಾರಿ ಡಾ.ಕೆ.ಹರೀಶ್‍ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯತ್ರಿ ಸುದ್ದಗೋಷ್ಠಿಯಲ್ಲಿ ಹಾಜರಿದ್ದರು.
ಸೆಪ್ಟೆಂಬರ್ 23ರಂದು ನಗರದಲ್ಲಿ ಪೌರಕಾರ್ಮಿಕರ ದಿನಾಚರಣೆ, ಸಫಾಯಿ ಕರ್ಮಚಾರಿ ಪುನರ್ವಸತಿ ಅಧಿನಿಯಮ ಕಾನೂನು, ಸೌಲಭ್ಯ ಕುರಿತು ಕಾರ್ಯಾಗಾರ
ಚಾಮರಾಜನಗರ, ಸೆ. 22. :- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಪೌರಕಾರ್ಮಿಕರ ದಿನಾಚರಣೆ ಹಾಗೂ ಸಫಾಯಿ ಕರ್ಮಚಾರಿಗಳ, ಮ್ಯಾನ್ಯೂಯಲ್ ಸ್ಕಾವೆಂಜರುಗಳ ನಿಯೋಜನೆ ನಿಷೇಧ ಮತ್ತು ಪುನರ್ವಸತಿ ಅಧಿನಿಯಮದಡಿ ಸರ್ಕಾರದ ಕಾನೂನುಗಳು ಹಾಗೂ ವಿವಿಧ ಇಲಾಖೆಗಳ ಸೌಲಭ್ಯ ಕುರಿತು ಅರಿವು ಕಾರ್ಯಾಗಾರವನ್ನು ಸೆಪ್ಟಂಬರ್ 23 ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜೆ. ಎಚ್. ಪಟೇಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಉದ್ಘಾಟನೆ ನೆರವೇರಿಸುವರು. ಸಕ್ಕರೆ ಮತ್ತು ಸಣ್ಣ ಕೈಗಾರಿಕೆ ಸಚಿವರಾದ ಡಾ. ಎಂ.ಸಿ. ಮೋಹನಕುಮಾರಿ ಉರುಫ್ ಗೀತಾ ಅವರು ಘನ ಉಪಸ್ಥಿತಿ ವಹಿಸುವರು. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು.
ವಿಧಾನ ಪರಿಷತ್ ಉಪಸಭಾಪತಿಯವರಾದ ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಲೋಕಸಭಾ ಸದಸ್ಯರಾದ ಆರ್.ಧ್ರುವನಾರಾಯಣ, ಶಾಸಕರಾದ ಎಸ್. ಜಯಣ್ಣ, ಆರ್. ನರೇಂದ್ರ, ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಎಂ. ಚಿನ್ನಸ್ವಾಮಿ, ಕಾಡಾ ಅಧ್ಯಕ್ಷರಾದ ಹೆಚ್.ಎಸ್. ನಂಜಪ್ಪ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.
ಸೆಪ್ಟೆಂಬರ್ 23ರಂದು ವಿಧಾನ ಪರಿಷತ್ ಸಭಾಪತಿಯವರ ಜಿಲ್ಲಾ ಪ್ರವಾಸ
ಚಾಮರಾಜನಗರ, ಸೆ. 22. :- ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಯವರಾದ ಡಿ.ಹೆಚ್.ಶಂಕರಮೂರ್ತಿ ಅವರು ಸೆಪ್ಟಂಬರ್ 23 ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಬೆಳಿಗ್ಗೆ 9.30 ಗಂಟೆಗೆ ಕೊಳ್ಳೇಗಾಲಕ್ಕೆ ಆಗಮಿಸುವರು. ಬಳಿಕ ಅಲ್ಲಿನ ಆರ್ಯವೈಶ್ಯ ಸಂಘದ ಶ್ರೀವಾಸವಿ ವಿದ್ಯಾಕೇಂದ್ರದವರು ನೂತನವಾಗಿ ನಿರ್ಮಾಣ ಮಾಡಿರುವ ಶಾಲಾ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿಗೆ ತೆರಳುವರೆಂದು ಸಭಾಪತಿಯವರ ವಿಶೇಷ ಕರ್ತವ್ಯಾಧಿಕಾರಿ ತಿಳಿಸಿದ್ದಾರೆ.
ವಿಕಲಚೇತನರಿತೆ ಹೆಚ್ಚಿನ ಸೌಲಭ್ಯ ಕಲ್ಪಿಸಲು ಕ್ರಮ: ಆರ್.ಧ್ರುವನಾರಾಯಣ
ಚಾಮರಾಜನಗರ, ಸೆ. 22 - ವಿಕಲಚೇತನರಿಗೆ ಅವಶ್ಯವಿರುವ ಪರಿಕರಗಳಿಗೆ ತಮ್ಮ ಸಂಸದ ಪ್ರದೇಶ ಅಭಿವೃದ್ದಿ ಅನುದಾನದಲ್ಲಿ ಹೆಚ್ಚಿನ ನೆರವು ನೀಡಲು ಮುಂದಾಗುವುದಾಗಿ ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದ ಆವರಣದ ಬಳಿ ಇಂದು ತಮ್ಮ ಸಂಸದ ಪ್ರದೇಶ ಅಭಿವೃದ್ದಿ ಅನುದಾನದಡಿ ವಿಕಲಚೇತನರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಿ ಅವರು ಮಾತನಾಡಿದರು.
ಪ್ರತಿವರ್ಷವು ಸಂಸದರ ನಿಧಿಯಿಂದ ತಾವು ಪ್ರತಿನಿಧಿಸುವ ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಮೈಸೂರು ಜಿಲ್ಲೆಯ ಭಾಗಗಳು ಹಾಗೂ ಚಾಮರಾಜನಗರ ಜಿಲ್ಲೆಯ ಪ್ರದೇಶದ ವಿಕಲಚೇತನರಿಗೆ ತ್ರಿಚಕ್ರ ವಾಹನಗಳನ್ನು ಖರೀದಿಸಿ ನೀಡುತ್ತಿರುವೆ. ಮುಂಬರುವ ವರ್ಷಗಳಲ್ಲಿ ಇನ್ನು ಹೆಚ್ಚಿನ ನೆರವು ನೀಡುವುದಾಗಿ ಧ್ರುವನಾರಾಯಣ ತಿಳಿಸಿದರು.
ವಿಕಲಚೇತನರ ಸೌಲಭ್ಯಗಳನ್ನು ಹೆಚ್ಚಿಸಬೇಕೆಂಬ ಬೇಡಿಕೆ ಬಂದಿದೆ. ಇದನ್ನು ಮನಗಂಡು ತಮ್ಮ ಸಂಸದ ಅನುದಾನದಲ್ಲಿ ಸಾಧ್ಯವಾಗಬಹುದಾದ ಸೌಲಭ್ಯಗಳನ್ನು ಒದಗಿಸಲು ಮುಂದಾಗುವುದಾಗಿ ಅವರು ತಿಳಿಸಿದರು.
ವಿತರಿಸಲಾಗುತ್ತಿರುವ ತ್ರಿಚಕ್ರ ವಾಹನಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಿಕೊಳ್ಳಬೇಕು. ವಿಕಲಚೇತನರು ಸರ್ಕಾರದ ಸೌಲಭ್ಯಗಳನ್ನು ಪಡೆದು ಸ್ವಾವಲಂಬಿ ಜೀವನ ನಡೆಸಬೇಕು ಎಂಬುದು ತಮ್ಮ ಆಶಯವಾಗಿದೆ ಎಂದು ಧ್ರುವನಾರಾಯಣ ನುಡಿದರು.
ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎ.ಪಿ.ಎಂ.ಸಿ ಅಧ್ಯಕ್ಷರಾದ ಬಿ.ಕೆ.ರವಿಕುಮಾರ್, ಮದ್ಯಪಾನ ಸಂಯಮ ಮಂಡಳಿಯ ಸದಸ್ಯರಾದ ಕಾಗಲವಾಡಿ ಚಂದ್ರು, ವಿಕಲಚೇತನರ ಕಲ್ಯಾಣಾಧಿಕಾರಿ ಪೃಥ್ವಿದಾಸ್ ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
No comments:
Post a Comment